Monthly Archives: August 2015

ಗೆಳೆತನ

ಎಂದೋ ಕಂಡ2
ಹಗಲುಗನಸಿ’ಗೆ’
ಪೂರಕವಾಗೊಮ್ಮೆ
ಆವಿರ್ಭವಿಸಿದ
ನನಸಿನ ಎ’ಳೆ’
ಮುಕ್ತ ವಾತ್ಸಲ್ಯದ
ನೆಚ್ಚಿನ ಸೆಳೆ’ತ’
ಹೃದಯಾಂತರಾಳದ
ಸುಚೇತ’ನ’
ನನ್ನ-ನಿನ್ನ ‘ಗೆಳೆತನ’

Leave a comment

Filed under ಕವನಗಳು

ಎಲ್ಲಿಂದಲೋ ಬಂದವಳು

t ಬೇಸರ ಯಾರಿಗಾಗುವುದಿಲ್ಲ ಹೇಳಿ? ಮನಸ್ಸು ಇರುವವರೆಗೂ ಇದರ ಗೊಡವೆ ತಪ್ಪಿದ್ದಲ್ಲ. ಬೇಸರವನ್ನು ವಿಜೃಂಭಿಸುವಲ್ಲಿ ಕವಿಗಳೇನು ಹಿಂದುಳಿದಿಲ್ಲ ಬಿಡಿ….ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…ಇಂಥಾ ಒಂದು ಸಂಜೆಯಲ್ಲೇ ಮನಸ್ಸು ರಾಡಿಯಾಗಿ, ಬೋಡಿಯಾಗಿ, ಜೋಡಿಯಿಲ್ಲದ ಮೂಡಿಯಾಗಿ, ಕೊನೆಗೆ ತಾನೇ ಕಿಡಿಗೇಡಿಯಾಗಿ, ಬೇಸರ ಪುಡಿ ಪುಡಿಯಾಗಿ…ಮತ್ತೆ ಹೂನಗು ಅರಳಬೇಕು!….ಕತ್ತಲಾದ ಮೇಲೆ ಬೆಳಕು ಖಂಡಿತ……ಕಾರ್ಮೋಡದಂಚಿನ ಬೆಳ್ಳಿ ಕಿರಣ….ಇವೆಲ್ಲಾ ನಿಜವೇ?

ಯಾವುದು ಹೇಗೋ…ಅಡ್ರಿನಲಿನ್ ಎನ್ನುವ ಹಾರ್ಮೋನ್ ಬಗ್ಗೆ ಕೇಳಿದ್ದೀರಾ? ಅತೀವ ಆತಂಕದ ಕ್ಷಣಗಳಲ್ಲಿ ಬಿಡುಗಡೆಯಾಗುವ ಈ ವಸ್ತು “ಫೈಟ್ ಅಥವ ಫ್ಲೈಟ್” ತಂತ್ರದಿಂದ ಕಾರ್ಯ ನಿರ್ವಹಿಸುತ್ತದೆ. ಆತಂಕವನ್ನೆದುರಿಸಲು ಶರೀರವನ್ನು ಹಾಗು ಮನಸ್ಸನ್ನು ತಯಾರು ಮಾಡುತ್ತದೆ. ಈ ಗ್ರಂಥಿ ಮೂತ್ರಜನಕಾಂಗದ ಮೇಲೆ ಸುಮಾರು ೩ ಇಂಚುಗಳಷ್ಟು ಉದ್ದಕ್ಕೆ ತನ್ನ ಸ್ಥಾನವನ್ನಲಂಕರಿಸಿದೆ. ಆದರೆ ಇದರ ಕಾರ್ಯನಿರ್ವಹಣೆಯ ವೈಖರಿ ನೋಡಿ….ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನಿಸಲಿಲ್ಲವೆ?

ಕೆಲವೊಮ್ಮೆ ಅತಿ ಸಣ್ಣ ವಸ್ತುಗಳು ದೊಡ್ಡ ಪ್ರಮಾಣದ ಬೇಸರಗಳ ಬಾಯ್ಮುಚ್ಚಿಸಲು ಕಾರಣವಾಗುತ್ತವೆ. ಅತೀವ ಸಂಕಟದ ಹೊಟ್ಟೆನೋವು ಬಾಧಿಸುತ್ತಿರುವಾಗ ಗೆಳತಿಯ ಪುಟ್ಟ ಎಸ್.ಎಮ್.ಎಸ್……ತುಟಿಯಂಚಲ್ಲಿ ನಗೆಯುಕ್ಕಿಸುವಲ್ಲಿ ಸಮರ್ಥವಾಗಬಹುದು. ಅಪ್ಪ-ಅಮ್ಮನ ಜಗಳದಲ್ಲಿ ಮಗುವಿನ ಮುದ್ದು ಮೊದ್ದು ತೊದಲು ನುಡಿಯೊಂದು ಜಗಳದ ವಸ್ತುವೇ ಬಡವಾಯ್ತು ಎನ್ನಿಸುವ ತಂಗಾಳಿ ಬೀಸಿಬಿಡಬಹುದು. ಹೀಗೆ….ಸುತ್ತಮುತ್ತಲಿನ ಹಲವಾರು ನಡೆದಾಡುವ ಸಂತಸಗಳು ನಮ್ಮನ್ನು ಸುತ್ತುವರೆದಿರುತ್ತವೆಯೇನೋ!!!! ಗಮನಿಸುವ ತಾಳ್ಮೆ ನಮಗೆ ಬೇಕು ಅಲ್ಲವೆ?

ಹಲವು ಸಾರಿ ಪುಟ್ಟ ಪುಟ್ಟ ಘಟನೆಗಳು ಬದುಕುವ ಕಲೆಯನ್ನು ಕಲಿಸುತ್ತಾ ಸಾಗುತ್ತಿರುವ ಮೊಬೈಲ್ ಜ್ಞಾನಕೇಂದ್ರಗಳಾಗಿರುತ್ತವೆ. ಬದುಕುವುದು ಹೇಗೆ ಎನ್ನುವುದಕ್ಕೆ ಅನೇಕ ಸೂತ್ರಗಳೂ, ವಾದ-ವಿವಾದಗಳೂ ಬದುಕಿನ ಜೊತೆ ಜೊತೆಗೇ ಹುಟ್ಟಿ ಬೆಳೆಯುತ್ತವೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೇ ಸ್ಥಿತಪ್ರಜ್ಞನಾಗಿರು ಎಂದುಬಿಟ್ಟಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ.  ಅಲ್ಲಾ…ಅಪರೂಪಕ್ಕೆ ಒಮ್ಮೆ ಯಾರಾದರೂ ಹೊಗಳಿದರೆ ಹಿಗ್ಗಿ ಹೀರೇಕಾಯಾಗಿ ಹಲ್ಲು ಕಿರಿಯುವುದು ಬಿಟ್ಟು ಶ್ರೀಮದ್ಗಾಂಭೀರ್ಯ ನಟಿಸುವುದೇ….ಅದಾಗುವುದಿಲ್ಲ ಬಿಡಿ! ಹಾಗೇ ಮನೆಯಲ್ಲಿ ಮಾರಾಮಾರಿ ಜಗಳವಾಗುತ್ತಿರುವಾಗ ನಗುನಗುತಾ ನಲಿ ನಲಿ ಎಂದು ಕೂತರೆ ಹುಚ್ಚಾಸ್ಪತ್ರೆ ಗ್ಯಾರಂಟಿಯಷ್ಟೆ! ನೀವೇನೇ ಅನ್ನಿ…ಮನಸ್ಸು ಎನ್ನುವ ಮಾಯಾಂಗನೆ ಬಲು ಚಂಚಲೆ.  ಎಲ್ಲಿ ಅಳಿಸುವಳೋ, ಎಲ್ಲಿ ನಗಿಸುವಳೋ, ಎಲ್ಲಿ ನಿಲ್ಲಿಸುವಳೋ, ಎಲ್ಲಿ ತೇಲಿಸಿ ಮುಳುಗಿಸುವಳೋ ಅರಿವಾಗದಂತೆ ಮೀನ ಹೆಜ್ಜೆಯಿಡುತ್ತಲೇ ನಡೆಯುವ ಮೋಹನಾಂಗಿಯವಳು.  ಆದರೂ ಸಮಯೋಚಿತ ತಿಳಿಹಾಸ್ಯಪ್ರಜ್ಞೆ ಎಲ್ಲಿಯವರೆಗೆ ನಮ್ಮೊಂದಿಗಿರುವುದೋ ಅಲ್ಲಿಯವರೆಗೂ ನಮ್ಮನ್ನು ಅಲ್ಲಾಡಿಸಲು ಯಾವ ಡಿಪ್ರೆಷನ್ ಗೂ ಸಾಧ್ಯವಿಲ್ಲ ಬಿಡಿ. ಇದರರ್ಥ ಬದುಕನ್ನು ಹಗುರವಾಗಿ ಪರಿಗಣಿಸಿ ಎಂದಲ್ಲ, ಬರುವ ಕಷ್ಟ-ಸುಖಗಳನ್ನು ಹಗುರವಾಗಿ ನೋಡಿ ಪರಿಹಾರಕ್ಕೆ ಗಮನಕೊಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು.  ಹೀಗೆ ನಮ್ಮನೆ ಆಮೆ ನನಗೊಂದು ಪಾಠ ಕಲಿಸಿ ನನ್ನ ಹೃದಯದಲ್ಲಿ ಮೇಷ್ಟ್ರ ಸ್ಥಾನ ಪಡೀತು ಅಂದ್ರೆ ನಂಬ್ತೀರಾ?

ಅಯ್ಯೋ..ಆ ಆಮೆದೇ ದೊಡ್ಡ ಕಥೆ ಕಣ್ರೀ….ನನ್ನ ಮಗನ ಗೆಳೆಯನ ತೋಟದ ಬಾವಿಯಲ್ಲಿ ಜಾಯಿಂಟ್ ಫ್ಯಾಮಿಲಿನಲ್ಲಿ ಜಗಳ ಕಾಯುವ ಬಜಾರಿ ಕಿರಿ ಮಗಳಂತಿದ್ದ ಇದಕ್ಕೆ ತಾನು ನಮ್ಮನೆಗೆ ಬಂದಿದ್ದು, ಪೇಯಿಂಗ್ ಗೆಸ್ಟ್ ಆಗಿ ತಾನು ನಮ್ಮನೆ ಅಕ್ವೇರಿಯಂನಲ್ಲಿ ನೆಲೆಸಿದ್ದು ಅತೀವ ಹೆಮ್ಮೆ ಮೂಡಿಸಿದೆ. ಪೇಯಿಂಗ್ ಗೆಸ್ಟ್ ಹೇಗೆ ಅಂತೀರಾ? ಇವಳು ಕೊಡುವ ಸಂತೋಷ ಎಷ್ಟು ದುಡ್ಡಿಗೂ ಸಿಗೋಲ್ಲ ಬಿಡ್ರೀ! ಅದೇನು ಧಿಮಾಕು ಅಂತೀರಾ ಈಕೆಗೆ? ಮನೆ ಮಂದಿಯೆಲ್ಲಾ ಅವರವರ ತಲೆಗೊಂದೊಂದರಂತೆ ಹೆಸರಿಟ್ಟು ಇವಳನ್ನು ಕರೆದರೂ ತನ್ನೆಲ್ಲಾ ಹೆಸರೂ ಇವಳಿಗೆ ನೆನಪಿದೆ ಗೊತ್ತಾ!? ಮಿಟ್ಟೂ, ಟರ್ಟೂ, ಚಿಂಟೂ…ಇದೆಲ್ಲದರ ಜೊತೆಗೆ ಇಟ್ಟಿರೊ ಅಚ್ಚ ಕನ್ನಡದ ಹೆಸರು “ಕಣ್ಮಣಿ.” ಇದೊಂದು ಉಭಯ ಜೀವಿ. ನೀರು ಮತ್ತು ನೆಲ ಎರಡರ ಮೇಲೂ ಬಾಳುವ ತಾಕತ್ತು ಹೊಂದಿರೊ ಪ್ರಾಣಿ. ಯಾವತ್ತೂ ಬೇಸರಗೊಂಡು ಚಲನೆ ಮರೆತು ಕುಳಿತ ದಿನಗಳೇ..ಉಹೂಂ…ನನಗೆ ನೆನಪಿಲ್ಲ. ನೆಲದ ಮೇಲೆ ಬಿಟ್ಟೊಡನೆ ತಪ್ಪು ಹೆಜ್ಜೆಯಿಡುತ್ತಾ ಓಡುವ ಮಕ್ಕಳ ಥರ…ಚಿನ್ನಾಟವಾಡುತ್ತಾ ಓಡಲು ಮೊದಲಾಗುತ್ತಾಳೆ. “ಮೊಲ ಮತ್ತು ಆಮೆ ಪಂದ್ಯ” ದಲ್ಲಿ ಇವಳಿದ್ದಿದ್ರೆ….ನಾನು ಛಾಲೆಂಜ್ ಮಾಡ್ತೀನಿ, ಇವಳೇ ಕಣ್ರಿ ಗೆಲ್ತಿದ್ದಿದ್ದು. ಇನ್ನು ಅಕ್ವೇರಿಯಂನಲ್ಲಿ ಬಿಟ್ಟಾಗ…  ಬ್ಯಾಸ್ಕಿಂಗ್ ಏರಿಯಾ ಅಂತ ಅಕ್ವೇರಿಯಂನಲ್ಲಿ ಒಂದಿರುತ್ತೆ, ನೀರಿಂದ ಮೇಲೆ ಗಾಳಿ ಸೇವನೆಗೆ ಬಂದು ಕುಳಿತುಕೊಳ್ಳುವ ಅಟ್ಟದಂಥಾ ಜಾಗ…ಅಲ್ಲೂ ಅವಳೇ ಬಾಸ್. ಕರೆದರೆ ಕುಪ್ಪಳಿಸುತ್ತಾ ಬಂದು ನಮ್ಮ ಮಾತುಗಳನ್ನೆಲ್ಲಾ ಕತ್ತು ಕೊಂಕಿಸಿ ಕೇಳಿಕೊಂಡು, ಬಿಟ್ಟಿ ಸಲಹೆನೂ ಕೊಟ್ಟು (ಅವರವರ ಭಾವಕ್ಕೆ), ಇಷ್ಟೇನಾ ನಿನ್ನ ಗೋಳೂ…ವೆರಿ ಸಿಂಪಲ್..ಡೊಂಟ್ ವರಿ ಎನ್ನುತ್ತಾ ನೀರಲ್ಲಿ ಧುಮುಕಿ ಅಂತರ್ಧಾನಳಾಗಿಬಿಡೊ ಇವಳು ಒಮ್ಮೆ ನನ್ನ ಬದುಕಿನ ಗತಿನ ಹೇಗೆ ಬದಲಿಸಿಬಿಟ್ಳು ಅಂತೀರಾ…!!!! ಇವಳಿಗೇನೂ ಚಿಂತೆಗಳೇ ಇಲ್ಲವೇ? ದೂರದಿಂದ ಎಲ್ಲಿಂದಲೋ ಬಂದವಳು …ಮೊದ ಮೊದಲು ನನಗೆ ಇವಳ ಮೇಲಿದ್ದ ಅತೀ ಕಾಳಜಿ ನೋಡಿ ನನ್ನನ್ನು ‘ಆಹಾ ಮಳ್ಳಿ’ ಎಂದುಕೊಂಡಿರಬಹುದು…’ಲೀವ್ ಮಿ ಅಲೋನ್’ ಎಂದು ನನಗೆ ವಾರ್ನಿಂಗೂ ಕೊಟ್ಟಿರಬಹುದು. ನನ್ನ ಮಗನನ್ನು ನೋಡಿ ತನ್ನ ಅಣ್ಣನನ್ನು ಮಿಸ್ ಮಾಡಿಕೊಂಡಿರಬಹುದು. ವರ್ಲ್ಡ್ ಕಪ್‌ನ ನನ್ನ ಮಗನ ಜೊತೆ ತದೇಕಚಿತ್ತವಾಗಿ ನೋಡಿ, ಸಚಿನ್ ಔಟ್ ಆದಾಗ ಮುಖ ಸಿಂಡರಿಸಿಕೊಂಡು, ಕೊನೇಲಿ ಧೋನಿ ಸಿಕ್ಸ್ ಹೊಡೆದಾಗ ಸಂತೋಷದಿಂದ ನೀರಲ್ಲಿ ಲಗಾಟೆ ಹಾಕಿ ಸೆಲಿಬ್ರೇಟ್ ಮಾಡಿದ ಇವಳ ರೀತಿ….ಅಮೇಜಿಂಗ್ ಕಣ್ರೀ!  ನನ್ನ ಗೆಳತಿಯ ಮೌನ ಸಂಭಾಷಣೆ (ನನ್ನ ಗೆಳತಿ ಕಣ್ಮಣಿಯ ಜೊತೆ ನನ್ನ ಹಾಗೆ ಅಬ್ಬರಿಸಿ ಬೊಬ್ಬಿರಿಯುವುದಿಲ್ಲ) ತಾಯಿಯ, ಅಕ್ಕನ ಅಥವ ಮಗಳ ನೆನಪನ್ನು ತಂದಿರಬಹುದು. ಹಲವು ಬಾರಿ ಇವಳು ಹಾಗು ನನ್ನ ಗೆಳತಿ ಇಬ್ಬರೂ ಏನೋ ತದೇಕ ಚಿತ್ತರಾಗಿ ಒಬ್ಬರನ್ನೊಬ್ಬರು ನೋಡುತ್ತಾ, ನಸು ನಕ್ಕು ಟೆಲಿಪತಿ ಮೂಲಕ ಸಂಭಾಷಿಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಉಭಯ ಕುಶಲೋಪರಿಯಂತೆ ಕಂಡರೂ ಅದೇನೇನು ವಿಷಯ ಹಂಚಿಕೊಳ್ಳುತ್ತಾರೋ ಕಾಣೆ..ತವರಿಗೆ ಬಂದು ತಾಯಬಳಿ ಕಷ್ಟ-ಸುಖ ಮಾತಾಡಿಕೊಂಡು ಗೆಲುವಾದ ಹೆಣ್ಣುಮಕ್ಕಳಂತೆ ಇಬ್ಬರೂ ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅದೇನು ಚರ್ಚೆ ನಡೆಸುತ್ತಾರೋ…ಅದು ಬಿಡಿ…ಟಾಪ್ ಸೀಕ್ರೆಟ್!

ಅಂದು ಸಂಜೆ ಮನದ ಮುಗಿಲಿನ ತುಂಬಾ ಚಿಂತೆಯದೇ ಕಾರ್ಮೋಡವಿತ್ತು.  ಮೊದಲಿನಂತೆ ಹರಟದೆ ನನ್ನ ಗೆಳತಿಯ ಹಾಗೆ ಆಮೆಯ ಜೊತೆ ಅವಳ ಆಟ ನೋಡುತ್ತಾ ನೋಡುತ್ತಾ ಮೌನ ಸಂಭಾಷಣೆಗಿಳಿದೆ.  ಅವಳು ಹೇಳಿದ್ದಿಷ್ಟು. ಚಿತೆಗೂ ಚಿಂತೆಗೂ ಒಂದು ಸೊನ್ನೆಯಷ್ಟೇ ವ್ಯತ್ಯಾಸ….ಚಿತೆ ನಿರ್ಜೀವವನ್ನು ಸುಟ್ಟರೆ ಚಿಂತೆ ಜೀವವನ್ನೇ ಸುಡುತ್ತದೆ. ಚಿಂತೆಯಿಲ್ಲದ ಮನಸ್ಸನ್ನು ಹುಡುಕುವುದು ಸಾವಿಲ್ಲದ ಮನೆಯ ಸಾಸಿವೆಕಾಳನ್ನು ತರುವಷ್ಟೇ ಕಷ್ಟ. ಪ್ರತಿಯೊಬ್ಬ ಮನುಷ್ಯನೂ ತನ್ನ ಚಿಂತೆಗಳ ಮೊತ್ತವನ್ನು ಹೇಗೆ ತನ್ನ ಚಿಂತನೆಯ ಮುಖಾಂತರ ಬಗೆಹರಿಸಿಕೊಳ್ಳುತ್ತಾನೋ ಆ ಆಧಾರದ ಮೇಲೆ ಅವನು ಪ್ರತ್ಯೇಕ ವ್ಯಕ್ತಿಯೆನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕು ಭೌತಿಕವಾಗಿ ಇಂತಿಷ್ಟೇ ಎಂದು ಒಂದಿಷ್ಟು ಅಕ್ವೇರಿಯಂ, ಒಂದಿಷ್ಟು ಬ್ಯಾಸ್ಕಿಂಗ್ ಏರಿಯಾ, ಒಂದಿಷ್ಟು ನೆಲ, ಒಂದು ಪರಿಸರ, ಒಂದಿಷ್ಟು ಸಂಗಡಿಗರು ಇತ್ಯಾದಿಗಳನ್ನು ಹಲವಾರು ಚಿಂತೆಗಳ ಫ್ರೀ ಪ್ಯಾಕೇಜ್ ಜೊತೆಗೆ ಕೊಟ್ಟಿದೆ. ಇದರ ಜೊತೆಗೆ ಬಾಳಲು ನಮ್ಮ ಚಿಂತನೆಯ ಉಪಯೋಗ ನಾವು ಮಾಡಿಕೊಳ್ಳಬೇಕಷ್ಟೆ. ಈ ಕಟ್ಟುಪಾಡು ಭೌತಿಕವಾಗಿಯೇ ಹೊರತು ಮಾನಸಿಕವಾಗಿ ಸುಮೇರುವಾಗಲು ಯಾರಿಗೂ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ವಿಧಿಯ ಮಳೆಗರೆಯೆ…..ಎಲ್ಲರೊಳಗೊಂದಾಗು ಮಂಕುತಿಮ್ಮ. ಚಿಂತೆ ಹಾಗು ಸಂತಸಗಳು ಮಗ್ಗುಲು ಬದಲಾಯಿಸಿದ ಹಾಗೆ. ಒಂದೇ ಕಡೆ ಮಲಗಿ ಜಡ್ಡುಗಟ್ಟುವ ಮೊದಲು ಪಕ್ಕಕ್ಕೆ ಹೊರಳುವ ಅಲ್ಪ ಪ್ರಯೋಗ ನಮ್ಮ ಮನಸ್ಸಿನ ಮೇಲೆ ನಾವು ಮಾತ್ರ ಮಾಡಿಕೊಳ್ಳಬಹುದು…ಇತರರು ಕಾರಣವಾಗಬಹುದು, ಉದಾಹರಣೆಯೂ ಆಗಬಹುದು. ನಮ್ಮೊಳಗೊಂದು ಜಗತ್ತಿದೆ, ಹೊರಗಿರುವಂತೆಯೇ. ಒಳಜಗತ್ತಿನ ಕರ್ತೃ ಕೇವಲ ನೀನೆ. ಅವಳು ತನ್ನ ಮಾತು ಮುಗಿಸಿ ಜಲಕ್ರೀಡೆಗೆ ಅನುವಾದಳು.

ಬಾಗಿಲು ತೆರೆದು ಹೊರಬಂದ ನಾನು ಸಂಜೆಯ ಆಗಸಕ್ಕೆ ಮುಖಮಾಡಿ ನಿಂತೆ. ಮತ್ತದೇ ಸಂಜೆ, ಅದೇ ಏಕಾಂತವಿತ್ತು…ಆದರೆ ಮತ್ತದೇ ಬೇಸರ?…ಉಹೂಂ…ಇಲ್ಲ..ಇರಲಿಲ್ಲ!  ಆಕಾಶದಲ್ಲಿ ಹತ್ತಿ ಹಿಂಜಿದಂತೆ ಬೆಳ್ಮುಗಿಲು, ಮರಳಿ ಮನೆಗೆ ಸಾಗುತ್ತಿರುವ ಬೆಳ್ಳಕ್ಕಿ ಹಿಂಡು..ನಮ್ಮೊಳಗಿನ ಯೋಚನೆ ಹಾಗು ಯೋಜನೆಗಳಂತೆ!

Leave a comment

Filed under ಲೇಖನಗಳು

ಮರೆತೇನೆಂದರೆ ಮರೆಯಲಿ ಹ್ಯಾಂಗಾ……

imagesDISCLIMER:  ಈ ಲೇಖನದಲ್ಲಿ ಬರುವ ಅನೇಕ ಪಾತ್ರಗಳು ಹಾಗು ಸನ್ನಿವೇಶಗಳು ಕಾಲ್ಪನಿಕ. ಒಂದುವೇಳೆ ಅವು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಗಳನ್ನು ಹೋಲುತ್ತಿದ್ದರೆ ಅದು ಕಾಕತಾಳೀಯ.

ಹಳೆಯ ನೆನಪುಗಳ ಜಾಡಿನಲ್ಲಿ ಅಲೆದಾಡಿ ಬರುವುದು ಎಷ್ಟೋ ಬಾರಿ ಚೇತೋಹಾರಿ, ಹಾಗೆಯೇ ಒಮ್ಮೊಮ್ಮೆ ತಿಳಿಯಾದ ಎದೆಗೊಳವ ರಾಡಿಗೊಳಿಸುವ ಹೆಮ್ಮಾರಿ.

ಹೀಗೊಂದು ಸವಿನೆನಪು ನನ್ನ ಪಟ್ಟಣದ ಮನೆ. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂತಾರೆ. ನಾನು ಹುಟ್ಟಿದ ಊರು, ನಾನು ಹುಟ್ಟಿ ಬೆಳೆದ ಮನೆ ನನ್ನೊಲುಮೆಗೆ ಪಾತ್ರವೆಂದುಕೊಳ್ಳುವುದು ನನ್ನ ನಿಹಿತ ಸ್ವಾರ್ಥಗಳ ಪಟ್ಟಿಯಲ್ಲಿ ಮೊದಲನೆಯದು. ಇದರ ಬಗ್ಗೆ ಹೇಳುವಾಗ ಹೇಗೆ ಹೇಗೋ ಆತಾತುರವಾಗಿ ಹೇಳಲಾಗುವುದಿಲ್ಲ. ಮಗು ತನ್ನ ಸುತ್ತ ಆಟಿಕೆಗಳನ್ನು ಹರಡಿಕೊಂಡು ಸಂಭ್ರಮಿಸುವ ಹಾಗೆ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಡಿಸಿಡುತ್ತಾ ನಾನೂ ಸವಿದು ಮೆಲುಕುಹಾಕಬೇಕು.

ಪಟ್ಟಣವೆಂದರೆ ಯಾವೂರೆಂದುಕೊಂಡಿರೀ? ಅದೇ ಶ್ರೀರಂಗಪಟ್ಟಣ..ಟಿಪ್ಪೂ ಸುಲ್ತಾನ್, ಐತಿಹಾಸಿಕ ನಗರಿ, ಮಣ್ಣು ಮಸಿ….ನನ್ನ ಪಾಲಿಗೆ …ಉಹೂಂ….ಅದೊಂದು ಅಜೀವ ಜೀವಸೆಲೆ. ಆ ಊರು ತಲುಪುತ್ತಲೇ ಮನಸ್ಸು ಗರಿಗೆದರುತ್ತದೆ. ಊರ ಧೂಳು, ಬಿಸಿ ಮಿಶ್ರಿತ ಬಿಸುಪು ತಂಗಾಳಿ (!) ಬಾಚಿ ತಬ್ಬಿ ತಲೆ ನೇವರಿಸುತ್ತದೆ…ಬೀದಿಗಳುದ್ದಕ್ಕೂ ಹಳೇ ನೆನಪುಗಳು ಮೆರವಣಿಗೆ ಹೊರಟಾಗ ಮನಸ್ಸೇಕೋ ಸುಖಾಸುಮ್ಮನೆ ಉತ್ಸವ ಮೂರ್ತಿ…ಈಗಿನಂತೆ ಆಗ ಆಟೋ ಇರಲಿಲ್ಲ..ಕುದುರೆಗಾಡಿ, ಕಮಾನು, ಕುಚ್ಚು ಟೇಪು, ಮುಂದೆ ಸುರಿದ ಹುಲ್ಲು, ಕುದುರೆ ಲದ್ದಿಯ ವಾಸನೆ, ನಮ್ಮ ಗಾಡಿಗೇ ಬನ್ನಿ ಎಂದು ನನ್ನಂಥಾ ಕಿಡಿಗೇಡಿ ಮಕ್ಕಳ ಕೈಗೆ ಚಾಟಿ ಕೊಟ್ಟು (ಗಾಡಿ ಏರಿದ ನಂತರ ಕಸಿದು) ಮನವೊಲಿಸುವ ಜಟಕಾ ಸಾಬಣ್ಣ. ಗಾಡಿ ಹತ್ತಿ ಕುಳಿತು ಕಣ್ಣುಮುಚ್ಚಿದರೆ ಮನಸ್ಸು ಕಾಮನಬಿಲ್ಲಂತೆ ಬಣ್ಣ ಬಣ್ಣ. ಕೋಟೆ ಬಾಗಿಲು ದಾಟುತ್ತಿದ್ದಂತೆ ನನ್ನ ಕುರುಡು ಅಂದಾಜು ಬಾಲ ಬಿಚ್ಚುತ್ತಿತ್ತು. ಟೊಕ್ ಟೊಕ್ ಟೊಕ್…ಲಾಳ ಬಡಿಸಿಕೊಂಡ ಕುದುರೆಯ ಲಯಬದ್ಧ ಚಲನೆಯಲ್ಲಿ ಈಗ ಫೌಂಟನ್ ದಾಟಿದ್ದೇವೆ, ಮುಂದಕ್ಕೆ ಮೂರು ಮತ್ತೊಂದು ಅಂಕಣವಿರುವ ನಮ್ಮೂರ ರಾಜಮಾರ್ಗ.  ಆಹಾ…ಚುರ್ ಅನ್ನುತ್ತೆ…ಕಲ್ಲ ಮೇಲೆ ಗಾಡಿ ಚಕ್ರ ಹತ್ತಿದ್ದಕ್ಕೆ ಕುದುರೆಗೆ ಚಾಟಿ ಪ್ರಹಾರ….ಹೆಹ್ಹೆಯ್..ಬಾಜು ಬಾಜು…ಆ ಕಿರು ಓಣಿಯಂಥಾ ರಾಜಬೀದಿಯಲ್ಲೇ ಎಡಕ್ಕೆ ಮಾಯಣ್ಣ ಡಾಕ್ಟ್ರ ಶಾಪು, ಪಟ್ಟಾಭಿ ರಾಮ ಮಂದಿರ, ಬಲಕ್ಕೆ ಗಣಪತಿ ಅಂಗಡಿ, ವೆಂಕಣ್ಣನ ಅಂಗಡಿ, ಅಲ್ಲೀ..ಅಲ್ಲೇ ಮುಂದಕ್ಕೆ ಮಹಡಿ ಮೇಲೆ ನನ್ನಪ್ಪನ ಲಾಯರ್ ಆಫೀಸು…ಹಾಗೇ ಬಂದು ಎಡಕ್ಕೆ ಅಂಬಾಭವನ್ ಹೋಟ್ಲು ಮತ್ತು ಬಲಕ್ಕೆ ಉಶಾ ಡಾಕ್ಟ್ರ ಶಾಪು….ಹಾಂ….ಹೋಲ್ಡ್ ಆನ್..ಇಲ್ಲೇ ನಾವು ಬಲಕ್ಕೆ ತಿರುಗಬೇಕು…ಬಲ ಮೂಲೆಗೆ  ಉಶಾ ಡಾಕ್ಟ್ರ ಶಾಪಾದರೆ ಎಡ ಮೂಲೆಗೆ ಪೇಟೆ ನಾರಾಯಣಸ್ವಾಮಿ ಗುಡಿ…ಈಗ ನಾನು ಕಣ್ಣು ಬಿಡಲೇ ಬೇಕಲ್ಲಾ..ತಲೆ ತಗ್ಗಿಸಿದ ಹಾಗೆ ಮಾಡಿ, ಅರೆಗಣ್ಣು ಮುಚ್ಚಿ, ಕೈಜೋಡಿಸಿ ನಮಸ್ಕಾರ ಮಾಡೊ ಹಾಗೆ ಮಾಡಿದರೂ ಕಳ್ಳಗಣ್ಣು ಅಲ್ಲಿನ ಪ್ರಸಾದದ ಆಸೆಗೆ (ಇದರ ಐತಿಹ್ಯ ಆಮೇಲೆ ಹೇಳ್ತೀನಿ) ದೇವಸ್ಥಾನ ಬಾಗಿಲು ತೆಗೆದಿದ್ಯೊ ಇಲ್ವೊ ಅನ್ನೊದನ್ನೇ ಗಮನಿಸ್ತಿದ್ದಿದ್ದು!  ದೊಡ್ಡ ಪ್ರಾಂಗಣದ ಈ ಕಡೆ ಮಧ್ಯಕ್ಕೊಂದು ಬಾವಿಕಟ್ಟೆ. ಸಧ್ಯ! ಅದರ ಆಚೀಚೆ ಬದಿ ಮುಚ್ಚಿಲ್ಲ ಅನ್ನೊ ಅಂಶ ಗೋಚರವಾದರೆ ಸಾಕು..ಅರ್ಧ ಲೋಕ ಗೆದ್ದ ಸಮಾಧಾನ..ಅಮ್ಮನ ಕಣ್ಣು ತಪ್ಪಿಸಿ ಮೋಟುಗೋಡೆ ಹಾರಲು ನನಗಿದ್ದ ಕಳ್ಳಗಿಂಡಿಯದು ಎನ್ನುವ ನಗ್ನ ಸತ್ಯ ನಿಮಗೆ ಮಾತ್ರ ಈಗ ನಾನು ಹೇಳುತ್ತಿರುವುದು. ಅಲ್ಲೇ ಆ ಬದಿಗೆ ಇಡ್ಲಿ ಅತ್ತೆ ಮನೆ, ಈ ಬದಿಗೆ ಜಯಾ ಅತ್ತೆ ಮನೆ (ಆಂಟಿ ಎನ್ನುವುದು “ಆಂಟಿಬಯೋಟಿಕ್” ಗೆ ಮಾತ್ರ ಸೀಮಿತವಾಗಿತ್ತು ನಮ್ಮೂರಲ್ಲಿ)..ಹಾಗೇ ಒಂದು ಮಾರು ಮುಂದೆ ಬಂದರೆ ಎಡಕ್ಕೆ ಎರಡು ಜಗುಲಿ ಕಾಣ್ತಿದೆಯಲ್ಲಾ…ತಗ್ಗಿನ ಮನೆ ಜಗುಲಿಯಲ್ಲ…ಅದು ಕಾಶೀರಾಮು ಮಾವನ ಮನೆ, ಅದಾದಮೇಲೆ ಬಲಕ್ಕೆ ಸೀತಾ-ಸರೋಜ ಮನೆ..ಎಡಕ್ಕೆ ನೋಡಿ..ಅದೇ..ಕರೆಕ್ಟ್..ನೀಲಿ ಬಾಗಿಲು..ಜಗುಲಿಗೆ ಅಂಟಿಕೊಂಡಿರೋ ಪುಟ್ಟ ಪುಟ್ಟ ಕಿಟಕಿ..ಹೊರಗೋಡೆಯ ಮೇಲೆ ಅಣ್ಣನ  (ಅಪ್ಪನ್ನ ಅಣ್ಣ ಅಂತಲೇ ನಾನು ಕರೆಯೋದು) ಬೋರ್ಡು, ಬಾಗಿಲ ಹೊರತುದಿ ಗೋಡೆಗೆ ಯಾವತ್ತೂ ಸ್ವರ ಹೊರಡಿಸದ ಕರೆಗಂಟೆಯ ಗುಂಡಿ (ನನ್ನ ಬಾಲಲೀಲೆಗೆ ಬಲಿಪಶುವಾದ್ದು).

ಒಳಗೆ ಕಾಲಿಡುತ್ತಿರುವಂತೆಯೇ ಸ್ವಾಗತಿಸೋದು ವರಾಂಡವಲ್ಲದಂಥಾ ವರಾಂಡದ ಬೆಣಚುಕಲ್ಲು ನೆಲದ ತಂಪು. ಎಡಕ್ಕೆ ಅಣ್ಣನ ಆಫೀಸ್ ರೂಮು, ಬಲಕ್ಕೆ ದೊಡ್ಡಮ್ಮನ ಮಿಷಿನ್ ರೂಮು (ಟೈಲರಿಂಗ್ ಮೆಷೀನ್ ಅಲ್ಲಿತ್ತು). ಹಾಗೆ ಮುಂದಕ್ಕೆ ಎಡವಿ ಮುಗ್ಗರಿಸುವಷ್ಟೆತ್ತರದ ಹೊಸಿಲು ದಾಟುತ್ತಿದ್ದಂತೆ ಚಿಕ್ಕ ಹಾಲು, ಅದರ ಮುಂದಿನದ್ದೇ ದೊಡ್ಡ ಹಾಲು. ಚಿಕ್ಕ ಹಾಲು ಮತ್ತು ದೊಡ್ಡ ಹಾಲನ್ನು ಬೇರ್ಪಡಿಸಿದ್ದುದು ದೊಡ್ಡ ದೊಡ್ಡ ಆಚೀಚೆ ಬದಿಯ ಡೈಮಂಡ್ ಶೇಪಿನ ಮನೆ ಮನೆ ಹೊಂದಿದ್ದ ಕಿಟಕಿಗಳು ಮತ್ತು ಅದಕ್ಕೆ ಕಟ್ಟಿದ್ದ ರುಕ್ಮಿಣೀ ಅತ್ತೆ ಹೆಣೆದಿದ್ದ ಜೋಡಿ-ಗಿಣಿ ತೋರಣ. ಈ ಕಟಾಂಜನಕ್ಕೇ ಒಂದು ಬಲವಾದ ತಂತಿ ಬಿಗಿದು ಇನ್ನೊಂದು ಕೊನೆಯನ್ನು ಫ್ರೀ ಬಿಟ್ಟು ಮನೆಗೆ ಬರುವ ಪತ್ರಗಳನ್ನೆಲ್ಲಾ ಅದರಲ್ಲಿ ಸಿಕ್ಕಿಸಿಡುತ್ತಿದ್ದರು.  ಅಲ್ಲೇ ನಾನು ಪತ್ರ ಲೇಖನ, ಒಕ್ಕಣೆ, ಸಂಬೋಧನೆ ಮುಂತಾದುವುಗಳ ಪ್ರಥಮ ಪಾಠ ಕಲಿತದ್ದು. ಅಣ್ಣ ಒಂದು ಹಳೇ ಕಾಲದ ತೊಟ್ಟಿ ಮನೆಯನ್ನು ಕೊಂಡುಕೊಂಡು ರೂಪಾಂತರ ಮಾಡಿಸಿದ್ದ ಮನೆಯಿದು. ಹುಶ್…ಎಲ್ಲೀ…ಕಿವಿ ತನ್ನಿ…ನನ್ನಪ್ಪ, ದೊಡ್ಡಪ್ಪನ ಇತರೆ ಕೆಲಸಗಳು ಏ ವನ್ ಅಂತ ಯಾರು ಬೇಕಾದ್ರು ಒಪ್ಕೋಬಹುದು…ಆದ್ರೆ ಆರ್ಕಿಟೆಕ್ಚರ್ ಭಾಳ ಡಲ್ಲು ಕಣ್ರೀ…ಜೋರಾಗಿ ಹೇಳಿದ್ರೆ ಈಗ ಸ್ವರ್ಗದಿಂದಲೇ ವಾಪಸ್ ಬಂದು ನನ್ನ ಕಥೆ ಮುಗಿಸಿಬಿಟ್ಟಾರು!..ಹಾಗೆ ಹೀಗೆ ಅಂತ ಕೆಡವಿಸಿ, ಕಟ್ಟಿಸಿ ಮನೆಯೆಂಬ ಮನೆನೇ ನನ್ನಜ್ಜಿಯ ಮಾತುಗಳಲ್ಲಿ ಹೇಳೋದಾದ್ರೆ ಕಚ್ಚರಿವೆ ಮಾಡಿಬಿಟ್ಟಿದ್ದರು. ಹಾಂ….ವಿಷಯಕ್ಕೆ ಬರೋಣ…ದೊಡ್ಡ ಹಾಲಲ್ಲಿ ಸುಮಾರು ಆರೇಳು ಅಡಿ ಎತ್ತರಕ್ಕೆ ಒಂದು ತೇಗದ ಹಲಗೆಯ ಬಡು. ಅದರ ಮೇಲೆ ಬುಲ್ಡೋಜರ್ ಗಾತ್ರದ ರೇಡಿಯೋ…ಅದರಲ್ಲೇ “ಸಂಪ್ರತಿ ವಾರ್ತಾಮ್ ಶ್ರುಯಂತಾಮ್, ಪ್ರವಾಚಕಃ…” ಕೇಳಿ ಏದ್ದದ್ದು, ದಸರಾ ಕಾಲದ “ಅರಮನೆ ಸಂಗೀತ” ಕೇಳುತ್ತಾ ಅಮ್ಮನ ಮೆತ್ತನೆಯ ಸೀರೆ ಹೊದ್ದುಕೊಂಡು ಮಲಗಿದ್ದು. ದೊಡ್ಡ ಹಾಲಿನ ಎಡಭಾಗಕ್ಕೆ ಸೇರಿದಂತೆ ಅಡಿಗೆ ಮನೆ ಹಾಗು ಅದರ ಮುಂದಿನ ಊಟದ ಮನೆ. ನಾನು ಅಡಿಗೆ  ಮನೇಲೆ ಹುಟ್ಟಿದ್ದಂತೆ. ಅಮ್ಮ ತಟ್ಟೆಗೆ ಉಪ್ಪಿಟ್ಟು ಹಾಕಿಕೊಳ್ಳಲು ಅಡಿಗೆ ಮನೆಗೆ ಹೋಗಿ, ಭಯಂಕರ ಹೆರಿಗೆ ಬೇನೆ ಶುರುವಾಗಿ, ಟಾಂಗ ತರಲು ನಮ್ಮ ದೊಡ್ಡಪ್ಪ ಓಡಿ, ಅಮ್ಮ ಆ ಅಡಿಗೆ ಮನೆ ಹೊಸಿಲು ಕೂಡ ದಾಟಲು ಆಗದ ಹಾಗಾಗಿ, ಉಪ್ಪಿಟ್ಟಿನ ಘಮಕ್ಕೆ ಮೂಗರಳಿಸಿಕೊಂಡೇ ಆತುರಗೇಡಿ ನಾನು ತಟಕ್ಕನೆ ಹುಟ್ಟಿಬಿಟ್ಟೆನಂತೆ. ಬಹುಶಃ ಇದೇ ಕಾರಣಕ್ಕಿರಬಹುದು ಉಪ್ಪಿಟ್ಟು ನನ್ನ ಪಂಚಪ್ರಾಣಗಳಲ್ಲಿ ಮೊದಲನೆಯದು.  ಇಂಥಾ ಭವ್ಯ ಇತಿಹಾಸಕ್ಕೆ ಮೂಕ ಸಾಕ್ಷಿಯಾದ ಊಟದ ಮನೇಲಿ ಹತ್ತು ಹದಿನೈದು ಜನ ಧಾರಾಳವಾಗಿ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುತ್ತಿದ್ದೆವು. ಅದೇನೋ ಗೊತ್ತಿಲ್ಲ ಮಕ್ಕಳಿಗೆ ಮೊದಲು ಊಟವಾಗಿ ಹೋಗುತ್ತಿತ್ತು. ನಂತರ ದೊಡ್ಡವರೆಲ್ಲಾ ಕೂತು ಹರಟುತ್ತಾ ಊಟ ಮಾಡುತ್ತಿದ್ದರು. ವಿಶೇಷದ ದಿನಗಳಲ್ಲಿ ಮಾತ್ರ ಮಕ್ಕಳಿಗೂ ಸಹಪಂಕ್ತಿ ಭೋಜನದ ಅವಕಾಶವಿತ್ತು. ಅಡಿಗೆ ಮನೆಗೂ ಮತ್ತು ಊಟದ ಮನೆಗೂ ಮಧ್ಯೆಯೂ ಸುಮಾರು ಒಂದುವರೆ ಅಡಿ ಎತ್ತರದ ಹೊಸಿಲು. ತಟ್ಟೆಯಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಿ ಅನ್ನ ತರಲು ದೊಡ್ಡಮ್ಮ ಒಳಗೆ ಹೋಗಿ ಬರುವಷ್ಟರಲ್ಲಿ ಉಪ್ಪು, ಉಪ್ಪಿನಕಾಯೇ ಖಾಲಿಯಾಗಿ ಬಿಟ್ಟಿರುತ್ತಿತ್ತು ನಮ್ಮ ತಟ್ಟೆಗಳಲ್ಲಿ. ಅಂಥಾ ಯಮ ಹಸಿವು ನಮಗೆಲ್ಲಾ…”ರಾಕ್ಷಸ ಮುಂಡೇವು” ಅಂತ ಪ್ರೀತಿಯಿಂದ ಗದರಿಕೊಳ್ಳುತ್ತಲೇ ತಟ್ಟೆಗೆ ದಿನಾ ದೊಡ್ಡಮ್ಮ ಅನ್ನ ಸುರಿಯುತ್ತಿದ್ದುದು. ಸಾರು ತರುವಷ್ಟರಲ್ಲಿ ಅರ್ಧ ಅನ್ನ ಖಾಲಿ ಎಂದು ವಿಶೇಷವಾಗೇನೂ ಹೇಳಬೇಕಿಲ್ಲ ಅಲ್ಲವೆ?  ಆ ಊಟದ ಮನೆಯಲ್ಲೇ ಬಲಕ್ಕೆ ಗೋಡೆ ಬದಿಗೆ ಮಡಿ ಬಟ್ಟೆ ಒಣಗಿ ಹಾಕಲು ಸಾಲಾಗಿ ಕಟ್ಟಿದ್ದ ಮೂರು ಸಾಲು ತಂತಿಗಳು, ಮೂಲೆಯಲ್ಲಿ ಬಹೂಪಯೋಗಿ (ಬಟ್ಟೆ ಹರವಲು, ಹಿತ್ತಲಿಗೆ ನುಗ್ಗಿ ಬಂದ ಪುಂಡ ದನಗಳನ್ನಟ್ಟಲು, ನಮ್ಮಂಥಾ ಕೋತಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹಾಗು ಸಮಯ ಬಿದ್ದಾಗ ಸೆಲ್ಫ್ ಸರ್ವೀಸ್ನಲ್ಲಿ ಅಜ್ಜಿ ಬೆನ್ನು ಕೆರೆದುಕೊಳ್ಳಲು) ಮಡಿ ಕೋಲು, ಆಮೇಲೆ ಅಲ್ಲೇ ಹಿಂದೆ ಅಣ್ಣನ ಫೈಲ್ಸ್ ಜೋಡಿಸಿದ್ದ ಕಡತದ ಬೀರುಗಳು. ಇಷ್ಟಕ್ಕೆ ಊಟದ ಮನೆ ಸಿಂಗಾರ ಮುಗಿಯಿತೆಂದುಕೊಳ್ಳಬೇಡಿ. ಕಡತದ ಬೀರುಗಳ ಹಿಂದಕ್ಕೆ ನೆಲದಲ್ಲಿ ನನ್ನ ವಿನಃ ಬೇರಾರಿಗೂ ಅರಿವಿಗೇ ಬಂದಿರದ ಒಂದು ದೊಡ್ಡ ದೊಗರಿದ್ದು ಅದರಲ್ಲಿ ಇಲಿ, ಜಿರಳೆಗಳು ಉಚಿತ ಊಟ ವಸತಿಯೊಂದಿಗೆ ಹಾಯಾಗಿದ್ದವು. ಮನೆಯ ಇತಿಹಾಸ ಹೇಳಲು ಮರೆತೆ. ಮೈಸೂರು ಸಂಸ್ಥಾನದ ಉನ್ನತ ಹುದ್ದೆಯಲ್ಲಿದ್ದ ಪುಟ್ಟಣ್ಣ ಎನ್ನುವವರು ಆ ಮನೆಯ ಮೂಲ ನಿವಾಸಿಗಳಾಗಿದ್ದು ಅಲ್ಲಿ ದಸರಾ ಹಬ್ಬ ವಿಶೇಷವಾಗಿತ್ತಂತೆ. ರಾತ್ರಿಯಲ್ಲಿ ಗೊಂಬೆಗಳು ಮಾತನಾಡುತ್ತಿದ್ದವಂತೆ, ಕಥೆ ಹೇಳುತ್ತಿದ್ದವಂತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ದೊರಕದೇ ಕೊನೆಗೆ ಅಣ್ಣನ ಕಕ್ಷೀದಾರಳಾಗಿದ್ದ ಕನ್ನಂಬಾಡಿ ತಿಮ್ಮಮ್ಮಜ್ಜಿಯನ್ನು ಕೇಳಿ ಅವಳು ಹೇಳಿದ ಬೇರೆಲ್ಲಿಯದೋ ಗೊಂಬೆ ಮಾತಾಡಿದ ಕಥೆ ಕೇಳಿ…”ಅಯ್ಯೋ ಇದು ನಮ್ಮನೆ ಗೊಂಬೆ ಕಥೆಯೇ ಆಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ” ಅಂದುಕೊಂಡು ಮಮ್ಮಲ ಮರುಗಿದ್ದೆ.  ನಿಧಿಯೂ ಅಲ್ಲೋ ಇಲ್ಲೋ ಒಟ್ಟಿನಲ್ಲಿ ಮನೆಯಲ್ಲೆಲ್ಲೋ ಹೂತಿಟ್ಟಿರಬಹುದು ಎಂದು ಅಜ್ಜಿ, ಅತ್ತೆ(ಅಣ್ಣನ ಅಕ್ಕ) ಮಾತನಾಡುತ್ತಿದ್ದುದನ್ನು ನಾನು ಅನೇಕ ಸಾರಿ ಕದ್ದು ಕೇಳಿ ರೋಮಾಂಚನಗೊಂಡಿದ್ದೆ. ನನ್ನ ಪತ್ತೇದಾರಿಕೆಗೆ ಕನ್ನಡಿ ಹಿಡಿಯುವಂಥಾ ವಿಷಯಗಳು ಸಾಕಷ್ಟಿದ್ದವು ಮನೆಯಲ್ಲಿ. ದೊಡ್ಡ ಹಾಲಿನಲ್ಲಿ ಕರೀ ಗಾರೆ ನೆಲ ಅಲ್ಲಲ್ಲಿ ಉಬ್ಬಿ ಬರುತ್ತಿದ್ದು ನನ್ನ ಕುತೂಹಲ ಇಮ್ಮಡಿಗೊಳಿಸುತ್ತಿತ್ತು.

ರಾತ್ರಿ ಊಟವಾದ ನಂತರ ದೊಡ್ಡವರು ಊಟ ಮುಗಿಸುವವರೆಗೂ ಮಕ್ಕಳೆಲ್ಲಾ ದೊಡ್ಡ ಹಾಲಿನ ದೊಡ್ಡ ಚಾಪೆಯ ಮೇಲೆ ಪವಡಿಸಿರುವ ಪದ್ದತಿ ಜಾರಿಯಲ್ಲಿತ್ತು. ನನ್ನ ಹಾಗು ಸುಮಕ್ಕನ ಕಿಸಿ ಕಿಸಿ ಗುಸು ಗುಸು ಮುಗಿದ ನಂತರ ಅವಳು ನಿದ್ರೆಗೆ ಶರಣಾದರೆ ನಾನು ಮುಖದ ಮೇಲೆ ಅಮ್ಮನ ಕಾಟನ್ ಸೀರೆಯ ಮುಸುಕು ಮೇಲೆಳೆದುಕೊಂಡು ಅಂತರ್ಮುಖಿಯಾಗಿಬಿಡುತ್ತಿದ್ದೆ. ಆ ಸೀರೆಯದೂ ಒಂದು ಮಹತ್ತರ ಕಥೆಯಿದೆ. ಸೊಸೈಟಿ (ನ್ಯಾಯಬೆಲೆ ಅಂಗಡಿ) ಯಿಂದ ತಂದಿದ್ದ ಆ ಕಡು ನೀಲಿ ಚೌಕದಲ್ಲಿ ಬಿಳೀ ಬಳ್ಳಿಗಳಿರುವ ಸೀರೆ ನನ್ನ ತೊಟ್ಟಿಲಿನ ಹಾಸಿಗೆಗೆ ಒಂದು ತುಂಡು, ಹೊದಿಕೆಗೆ ಮತ್ತೊಂದು, ಒಗೆದು ಉಪಯೋಗಿಸಲು ಅನುಕೂಲವಾಗುವ ಹಾಗೆ ಒಟ್ಟು ನಾಲ್ಕು ಪೀಸುಗಳಲ್ಲಿ ಕಂಗೊಳಿಸುತ್ತಿದ್ದು ನಾನು ಬೆಳೆದಂತೆಲ್ಲಾ ಹೊದಿಕೆಗೆ ಮಾತ್ರ ಅದರ ಪಾತ್ರ ಸೀಮಿತವಾಯ್ತು. ರಾತ್ರಿ ದೊಡ್ಡ ಹಾಲಿನಲ್ಲಿ ಮಲಗಿ ಮುಸುಕೆಳೆದು ಅಲ್ಲಿ ನಿರ್ಮಿತವಾಗುತ್ತಿದ್ದ ಮಂದ ಬೆಳಕಲ್ಲಿ ಮೀಯುತ್ತಿದ್ದಂತೆಯೇ ನೀಲಿ ಬಿಳಿಯ ಚೌಕ ಬಳ್ಳಿಗಳು ನನ್ನನ್ನು ಕಲ್ಪನಾಲಹರಿಯಲ್ಲಿ ತೇಲಿಸಿ ಮುಳುಗಿಸಲು ಸಮರ್ಥವಾಗುತ್ತಿದ್ದವು. ಅಲ್ಲಲ್ಲಿ ಉಬ್ಬುತ್ತಿದ್ದ ಗಾರೆ ನೆಲದ ಕೆಳಗಿರುವ ಸುರಂಗ ಮಾರ್ಗದಲ್ಲಿ ಮೆಟ್ಟಿಲು ಇಳಿಯುತ್ತಾ ಹೋಗಿ ಕೊನೆಗೆ ನಿಧಿಯನ್ನು ಕಾಯುತ್ತಾ ಕುಳಿತಿರುವ ಹಾವನ್ನು ಹಿಮ್ಮೆಟ್ಟಿಸಿ, ಕೊಪ್ಪರಿಗೆಯ ತುಂಬಾ ಚಿನ್ನದ ನಾಣ್ಯಗಳು, ಒಡವೆಗಳನ್ನು ಹೊರತಂದು, ಕೊನೆಗೆ ಸರ್ಕಾರಕ್ಕೊಪ್ಪಿಸಿ (ಪುಟಾಣಿ ಏಜೆಂಟ್ ೧೨೩ ಯ ಪ್ರಭಾವ), ನನಗೆಂಥಾದ್ದೊ ಪ್ರಶಸ್ತಿ ಸಿಕ್ಕಿ ಲೋಕವೆಲ್ಲಾ ನನ್ನ ಕೊಂಡಾಡಿ…ಹುಶ್…..ಅಷ್ಟರಲ್ಲಿ ನನಗೆ ಸುಖನಿದ್ರೆ ತೂಗಿಬಿಡುತ್ತಿತ್ತು.  ದೊಡ್ಡ ಹಾಲಿಗೂ ಹಿತ್ತಲಿಗೂ ನಡುವೆ ಒಂದು ಒರಳುಕಲ್ಲು ಹಜಾರವಿತ್ತು.  ಅಲ್ಲಿನ ಒರಳುಕಲ್ಲಿನಲ್ಲಿ ರಾಶಿ ರಾಶಿ ದೋಸೆ, ಇಡ್ಲಿ ಹಿಟ್ಟುಗಳು ತಯಾರಾಗುತ್ತಿದ್ದರೆ ಆಗಾಗ ರುಬ್ಬುತ್ತಿರುವ ಹುದುಗು ತಿನ್ನಲು ನನ್ನ ಪ್ರವೇಶವಾಗುತ್ತಿತ್ತು.  ಹದ ನೋಡಲು ನೀರ ಕೈ ಮಾಡಿಕೊಂಡು ಸ್ವಲ್ಪ ಹಿಟ್ಟು ಕೈಗೆತ್ತಿಕೊಂಡು ಮತ್ತೆ ಒರಳು ಕಲ್ಲಿಗೆ ಹಾಕುವಾಗ ಮೂಡುವ “ಟೊಕ್” ಎನ್ನುವ ಸದ್ದು ನನಗೆ ಬಹಳ ಪ್ರಿಯವಾದುದಾಗಿರುತ್ತಿತ್ತು.  ಆ ಐತಿಹಾಸಿಕ ಒರಳು ಕಲ್ಲಿನ ಮಗ್ಗುಲಿಗೇ ಇದ್ದಿದ್ದು ಇನ್ನೊಂದು ನಿಗೂಢ ರಹಸ್ಯದ ಅಟ್ಟದ ಮನೆ. ಅದರ ಮರದ ಮೆಟ್ಟಿಲ ಮೇಲೆ ನಡೆಯುವುದೇ ಒಂದು ಸೊಗಸು.  ಹಳೇಕಾಲದ ಪಾತ್ರೆ, ಪಡಗ, ಬೇಕಾದ್ದು, ಬೇಡವಾದ್ದು, ಹೆಚ್ಚುವರಿ ಪದಾರ್ಥಗಳ ನೆಲೆವೀಡಾದ ಇದು “ನಾಗವಲ್ಲಿ” ರೂಮಿಗಿಂತಲೂ ರೋಚಕ ಗೊತ್ತಾ? ಇಲ್ಲಿ ಅಮ್ಮ ನನಗೆ ತಿಳಿದಂತೆ ಮೂರು ನಾಲ್ಕು ಸಾರಿ ಚೇಳು ಕಡಿಸಿಕೊಂಡಿದ್ದಿದೆ. ವಾರಕ್ಕೊಮ್ಮೆ ಕಸ ಬಳಿಯಲು ಅಲ್ಲಿಗೆ ನುಗ್ಗುವ ಕಸಮುಸ್ರೆ ಮಾದಮ್ಮಂಗೆ (ಮಾದು ಅನ್ನೋದು ಪ್ರೀತಿಯ ಹೆಸರು) ಮಾತ್ರ ಅದ್ಯಾಕೋ ಒಂದು ಸಾರಿಯೂ ಚೇಳು ಕಡೀಲಿಲ್ಲ. ಆಲ್ಲಿದ್ದ ಚಿತ್ರ ವಿಚಿತ್ರ ಮರದ ಆಕೃತಿಗಳನ್ನು ನೋಡುವುದೇ ಕಣ್ಣಿಗೆ ಸೊಬಗು. ಅರ್ಧ ಕೆತ್ತಿ ಮರೆತಿದ್ದವುಗಳು, ಕೆಲವಕ್ಕೆ ಒಂದು ಕಣ್ಣು ದೊಡ್ಡ ಬಾಯಿ, ಹಲ್ಲು ಕಿರಿದ ಹುಲಿ, ಬಿಂದಿಗೆ ಹೊತ್ತ ನೀರೆ, ನಾಗರಕಲ್ಲನ್ನು ಹೋಲುವ ಕೆಲವು ಮರದ ತುಂಡುಗಳು, ಕರೀ ಕೆಂಪು ಮರದ ಮನುಷ್ಯ ಹಾಗು ಪ್ರಾಣಿಯಾಕೃತಿಗಳು, ಮುರಿದ ತೊಲೆಗಳ ಚಿತ್ತಾಕರ್ಷಕ ಚೂರುಗಳು ಅಟ್ಟದ ರೂಮಿನ ಹಿಂಬದಿಯ ಧೂಳಿನಲ್ಲಿ ಅಟ್ಟಾಡುತ್ತಿರುವುದನ್ನು ಸಹಿಸಲಾರದೆ ಒಂದೆರಡನ್ನು ಒಮ್ಮೆ ಹೊರಲಾರದೆ ತುಸು ಮುಂದೆ ಹೊತ್ತು ತಂದು ಬೀಳಿಸಿ ಅಲ್ಲಿಯೇ ನಿಂತಿದ್ದ ಅತ್ತೆ ಮತ್ತು ಅಜ್ಜಿ ಕಂಡು…”ಏನು ಪಾಪಕರ್ಮ ತಂತೋ ಈ ಶನಿಮುಂಡೆದು…ಹಿಂದಕ್ಕೆ ಬಿಸಾಡು ಮೊದಲು, ಎಲ್ಲಾ ದೆವ್ವದ ಬೊಂಬೆಗಳು” ಎಂದು ಯಥಾ ಶಕ್ತಿ ಚಟಿ ಚಟಿ ಏಟೂ ಕೊಟ್ಟಿದ್ದರು (ಆಗೆಲ್ಲಾ ಮಕ್ಕಳನ್ನು ಮನೆಯಲ್ಲಿನ ದೊಡ್ಡವರು  “ಮಕ್ಕಳೆಂದರೆ ಎಲ್ಲಾ ಒಂದೇ” ಎಂಬ ಉದಾತ್ತ ಐಕ್ಯತೆಯ ಭಾವನೆಯಿಂದ ಯಾರು ಬೇಕಾದರೂ ಮನಸೋಇಚ್ಛೆ ಥಳಿಸಬಹುದಾಗಿತ್ತು).  ಬಿದ್ದ ಏಟಿನ ನೋವಿನ ಕಣ್ಣೀರಿಗಿಂತಲೂ “ದೆವ್ವದ ಗೊಂಬೆಗಳು” ಎನ್ನುವ ಪದಗಳು “ನನ್ನ ಹುಡುಕಾಟ ಕೊನೆಗೂ ಸಫಲವಾಯ್ತು” ಎನ್ನುವ ದಿವ್ಯಾನುಭೂತಿ ನನ್ನಲ್ಲಿ ಮೂಡಿಸಿ ಆನಂದ ಬಾಷ್ಪವುಕ್ಕಿಸುವಲ್ಲಿ ಸಮರ್ಥವಾಗಿದ್ದವು.

ಇನ್ನೇನು ನನ್ನ ಜೀವನದ ಒಂದು ಅಲ್ಟಿಮೇಟ್ ಗೋಲ್ ನಾನು ತಲುಪಿದಂತೆಯೇ ಎಂದು ಹಿರಿಹಿರಿ ಹಿಗ್ಗಿದೆ.  ಅಲ್ಲಾ…ಗೊಂಬೆಗಳ ಮಾತು, ಕಥೆ, ಓಡಾಟ ಎಲ್ಲಾ ನಡೆಯುತ್ತಿದ್ದ ಈ ಮನೆಯಲ್ಲಿ ಏಕಾಏಕಿ ಏನೂ ಕಾಣಬರುತ್ತಿಲ್ಲವೆಂದರೆ ಎಂತಹ ನೀರಸ ಜೀವನವಿದ್ದೀತು ಅವುಗಳದ್ದು ಪಾಪ.  ಈಗಂತೂ “ದೆವ್ವದ ಗೊಂಬೆಗಳು” ಎಂದು ಅಜ್ಜಿಯಂಥಾ ಅಜ್ಜಿಯೇ ಹೇಳಿದ ಮೇಲೆ ಅವುಗಳು ಮಾತನಾಡಲಾರವೇ? ಇದುವರೆಗೂ ಅವು ಏಕೆ ಸುಮ್ಮನಿದ್ದವೆಂಬ ಬಿಳಿ ಸತ್ಯ ನನಗೆ ಹೊಳೆದುಬಿಟ್ಟಿತ್ತು.  ಜೀವನದಲ್ಲಿ ದೆವ್ವದ ಗೊಂಬೆಗಳಿಗೆ ಜೊತೆಗಾರರ ಕೊರತೆಯಿತ್ತು. ಈಗ ಅವು ನನ್ನ ಸ್ನೇಹ ಸಹವಾಸ ಮಾಡಿದರೆ ಅವಕ್ಕೂ ಒಂದು ಹೊಸ ಬದುಕು ಹಾಗು ನನಗೂ ಗೊಂಬೆಗಳ ಮಾತು, ಕಥೆ, ಓಡಾಟದ ಜೊತೆಗೆ ಒಡನಾಟದ ಭಾಗ್ಯವೂ ಲಭಿಸುತ್ತದೆ ಎನ್ನುವ ಆಲೋಚನೆಯೇ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು.  ಅದನ್ನು ಕಾರ್ಯರೂಪಕ್ಕೆ ತರಲು ನಾನು ಹಾಕಿದ ಯೋಜನೆಗಳು ಒಂದೇ ಎರಡೇ.  ಮನೆಯಲ್ಲಿ ಯಾರನ್ನು ಜೊತೆಮಾಡಿಕೊಳ್ಳಲಿ ಈ ಕಾರ್ಯಾಚರಣೆಗೆ ಎನ್ನುವ ಯೋಚನೆ ಮುತ್ತಿ ಕಾಡುತ್ತಿತ್ತು. ಸುಮಕ್ಕ…ಉಹೂಂ…ಶಿಸ್ತಿನ ಸಿಪಾಯಿ ಅದು. ಎಲ್ಲದರಲ್ಲೂ ಅಚ್ಚುಕಟ್ಟು. ನನ್ನ ಕೋತಿ ಚೇಷ್ಟೆ ತಪ್ಪಿಸಿಬಿಡುತ್ತಿತ್ತು.  ಇನ್ನು ಅವಿ…ಪಾಪ ಅದಕ್ಕಿನ್ನೂ ಮಾತೇ ಸರಿಯಾಗಿ ಬಾರದು. “ಅಜ್ಜಿ”ಗೆ “ಅಂಜಿ” ಅನ್ನುತ್ತೆ, “ಮಗು” ನ “ಮಂಗು” ಅನ್ನುತ್ತೆ. ಆದ್ದರಿಂದ ನಾನು ಹೋರಾಟದಲ್ಲಿ ಒಂಟಿ ಸಲಗ ಎಂದು ತೀರ್ಮಾನವಾದಹಾಗಾಯಿತು. ಅದೇ ಸಮಯಕ್ಕೆ “ಗಂಡಭೇರುಂಡ” ಚಲನ ಚಿತ್ರ ನಮ್ಮೂರಿನ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಬಂದು ನನ್ನ ಸಾಹಸಕ್ಕೆ ಉತ್ತೇಜನ ಕೊಡುವಲ್ಲಿ ಸಹಕಾರಿಯಾಯ್ತು. ಅಟ್ಟದ ಮನೆಗೆ ಹೋಗುವ ಮುಹೂರ್ತವೂ ಒಂದು ದಿನ ರಾತ್ರಿಯೆಂದು ತೀರ್ಮಾನವಾಯಿತು. ಈ ಸಾಹಸ ಕಾರ್ಯಕ್ಕೆ ಹೊರಟಾಗ ಬೇಕಾಗುವ ವಸ್ತುಗಳನ್ನು ಮನಸ್ಸು ಒಂದೊಂದಾಗಿ ಪಟ್ಟಿಮಾಡಿಕೊಳ್ಳತೊಡಗಿತು.  ನೀರಿನ ಕ್ಯಾನು (ರುಕ್ಮಿಣಿ ಅತ್ತೆ ಬೆಂಗಳೂರಿಂದ ತಂದುಕೊಟ್ಟಿದ್ದ ಪ್ಲಾಸ್ಟಿಕ್ಕಿನ ಕೆಂಪು ಬಣ್ಣದ ನೀರಿನ ಕ್ಯಾನ್ ಗೆ ನೀರು ತುಂಬಿಸಿ) ರೆಡಿ ಮಾಡಿಕೊಂಡೆ. ದೀಪ ಹಾಕಿದರೆ ಒರಳುಕಲ್ಲಿನ ಹಜಾರದಲ್ಲೇ ಮಲಗಿರುವ ಅಜ್ಜಿಗೆ ಎಚ್ಚರವಾಗಿ ಕೆಲಸ ಕೆಡುವುದಿಲ್ಲವೇ? ಹಾಗಾಗಿ ರೇಡಿಯೋದ ಪಕ್ಕದಲ್ಲಿ ಸದಾ ವಿಜೃಂಭಿಸುತ್ತಿರುವ ಬೃಹದಾಕಾರದ ಬ್ಯಾಟರಿ (ಟಾರ್ಚು) ನನ್ನ ವಶಕ್ಕೆ ತೆಗೆದುಕೊಳ್ಳುವುದು ನನ್ನ ಎರಡನೇ ಸಿದ್ಧತೆ. ಒರಳು ಕಲ್ಲಿನ ಹಜಾರದಿಂದಾಚೆಗೆ ಹಿತ್ತಲಿದ್ದು ಅಲ್ಲಿಯೇ ದನದ ಮನೆಯಿದ್ದಿದ್ದು.  ಕೆಲವೊಮ್ಮೆ ರಾತ್ರಿಗಳಲ್ಲಿ ದನಗಳು ವಿಚಿತ್ರವಾಗಿ ಕೂಗುಹಾಕತೊಡಗುತ್ತಿದ್ದವು. ಯಾವುದಾದರೂ ಅತಿಮಾನುಷ ಆಕೃತಿಗಳು ಅವುಗಳ ಕಣ್ಣಿಗೆ ಬಿದ್ದರೆ ಮಾತ್ರ ಅವು ಹೀಗೆ ಕೂಗುವುದು ಎಂದು ಅಜ್ಜಿ ಹೇಳುತ್ತಿದ್ದರು.  ಹಾಗೆ ಅವು ಕೂಗಿದಾಗೆಲ್ಲಾ ಅಜ್ಜಿ ಎದ್ದು, ಕಣ್ಣು, ಮೂಗು ಮಾತ್ರ ಕಾಣಿಸುವ ಹಾಗೆ ಕಂಬಳಿ ಗುಬುರು ಹಾಕಿಕೊಂಡು (ಅತಿಮಾನುಷರನ್ನು ಹೆದರಿಸಲು!), ಕೈಯಲ್ಲಿ ಟಾರ್ಚುಹಿಡಿದು ಹಿತ್ತಿಲ ಬಾಗಿಲು ತೆರೆದು ದನಗಳಿಗಿಂತಾ ಜೋರಾಗಿ ಗುಟುರು ಹಾಕುತ್ತಿದ್ದರು. ಅಜ್ಜಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನಾಲ್ಕನೇ ತರಗತಿಯ ಮೇಡಂ ಆಗಿದ್ದಿದ್ದರಿಂದ ಅವರ ಸ್ವರ ತೀರ ಎಫರ್ಟ್ಲೆಸ್ ಆಗಿ ತಾರಕಕ್ಕೇರುತ್ತಿತ್ತು. ರಾತ್ರಿಯಾದೊಡನೇ ರೇಡಿಯೋ ಪಕ್ಕದಲ್ಲಿರುತ್ತಿದ್ದ ಆ ಟಾರ್ಚು ಅಜ್ಜಿಯ ದಿಂಬಿನ ಎಡಪಕ್ಕಕ್ಕೆ ಗದೆಯಂತೆ ವಾಲಿಕೊಂಡು ಅಜ್ಜಿ “ಕುರುಕ್ಷೇತ್ರಮು” ಸಿನಿಮಾದ ಭೀಮನಂತೆ ಮಲಗುತ್ತಿದ್ದರು.  ಅದನ್ನು ನೋಡಿಕೊಂಡಿದ್ದ ನನಗೆ ಟಾರ್ಚನ್ನು ನನ್ನದಾಗಿಸಿಕೊಳ್ಳುವುದು ಯಾವ ಗಿಡದ ತೊಪ್ಪಲು? ಇನ್ನು ಸಾಹಸಿಗಳು ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗು..ಅದಕ್ಕೆ ನನ್ನ ಸ್ಕೂಲ್ ಬ್ಯಾಗಿಗಿಂತಾ ಬೇಕಾಗಿತ್ತೆ?  ಒಟ್ಟಿನಲ್ಲಿ ದೆವ್ವದ ಗೊಂಬೆಗಳ ಸ್ನೇಹಸಂಪಾದನೆಗೆ ಬೇಕಾದ ಎಲ್ಲಾ ಪೂರ್ವಭಾವಿ ಸಿದ್ದತೆಗಳೂ ಹೂವಿನ ಸರ ಎತ್ತಿದಂತೆ ಸುಲಭವಾಗಿ ಜರುಗಿದವು. ಒಂದು ಶುಭ ಮುಹೂರ್ತದಂದು ರಾತ್ರಿಯ ವೇಳೆಯಲ್ಲಿ ನನ್ನ ಕಾರ್ಯಾಚರಣೆ ಪ್ರಾರಂಭಿಸಿಯೇ ಬಿಡುವುದೆಂದು ತೀರ್ಮಾನಿಸಿ ಎಲ್ಲರೂ ಮಲಗಲಿ ಎಂದು ಕಾಯುತ್ತಾ ಅಮ್ಮನ ಸೀರೆಯೊಳಕ್ಕೆ ಸೇರಿ ಕಾಯತೊಡಗಿದೆ. ಆದರೆ ನಾನೊಂದು ಬಗೆದರೆ ದೈವ (ದೆವ್ವ?) ವೊಂದು ಬಗೆದುಬಿಡೋದೇ….ಎಲ್ಲರೂ ಮಲಗಿರಬಹುದೆಂದು ನಾನು ಕಣ್ಣು ಬಿಡುವಷ್ಟರಲ್ಲಿ “ಇಯಂ ಆಕಾಶವಾಣಿ..ಸಂಪ್ರತಿ ವಾರ್ತಾಂ ಶ್ರುಯಂತಾಂ…” ಎಂದು ನಮ್ಮನೆ ಬುಲ್ಡೋಜರ್ ರೇಡಿಯೋ ಒದರುತ್ತಿದ್ದು ಬೆಳ್ಳಗೆ ಬೆಳಗಾಗೇಬಿಟ್ಟಿತ್ತು. ಆಗೆಲ್ಲಾ ಅಲಾರಂ ಗಡಿಯಾರ ನಮ್ಮ ಮನೆಯಲ್ಲಿಲ್ಲದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು. ಅಮ್ಮ ಹೇಳುತ್ತಿದ್ದರು. ಒಮ್ಮೆ ಅಣ್ಣನ ಕಕ್ಷೀದಾರರು ಯಾರೋ ಪುಣ್ಯಾತ್ಮರು ಅಣ್ಣನಿಗೊಂದು ಅಲಾರಂ ಗಡಿಯಾರ ಕೊಡಲು ತಂದಿದ್ದರಂತೆ. ಆದರೆ ಅಣ್ಣ “ಮನೆಯಲ್ಲಿ ಐ.ಎ.ಎಸ್. ಓದೋರು ಯಾರಿದ್ದಾರೆ ಸಧ್ಯ? ಬಿಲ್ಕುಲ್ ಇವೆಲ್ಲಾ ಬೇಡ” ಎಂದು ವಾಪಸ್ಸು ಕಳಿಸಿಬಿಟ್ಟರಂತೆ. ಅದೂ ನಿಜ ಬಿಡಿ. ಅವಿ ಶಿಶುವಿಹಾರಕ್ಕೆ ಹೋಗಿ ಬಂದು ಹಾಯಾಗಿರುತ್ತಿತ್ತು.  ಸುಮಕ್ಕ ರಾತ್ರಿ ಊಟಕ್ಕೆ ಮುಂಚೆಯೇ ಮನೆಕೆಲಸ (ಹೋಂ ವರ್ಕ್) ಮುಗಿಸಿಬಿಡುತ್ತಿದ್ದಳು. ಇನ್ನು…ಅವಳ ಹಾಗೆ ನಾನು ಚಂದ್ರವಂಶಿಯಲ್ಲ, ಸೂರ್ಯವಂಶಿ…ಬೆಳಗ್ಗೆ ಮಾತ್ರವೇ ನಾನು ಬರೆದು ಸಂತೆ ಹೊತ್ತಿಗೆ ಮೂರು ಮೊಳ ನೈಯ್ದು ಮುಗಿಸುತ್ತಿದ್ದುದು. ಆದರೂ ಅಣ್ಣ…ಛೇ..ಎಂಥಾ ಅರಿವುಗೇಡಿತನವಲ್ಲವೇ….ಮುಂದೆ ಅಲಾರಂ ಗಡಿಯಾರ ನನ್ನಂಥಾ ಸಾಹಸಿ ಮಗಳ ಉಪಯೋಗಕ್ಕೆ ಬಂದೀತೆಂಬ ಮುಂದಾಲೋಚನೆ ಸ್ವಲ್ಪವೂ ಮಾಡಿರಲಿಲ್ಲ ನೋಡಿ.

ನಾನು ಸೂರ್ಯವಂಶಿಯಾಗಲು ಹಲವಾರು ಕಾರಣಗಳಿದ್ದವು.  ನಾನು ಶಾಲೆಯಿಂದ ಬಂದನಂತರ ಆಟವಾಡದೆ ಜೀವನ ಎಲ್ಲಾದರೂ ಸಾಗೋದು ಉಂಟೆ? ನಂತರ ಸರಿಯಾಗಿ ೬ ಗಂಟೆ ಸುಮಾರಲ್ಲಿ ಅಜ್ಜಿಯ ಜೊತೆ ವಾಕಿಂಗು. ರಂಗನಾಥನ ಗುಡಿಯ ಲೌಡ್ ಸ್ಪೀಕರಿನಲ್ಲಿ “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೆ..” ಅಂತ ವಿಷ್ಣುಸಹಸ್ರನಾಮ ಶುರುವಾಗಿರೋದು. ಅದನ್ನು ಗುನುಗುನಿಸುತ್ತಾ ಪೂರ್ಣಯ್ಯನ ಬೀದಿಯುದ್ದಕ್ಕೆ ನಡೆದು ರಂಗನಾಥನ ಗುಡಿಯವರೆಗೂ ಹೋಗಿ ಅದನ್ನು ಬಳಸಿ ಸಿಟಿ ಬಸ್ ಸ್ಟಾಂಡಿನ ಮೂಲಕ ಮಾರಮ್ಮನ ಗುಡಿ ಮುಂದೆ ಬಂದು ಮತ್ತೆ ಎಡಕ್ಕೆ ತಿರುಗಿದರೆ ನಾರಾಯಣ ಸ್ವಾಮಿ ಗುಡಿ ಬೀದಿಯಲ್ಲಿ ಮನೆಗೆ ವಾಪಸ್ಸು. ಹಾಗೆ ಹಿಂತಿರುಗಿದ ಮೇಲೆ ಸ್ವಾಮಿ ಮೇಷ್ಟರ ಮನೆಗೆ ಬಾಯಿಪಾಠಕ್ಕೆ ಓಟ. ನಾನು ಅಲ್ಲಿಗೆ ತಲುಪುವ ವೇಳೆಗಾಗಲೇ..”ಯೂಢಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾಂ..” ಭಗವದ್ಗೀತಾ ಪಾಠ ನಡಿತಿರೋದು. ಸ್ವಾಮಿ ಮೇಷ್ಟರ ಮುದ್ದಿನ ಶಿಷ್ಯೆಯಾದ್ದರಿಂದ ದಿನಾ ಮಾಫಿ. ಇದೆಲ್ಲಾ ಬಿಡಿ..ಮುಂದಿನ ಅಂಕವೇ ಗಮ್ಮತ್ತಿನದು. ಸ್ವಾಮಿ ಮೇಷ್ಟರ ಮನೆಯಿಂದ ಸೀದಾ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ದೌಡು. ಆಗಾಗ ಮನೆಯ ಹಿರಿಯರು…”ಅಯ್ಯೋ ಪಾಪ ಅವನು ಬಿಡಿ ದೇವರ ಹಾಗೆ, ಯಾವ ತಂಟೆಗೂ ಬರೋಲ್ಲ” ಅಂದು ಕೆಲವರನ್ನು ಕೆಲವಾರು ಸನ್ನಿವೇಶಗಳಲ್ಲಿ ಹೋಲಿಸಿದ್ದರಿಂದ ನಾನು ದೇವರನ್ನು “ದೇವರ ಹಾಗೆ”  ಎಂದು ಮಾತ್ರ ತಿಳಿದಿದ್ದೆ ವಿನಃ ಅವನ ಮಹಿಮೆ, ಲೀಲೆಗಳೆಲ್ಲಾ ಅಷ್ಟೊಂದು ತಲೆ ಕೆಡಿಸಿಕೊಳ್ಳುವ ವಿಚಾರ ಮಾಡಿಕೊಂಡಿರಲಿಲ್ಲ.  ನಾನು ಅಲ್ಲಿಗೆ ಹೋಗುತ್ತಿದ್ದುದು ಅಲ್ಲಿ ಪ್ರಸಾದವೆಂದು ಕೊಡುತ್ತಿದ್ದ ಪುಟ್ಟ ಪುಟ್ಟ ದೋಸೆಯ ಆಸೆಗೆ! ಅಲ್ಲಿ ಎಲ್ಲರಂತೆ ಕೈಮುಗಿದು, ಗಲ್ಲ ಗಲ್ಲ ಬಡಿದುಕೊಳ್ಳುವವರನ್ನು ವಿಚಿತ್ರವಾಗಿ ನೋಡುತ್ತಾ ಮರುಗುತ್ತಾ ನಿಂತರೂ ದೀರ್ಘದಂಡ ನಮಸ್ಕಾರ ಹಾಕುವುದು ಮಾತ್ರ ನನ್ನ ಪ್ರಿಯವಾದ ಕೆಲಸವಾಗಿತ್ತು. ಆಷ್ಟುಹೊತ್ತಿಗಾಗಲೇ ಅಯ್ಯಂಗಾರ್ ತಾತ (ಅರ್ಚಕರು) ನೈವೇದ್ಯ ಮಾಡಲು ಮುಕ್ಕಾಲು ಮುಚ್ಚಿದ ಪರದೆಯ ಹಿಂದೆ ಮರೆಯಾಗಿರುತ್ತಿದ್ದರು. ನನ್ನ ತಲೆಯ ಅಂಕಿ ಅಂಶದ ಪ್ರಕಾರ ತಾತ ತೆರೆಯ ಹಿಂದೆ ನಿಂತು ದೋಸೆ ಎಣಿಕೆ ಮಾಡುತ್ತಿರುತ್ತಾರೆ. ಅಯ್ಯೋ ಇವತ್ತು ಕಡಿಮೆ ತಂದಿದ್ದು ನನ್ನ ಸರದಿ ಬರುವಷ್ಟರಲ್ಲಿ ದೋಸೆ ಮುಗಿದುಹೋದರೇನು ಗತಿ ಎನ್ನುವುದು ನನ್ನ ಚಿಂತೆಗೆ ಕಾರಣವಾಗಿದ್ದು ದೀರ್ಘದಂಡ ನಮಸ್ಕಾರ ಮಾಡುವ ನೆಪದಲ್ಲಿ ಪರದೆಯಾಚೆ ಇಣುಕಿ ದೇವರ ಪಾದದ ಬುಡದಲ್ಲಿ ದೋಸೆಯ ಪಾತ್ರೆ  ಕಂಡು “ಓಹೋ..ಸಧ್ಯ…ಪಾತ್ರೆಯಲ್ಲಿ ಸಾಕಷ್ಟು ದೋಸೆಗಳಿವೆ” ಎನ್ನುವುದನ್ನು ಖಾತ್ರಿಪಡಿಸಿಕೊಂಡು ಹಸನ್ಮುಖಿಯಾಗಿ ಮೇಲೇಳುತ್ತಿದ್ದೆ. ದೋಸೆಯನ್ನು ಮನಃಪೂರ್ತಿಯಾಗಿ ಸವಿದು ಎಲ್ಲರೂ ಹೊರಡುವವರೆಗೂ ಕಾದಿದ್ದು, ತಾತನನ್ನು ಕಂಡು ನಸುನಗೆ ನಕ್ಕು, ಅವರು “ಅರ್ಥವಾಯ್ತು” ಎಂಬಂತೆ ನನಗಿಂತಾ ಜೋರಾಗಿಯೇ ನಕ್ಕು ಅಳಿದುಳಿದ ದೋಸೆ ಚೂರನ್ನು ನನ್ನ ಕೈಲಿಟ್ಟು ಪ್ರೀತಿಯಿಂದ “ಇಪ್ಪು ವಾಷ್ಕಿ ಪೋ ಕಣ್ಣಾ (ಇನ್ನು ಓದ್ಕೊ ಹೋಗು ಕಂದಾ)” ಎನ್ನುತ್ತಿದ್ದರು. ತಕ್ಷಣವೇ ನಾನು “ಓಹೋ..ತಾತ ವಾಷ್ಕಿ ಪೋ ಎಂದಿದ್ದಾರೆ. ಅಂದರೆ ನಾನು ಕೈ ವಾಷ್ ಮಾಡಿಕೊಳ್ಳಬೇಕು” ಎಂದುಕೊಂಡು ನನ್ನ ದೊಡ್ಡ ಜವಾಬ್ದಾರಿ (ದೋಸೆ ತಿನ್ನುವುದು) ಮುಗಿದ ಸಂತೃಪ್ತಿಯಿಂದ ದೇವಾಲಯದ ಹೊರಗಿದ್ದ ನಲ್ಲಿಯಲ್ಲಿ ಅಚ್ಚುಕಟ್ಟಾಗಿ ಕೈತೊಳೆದುಕೊಂಡು ಮನೆಕಡೆಗೆ ಸವಾರಿ ಹೊರಟುಬಿಡುತ್ತಿದ್ದೆ. ಇಷ್ಟೆಲ್ಲಾ ಬಹುಮುಖ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ನನಗೆ ದಿನಕ್ಕೆ ೨೪ ಗಂಟೆ ಸಾಕಾಗುತ್ತಿತ್ತೆ? ನೀವೇ ಹೇಳಿ. ಓಹ್..ಕ್ಷಮಿಸಿ, ದೆವ್ವದಿಂದ ದೋಸೆಗೆ ಪಲಾಯನ ಮಾಡಿಬಿಟ್ಟೆ ಅಲ್ಲವೆ? ಸರಿ ಇನ್ನು ದೆವ್ವಕ್ಕೆ ಬರೋಣ.

ನಾನು ಉನ್ನತ ಮಟ್ಟದ ಪೂರ್ವಭಾವಿ ಸಿದ್ಧತೆಗಳೊಂದಿಗೆ ದೆವ್ವದರ್ಶನಕ್ಕೆ ತಯಾರಿದ್ದೆ ಎಂದು ನಿಮಗೆ ಮೊದಲೇ ಹೇಳಿದ್ದೆ. ಆದರೂ ಅದೇನು ನನ್ನ ಗ್ರಹಚಾರವೋ….೨-೩ ದಿನ ಕಳೆದರೂ ಅಪರಾತ್ರಿಯಲ್ಲಿ ಎಚ್ಚರವಾಗಲೇ ಇಲ್ಲ. ದೆವ್ವದ ಮೀಟಿಂಗ್ಗಿಂತಾ ..ಎಚ್ಚರವಾಗುವುದು ಹೇಗೆ ಎನ್ನುವ ವಿಷಯವೇ ಹೆಡ್ ಈಟಿಂಗ್ ವಿಷಯವಾಯಿತು. ಆಗ ಸಹಾಯಕ್ಕೆ ಬಂದವರೇ ದೇವಲೋಕದ ಏಂಜಲ್ ನಮ್ಮ ಗೌರಜ್ಜಿ. ಗೌರಜ್ಜಿ ಎಂದರೆ ನಮ್ಮ ತಾತನ ತಂಗಿ. ಮನೆಯಲ್ಲಿ ತಿಥಿ-ಮತಿಗಳು ನಡೆವಾಗ ಅವರಿಲ್ಲದೇ ಏನೂ ಸಾಗದು. ಹಾಗಂತ ಅವರೇನು ಮಡಿಗೆ ಬರ್ತಾರೆಯೇ ಎನ್ನೋದು ಮನೆಯಲ್ಲಿ ಭಿನ್ನಮತೀಯರ ಅಂಬೋಣವಾದರೆ..ಇಂಥಾ ಅಡ್ಡಾದಿಡ್ಡಿ ಮುಂಡೇವು (ನನ್ನಂಥಾ ಪಾಮರ ಮಕ್ಕಳು) ಗಳನ್ನು ನೋಡ್ಕೊಳ್ಳೊಕ್ಕೆ ಅವರಿಲ್ಲದೇ ಯಾರಿಂದ ಸಾಧ್ಯ ಎನ್ನುವುದು ಸರ್ವಾನುಮತದ ಅಂಗೀಕಾರವಾಗಿಬಿಟ್ಟಿತ್ತು. ಅದು ಸತ್ಯವಾದ ಮಾತು. ಗೌರಜ್ಜಿಯಾದರೇ ಬ್ರಾಹ್ಮಣರ ಊಟವಾಗುವವರೆಗೂ ತಮ್ಮ ನಾನ್ ಸ್ಟಾಪ್ ಕಥೆಗಳಿಂದ ನಮ್ಮಂಥ ಪುಂಡ ಪೋರಕಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿವಂತರು. ದಸರಾ ರಜೆಯ ಷಷ್ಠಿಯಲ್ಲಿ ನಮ್ಮ ತಾತನ ತಿಥಿಯಿದ್ದು ಆ ಸಂದರ್ಭದಲ್ಲಿ ಅವರ ಆಗಮನ ನನ್ನ ಆಲೋಚನೆಯ ದಿಗಂತವನ್ನು ಹಿರಿದಾಗಿಸಿಕೊಳ್ಳಲು ಸಹಾಯವಾಯ್ತು. ಗೌರಜ್ಜಿಯೆಂದರೆ ಕಥೆಗಳ ಆಗರ. ಅವರೇನು ಕಥೆ ಕೇಳಿ, ಓದಿ ಹೇಳಬೇಕಾಗಿರಲಿಲ್ಲವೆಂದು ತೋರುತ್ತದೆ. ನಿರರ್ಗಳವಾಗಿ ಕಥೆ ಹೆಣೆದು ಹೇಳುವ ಸಾಮರ್ಥ್ಯವೂ ಅವರಿಗಿತ್ತು. ಹೀಗೆ ಗೌರಜ್ಜಿ ಹೇಳಿದ ಕಥೆಗಳಲ್ಲಿ ನನ್ನ ಮನ ಸೆಳೆದದ್ದು “ಗಾಜಿನ ಕಂಬದ ರಾಜಕುಮಾರಿಯ ಕಥೆ.” ಇದರ ಸಾರಾಂಶವಿಷ್ಟೆ. ಒಬ್ಬಳು ರಾಜಕುಮಾರಿ ಅರಮನೆಯ ಉದ್ಯಾನದಲ್ಲಿರುವ ಗಾಜಿನ ಕಂಬದಲ್ಲಿ ಸೇರಿಕೊಂಡಿರುತ್ತಾಳೆ. ಅವಳು ಪ್ರತಿ ರಾತ್ರಿ ಅದರಿಂದ ಹೊರಬಂದು ಉದ್ಯಾನದಲ್ಲಿರುವ ದೇವಾಲಯ ಚೊಕ್ಕಟ ಮಾಡಿ, ಪೂಜಿಸಿ, ಹಣ್ಣು-ಹೂಗಳನ್ನು ತಾನೂ ಸ್ವೀಕರಿಸಿ ಮತ್ತೆ ಗಾಜಿನ ಕಂಬಕ್ಕೆ ಮರಳುತ್ತಿರುತ್ತಾಳೆ. ಇದನ್ನು ಕಂಡುಹಿಡಿಯಲೆಂದು ಉದ್ಯಾನವನಕ್ಕೆ ಬರುವ ರಾಜಕುಮಾರನದೂ ಹೆಚ್ಚು ಕಡಿಮೆ ನನ್ನ ಪಾಡೆ!  ದಿನಾಲೂ ನಿದ್ರೆಹೋಗಿಬಿಡುತ್ತಿರುತ್ತಾನೆ. ಇದಕ್ಕೆ ಉಪಾಯವಾಗಿ ಒಮ್ಮೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡು ಅದರ ಉರಿಯಿಂದ ಹಾಗೆಯೇ ಎಚ್ಚರಾಗಿದ್ದು ಗಾಜಿನ ಕಂಬದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗುತ್ತಾನೆ. ಇದನ್ನು ಕೇಳಿದ ನನ್ನ ಬುದ್ಧಿಗೆ ಸಾಣೆ ಹಿಡಿದಹಾಗೆ ಆಯಿತು. ನಾನು ಎಚ್ಚರವಾಗಿರಬೇಕಾದರೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡರಾಯ್ತು ಅದೇನು ಮಹಾ ಎಂದು ತೀರ್ಮಾನಿಸಿಕೊಂಡೆ. ಮರುದಿನ ಕೈ ಕುಯ್ಯುವ ಶಸ್ತ್ರ ಸಂಪಾದೆನೆಯಾಗಬೇಕಲ್ಲಾ..ಅದಕ್ಕಾಗಿ ಅಡಿಗೆ ಮನೆಗೆ ಶತಪಥ ತಿರುಗಿದ್ದೂ ಆಯ್ತು. ಆದರೆ ಉಪಯೋಗವಿಲ್ಲ…ದೊಡ್ಡ ದೊಡ್ಡ ಈಳಿಗೆ ಮಣೆಗಳು ಕೈ ಇರಲಿ ನನ್ನ ಕಾಲನ್ನೇ ಕತ್ತರಿಸುವಷ್ಟು ಭಯಂಕರವಾಗಿದ್ದು ನನ್ನ ಪ್ರಯೋಗಕ್ಕಿರಲಿ, ಸುಮ್ಮನೆ ಮುಟ್ಟಿನೋಡುವುದಕ್ಕೂ ಕೂಡ ದೊಡ್ಡವರು ಯಾರೂ ಅನುಮತಿಸುವ ಲಕ್ಷಣಗಳೇ ಕಾಣಲಿಲ್ಲ. ಹಾಗಂತ ಸೋತೆನೆಂದು ಕೈ ಚೆಲ್ಲಿ ಕುಳಿತುಕೊಳ್ಳುವ ಜಾಯಮಾನದವಳೇ ನಾನು? ಖಂಡಿತಾ ಇಲ್ಲ. ಅದಕ್ಕಾಗಿ ಅಣ್ಣನ ಶೇವಿಂಗ್ ಬ್ಲೇಡ್ ಎಗರಿಸಿಬಿಡುವುದೆಂದು ನಿರ್ಧರಿಸಿದೆ.

ಮರುದಿನದಿಂದ ಅಣ್ಣ ಶೇವ್ ಮಾಡಿಕೊಳ್ಳುವಾಗ ಅವರನ್ನೇ ನೋಡುತ್ತಾ ಅವರ ಬದಿಯಲ್ಲಿ ಕುಳಿತುಕೊಳ್ಳುವುದು ನನ್ನ ದಿನಚರಿಯ ಒಂದು ಭಾಗವಾಯ್ತು. ಗುಂಡಗಿನ ಗೋದ್ರೆಜ್ ಕ್ರೀಮನ್ನು ಬಿಳೀ ಬ್ರಷ್ ನ ಸಹಾಯದಿಂದ ತೆಗೆದು ಮುಖದಲ್ಲೆಲ್ಲಾ ಪುಸುಪುಸು ನೊರೆಯಾಗಿಸುತ್ತಾ ಹುಲಿ ವೇಶದವರಂತೆ ವಿಚಿತ್ರವಾಗಿ ಕಾಣುವ ಅಣ್ಣನನ್ನು ನೋಡುವುದೇ ಸೊಗಸು. ಹತ್ತಿರ ಕುಳಿತಿದ್ದಕ್ಕೆ ಬಹುಮಾನವಾಗಿಯೋ ಅಥವ “ಕಳ್ಳಮುಂಡೇದು ಮೊದಲೇ ಎಡಬಿಡಂಗಿ ಎಲ್ಲಾದರೂ ತಾನೂ ಹೀಗೆಲ್ಲಾ ಶೇವ್ ಮಾಡಿಕೊಂಡುಬಿಟ್ಟೀತು” ಎನ್ನುವ ಭಯದಿಂದಲೋ ಅಣ್ಣ ನನ್ನ ಕೆನ್ನೆಗೂ ಪುಸುಪುಸು ನೊರೆಹಚ್ಚಿ ಸಂತೋಷಪಡಿಸುತ್ತಿದ್ದರು.  ನಾಲಿಗೆ ಚಾಚಿ ಅಣಕಿಸಿ ಹೆದರಿಸುತ್ತಲೂ ಇದ್ದರು. ಆದರೆ ಹೆದರುವ ಜೀವ ನಾನಲ್ಲವಲ್ಲಾ. ನಂತರ ಅಣ್ಣ ಪಳಪಳನೆ ಹೊಳೆವ ಅಶೋಕ ಬ್ಲೇಡನ್ನು ತೆಗೆದು ನಾಜೂಕಾಗಿ ರೇಜರ್ ಗೆ ಜೋಡಿಸುತ್ತಿದ್ದರು. ಮುಖ ಮೂತಿ ನೂರಾರು ಕಡೆಗೆ ಕೊಂಕಿಸುತ್ತಾ ಮಳೆ ಮೋಡ ಕಂಡ ನವಿಲಿನ ನರ್ತನದಂತೆ ರೇಜರ್ ರನ್ನು ಅಣ್ಣ ಚರ್ ಚರ್ ಎಂದು ಆಡಿಸುತ್ತಿದ್ದರೆ ತದೇಕಚಿತ್ತದಿಂದ ನನ್ನ ಗಮನವೆಲ್ಲಾ ಅಣ್ಣನ ಶೇವಿಂಗ್ ಕಡೆಗಿರುತ್ತಿತ್ತು. ಶೇವಿಂಗ್ ಮುಗಿದೊಡನೆಯೇ ರೇಜರನ್ನು ಬಿಸಿನೀರಿನ ಸಿಲ್ವಾರ್ (ಅಲ್ಯುಮಿನಿಯಂ) ಲೋಟದೊಳಗೆ ಲೊಟಲೊಟನೆ ಆಡಿಸಿದ ಅಣ್ಣ ಅದರಿಂದ ಬ್ಲೇಡನ್ನು ತೆಗೆದು ಅನಾಮತ್ತಾಗಿ ಕರೀ ಹೊಲಸಿನ ತಿಪ್ಪೆಯೊಳಕ್ಕೆ ಎಸೆದುಬಿಡುತ್ತಿದ್ದರು. ಇದನ್ನು ದಿನಾಲೂ ಕಂಡ ನನ್ನ ಅಸಹಾಯಕತೆ ಮೇರೆಮೀರಿತು. ರೇಜರಿಂದ ತಟಕ್ಕನೆ ಬ್ಲೇಡು ತೆಗೆದು ಬಿಸುಡುವ ಅಣ್ಣ ದೇಹದಿಂದ ಆತ್ಮವನ್ನು ದೂರಮಾಡುವ ದುರುಳನಂತೆ ಕಂಡರು. ಒಂದು ದಿನ ಬಂದ ಕೋಪ, ಅಳು ಮತ್ತು ಅಸಹಾಯಕತೆಯನ್ನು ನುಂಗುತ್ತಾ ಅಣ್ಣ ಹೊರಟುಹೋದಮೇಲೆ ಎಷ್ಟೋ ಹೊತ್ತು ಬ್ಲೇಡನ್ನೇ ನೋಡುತ್ತಾ ನಿಂತಿದ್ದೆ. ಮತ್ತೊಮ್ಮೆ ಇಂಥಾ ಸುವರ್ಣಾವಕಾಶ ಎಂದು ಸಿಕ್ಕುವುದೋ ಎಂದು ಸಂದೇಹಿಸುತ್ತಾ ಎಡಗೈ ಹಾಕಿ ಬ್ಲೇಡನ್ನು ಎತ್ತಿಯೇ ಬಿಟ್ಟೆ. ಇನ್ನು ಗಾಜಿನಕಂಬದ ರಾಜಕುಮಾರಿಯ ಕಥೆಯಂತೆ ನನ್ನ ಕಥೆಯೂ ಸುಖಾಂತವಾಗುವುದರಲ್ಲಿ ಸಂಶಯವೇ ಇಲ್ಲವೆಂದು ಹಿಗ್ಗಿದೆ. ತಿಪ್ಪೆಯಲ್ಲಿಟ್ಟ ಕೈ ಹಾಗು ಬ್ಲೇಡು ತೊಳೆಯಲು ಹಿತ್ತಲಿನ ನಲ್ಲಿಯಡಿ ಕಸರತ್ತು ನಡೆಸುತ್ತಿರುವಾಗಲೇ ಪವಾಡವೊಂದು ಜರುಗಿದಂತೆ ತಾನೇ ತಾನಾಗಿ ನನ್ನ ಕೈ ತೋರು ಬೆರಳು ಕುಯ್ದುಹೋಗಿ ನನ್ನ ಸಂತೋಷ ನೂರ್ಮಡಿಯಾಯಿತು. ಇನ್ನು ನಿಂಬೆಹಣ್ಣಿನ ಸಂಪಾದನೆಗೆ ಅಡಿಗೆ ಮನೆಯೆಲ್ಲಾ ಹುಡುಕಿದೆ. ಎಲ್ಲೂ ಇರಲೇ ಇಲ್ಲ. ಮರುದಿನ ಬುದ್ಧಿ ಇನ್ನೂ ಚುರುಕಾಯ್ತು. ಸಣ್ಣ ಟೊಮ್ಯಾಟೊ ಹಣ್ಣನ್ನು ಸಿಕ್ಕಿಸಿಕೊಂಡರೆ ಹೇಗೆ ಎಂದು ಯೋಚಿಸಿ ರಿಹರ್ಸಲ್ ಮಾಡಲು ಹೋಗಿ ಪಿಚಕ್ಕನೆ ರಸವೆಲ್ಲಾ ಬಟ್ಟೆಯಮೇಲೆ ಬೀಳಿಸಿಕೊಂಡು ಅಮ್ಮನಿಂದ ಬೆನ್ನಿಗೆ ಧಡ ಧಡನೆ ಗುದ್ದಿಸಿಕೊಂಡು ತೆಪ್ಪಗಾದೆ. ಊಟ ಮಾಡುವಾಗ ಬೆರಳಿನ ಗಾಯ ತುಸು ಉರಿಯುತ್ತಿತಾದರೂ ನಿದ್ರೆಗೆಡಿಸುವಷ್ಟಲ್ಲ. ೨-೩ ದಿನಗಳ ನಂತರ ಕೊನೆಗೂ ಸಂತೆಯಿಂದ ನಿಂಬೆಹಣ್ಣನ್ನು ತಂದೇಬಿಟ್ಟರು. ಅದರಲ್ಲಿ ಚಿಕ್ಕಗಾತ್ರದ್ದೊಂದನ್ನು ಕದ್ದೇ ಬಿಟ್ಟೆ. ಕಲ್ಲಲ್ಲಿ ಜಜ್ಜಿ ಅದನ್ನು ಕೆತ್ತಿ ಕೈಗೆ ಸಿಕ್ಕಿಸಿಕೊಳ್ಳಲು ಹೊಂದುತ್ತದೆಯೋ ಇಲ್ಲವೋ ನೋಡೋಣವೆಂದು (ಏಕೆಂದರೆ ರಾತ್ರಿ ಅಭಾಸವಾಗಬಾರದಲ್ಲ?) ಬೆರಳಿಗೆ ಸಿಕ್ಕಿಸಿಕೊಳ್ಳಲು ಹೊರಟು ನೋಡುತ್ತೇನೇ…..ಬೆರಳಿನ ಗಾಯ ವಾಸಿಯಾಗಿ ಹೋಗಿದೆ! ದೌರ್ಭಾಗ್ಯವೆಂದರೆ ಇದೇ ಎನ್ನುವ ಅರಿವು ಚೆನ್ನಾಗಿಯೇ ಆಗಿಬಿಟ್ಟಿತು ನನಗೆ. ಯಾಕೋ ರಾತ್ರಿ ಮಹೂರ್ತವೇ ಚೆನ್ನಾಗಿಲ್ಲ ಎಂದುಕೊಂಡು ಯಾವುದಾದರೂ ಮಧ್ಯಾಹ್ನವೇ ಅಟ್ಟದ ಮನೆಯ ರಹಸ್ಯ ಬೇಧಿಸಿಬಿಡಲು ತೀರ್ಮಾನಿಸಿದೆ. ಅದರಂತೆ ಒಂದು ಮಧ್ಯಾಹ್ನ ಅಮ್ಮ, ದೊಡ್ಡಮ್ಮ, ಸುಮಕ್ಕ ಮತ್ತು ಅವಿ ಎಲ್ಲರೂ ಮಲಗಿದ್ದರು. ಅಜ್ಜಿ ಗೌರಜ್ಜಿಯೊಡನೆ ಪೇಟೆಗೆ ಹೋಗಿದ್ದರು. ಮುಂಬಾಗಿಲು ಭದ್ರವಾಗಿ ಹಾಕಿತ್ತು. ಮಧ್ಯಾನ್ಹದ ವೇಳೆ ಅಮ್ಮ, ದೊಡ್ಡಮ್ಮ ಮಲಗಿರುವಾಗೆಲ್ಲಾ ಅಣ್ಣ, ದೊಡ್ಡಪ್ಪ, ಅಜ್ಜಿ ಹಿತ್ತಿಲ ಬಾಗಿಲಿಂದಲೇ ಒಳಗೆ ಬರುತ್ತಿದ್ದುದು. ಆದ್ದರಿಂದ ನಾನೇನು ಯಾರಿಗಾದರೂ ಮುಂಬಾಗಿಲು ತೆರೆಯಬೇಕಾದೀತು ಎನ್ನುವ ಪ್ರಮೇಯವೂ ಇರಲಿಲ್ಲ. ಇಂಥಾ ಸುಸಂದರ್ಭದಲ್ಲಿ ನಾನು ನನ್ನ ನೀರಿನ ಕ್ಯಾನು ಮತ್ತು ಬ್ಯಾಗಿನೊಡನೆ ಅಟ್ಟದ ಮೆಟ್ಟಿಲು ಹತ್ತಲು ಅನುವಾದೆ. ೨-೩ ಮೆಟ್ಟಿಲು ಹತ್ತುವಷ್ಟರಲ್ಲಿ ಎಲ್ಲಿತ್ತೋ ಅಜ್ಜಿಯರ ಸವಾರಿ ಹಿಂಬಾಗಿಲಿನಿಂದ ಬಂದೇಬಿಟ್ಟಿತು. ನಾನು ಗಾಬರಿಗೊಂಡು ಜರ್ ಎಂದು ಜಾರಿಬಿಟ್ಟೆ. ಅಜ್ಜಿ “ಅಯ್ಯೋ…” ಎನ್ನುತ್ತಾ ಧಾವಿಸಿ ಬಂದವರು ನನ್ನನ್ನು ಏನಾಯಿತೆಂದು ಪ್ರಶ್ನಿಸಲು ನಾನು “ಕ..ಕಾ…ಪ..ಪಾ..” ಎಂದು ಗಾಬರಿಯಿಂದ ಅಟ್ಟದ ಮನೆಯ ಕಡೆ ನೋಡುತ್ತಾ ತೊದಲುತ್ತಿರುವುದು ಕಂಡು, ಓಹೋ…ಕತ್ತಲಲ್ಲಿ ಏನೋ ಕಾಣಬಾರದನ್ನು ಕಂಡಿದೆ ಎಂದು ತೀರ್ಮಾನಿಸಿ…ಅಷ್ಟರಲ್ಲಿ ಕೆಲಸ ಮುಗಿಸಿ ಬಂದ ಅಣ್ಣ ಮತ್ತು ದೊಡ್ಡಪ್ಪನನ್ನು ಸಭೆ ಸೇರಿಸಿ ಚರ್ಚಿಸಿ ಅಟ್ಟದ ಮನೆಗೆ ದಪ್ಪನೆಯ ನವ್ತಾಲ್ ಬೀಗ ಬಿಗಿಸಿಬಿಟ್ಟರು. ಇದರಿಂದ ನಿರಾಶೆ ಹಾಗು ಹತಾಶೆಗೊಂಡ ನಾನು ದಿನವೆಲ್ಲಾ ಮುಳು ಮುಳು ಅಳುತ್ತಿದ್ದುದು ಕಂಡು ನಾನು ಹೆದರಿದ್ದೇನೆಂದು ಬಗೆದು ಮರುದಿನ ಹೊಳೆಯಲ್ಲಿ ಸ್ನಾನ ಮಾಡಿಸಿ ಈಶ್ವರನ ಗುಡಿಯಲ್ಲಿದ್ದ ಚಂಡಿಕೇಶ್ವರನೆದುರು ಬೆಚ್ಚು ನೀರು ಹಾಕಿಸಿ, ಕೈಗೊಂದು ಯಂತ್ರ ಬಿಗಿಸಿ ಕರೆತಂದರು. ನನ್ನ ಗಮನ ಅಟ್ಟದ ಮನೆಯಿಂದ ತಪ್ಪಿಸಲು ದಪ್ಪನೆಯ ಬೀಗ ತುಸುಮಟ್ಟಿಗೆ ನೆರವಾದರೂ ನನ್ನ ಉತ್ಸಾಹವನ್ನಂತೂ ತಪ್ಪಿಸಲು ಅಲ್ಲ

ನನಗೆ ಬೇಕಾದಷ್ಟು ಕೆಲಸಗಳು ಕೈತುಂಬ, ಮನತುಂಬ ಯಾವಾಗಲೂ ಇದ್ದವು. ಕಾಲ ಬದಲಾಗುತ್ತಾ ಹೋಗಿ ಕೆಲವೇ ತಿಂಗಳುಗಳಲ್ಲಿ ಅಣ್ಣ-ಅಮ್ಮ ಕೊಳ್ಳೇಗಾಲಕ್ಕೆ ವಾಸಕ್ಕೆ ತೆರಳಬೇಕಾಗಿ ಬಂತು. ಆಗೆಲ್ಲಾ ನನ್ನ ಮನೆ ಮಾತ್ರವಲ್ಲದೇ ನನ್ನವರೆಲ್ಲರನ್ನೂ ಬಿಟ್ಟು ಹೋಗುವ ನೋವು ಅದೆಷ್ಟೋ ವರ್ಷಾನುಗಟ್ಟಲೆ ಕಾಡಿದ್ದಿದೆ. ಅಲ್ಲಾ….ನಾನು ಮಾತ್ರ ಹೀಗಾ? ಅಥವ ನಿಮ್ಮೆಲ್ಲರಿಗೂ ಹೀಗೇ ಆಗುತ್ತದಾ? ಅಕ್ಕ, ತಮ್ಮ ಎನಿಸಿಕೊಳ್ಳಲು ಒಂದೇ ತಾಯಿಯ ಹೊಟ್ಟೆಯಲ್ಲೇ ಹುಟ್ಟಬೇಕಾ? ಮುಂದೆ ಊರಿಂದ ಊರಿಗೆ ನಡೆದಂತೆಲ್ಲಾ ನನ್ನ ಚಟುವಟಿಕೆಯ ಕೆಂದ್ರಗಳು ಬದಲಾಗುತ್ತಾ ಹೋದವು. ಅಣ್ಣ ಪ್ರಪಂಚ ಬಿಟ್ಟು ನಡೆದೂ ಬಿಟ್ಟರು. ದೊಡ್ಡಪ್ಪ ಇಂದು ಬದುಕಿಲ್ಲ. ಬದುಕಿದ್ದಾಗ ಅವರ ತೊಡೆಗಳ ಮೇಲೆ ಆಡಿ ಬೆಳೆದದ್ದನ್ನು ಮರೆತುಬಿಡಲಾ? ಹಳೆತಾದ ಸೀರೆ ಕತ್ತರಿಸಿ ನನಗೊಂದು ಸುಮಕ್ಕನಿಗೊಂದು ಲಂಗ ಹೊಲೆಯುತ್ತಿದ್ದ ದೊಡ್ಡಮ್ಮ?ಸಂಗಡಿಗರೊಡನೆ ಆಡುವಾಗ, ಉಡುಪು ಬದಲಿಸಿ ತೊಡುವಾಗ, ಯೌವನದ ಆತಂಕಗಳನ್ನು ತೋಡಿಕೊಳ್ಳುವಾಗ ಜೊತೆಗಿದ್ದ ಅದೇ ಸುಮಕ್ಕ? ನಾನು, ನನ್ನ ಅಕ್ಕ, ನನ್ನ ತಮ್ಮ ಕುಣಿದ, ನಲಿದ ಕ್ಷಣಗಳು ಜೀವನದುದ್ದಕ್ಕೂ ನನ್ನ ಜೊತೆಜೊತೆಯೇ ಸಾಗಿದೆ. ನನ್ನ ಕಣ್ಣಲ್ಲಿ ಆಗ ನಮ್ಮೂರಿಗಿದ್ದುದು ನಾಲಕ್ಕೇ ಬೀದಿಗಳು. ಈಗ ಊರ ತುಂಬಾ ಬೀದಿಗಳು. ಮನೆಗಳು, ಮಸೀದಿ, ದೇವಾಲಯಗಳು ಎಲ್ಲಾ ಆಗ ದೊಡ್ಡ ದೊಡ್ಡದಾಗಿ ಕಾಣುತ್ತಿದ್ದವು. ಈಗೆಲ್ಲಾ ಮೊದಲಿಗಿಂತಾ ಕುಬ್ಜವಾಗಿ ಕಾಣುತ್ತವೆ. ಅಂದು ಊರ ತುಂಬಾ ತುಂಬಿದ್ದ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪಂದಿರಲ್ಲಿ ಕೆಲವರು ಇಲ್ಲವೇ ಇಲ್ಲ; ಇರುವ ಕೆಲವೇ ಕೆಲವರು ಆಂಟಿ ಆಂಕಲ್ ಗಳಾಗಿಬಿಟ್ಟಿದ್ದಾರೆ. ಈಗ ನಮ್ಮ ಮನೆಯನ್ನು ಕೊಂಡವರು ಯಾರೋ ಮನೆಯ ರೂಪವನ್ನೇ ಬದಲಿಸಿರಬಹುದು. ಗೋಡೆಯ ಬಣ್ಣ ಬೇರೆಯದೇ ಆಗಿಸಿರಬಹುದು. ನನ್ನ ಮನಸ್ಸಿನ ಗೋಡೆಯ ಬಣ್ಣ ಇನ್ನೂ ಅಚ್ಚಳಿಯದೇ ಹಾಗೇ ಇದೆ. ಮನೆಯ ಗೋಡೆಗಳ ಮೇಲೆ ನನ್ನ ತಮ್ಮ ಅವಿ ಹಾಗು ನಾನು ಜಾಯಿಂಟ್ ವೆಂಚರ್ ನಲ್ಲಿ ಬಿಡಿಸಿದ್ದ ನವಿಲು, ಸೂರ್ಯೋದಯ, ನದಿ, ಮರ, ಮತ್ತು  ಅವನನ್ನು ಮಧ್ಯೆ ನಿಲ್ಲಿಸಿಕೊಂಡು ಇಬ್ಬರು ಅಕ್ಕಂದಿರು ನಿಂತಿರುವಂತೆ ಬಿಡಿಸಿದ್ದ ಗೊಂಬೆಗಳ ಚಿತ್ರವಿನ್ನೂ ಚಿತ್ತಾಗದೇ ಉಳಿದಿದೆ. ಅದೇ..ಅವತ್ತಿನದೇ ಮುಗ್ಧಮಗುವಾಗಿ ಮನಸ್ಸು ಇನ್ನೂ ತೊದಲುತ್ತದೆ…ಮರೆತೇನೆಂದರೆ ಮರೆಯಲಿ ಹ್ಯಾಂಗಾ……

Leave a comment

Filed under ಲೇಖನಗಳು

ಬೋಧಿವೃಕ್ಷದ ಕೆಳಗೆ ನಿಂತು….

ಅಲ್ಲಾ ಅದ್ಯಾಕೆ ಬೋಧಿವೃಕ್ಷವೇ ಜ್ಞಾನದ ಸಂಕೇತವಾಯ್ತು? ಇಂಥಾ ತುಡುಗು ಪ್ರಶ್ನೆನೆ ಅಲ್ವೇ ನೀವು ಬೇಡ ಅನ್ನೋದು? ಈ ವಿಷಯಕ್ಕೆ ಬಂದಾಗೆಲ್ಲಾ ಅದ್ಯಾಕೆ ಯಾವಾಗ್ಲೂ ‘ಮಹಾಯಾನ’ ಕ್ಕೆ ಸೇರಿದವರ ಹಾಗಾಡ್ತೀರಿ?  ‘ಮಹಾಯಾನ’ವೆಂದರೆ ಗೊತ್ತಲ್ಲಾ? ಬುದ್ಧ ದೇವರು ಎಂದು ಪೂಜಿಸುವ ಗುಂಪು. ಓಹೋ…ಅದರ ಕೆಳಗೆ ಕೂತವರೆಲ್ಲಾ ಜ್ಞಾನಿಗಳಾಗೋಹಾಗಿದ್ರೆ ನಮ್ಮನೆ ಮುಂದೆ ಒಂದು ಆ ಮರ ಬೆಳೆಸಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಡ್ತಿದ್ದೆ ಹಾಗು ಅದರಿಂದ ಬಂದ ಆಮ್ದನೀಲಿ ಇಷ್ಟುಹೊತ್ತಿಗೆ ಆ ಮರಕ್ಕಿಂತಲೂ ಎತ್ತರದ ಮಹಡಿ ಮನೆ ಕಟ್ಟಿಬಿಡ್ತಿದ್ದೆ ಎಂತೆಲ್ಲಾ ಹುಚ್ಚು ಮನಸ್ಸು ಒರಲಿದಾಗ ನನ್ನಲ್ಲಿ ನನಗೇ ಅಚ್ಚರಿಯಾಯ್ತು. ‘ಬರೀ ಲಾಭಕ್ಕೆ ಮಾತ್ರವೇ ಮನುಷ್ಯನ ಮನಸ್ಸು ಹೆಚ್ಚು ಸಾರಿ ಯೋಚಿಸೋದು’? ನಮ್ಮ ಕಾಡುಗಳಲ್ಲಿ ಬೆಳೆವ ಎಷ್ಟೋ ಮರಗಳು ಕಡಿಯಲ್ಪಟ್ಟು ಮಾರಾಟವಾಗುತ್ತಿಲ್ಲವೇ? ಕಾಡು ಕಡಿದು ನಾಡು ಬೆಳೆಸಲು ಹೊರಟ ಈ ದಿನಗಳಲ್ಲಿ ‘ಸಾಲು ಮರದ ತಿಮ್ಮಕ್ಕ’ನಂಥೋರೂ ಇರೋದು ‘ಇಕೊಲಾಜಿಕಲ್ ಬ್ಯಾಲೆನ್ಸಿಂಗ್’ ಗೇ ಇದ್ದೀತು. ಹೀಗೆಲ್ಲಾ ಯೋಚಿಸುತ್ತಾ ಸಾಗುತ್ತಿರುವಾಗ ಕಂಡಿದ್ದು ಈ ಮರ.

‘ಗಂಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲಾ…..’  ಹುಶ್……ಮೆತ್ತಗೆ ಮಾತಾಡ್ರೀ…..ಗೊತ್ತಾದ್ರೆ ನಾಳೆ ಬೆಳಕು ಹರಿಯೋದ್ರೊಳಗೆ ಯಾವುದೋ ಅಮ್ಮನ್ನೋ ಅಪ್ಪನ್ನೋ (ಕ್ಷಮಿಸಿ, ದೇವರನ್ನು ಹೀಗೆಲ್ಲಾ ಅಂದರೆ ನಿಮಗೆ ಕೋಪವೇನೋ?!) ಬಲವಂತವಾಗಿ ಕೂರಿಸಿ ಮಹಾಮಂಗಳಾರತಿಯೇ ಮಾಡಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಟ್ಟು, ಒಬ್ಬ ‘ಸ್ವಾಮೀಜಿ’ನೂ ತಯಾರು ಮಾಡಿಬಿಡ್ತಾರೆನೋ! ಇಂಥಾದ್ದೊಂದು ಬೋಧಿವೃಕ್ಷದ ಎದುರಿಗೆ ಒಂದು ದಿವಿನಾದ ಕಟ್ಟೆಯಿದ್ದು ಅದರಮೇಲೆ ಪ್ರತಿಷ್ಠಾಪನೆಯಾಗೋದು ನನ್ನ ಹಾಗು ನನ್ನ ಗೆಳತಿಯೊಬ್ಬಳ ಜೀವನದ ಅವಿಭಾಜ್ಯ ಅಂಗ. ದಿನಾಲೂ ಮನೆಯಲ್ಲೋ, ಆಫೀಸಿನಲ್ಲೊ ಕುಳಿತಿದ್ದರೂ ಆ ಕಟ್ಟೆ ನೆನೆದೊಡನೆಯೆ “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ” ಅಂತ ಇಬ್ಬರಿಗೂ ಒಳಮನಸ್ಸಿನ ಶೃತಿಪೆಟ್ಟಿಗೆ ಸಣ್ಣಗೆ ಮಿಡಿಯೋದು ಸುಳ್ಳಲ್ಲ. ಆ ಜಾಗಕ್ಕೆ ತಲುಪಿದ ಮೇಲಂತೂ….ಎದುರಿನ ಆ ಕಟ್ಟೆಯ ಮೂಲೆಯೇ ಆಗಬೇಕು ನಮಗೆ. ಅಲ್ಲ್ಯಾರಾದರೂ ಕುಳಿತಿದ್ದರೋ…..ರಾಜಕಾರಣಿಗಳೇ ನಾಚಿ ನೀರಾಗುವಂತೆ ಪೈಪೋಟಿ ನಡೆಸಿ…ಅಂತೂ ಇಂತೂ ಅದೇ ಸೀಟು ಪಡೆದು ಕುಳಿತಾಗ ಸಿಗುವ ಅಸೀಮ ಸಂತೋಷದ ರುಚಿಯ ಉಂಡವನಷ್ಟೇ ಬಲ್ಲ. ಊರಿನ ಮಾತೆಲ್ಲಾ ಅಲ್ಲೇ ಆಡಿ ಮುಗಿಸಿ, ಜೀವನದ ಅತಿ ಭಯಂಕರವಾಗಿ ಮುಖ್ಯವಾದ ಎಷ್ಟೋ ನಿರ್ಧಾರಗಳನ್ನೂ ಅಲ್ಲೇ ತೆಗೆದುಕೊಂಡು ತೆರಳುವುದು ನಮ್ಮಿಬ್ಬರ ಅಭ್ಯಾಸವಾಗಿಬಿಟ್ಟಿದೆ. ಅಷ್ಟೊಂದು ಅದೇನಿದೆ ಅಲ್ಲಿ? ಪಿಕ್ನಿಕ್ ಸ್ಪಾಟು ಅಂತ ಈ ವೀಕೆಂಡಿಗೆ ತಯಾರಾದೀರಿ ಮತ್ತೆ…ಅದಲ್ಲ! ‘ಚಾರಣ ಪ್ರಿಯರೇ, ನಿಮಗೊಂದು ಹೊಸ ತಾಣ ಇಲ್ಲಿದೆ’ ಎಂದೇನೋ ಭಾವಿಸಿ ನಿರಾಶರಾಗೋ ಅವಶ್ಯಕತೆನೂ ಇಲ್ಲ! ಕಾರಣ, ಅದು ಅಂಥದ್ದೆಲ್ಲಾ ಎನೇನೂ ಅಲ್ಲ ಬಿಡಿ. ಇದೊಂದು ಗಿಜಿಗುಡುವ ಜನಸಂದಣಿಯ ನಡುವೆ ಒರಚ್ಚಾಗಿ, ಗಾಂಧೀಬಜಾರಿನ ತೀರಾ ಸರ್ಕಲ್ಲಲ್ಲೇ ನಿಂತಿರೋ ಮರ. ಧೋ ಎಂದು ಧುಮ್ಮಿಕ್ಕುವ ಪ್ರವಾಹದಂಥಾ ಜನಸಂದಣಿಯಲ್ಲಿ….ಅಬ್ಬಬ್ಬಾ…ಅದೇನು ತರಾವರಿ ಜನ, ಕೊಳ್ಳೋರು, ಮಾರೋರು, ಸುಮ್ಮನೆ ವಿಂಡೋ ಶಾಪಿಂಗ್ ಅಂತ ಅಡ್ಡಾಡೋರು, ಹವಾನಿಯಂತ್ರಿತ ಕಾರುಗಳಲ್ಲಿ, ಬೆವರು ತೊಟ್ಟಿಕ್ಕುವ ಬಸ್ಸುಗಳಲ್ಲಿ,  ಹಾಗೇ ಹೀಗೆನ್ನುತ್ತಾ ಬುರಬುರನೆ ಭವ್ಯ ನಾಗರೀಕತೆಗೆ ಮೂಕಸಾಕ್ಷಿಯಾಗಿ ರಸ್ತೆಬದಿಯ ಫುಟ್ ಪಾತಿಗೆ ಅಂಟಿಯೂ ಅಂಟದಂತೆ ನಿಂತಿರುವ, ಮದುವೆಗೋ, ಮಸಣಕೋ….ಒಟ್ಟಿನಲ್ಲಿ ನಿಲ್ಲದೇ ಚಲಿಸುವ ಜಂಗುಳಿಯ ಜಂಗಮನಿಗೆ ಮನಸೋತು ದಾರಿಬಿಟ್ಟು ನಿಂತಂತಿರುವ ಸ್ಥಾವರ. ಹಾಗೆ ನೋಡಿದರೆ ತೀರ ಪುರಾತನ ಋಷಿಮುನಿಯಂತೇನು ಇದು ಕಾಣುತ್ತಿಲ್ಲ. ಕಳೆದ ಮೂರೋ ನಾಲ್ಕೋ ದಶಕಗಳಿಂದಷ್ಟೇ ಹುಟ್ಟಿ, ಉಳಿದು, ಬೆಳೆದು…ನಮ್ಮ ನಿಮ್ಮೆಲ್ಲರ ಸಮಕಾಲೀನನಂತೆಯೇ ಕಾಣುತ್ತಿದೆ. ಹಾಗಾಗಿ ತೀರ ಸಂತನ ಪೋಜ್ ಕೊಟ್ಟಿದ್ದು ಕಾಣೆ. ಫ್ಯಾಷನ್ ಯುಗದ ಲಲನೆಯರ ಬಳುಕನ್ನೂ, ಸಾಲು ಅಂಗಡಿಗಳ ಥಳುಕನ್ನೂ, ರಸ್ತೆಬದಿಯ ಕೊಳಕನ್ನೂ, ಕಂಡೂ ಕಾಣದಂತೆ ಸರಿದಾಡುತ್ತಿರುವ ಸಮಾಜದ ಹುಳುಕನ್ನೂ, ಹೇಳಲು ಬಾಯಿರದೇ ನರಳುತ್ತಿರುವ ಜನತೆಯ ಅಳುಕನ್ನೂ ನೋಡುತ್ತಲೇ ನಿಯಂತ್ರಿಸಿಕೊಂಡಿದೆ ತನ್ನೆದೆಯ ಛಳುಕನ್ನು.  ಹೀಗಿರಲು ಇದು ಬುದ್ಧನಲ್ಲದೇ ಮತ್ತಿನ್ನೇನು?! ಇದನ್ನು ನೋಡುತ್ತಲೇ ನೆನಪಾದ್ದು ನಿಸಾರರ ‘ಮನಸು ಗಾಂಧೀ ಬಜಾರು’, ಹಸಿರು ಕ್ರಾಂತಿಯ ನಾರ್ಮನ್ ಬೋರ್ಲಾಗ್, ಬಿ.ಜಿ. ಎಲ್. ಸ್ವಾಮಿಯವರ ‘ಹಸಿರು ಹೊನ್ನು’, ‘ಓಶೋ’ ರ ‘ಫೈಂಡಿಂಗ್ ಪೀಸ್ ಇನ್ ಮಾರ್ಕೆಟ್ ಪ್ಲೇಸ್’, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದಡೆಂತಯ್ಯಾ’ ಎಂದು ಪ್ರೀತಿಯಿಂದ ಜನತೆಯನ್ನು ಅಲವತ್ತುಕೊಂಡ ವಚನಕಾರರು….ಇನ್ನೂ ಏನೇನೋ….ಹಾಗೆ ನೋಡ ನೋಡುತ್ತಲೇ ಮರದ ಕೆಳಗೆ ಕಾಯಕವನ್ನು ಕೈಲಾಸವಾಗಿಸಿಕೊಂಡಿರುವ ಚಪ್ಪಲಿ ಹೊಲಿಯುವ, ಬೀಗ ರಿಪೇರಿ ಮಾಡುವ, ಗಿಲೀಟಿನ ಬೆಳ್ಳಿಪಾತ್ರೆ, ನಿಂಬೇ ಹಣ್ಣು, ಮತ್ತೊಂದು ಮಾರುವುದರಲ್ಲೇ ಸಂತಸಗೊಂಡಂತೆ ಕಾಣುವ, ನೋವಲ್ಲೂ ನಗುವ ಗೆಳೆಯರೆಲ್ಲಾ ಬುದ್ಧರಂತೇ ಕಂಡರು.

ಭಾನುವಾರ , ಜನವರಿ 3, 2010, ರ ‘ಪ್ರಜಾವಾಣಿ’ ಯಲ್ಲಿ ‘ಮಹಾದೇವ ಶಂಕನಪುರ’ ಎನ್ನುವವರು ಬರೆದ ಒಂದು ಕವನ ಈ ರೀತಿಯಾಗಿದೆ.

ಅರಳಿ ಮರದಯ್ಯನಿಗೆ
ಎಷ್ಟೋ ಲೋಕದ ತತ್ವಗಳು ಗೊತ್ತು
ಹಾಡುವುದು ಮಾತ್ರ ಒಂದೇ ಪದ,

ಮುಗುಳು ನಗುವ ಹಾಡು
ಮಂದಹಾಸದ ಮೌನಗೀತೆ.

ನೋಡು ನೋಡುತ್ತಾ ನಿಂತರೆ ಸಾಕು
ಕಣ್ಣಲ್ಲೇ ಕರುಣೆಯ ಕಡಲ
ಮೊಗೆದು ಕೊಡುವನು ಗುಟುಕು.

ಇವತ್ತಿಗಿಷ್ಟು ಸಾಕು, ನಾನು ಹೊರಟೆ ಮರ ನೋಡಲು…ನೀವೂ ಹೊರಟು ನೋಡಿ…. ಜ್ಞಾನದ ಸಂಕೇತವಾಗಲು ಅರಳೀ ಮರವೇ ಬೇಕೆಂದಿಲ್ಲ, ನಿಮಗೆ ಬೇಕಾದ್ದೇ ಆದೀತು. ಸುಮ್ಮನೆ ನೋಡಿಷ್ಟು ಪಡೆಯಿರಿ ತಂಪು, ಜ್ಞಾನ, ಸಂತೋಷ, ಅವರವರ ಭಾವಕ್ಕೆ ತಕ್ಕಷ್ಟು…..ಅದೂ ಉಚಿತವಾಗಿ!!!!!

Leave a comment

Filed under ಲೇಖನಗಳು

ಕೋಗಿಲೆ ಕಾಣೆಯಾದ್ದು…..

ಅವತ್ತೂ ಇವತ್ತಿನ ಥರಾನೇ ಮಳೆ ಹೊಡೆದ ರಾತ್ರಿಯ ಮುಂದಿನ ಬೆಳಗು. ಪ್ರಕೃತಿ ಅದೆಷ್ಟು ರಮ್ಯವಾಗಿತ್ತು.  ಮಾವಿನ ಮರದಲ್ಲಿ ಗೊಂಚಲುಗಟ್ಟಿದ್ದ ಪುಟ್ಟ ಪುಟ್ಟ ಕಾಯಿಗಳು, ಚಿಟ ಚಿಟನೆ ಏನೋ ಆತುರದಲ್ಲಿದ್ದಂತೆ, ಯಾರನ್ನೋ ಹುಡುಕುತ್ತಿರುವಂತೆ ಸಿಡಿಯುತ್ತಾ ಹುಲ್ಲು, ಕಡ್ಡಿ, ಸಣ್ಣ ಗಿಡ ಎನ್ನುವ ತಾರತಮ್ಯವಿಲ್ಲದಲೇ ಬೆದಕಿ ನೋಡುತ್ತಾ ಸಾಗುತ್ತಿದ್ದ ಎಂಥಾದ್ದೊ ಚಿಕ್ಕ ಹುಳ, ಆಗಷ್ಟೇ ಎಳೆಬಿಸಿಲ ಹೂರಾಶಿ ತಂದು ಸುಮ್ಮಾನವಾಗಿ ಕಾಂಪೌಂಡಿನೊಳಗೆಲ್ಲಾ ಸುರಿಯುತ್ತಿದ್ದ ಭಾನು ಹಾಗು ಬಾವಿ ಕಟ್ಟೆಯ ಮೇಲೆ ಗರ ಬಡಿದವಳಂತೆ ನಾನು! ಇಂಥಾ ಪ್ರಕೃತಿಯ ಸುವರ್ಣ ಸಂಧಿಕಾಲಕ್ಕೇ ನಾನು ಆಗೆಲ್ಲಾ ಕಾಯುತ್ತಿದ್ದುದು, ಆದರೆ ಅವತ್ತಲ್ಲ. ಪ್ರತಿದಿನವೂ ಮನೆ ಮುಂದಿನ ಸಂಪಿಗೆಮರವಾಸಿಯಾಗಿದ್ದ ಹಾಗು ರಾಗಾಲಾಪನೆಯಲ್ಲೇ ಮುಳುಗಿದ್ದ ಆ ಕೋಗಿಲೆಯನ್ನು ನಾನು ಕಾಣಲು ಮಾತಾಡಿಸಲು ಪ್ರಯತ್ನಪಡುತ್ತಿದ್ದುದೇನು ಸುಳ್ಳಲ್ಲ. “ಕೋಗಿಲೆ ಕಾಗೆ ಥರವೇ ಇರುತ್ತೆ, ಕಾಗೆ ಗೂಡಲ್ಲೇ ಮೊಟ್ಟೆ ಇಡುತ್ತೆ, ಕೋಗಿಲೆ ಮರಿಗಳಿಗೆ ಕಾಗೆ ಚಿಕ್ಕಮ್ಮನಂತೆ” ಎಂದೆಲ್ಲಾ ಅಮ್ಮ ಕಥೆ ಹೇಳುತ್ತಿದ್ದಳಾದರೂ ಸಂಪಿಗೆ ಮರದಲ್ಲಿ ಅದೇನು ಕಪ್ಪಗೆ ಕಂಡ್ರೂ ಅದೇ ಕೋಗಿಲೆ ಎಂದು ನನ್ನನ್ನು ನಾನೇ ನಂಬಿಸಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದೆ. ಇಂತಹಾ ಆ ದಿನದಲ್ಲಿ ನನ್ನ ಸಂಕಟಕ್ಕೆ ಕಾರಣವಾಗಿದ್ದು ಆ ನಮ್ಮ ಕೋಗಿಲೆ ಎರಡು ದಿನಗಳಿಂದಲೂ ಕಾಣೆಯಾಗಿದೆ ಎನ್ನುವುದು.  ವಸಂತ ಋತುವಿನ ಅವತ್ತು ಅದೇನು ಬೇಸಿಗೆಯೋ, ಮಳೆಗಾಲವೋ, ಚಳಿಗಾಲವೊ ಅರಿಯಲಾರದ ಮೂರು ಕೂಡಿದ ಪೂರ್ವ ಸುಕೃತದಂತಿದ್ದ ಹವೆ ಕೋಗಿಲೆಯ ವಿರಹದಲ್ಲಿತ್ತು.

           ದಿನಂಪ್ರತಿ ಬೆಳಗಿನ ಜಾವದ ಕೋಳಿ ಕೂಗಿಗೆ ಏಳುವುದು ಎನ್ನುವುದನ್ನು ಕೇಳಿದ್ದ ನನಗೆ ಕೋಗಿಲೆಯ ಕೂಗಿಂದ ಎಚ್ಚರಾಗುತ್ತಿದ್ದುದು ಏನೋ ಹೊಸ ಪರಿ ಸಂತೋಷ. ಅವತ್ತು ಅದಿರಲಿಲ್ಲ. ಅದೇನು ಹುರುಪೋ ಅದಕ್ಕೆ. ಒಮ್ಮೆ ಮಂದ್ರಕ್ಕೆ, ಒಮ್ಮೆ ತಾರಕಕ್ಕೆ, ಅದೆಷ್ಟು ಬಗೆಯದೋ ತಾಲೀಮು. ಅದು ಹೀಗೂ ಇರಬಹುದು ಎಂದು ಲೆಕ್ಕಾಚಾರಕ್ಕೆ ಬೀಳುವ ಮನಸ್ಸು ಎಲ್ಲಾದರೂ ಪಕ್ಕದೂರಲ್ಲಿ ರಾಮನವಮಿ ಸಂಗೀತ ಕಛೇರಿ ನಡೆಯುತ್ತಿದ್ದು ಅಲ್ಲಿ ವಿದ್ವತ್ಪ್ರದರ್ಶನಕ್ಕೆ ಹೋಗಿರಬಹುದೇನೋ ಎನ್ನುತ್ತಿತ್ತು. ಯಾವುದಕ್ಕೂ ಯಾರನ್ನಾದರೂ ವಿಚಾರಿಸೋಣವೆಂದರೆ ಯಾರನ್ನು ಕೇಳುವುದು? ಸಂಪಿಗೆ ಮರವನ್ನೇ? ಅದ್ಯಾಕೋ ಎಲೆಗಳೆಲ್ಲಾ ಅಲ್ಲಲ್ಲಿ ತಿರುಚಿ ದಿಕ್ಕೆಟ್ಟ ಆಯಾಸದಿಂದ ಆಕಳಿಸಿ ಮೈಮುರಿಯುತ್ತಿವೆ. ಮರದ ಮೇಲಿಂದ ಕೆಳಸರಿಯುತ್ತಿರುವ ಗೊದ್ದದ ಸಾಲಿನಲ್ಲಿ ಯಾಂತ್ರಿಕ ಕಳಾಹೀನ ಮಾರ್ಚ್ ಪಾಸ್ಟು. ಎಲ್ಲಾ ಇರುವಂತಿದೆ ಈ ಸಂಪಿಗೆ ಮರದಲ್ಲಿ, ಚಪ್ಪರ, ತಳಿರು ತೋರಣ, ಹಣ್ಣು, ಹೂ ಕಲಶ, ಗೋಪುರದ ಗುಡಿ…ಆದರೆ ಇಲ್ಲದ್ದು ಗರ್ಭಗುಡಿಯಲ್ಲಿನ ದೇವರು ಮಾತ್ರ. ಸುಮ್ಮನೆ ಪ್ರದಕ್ಷಿಣೆ ಬಂದವಳಿಗೆ ಕಂಡದ್ದು ನೋಡ ನೋಡುತ್ತಲೇ ದಾರಿಹೋಕ ಗಾಳಿಯೊಡನೆ ಉಭಯ ಕುಶಲೋಪರಿಯಂತೆ ಎಲೆಗಳೆಲ್ಲಾ ಸಮೂಹಸನ್ನಿಗೊಳಗಾದಂತೆ ಒಂದಿಷ್ಟು ಹೊತ್ತು ಗಲಗಲನೆ ಅಲುಗಾಡಿ ಮತ್ತೆ ನಿಟ್ಟುಸಿರಿಟ್ಟು ಬೆಪ್ಪಾದ್ದು ಮತ್ತು ರಾತ್ರಿ ಮಳೆಯಿಂದ ಎರವಲು ಪಡೆದು ಹುದುಗಿಸಿಟ್ಟುಕೊಂಡಿದ್ದ ನಾಲ್ಕಾರು ಹನಿಗಳನ್ನೇ ಕಣ್ಣೀರಿನಂತೆ ಕೆಡವಿ ಕಣ್ಣೊರೆಸಿಕೊಂಡು ಮಗ್ಗುಲು ಬದಲಾಯಿಸಿದ್ದು. ಇಲ್ಲಿನ್ನು ನಿಂತು ಉಪಯೋಗವಿಲ್ಲವೆಂದರಿತ ನಾನು ಮಾವಿನ ಮರದೆಡೆಗೆ ಸಾರಿದ್ದೆ. ಮಾವಿನ ಚಿಗುರನ್ನು ತಿಂದು ಸ್ವರದಲ್ಲಿ ಇಂಪು ಬರಿಸಿಕೊಳ್ಳುತ್ತವೆ ಕೋಗಿಲೆಗಳು ಎಂದು ಕೇಳಿದ್ದೆನಷ್ಟೆ. ದಾರಿಯುದ್ದಕ್ಕೂ ಇದ್ದ ಹುಲ್ಲ ಮೆತ್ತೆಯ ನಡು ನಡುವೆ ಅಲ್ಲಲ್ಲಿ ಅರಳಿದ್ದ ಬಿಳಿ, ಹಳದಿ ಪುಟ್ಟ ಹೂಗಳು “ಇಲ್ಲೆಲ್ಲಾ ನಿಮ್ಮ ಕೋಗಿಲೆ ಹೆಜ್ಜೆಯೂರಿದ್ದನ್ನು ನಾವು ಕಂಡಿದ್ದೆವು” ಎಂದು ನೆನಪಿಗೆ ತಂದುಕೊಳ್ಳುವಂತೆ ಕಣ್ಣರಳಿಸಿ ಮತ್ತೆ ಮರೆವಿಗೆ ಸಂದವು. ಗಂಭೀರತೆಯನ್ನೇ ಮೆರೆಯುತ್ತಿದ್ದ ಹಿರಿಯಜ್ಜನಂಥಾ ಮಾವಿನಮರದ ಗೊಂಚಲಲ್ಲಿ ಜಿಗಿಯುತ್ತಿದ್ದ ಮಾವಿನ  ಮಿಡಿಗಳೆಲ್ಲಾ ಕೋಗಿಲೆಯ ಬಗ್ಗೆ ಮಾಹಿತಿಕೊಡಲು ತಮಗೆ ಹಿರಿಯಜ್ಜನ ಅಪ್ಪಣೆಯಿಲ್ಲವೆಂಬಂತೆ ಕಣ್ಣು ತಪ್ಪಿಸುತ್ತಾ ತಮ್ಮ ತಮ್ಮಲ್ಲೇ ಗಿಜಿಗುಡುತ್ತಿದ್ದವು.

ಆಗ ದಡಕ್ಕನೆ ಹಲಗೆಯ ಗೇಟು ತಳ್ಳಿಕೊಂಡು ಬಂದವರೇ ಸೈಂಕ್ರ (ಶಂಕ್ರನ ಅಪಭ್ರಂಶವಿದ್ದೀತು) ಮತ್ತವನ ತಂಗಿ ಸೂಜಿ (ಸೂಜಿಮಲ್ಲಿ). ಅಷ್ಟು ದೂರದ ವಡ್ಡರಟ್ಟಿಯಿಂದ ನನ್ನ ಜೊತೆಗಾಡಲು ಬರುವ, ಒಮ್ಮೊಮ್ಮೆ ಬೇಲ ಮತ್ತು ಬೋರೆ ಹಣ್ಣನ್ನು ತರುವ ನನ್ನ ಆತ್ಮೀಯ ಸ್ನೇಹಿತರು. ಅವತ್ತು ಅವರು ಕವಣೆ ಕಲ್ಲು ಬೀರುವ ಬಿಲ್ಲು ನನಗಾಗಿ ತಂದಿದ್ದು ಕೊಂಚ ನನ್ನ ಕಣ್ಣರಳಿಸಿತ್ತು. ಅದ್ಯಾಕೋ ಕೋಗಿಲೆಯ ಧ್ಯಾನದಲ್ಲಿ ಯಾವುದಕ್ಕೂ ಮನಸ್ಸಿಲ್ಲದ ನಾನು ರೊಟ್ಟಿಯನ್ನಷ್ಟು ಅವರಿಬ್ಬರ ಕೈಗಿಟ್ಟು ಮಾವಿನ ಮರದ ಕಡೆಗೆ ಮತ್ತೆ ವ್ಯಸ್ತಳಾದೆ. ರೊಟ್ಟಿ ಮೆಲ್ಲುತ್ತಾ ಸೈಂಕ್ರ ಆವೇಶಕ್ಕೊಳಗಾದವನಂತೆ ಬಿಲ್ಲಿನ ಉಪಯೋಗಗಳನ್ನು ವಿವರಿಸತೊಡಗಿದ. “ಅದ್ಯಾಕ್ ಅಂಗೆ ಮಾಂಕಾಯ್ನ ದುರುಗುಟ್ಟ್ಕಂಡು ನೋಡ್ತಿದ್ಯವ್ವೋ…ಬರೇ ಮಾಂಕಾಯ್ ಕೆಡ್ವೋದಿರ್ನಿ…ಉಲಿನೂ ಕೆಡುವ್ಬೋದು ಈ ಬಿಲ್ಲಿಂದ ತಿಳ್ಕಾ..ಅಂಗೇ ನಮ್ಮವ್ವ ನೆನ್ಮೊನ್ನೆಯೆಲ್ಲಾ ಮಳೆಚಳಿಗೆ ಬಿಸ್ ಬಿಸಿ ಕೋಗಿಲೆ ಮಾಂಸ ಮಾಡಿತ್ತು, ಏನು ದಿವನಾಗಿತ್ತು ಅಂತೀ…ಅದಿನಾರು ಕಾಯಿಲೆ ಓಯ್ತದಂತೆ ತಿಂದ್ರೆ. ನಮ್ಮಯ್ಯ ದಿನಕ್ಕೆ ಒನ್ನಾಕಾರು ಒಡೆದು ತತ್ತೀನಿ ಅಂದದೆ ಇನ್ಮ್ಯಾಕೆ” ಬಾಯಿ ಬತ್ತಿದವಳಂತೆ ಬಾವಿಕಟ್ಟೆಯ ಮೇಲೆ ಕುಸಿದು ಕುಳಿತಿದ್ದ ನನ್ನ ಕಣ್ಣು ಹನಿಯುತ್ತಿದ್ದನ್ನು ಕಂಡೂ ಕಾಣದವರಂತೆ ಸೈಂಕ್ರ ಮತ್ತು ಸೂಜಿ ಬಿಲ್ಲನ್ನು ನನ್ನ ಪಕ್ಕದಲ್ಲಿಟ್ಟು ಹೊರಟುಬಿಟ್ಟರು. ಮಾವು, ಬೇವು, ಸಂಪಿಗೆ, ಹುಲ್ಲು, ಜಾಜಿ ಬಳ್ಳಿ ಎಲ್ಲವೂ ಎನೋ ಅರಿತವುಗಳಂತೆ ಮುಖ ಮುಖ ನೋಡಿಕೊಳ್ಳುತ್ತಲೇ ಉಳಿದವು.

“ಅತ್ತೇಗೆ ಅತ್ತೆ ಕಿವ್ಡೀ…ಮಾವುಂಗೆ ಮಾವ ಕಿವ್ಡಾ….ಒಬ್ಬರ ಮಾತೊಂದೊಬ್ಬರಿಗಿಲ್ಲ ತಾನಾನಾಂದನಿತಾನ…..” ಸೈಂಕ್ರನ ದೊಡ್ಡ ಕೊರಲಿನ ಹಾಡು ಕಿವಿಗಪ್ಪಳಿಸುತ್ತಾ ದೂರದ ಕೊರಕಲಿಂದಾಚೆಗೂ ಮಾರ್ದನಿಸುತ್ತಲೇ ಇತ್ತು….ಬಹಳ ಹೊತ್ತಿನವರೆಗೂ!

Leave a comment

Filed under ಕತೆಗಳು

ಹೀಗೊಂದು ಶಿಶು ಗೀತೆ, ಹೆಸರು ಪ್ರಕೃತಿಮಾತೆ

im

ಮರ,ಬೆಟ್ಟ, ಕಾಡು,ನೀರು
ಇರಲು ಚೆಂದ ಭೂಮಿಯಲ್ಲಿ ಜೊತೆ ಜೊತೆ,
ನಾಶಮಾಡಿ ಪ್ರಕೃತಿತಾಯ
ಮರೆಯಬೇಕಿಲ್ಲ ಮಾನವೀಯತೆ.
ಬದುಕಬಲ್ಲದೇ ವನ ಗಿಡದಲಿ
ಹೂವಿಲ್ಲದೇ ಚಿಟ್ಟೆ?
ಬಾಳುವುದು ಹೇಗೆ ಮುದ್ದು ಕಂದ
ತೊರೆದು ತಾಯ ಮಮತೆ?!

Leave a comment

Filed under ಕವನಗಳು

ಕನಸು ಕರಗುವ ಮುನ್ನ

ಹಚ್ಚಿದ್ದು ಕಿರು ಹಣತೆ

ಹೊಸೆದ ಪುಟ್ಟ ಬತ್ತಿ ತುಂಡು

ಹಾಕಿದ್ದ ತೊಟ್ಟು ಎಣ್ಣೆ ಮುಗಿಯುತ್ತಿದೆ.

ಮರೆತ ಕಥನ, ಮೆರೆದ ಜೀವ ಕದನ

ನೆನೆದು ಮೊರೆಯುತ್ದಿದೆ ಅಳಿದುಳಿದ ಕುಡಿ ಬೆಳಕು.

ಈಗುಳಿದಿರುವುದಷ್ಟೇ ನಿಜ ಸಾರ;

ಹಿಂದಿನದ್ದೆಲ್ಲಾ ನಿಸ್ಸಾರ

ಹೊರೆಯಬೇಕು ಬೆಳಕು,

ಹೊಳೆದು ಪೊರೆಯಬೇಕು ತೊರೆದೆಲ್ಲಾ ಅಳುಕು.

ಪಕ್ಕದಲ್ಲಿ ಪುಟ್ಟ ಸೊಡರು

ಬೆಳಗಲದೆಷ್ಟೊಂದು ಎಡರು ತೊಡರು

ಕರುಣಾಳು ಬಾ ಬೆಳಕೇ

ಸೊಡರನೊಮ್ಮೆ ಹೊತ್ತಿಸಿ ಇಡು

ಹಣತೆ ಬೇಕಾದರೆ ಬತ್ತಿಸಿಬಿಡು

ಬೆಳಕ ಮುಂದಕ್ಕೆ ಉಳಿಸಿಬಿಡು

ನಡೆಸು ಬಿಡಿಸಿ ಕತ್ತಲ ಭಯ

ಆಗಲೇ ಬೇಕು

ತಮಸ್ಸೋಮ ಜ್ಯೋತಿಗ೯ಮಯ!!


Leave a comment

Filed under ಕವನಗಳು