ಆಗ ನಾನು ಹೈಸ್ಕೂಲಿನಲ್ಲಿದ್ದೆ. ಲಕ್ಷ್ಮಿಯ ಸಿ.ಇ.ಟಿ. ಜಸ್ಟ್ ಮುಗಿದು ಸೀಟಿನ ನಿರೀಕ್ಷೆಯಲ್ಲಿದ್ದಳು. ಲಕ್ಷ್ಮಿ ನನ್ನ ದಾವಣಗೆರೆಯ ಅಕ್ಕ. ಆಗ ಇಬ್ಬರೂ ಲಂಗ-ಬ್ಲೌಸ್ ತೊಡುತ್ತಿದ್ದ ಕಾಲ, ಜೊತೆಗೆ ಇಬ್ಬರಿಗೂ ಶಾಪಿಂಗ್ ಹುಚ್ಚು ಅದು ಹೇಗೋ ಮೈಗಂಟಿಕೊಂಡಿತ್ತು. ನಮ್ಮಿಬ್ಬರಿಗೂ ಪ್ರತ್ಯೇಕವಾಗಿ ಮನೆಯಲ್ಲಿ ಪಾಕೆಟ್ ಮನಿ ಕೊಡುತ್ತಿದ್ದರೆಂದು ನೀವು ಭಾವಿಸಿದರೆ ಮೂರ್ಖರಾದೀರಿ! ಒಂದು ಹತ್ತು ರೂಪಾಯಿ ನಮ್ಮ ಪರ್ಸಿನಲ್ಲಿ ಜಮಾ ಆಗಿದ್ದರೆ ಅದೇ ಇಬ್ಬರಿಗೂ ದೊಡ್ಡ ಮೊತ್ತ. ಆದರೂ ಆಸೆಗಳು ಇಬ್ಬರಿಗೂ ನೂರಾರು, ಅದು ಚೆನ್ನ, ಇದು ಚೆನ್ನ ಎಂದು ಇಬ್ಬರೂ ಮನಸ್ಸಲ್ಲಿ ಮಂಡಿಗೆ ತಿಂದೂ ತಿಂದೂ ಖುಷಿಪಡುತ್ತಿದ್ದೆವು. ಅದೇನೋ ಇಬ್ಬರೂ ವಿಪರೀತ ಮಾತನಾಡುತ್ತಿದ್ದೆವು. ರಾತ್ರಿ, ಬೆಳಗು, ಮಧ್ಯಾಹ್ನ ಸಮಯ ಸಿಕ್ಕಾಗೆಲ್ಲ ವಿಪರೀತ ವಿಷಯಗಳು ಮಾತಾಡಿದ್ದೂ ಆಡಿದ್ದೆ. ಅದೇನೇನು ಎನ್ನುವುದು ದೇವರೇ ಬಲ್ಲ! ತಿರುಗಾಟದ ಹುಚ್ಚು ನಮ್ಮ ಖಾಂದಾನ್-ಖಾಂದಾನಿಗೆ ಇತ್ತು ಒಂದು ವಯಸ್ಸಿನಲ್ಲಿ ಅನ್ನಿಸುತ್ತೆ. ತರಕಾರಿ ತರುವ ನೆಪದಲ್ಲಿ ನಾನೂ ಲಕ್ಷ್ಮಿಯೂ ಬೆಳಗ್ಗೆ ೭ ಕ್ಕೆ ಹೊರಬಿದ್ದರೆ ಪಕ್ಕದ ರೋಡ್ ನಿಂದ ೮ ಕ್ಕೇ ಬರುತ್ತಿದ್ದುದು. ಅದೇನು ಅಷ್ಟೊಂದು ಲೇಟು ಅಂತೀರಾ? ಹೌದು, ನಮ್ಮ ಮರೆತಿದ್ದ ಮಾತುಗಳು ಇದ್ದಕ್ಕಿದ್ದ ಹಾಗೇ ಮನೆಯಿಂದ ಕಾಲ್ತೆಗೆದ ಕೂಡಲೇ ನೆನಪಾಗುತ್ತಿದ್ದವು! ಯಾರ್ಯಾರೋ ನಮ್ಮ ಗೆಳತಿಯರ ಕಸಿನ್ಸು, ಅವರ ಕಷ್ಟ ಸುಖ ಇವೆಲ್ಲಾ…ಈಗಿನ ಕಾಲದ ಹುಡುಗಿಯರೂ ಅಥವಾ ಎಲ್ಲಾ ಹುಡುಗಿಯರೂ ಹೀಗೆನಾ? ಅಥವಾ ನಾವು ಎಕ್ಸೆಪ್ಶನ್ನಾ? ಈ ಥರ ತಲೆ ಹುಳ ನೆಲಕ್ಕೆ ಕೊಡವಿಕೊಳ್ಳುವ ಹುಡುಗಿಯರನ್ನು ಕಂಡು ಅಮ್ಮನಂಥಾ ಅಮ್ಮನೂ ದಂಗಾಗಿದ್ದಳು. ಅವರೇನು ಕಡಿಮೆಯಿರಲಿಲ್ಲ. ಅಕ್ಕ ತಂಗಿಯರೆಲ್ಲ ಒಟ್ಟು ಸೇರಿದಾಗ ರಾತ್ರಿ ಮಾತಿಗೆ ಕೂತರೆ(ಮಲಗಿದರೆ?!) ಬೆಳಕು ಹರಿಸುವಂಥಾ ಗಟ್ಟಿಗರು. ಅವರ ಮಕ್ಕಳಲ್ಲವೇ ನಾವು, ನಾವೂ ಅವರಂತೆಯೇ ತಯಾರಾಗುತ್ತಿದ್ದೆವು. ಉಮ (ಶ್ರೀರಂಗಪಟ್ಟಣದ ಅಕ್ಕ) , ಲಕ್ಷ್ಮಿ ಮತ್ತು ನಾನು ಮೂರೂ ಹುಡುಗಿಯರೂ ಮಾತು ವಿಪರೀತ ಆಡುತ್ತವೆ, ಒಂದರ ಜೊತೆ ಒಂದು ಸೇರಿದರೇ ಎಂದು ಅಮ್ಮ ರಿಸರ್ಚು ಮಾಡಿ ಕಂಡುಕೊಂಡಿದ್ದಳು. ನಾನೂ ಲಕ್ಷ್ಮಿಯಂತೂ ಇತಿಹಾಸವನ್ನೇ ಸೃಷ್ಠಿ ಮಾಡುವಷ್ಟು ಮಾತನಾಡಿ ಅಮ್ಮನ ಕೆಂಗಣ್ಣಿಗೆ ಕಾರಣರಾಗಿದ್ದೆವು. ಹೀಗಿರುವಾಗಿನ ಒಂದು ದಿನವೇ ನಮ್ಮಿಬ್ಬರಿಗೂ ಶಾಪಿಂಗ್ ಹುಚ್ಚು ತಲೆಗಡರಿಕೊಂಡಿದ್ದು! ಇಬ್ಬರ ಹತ್ತಿರವೂ ಹತ್ತು ಹತ್ತು ರೂಪಾಯಿ ಇದ್ದು ಬಸ್ಸ್ ಚಾರ್ಜಿಗೆ ೨-೨ ರೂಪಾಯಿ ಹೋದರೂ ಇನ್ನೂ ೮-೮ ರೂಪಾಯಿಗಳು ಇರುತ್ತವೆ ಎಂದು ನಮ್ಮ ಲೆಕ್ಖಾಚಾರ, ಇದು 1986 ರ ಸುಮಾರಿನ ವರ್ಷದಲ್ಲಿ. ಆಗ ನಮ್ಮ ಮನೆ ರಾಜಾಜಿನಗರ ಎಂಟ್ರೆನ್ಸಿನಲ್ಲಿತ್ತು. ನಮ್ಮ ಶಾಪಿಂಗ್ ಸ್ಪಾಟು ಮೆಜೆಸ್ಟಿಕ್ ಎಂದು ಒಂದು ದಿನ ರಾತ್ರಿಯೇ ರಾತ್ರಿ ಸುತ್ತಿನ ಮಾತುಕತೆಯಲ್ಲಿ ತೀರ್ಮಾನಿಸಿಕೊಂಡು ಬೆಳಗ್ಗೆ ಇಬ್ಬರೂ ಹೆಚ್ಚುಕಡಿಮೆ ಒಂದೇಬಣ್ಣದ ಲಂಗ-ಬ್ಲೌಸ್ ಧರಿಸಿಕೊಂಡು ತಯಾರಾದೆವು. ಮಾಮೂಲಿನಂತೆ ಹತ್ತು ಗಂಟೆಗೆಲ್ಲಾ ಬ್ರಂಚ್ ಮುಗಿಸಿ ಬಸ್ಸು ಹತ್ತಿದೆವು. ಮೆಜೆಸ್ಟಿಕ್ ತಲುಪುವವರೆಗೂ ಮಾತೂ ಮಾತೂ! ತಲುಪಿದಮೇಲಂತೂ ಸ್ವರ್ಗಕ್ಕೆ ರೆಕ್ಕೆ ಹಚ್ಚಿದ ಹಕ್ಕಿಗಳು ನಾವಿಬ್ಬರೂ! ತಿರುಗಾಡದ ಗಲ್ಲಿಗಳೇ ಇಲ್ಲ, ನೋಡದ ವಸ್ತುಗಳೂ ಇಲ್ಲ. ವಿಪರೀತ ಅಲೆದು ಸುಸ್ತಾದರೂ ಕ್ಯಾಂಟೀನಿನಂಥಾ ಕಡೆ ಏನಾದರೂ ಕುಡಿದು ತಿಂದು ಮಾಡಲು ಇಬ್ಬರಿಗೂ ಭಯ; ನೀರು ಕುಡಿಯಲು ಬಿಸ್ಲೇರಿಯೂ ಇಲ್ಲ, ಬಿಸಿಲೇರಿ ಸತ್ತು ಬೀಳುವವರೆಗೂ ಅಲೆದಿದ್ದೇ ಸೌಭಾಗ್ಯ! ಆದರೂ ನಮ್ಮಿಬ್ಬರ ವ್ಯಾಪಾರಕ್ಕೇನೂ ಕೊರತೆಯಿರಲಿಲ್ಲ. ಶಾಂತಲ ಸಿಲ್ಕ್ ಹೌಸಿಗೆ ಹೋಗಿ ನಮ್ಮಕ್ಕನ ಮದುವೆಗೆ ಸೀರೆ ವೆರೈಟೇಸ್ ನೋಡಬೇಕು ಅಂತ ಹತ್ತಾರು ಸಲ ಮಹಡಿ ಹತ್ತಿ-ಇಳಿದು ನೂರಾರು ಸೀರೆಗಳನ್ನು ನೋಡಿದ್ದೇ ನೋಡಿದ್ದು. ನಮ್ಮ ಓಡಾಟದಲ್ಲಿದ್ದ ಸಡಗರ, ಉತ್ಸಾಹ ಬಹುಶಃ ಶಾಂತಲ ಸಿಲ್ಕ್ ಹೌಸ್ನವರನ್ನೂ ದಂಗುಬಡಿಸಿದ್ದೀತು! ಕೊನೆಗೆ ಎಲ್ಲಾ ಸೆಲೆಕ್ಷನ್ ಮಾಡಿ ದೊಡ್ಡವರನ್ನು ಕರೆತರುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಪರಾರಿಯಾದಾಗ ಅರ್ಧ ಬೆಂಗಳೂರೇ ಗೆದ್ದ ಹಾಗೆ ಬೀಗಿದೆವು. ಅಲ್ಲೇ ಹತ್ತಿರದಲ್ಲಿದ್ದ ಪಾರ್ಕೊಂದರಲ್ಲಿ ಇಬ್ಬರೂ ದಣಿವಾರಿಸಿಕೊಳ್ಳಲು ಕುಳಿತು ಮಾತನಾಡುತ್ತಿರುವಾಗ ಯಾರೋ ದಾರಿಹೋಕ ವೃದ್ಧರೊಬ್ಬರು ‘ನಿಮ್ಮಂಥಾ ಹೆಣ್ಣುಮಕ್ಳು ಬರೋ ಜಾಗ ಅಲ್ಲ ಕಣ್ರಮ್ಮ ಇದು, ಮನೆಗೆ ಹೋಗಿ’ ಎಂದು ಹೊರಗೆ ಕಳುಹಿಸಿದ್ದರು. ಸರಿ, ಅಷ್ಟು ಹೊತ್ತಿಗೆ ನಮ್ಮ ಕಾಲುಗಳು ಮತ್ತೆ ನಡೆಯಲು ತಯಾರಾಗಿದ್ದವು! ನಾವು ಅವತ್ತು ಖರೀದಿ ಮಾಡದಿರುವ ವಸ್ತುಗಳೇ ಕಡಿಮೆ. ಪಾತ್ರೆಗಳು, ಟೊವೆಲ್ಲುಗಳು, ಬೆಡ್ಶೀಟುಗಳು ಇನ್ನೂ ಏನೇನೋ (ನಮ್ಮಕ್ಕನ ಮದುವೆಗೆ ಬೇಕಲ್ಲಾ ಅಹ್ಹಹ್ಹ !!!). ಕೊನೆಗೆ ರಸ್ತೆ ಬದಿಯಲ್ಲಿನ ಟೇಬಲ್ ಕ್ಲಾತ್ಗಳ ಕಡೆಗೆ ನಮ್ಮಿಬ್ಬರ ಗಮನ ನಿಂತಿತು. ೨೦ ರೂಪಾಯಿ ಹೇಳಿದ ಟೇಬಲ್ ಕ್ಲಾತ್ ಗೆ ೬ ರೂಪಾಯಿ ಬೆಲೆಕಟ್ಟಿ ಅವನು ಕೊಡೋದಿಲ್ಲ ಎಂದಾಗ ನಮ್ಮ ಜಾಣ್ಮೆಗೆ ನಾವೇ ಮೆಚ್ಚುತ್ತಾ ಮುಂದೆಸಾಗುತ್ತಿರುವಾಗ ಒಬ್ಬ ವ್ಯಾಪಾರಿಗೆ ಏನನ್ನಿಸಿತೋ ನಮ್ಮ ಬೆಲೆಗೇ ಕೊಡಲು ಮುಂದಾಗಿಬಿಟ್ಟ. ಆಗ ಶುರುವಾಗಿದ್ದು ನಿಜವಾದ ಟೆನ್ಷನ್ನು! ಇಲ್ಲಿಂದ ಮುಂದಕ್ಕೆ “ಟುಡೇ ಇಸ್ ನಾಟ್ ಅವರ್ ಡೇ ” ಅಂತ ನಮ್ಮಿಬ್ಬರ ಅಂತರ್ವಾಣಿ ಹೇಳತೊಡಗಿತು! ‘ಈಗ ಬರುತ್ತೇವೆ, ೫ ನಿಮಿಷ, ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಾಳೆ’ ಅಂತ ಇಬ್ಬರೂ ಲಗುಬಗೆಯಿಂದ ಕಂಬಿ ಕಿತ್ತೆವು. ‘ನಿಜವಾಗಿಯೂ ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಿದ್ದರೆ ನಮ್ಮಿಬ್ಬರಿಗೂ ಕಪಾಳಕ್ಕೆ ಹೊಡೆದು ಹಲ್ಲು ಉದುರಿಸಿ ನೆಲಕಚ್ಚಿಸಿಬಿಡುತ್ತಿದ್ದಳು ಅಲ್ಲವಾ’ ಎಂದು ಇಬ್ಬರೂ ಬಿದ್ದು ಬಿದ್ದು ನಗುತ್ತಾ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂಥಾ ಅವರ್ಚನೀಯ ಖುಷಿಯಿಂದ ಮನೆಕಡೆಗೆ ಬಸ್ಸು ಹತ್ತಿದೆವು. ಆಗ ಬೇಸಿಗೆ ರಜೆ ಕಾಲವಾದ್ದರಿಂದ ಬಸ್ಸೆಲ್ಲ ಖಾಲಿ ಖಾಲಿ. ಹಾಗಿದ್ದರೂ ನಾವಿಬ್ಬರೂ ನಿಂತುಕೊಂಡು ಕಿಸಿ ಕಿಸಿಗುಟ್ಟುತ್ತಿರುವುದನ್ನು ಕಂಡ ಕಂಡಕ್ಟರ್ ‘ಕೂತ್ಕೊಳ್ರಮ್ಮ ಸುಮ್ನೆ, ಕೂತ್ಕೊಂಡು ಮಾತಾಡಕ್ಕಾಗಲ್ವ ನಿಮಗೆ’ ಎಂದು ಗದರಿದಾಗಲೇ ನಮಗೆ ಎಚ್ಚರ! ಪಾಪ! ಹಂಚಿಕಡ್ಡಿ ಪರ್ಸನಾಲಿಟಿ ಇದ್ದ ನಾವಿಬ್ಬರೂ ಎಲ್ಲಿ ಮಾತಲ್ಲಿ ಎಚ್ಚರ ತಪ್ಪಿ ಗಾಳಿಯಲ್ಲಿ ಹೊರಗೆ ಹಾರಿ ಬಿಡುತ್ತೇವೆಯೊ ಎಂದು ಅವನ ಕಾಳಜಿ! ಅಂತೂ ನಾವಿಬ್ಬರೂ ೧೦೦ ವ್ಯಾಟ್ ಬಲ್ಬಿನ ಮುಖಗಳೊಂದಿಗೆ ಕ್ಷೇಮವಾಗಿ ಹೋಗಿ ಹಾಗೇ ಮನೆ ಸೇರಿದೆವು. ಮಟ ಮಟ ಮಧ್ಯಾಹ್ನ ೩ ಗಂಟೆಯವರೆಗೂ ಅಮ್ಮ ಔಟ್ ಹೌಸ್ ನಿಂದ ಹೊರಗಿನ ಗೇಟಿನವರೆಗೂ ೧೦ ಸಾರಿ ಶತಪಥ ತಿರುಗಿದ್ದಳು. ಮುಂದಿನ ಮನೆಯ ಓನರ್ ಅಜ್ಜ (ರಿಟೈರ್ಡ್ ಮಿಲಿಟರಿ ಮ್ಯಾನ್) ನಿಗೂ ನಾವಿಬ್ಬರೂ ಇನ್ನೂ ಬಂದಿಲ್ಲದ ಸುದ್ದಿ ತಲುಪಿತ್ತು. ಹಾಗಾಗಿ ಅಜ್ಜನೂ ಅಲ್ಲೇ ಗಸ್ತು ಹೊಡೆಯುತ್ತಿದ್ದರು. ಇದ್ಯಾವುದರ ಪರಿವೆಯೂ ಇಲ್ಲದ ಹುಚ್ಚುಖೋಡಿ ಅಕ್ಕ ತಂಗಿಯರಿಬ್ಬರೂ ಕಿಲ ಕಿಲ ನಗುತ್ತಾ ಗೇಟು ತೆಗೆಯುವುದನ್ನು ಕಂಡ ಅಜ್ಜ ‘ರಾಮ ರಾಮ ಅದೇನು ಮಾತಮ್ಮ ನಿಮ್ಮಿಬ್ಬರದ್ದು; ಮರದ ಬಾಯಾಗಿದ್ದರೆ ಒಡೆದು ಹೋಗಿರುತ್ತಿತ್ತು ಇಷ್ಟು ಹೊತ್ತಿಗೆ’ ಎಂದು ತಲೆತಲೆ ಚೆಚ್ಚಿಕೊಂಡರು. ನಾವಿಬ್ಬರೂ ೧-೨ ನಿಮಿಷ ಮಾತು ನಿಲ್ಲಿಸಿದ ಶಾಸ್ತ್ರ ಮಾಡಿ ಹೊರಗಿನ ನಲ್ಲಿಯಲ್ಲಿ ಕೈಕಾಲು ತೊಳೆದು ಮನೆ ಹೊಕ್ಕೆವು. ಅಮ್ಮ, ‘ಸಧ್ಯ ಬಂದ್ರಲ್ಲ , ಯಾಕ್ರಮ್ಮ ಬಿಸಿಲಲ್ಲಿ ಬೀದಿ ಬೀದಿ ಅಲೆದು ಬಾಳಕದ ಮೆಣಸಿನ ಕಾಯಿ ಥರ ಆಗ್ತೀರಾ, ಆ ದೇವರೇ ನಿಮ್ಮಿಬ್ಬರಿಗೂ ಬುದ್ಧಿ ಕೊಡಬೇಕು ಅಷ್ಟೇ’ ಎನ್ನುತ್ತಾ ನಿಡುಸೊಯ್ದು ಒಂದಿಷ್ಟು ಮೊಸರನ್ನ ಕಲೆಸಿ ತಿನ್ನಲು ಕೊಟ್ಟಳು. ನಾವಿಬ್ಬರೂ ಅದಕ್ಕೂ ನಗುತ್ತಾ ಬೇಗಬೇಗ ತಿಂದು ಬೆಳಗಿನಿಂದ ಅಲ್ಲಿಯವರೆಗಿನ ನಮ್ಮ ದಿಗ್ವಿಜಯದ ವೀರಗಾಥೆಯನ್ನೇ ವಿಷಯವಾಗಿಸಿಕೊಂಡು ಮತ್ತೆ ಮಾತು ಶುರುವಿಟ್ಟುಕೊಂಡೆವು!
ಅಲೆಮಾರಿ ಅಕ್ಕ-ತಂಗಿಯರ ಟ್ರಯಲ್ಗಳು ಮತ್ತು ಟ್ರಾಮಾಗಳು!
Filed under ಲೇಖನಗಳು