Monthly Archives: September 2015

ಅಣ್ಣ-ತಂಗಿ ಜೈಲಿಗೆ ಹೋದ ಪ್ರಸಂಗ !!!!!

8TAo6ydTa ಶ್ರೀರಂಗಪಟ್ಟಣ ಬಿಟ್ಟು ಕೊಳ್ಳೇಗಾಲಕ್ಕೆ ಬಂದಮೇಲೆ ನನಗೆ ನಾನೇ ಸ್ನೇಹಿತೆಯಾಗಿದ್ದೆ. ಆಟೋಟಕ್ಕೆ ಹಲವಾರು ಗೆಳೆಯರಿದ್ದರೂ ನನ್ನ ಅಕ್ಕ, ತಮ್ಮನ ಕೊರತೆ ನೀಗುತ್ತಲೇ ಇರಲಿಲ್ಲ. ಹೀಗಿರುವಾಗ ನನ್ನ ಜೀವನದಲ್ಲಿ ತನ್ನಿರುವಿಕೆಯನ್ನು ನೆನಪುಮಾಡಿಸಿದವನೇ ನನ್ನಣ್ಣ ಶಾಮಣ್ಣ! ಅವನನ್ನು ಶಾಮ ಅಂತಲೇ ಕರೆಯುವುದು. ಅವನಾದರೋ ಬೆಂಗಳೂರು ದೊಡ್ಡಮ್ಮನ ಮಗ. ಹಾಗಂತ ಗೊತ್ತೇ ಆಗುತ್ತಿರಲಿಲ್ಲ. ಎಲ್ಲರೂ ಜೊತೆಯಲ್ಲೇ ಹುಟ್ಟಿ ಬೆಳೆಯುತ್ತಿದ್ದೇವೆ; ಕಾರಣಾಂತರಗಳಿಂದ ಬೇರೆ ಬೇರೆ ಊರು ಸೇರಿದ್ದೇವೆ ಎನಿಸುತ್ತಿತ್ತು. ಬೇಸಿಗೆ ರಜೆ ಬಂತೆಂದರೆ ಶಾಮ ಬಂದೇಬರುತ್ತಾನೆ ಎನ್ನುವ ನಿರೀಕ್ಷೆ ನನ್ನದು. ಆಗ ಅವನೂ ಪುಟ್ಟ ಹುಡುಗನಾದರೂ ಅವನೊಬ್ಬ ಚ್ಯೆಲ್ಡ್ ಜೀನಿಯಸ್ ಎಂದು ಅಣ್ಣ ತಾವು ಬದುಕಿರುವವರೆಗೂ ಹೇಳುತ್ತಿದ್ದರು. ಅದು ನಿಜವಾದ ಮಾತೇ!  ತನ್ನ ಎಳೇ ವಯಸ್ಸಿನಲ್ಲೇ ಎಷ್ಟೇ ಉದ್ದದ ಹಾಡನ್ನಾದರೂ ಬರೆದುಕೊಳ್ಳದೆ  ನೆನಪಿನಲ್ಲಿಟ್ಟುಕೊಂಡು ಹಾಡಬಲ್ಲವನಾಗಿದ್ದ, ಒಂದು ಹಾಡನ್ನು ಮತ್ತೊಂದು ರಾಗದಲ್ಲಿ (ತನ್ನ ಸ್ವಂತದ್ದು) ಎಷ್ಟೇ ದೊಡ್ಡ ಸಭೆ ಸಮುದಾಯವಿದ್ದರೂ ಅಂಜಿಕೆಯಿಲ್ಲದೆ ಹಾಡಬಲ್ಲವನಾಗಿದ್ದ! ಇಂಗ್ಲಿಷ್ ಹಾಗು ಕನ್ನಡದಲ್ಲಿ ಯಾರೊಬ್ಬರ ಸಹಾಯವೂ ಇಲ್ಲದೆ ಪುಟಗಟ್ಟಲೆ ಪತ್ರಬರೆಯುವ, ಪ್ರಾಣಿ, ಪಕ್ಷಿ, ಮನುಷ್ಯರನ್ನು ಅನುಕರಿಸುವ, ಒಂದು ವಿಷಯದ ಬಗ್ಗೆ ನಿರರ್ಗಳವಾಗಿ ವಯಸ್ಸಿಗೆ ಮೀರಿ ಮಾತನಾಡುವ ತಾಕತ್ತು ಎಲ್ಲಾ ನನ್ನ ಶಾಮಣ್ಣನಿಗಿತ್ತು! ಹಾಗೆಯೇ ಅಪ್ರತಿಮ ತುಂಟ.  ನಾವಿಬ್ಬರೂ ಅತೀ ಚಟುವಟಿಕೆಯಿರುವ ಜೀವಿಗಳಾದ್ದರಿಂದ ಅವನನ್ನು ಮತ್ತು ನನ್ನನ್ನು ಖಾಸಾ ಅಣ್ಣ ತoಗಿಯೆಂದು ಇಡೀ ಲೋಕ ಅಂಗೀಕರಿಸಲೇಬೇಕಿತ್ತು.  ಪಶು-ಪಕ್ಷಿಗಳಿಗಿಂತಾ ಮುಂಚಿತವಾಗಿಯೇ ನಾವಿಬ್ಬರೂ ದಿನಾ ಏಳುತ್ತಿದ್ದುದು. ನಮ್ಮನ್ನು ಏಳಿಸುವ ಜವಾಬ್ದಾರಿಯನ್ನು ನಾವು ಹಿರಿಯರಿಗೆ “ರಜೆಯಲ್ಲಿ” ಮಾತ್ರ ಎಂದಿಗೂ ಕೊಟ್ಟಿದ್ದಿಲ್ಲ. ನಾವಿಬ್ಬರೂ ಸುಮಾರು 6-7 ವರ್ಷದವರಿರಬಹುದು ಆಗ. ದಿನಾ ಬೆಳಗ್ಗೆ ಸುಮಾರು ಒಂದು ಪುಟ ದಿನಪತ್ರಿಕೆ ಓದಿ ಮನಸ್ಸಿಗೆ ತೋಚಿದ್ದನ್ನು ಬರೆಯುವಂತೆ ಶಾಮ ಪೀಡಿಸಿಬಿಡುತ್ತಿದ್ದ. ಅವನೂ ಹಾಗೆ ಬರೆಯುತ್ತಿದ್ದ! ಬರೆಯದಿದ್ದರೆ ‘ನಿನ್ನನ್ನು ತಿರುಗಾಡಿಸಲು ಕೆರೆದುಕೊಂಡು ಹೋಗುವುದಿಲ್ಲ; ನಾನು ಬೆಳಗ್ಗೆ ನೋಡಿದ ಎರಡು ಕೊಕ್ಕಿನ ಹಕ್ಕಿಯನ್ನು ನಿನಗೆ ತೋರಿಸುವುದಿಲ್ಲ’ ಎಂದೆಲ್ಲಾ ವಿಚಿತ್ರ ಬೆದರಿಕೆಗಳನ್ನು ಹಾಕುತ್ತಲೇ ನನ್ನನ್ನು ಬರೆಯುವಂತೆ ಮಾಡುತ್ತಿದ್ದ. ಆಗೆಲ್ಲಾ ಇವನ ರಜೆ ಬೇಗ ಮುಗಿದು ಊರಿಗೆ ಹೊರಡಬಾರದೇ ಎನ್ನಿಸುತ್ತಿತ್ತು. ಇವತ್ತು ಅರಿವಾಗುತ್ತಿದೆ ಅವನು ಅವತ್ತು ಹಾಕಿಕೊಟ್ಟ ಮೇಲ್ಪಂಕ್ತಿ ಈ ಎಲ್ಲಾ ಬರವಣಿಗೆಯ ಮೂಲವೆಂದು!

ಇಂತಹ ದಿನಗಳಲ್ಲೇ ನಮ್ಮಿಬ್ಬರ ಜೀವನದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಆ ದಿನ ಒದಗಿಬಂದದ್ದು! ಅಂದು ಒಂದು ರೋಚಕವಾದ ಆಮಿಷವೊಂದನ್ನು ಮುಂದಿಟ್ಟು ಈ ದಿನ ನನ್ನ ಕನ್ನಡ ಬರವಣಿಗೆಯ ಪುಟವನ್ನೂ ನೀನೇ ಬರೆದರೇ ನಿನ್ನನ್ನು ಜೈಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಶಾಮ ಘೋಷಿಸಿ ನನ್ನ ಸಂತೋಷವನ್ನು ಸೀಮಾತೀತಗೊಳಿಸಿಬಿಟ್ಟ! ಇಂತಹ ಸೌಭಾಗ್ಯ ಇಷ್ಟು ಸಲೀಸಾಗಿ ಒದಗಿಬರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದ್ದರಿಂದ ಬೇಗಬೇಗನೆ ‘ಅಷ್ಟೇ ತಾನೆ’ ಎನ್ನುತ್ತಾ ದುರಹಂಕಾರದಲ್ಲಿ ಎರೆಡು ಪುಟ ಬರೆದು ಬಿಸಾಕಿಬಿಟ್ಟೆ. ಶಾಮನೂ ‘ವೆರಿಗುಡ್’ ಎಂದು ಹರ್ಷದಿಂದ 4-1/2 ಸ್ಟಾರನ್ನು ಕೊಟ್ಟೇಬಿಟ್ಟ (ಬರಹ ಗುಂಡಾಗಿಲ್ಲ, ಇದ್ದಿದ್ದರೆ 5 ಸ್ಟಾರನ್ನೇ ಕೊಡುತ್ತಿದ್ದೆ ಎಂದು ಸುಳ್ಳು ಹೇಳಿಯೇಬಿಟ್ಟ). ಏಕೆಂದರೆ ಅವತ್ತು ನಾನು ಗಡಿಬಿಡಿಯಲ್ಲಿ ಏನೇನೂ ಚೆನ್ನಾಗಿ ಬರೆದಿರಲಿಲ್ಲ. ಅವೆಲ್ಲ ಇರಲಿ, ಈ ಜೈಲು ಯಾತ್ರೆಗೆ ಶಾಮ ಅಣ್ಣನನ್ನು(ನಮ್ಮ ಅಪ್ಪನ್ನ ನಾನು ಹಾಗೇ ಕರೆಯೋದು) ಅದೆಷ್ಟು ಸುಲಭವಾಗಿ ಒಪ್ಪಿಸಿಬಿಟ್ಟ! ಅಣ್ಣ ದೊಡ್ಡ ಲಾಯರ್ ಆಗಿದ್ದರಿಂದ ಅವರ ಕೋರ್ಟಿನ ಪಕ್ಕದಲ್ಲೇ ಇದ್ದ ಪೋಲಿಸ್ ಸ್ಟೇಷನ್ನಿಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದಾಗಿತ್ತು. ಆದರೆ ನನಗೆ ಅಲ್ಲಿಗೆ ಹೋಗಿ ನೋಡುವ ಆಸೆಯಿದ್ದರೂ ಏನೋ ಭಯದಿಂದಾಗಿ ತೆಪ್ಪಗಿದ್ದೆ. ಈ ದಿನ ಶಾಮನಿಗೆ ಧಾರಾಳವಾಗಿ ಅನುಮತಿಯಿತ್ತಿದ್ದ ಅಣ್ಣ ಇಂತಿಷ್ಟು ಹೊತ್ತಿಗೆ ಬಾ ಎಂದು ಹೇಳಿ ಹೋಗಿದ್ದರು. ಈ ಶಾಮನೋ ಕೋರ್ಟು ಯಾವ ಕಡೆ ಇದೆ, ಹೇಗೆ ಬರೋದು ಅನ್ನುವ ವಿಚಾರಗಳನ್ನೇ ಕೇಳಿರಲಿಲ್ಲ. ಅಣ್ಣನಿಗೆ ಯಾವಾಗಲೂ ಶಾಮನ ಮೇಲೆ ಓವರ್ ಕಾನ್ಫಿಡೆನ್ಸು! ಈ ನಟೋರಿಯಸ್ ಫೆಲೋ (ಪ್ರೀತಿಗೆ ಶಾಮನ್ನ ಹಾಗೆನ್ನುತ್ತಿದ್ದರು) ಅಮೇರಿಕಾಗೆ ಬೇಕಾದರೂ ಒಬ್ಬನೇ ಹೋಗಿ ಬರುತ್ತಾನೆ ಎಂದು ಖುಷಿ ಪಡುತ್ತಿದ್ದರು. ಅದು ನಿಜವೇ, ಈಗಿನ ಹಾಗೆ ಜೀ.ಪಿ.ಎಸ್ಸು ಇಲ್ಲ, ಮ್ಯಾಪೂ ಇಲ್ಲ, ಶಾಮಣ್ಣ ನಡೆದಿದ್ದೇ ದಾರಿ.  ಅಮ್ಮ ತಿಂಡಿ ತಿಂದು ಹೋಗ್ರೋ ಎಂದು ಒಂದಿಷ್ಟು ಅನ್ನ-ಸಾರು ಕಲೆಸಿ ಹಾಕಿದ್ದಳು. ನಮಗೆ ಅದೇ ತಿಂಡಿ, ಒಂಥರಾ ಬ್ರಂಚ್! ಗಬಬಗನೆ ತಿಂದು ಇಬ್ಬರೂ ಹೊರಟಾಗ ಅಮ್ಮ ದಾರಿ ಖರ್ಚಿಗೆಂದು ಎಂಟಾಣೆ ಕೂಡಾ ಕೊಟ್ಟಿದ್ದಳು! ಅದರಲ್ಲಿ ಸೀಬೇಕಾಯೋ, ಹಾಲುಕೋವಾನೊ, ಬೊಂಬೆ ಮಿಠಾಯೋ ಯಾವುದು ತಿನ್ನುತ್ತೇವೆ ಎನ್ನುವುದು ಕಾಲವೇ ನಿರ್ಧರಿಸಬೇಕಿತ್ತು. ಇಂತಹಾ ಒಂದು ಸುಡುಬಿಸಿಲಿನ ಮಧ್ಯಾಹ್ನ ನಾವಿಬ್ಬರೂ ಪಾದಯಾತ್ರೆ ಹೊರಟಿದ್ದು. ಎಡ, ಬಲ, ಪೇಟೆ, ಅಲ್ಲಿ, ಇಲ್ಲಿ ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ನಮ್ಮಿಬ್ಬರಿಗೆ ಕಾಲುನೋವೇ ಬರುತ್ತಿರಲಿಲ್ಲವಾ!? ಹೀಗೆಲ್ಲ ಎಷ್ಟೋ ಸಾರಿ ಅಲ್ಲಿಲ್ಲಿ ನೋಡುತ್ತಾ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೋಗುವಾಗ ಕೆಲವು ಅಪರೂಪದ ದೃಶ್ಯಗಳನ್ನು ಶಾಮಣ್ಣ ಪರಿಚಯಿಸುತ್ತಿದ್ದ. ಗಿಣಿ ಶಾಸ್ತ್ರ, ಕೊರವಂಜಿಯರು, ಮಹದೇಶ್ವರನಿಗೆ ಹರಕೆ ಹೊರಟವರು, ಕಡಲೇ ಪುರಿ ಮಾರುವವರು, ಮುಖದ ತುಂಬಾ ವಿಭೂತಿ ಹಚ್ಚಿಕೊಂಡು ಓಡಾಡುವ ಗೊರವಯ್ಯಗಳು, ಬುಡುಬುಡಿಕೆ ಗೊಗ್ಗಯ್ಯಗಳು ಹೀಗೆ ಎಲ್ಲರನ್ನೂ ತೋರಿಸಿ ಅವರ ಗುಣ ವಿಶೇಷಗಳನ್ನು ವರ್ಣಿಸುತ್ತಾ ‘ನೀನು ಒಂಟಿಯಾಗಿ ಕುಣುಕುಣಿತಾ ಇಲ್ಲೆಲ್ಲಾ ಬಂದು ಇವರ ಕೈಗೆ ಸಿಕ್ಕಿಬಿದ್ದರೆ ನಿನ್ನನ್ನು ಕದ್ದುಕೊಂಡು ಹೋಗಿ ತಿಂದುಬಿಡುತ್ತಾರೆ’ ಎನ್ನುವ ಕಟ್ಟೆಚ್ಚರಿಕೆಯನ್ನೂ ದೊಡ್ಡ-ದೊಡ್ಡ ಕಣ್ಣು ಬಿಟ್ಟುಕೊಂಡು ಹೇಳಿ ತನ್ನ ಜವಾಬ್ದಾರಿ ಮೆರೆಯುತ್ತಿದ್ದ. ಯಾವ ಊರಾದರೂ ಹಾಳಾಗಲಿ ಈಗ ನಮ್ಮ ಶಾಮ ನನ್ನ ಜೊತೆಗಿರುವುದರಿಂದ ನನ್ನನ್ನು ಯಾರೂ ಎನೂ ಮಾಡಲಾರರು ಎನ್ನುವ ಧೈರ್ಯದಿಂದ ನಾನು ಮತ್ತಷ್ಟು ಶ್ರೀಮದ್ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದೆ.

ಅವತ್ತೂ ಹೀಗೇ ಅಲೆದಲೆದು ಕೊನೆಗೆ ಕೋರ್ಟು ತಲುಪಿದೆವು. ಕೋರ್ಟಿನ ಮುಂದೆ ಸಾಲಾಗಿದ್ದ ಐಸ್ ಕ್ಯಾಂಡಿ, ಸೀಬೇಕಾಯಿಗಳ ಕಡೆಗೆ ಇಬ್ಬರಿಗೂ ಜೀವ ಎಳೆಯುತ್ತಿತ್ತು. ಇದ್ದ ಎಂಟಾಣೆಯಲ್ಲಿ ಒಂದೊಂದು ಸೀಬೇಕಾಯಿ ಗುಳುಂ ಮಾಡಿ ಕೋರ್ಟನ್ನು ಹೊಕ್ಕೆವು. ಹೇಗೋ ಮಾಡಿ ನಮ್ಮಪ್ಪನ ಆಫೀಸನ್ನು ಪತ್ತೆಹಚ್ಚಿ ಅವರ ಜೊತೆ ಪೋಲಿಸ್ ಸ್ಟೇಶನ್ನಿಗೆ ಹೋದೆವು.  ಅಣ್ಣ ಅಲ್ಲಿದ್ದ ಪೋಲಿಸಿನವರೊಬ್ಬರಿಗೆ ನಮ್ಮಿಬ್ಬರಿಗೂ ಲಾಕಪ್ ತೋರಿಸಲು ಹೇಳಿ ಹೊರಟುಬಿಟ್ಟರು. ನಾನು ಶಾಮ ಇಬ್ಬರಿಗೂ ಕುತೂಹಲ ಮತ್ತು ಅತೀ ಕುತೂಹಲ. ದಪ್ಪ ಮೀಸೆಯ, ಎತ್ತರದ, ಕೆಂಪು ಕಣ್ಣಿನ ಆಜಾನುಬಾಹು ಕಳ್ಳರು ಒಬ್ಬರಿಗಿಂತಾ ಒಬ್ಬರು ಭಯಂಕರವಾಗಿ ಇರುತ್ತಾರೆ ಎಂದು ಹಲವಾರುದಿನಗಳಿಂದ ಕನಸು ಕಂಡಿದ್ದ ನನಗೆ ಅತೀವ ದುಃಖಕರವಾದ ನೋಟ ಕಾದಿತ್ತು. ಅವರೆಲ್ಲಾ ಸಾಧಾರಣ ಮನುಷ್ಯರಂತೆ ಇದ್ದು ನನಗೆ ಇಷ್ಟೊಂದು ನಿರಾಶೆಯನ್ನುಂಟುಮಾಡಿದ್ದು ನಿಜಕ್ಕೂ ತಪ್ಪು ತಾನೆ? ಅಲ್ಲಿದ್ದ ನಾಲ್ಕು ಜನರಲ್ಲಿ ಒಬ್ಬ ಕಳ್ಳ ಮಾತ್ರ ಇದ್ದಿದ್ದರಲ್ಲಿ ಕಪ್ಪಗೆ, ದಪ್ಪಗೆ ಇದ್ದು ಕಳ್ಳರ ಜಾತಿಗೆ ಆಗಬಹುದಾಗಿದ್ದ ಅವಮಾನವನ್ನು ತಪ್ಪಿಸುವಂತಿದ್ದ. ಅದೇಕೋ ಅವನನ್ನು ಮುರಾರೀ, ಮುರಾರೀ  ಎಂದು 3-4 ಸಾರಿ ಪೋಲೀಸಿನವರು ಕೂಗಿ ಏನೋ ಹೇಳಿ, ಕೇಳಿ ಸಹಿ ಮಾಡಿಸಿಕೊಂಡರು. ಅಚಾನಕ್ ನನ್ನ ಕಡೆಗೆ ನೋಡಿದ ಮುರಾರೀ ದೊಡ್ಡದಾಗಿ ಕಣ್ಣು ಬಿಟ್ಟು, ಕೆಂಪು ಹಲ್ಲು ತೋರಿಸಿ ನಕ್ಕುಬಿಟ್ಟ. ಆ ಕ್ಷಣದಲ್ಲೇ ಭೂಮಿ ನಡುಗಿದಹಾಗಾಗಿ ಹೆದರಿ ಗುಬ್ಬಚ್ಚಿಯಾದ ನಾನು ಹೊರಡೋಣ ಬಾರೋ ಬಾರೋ ಎಂದು ಶಾಮನಿಗೆ ದುಂಬಾಲು ಬಿದ್ದು ‘ತಡಿಯೇ ಇವಳೊಬ್ಳು, ಈಗಿನ್ನೂ ಬಂದಿದೀವಿ ಅದು ಹ್ಯಾಗೆ ಹೋಗೊಕ್ಕಾಗುತ್ತೆ ‘ ಎಂದು ಬೈಸಿಕೊಂಡೆ. ಶಾಮ ಮಾತ್ರ ಅಲ್ಲಿದ್ದ ಎಲ್ಲಾ ಕಳ್ಳರ ಜೊತೆಗೆ ಪೋಲೀಸರನ್ನೂ ಮಾತಾಡಿಸಿ ಶೇಕ್ ಹ್ಯಾಂಡ್ಸ್ ಕೊಟ್ಟು, ನನಗೂ ಹಾಗೇ ಶೇಕ್ ಹ್ಯಾಂಡ್ಸ್ ಕೊಡಿಸಿ ಹೊರಗೆ ಕರೆತಂದ. ನಾನು ಅರ್ಧ ಬಿಳುಚಿದ ಮುಖದಿಂದ ಜೊತೆಗೆ ಅಲ್ಲಿಂದ ಪಾರಾಗಿ ಹೊರಬಿದ್ದ ನೆಮ್ಮದಿಯಿಂದ ಶಾಮನ ಜೊತೆಗೆ ಮನೆ ತಲುಪಿದೆ. ಆ ದಿನವೆಲ್ಲಾ ಶಾಮ ಜೈಲಿನ ಬಗ್ಗೆ ವಿವರಿಸಿದ್ದೇ ವಿವರಿಸಿದ್ದು. ಅಣ್ಣ ಮನೆಗೆ ಬಂದನಂತರ  ಪೋಲಿಸಿನೋರು ನಮ್ಮಿಬ್ಬರನ್ನೂ  ತುಂಬಾ ಗಂಭೀರವಾದ (!) ಮಕ್ಕಳೆಂದು ಹೊಗಳಿದ್ದನ್ನು ಸಂತೋಷದಿಂದ ಅಮ್ಮನೊಡನೆ ಹೇಳಿಕೊಂಡರು. ಅವತ್ತೆಲ್ಲಾ ಮನೆಯಲ್ಲಿ ಹಬ್ಬದ ವಾತಾವರಣವಿತ್ತು.  ನನಗೆ ಮಾತ್ರ ಯಾವುದೂ ಬೇಕಾಗಿರಲಿಲ್ಲ. ಮುರಾರಿ ಕಳ್ಳನ ಬೆದರಿಕೆಯ ನೋಟ, ನಗು ಪದೇ ಪದೇ ನೆನಪಾಗಿ ನಡುಕ ಬಂದಹಾಗಾಗುತ್ತಿತ್ತು. ಕೊನೆಗೆ ಶಾಮನೇ ‘ಯಾಕೇ ಹೀಗಿದ್ದೀಯ’ ಎಂದಾಗ ಕಾರಣ ಹೇಳಿ ನನ್ನ ಕಾಲಮೇಲೆ ನಾನೇ ಚಪ್ಪಡಿ ಎಳೆದುಕೊಂಡೆ. ಮುರಾರಿ ಕಳ್ಳನನ್ನು ನಾನು ಎಷ್ಟು ಮರೆಯಲು ಪ್ರಯತ್ನಿಸಿದರೂ ಈ ಶಾಮ ‘ನಾರಿಯಾ ಸೀರೆ ಕದ್ದ…ಕೃಷ್ಣಾ …ಮುರಾರೀ ಎಂದು ಹಾಡಿ ಹಾಡಿ ನಕ್ಕು ನೆನಪು ಮಾಡಿಸಿಬಿಡುತ್ತಿದ್ದ. ನಾನು ಅವನನ್ನು ಹೊಡೆಯಲು ಅಟ್ಟಿಸಿಕೊಂಡು ಹೋಗುವುದು, ಅವನು ಮನೆ ಹಿಂದಿದ್ದ ಕುಳ್ಳು ಮಾವಿನ ಮರ, ಕಾಂಪೌಂಡು ಇತ್ಯಾದಿ ಏರಿ ಅಣಕಿಸುವುದು ಎಲ್ಲಾ ಮಾಮೂಲಾಯಿತು. ಅದು ಹೇಗೋ ಒಂದೆರಡು ದಿನಗಳಲ್ಲಿ ಭಯ ತಾನೇತಾನಾಗಿ ಹೋಯಿತು.

ನಮ್ಮ ಇಂಡೋರ್ ಗೇಮ್ಸ್ ಕೂಡ ಔಟ್ ಡೋರಿನಲ್ಲೇ ಇರುತ್ತಿದ್ದರಿಂದ ನಮ್ಮ ಅಮ್ಮಂದಿರು ಬಚಾವಾಗಿದ್ದರು. ಅದರೂ ಅಟ ಮುಗಿಸಿ ಬಂದೆವಂದರೆ ನಮ್ಮ ಇಡೀ ಶರೀರಗಳು ಬಟ್ಟೆ-ಬರೆಯ ಸಮೇತವಾಗಿ ಮಣ್ಣಿನ ಬಣ್ಣಕ್ಕೆ ತಿರುಗಿ ಟಾಪ್ ಟು ಬಾಟಮ್ ಮಣ್ಣಿನ ಮಕ್ಕಳಾಗಿರುತ್ತಿದ್ದೆವು. ಅ ಮಣ್ಣಿನ ಬಣ್ಣವೇ ತೀರಾ ಅಷ್ಟೊಂದು ಡಾಕ್೯ ಅಗಿದ್ದರೆ ನಮ್ಮ ತಪ್ಪೇನಿದೆ ಹೇಳಿ? ಹಾಗಾಗಿ ನಮ್ಮ ಅಮ್ಮಂದಿರು ಸಹ ನಮ್ಮಂತಹ ಮಕ್ಕಳನ್ನು ಹೆತ್ತ ಮೇಲೆ ಯಾವುದೇ ಸಫ್೯ನ ಖರೀದಿಯಲ್ಲೂ ಸಮಜ್ದಾರಿ ಉಳಿದಿಲ್ಲ ಎನ್ನುವ ಸತ್ಯ ಮನಗಂಡಿದ್ದರು . ಇದೆಲ್ಲದರ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಹಾಗಂತ ನಾವು ದಿನಾ ಮಣ್ಣಾಟ ಆಡುತ್ತಿರಲಿಲ್ಲ, ಫಾರ್ ಎ ಛೇಂಜ್ ಒಮ್ಮೊಮ್ಮೆ ದೇಶಭಕ್ತಿ ಕಥೆಗಳನ್ನು ಹೇಳಿಕೊಳ್ಳುವುದು, ಹಿತ್ತಲಿನ ಗಿಡಮರಗಳಿಗೆ ಪಿಕ್ ಅಂಡ್ ಸ್ಪೀಕ್ ಮಾಡಿಸುವುದು, ಬೊಂಬೆಗೆ ಆಪರೇಶನ್ನು, ಇನ್ನೊಂದು ದಿನ ಪರ್ವತಾರೋಹಣ (ಮರಳಿ ಗುಡ್ಡಾ), ಮ್ಯಾಚೆಸ್ಸ್ ಕಲೆಕ್ಷನ್ನು, ಶಾಮನ ಸ್ಥಳೀಯ ಗೆಳೆಯರು ಮತ್ತು ಅವನು ಆಡುವ ಗೋಲಿ ಆಟ ಮತ್ತು ಲಗೋರಿ ನೋಡುವುದು (ಇದಕ್ಕೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ನನಗೆ ತುಂಬಾ ಕೋಪವಿತ್ತು), ಇರುವೆಗಳು ಹೇಗೆ ಓಡಾಡುತ್ತವೆ ಎನ್ನುವ ಬಗ್ಗೆ ರಿಸರ್ಚು, ಅಮ್ಮ ಒಣಗಿಸಲೆಂದು ಇಟ್ಟಿದ್ದ ಸಂಡಿಗೆಗಳನ್ನು ಮಳೆ ಬಂದಾಗ ಎತ್ತಿ ತರುವ ನೆಪದಲ್ಲಿ ಅರೆ-ಹಸಿ ಸ್ಟೇಜಿನಲ್ಲೇ ಸ್ವಾಹಾ ಮಾಡುವುದು, ಮನೆಯ ಹೊರಗಿನ ಮರದಲ್ಲಿದ್ದ ಅಂಟು ಕಾಯಿಗಳನ್ನು ಜಜ್ಜಿ ಬಾಲ್ ಮಾಡುವುದು, ಸೈಕಲ್ ಶಾಪಿನ ಮುಂದೆ ಮಣ್ಣಲ್ಲಿ ಮಣ್ಣಾಗಿದ್ದ ಗುಂಡುಗಳನ್ನು ವಜ್ರಕ್ಕಿಂತಾ ಅಮೂಲ್ಯ ಎನ್ನುವಂತೆ ಆರಿಸಿ ಸೈಕಲ್ ಶಾಪಿನವರ ಹತ್ತಿರ ಛೀ, ಥೂ ಎನ್ನಿಸಿಕೊಂಡು ಓಡಿಬರುವುದು ಇಂತಹ ನೂರೆಂಟು ಆಟಗಳನ್ನು ಆಡುತ್ತಾ, ಕುಣಿಯುತ್ತಾ ಕಾಲ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ, ಅಷ್ಟರಲ್ಲಿ ಶಾಮನ ರಜೆ ಮುಗಿದು ಅವನು ಊರಿಗೆ ಹೋಗುವ ದಿನ ಬಂದುಬಿಡುತ್ತಿತ್ತು, ಶಾಮ ಬೆಂಗಳೂರಿಗೆ ಹೊರಡಬೇಕಾಗುತ್ತಿತ್ತು. ಬೆಳಗಿನ ನಸು ಬೆಳಕಿನಲ್ಲೇ ನಾನೂ ಅಣ್ಣ ಹೋಗಿ ಅವನನ್ನು ಬಸ್ಸಿನಲ್ಲಿ ಕೂರಿಸಿ ಟಾಟಾ ಮಾಡಿ ಬೀಳ್ಕೊಡುತ್ತಿದ್ದೆವು. ವಾಪಸ್ಸಾಗುವಾಗ ದಾರಿಯುದ್ದಕ್ಕೂ ನಾನು ಸೊರ ಸೊರ ಅಳುತ್ತಾ ಬಂದು ಮರುದಿನದ ನನ್ನ ಶಾಲೆಯ ತಯಾರಿ ನಡೆಸಲು ಅನುವಾಗುತ್ತಿದ್ದೆ.  ಹಾಗೆಯೇ …ಶಾಮಣ್ಣನ ಮುಂದಿನ ರಜೆಯ ಬರುವಿಕೆಗೆ ದಾರಿ ಕಾಯುತ್ತಿದ್ದೆ.

Leave a comment

Filed under ಲೇಖನಗಳು