Monthly Archives: December 2015

ಶ್ರೀ ಗುರು ಚರಿತ್ರೆ (ಅಧ್ಯಾಯ -೪)

||ಶ್ರೀ ಗುರು ಚರಿತ್ರೆ – ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ||

ಸಿದ್ಧಮುನಿ ನಾಮಧಾರಕನ ಮಾತನ್ನು ಕೇಳಿ, ” ಮಗು, ನೀನು ಕೇಳಿದ ಪ್ರಶ್ನೆ ಬಹಳ ಯೋಗ್ಯವಾಗಿದೆ. ನಿನಗೆ ಗುರುಚರಣಗಳಲ್ಲಿ ಭಕ್ತಿಯುಂಟಾಗಿದೆ. ಮಾನ್ಯವಾದ ನಿನ್ನ ಮಾತುಗಳನ್ನು ಕೇಳಿ ನನಗೆ ಗುರುಲೀಲೆಗಳೆಲ್ಲ ಆರಂಭದಿಂದ ನೆನಪಿಗೆ ಬರುತ್ತಿವೆ. ಬಹು ತಗುನಾದ ಪ್ರಶ್ನೆಯನ್ನು ಕೇಳಿದೆ. ಸೃಷ್ಟ್ಯಾದಿಯಿಂದ ಅತ್ರಿಜನ್ಮದವರೆಗೆ ನೀನು ಕೇಳಿದ್ದೀಯೆ. ಇನ್ನು ಮುಂದೆ ಕೇಳು.

ಹಿಂದಿನ ಕಲ್ಪದಲ್ಲಿನ ಸೃಷ್ಟಿಯೆಲ್ಲವೂ ಸಮುದ್ರದಲ್ಲಿ ಲೀನವಾಗಿ ಹೋದವು. ಆಗ ವೇದ ಸಮ್ಮತನಾದ ನಾರಾಯಣ ಆ ಸಮುದ್ರದ ಮೇಲೆ ಪವಡಿಸಿದ್ದನು. ಆ ದೇವಾಧಿದೇವ ತನ್ನ ಮನಸ್ಸಂಕಲ್ಪದಿಂದ ತೇಜೋರೂಪವಾದ ಅಂಡವನ್ನು ಸೃಷ್ಟಿಸಿದನು. ಹಿಂದಿನ ಕಲ್ಪದ ಪ್ರಾಣವಾಸನೆಗಳೆಲ್ಲಾ ಅದರಲ್ಲಿ ಅಡಗಿದ್ದವು. ಹಿರಣ್ಯಗರ್ಭನ ಸಂಕೇತವಾದ ಆ ಬ್ರಹ್ಮಾಂಡವು ಒಂದು ದೇವ ಸಂವತ್ಸರದವರೆಗೂ ಅಂಡ ರೂಪದಲ್ಲಿದ್ದು ನಂತರ ಭಿನ್ನವಾಯಿತು. ಹಾಗೆ ಭಿನ್ನವಾದ ಬ್ರಹ್ಮಾಂಡದಲ್ಲಿ ಶೃತ್ಯೋಕ್ತವಾದಂತೆ ಸೃಷ್ಟಿಯಾಗಿ, ಸರ್ವ ಜೀವಿಗಳ ಉತ್ಪನ್ನವಾಯಿತು. ಸ್ವರ್ಗ-ಭೂತಲಗಳೆಂದು ಎರಡು ಭಾಗಗಳಲ್ಲಿ ಬ್ರಹ್ಮಾಂಡವನ್ನು ನಿರ್ಮಿಸಿದನು. ಭೂಮಿಯ ಕೆಳಗೆ ಏಳು ಲೋಕಗಳು, ಭೂಮಿಯ ಮೇಲೆ ತೇಜೋರೂಪಗಳಾದ ಸಪ್ತಲೋಕಗಳು ಏರ್ಪಾಡಾದವು. ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು. ಅವನು ಮಾನಸಿಕವಾಗಿಯೂ, ದೈಹಿಕವಾಗಿಯೂ ದಿಕ್ಕಾಲಗಳನ್ನು ಸೃಜಿಸಿದನು. ವಿಷ್ಣುವಿನ ಆಜ್ಞೆಯಂತೆ ಸೃಷ್ಟಿಯನ್ನು ಬೆಳೆಸುವುದಕ್ಕೆ ತಪವನ್ನಾಚರಿಸಿ ಸನಕಾದಿ ನಾಲ್ವರು ಪುತ್ರರನ್ನೂ, ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠರೆನ್ನುವ ಮಾನಸ ಪುತ್ರರಾದ ಸಪ್ತರ್ಷಿಗಳನ್ನು ಸೃಷ್ಟಿಮಾಡಿದನು. ಬ್ರಹ್ಮ ಸಂತಾನವಾಗಿ ಶತರೂಪ, ಮನು ಎಂಬ ಇಬ್ಬರು ಜನಿಸಿದರು. ಅವರ ಮಗಳು ದೇವಹೂತಿ. ಛಾಯಾ ಪುತ್ರನಾದ ಕರ್ದಮ ಆ ದೇವಹೂತಿಯ ಕೈ ಹಿಡಿದನು. ಅವರ ಪುತ್ರಿಯರು ಬ್ರಹ್ಮ ಸುತರನ್ನು ಮದುವೆಯಾದರು. ವಿಧಾತನ ನೇತ್ರದಿಂದ ಜನಿಸಿದ ಅತ್ರಿ ಮಹಷಿಗೆ ಅನಸೂಯ ಪತ್ನಿಯಾದಳು. ಆಕೆ ಮಹಾ ಪತಿವ್ರತೆ. ಜಗದಂಬೆಯೇ ಆಕೆ! ಸುಲಕ್ಷಣೆಯಾದ ಆಕೆಯ ಸೌಂದರ್ಯವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ವೇದಗಳೂ ಅಕೆಯ ಪ್ರಶಂಸೆ ಮಾಡಿದವು. ಆಕೆಯ ಮಗನಾದ ಚಂದ್ರನು ನಕ್ಷತ್ರರಾಜನಾಗಿ ಪ್ರಸಿದ್ಧನಾದನು.

ಆ ಸಾಧ್ವಿ ಅನಸೂಯ ಪತಿಸೇವಾಪರಾಯಣಳು. ಆಕೆಯ ಮಹಿಮೆಯನ್ನರಿತ ಇಂದ್ರಾದಿ ದೇವತೆಗಳು ಆಕೆಯಿಂದ ತಮಗೆ ಸ್ವರ್ಗ ಸಂಪದ ಹರಣವಾಗುವುದೇನೋ ಎಂದು ಹೆದರಿ ತ್ರಿಮೂರ್ತಿಗಳಲ್ಲಿ ಶರಣು ಬೇಡಿ, ಆ ಸಾಧ್ವೀಮಣಿಯ ಮಹಿಮೆಯನ್ನು ನಿವೇದಿಸಿದರು. ” ಹೇ ತ್ರಿಮೂರ್ತಿಗಳೇ, ಅತ್ರಿಪತ್ನಿ ಮಹಾಪತಿವ್ರತೆ. ಆಕೆಯ ಸದಾಚಾರಗಳು ನಮಗೆ ಭಯವನ್ನುಂಟು ಮಾಡುತ್ತಿವೆ. ನಾವು ಸ್ಥಾನಭ್ರಷ್ಠರಾಗುತ್ತೇವೇನೋ ಎಂಬ ಸಂದೇಹ ಬರುತ್ತಿದೆ. ಆಕೆ ಕಾಯಾ, ವಾಚಾ, ಮನಸಾ, ಶ್ರದ್ಧಾ ಭಕ್ತಿಯುಕ್ತವಾಗಿ ಕೂಡಿ ಮಾಡಿದ ಕರ್ಮಗಳಿಂದ, ತನ್ನ ಪತಿಸೇವೆಯನ್ನು ಮಾಡುತ್ತಿದ್ದಾಳೆ. ಅತಿಥಿಗಳನ್ನು ಆದರಿಸುವುದರಲ್ಲಿ ಕನಸಿನಲ್ಲಿಯೂ ಆಕೆ ವಿಮುಖಳಾಗುವುದಿಲ್ಲ. ಸೂರ್ಯನು ತನ್ನ ಕಿರಣತಾಪದಿಂದ ಅಕೆಗೆ ತಪನವಾಗುವುದೇನೋ ಎಂದು ಹೆದರಿ ಅವರ ಆಶ್ರಮ ಪ್ರದೇಶದಲ್ಲಿ ತನ್ನ ತಾಪವನ್ನು ತಗ್ಗಿಸಿ ಬೆಳಗುತ್ತಾನೆ. ಅಗ್ನಿಯೂ ಭೀತನಾಗಿ ತನ್ನ ಶಾಖವನ್ನು ತಗ್ಗಿಸಿಕೊಂಡು ಜ್ವಲಿಸುತ್ತಾನೆ. ವಾಯುವು ಮಂದಮಾರುತನಾಗಿ ಚಲಿಸುತ್ತಾನೆ. ಆಕೆಯ ಪಾದಗಳಿಗೆ ನೋವುಂಟಾಗುವುದೇನೋ ಎಂಬ ಭಯದಿಂದ ಭೂಮಿ ಮೃದುವಾಗುತ್ತದೆ. ಆಕೆ ನಮಗೆ ಶಾಪಕೊಟ್ಟಾಳು ಎಂಬ ಭೀತಿಯಿಂದ ನಾವೆಲ್ಲರೂ ಆಕೆಯಲ್ಲಿ ವಿನಯ ವಿಧೇಯತೆಗಳಿಂದ ನಡೆದುಕೊಳ್ಳುತ್ತಿದ್ದೇವೆ. ಆಕೆ ತನ್ನ ತಪಃಪ್ರಭಾವದಿಂದ ನಮ್ಮಲ್ಲಿನ ಯಾರ ಸ್ಥಾನವನ್ನಾದರೂ ಆಕ್ರಮಿಸಬಲ್ಲಳು. ಆಕೆಯಿಂದ ಅನುಗ್ರಹಿಸಲ್ಪಟ್ಟ ದರಿದ್ರನೂ ಕೂಡಾ ನಮ್ಮನ್ನು ಜಯಿಸಬಲ್ಲನು. ಹೇ ತ್ರಿಮೂರ್ತಿಗಳೇ, ನೀವು ನಮ್ಮ ಈ ಭಯವನ್ನು ನಿವಾರಿಸುವ ಯಾವುದಾದರೂ ಉಪಾಯವನ್ನು ಯೋಚಿಸಿ ನಮ್ಮನ್ನು ಅಪಾಯದಿಂದ ಪಾರುಮಾಡಿ. ನೀವು ನಮ್ಮನ್ನು ಅನುಗ್ರಹಿಸದಿದ್ದರೆ ನಾವೆಲ್ಲರೂ ಆಕೆಯ ಆಶ್ರಮದ ಬಾಗಿಲಲ್ಲಿ ದಾಸರಾಗಿ ನಿಲ್ಲಬೇಕಾಗುತ್ತದೆ.”

ಇಂದ್ರನಾಡಿದ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ಕೃದ್ಧರಾಗಿ, “ಆಹಾ, ಆ ಪತಿವ್ರತೆ ಅಂತಹ ಮಹಿಮಾನ್ವಿತಳೇ? ನಾವು ಈಗಲೇ ಹೋಗಿ, ಆಕೆಯ ವ್ರತಭಂಗಮಾಡಿಯೋ, ಇಲವೇ ಮೃತ್ಯು ಸದನಕ್ಕೆ ಕಳುಹಿಸಿಯೋ ಏನಾದರೂ ಮಾಡಿ ಹಿಂತಿರುಗುತ್ತೇವೆ. ನೀವು ಹೋಗಿ.”ಎಂದು ದೇವತೆಗಳನ್ನು ಕಳುಹಿಸಿಕೊಟ್ಟು. ತಕ್ಷಣವೇ ಅತ್ರಿ ಮಹರ್ಷಿಯ ಆಶ್ರಮಕ್ಕೆ ಅತಿಥಿಗಳ ರೂಪದಲ್ಲಿ ಬಂದರು. ಆಗ ಅತ್ರಿಮುನಿ ಅನುಷ್ಠಾನಕ್ಕೆಂದು ನದಿಗೆ ಹೋಗಿದ್ದರು. ಆ ಅತಿಥಿವೇಷದಲ್ಲಿ ಬಂದ ಮೂವರೂ ಆಶ್ರಮ ಪ್ರವೇಶಮಾಡಿ, ಅನಸೂಯಾದೇವಿಯನ್ನು ಕಂಡು, “ಹೇ ಮಾತೆ, ನಾವು ಹಸಿದುಕೊಂಡು ಬಂದಿದ್ದೇವೆ. ಬೇಗ ನಮಗೆ ಅನ್ನವನ್ನು ನೀಡು. ಅನ್ನ ನೀಡಲು ಸಾಧ್ಯವಿಲ್ಲದಿದ್ದರೆ ಹೇಳು. ನಾವು ಇನ್ನೆಲ್ಲಿಯಾದರೂ ಹೋಗುತ್ತೇವೆ. ಪ್ರತಿನಿತ್ಯವೂ ನಿಮ್ಮ ಈ ಆಶ್ರಮದಲ್ಲಿ ಅತಿಥಿಗಳಿಗೆ ಅದ್ಧೂರಿಯಾದ ಆತಿಥ್ಯ ನಡೆಯುತ್ತದೆ ಎಂಬ ಕೀರ್ತಿ ಕೇಳಿ, ನಾವು ಕೋರಿದಹಾಗೆ ಆತಿಥ್ಯ ದೊರೆಯುತ್ತದೆ ಎಂಬ ಆಸೆಯಿಂದ ಬಹಳ ದೂರದಿಂದ ಬಳಲಿ ಇಲ್ಲಿಗೆ ಬಂದಿದ್ದೇವೆ. ನೀನು ಅತಿಥಿ ಪರಾಯಣಳು ಎಂಬ ನಿನ್ನ ಯಶಸ್ಸನ್ನು ಬಹಳವಾಗಿ ಕೇಳಿದ್ದೇವೆ.” ಎಂದು ಹೇಳಿದರು. ಅವರು ಹೇಳಿದ್ದನ್ನೂ ಕೇಳಿ ಅನಸೂಯಾಮಾತೆ, ಅವರಿಗೆ ನಮಸ್ಕರಿಸಿ, ಅವರ ಪಾದಗಳನ್ನು ತೊಳೆದು, ಪೀಠಗಳಮೇಲೆ ಕೂಡಿಸಿ, ಅರ್ಘ್ಯ ಕೊಟ್ಟು, ಗಂಧ ಪುಷ್ಪಾದಿಗಳಿಂದ ಪೂಜಿಸಿ, “ನೀವು ನಿಮ್ಮ ಆಹ್ನೀಕವನ್ನು ಮುಗಿಸಿ. ಅಷ್ಟರಲ್ಲಿ ನಾನು ನಿಮ್ಮ ಭೋಜನಕ್ಕೆ ಏರ್ಪಾಡುಮಾಡುತ್ತೇನೆ.” ಎಂದಳು. ಅದಕ್ಕೆ ಆ ವೇಷಧಾರಿಗಳು, “ಮಹರ್ಷಿಗಳು ಅನುಷ್ಠಾನಕ್ಕೆ ಹೋಗಿರುವಂತೆ ಕಾಣುತ್ತದೆ. ಅವರು ಬರುವುದು ತಡವಾಗಬಹುದು. ನಮಗೆ ಈಗಲೇ ಭೋಜನವಿಡು.” ಎಂದರು. ಅದಕ್ಕೆ ಒಪ್ಪಿ ಆಕೆ ಅವರನ್ನು ಭೋಜನಗೃಹಕ್ಕೆ ಕರೆದುಕೊಂಡುಹೋಗಿ, ಆಸನಗಳನ್ನು ಕೊಟ್ಟು, ಎಲೆ ಹಾಕಿ, ರಂಗೋಲಿಯಿಟ್ಟು, ಅಭಿಗಾರಮಾಡಿ, ಅನ್ನವನ್ನು ಬಡಿಸಲು ಸಿದ್ಧಳಾದಳು. ಆಗ ಅತಿಥಿವೇಷದಲ್ಲಿ ಬಂದಿದ್ದ ಆ ತ್ರಿಮೂರ್ತಿಗಳು, “ಹೇ ಸಾಧ್ವಿಮಣಿ, ನೀನು ನಮ್ಮ ಅಭೀಷ್ಟವನ್ನು ಪಾಲಿಸುವುದಾರೆ ನಮ್ಮ ಯಾಚನೆಯನ್ನೂ ಪಾಲಿಸಬೇಕು. ಅದೇನೆಂದರೆ ನೀನು ದಿಗಂಬರೆಯಾಗಿ ನಮಗೆ ಅನ್ನವನ್ನು ಬಡಿಸಬೇಕು. ಅದು ಸಾಧ್ಯವಾಗದಿದ್ದರೆ ಹೇಳು. ನಾವು ಮತ್ತೊಂದೆಡೆಗೆ ಹೋಗುತ್ತೇವೆ.” ಎಂದರು. ಅವರ ಮಾತುಗಳನ್ನು ಕೇಳಿದ ಆ ಪತಿವ್ರತೆ, ತನ್ನಲ್ಲಿ ತಾನು “ಈ ಅತಿಥಿಗಳು ನಮ್ಮ ಆಶ್ರಮದಿಂದ ವಿಮುಖರಾಗಿ ಹೊರಟುಹೋದರೆ ಈ ಗೃಹ ವನವಾಗಿಹೋಗುತ್ತದೆ. ಅವರ ಮಾತನ್ನು ಪಾಲಿಸಬೇಕೆಂದರೆ ನನ್ನ ಪಾತಿವ್ರತ್ಯಕ್ಕೆ ಭಂಗಬರುತ್ತದೆ. ಆದರೆ ನನ್ನ ಮನಸ್ಸು ನಿರ್ಮಲವಾಗಿದೆ. ಇವರ ಕಾಮದಾಟ ನನಗೇಕೆ? ನನ್ನ ಭರ್ತೃವಿನ ತಪೋಬಲವೇ ನನ್ನನ್ನು ಈ ಆಪತ್ತಿನಿಂದ ಪಾರುಮಾಡುತ್ತದೆ. ನನಗೆ ಯಾವ ಚಿಂತೆಯೂ ಬೇಡ.” ಎಂದು ಯೋಚಿಸಿ, ಆ ಪತಿವ್ರತೆ ಅನಸೂಯದೇವಿ, “ಆಗಲಿ. ನೀವು ಕೇಳಿದಂತೆ ನಿಮಗೆ ಭೋಜನವಿಡುತ್ತೇನೆ. ಸಾವಧಾನಚಿತ್ತರಾಗಿ ನೀವು ಊಟಮಾಡಿ.” ಎಂದು ಹೇಳಿ, ಪೂಜಾಗೃಹದೊಳಕ್ಕೆ ಹೋಗಿ ಅತ್ರಿಮಹರ್ಷಿಯ ಪಾದಗಳಿಗೆ ನಮಸ್ಕರಿಸಿ, “ಹೇ ಪತಿದೇವ, ಈ ಐವರೂ ನನ್ನ ಮಕ್ಕಳೇ ಅಲ್ಲವೇ?” ಎಂದು ಬಿನ್ನವಿಸಿಕೊಂಡು ವಿವಸ್ತ್ರಳಾಗಿ ಅನ್ನವನ್ನು ಹಿಡಿದು ಬರುವಷ್ಟರಲ್ಲಿ, ಆ ತ್ರಿಮೂರ್ತಿಗಳೂ, ಜಗನ್ನಾಥರೇ ಆದರೂ, ಹಸುಗೂಸುಗಳಾಗಿ ಹೋದರು. ಆ ಮಕ್ಕಳನ್ನು ನೋಡಿ, ಆಕೆಗೆ ಸ್ವಲ್ಪ ಭಯ ಎನಿಸಿದರೂ, ಅವರ ಬಳಿಗೆ ಬಂದು ಆ ಮಾತೆ ಅವರನ್ನೆತ್ತಿಕೊಂಡು ಮುದ್ದಾಡಿ ಸಂತಸಪಟ್ಟಳು. ಅಳುತ್ತಿದ್ದ ಆ ಮಕ್ಕಳನ್ನು ಬಾರಿಬಾರಿಗೂ ಎತ್ತಿ ಮುದ್ದಾಡಿ ಹಸಿದಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಆಕೆಯ ಸ್ತನಗಳಿಂದ ಹಾಲು ಸುರಿಯಲು ಮೊದಲಾಯಿತು. ಒಬ್ಬೊಬ್ಬರಾಗಿ ಆ ಮೂವರಿಗೂ ಆಕೆ ಸ್ತನ್ಯಪಾನ ಮಾಡಿಸಿದಳು. ಅನೇಕ ಯಜ್ಞಗಳಿಂದ ತೃಪ್ತಿಗೊಳ್ಳದ ಆ ಮೂವರೂ ಆಕೆಯ ಸ್ತನ್ಯಪಾನದಿಂದ ತೃಪ್ತಿಗೊಂಡು ಸುಪ್ತರಾದರು.

ಅತ್ರಿಪತ್ನಿಯಾದ ಆ ಅನಸೂಯೆಯ ಭಾಗ್ಯವೆಂತಹುದೋ! ಆಕೆಯ ತಪಃಫಲವೆಂತಹುದೋ! ತ್ರಿಮೂರ್ತಿಗಳು ಆಕೆಯ ಸ್ತನ್ಯಪಾನದಿಂದ ತೃಪ್ತರಾಗಿ ಹೋದರು. ಚತುರ್ದಶ ಭುವನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಪಾಲಿಸಿ ಅಲಸಿಹೋದವನಂತೆ ಆ ಮಹಾವಿಷ್ಣುವು ಆಕೆಯ ಸ್ತನ್ಯಪಾನಮಾಡಿ ತೃಪ್ತಿಯಿಂದ ಮಲಗಿದನು. ಹಗಲು ರಾತ್ರಿಯೆನ್ನದೆ ಸೃಷ್ಟಿಕಾರ್ಯದಲ್ಲಿ ನಿರತನಾದ ಬ್ರಹ್ಮನು ವಿಶ್ರಾಂತಿಯಿಲ್ಲದೆ ಬಳಲಿಹೋದವನಂತೆ ಆಕೆಯ ಸ್ತನಕ್ಷೀರಪಾನಮಾಡಿ ನಿದ್ರಾಪರವಶನಾದನು. ಕರ್ಪೂರದಂತೆ ಧವಳವರ್ಣನೂ, ಪಂಚಮುಖನೂ, ಫಾಲಾಕ್ಷನೂ ಆದ ರುದ್ರ ಆ ಸಾಧ್ವಿಯ ಸ್ತನಗಳಿಂದ ಹಾಲು ಕುಡಿದು ತೃಪ್ತನಾಗಿ ಸುಪ್ತ ಚೇತನನಾದನು. ಆ ಮಹಾಸತಿಗೆ ಸಮಾನರಾದ ಮತ್ತೊಬ್ಬರು ಭುವನತ್ರಯಗಳಲ್ಲಿ ಯಾರೂ ಇಲ್ಲ. ತ್ರಿಮೂರ್ತಿಗಳಿಗೆ ಮಾತೆಯಾಗಿ ಆಕೆ ಪ್ರಖ್ಯಾತಳಾದಳು.

ಅನಸೂಯ ಮಕ್ಕಳನ್ನು ಎತ್ತಿ ಲಾಲಿಸಿ ಪಕ್ಕದಲ್ಲಿ ಮಲಗಿಸಿಕೊಂಡು ಮಧುರವಾಗಿ, ಸರ್ವೋಪನಿಷತ್ತುಗಳ ಸಾರಭೂತವಾದ ಗೀತೆಗಳನ್ನು ಸಪ್ತಸ್ವರಗಳದೊಡನೆ ಮೇಳವಿಸಿ, ತ್ರಿಮೂರ್ತಿಗಳ ಯಶಸ್ಸನ್ನು ಸುಶ್ರಾವ್ಯವಾಗಿ ಹಾಡಿದಳು. ಅಷ್ಟರಲ್ಲಿ ಮಧ್ಯಾಹ್ನವಾಯಿತು. ತಪೋನುಷ್ಠಾನ ಪೂರ್ಣಗೊಳಿಸಿ ಅತ್ರಿ ಮಹರ್ಷಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಹಿಂತಿರುಗಿದರು. ಮನೋಹರವಾಗಿ ಅನಸೂಯ ಗಾನಮಾಡುತ್ತಿರುವುದನ್ನು ಕೇಳುತ್ತಾ, ಮಕ್ಕಳು ಮಲಗಿರುವುದನ್ನು ನೋಡಿದರು. ಅದನ್ನು ಕಂಡು ತಮ್ಮ ಗೃಹಿಣಿಯನ್ನು ತಾನು ನೋಡುತ್ತಿರುವುದೇನು ಎಂದು ಸಾದರೋಕ್ತಿಗಳಿಂದ ಪ್ರಶ್ನಿಸಿದರು. ಆಕೆ ಆರಂಭದಿಂದ ನಡೆದದ್ದೆಲ್ಲವನ್ನೂ ವಿಸ್ತಾರವಾಗಿ ಹೇಳಿದಳು. ಅದೆಲ್ಲವನ್ನೂ ಕೇಳಿದ ಅತ್ರಿ ಮಹರ್ಷಿ ಸ್ವಲ್ಪಹೊತ್ತು ಧ್ಯಾನದಲ್ಲಿದ್ದು, ತನ್ನ ತಪಃಪ್ರಭಾವದಿಂದ ಅಲ್ಲಿ ಮಲಗಿರುವ ಮಕ್ಕಳು ತ್ರಿಮೂರ್ತಿಗಳು ಎಂದು ಗುರುತಿಸಿ ಅವರಿಗೆ ನಮಸ್ಕರಿಸಿದರು. ಆ ದಂಪತಿಯರ ಅಂತರ್ಭಾವವನ್ನು ತಿಳಿದ ತ್ರಿಮೂರ್ತಿಗಳು ಪ್ರಸನ್ನರಾಗಿ ಸ್ವಸ್ವರೂಪದಿಂದ ಪ್ರತ್ಯಕ್ಷರಾದರು. ಆ ದಂಪತಿಗಳು ಹರ್ಷಿತರಾಗಿ ಅವರನ್ನು ಸ್ತೋತ್ರ ಮಾಡಿದರು. ತ್ರಿಮೂರ್ತಿಗಳು “ನಿಮ್ಮ ಭಕ್ತಿಗೆ ಮೆಚ್ಚಿಕೊಂಡಿದ್ದೇವೆ. ನಿಮ್ಮ ವಾಂಛೆಯೇನೋ ಹೇಳಿ. ನೆರವೇರಿಸುತ್ತೇವೆ.” ಎಂದರು. ಅತ್ರಿ ಮಹರ್ಷಿಯು ತನ್ನ ಪತ್ನಿಯನ್ನು ಆಕೆಗೆ ನಿನಗೇನು ಬೇಕೋ ಕೇಳಿಕೋ ಎಂದು ಅನುಮತಿ ಕೊಟ್ಟರು. ಆಕೆ, “ಸ್ವಾಮಿ, ನಿಮ್ಮ ಭಕ್ತಿ ಸಾಮರ್ಥ್ಯಗಳಿಂದಲೇ ಪ್ರಾದುರ್ಭವಿಸಿದ ಈ ಸುತಸದೃಶರನ್ನು ನಿಜಸುತರನ್ನಾಗಿ ಪಡೆಯಲು ಇಚ್ಚಿಸುತ್ತೇನೆ.” ಎಂದಳು. ಆ ಮುನಿವರ್ಯ ತನ್ನ ಪತ್ನಿಯ ಕೋರಿಕೆಗೆ ಸಮ್ಮತಿಸಿ, ತ್ರಿಮೂರ್ತಿಗಳನ್ನು ತಮ್ಮ ಸುತರಾಗಿ ಬರುವಂತೆ ಕೋರಿದನು.

“ಹೇ ಮುನೀಶ್ವರ, ನಿನ್ನ ಅಭೀಷ್ಟ ಸಿದ್ಧಿಸುತ್ತದೆ. ನಮ್ಮ ಅಂಶಗಳಿಂದ ಜನಿಸಿದ ಬಾಲರು ನಿನ್ನ ಗೃಹಕ್ಕೆ ಬರುತ್ತಾರೆ. ನಮಗೆ ಹೊರಡಲು ಅಪ್ಪಣೆ ಕೊಡು.” ಎಂದು ಹೇಳಿ, ಆ ತ್ರಿಮೂರ್ತಿಗಳು, ತಮ್ಮ ತಮ್ಮ ಧಾಮಗಳಿಗೆ ಹಿಂತಿರುಗಿದರು. ನಂತರದಲ್ಲಿ ಅತ್ರಿ ಮಹರ್ಷಿಯ ಆಶ್ರಮದಲ್ಲಿ ತ್ರಿಮೂರ್ತ್ಯಂಶರಾದ ಮೂವರು ಬಾಲರಾದರು. ಅನಸೂಯೆ ಮಾತೆಯಾಗಿ ಆ ಬಾಲರನ್ನು ಪೋಷಿಸಿ ಬೆಳೆಸಿದಳು. ಆ ಮೂವರೂ ಶ್ರೀದತ್ತ, ಚಂದ್ರ, ದೂರ್ವಾಸರೆಂಬ ನಾಮಧೇಯಗಳಿಂದ ಪ್ರಸಿದ್ಧರಾದರು.

ಪ್ರಜ್ಞಾವಂತರಾದ ಚಂದ್ರ ದೂರ್ವಾಸರು ತಮ್ಮ ಗೃಹವನ್ನು ಬಿಟ್ಟು ಹೋಗಲು ನಿಶ್ಚಯಿಸಿ, ತಮ್ಮ ಮಾತೆಯಾದ ಅನಸೂಯೆಯ ಅನುಮತಿ ಬೇಡಿದರು. ದೂರ್ವಾಸ, ” ಅಮ್ಮ, ನಾನು ತಪಸ್ಸನ್ನಾಚರಿಸುತ್ತಾ ತೀರ್ಥ ಪರ್ಯಟನೆ ಮಾಡಬೇಕೆಂದಿದ್ದೇನೆ. ಅನುಜ್ಞೆಕೊಡು.” ಎಂದು ಹೇಳಿ, ಆಕೆಯ ಅನುಜ್ಞೆ ಪಡೆದು ಹೊರಟುಹೋದನು. ಚಂದ್ರನು, “ನಾನು ಚಂದ್ರಮಂಡಲದಲ್ಲಿ ನೆಲಸುತ್ತೇನೆ. ನನ್ನ ದರ್ಶನ ನಿನಗೆ ನಿತ್ಯವೂ ಆಗುತ್ತದೆ. ದುಃಖಿಸಬೇಡ.” ಎಂದು ಹೇಳಿ, ” ಈ ಶ್ರೀದತ್ತ ತ್ರಿಮೂರ್ತಿಸ್ವರೂಪನು. ನಿಮ್ಮೊಡನೆ ಸದಾಕಾಲವೂ ಇರುತ್ತಾನೆ. ಅವನೇ ವಿಷ್ಣು ಭಗವಾನನು. ಈ ಜಗತ್ತಿನಲ್ಲಿರುವುದೆಲ್ಲವೂ ವಿಷ್ಣುಮಯವೇ! ನಿಮಗೆ ಇವನ ವಿಯೋಗವಿರುವುದಿಲ್ಲ. ನಿಮ್ಮ ಚಿತ್ತಾನುಸಾರವಾಗಿ ಶ್ರೀದತ್ತನು ನಿಮ್ಮೊಡನಿರುತ್ತಾನೆ.” ಎಂದು ಹೇಳಿ, ಚಂದ್ರನು ಮಾತೆಯ ಅಪ್ಪಣೆ ಪಡೆದು ಚಂದ್ರಮಂಡಲ ಸೇರಿದನು. ಚಂದ್ರನು ಹೇಳಿದಂತೆ ಶ್ರೀದತ್ತನು ತನ್ನ ತಾಯಿಯೊಡನೆ ಗೃಹದಲ್ಲೇ ನಿಂತನು. ಗುರುಪರಂಪರೆಯ ಮೂಲವಿದೇ!” ಎಂದು ಸಿದ್ಧಮುನಿ ನಾಮಧಾರಕನಿಗೆ ಅತ್ರಿ ವೃತ್ತಾಂತವನ್ನು ಹೇಳಿದರು.

ನಾಮಧಾರಕ ಸಿದ್ಧಮುನಿಗೆ ಸಾದರವಾಗಿ ನಮಸ್ಕರಿಸಿ, “ಯೋಗೀಶ್ವರ, ಭಕ್ತ ಮನೋಹರ, ಕೃಪಾಮೂರ್ತಿ, ಭವತಾರಕ, ಸಿದ್ಧಪುರುಷ, ನಿನಗೆ ಜಯವಾಗಲಿ. ನಿನ್ನ ಪ್ರಸಾದದಿಂದ ಅನಸೂಯ ಸಾಧ್ವಿಯ ಕಥೆ ತಿಳಿಯಿತು. ನೀನೆ ಉದ್ಧರಿಸಬಲ್ಲ ಯೋಗಿಪುಂಗವ. ನನ್ನ ಪ್ರಾರ್ಥನೆಯನ್ನು ಕೇಳು. ದತ್ತಾತ್ರೇಯರ ಅವತಾರ ಕಥೆಯನ್ನು ನನಗೆ ವಿಸ್ತಾರವಾಗಿ ಹೇಳಿದೆ. ಈ ಮಹೀತಲದಲ್ಲಿ ಶ್ರೀದತ್ತನ ಅವತಾರ ಹೇಗಾಯಿತು? ನನ್ನ ಮೇಲೆ ಪ್ರೇಮವಿಟ್ಟು ವಿಸ್ತರಿಸಿ ಹೇಳು. ತ್ರಿಮೂರ್ತ್ಯವತಾರ ಲೀಲೆಗಳನ್ನು ಎಷ್ಟು ಕೇಳಿದರೂ ಸಾಲದಲ್ಲವೇ?” ಎಂದು ಬಿನ್ನವಿಸಿಕೊಂಡನು. ಅವನ ಮಾತನ್ನು ಕೇಳಿದ ಸಿದ್ಧಮುನಿ ಮತ್ತೆ ಹೇಳಿದರು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

ಕಗ್ಗ-೮

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?

ಭ್ರಮಿಪುದೇನಾಗಾಗ ಕರ್ತೃವಿನ ಮನಸು?

ಮಮತೆಯುಳ್ಳವನಾತನಾದೊಡೀ ಜೀವಗಳು

ಶ್ರಮಪಡುವುದೇಕಿಂತು -ಮಂಕುತಿಮ್ಮ ?

ಕ್ರಮವು ಒಂದು ಲಕ್ಷ್ಯವು ಒಂದು ಉಂಟೇನು ಸೃಷ್ಟಿಯಲಿ ಭ್ರಮಿಪುದು ಅದೇನು ಆಗಾಗ ಕರ್ತೃವಿನ ಮನಸು

ಮಮತೆಯುಳ್ಳವನು ಆತನು ಆದೊಡೆ ಜೀವಗಳು ಶ್ರಮಪದುವುದೇಕೆ ಇಂತು – ಮಂಕುತಿಮ್ಮ

ಕ್ರಮವು= ರೀತಿ, ಲಕ್ಷ್ಯವು = ಗುರಿ(purpose ), ಭ್ರಮಿಪುದು = ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,

ಕರ್ತೃ= ಜಗತ್ತನ್ನು ಸೃಷ್ಟಿದವ , ಆದೊಡೆ= ಆದರೆ, ಶ್ರಮ = ಕಷ್ಟ .

ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ

” ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ?

ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?

ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿ ಕಾಲಗಳು. ಬೆಳೆಗಳು, ಹೂ, ಹಣ್ಣುಗಳಿಗೂ ಒಂದೊಂದು ಕಾಲ.

ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ- ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿಧ್ಯಮಾನಗಳು ನಡೆಯುವಾಗ , ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ. ಯವರು ಕೇಳುತ್ತಾರೆ.

ಆದರೆ ಈ ಜಗತ್ತಿನಲ್ಲಿ ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ.

ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು ” ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ” ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. ” ಪ್ರತಿ ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ ” ಎಂದಾದರೆ ಇಲ್ಲಿ, ಪರಮಾತ್ಮನ ಪ್ರಮೇಯ ಕಡಿಮೆ. ಆದರೆ “ಇದೋ” ಅಥವಾ “ಅದೋ” ಎನ್ನುವ ದ್ವಂದ್ವ ಸಹ ಸದಾ ಮಹಾ ಮಹಾ ಪಂಡಿತರನ್ನೇ ಕಾಡಿದೆ, ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ.

ಈ ಕಗ್ಗಕ್ಕೆ ಮತ್ತು ಈ ಕಗ್ಗದ ಹಿಂದಿನ ನಾಲ್ಕು ಕಗ್ಗಗಳಿಗೂ ಮತ್ತು ಮುಂದೆ ಬರುವ ಕಗ್ಗಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು ಪ್ರಕಟಿಸಿದ್ದು ೧೯೪೨ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ ೨ನೆ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಬಡತನ ಆಹಾರದ ಕೊರತೆ, ರೋಗ ರುಜಿನಗಳ ಮಹಾಪೂರ ಹೀಗೆ ಹತ್ತು ಹಲವಾರು ಪ್ರಕೊಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ ಡಿ.ವಿ.ಜಿ. ಯವರು ಅಂದಿನ ಪರಿಸ್ತಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.

ಆದರೆ ವಾಚಕ ಮಿತ್ರರೇ, ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ ದೇಶಗಳನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿ ಸಂತೋಷದಲಿ ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ.

ಹಾಗಾಗಿ ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ ವಿಚಾರದ ಓರಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೭

ಕಗ್ಗ-೭

ಬದುಕಿಗಾರ್ ನಾಯಕರು, ಏಕನೋ ಅನೇಕರೋ?

ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?

ಕುದುರುವುದೆಂತು ಈಯವ್ಯವಸ್ಥೆಯ ಪಾಡು?

ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ ||

ಬದುಕಿಗಾರ್= ಬದುಕಿಗೆ=ಯಾರ್, ಧರುಮವೋ= ಧರ್ಮವೋ, ಅಂಧಬಲವೋ= ಅಂಧ ಶ್ರದ್ಧೆಯೋ, ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ.

ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.

ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. ” ಕಿಮೇಕಂ ದೈವತಂ ಲೋಕೆ? ಕಿಂ ವಾಪ್ಯೇಕಂ ಪರಾಯಣಂ? ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ ? ಕಿಂ ಜಪನ್ಮುಚ್ಯತೇರ್ಜ೦ತುರ್ ಜನ್ಮ ಸಂಸಾರ ಬಂಧನಾತ್ ” ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ ಎಂತಹ ಸಂದೇಹಗಳು ಬರಬೇಕು ಹೇಳಿ? ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು ಸುಲಭವೇ?

ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ ಅಥವಾ ಅಮೂರ್ಥನೆ ಅಂದರೆ ಆಕಾರ ಉಂಟೆ ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೆ ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಕ್ಯಾನ ಮಾಡಿದ್ದಾರೆ .ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ ಭಿನ್ನ ಮತಗಳು. ಅಂತ ಧರ್ಮವೇ ಈ ಜಗತ್ತಿನ ನಾಯಕನೇ ? ವಿಧಿ ಎಂದರೆ ಪೂರ್ವ ನಿಯಮಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ಬಗೆ. ಹಣೆಯ ಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ ? ಯಾವುದಾದರೂ ಆಗಲಿ ಅಥವಾ ಇರಲಿ, ಈ ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನುಎಂದರೆ ಹಣೆಬರಹವನ್ನೇ ನಂಬುವ ಮತ್ತು ತಮ್ಮ ಸ್ವಶಕ್ತಿಯನ್ನೇ ನಂಬುವ ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ. ಕಾರಣವೇ ತಿಳಿಯದ, ಈಜಗತ್ತಿನ ಅಸಮಾನತೆ ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ ಇದು ಏಕೆ ಹೀಗೆ, ಇದು ಸರಿಯಾಗುವುದೋ ಇಲ್ಲವೋ ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

ಇಂತಹ ಸಂದೇಹಗಳು ನಮ್ಮ ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೬

ಕಗ್ಗ-೬

ಒಗಟೆಯೇನೀ ಸೃಷ್ಟಿ? ಬಾಳಿನರ್ಥವೇನು ?
ಬಗೆದು ಬಿಡಿಸುವರಾರು ಸೋಜಿಗವನಿದನು ?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ ? – ಮಂಕುತಿಮ್ಮ

ಒಗಟೆಯೇನೀ (ಒಗಟೇ+ ಏನು+ ಈ) ಸೃಷ್ಟಿ? ಬಾಳಿನ ಅರ್ಥವೇನು. ಬಗೆ ಬಿಡಿಸುವವರು ಯಾರು ಸೋಜಿಗವ ಇದನು.
ಜಗವ ನಿರವಿಸಿದ ( ನಿರ್ಮಿಸಿದ) ಕೈ ಒಂದು ಆಡೋದೇ ( ಆದರೆ ) ಏಕೆ ಇಂತು( ಹೀಗೆ) ಬಗೆ ಬಗೆಯ ಜೀವಗತಿ – ಮಂಕುತಿಮ್ಮ.

ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ ?
ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.

ಎಲ್ಲ ಜೀವಿಗಳಲ್ಲೂ ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ.
ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ದೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ.

ಆದರೂ ಏನಿದು ಪ್ರಪಂಚ ಎಂಬ ಪ್ರಶ್ನೆ ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಗಂಟಾದರೆ ಯಾರಾದರೂ ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.
ಈ ಜಗತ್ತನ್ನು ನಿರ್ಮಿಸದ ಅಥವಾ ಸೃಷ್ಟಿಸಿದ “ಕೈ” ಒಂದೇ ಎಂದಾದರೆ, ವಿಧವಿದವಾದ ಅಸಮತೆಯಿಂದ ಏಕೆ ಕೂಡಿದೆ ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ ಅಲ್ಲವೇ, ಹಾಗೆಯೆ ಇದೆ ಈ ಕಗ್ಗದ ಭಾವ.

ನಾ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಚೇಧಿಸಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ ಒಂದೊಂದು ರೂಪದಲ್ಲಿ ಕಾಣುವ ಈ ಜಗತ್ತಿನ ನಿಜ ರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುಧ್ಧಿಗಳಿದ್ದಂತೆ ಮತ್ತೊಬ್ಬರದ್ದಿಲ್ಲ. ಅವರವರ ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ.

ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬನ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು.ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೆ ಅಲ್ಲ ಸಕಲ ಪ್ರಾಣಿಗಳಿಗೂ ಅನ್ವಯಿಸಿದ್ದತೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು, ಬದುಕಗಳ ಮಧ್ಯದಲ್ಲಿನರಳುವಾಗ , ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ ಹೇ! ಪರಮಾತ್ಮ ಏನಿದು ಈ ಜೇವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ.ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ತಿತಿ.

ಅಷ್ಟೇ ಅಲ್ಲ ಇಂದು ಸುಖ ನಾಳೆ ದುಖ, ಇಂದು ಆರೋಗ್ಯ ನಾಳೆ ಅನಾರೋಗ್ಯ, ಇಂದು ಮಿತ್ರ ನಾಳೆ ಶತ್ರು, ಇಂದು ಸಂತೋಷ ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ? ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ? ವಿಧಾತನೆಷ್ಟು ಕಾರಣ? ಹೇಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈ ಆರನೆಯ ಕಗ್ಗ. ಈ ಕಗ್ಗದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲ ದಿರಬಹುದು.

Leave a comment

Filed under ಕಗ್ಗದ ಹುಗ್ಗಿ

ಶ್ರೀ ಗುರು ಚರಿತ್ರೆ (ಅಧ್ಯಾಯ -೨)

ಶ್ರೀ ಗುರು ಚರಿತ್ರೆ – ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ|| ||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||
||ಶ್ರೀಗುರುಭ್ಯೋನಮಃ||

ಕೃಷ್ಣಾತೀರದಲ್ಲಿ ತ್ರಿಮೂರ್ತಿ ರಾಜನಾದ, ಜನ್ಮ ರಹಿತನಾದ ನಮ್ಮ ಗುರುದೇವನು ಕಾಂತಿಗೋಳದಲ್ಲಿ ರಾರಾಜಿಸುತಿದ್ದಾನೆ. ಅಲ್ಲಿನ ಭಕ್ತರು ಆತನ ಆನಂದ ಲೀಲೆಗಳನ್ನು ಅನುಭವಿಸುತ್ತಿದ್ದಾರೆ. ಭಕ್ತರಲ್ಲದ ಸುರರೂ ಕೂಡಾ ಅಂತಹ ಲೀಲೆಗಳನ್ನು ಸ್ವರ್ಗದಲ್ಲಿ ಅನುಭವಿಸಬೇಕೆಂದು ಕೋರಿಕೊಳ್ಳುತ್ತಿದ್ದಾರೆ.

ಖಿನ್ನನಾಗಿದ್ದ ನಾಮಧಾರಕನು ಗುರುಲೀಲೆಗಳನ್ನು ಧ್ಯಾನಮಾಡಿಕೊಂಡು ಹೋಗುತ್ತಾ, ದಾರಿಯಲ್ಲಿ ಬಳಲಿದವನಾಗಿ, ಒಂದು ವೃಕ್ಷಮೂಲದಲ್ಲಿ ಕುಳಿತು ಮೂರ್ಛೆಗೊಂಡವನಾಗಿ ನಿದ್ರಾವಶನಾದನು. ನಿದ್ರೆಯಲ್ಲೂ ಕೂಡಾ ಅವನು ಗುರುಧ್ಯಾನವನ್ನೇ ಮಾಡುತ್ತಿದ್ದನು. ಹಾಗೆ ಧ್ಯಾನಮಗ್ನನಾದ ಅವನಿಗೆ ದಯಾಪೂರ್ಣನೂ. ಅನಂತನೂ ಆದ ಆ ಶ್ರೀ ಗುರುವು ಸ್ವಪ್ನದಲ್ಲಿ ತನ್ನ ಸ್ವರೂಪವಾದ ಭಸ್ಮೋದ್ಧೂಳಿತ ಶರೀರ, ಜಟಾಧಾರಿ, ವ್ಯಾಘ್ರಚರ್ಮಾಂಬರಧಾರಿಯಾಗಿ ದರ್ಶನವಿತ್ತನು. ನಾಮಧಾರಕನಿಗೆ ಲಲಾಟದಲ್ಲಿ ಭಸ್ಮವನ್ನಿಟ್ಟು, ಅವನನ್ನು ಆದರಿಸಿ, ಅವನ ತಲೆಯಮೇಲೆ ತನ್ನ ಅಭಯಹಸ್ತವನ್ನಿಟ್ಟನು. ಇಂತಹ ಅಪರೂಪ ಸ್ವಪ್ನವನ್ನು ಕಂಡ ನಾಮಾಧಾರಕ ಎಚ್ಚರಗೊಂಡು, ಸುತ್ತಲೂ ನೋಡುತ್ತಾ ಏನನ್ನೂ ಕಾಣದೆ ಆಶ್ಚರ್ಯಗೊಂಡನು.

ಆ ಸ್ವಪ್ನದಲ್ಲಿ ಕಂಡ ಆ ಮೂರ್ತಿಯನ್ನೇ ನೆನಸಿಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿದ್ದ ನಾಮಧಾರಕನಿಗೆ ಅಂತಹ ಮೂರ್ತಿಯೇ ಪ್ರತ್ಯಕ್ಷವಾಗಿ ಎದುರಿಗೆ ಕಾಣಿಸಿಕೊಂಡನು. ಯೋಗೀಶ್ವರನಾದ ಅವನನ್ನು ಕಂಡ ನಾಮಧಾರಕ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅತನ ಚರಣಗಳಲ್ಲಿ ಮಸ್ತಕವನ್ನಿಟ್ಟು, ” ಹೇ ಕೃಪಾಸಾಗರ, ಕೃಪೆಮಾಡು. ನೀನೇ ನನ್ನ ತಾಯಿ ತಂದೆ. ಹೇ ಯೋಗಾಧೀಶ ನಿನಗೆ ಜಯವಾಗಲಿ. ಅಜ್ಞಾನವೆನ್ನುವ ಕತ್ತಲನ್ನು ಹೊರದೂಡುವವನು ನೀನೇ! ಆತ್ಮಜ್ಯೋತಿಯು. ಸ್ವಪ್ರಕಾಶನು. ಸಿದ್ಧಯೋಗಿಯು. ಕೃಪಾನಿಧಿ. ನಿನ್ನ ದರ್ಶನಮಾತ್ರದಿಂದಲೇ ನನ್ನ ದುರಿತಗಳೆಲ್ಲವೂ ಮಾಯವಾಗಿ ಹೋದವು. ನೀನೇ ನನ್ನನ್ನು ಉದ್ಧರಿಸಬಲ್ಲವನು. ಹೇ ಸ್ವಾಮಿ, ನನ್ನ ಕಷ್ಟಕಾಲದಲ್ಲಿ ಕೃಪೆಯಿಟ್ಟು ಈ ದೀನನಾದ ಭಕ್ತನನ್ನು ಕಾಣಲು ಬಂದಿದ್ದೀಯೆ. ನಿನ್ನ ಹೆಸರೇನು? ನಿನ್ನ ನಿವಾಸವೆಲ್ಲಿ? ಎಲ್ಲವನ್ನೂ ದಯೆಯಿಟ್ಟು ಹೇಳು.” ಎಂದು ಪ್ರಾರ್ಥಿಸಿದನು.

ಆ ಯೋಗೀಶ್ವರ ನಾಮಧಾರಕನಿಗೆ ” ಅಯ್ಯಾ ನಾನು ಸಿದ್ಧನು. ಯೋಗಿ. ಭೂಲೋಕದಲ್ಲಿ ಆಸಕ್ತಿಯಿಂದ ತೀರ್ಥಾಟನೆಗಳನ್ನು ಮಾಡುತ್ತಿದ್ದೇನೆ. ನಮ್ಮ ಗುರುವು ಪ್ರಸಿದ್ಧರಾದ ಶ್ರೀ ನೃಸಿಂಹ ಸರಸ್ವತಿಯವರು. ಭೀಮಾ ಅಮರಜಾ ನದಿಗಳ ಸಂಗಮಸ್ಥಾನದಲ್ಲಿ ಗಂಧರ್ವನಗರವಿದೆ. ಅದು ತ್ರಿಮೂರ್ತಿಸ್ವರೂಪನಾದ ಶ್ರೀ ನೃಸಿಂಹ ಸರಸ್ವತಿಯವರ ನಿವಾಸ ಸ್ಥಾನವು. ಭಕ್ತರ ರಕ್ಷಣೆಗೆಂದು ತ್ರಿಮೂರ್ತಿಗಳ ಅವತಾರವಾಗಿ ಅಲ್ಲಿ ಆತ ನೆಲಸಿದ್ದಾರೆ. ಲೋಕದಲ್ಲಿನ ಯೋಗಿಗಳೆಲ್ಲರೂ ಭವಸಾಗರವನ್ನು ದಾಟುವಂತೆ ಮಾಡುವ ಆ ಸ್ವಾಮಿಯನ್ನೇ ಸದಾ ಧ್ಯಾನಮಾಡುತ್ತಿರುತ್ತಾರೆ. ಆ ಸದ್ಗುರುವು ಕೃಪಾಸಾಗರನು. ಭಕ್ತರಿಗೆ ಸದಾ ವರದಾತನು. ಅವರಿಗೆ ಸರ್ವ ಸೌಖ್ಯಗಳನ್ನೂ, ಸಂಪದಗಳನ್ನೂ, ಸಂತೋಷವನ್ನೂ ಆತ ಪ್ರಸಾದಿಸುತ್ತಾನೆ. ಆ ಸ್ವಾಮಿಯ ಭಕ್ತರಿಗೆ ದೈನ್ಯವೆಂಬುದಿರುವುದಿಲ್ಲ. ಗೋ ಧನ ಧಾನ್ಯಾದಿಗಳಿಂದ ಕೂಡಿ ಸಂಪದ್ಭರಿತರಾಗಿರುತ್ತಾರೆ. ಅಷ್ಟಸಿದ್ಧಿಗಳಿಂದ ಕೂಡಿ ಅವರು ಸಂತುಷ್ಟರಾಗಿರುತ್ತಾರೆ.” ಎಂದು ತಮ್ಮ ಗುರುವಿಗೆ ಗೌರವವನ್ನು ಸೂಚಿಸುತ್ತಾ ಹೇಳಿದರು.

ಆ ಮಾತುಗಳನ್ನು ಕೇಳಿದ ನಾಮಧಾರಕ, “ಸ್ವಾಮಿ, ನಾನು ಸದಾಕಾಲವೂ ಆ ಗುರುವನ್ನೇ ಧ್ಯಾನಿಸುತ್ತಾ ಇರುತ್ತೇನೆ. ಗುರುವಿನ ಬಿರುದಾವಳಿಗಳನ್ನೂ ಕೀರ್ತಿಯನ್ನೂ ಬಹಳವಾಗಿ ಕೇಳಿದ್ದೇನೆ. ಅವರಲ್ಲಿ ಪರಂಪರೆಯಾಗಿ ಬಂದಿರುವ ಭಕ್ತಿಯಿಂದ ಕೂಡಿರುವ, ಕಷ್ಟಕೋಟಲೆಗಳಲ್ಲಿ ಸಿಕ್ಕಿಕೊಂಡಿರುವ ನನ್ನ ಮೇಲೆ ಏಕೆ ಆ ಗುರುವಿನ ಅನುಗ್ರಹ ಇನ್ನೂ ಆಗಿಲ್ಲ ಎಂಬುದನ್ನು ನಿಶ್ಚಿತವಾಗಿ ಹೇಳಿ.” ಎಂದು ಕೇಳಿಕೊಂಡನು. ಅದಕ್ಕೆ ಸಿದ್ಧರು, “ಹೇ ಬ್ರಾಹ್ಮಣ, ಸಾವಧಾನದಿಂದ ಲಾಲಿಸು. ಸದ್ಗುರುವು ಭಕ್ತವತ್ಸಲನು. ಆ ಸ್ವಾಮಿಯ ಕೃಪೆಯನ್ನು ವಿಸ್ತರಿಸಿ ಹೇಳುತ್ತೇನೆ. ಸ್ವಾಮಿಯ ದಯೆಯಿದ್ದವರಿಗೆ ದೈನ್ಯವೆಂಬುದು ಇರುವುದಿಲ್ಲ. ಅವರ ವಂಶದಲ್ಲಿಯೇ ದೈನ್ಯವು ಕಾಣಬರುವುದಿಲ್ಲ. ಅಂತಹವನಿಗೆ ದೇವತೆಗಳೂ ವಶರಾಗಿರುತ್ತಾರೆ. ಅವನು ಕಲಿಕಾಲವನ್ನು ಜಯಿಸುತ್ತಾನೆ. ಅಂತಹ ಗುರುವನ್ನು ಪೂಜಿಸಿಯೂ ನೀನು ದೈನ್ಯವೆಂದೇಕೆ ಹೇಳುತ್ತಿದ್ದೀಯೆ? ನಿನ್ನ ಮನಸ್ಸು ಸಂಶಯಾತ್ಮಕವಾಗಿದೆ ಎನ್ನಿಸುತ್ತದೆ. ಅದರಿಂದಲೇ ನಿನಗೆ ಈ ಕಷ್ಟಗಳು ಉಂಟಾಗಿವೆ. ಶ್ರೀ ಗುರುವೇ ತ್ರಿಮೂರ್ತಿಯೆಂದು ಶ್ರದ್ಧೆಯಿಟ್ಟವನಿಗೆ ಇಷ್ಟಪ್ರಾಪ್ತಿಯಾಗುವುದು. ಗುರುವಿನಲ್ಲೇ ಮನಸ್ಸನ್ನು ನಿಲ್ಲಿಸಿದ ಭಕ್ತನಿಗೆ ಶ್ರೀಗುರುವು ಸಕಲ ವರಗಳನ್ನೂ ತಪ್ಪದೇ ದಯಪಾಲಿಸುತ್ತಾನೆ. ಮಹಾವಿಷ್ಣು ಮಹೇಶ್ವರರು ಭಕ್ತನಮೇಲೆ ಕೃದ್ಧರಾದರೂ ತನಗೆ ಸನ್ನಿಹಿತನಾದ ಭಕ್ತನನ್ನು ಶ್ರೀ ಗುರುವು ತಪ್ಪದೇ ರಕ್ಷಿಸುತ್ತಾನೆ. ಆದರೆ ಶ್ರೀ ಗುರುವು ಯಾರಲ್ಲಿ ಕೃದ್ಧನಾಗುತ್ತಾನೋ ಅವನನ್ನು ಹರಿ ಹರರೂ ರಕ್ಷಿಸಲಾರರು.” ಎಂದು ಖಂಡಿತವಾಗಿ ನುಡಿದರು.

ಅವರ ಮಾತುಗಳನ್ನು ಕೇಳಿದ ನಾಮಧಾರಕ, ಅವರ ಚರಣಗಳನ್ನು ಹಿಡಿದು, ನಮಸ್ಕರಿಸಿ, ವಿನಯದಿಂದ, “ಸ್ವಾಮಿ, ನಿಮ್ಮ ಈ ಮಾತುಗಳನ್ನು ಕೇಳಿದ ನನಗೆ ಇನ್ನೊಂದು ಸಂದೇಹ ಉಂಟಾಗುತ್ತಿದೆ. ಶ್ರೀ ಗುರುವು ತ್ರಿಮೂರ್ತಿ ಸ್ವರೂಪನು ಹೇಗಾದನು? ಬ್ರಹ್ಮ ವಿಷ್ಣು ಮಹೇಶ್ವರರೇ ಶ್ರೀ ಗುರುವು ಎನ್ನುವುದು ಎಷ್ಟು ಸಮಂಜಸವಾದುದು? ದೇವರು ಕೋಪಿಸಿಕೊಂಡಾಗ ಗುರುವು ರಕ್ಷಿಸುತ್ತಾನೆ. ಆದರೆ ಗುರುವೇ ಕೋಪಿಸಿಕೊಂಡರೆ ರಕ್ಷಿಸುವವರು ಯಾರೂ ಇಲ್ಲವೇ? ಇಂತಹ ಮಾತುಗಳನ್ನು ಯಾರು ಹೇಳಿದರು? ಎಂಬುದನ್ನು ತಿಳಿಸಿ, ಡೋಲಾಯಮಾನವಾಗಿರುವ ನನ್ನ ಮನಸ್ಸನ್ನು ಸ್ಥಿರಗೊಳಿಸಿ.” ಎಂದು ಪ್ರಾರ್ಥಿಸಿದನು.

ಆಗ ಕೃಪಾಮೂರ್ತಿಯಾದ ಆ ಸಿದ್ಧಮುನಿಯು, ನಾಮಧಾರಕನ ಮಾತುಗಳನ್ನು ಪ್ರಶಂಸಿಸಿ, “ಅಯ್ಯಾ, ಬುದ್ಧಿವಂತನೆ, ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು. ಈ ವಿಷಯದಲ್ಲಿ ವೇದವಾಕ್ಯಗಳೇ ಪ್ರಮಾಣವು. ಆರಂಭದಿಂದ ಹೇಳುತ್ತೇನೆ. ಶ್ರೀ ಮಹಾವಿಷ್ಣುವಿನ ನಾಭಿಯಿಂದ ಚತುರಾನನನಾದ ಬ್ರಹ್ಮನು ಹುಟ್ಟಿದನು. ಆ ಬ್ರಹ್ಮನ ಮುಖದಿಂದ ಚತುರ್ವೇದಗಳು ಹೊರಬಂದವು. ನಂತರ ಪುರಾಣಗಳು ಬಂದವು. ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮ ವೈವರ್ತ ಪುರಾಣವೆನ್ನುವುದು ಬಹು ವಿಸ್ತಾರವಾಗಿದೆ. ಇದು ಲೋಕ ಪ್ರಸಿದ್ಧವಾದದ್ದು. ದ್ವಾಪರ ಯುಗಾಂತದಲ್ಲಿ ಮಹಾವಿಷ್ಣುವೇ ವ್ಯಾಸನಾಗಿ ಭೂಲೋಕದಲ್ಲಿನ ಜನರೆಲ್ಲರಿಗೂ ಶುಭವಾಗಲೆಂಬ ಸುಯೋಚನೆಯಿಂದ ಪುರಾಣಗಳೆಲ್ಲವನ್ನೂ ಪ್ರಕಾಶಗೊಳಿಸಿದನು. ಅವು ವ್ಯಾಸನ ಶಿಷ್ಯರ ಮೂಲಕ ಈ ಲೋಕದಲ್ಲಿ ಪ್ರಚಾರಗೊಂಡವು. ಆ ಪುರಾಣಗಳಲ್ಲಿನ ಕಥೆಯೊಂದನ್ನು ನನಗೆ ತಿಳಿದಮಟ್ಟಿಗೆ ನಿನಗೆ ಹೇಳುವೆನು.

ಲೋಕೇಶ್ವರನಾದ ಬ್ರಹ್ಮನನ್ನು ಗುರುಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಕಲಿ ಒಂದುಸಲ ಕೇಳಿದನು. ಆಗ ಬ್ರಹ್ಮನು ಅವನಿಗೆ ಗುರು ಮಹಿಮೆಯನ್ನು ಹೇಳಿದನು.” ಎಂದು ಹೇಳಲು, ಮತ್ತೆ ನಾಮಧಾರಕ ಸಿದ್ಧನಿಗೆ ನಮಸ್ಕರಿಸಿ ವಿನಮ್ರನಾಗಿ ಕೇಳಿದನು. “ಮಹಾಯೋಗಿ, ಸಿದ್ಧಪುರುಷ, ನಿನಗೆ ಜಯವಾಗಲಿ. ಅಂಧಕಾರವನ್ನು ಹೊಡೆದೋಡಿಸುವ ಸೂರ್ಯನಂತಹವನು ನೀನು. ಕೃಪಾಸಾಗರ. ಸಂಸಾರ ಸಾಗರವನ್ನು ದಾಟಿಸುವವನು. ಬ್ರಹ್ಮದೇವನು ಕಲಿಗೆ ಗುರುಮಹಿಮೆಯನ್ನು ತಿಳಿಸಬೇಕಾಗಿ ಬಂದ ಸಂದರ್ಭವನ್ನು ವಿಶದವಾಗಿ ತಿಳಿಸು.” ಅದಕ್ಕೆ ಸಿದ್ಧಮುನಿ, “ಬ್ರಹ್ಮ ಶಯನಕಾಲದಲ್ಲಿ ಅವ್ಯಕ್ತವನ್ನು ಸೇರುತ್ತಾನೆ. ಅದು ಅವನಿಗೆ ರಾತ್ರಿ. ಆ ಅವ್ಯಕ್ತ ನಿಮಿತ್ತವಾಗಿ ಉಂಟಾದ ಕಲ್ಪವನ್ನು ನೈಮಿತ್ತಿಕ ಕಲ್ಪ ಎನ್ನುತ್ತಾರೆ. ಆಗ ಕಲ್ಪಸಾಗರದಲ್ಲಿ ವಿಷ್ಣುವು ವಟಪತ್ರ ಶಾಯಿಯಾಗಿ ಇರುತ್ತಾನೆ. ಅವ್ಯಕ್ತ ಮೂರ್ತಿಯಾದ ವಿಷ್ಣುವು ವರಾಹಕಲ್ಪದಲ್ಲಿ, ಕರ್ಮಫಲಭೋಗಕ್ಕಾಗಿ ಬ್ರಹ್ಮನಲ್ಲಿ ಲಯವಾಗಿದ್ದ ಜೀವಿಗಳ ಸೃಷ್ಟಿಯನ್ನು ಮತ್ತೆ ಪ್ರಾರಂಭಿಸುತ್ತಾನೆ. ಆದ್ದರಿಂದ ಸೃಷ್ಟಿಕಾರ್ಯವನ್ನು ಪ್ರಾರಂಭಿಸಲು ತನ್ನ ಯೋಗನಿದ್ರೆಯನ್ನು ಬಿಟ್ಟೇಳುತ್ತಾನೆ. ಹಿಂದಿನ ಸೃಷ್ಟಿಯನ್ನು ತಿಳಿದವನಾದದ್ದರಿಂದ ಮತ್ತೆ ಸೃಷ್ಟಿಕಾರ್ಯಾರಂಭಮಾಡುವ ಮನಸ್ಸಿನಿಂದ ನಾಭಿಕಮಲವನ್ನು ವಿಕಸಿತಗೊಳಿಸಿದನು. ಅದರಿಂದ ಉದ್ಭವಿಸಿದ ಬ್ರಹ್ಮನು ನಾಲ್ಕೂ ದಿಕ್ಕುಗಳನ್ನು ನೋಡುತ್ತಾ ಸಂಕಲ್ಪ ಮಾಡಿದುದರಿಂದ ಚತುರ್ಮುಖನಾದನು. ಆ ಚತುರ್ಮುಖನಾದ ಬ್ರಹ್ಮ ತನ್ನಲ್ಲಿಯೇ ಯೋಚಿಸಿದನು. ” ನನಗಿಂತ ಬಲವಾದವರು ಯಾರಿದ್ದಾರೆ? ಇಲ್ಲಿ ಯಾರೂ ಕಾಣುವುದಿಲ್ಲ. ಆದ್ದರಿಂದ ನಾನೇ ಸರ್ವ ಸಮರ್ಥನು. ನಾನೇ ಬಲವಂತನು.” ತತ್ಕ್ಷಣವೇ ನಾರಾಯಣನು ಗಹಗಹಿಸಿ ನಕ್ಕು ಹೇಳಿದನು. “ನಾನು ಮಹಾವಿಷ್ಣುವು. ನಿನ್ನ ತಂದೆ. ನನ್ನನ್ನು ಭಜಿಸು.” ವಿಷ್ಣುವಿನ ಆ ಮಾತುಗಳನ್ನು ಕೇಳಿದ ಬ್ರಹ್ಮ, ಅವನನ್ನು ಕಂಡು, ನಮಸ್ಕರಿಸಿ ಸ್ತುತಿಸಿದನು. ಅವನ ಸ್ತುತಿಗೆ ಸಂತುಷ್ಟನಾದ ವಿಷ್ಣುವು ಅವನನ್ನು ಕುರಿತು, “ಮಗನೆ, ನನ್ನ ಆಜ್ಞೆಯಂತೆ ಸೃಷ್ಟಿಕಾರ್ಯಾರಂಭ ಮಾಡು.” ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಬ್ರಹ್ಮ, “ತಂದೆಯೇ, ಸೃಷ್ಟಿರಚನಾವಿಧಾನಗಳು ನನಗೆ ತಿಳಿಯದು. ನಾನು ಇದುವರೆಗೂ ಸೃಷ್ಟಿರಚನಾ ರೀತಿಯನ್ನು ನೋಡಿಲ್ಲ.” ಎಂದನು. ಅದಕ್ಕೆ ವಿಷ್ಣುವು ಅವನ ಸ್ಪಷ್ಟ ಮಾತುಗಳಿಂದ ಸಂತೋಷಗೊಂಡು, “ವೇದಗಳನ್ನು ಗ್ರಹಿಸಿ, ಅದರಲ್ಲಿ ಹೇಳಿರುವ ರೀತಿಯಲ್ಲಿ ಸೃಷ್ಟಿಮಾಡು. ವೇದಗಳಲ್ಲಿ ಸೃಷ್ಟಿರಚನಾವಿಧಾನಗಳೆಲ್ಲಾ ಇವೆ. ಅದನ್ನು ಸರಿಯಾಗಿ ತಿಳಿದು ಅದರಂತೆ ಸಕಲ ಸೃಷ್ಟಿಯನ್ನೂ ಮಾಡು. ವೇದಗಳು ಅನಾದಿಯಾದವು. ಸೃಷ್ಟಿಗೆ ಮಾರ್ಗದರ್ಶಕವಾದವು. ಕನ್ನಡಿಯಂತೆ ಎಲ್ಲವನ್ನೂ ಸ್ಪಷ್ಟವಾಗಿ ತೋರಿಸಬಲ್ಲವು. ಹಾಗೆ ವೇದೋಕ್ತವಾದ ರೀತಿಯಲ್ಲಿ ಅವಿಶ್ರಾಂತನಾಗಿ, ಸೃಷ್ಟಿಕಾರ್ಯವನ್ನು ನೆರವೇರಿಸು.” ಎಂದನು.

ಅದರಂತೆ ಬ್ರಹ್ಮನು, ಪ್ರಜೆಗಳನ್ನೂ, ಸಕಲ ಚರಾಚರಗಳನ್ನು ಸೃಷ್ಟಿಸಿದನು. ಉದ್ಭಿಜ, ಅಂಡಜ, ಸ್ವೇದಜ, ಜರಾಯುಜಗಳನ್ನೆಲ್ಲಾ ಅಶೇಷವಾಗಿ ಸೃಷ್ಟಿಸಿದನು. ವ್ಯಾಸಮುನಿಯು ವರ್ಣಿಸಿದಂತೆ ಈ ತ್ರಿಲೋಕಗಳೂ ಈಶ್ವರಶಕ್ತಿಯಿಂದ ಕೂಡಿ ಏರ್ಪಾಡಾಗಿವೆ. ನಾರಾಯಣನೇ ವೇದವ್ಯಾಸನಾಗಿ, ಅಷ್ಟಾದಶ ಪುರಾಣಗಳು ಭೂತಲದಲ್ಲಿ ವಿಸ್ತರಿಸುವಂತೆ ಮಾಡಿದನು. ಆ ಪುರಾಣಗಳಲ್ಲಿ ಬ್ರಹ್ಮವೈವರ್ತ ಪುರಾಣವನ್ನು ಸೂತನು ಶೌನಕಾದಿ ಮುನಿಗಳಿಗೆ ಹೇಳಿದನು. ಅದರಲ್ಲಿ ಸದ್ಗುರುವಿನ ಕಥೆ ಅಡಕವಾಗಿದೆ. ಬ್ರಹ್ಮನಿಷ್ಠರಾದ ಸನಕಾದಿಗಳನ್ನೂ, ಸೃಷ್ಟಿವರ್ಧಕರಾದ ಮರೀಚಾದಿಗಳನ್ನು ಚತುರ್ಮುಖನು ಮನಸ್ಸಂಕಲ್ಪದಿಂದ ಸೃಷ್ಟಿಸಿದನು. ಅನಂತರ ದ್ರುಹಿಣನು ಸುರಾಸುರರನ್ನು ಸೃಷ್ಟಿಸಿದನು. ತಮ್ಮ ತಮ್ಮ ವರ್ಣಾಶ್ರಮಧರ್ಮಗಳಲ್ಲಿ ಆಸಕ್ತರಾದ ಬ್ರಾಹ್ಮಣಾದಿಗಳನ್ನು ಬ್ರಹ್ಮ ಸೃಷ್ಟಿಸಿದನು. ಅದ್ದಮೇಲ್ವೆ ಬ್ರಹ್ಮ ಕೃತ, ದ್ವಾಪರ, ತ್ರೇತಾ, ಕಲಿ ಯುಗಗಳನ್ನು ಸೃಷ್ಟಿಮಾಡಿ ಅವರನ್ನು ಒಬ್ಬೊಬ್ಬರಾಗಿ ಕರೆದು ಅವರಿಗೆ ಹೇಳಿದನು. “ನನ್ನ ಆಜ್ಞೆಯಂತೆ ನೀವು ಭೂಲೋಕವನ್ನು ಸೇರಿ ಅಲ್ಲಿ ನಿಮ್ಮ ನಿಮ್ಮ ಗುಣಗಳನ್ನು ಪ್ರಕಟಗೊಳಿಸಿ.” ಅವರಲ್ಲಿ ಸತ್ಯನಿಷ್ಠವಾದ ಕೃತಯುಗವು ಮೊದಲು ಭೂಲೋಕವನ್ನು ಸೇರಲು ಅಣಿಯಾಯಿತು.

ಕೃತಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಅದರ ಬಳಿ ಅಸತ್ಯವೆನ್ನುವುದು ಯಾವಾಗಲೂ ಇರುವುದಿಲ್ಲ. ವೈರಾಗ್ಯದಿಂದ ಕೂಡಿರುತ್ತದೆ. ಯಜ್ಞೋಪವೀತವೇ ಆಭರಣವಾಗಿ, ಅಕ್ಷಮಾಲೆ ಕೈಕಂಕಣವಾಗಿರುವ ಕೃತಯುಗ, ತನ್ನ ಪೂರ್ವ ಶರೀರವನ್ನು ಧರಿಸಿ, ಭೂಲೋಕವನ್ನು ಸೇರುವ ಮುಂಚೆ ಬ್ರಹ್ಮನನ್ನು ಕೇಳಿದನು. “ಬ್ರಹ್ಮದೇವ, ನನ್ನನ್ನು ಈಗ ಭೂತಲಕ್ಕೆ ಹೋಗು ಎಂದು ಏಕೆ ಹೇಳುತ್ತಿದ್ದೀಯೆ? ಅಲ್ಲಿನ ಮಾನವರೆಲ್ಲರು ಸದಾಕಾಲ ಅಸತ್ಯವಾದಿಗಳೇ! ನಿಂದಾಪವಾದಗಳಲ್ಲಿಯೇ ಅವರು ಮುಳುಗಿಹೋಗಿರುತ್ತಾರೆ. ಶಠರು. ಅವರನ್ನು ಕಂಡರೆ ನನಗೆ ಭಯವಾಗುತ್ತದೆ.” ಅದಕ್ಕೆ ಬ್ರಹ್ಮನು, “ಕೃತಯುಗ, ನೀನು ಅಲ್ಲಿಗೆ ಹೋಗಿ ೧೭,೨೮,೦೦೦ ವರ್ಷಗಳು ಸಾವಧಾನ ಚಿತ್ತನಾಗಿ ಅಲ್ಲಿರು. ನಿನಗೆ ಯಾವ ಕಷ್ಟಗಳೂ ಬರುವುದಿಲ್ಲ. ಆ ನಂತರ ಇನ್ನೊಂದು ಯುಗವನ್ನು ಅಲ್ಲಿಗೆ ಹೋಗುವಂತೆ ಏರ್ಪಡಿಸುತ್ತೇನೆ.” ಎಂದನು. ಅವನ ಮಾತಿನಂತೆ ಕೃತಯುಗವು ಹೊರಟು ಭೂತಲವನ್ನು ಸೇರಿತು.

ಕೃತಯುಗದ ಕಾಲವು ಮುಗಿದಾಗ, ಬ್ರಹ್ಮನು ವೃಷಧರನಾದ ತ್ರೇತಾಯುಗವನ್ನು ಕರೆದು ಹೇಳಿದನು. “ನೀನು ಭೂತಲಕ್ಕೆ ಹೋಗಿ ನಿನ್ನ ಧರ್ಮವನ್ನಾಚರಿಸುತ್ತ, ೧೨,೯೬,೦೦೦ ವರ್ಷಗಳ ಕಾಲ ಇದ್ದು ಬಾ.” ತ್ರೇತಾಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಭೋಗದಿಂದಾಗಿ ಅದರ ಶರೀರವು ಪುಷ್ಟಿಯಾಗಿರುತ್ತದೆ. ಕೈಯಲ್ಲಿ ಯಜ್ಞ ಸಾಮಗ್ರಿಗಳನ್ನು ಧರಿಸಿರುವುದರಿಂದ ಆ ಯುಗದಲ್ಲಿ ದ್ವಿಜರೆಲ್ಲರೂ ಧರ್ಮಶಾಸ್ತ್ರವೇತ್ತರಾಗಿ, ಸದಾಕಾಲ ಯಾಗ ಯಜ್ಞಗಳಲ್ಲಿ ನಿರತರಾಗಿರುತ್ತಾರೆ. ಸದಾ ಕರ್ಮಮಾರ್ಗವನ್ನನುಸರಿಸುವವರು.

ಆ ನಂತರದಲ್ಲಿ ಬ್ರಹ್ಮ ಮಿಶ್ರರೂಪನಾದ ದ್ವಾಪರಯುಗವನ್ನು ಕರೆದನು. ದ್ವಾಪರ ಯುಗದ ಲಕ್ಷಣಗಳನ್ನು ಕೇಳು. ಖಡ್ಗ, ಖಟ್ವಾಂಗ, ಚಾಪ, ಬಾಣ ಶಸ್ತ್ರಗಳನ್ನು ಹಿಡಿದು, ಉಗ್ರ-ಶಾಂತಿ-ದಯೆ-ನಿಷ್ಠುರತೆಗಳಿಂದ ಕೂಡಿ, ಪುಣ್ಯ ಪಾಪಗಳೆರಡನ್ನೂ ಹೊಂದಿರುವುದು. ಬ್ರಹ್ಮ ದ್ವಾಪರಯುಗವನ್ನು ಕುರಿತು, “ನೀನು ಭೂಮಿಯಲ್ಲಿ ಸ್ವಲ್ಪ ಕಾಲವಿದ್ದು ಬಾ.” ಎಂದನು. ದ್ವಾಪರವು ೮,೬೪,೦೦೦ ವರ್ಷಗಳ ಕಾಲ ಭೂಮಿಯಲ್ಲಿತ್ತು.

ಅದಾದನಂತರ ಬ್ರಹ್ಮ ಕಲಿಯುಗವನ್ನು ಕರೆದನು. ಅಯ್ಯಾ ಬ್ರಾಹ್ಮಣ, ಕಲಿಯುಗದ ಲಕ್ಷಣಗಳನ್ನು ಕೇಳು. ಮಲಿನನಾದ ಆ ಕಲಿ, ಕಲಹ ಪ್ರಿಯ. ವಿಚಾರ ಹೀನ. ಅಧೋಮುಖಿ. ಅಶುದ್ಧ. ಖಲಪ್ರಿಯ. ಕ್ರೂರ. ವಿರಾಗರಹಿತ. ಕಲಹದ್ವೇಷಗಳಿಂದ ಕೂಡಿದವನು. ಹೆಜ್ಜೆಹೆಜ್ಜೆಗೂ ಓಲಾಡುತ್ತಾ, ತನ್ನ ಜನನಾಂಗವನ್ನು ಎಡಕೈಯಲ್ಲಿ ಗಟ್ಟಿಯಾಗಿ ಹಿಡಿದು, ಬಲಗೈಯಲ್ಲಿ ನಾಲಗೆಯನ್ನು ಹಿಡಿದು, ನೃತ್ಯಮಾಡುತ್ತಾ, ದೋಷಪೂರಿತವಾದ ಸ್ತುತಿಗಳನ್ನು ಹೇಳುತ್ತಾ, ಪಾಪಿಗಳಲ್ಲಿ ಒಂದಾಗಿ, ಆಗಾಗ ಅಟ್ಟಹಾಸ ಮಾಡುತ್ತಾ, ಅಳುತ್ತಾ, ಮಾತುಮಾತಿಗೂ ಕೋತಿಯಂತೆ ಚೇಷ್ಟೆಗಳನ್ನು ಮಾಡುತ್ತಾ, ಬ್ರಹ್ಮನೆದುರಿಗೆ ಬಂದು ನಿಂತು, “ಏನಾಜ್ಞೆ?” ಎಂದನು.

ಆ ಪಿಶಾಚರೂಪನನ್ನು ಕಂಡ ಬ್ರಹ್ಮ, ನಗುತ್ತಾ, “ಕಲಿ, ನಿನ್ನ ಕೈಗಳಲ್ಲಿ ಜಿಹ್ವಾ ಜನನಾಂಗಗಳನ್ನು ಹಿಡಿದಿದ್ದೀಯೇಕೆ?” ಎಂದು ಕೇಳಲು, ಕಲಿ, “ಈಜಿಹ್ವೆ ಜನನಾಂಗಗಳಿಂದ ನಾನು ಸರ್ವರನ್ನೂ ಜಯಿಸಬಲ್ಲೆ ಎಂಬುದು ನನ್ನ ಪ್ರತಿಜ್ಞೆ ಪ್ರಭು. ಇದೇ ನನ್ನ ಸ್ವಭಾವ. ಜಿಹ್ವಾ ಸುಖ-ಉಪಸ್ಥ ಸುಖಗಳಲ್ಲಿನ ಆಸಕ್ತಿಯಿಂದಲೇ ಎಲ್ಲರನ್ನೂ ಜಯಿಸಬಲ್ಲೆ. ಅದರಿಂದಲೇ ಜಿಹ್ವಾಲಿಂಗಗಳನ್ನು ಹಿಡಿದು ಈರೀತಿ ಓಡಾಡಲು ನನಗೇತರ ಭಯವೂ ಇಲ್ಲ. ಅದೇ ನನ್ನ ಸ್ವಭಾವ.” ಎಂದನು. ಬ್ರಹ್ಮ ಅವನಿಗೆ, “ಸ್ವಲ್ಪ ಕಾಲ ಭುವಿಗೆ ಹೋಗಿ ನಿನ್ನ ಸ್ವಭಾವವನ್ನು ಪ್ರಕಟಗೊಳಿಸಿ ಬಾ.” ಎಂದು ಆಜ್ಞೆ ಮಾಡಿದನು.

ಅದನ್ನು ಕೇಳಿದ ಕಲಿ, “ಬ್ರಹ್ಮದೇವ, ಭೂಮಿಗೆ ಹೋಗಲು ನನಗೇಕೆ ಹೇಳುತ್ತಿದ್ದೀಯೆ? ನಾನು ಎಂಥಹವನೆಂದು ಹೇಳುತ್ತೇನೆ ಕೇಳು. ನಾನು ನಿರ್ಲಜ್ಜನು. ನಿರಂಕುಶನು. ನನ್ನೆದುರಿಗೆ ಸದಾ ನಿದ್ರೆ, ಶೋಕ, ಕಲಹ ಮುಂತಾದುವು ತಾಂಡವವಾಡುತ್ತಿರುತ್ತವೆ. ಪರದ್ರವ್ಯಾಪಹಾರಿ, ಅನ್ಯಭಾರ್ಯಾಪಹಾರಿ, ನನ್ನ ಸೋದರರು. ಡಂಭ ಮಾತ್ಸರ್ಯಗಳನ್ನು ಬೆಳೆಸುವವನು ನನ್ನ ಪ್ರಾಣಸಖ. ಡಾಂಭಿಕರಾಗಿ ಬಕಧ್ಯಾನವನ್ನು ಮಾಡುವ ಯತಿಗಳು ನನ್ನ ಪ್ರಾಣ. ಮೋಸದಿಂದ ಸಹೋದರರಿಗೆ ದ್ರೋಹವೆಸಗಿ ಜೀವಿಸುವವನು ನನ್ನ ಆತ್ಮ. ಮಿಕ್ಕವರು ಯಾರೂ ನನ್ನ ಮಿತ್ರರಲ್ಲ. ಯಾವುದೇ ಪುಣ್ಯ ಕಾರ್ಯಗಳನ್ನೆಸಗುವವರೆಲ್ಲಾ ನನ್ನ ಶತ್ರುಗಳೇ!’ ಎಂದು ತನ್ನ ದುಷ್ಟ ಸ್ವಭಾವಗಳನ್ನೆಲ್ಲಾ ಪ್ರಕಟಗೊಳಿಸಿದನು.

ಅದಕ್ಕುತ್ತರವಾಗಿ ಬ್ರಹ್ಮನು, “ಕಲಿಪುರುಷ, ನೀನು ನನ್ನ ಆದೇಶವನ್ನು ಪಾಲಿಸಬೇಕು. ಕಲಿಯುಗದಲ್ಲಿ ಮನುಷ್ಯರಿಗೆ ಆಯುಸ್ಸು ೧೦೦ ವರ್ಷಗಳು ಮಾತ್ರವೇ. ಇತರ ಯುಗಗಳಲ್ಲಿ ಆಯುಸ್ಸು ದೀರ್ಘವಾಗಿರುವುದರಿಂದ ಮಾನವರು ತಪಾನುಷ್ಠಾನಗಳನ್ನು ಹೆಚ್ಚು ಕಷ್ಟಪಟ್ಟು ದೀರ್ಘಕಾಲ ಮಾಡಿದಲ್ಲದೆ ಅವರಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುವುದಿಲ್ಲ. ನಿನ್ನ ಯುಗದಲ್ಲಿ ಮಾನವರು ಅಲ್ಪಾಯುಷಿಗಳಾದದ್ದರಿಂದ ಭಕ್ತಿಯಿಂದ ಮಾಡಿದ ಪರಮೇಶ್ವರನ ಭಜನೆಯಿಂದಲೇ ಕೃತಕೃತ್ಯರಾಗುತ್ತಾರೆ. ಇತರ ಯುಗಗಳಲ್ಲಿ ಕಷ್ಟಪಟ್ಟರೇನೇ ಸಿದ್ಧಿಯಾಗುವಂತಹುದು ನಿನ್ನ ಯುಗದಲ್ಲಿ ಸುಲಭವಾಗಿ ಸಿದ್ಧಿಯಾಗುವುದು. ಬ್ರಹ್ಮಜ್ಞಾನಿಗಳು, ಪುಣ್ಯಾತ್ಮರು, ದೇವಸೇವಾನಿರತರು ಆದವರಿಗೆ ನೀನು ಕಷ್ಟಕಾರಕನಾಗಬೇಡ. ಅವರಿಗೆ ಸಹಾಯಕನಾಗಿರು.” ಎಂದು ಹೇಳಿದನು. ಬ್ರಹ್ಮನ ಮಾತುಗಳನ್ನು ಆಲಿಸಿ, ಅವನಿಗೆ ನಮಸ್ಕರಿಸಿ, ಕಲಿ ಮತ್ತೆಯೂ ಹೇಳಿದನು. “ಸ್ವಾಮಿ ನೀವು ಹೇಳಿದವರೆಲ್ಲರೂ ನನಗೆ ಶತ್ರುಗಳು. ಅಂತಹ ಶತ್ರುಗಳಿರುವ ಭೂಮಿಗೆ ನಾನು ಹೇಗೆ ಹೋಗಬಲ್ಲೆ? ಅವರ ವಿಷಯ ಕೇಳಿದರೇನೇ ನನಗೆ ಭಯದಿಂದ ನಡುಕ ಹುಟ್ಟುತ್ತದೆ. ಭೂಮಿಯಲ್ಲಿ, ಅದರಲ್ಲೂ ಭಾರತದೇಶದಲ್ಲಿ, ಪುಣ್ಯಾತ್ಮರೇ ಬಹಳವಾಗಿದ್ದಾರೆ. ಅವರು ನನ್ನನ್ನು ಕೊಂದುಹಾಕುತ್ತಾರೆ. ನಾನು ಅಂತಹ ಪ್ರದೇಶಕ್ಕೆ ಹೇಗೆ ತಾನೇ ಹೋಗಲಿ?” ಎಂದು ಕಳಕಳಿಯಿಂದ ಹೇಳಿದ.

ಅವನ ಮಾತನ್ನು ಕೇಳಿದ ಬ್ರಹ್ಮ ನಕ್ಕು, “ಕಲಿಪುರುಷ, ನೀನು ಕಾಲ ಸ್ವರೂಪನನ್ನು ಆಶ್ರಯಿಸಿ ಭೂತಲದಲ್ಲಿರು. ಆ ಕಾಲನೇ ತನ್ನ ಸ್ವಭಾವದಿಂದ ಜನರ ಧರ್ಮವಾಸನೆಗಳನ್ನು ಬೇಧಿಸುತ್ತಾನೆ. ಆಗ ಪುಣ್ಯಾತ್ಮರಿಗೂ ಮನಸ್ಸಿನಲ್ಲಿ ಮಹಾಪಾಪಗಳನ್ನು ಮಾಡಬೇಕೆಂಬ ಬುದ್ಧಿಯುಂಟಾಗುತ್ತದೆ.” ಎಂದು ಹೇಳಿದನು.

ಅದಕ್ಕೆ ಮತ್ತೆ ಕಲಿ, “ಬ್ರಹ್ಮನ್, ನನ್ನ ಶತ್ರುಗಳೇ ವಿಶೇಷವಾಗಿರುವ ಭೂಮಂಡಲದಲ್ಲಿ ಎಲ್ಲರೂ ಸ್ವಚ್ಚವಾದ ತೀರ್ಥಗಳಲ್ಲಿ ನಿವಾಸ ಮಾಡುತ್ತಾರೆ. ಶಿವೋಪಾಸಕರು, ವಿಷ್ಣುಧ್ಯಾನ ನಿಷ್ಠರು, ಧಾರ್ಮಿಕರು ನನಗೆ ಉಪದ್ರವ ಕೊಡುತ್ತಾರೆ. ಅವರಲ್ಲಿ ನನಗೆ ದಯೆ ಇರುವುದಿಲ್ಲ. ಗಂಗಾತೀರದಲ್ಲಿ ವಿಹರಿಸುವ ಶತ್ರುಗಳು ನನ್ನ ಕೋಪವನ್ನು ಬಲ್ಲರು. ವಾರಣಾಸಿಯಲ್ಲಿರುವ ಧರ್ಮತತ್ಪರರು, ಪುರಾಣಶ್ರವಣಾಸಕ್ತರು, ಆದ ಕೆಲವರು ತೀರ್ಥಾಟನೆಗಳನ್ನು ಮಾಡುತ್ತಾರೆ. ಕೆಲವರು ಧ್ಯಾನನಿಷ್ಠರಾಗಿ ಧ್ಯಾನದಲ್ಲಿ ನಿಮಗ್ನರಾಗಿರುತ್ತಾರೆ. ಅವರೆಲ್ಲರೂ ನನ್ನ ಶತ್ರುಗಳು. ಹೇ ಪ್ರಜಾಪತಿ, ಮನಸ್ಸಿನಲ್ಲಿ ಶಾಂತರಾಗಿರುವವರೂ ನನ್ನ ಶತ್ರುಗಳೇ! ಡಾಂಭಿಕರಲ್ಲದ ಪುಣ್ಯಶಾಲಿಗಳನ್ನು ಕಂಡರೆ ನನಗೆ ಹೆದರಿಕೆಯಾಗುತ್ತದೆ. ನಾಸಾಗ್ರದಲ್ಲಿ ದೃಷ್ಟಿಯನ್ನಿಟ್ಟು ಜಪಾನುಷ್ಠಾನಗಳಲ್ಲಿ ನಿರತರಾಗಿರುವವರೂ ನನಗೆ ಹಗೆಗಳೇ! ಅವರನ್ನು ನೋಡುತ್ತಿಂದಂತೆಯೆ ನನಗೆ ಪ್ರಾಣಹೋದಂತಾಗುತ್ತದೆ. ಹೆಂಡತಿ, ಮಕ್ಕಳು ಎಂಬ ಮಾಯಾಜಾಲದಲ್ಲಿ ಬಿದ್ದಿರುವವರು ನನಗೆ ಬಃಅಳ ಪ್ರಿಯರಾದವರು. ಅವರು ನನ್ನ ಇಷ್ಟರು. ಹರಿಹರರಲ್ಲಿ ಬೇಧಭಾವದಿಂದ ಶೃತಿ, ಸ್ಮೃತಿ ಪುರಾಣಾದಿಗಳನ್ನು ದೂಷಣೆ ಮಾಡುವವರು ನನಗೆ ಪರಮಾಪ್ತರು. ರಾಗದ್ವೇಷರಹಿತರಾದವರನ್ನು ಕಂಡರೆ ನನಗೆ ಭಯ.” ಎಂದು ಹೇಳಿದ್ದಕ್ಕೆ ಬ್ರಹ್ಮ ಮತ್ತೆ ಹೇಳಿದನು. “ಹೇ ಕಲಿ, ಭೂಮಿಯಲ್ಲಿ ನೀನು ತಪ್ಪದೇ ಪ್ರಕಾಶಿಸುತ್ತೀಯೆ. ಪ್ರಜೆಗಳೆಲ್ಲರೂ ನಿನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಕೆಲವರು ಮಾತ್ರವೇ ಪುಣ್ಯಾತ್ಮರಿರುತ್ತಾರೆ. ಅವರಿಗೆ ನೀನು ಯಾವ ರೀತಿಯ ಸಂಕಟವನ್ನೂ ಉಂಟುಮಾಡದೆ ಭೂಮಿಯಲ್ಲಿ ಸಂಚರಿಸಿಕೊಂಡಿರು.”

ಆ ಮಾತುಗಳನ್ನು ಕೇಳಿದ ಕಲಿ, “ಸ್ವಾಮಿ, ಸ್ವಭಾವಸಿದ್ಧವಾದ ದುಶ್ಚರಿತಗಳು ಹೇಗೆ ಬದಲಾಗುತ್ತವೆ? ಧರ್ಮದೊಡನೆ ನನ್ನ ಸಾಂಗತ್ಯ ಹೇಗೆ ಸಾಧ್ಯವಾಗುವುದು? ಹೇಳಿ.” ಎನ್ನಲು, ಬ್ರಹ್ಮ “ಕಲಿ. ಭೂಮಿಯಲ್ಲಿ ನೀನು ವಾಸಿಸಲು ಅನುಕೂಲವಾಗುವಂತಹ ಉಪಾಯವನ್ನು ಹೇಳುವನು ಕೇಳು. ಮಲಿನವಾದ ಕಾಲದ ಸಹಾಯದಿಂದ ಅಧರ್ಮದ ಜೊತೆಯಲ್ಲಿ ಭೂಮಿಯನ್ನು ಸೇರು. ಆ ನಂತರ ನಿನ್ನ ಮಾರ್ಗ ಸುಗಮವಾಗುವುದು. ನೀನು ನಿರ್ಭಯವಾಗಿ ಓಡಾಡಬಹುದು. ಅಲ್ಲಲ್ಲಿರುವಂತಹ ನಿರ್ಮಲಾಂತಃಕರಣರಾದವರು ನಿನಗೆ ವೈರಿಗಳಾಗೇ ಇರುತ್ತಾರೆ. ಪಾಪದೂಷಿತರಾದವರು ನಿನಗಿಷ್ಟದವರಾಗಿರುತ್ತಾರೆ. ಪಾಪಿಗಳ ನಡುವೆ ಒಬ್ಬನೇ ಧರ್ಮಾತ್ಮನಿದ್ದರೂ ನಿನ್ನನ್ನು ಜಯಿಸಬಲ್ಲನು. ಕ್ರಮಕ್ರಮಮವಾಗಿ ಭೂಮಂಡಲದ ಜನರೆಲ್ಲರೂ ನಿನ್ನ ವಶವರ್ತಿಗಳಾಗುತ್ತಾರೆ.” ಎಂದನು. ಬ್ರಹ್ಮ ಅಷ್ಟು ಹೇಳಿದರೂ ಕಲಿ ಮತ್ತೆ ಕೈಜೋಡಿಸಿ, ನಮಸ್ಕರಿಸಿ ಹೇಳಿದನು. “ಸ್ವಾಮಿ ನೀನು ಇಷ್ಟೆಲ್ಲಾ ಹೇಳಿದರೂ ನನಗೆ ಭೂಲೋಕಕ್ಕೆ ಹೋಗಬೇಕೆಂಬ ಬುದ್ಧಿ ಹುಟ್ಟುತ್ತಿಲ್ಲ.” ಎಂದನು.

“ಹೇ ನಾಮಧಾರಕ, ಕಲಿಗೆ ಉಂಟಾದ ಸಂದೇಹಗಳನ್ನೆಲ್ಲ ಪರಿಹರಿಸುವ ರೀತಿಯಲ್ಲಿ ಬ್ರಹ್ಮ ಹೇಳಿದ ಮಾತುಗಳನ್ನು ಕೇಳು. ಮನಸ್ಸಿನಲ್ಲಿ ಪರಿಶುದ್ಧರಾಗಿ, ಸುಬುದ್ಧಿಗಳಾಗಿ, ಲೋಭವಿಲ್ಲದವರಾಗಿ ಇರುವವರಾರನ್ನೂ ಕಲಿ ದೋಷಗಳು ಸೋಕಲಾರವು. ಅಬೇಧಬುದ್ಧಿಯಿಂದ ಶಿವ ಕೇಶವರನ್ನು ಅರ್ಚಿಸುವವರಿಗೆ, ಭಜಿಸುವವರಿಗೆ, ಗುರುಸೇವೆಯಲ್ಲಿ ನಿರತರಾದವರಿಗೆ, ಕಾಶಿ ಕ್ಷೇತ್ರದಲ್ಲಿ ನಿವಾಸಮಾಡುವವರಿಗೆ ಕಲಿ ದೋಷಪ್ರಭಾವಗಳು ಅಂಟಲಾರವು. ಲೋಕದಲ್ಲಿ ಬ್ರಾಹ್ಮಣರನ್ನು ಆರಾಧಿಸುವವರು, ಮಾತಾಪಿತೃ ಸೇವೆಯಲ್ಲಿ ನಿರತರಾದವರು, ಕಪಿಲಗೋವನ್ನು ಸೇವಿಸುವವರು ಮುಂತಾದವರಿಗೆ ಕಲಿದೋಷ ಸ್ಪರ್ಶವಾಗುವುದಿಲ್ಲ. ಶೈವರನ್ನು, ವೈಷ್ಣವರನ್ನು, ತುಳಸಿ ಪೂಜೆಮಾಡುವವರನ್ನು ನನ್ನ ಆಜ್ಞೆಯಂತೆ ಯಾವಾಗಲೂ ಪೀಡಿಸಬೇಡ. ಗುರುಸೇವಾ ನಿರತರನ್ನು, ವಿವೇಕಯುಕ್ತರಾಗಿ ವರ್ತಿಸುವವರನ್ನು, ಗುರುಭಕ್ತರನ್ನು ನೀನು ಯಾವುದೇ ಕಾರಣಕ್ಕಾಗಿಯೂ ಬಾಧಿಸಲೇಬಾರದು.” ಬ್ರಹ್ಮನ ಆ ಮಾತುಗಳನ್ನು ಕೇಳಿ ಕಲಿ, “ಭಗವನ್, ಗುರುಸ್ವರೂಪವನ್ನು ವಿಸ್ತರಿಸಿ ಹೇಳಿ ನನಗೆ ಅನುಗ್ರಹ ಮಾಡಿ.”ಎಂದನು.

ಕಲಿಯ ಮಾತುಗಳನ್ನು ಆಲಿಸಿದ ಬ್ರಹ್ಮ, ” ಹೇ ಕಲಿಪುರುಷ, ಉತ್ತಮವಾದ ಗುರುಮಾಹಾತ್ಮೆಯನ್ನು ಕುರಿತು ಹೇಳುವೆನು, ಕೇಳು. ಗ ಕಾರವು ಸಿದ್ಧಿ ಪ್ರದಾಯಕ. ರ ಕಾರವು ಪಾಪ ಪರಿಹಾರಕ. ಉ ಕಾರವು ಅವ್ಯಕ್ತ ವಿಷ್ಣು ಸ್ವರೂಪ. ಈ ಮೂರೂ ಸೇರಿದ ಸ್ವರೂಪವೇ ಗುರುವು. ಗ ಕಾರವು ಗಣೇಶನಿಗೆ ಚಿಹ್ನೆ. ರ ಕಾರವು ಅಗ್ನಿಗೆ ಚಿಹ್ನೆ. ಉ ಕಾರವು ವಿಷ್ಣುವಿಗೆ ಚಿಹ್ನೆ. ಹೀಗೆ ಗಣೇಶ ಅಗ್ನಿಯುಕ್ತನಾಗಿ, ವಿಷ್ಣುಸಮನ್ವಿತನಾದ, ವರ್ಣದ್ವಯಾತ್ಮಕವಾದ ಗುರುಮಂತ್ರವು ಚತುರ್ವರ್ಗಕ್ಕೂ ಫಲಪ್ರದವು. ಗುರುವೇ ತಾಯಿ ತಂದೆ ಪರಮೇಶ್ವರ. ಈಶ್ವರ ಕೋಪಿಸಿಕೊಂಡರೆ ಗುರುವು ರಕ್ಷಿಸುತ್ತಾನೆ. ಆದರೆ ಯಾವಾಗಲಾದರೂ ಗುರುವೇ ಶಿಷ್ಯನ ಮೇಲೆ ಕೋಪಿಸಿಕೊಂಡರೆ ಆ ಶಿಷ್ಯನನ್ನು ರಕ್ಷಿಸಲು ಶಂಕರನಿಗೂ ಸಾಮರ್ಥ್ಯವಿಲ್ಲ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅವನೇ ಪರಬ್ರಹ್ಮವೂ ಕೂಡಾ. ಅದರಿಂದ ಸದಾ ಗುರುವನ್ನೇ ಆಶ್ರಯಿಸಬೇಕು. ಶ್ರೀ ಹರಿಯು ಪ್ರಸನ್ನನಾದರೆ ವೈಷ್ಣವರು ಅವ್ಯಯವಾದ ಗುರುಭಕ್ತಿಯನ್ನೇ ಬೇಡುತ್ತಾರೆ. ಗುರುವು ಪ್ರಸನ್ನನಾದರೆ ಜಗದೀಶ್ವರನಾದ ಜನಾರ್ದನನು ಸಂತೋಷಗೊಂಡು ಸರ್ವಾರ್ಥ ಸಿದ್ಧಿಯಾಗಲೆಂದು ವರ ಪ್ರಸಾದಿಸುತ್ತಾನೆ. ಈಶ್ವರನು ಪ್ರಸನ್ನನಾದರೆ ಗುರುವು ಸಂತಸಪಡದೇ ಇರಬಹುದು. ಆದರೆ ಗುರುವು ಪ್ರಸನ್ನನಾದ ಧೀಮಂತನಿಗೆ ಈಶ್ವರನು ಸದಾ ಸನ್ನಿಹಿತನಾಗಿರುತ್ತಾನೆ. ಆದ್ದರಿಂದ ಗುರುವನ್ನು ಶ್ರದ್ಧಾ ಭಕ್ತಿಗಳಿಂದ ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಸೇವಿಸಬೇಕು. ಅಂತಹವನು ಜ್ಯೋತಿಸ್ವರೂಪನಾಗಿ ತೀರ್ಥಯಾತ್ರೆ, ವ್ರತ, ಯೋಗ, ತಪಃಫಲಗಳನ್ನು ಹೊಂದಬಲ್ಲನು. ಗುರುಮಹಿಮೆ ಅನಂತವು. ಗುರುವು ಶಿಷ್ಯನಿಗೆ ವರ್ಣಾಶ್ರಮಧರ್ಮಗಳನ್ನೂ. ಆಚಾರಗಳನ್ನೂ, ಸದ್ವಿವೇಕವನ್ನು ಪಡೆಯುವ ಮಾರ್ಗವನ್ನೂ, ಭಕ್ತಿ-ಮುಕ್ತಿ-ವಿರಕ್ತಿ ಮರ್ಗಗಳನ್ನೂ ತೋರಿಸಿಕೊಡಬಲ್ಲನು.

ಬ್ರಹ್ಮನ ಆ ಮಾತುಗಳನ್ನು ಕೇಳಿದ ಕಲಿ, ಪ್ರಣೀತನಾಗಿ ಬ್ರಹ್ಮನನ್ನು ಪ್ರಶ್ನಿಸಿದನು. “ಸರ್ವದೇವನಾದ ಗುರುಜನ್ಮ ಹೇಗೆ ಪ್ರಾಪ್ತಿಯಾಗುತ್ತದೆ?” ಅದಕ್ಕೆ ಬ್ರಹ್ಮ, “ಸವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗುರುವಿನ ಅನುಗ್ರಹವಿಲ್ಲದೆ ಮಾನವನು ಯಾವುದೇ ವಿಷಯವನ್ನೂ ಗ್ರಹಣಮಾಡಲಾರನು. ಯಾರಿಗೇ ಆಗಲಿ ಗುರುವಿನ ಅನುಗ್ರಹವಿಲ್ಲದೆ ’ಶ್ರವಣ’ ಸಾಧ್ಯವಾಗಲಾರದು. ಸಚ್ಛಾಸ್ತ್ರ ’ಶ್ರವಣ’ವಿಲ್ಲದೆ ಭವ ಭಯವು ಹೇಗೆ ಹೋಗಬಲ್ಲದು? ಸ್ವಬುದ್ಧಿಯಿಂದ ಯತಾರ್ಥತತ್ತ್ವವು ನಿಲುಕಲಾರದು. ’ಶ್ರವಣ’ಸಿದ್ಧಿಸಿದರೆ ಶಾಸ್ತ್ರಗಳು ಸುಲಭವಾಗುತ್ತವೆ. ಶಾಸ್ತ್ರಾರ್ಥಗಳು ಅವಗತವಾದರೆ ಸಂಸಾರ ತಾರಣವು ಸುಲಭವಾಗುತ್ತದೆ. ಗುರುವೇ ಶಾಸ್ತ್ರಾರ್ಥಗಳನ್ನು ತೋರಿಸಿಕೊಟ್ಟು ಜ್ಯೋತಿಸ್ವರೂಪವನ್ನು ಪ್ರಕಾಶಗೊಳಿಸುತ್ತಾನೆ. ಪೂರ್ವದಲ್ಲಿ ಗುರುಸೇವೆಯಿಂದಲೇ ಸರ್ವ ಸಿದ್ಧಿಗಳೂ ಕೈಗೂಡುತ್ತಿದ್ದವು. ಗುರು ಶಿಷ್ಯರ ಕಥೆಯೊಂದನ್ನು ಹೇಳುತ್ತೇನೆ, ಕೇಳು.

ಪೂರ್ವದಲ್ಲಿ ಗೋದಾವರಿ ತೀರದಲ್ಲಿ ಆಂಗೀರಸ ಮುನಿಯ ಆಶ್ರಮವಿತ್ತು.ಅದು, ಅದು ನಾನಾ ವೃಕ್ಷಲತಾದಿಗಳಿಂದಲೂ, ಮೃಗಪಕ್ಷಿಗಳಿಂದಲೂ ಕೂಡಿ ಅರಣ್ಯದಿಂದ ಸುತ್ತುವರೆಯಲ್ಪಟ್ಟು, ಮನೋಹರವಾಗಿತ್ತು. ಅಲ್ಲಿ ಬ್ರಹ್ಮರ್ಷಿಗಳೂ, ಸುವ್ರತರೂ ಆದ ಅನೇಕ ತಾಪಸಿಗಳಿದ್ದರು. ಅವರಲ್ಲಿ ಧರ್ಮವೇತ್ತನಾದ ಪೈಲನ ಪುತ್ರ ವೇದಧರ್ಮನೆಂಬುವವನೊಬ್ಬನಿದ್ದನು. ಅವನ ಶಿಷ್ಯರು ಸ್ಮೃತಿ, ಶೃತಿ ಪುರಾಣಾದಿಗಳನ್ನು ಪಾಠಮಾಡುತ್ತಿದ್ದರು. ಗುರುತತ್ಪರರಾಗಿದ್ದ ಅವರಲ್ಲಿ ದೀಪಕನೆಂಬುವ ಒಬ್ಬ ಶಿಷ್ಯನಿದ್ದನು. ಅವನು ವೇದಧರ್ಮನ ಮುಖ್ಯ ಶಿಷ್ಯನು.

ವೇದಧರ್ಮನು ಒಂದುದಿನ ತನ್ನ ಶಿಷ್ಯರನ್ನು ಪರೀಕ್ಷಿಸಲು ಎಲ್ಲರನ್ನೂ ಕರೆದು, “ನಿಮ್ಮೆಲ್ಲರನ್ನೂ ಪ್ರಶ್ನಿಸುತ್ತಿದ್ದೇನೆ. ನನ್ನಲ್ಲಿ ಪ್ರೀತಿಯಿರುವವವರೆಲ್ಲರೂ ನನ್ನ ಮಾತುಗಳನ್ನು ಸಾವಧಾನ ಚಿತ್ತರಾಗಿ ಆಲಿಸಿ.”

ಆ ಮಾತುಗಳನ್ನು ಕೇಳಿದ ತಕ್ಷಣವೇ ಶಿಷ್ಯರೆಲ್ಲರೂ “ಗುರುವೇ, ನೀವೇ ನಮ್ಮನ್ನು ಉದ್ಧರಿಸುವವರು. ನಿಮ್ಮ ಆಜ್ಞೆ ಏನಿದ್ದರೂ ಅದನ್ನು ಶಿರಸಾವಹಿಸಿ ನಡೆಸುತ್ತೇವೆ. ಅದರಲ್ಲಿ ಸಂದೇಹ ಬೇಡ. ಗುರುವಾಕ್ಯವನ್ನು ಮೀರುವವನು ರೌರವ ನರಕಕ್ಕೆ ಹೋಗುತ್ತಾನೆ. ಗುರುವಾಕ್ಯವನ್ನು ನಡೆಸದವನು ಈ ಮಾಯಾಪ್ರಪಂಚದಲ್ಲಿ ಮುಳುಗಿ ಹೋಗುತ್ತಾನೆ. ಅಂತಹ ಅಧಮನು ದುರ್ಗತಿಯ ಪಾಲಾಗುತ್ತಾನೆ. ಭಕ್ತರಿಗೆ ಗುರುವೇ ತಾರಕನು ಎಂದು ಶೃತಿಯು ಹೇಳುತ್ತದೆ.” ಎಂದು ಎಲ್ಲರೂ ಏಕಗ್ರೀವರಾಗಿ ನುಡಿದರು. ಅವರ ಮಾತನ್ನು ಕೇಳಿದ ವೇದಧರ್ಮನು ಬಹು ಸಂತೋಷಗೊಂಡವನಾಗಿ ದೀಪಕನೇ ಮುಂತಾದ ಶಿಷ್ಯರಿಗೆ ಹೇಳಿದನು.

“ಶಿಷ್ಯರೇ, ನನ್ನ ಮಾತುಗಳನ್ನು ಚಿತ್ತಕೊಟ್ಟು ಆಲಿಸಿ. ನನಗೆ ಪೂರ್ವಾರ್ಜಿತವಾದ ಪಾಪವಿದೆ, ಅದು ಸಾವಿರ ವರ್ಷಗಳಿಂದಲೂ ಕೂಡಿಕೊಂಡು ಬಂದಿದೆ. ನನ್ನ ತಪಾನುಷ್ಠಾನಗಳಿಂದ ಅದನ್ನು ಬಹಳಷ್ಟು ಕಳೆದುಕೊಂಡಿದ್ದೇನೆ. ಆದರೆ ಮಿಕ್ಕಿರುವ ಪ್ರಾರಬ್ಧವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಅದು ನಾಶವಾಗುವುದಿಲ್ಲ. ತಪಸ್ಸಿನಿಂದ ಅದನ್ನು ನಾಶಗೊಳಿಸಿದರೆ ಅದು ನನ್ನ ಮೋಕ್ಷಹಾದಿಗೆ ಅಡ್ಡವಾಗುತ್ತದೆ. ಆ ಘೋರಪಾಪವನ್ನು ಇನ್ನು ಉಪೇಕ್ಷಿಸಬಾರದು ಎಂದು ನನಗೆ ತೋರುತ್ತಿದೆ. ನಾನು ಕಾಶಿಕ್ಷೇತ್ರಕ್ಕೆ ಹೋಗಿ ಅಲ್ಲಿ ನನ್ನ ಈ ದೇಹದಿಂದ ಅದನ್ನು ಅನುಭವಿಸಿ ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಕಾಶಿಕ್ಷೇತ್ರವು ಸರ್ವ ಪಾಪಹಾರಿಯೆಂದು ಪ್ರಸಿದ್ಧವಾಗಿದೆ. ನೀವು ಅಲ್ಲಿಗೆ ನನ್ನನ್ನು ಶೀಘ್ರವಾಗಿ ಕರೆದುಕೊಂಡು ಹೋಗಿ ಅಲ್ಲಿ ನನ್ನ ರಕ್ಷಣೆ ಮಾಡಬೇಕು. ಹಾಗೆ ನನ್ನ ರಕ್ಷಣೆ ಮಾಡುವ ಸಮರ್ಥನು ನಿಮ್ಮಲ್ಲಿ ಯಾರಿದ್ದಾನೆ? ಬಹು ದುಃಖವನ್ನುಂಟುಮಾಡುವ ನನ್ನ ಈ ಮಾತುಗಳನ್ನು ಅಂಗೀಕರಿಸುವವನು ಯಾರು?”

ಅವನ ಮಾತುಗಳನ್ನು ಕೇಳಿದ, ಗುರುಸಮ್ಮತನೂ, ಶಿಷ್ಯೋತ್ತಮನೂ, ಗುರುಸೇವಾನಿರತನೂ ಆದ ದೀಪಕನು, ಗುರುವಿಗೆ ಪ್ರಣಾಮ ಮಾಡಿ, “ಗುರುವೆ, ಸ್ವಯಂಕೃತಪಾಪಾವಶೇಷವನ್ನು ಉಳಿಸಿಕೊಳ್ಳಬಾರದು. ದೇಹ ನಾಶಕ್ಕೆ ಕಾರಣವಾಗುವ ಅಂತಹ ಪಾಪಕ್ಕೆ ತ್ವರೆಯಾಗಿ ಪ್ರತಿಕ್ರಿಯೆಮಾಡಬೇಕು.” ಎಂದು ಹೇಳಿದನು.

ಅದಕ್ಕೆ ವೇದಧರ್ಮನು, “ಶಿಷ್ಯ, ನೀನು ಹೇಳುವುದು ನಿಜ. ಈ ದೇಹವು ಇನ್ನೂ ಧೃಢವಾಗಿರುವಾಗಲೇ ಪಾಪಕ್ಷಯವನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಮುಂದೆ ವಿಷಸಮಾನವಾಗಿ ಬಹಳ ಬಾಧಿಸುತ್ತದೆ. ತೀರ್ಥಸೇವನೆ, ಕೃಚ್ಛಾದಿಗಳಂತಹ ಪ್ರಾಯಶ್ಚಿತ್ತಕರ್ಮಗಳನ್ನು ಮಾಡಿಯೋ, ಇಲ್ಲವೇ ರೋಗಗಳನ್ನನುಭವಿಸಿಯೋ ಪಾಪನಾಶನ ಮಾಡದಿದ್ದರೆ ಇನ್ನಾವ ರೀತಿಯಲ್ಲಿಯೂ ಅದು ನಾಶವಾಗುವುದಿಲ್ಲ. ತಾನು ಮಾಡಿದ ಪಾಪವನ್ನು ತಾನೇ ಅನುಭವಿಸಿ ತೀರಿಸಬೇಕು. ದೇವರಾಗಲೀ, ಋಷಿಯಾಗಲೀ, ಜ್ಞಾನಿಯಾಗಲೀ ಪಾಪಾನುಭವವಾಗದೆ ಪಾಪತ್ಯಾಗವಾಗುವುದಿಲ್ಲ.” ಎಂದು ಹೇಳಿದನು. ಅದಕೆ ದೀಪಕನು, “ನೀವು ಆಜ್ಞೆ ನೀಡಿ. ನನ್ನ ಶಕ್ತಿಯಿದ್ದಷ್ಟು ನಾನು ನಿಮ್ಮ ಸೇವೆ ಮಾಡುತ್ತೇನೆ. ನೀವು ಹೇಳಿದಹಾಗೆ ಪಾಪವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಪಾಪಕ್ಷಾಳನವಾಗುವುದಿಲ್ಲ ಎಂಬುದು ಸತ್ಯ.” ಎಂದನು. ಅದಕ್ಕೆ ವೇದಧರ್ಮನು, “ನನ್ನ ಪಾಪಫಲವಾಗಿ ನಾನು ಕುಷ್ಠುರೋಗಿಯಾಗಿ, ಕುಂಟಕುರುಡನಾಗಿ ಇಪ್ಪತ್ತೊಂದು ವರ್ಷಗಳು ಕಳೆಯಬೇಕು. ಅಂತಹ ನನ್ನನ್ನು ಆ ಸಮಯದಲ್ಲಿ ಕಾಪಾಡುವ ಶಕ್ತಿಯಿದ್ದರೆ ಹೇಳು.” ಎನ್ನಲು, ದೀಪಕನು “ನಿಮ್ಮ ಪಾಪಗಳನ್ನು ನಾನೇ ಅನುಭವಿಸಿ ತೀರಿಸುತ್ತೇನೆ. ನನಗೆ ಅನುಜ್ಞೆ ಕೊಡಿ.” ಎಂದನು. ಆ ಮಾತನ್ನು ಕೇಳಿ ಸಂತುಷ್ಟನಾದ ವೇದಧರ್ಮನು “ಶಿಷ್ಯ, ನನ್ನ ಪಾಪಗಳು ಹೇಗಿವೆಯೆಂದರೆ ಅದನ್ನು ನಾನೇ ಅನುಭವಿಸಿ ತೀರಿಸಬೇಕು. ಇತರ ಯಾರಿಂದಲೂ ಆ ಪಾಪವು ಕ್ಷಯವಾಗುವುದಿಲ್ಲ. ಆದ್ದರಿಂದ ಆ ಪಾಪವನ್ನು ನನ್ನ ದೇಹದಿಂದಲೇ ಅನುಭವಿಸುತ್ತೇನೆ. ನಿನಗಿಷ್ಟವಿದ್ದರೆ ಆ ಇಪ್ಪತ್ತೊಂದು ವರ್ಷಗಳು ನನ್ನೊಡನೆ ಇದ್ದು ನನ್ನ ರಕ್ಷಣೆ ಮಾಡು. ನಿನಗೆ ಆ ಶಕ್ತಿಯಿದ್ದರೆ ನನ್ನನ್ನು ಕಾಶಿಕ್ಷೇತ್ರಕ್ಕೆ ಸೇರಿಸಿ ಕಾಪಾಡು. ನಿನ್ನ ಉಪಕಾರದಿಂದ ನಾನು ಕಾಶಿಕ್ಷೇತ್ರದಲ್ಲಿ ನಾನು ನನ್ನ ಪಾಪವನ್ನನುಭವಿಸಿ ಅದನ್ನು ಕಳೆದುಕೊಂಡು ಪಾಪರಹಿತನಾಗಿ, ಅವ್ಯಯವಾದ ಶಾಶ್ವತಪದವನ್ನು ಪಡೆಯುತ್ತೇನೆ.” ಎಂದನು. ಅದಕ್ಕೆ “ನೀವು ವಿಶ್ವನಾಥ ಸಮಾನರು. ನಿಮ್ಮನ್ನು ಕಾಶಿಗೆ ಕರೆದುಕೊಂಡುಹೋಗಿ ನಿಮ್ಮ ಸೇವೆಮಾಡುತ್ತೇನೆ.” ಎಂದು ಧೃಢವಾಗಿ ಹೇಳಿದ ದೀಪಕನು ಗುರುವನ್ನು ಕಾಶಿಗೆ ಕರೆದುಕೊಂಡುಹೋಗಿ ಅಲ್ಲಿ ಅವರ ನಿವಾಸಕ್ಕೆ ಏರ್ಪಾಡುಮಾಡಿದನು.

ದೀಪಕನು ಮಾಡಿದ ಏರ್ಪಾಡುಗಳಿಂದ ಸಂತುಷ್ಟನಾದ ವೇದಧರ್ಮನು ಮಣಿಕರ್ಣಿಕೆಗೆ ನಮಸ್ಕರಿಸಿ, ಗಂಗೆಯಲ್ಲಿ ಮಿಂದು, ವಿಶ್ವನಾಥನನ್ನು ಪೂಜಿಸಿ, ತನ್ನ ಪಾಪವನ್ನನುಭವಿಸಲು ಸಿದ್ಧನಾದನು. ಕುಷ್ಠುವ್ಯಾಧಿಪೀಡಿತನಾಗಿ, ನೇತ್ರಹೀನನಾಗಿ, ಬಹುಕಷ್ಟವನ್ನನುಭವಿಸುತ್ತಿದ್ದ ವೇದಧರ್ಮನ ಸೇವೆಯಲ್ಲಿ ದೀಪಕನು ನಿರತನಾದನು. ದೇಹದಲ್ಲೆಲ್ಲಾ ಕುಷ್ಠುರೋಗ ವ್ಯಾಪಿಸಿ ವೇದಧರ್ಮನ ದೇಹವು ದುರ್ಗಂಧಮಯವಾಯಿತು. ಕೀವು ರಕ್ತಗಳು ಸೋರಲಾರಂಭವಾಯಿತು. ಕ್ರಿಮಿಗಳೂ ಕಾಣಿಸಿಕೊಂಡವು. ಇಂತಹ ಸ್ಥಿತಿಗೆ ಸೇರಿದ ಅವನಿಗೆ ಸ್ಮೃತಿಭ್ರಮಣೆಯೂ ಉಂಟಾಯಿತು. ಸೇವಾ ಭಾವನೆಯಿಂದ ದೀಪಕ ಭಿಕ್ಷೆಮಾಡಿ ಗುರುವಿಗೆ ಅನ್ನವೇ ಮುಂತಾದ ಆಹಾರಪದಾರ್ಥಗಳನ್ನು ತಂದಿಡುತ್ತಿದ್ದನು. ಗುರುವನ್ನು ವಿಶ್ವನಾಥನರೂಪದಲ್ಲಿ ಕಾಣುತ್ತಾ ಅವನನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ರೋಗಪೀಡಿತರಾದವರು, ಅದಕ್ಕೆ ಮುಂಚೆ ಸಾಧುಸ್ವಭಾವವುಳ್ಳವರಾಗಿದ್ದರೂ, ರೋಗಿಷ್ಠರಾದಮೇಲೆ ಅವರು ನಾಚಿಕೆ, ಮಾನ, ಮರ್ಯಾದೆಗಳನ್ನು ತೊರೆದು ತಮ್ಮ ಸ್ವಭಾವಕ್ಕೆ ವಿರುದ್ಧ ರೀತಿಯಲ್ಲಿ ವರ್ತಿಸುತ್ತಾರೆ. ಕ್ರೂರರಾಗಿ ವರ್ತಿಸುವುದೂ ಉಂಟು. ಅಂತೆಯೇ ವೇದಧರ್ಮನೂ ಸ್ವಭಾವತಃ ಶಾಂತರೂಪನೇ ಆಗಿದ್ದರೂ ರೋಗಗ್ರಸ್ತನಾದಮೇಲೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದನು. ದೀಪಕನು ಭಿಕ್ಷೆಮಾಡಿ ತಂದ ಆಹಾರವನ್ನು ಶ್ರದ್ಧಾಭಕ್ತಿಗಳಿಂದ ಅರ್ಪಿಸಿದರೆ, ಅದನ್ನು ತಿನ್ನದೆ ಇಷ್ಟು ಕಡಮೆ ತಂದಿದ್ದೀಯೆ ಎಂದು ಎಸೆದು, ಕೋಪಗೊಳ್ಳುವನು. ಮರುದಿನ ಹೆಚ್ಚಾಗಿ ತಂದರೆ ಸ್ವಲ್ಪ ತಿಂದು ರುಚಿಯಾಗಿಲ್ಲವೆಂದು ಬಿಸುಟು, ರುಚಿಕರವಾದ ಪದಾರ್ಥಗಳನ್ನು ತರುವಂತೆ ಕಾಡುವನು. ವಿಧವಿಧವಾದ ಶಾಕಾಹಾರಗಳನ್ನು ತರುವಂತೆ ಪೀಡಿಸುವನು. ಗುರುವಿನ ಇಷ್ಟದಂತೆ ಅಹಾರವನ್ನು ತಂದರೆ ಅದನ್ನು ಮುಟ್ಟದೆ, ಶಿಷ್ಯನನ್ನು ಹೊಡೆದು, ದುರ್ಭರ ಮಾತುಗಳನ್ನಾಡಿ ಮನ ನೋಯುವಂತೆ ಮಾಡುವನು.

ಒಂದೊಂದುಸಲ ಗುರುವು ಸಂತೋಷದಲ್ಲಿರುವಂತೆ ಕಾಣಿಸಿಕೊಂಡು, “ದೀಪಕ, ನೀನು ನನ್ನ ಶಿಷ್ಯಶಿಖಾಮಣಿ. ಜ್ಞಾನರಾಶಿ. ನನಗೋಸ್ಕರವಾಗಿ ಇಷ್ಟೊಂದು ದುಃಖವನ್ನನುಭವಿಸುತ್ತಿದ್ದೀಯೆ.” ಎಂದು ಪ್ರಶಂಸೆ ಮಾಡಿ, ಮರುಕ್ಷಣವೇ “ನೀನು ನನಗೆ ಬಹಳ ನೋವುಂಟುಮಾಡುತ್ತಿದ್ದೀಯೆ. ದುರ್ವಾಸನೆ ಹೋಗುವಂತೆ ನನ್ನನ್ನು ತೊಳೆಯುತ್ತಿಲ್ಲ. ನೊಣಗಳು ಮುಸುರುತ್ತಿದ್ದರೆ, ಅವನ್ನು ನಿವಾರಿಸುತ್ತಲೂ ಇಲ್ಲ. ನೀನು ಈ ಕ್ಷಣವೇ ಮನೆಬಿಟ್ಟು ಹೊರಟು ಹೋಗು.” ಎಂದು ಕೋಪಗೊಳ್ಳುವನು. ನೊಣಗಳನ್ನು ನಿವಾರಿಸಲು ಮುಂದಾದರೆ ಅನ್ನವನ್ನು ತಂದಿಡಲಿಲ್ಲ ಎಂದು ಗದ್ದರಿಸುವನು. ಈ ರೀತಿಯಲ್ಲಿ, ಪಾಪಸಂಭೂತವಾದ ರೋಗಪೀಡಿತನಾದ ಗುರುವು ತನ್ನ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದನು. ಪಾಪಗತಿ ಹೀಗೆಯೇ ಇರುವುದು. ಅಧಿಕಪಾಪವಿದ್ದಲ್ಲಿ ದೈನ್ಯ, ಕೋಪ, ದುಷ್ಟತನಗಳುತುಂಬಿರುತ್ತವೆ. ಪಾಪದಲ್ಲಿ ನರಳುವವನಿಗೆ ಶುಭಾಶುಭಗಳ ವಿವೇಚನೆಯಿರುವುದಿಲ್ಲ. ಕೆಲವುಸಲ ದುಃಖಿಯಾಗಿ ದೈನ್ಯದಿಂದ ವರ್ತಿಸುವನು. ಮತ್ತೆ ಕೆಲವುಸಲ ಕೋಪದಿಂದ ದುರ್ಭರ ಮಾತುಗಳನ್ನಾಡುವನು. ಹಾಗೆ ಉನ್ಮತ್ತನಂತೆ ನಡೆಯುವನು ಎನ್ನುವುದರಲ್ಲಿ ಸಂಶಯವಿಲ್ಲ.

ಕುಷ್ಠುರೋಗವು ೧೮ ಬಗೆಗಳಲ್ಲಿರುವುದು. ಇವೆಲ್ಲವೂ ಬಾಧಾಕರವೇ ಆದರೂ ಅದರಲ್ಲಿ ’ಗಳತ್ಕುಷ್ಠು’ರೋಗವು ಎಲ್ಲದಕ್ಕಿಂತ ಬಹಳ ಹೆಚ್ಚು ಬಾಧೆಯನ್ನು ಕೊಡುವಂತಹುದು. ಹೆಚ್ಚು ದುಸ್ಸಹನವಾದದ್ದು. ವೇದಧರ್ಮನಿಗೆ ಅಂತಹ ಗಳತ್ಕುಷ್ಠು ರೋಗವು ಬಂದಿತ್ತು. ದೀಪಕನು ಆ ರೋಗದಿಂದುಂಟಾದ ಲೋಪದೋಷಗಳನ್ನು ಲೆಕ್ಕಿಸದೆ ಗುರುವು ತನ್ನನ್ನು ಕೋಪಗೊಂಡು ಬೈದರೂ, ಹೊಡೆದರೂ, ಅಪ್ಪಿತಪ್ಪಿ ಯವಾಗಲಾದರೊಮ್ಮೆ ಒಂದು ಒಳ್ಳೆಯ ಮಾತನ್ನಾಡಿದರೂ, ಎಲ್ಲವನ್ನೂ ಮರೆತು ಗುರುವೇ ಈಶ್ವರನೆಂಬ ಒಂದೇ ದೃಢನಂಬಿಕೆಯಿಂದ ಗುರುವಿನ ಸೇವೆಯಲ್ಲಿ ನಿರತನಾಗಿದ್ದನು. ಅವನಿಗೆ ಶಿವ ಕೇಶವರು ಇಬ್ಬರೂ ಗುರುವಿನಲ್ಲೇ ಇದ್ದಾರೆ ಎಂಬ ನಿಶ್ಚಿತವಾದ ಮನಸ್ಸಿತ್ತು. ಕಾಶಿಕ್ಷೇತ್ರದಲ್ಲಿನ ತೀರ್ಥಗಳನ್ನು ದರ್ಶಿಸಲಿಲ್ಲ. ಗುರುಸೇವೆಯಲ್ಲಿ ತಲ್ಲೀನನಾಗಿ ವಿಶ್ವೇಶ್ವರನ ದರ್ಶನವನ್ನೂ ಮಾಡಲಿಲ್ಲ. ತನ್ನ ದೇಹ ರಕ್ಷಣೆ ಪೋಷಣೆಯ ಕಡೆಗೂ ಗಮನ ಕೊಡದೆ ಗುರುಸೇವೆಯಲ್ಲಿ ಮುಳುಗಿಹೋಗಿದ್ದನು. ಗುರುವೇ ತ್ರಿಮೂರ್ತಿಸ್ವರೂಪನೆಂಬ ಧೃಢಬಾವನೆಯಿಂದ , ಅನ್ಯರಲ್ಲಿ ಬೆರೆಯದೆ, ಗುರುವಿನ ನಿಷ್ಠೂರವಾದ ಮಾತುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾ, ಗುರುವಿನ ಮನಸ್ಸಿಗೆ ಹಿತವಾಗುವ ಹಾಗೆ ನಡೆದುಕೊಳ್ಳುತ್ತಾ ಗುರುಸೇವೆಯಲ್ಲಿ ತಲ್ಲೀನನಾಗಿ ಹೋಗಿದ್ದನು.

ಅಂತಹ ಗುರುಸೇವೆಯಲ್ಲಿ ಮುಳುಗಿಹೋಗಿದ್ದ ದೀಪಕನಲ್ಲಿ ಪ್ರಸನ್ನನಾದ ವಿಶ್ವೇಶ್ವರನು ಅವನಿಗೆ ಪ್ರತ್ಯಕ್ಷನಾಗಿ, “ಮಗು, ದೀಪಕ, ನಿನ್ನ ಗುರುಸೇವೆಯಿಂದ ನಾನು ಬಹು ಸಂತುಷ್ಟನಾಗಿದ್ದೇನೆ. ನಿನಗೆ ಬೇಕಾದ ವರ ಕೇಳಿಕೋ. ಅದನ್ನು ನಾನು ನಿನಗೆ ಈಗಲೇ ಕೊಡುತ್ತೇನೆ. ನೀನು ಸದ್ಭಕ್ತ. ಮಹಾಜ್ಞಾನಿ. ದೀಪಕನಷ್ಟೇ ಅಲ್ಲ. ಕುಲದೀಪಕನೂ ಅಹುದು. ನಿನ್ನಲ್ಲಿ ಪ್ರಸನ್ನನಾಗಿದ್ದೇನೆ.” ಎಂದನು. ಅದಕ್ಕೆ ದೀಪಕ “ವಿಶ್ವೇಶ್ವರ, ಪರಮೇಶ, ಮೃತ್ಯುಂಜಯ, ಗುರುವಿನ ಅನುಮತಿಯಿಲ್ಲದೆ ನಾನು ಯಾವ ವರವನ್ನೂ ಕೇಳಲಾರೆ.” ಎಂದು ಹೇಳಿ ಗುರುವಿನ ಬಳಿಗೆ ಹೋಗಿ, ವಿನಮ್ರನಾಗಿ ಗುರುವಿನಲ್ಲಿ, “ಗುರುದೇವ, ವಿಶ್ವನಾಥನು ನನ್ನಲ್ಲಿ ಪ್ರಸನ್ನನಾಗಿ ನನಗೆ ವರ ಕೊಡಲು ಬಂದಿದ್ದಾನೆ. ನಿಮ್ಮ ಅನುಜ್ಞೆಯಾದರೆ ನಿಮ್ಮ ರೋಗವು ಸಂಪೂರ್ಣ ಗುಣವಾಗಲೆಂದು ಅವನಲ್ಲಿ ವರ ಬೇಡುತ್ತೇನೆ. ಅದರಿಂದ ನಿಮಗೆ ರೋಗ ಶಾಂತಿಯಾಗುವುದು.” ಎಂದು ಬಿನ್ನವಿಸಿಕೊಂಡನು. ಅದನ್ನು ಕೇಳಿದ ಗುರುವು ಕೋಪಾವಿಷ್ಟನಾಗಿ, “ದೀಪಕ, ನನ್ನ ಸೇವೆಮಾಡಿ ನೀನು ಅಲಸಿಹೋಗಿರುವಂತೆ ಕಾಣುತ್ತದೆ. ನನ್ನ ವ್ಯಾಧಿನಿವಾರಣೆಗಾಗಿ ನೀನು ವಿಶ್ವೇಶ್ವರನಲ್ಲಿ ವರ ಬೇಡಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಅನುಭವಿಸದೆ ಈ ರೋಗ ನಿವಾರಣೆಯಾಗುವುದಿಲ್ಲ ಎಂದು ನಿನಗೆ ನಾನು ಈ ಮುಂಚೆಯೇ ಹೇಳಲಿಲ್ಲವೇ? ವರದಿಂದ ಅದನ್ನು ನಿವಾರಿಸಿಕೊಂಡರೆ ಇನ್ನೊಮ್ಮೆ ಅದನ್ನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರಗಳು ಘೋಷಿಸುತ್ತ್ತಿವೆ. ಪಾಪದಿಂದ ಹುಟ್ಟಿದ ಈ ರೋಗವನ್ನು ಈ ಜನ್ಮದಲ್ಲೇ ಅನುಭವಿಸಿ ನಿವಾರಿಸಿಕೊಳ್ಳದಿದ್ದರೆ ಉಳಿದಿರುವ ಪಾಪ ಮೋಕ್ಷಕ್ಕೆ ಅಡ್ಡವಾಗುತ್ತದೆ.” ಎಂದನು. ಅದನ್ನು ಕೇಳಿದ ದೀಪಕನು ಗುರುವಾಕ್ಯವೇ ಆಜ್ಞೆಯೆಂದು ಈಶ್ವರನ ಬಳಿಗೆ ಹಿಂತಿರುಗಿ, “ದೇವ, ನಿನ್ನ ವರ ನನಗೆ ಬೇಕಾಗಿಲ್ಲ. ಗುರುವಿಗೆ ಇಷ್ಟವಾಗದಿರುವುದನ್ನು ನಾನು ನಿನ್ನಿಂದ ಸ್ವೀಕರಿಸಲಾರೆ.” ಎಂದು ವಿನಯವಾಗಿ ಹೇಳಿದನು.

ಅದನ್ನು ಕೇಳಿದ ವಿಶ್ವನಾಥ ಚಕಿತನಾಗಿ, ಅಲ್ಲಿಂದ ನೇರವಾಗಿ ಮೋಕ್ಷಮಂಟಪಕ್ಕೆ ಹೋಗಿ, ಅಲ್ಲಿ ಸೇರಿದ್ದ ವಿಷ್ಣುವೇ ಮೊದಲಾದ ದೇವತೆಗಳಿಗೆ ಈ ವಿಷಯವನ್ನು ತಿಳಿಸಿದನು. ಅದನ್ನು ಕೇಳಿದ ವಿಷ್ಣುವು, “ಈಶ್ವರ, ನೀನು ಹೇಳುತ್ತಿರುವುದು ಬಹಳ ಆಶ್ಚರ್ಯಕರವಾಗಿದೆ. ಆ ಗುರು ಶಿಷ್ಯರು ಯಾರು? ಅವರೆಲ್ಲಿರುತ್ತಾರೆ? ಎಲ್ಲವನ್ನೂ ವಿವರಿಸಿ ಹೇಳು.” ಎಂದನು. ಅದಕ್ಕೆ ವಿಶ್ವನಾಥನು, “ದೀಪಕನೆಂಬ ಈ ಹುಡುಗ ಪರಮ ಗುರುಭಕ್ತ. ಗೋದಾವರಿ ತೀರದಲ್ಲಿ ನೆಲೆಸಿರುವ ವೇದಧರ್ಮನೆಂಬುವವನ ಶಿಷ್ಯ. ದೀಪಕನು ಗುರುಸೇವೆಯಲ್ಲೇ ಮುಳುಗಿಹೋಗಿದ್ದಾನೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಅಂತಹ ಗುರುಭಕ್ತಿಪರಾಯಣನನ್ನು ನಾನು ಇನ್ನೆಲ್ಲಿಯೂ ನೋಡಿಲ್ಲ. ಅವನ ಗುರುಭಕ್ತಿಯನ್ನು ಮೆಚ್ಚಿಕೊಂಡ ನಾನು ವರಕೊಡಬೇಕೆಂದು ಸಂಕಲ್ಪಿಸಿ ಅವನ ಬಳಿಗೆ ಹೋದೆ. ಅವನಿಗೆ ನಾನು ವರವನ್ನು ನೀಡಿದರೂ ಅದು ತನ್ನ ಗುರುವಿಗೆ ಒಪ್ಪಿಗೆಯಾಗಲಿಲ್ಲವೆಂದು ನನ್ನ ವರವನ್ನು ನಿರಾಕರಿಸಿಬಿಟ್ಟ. ನಿನ್ನ ವರಾಪೇಕ್ಷಿಗಳಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿರುವ ಅನೇಕ ಋಷಿಗಳನ್ನು ಉಪೇಕ್ಷಿಸಿ ನನಗೇಕೆ ವರಕೊಡಬೇಕೆಂದು ಬಂದಿದ್ದೀಯೆ ಸ್ವಾಮಿ? ನಿನ್ನ ವರದ ಅವಶ್ಯಕತೆ ನನಗಿಲ್ಲ.” ಎಂದು ಹೇಳಿ ನನ್ನಿಂದ ವರ ಪಡೆಯದೆ ಹೊರಟುಹೋದ. ಮನೋವಾಕ್ಕಾಯಗಳನ್ನು ಗುರುವಿಗೆ ಅರ್ಪಿಸಿ, ಗುರುವೇ ತ್ರಿಮೂರ್ತಿ ರೂಪನು ಎನ್ನುವ ದೃಢಬಾವನೆಯಿಂದ, ಗುರುವಿನ ಸೇವೆಯಲ್ಲಿ ನಿಮಗ್ನನಾಗಿಹೋಗಿದ್ದಾನೆ. ಗುರುವೇ ತಾಯಿ ತಂದೆ ಸಕಲವೂ ಎಂಬ ನಿಶ್ಚಯದಿಂದ ಗುರುಸೇವೆಯಲ್ಲಿ ನಿರತನಾಗಿ ಹೋಗಿದ್ದಾನೆ. ತನ್ನ ದೇಹಕ್ಕೆ ಬೇಕಾದ ರಕ್ಷಣೆ ಪೋಷಣೆಗಳ ಅವಶ್ಯಕತೆಯನ್ನೂ ಅವನು ಮರೆತಿದ್ದಾನೆ. ಅವನ ಸುಗುಣಗಳನ್ನು ನಾನು ಎಷ್ಟೆಂದು ವರ್ಣಿಸಲಿ? ಅವಿದ್ಯಾಂಧಕಾರಕ್ಕೆ ಅವನೇ ದೀಪವನ್ನು ಹಿಡಿಯುವವನು. ಧರ್ಮ, ಜ್ಞಾನ, ಯಶಸ್ಸು ಎಲ್ಲವೂ ಗುರುವೇ ಎಂಬ ದೃಢನಿಶ್ಚಯದಿಂದ ಅವನು ಗುರು ಭಜನೆಯನ್ನು ಮಾಡುತ್ತಿದ್ದಾನೆ.” ಎಂದು ಆ ಗುರುಶಿಷ್ಯರ ಸಂಬಂಧವನ್ನು ವಿವರಿಸಿ ಹೇಳಿದನು.

ಅದನ್ನು ಕೇಳಿದ ವಿಷ್ಣುವು ಆ ಗುರುಶಿಷ್ಯರನ್ನು ಕಾಣಬೇಕೆಂದು ಅವರಿದ್ದಲ್ಲಿಗೆ ಬಂದನು. ಅಲ್ಲಿ ತಾನು ಕೇಳಿದ್ದಕ್ಕಿಂತ ಅತಿಶಯವಾದ ಶ್ರದ್ಧಾ ಭಕ್ತಿಗಳಿಂದ ಗುರುಸೇವೆಯನ್ನು ಮಾಡುತ್ತಿದ್ದ ದೀಪಕನನ್ನು ಕಂಡನು. ಅದನ್ನು ಕಂಡು ಮೆಚ್ಚಿಕೊಂಡ ಭಕ್ತವತ್ಸಲನಾದ ವಿಷ್ಣುವು ದೀಪಕನನ್ನು ಹತ್ತಿರಕ್ಕೆ ಕರೆದು, ” ಮಗು, ನಿನ್ನ ಗುರುಭಕ್ತಿಗೆ ಮೆಚ್ಚಿದೆ. ನಿನಗೇನು ಬೇಕೋ ಕೇಳು. ಕೊಡುತ್ತೇನೆ.” ಎಂದನು. ಅದಕ್ಕೆ ದೀಪಕ, ” ಹೇ ಹೃಷೀಕೇಶ, ನಾನು ನಿನ್ನನ್ನು ವರ ಕೋರಲಿಲ್ಲ. ಕೋರದಿದ್ದವರಿಗೆ ನೀನು ವರವನ್ನೇಕೆ ಕೊಡುತ್ತಿದ್ದೀಯೆ? ಸ್ವಾಮಿ, ನಾರಯಣ, ನಾನು ನಿನ್ನ ಸ್ಮರಣೆ ಮಾಡಲಿಲ್ಲ. ನಿನ್ನ ಸೇವೆ ಮಾಡಲಿಲ್ಲ. ತಪಸ್ವಿಗಳನೇಕರು ನಿನಗಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆ. ಅವರನ್ನೆಲ್ಲ ಉಪೇಕ್ಷಿಸಿ ನನಗೇಕೆ ವರ ನೀಡಲು ಬಂದಿದ್ದೀಯೆ ಸ್ವಾಮಿ? ಬೇಡದೆ ನೀನಾಗಿ ಕೊಡುವ ವರವನ್ನು ಸ್ವೀಕರಿಸಲು ನನಗೆ ಯೋಗ್ಯತೆ ಇಲ್ಲ.” ಎಂದನು.

ದೀಪಕನು ದೃಢಮನಸ್ಕನಾಗಿ ಆಡಿದ ಆ ಮಾತುಗಳನ್ನು ಕೇಳಿದ ವಿಷ್ಣುವು ಬಹು ಸಂತೋಷಗೊಂಡು, ಅವನ ಗುರುಭಕ್ತಿಯಿಂದ ಮೋಹಗೊಂಡವನಾಗಿ, “ದೀಪಕ, ನೀನು ಮೋಕ್ಷದಾಯಕವಾದ ಗುರುಭಕ್ತಿ ಏನೆಂಬುದನ್ನು ತೋರಿಸಿದ್ದೀಯೆ. ಅದರಿಂದ ನಾನು ಬಹಳ ಸಂತೋಷಗೊಂಡಿದ್ದೇನೆ. ಗುರು ಭಕ್ತರು ನನ್ನ ಭಕ್ತರು. ಅವರ ಗುರುಭಕ್ತಿ ನನ್ನಲ್ಲೇ ಪರ್ಯವಸನವಾಗುತ್ತದೆ. ಅದರಲ್ಲಿ ಸಂದೇಹವಿಲ್ಲ. ನಾನು ಭಕ್ತರಿಗೆ ಅಧೀನ. ಅದರಿಂದ ಅವರು ಗುರುವಿನಲ್ಲಿ ಕೇಳುವ ವರವನ್ನು ನಾನೇ ಕೊಡುತ್ತೇನೆ. ಮಾತಾಪಿತರ ಸೇವಾನಿರತರು, ಪತಿಸೇವಾಪರಾಯಣೆಯಾದ ಸಾಧ್ವಿ, ವಿದ್ವಾಂಸರು, ವಿಪ್ರರು, ತಪಸ್ವಿಗಳು, ಯತಿಗಳು ಯೋಗಿಗಳು ಮುಂತಾದವರನ್ನು ಸೇವಿಸುವವರೆಲ್ಲರೂ ನನ್ನ ಭಕ್ತರೇ!” ಎಂದು ಹೇಳಿದ ವಿಷ್ಣುವಿನ ಮಾತನ್ನು ಕೇಳಿದ ದೀಪಕ, “ಹೇ ಹೃಷೀಕೇಶ, ನನ್ನ ಮನೋನಿಶ್ಚಯವನ್ನು ಹೇಳಲಿಚ್ಛಿಸುತ್ತೇನೆ. ವೇದ ಶಾಸ್ತ್ರಗಳನ್ನು ಬೋಧಿಸುವವನು ಗುರುವೇ ಅಲ್ಲವೆ? ಜ್ಞಾನ ವಿಜ್ಞಾನ ಸರ್ವವೂ ಗುರುವಿಗೆ ಅವಗತವಲ್ಲವೇ? ತ್ರಿಮೂರ್ತಿ ಸ್ವರೂಪನೇ ಅದದ್ದರಿಂದ ಅವರೂ ಅವನಿಗೆ ಅಧೀನರೇ ಅಲ್ಲವೆ? ಹಾಗಿರುವಾಗ ನನಗೆ ಇತರ ದೇವತೆಗಳಿಂದ ಆಗಬೇಕಾದದ್ದರೂ ಏನಿದೆ? ನನಗೆ ಗುರುವೇ ಎಲ್ಲ ದೇವತೆಗಳೂ! ದೈವ, ತೀರ್ಥಗಳು ಸರ್ವವೂ ಅವರೇ ಎಂಬುದು ಪರಮಸತ್ಯ! ಗುರುವಿನಿಂದಾಗಿಯೇ ಪರಮಾರ್ಥವೆನ್ನುವುದೂ ನನಗೆ ಸನ್ನಿಹಿತವಾಗಿದೆ. ಗುರುವಲ್ಲದೆ ನನಗೆ ಅನ್ಯರಾರೂ ಇಲ್ಲ. ಗುರುವಿನಿಂದಾಗಿಯೇ ಈಶ್ವರನೂ ನನಗೆ ಸನ್ನಿಹಿತನಾದನು. ಹೇ ನಾರಾಯಣ, ನೀನು ಕೊಡಬಲ್ಲ ವರವನ್ನು ನನ್ನ ಗುರುವೇ ಕೊಡಬಲ್ಲನಲ್ಲವೆ? ಹಾಗಿರುವಾಗ ಗುರುವನ್ನು ಬಿಟ್ಟು ಬೇರೆ ಆಶ್ರಯವನ್ನೇಕೆ ಹುಡುಕಬೇಕು?” ಎಂದು ಬಹು ವಿಧೇಯನಾಗಿ ನುಡಿದನು. ದೀಪಕನ ಮಾತುಗಳನ್ನು ಆಲಿಸಿದ ವಿಷ್ಣುವು, ಅತ್ಯಂತ ಸಂತೋಷಗೊಂಡು, “ಮಗು, ದೀಪಕ, ಶಿಷ್ಯೋತ್ತಮ, ನೀನು ಬಹಳ ಧನ್ಯ. ನನಗೆ ಅತ್ಮೀಯನಾದೆ. ನಿನ್ನ ಭಕ್ತಿಗೆ ನಾನು ಬದ್ಧನಾಗಿದ್ದೇನೆ. ಅದರಿಂದಲೇ ನಾನೇ ನಿನ್ನ ಬಳಿಗೆ ಬಂದೆ. ಏನು ವರವನ್ನು ಬೇಕಾದರೂ ಕೇಳು. ನಾನು ಸಂತೋಷದಿಂದ ಕೊಡುತ್ತೇನೆ. ಇದಕ್ಕೆ ಮುಂಚೆ ವಿಶ್ವೇಶ್ವರನೂ ನಿನಗೆ ವರಕೊಡಲು ಬಂದಿದ್ದನಲ್ಲವೇ? ನಮ್ಮಿಬ್ಬರಲ್ಲಿ ಯಾವ ಬೇಧವೂ ಇಲ್ಲ. ನಮ್ಮ ಸಂತೋಷಕ್ಕಾಗಿ ವರ ಕೇಳು. ನಿನಗೆ ನಾನು ವಶನಾಗಿದ್ದೇನೆ.” ಎಂದು ಹೇಳಿದನು. ಅದಕ್ಕೆ ದೀಪಕ, “ಸ್ವಾಮಿ, ಶ್ರೀಹರಿ, ವರವನ್ನು ಕೊಡಲೇಬೇಕೆಂದುಕೊಂಡರೆ, ನನ್ನ ಗುರುಭಕ್ತಿ ಅನನ್ಯವಾಗಿ, ಅಚಂಚಲವಾಗಿ ವೃದ್ಧಿಯಾಗಲಿ ಎಂಬ ವರವನ್ನು ಕೊಡು. ಅದನ್ನು ಬಿಟ್ಟು ಬೇರೆ ನನಗೆ ಎಂತಹ ವರವೂ ಬೇಡ.” ಎಂದು ಹೇಳಿ ಶ್ರೀಹರಿಯ ಪಾದಗಳಿಗೆ ನಮಸ್ಕರಿಸಿದನು.

ಶ್ರೀಹರಿಯು ಅವನನ್ನು ಹಿಡಿದೆತ್ತಿ, “ದೀಪಕ, ನೀನು ನಿನ್ನ ಗುರುಭಕ್ತಿಯಿಂದ ಧನ್ಯನಾದೆ. ಗುರುಭಕ್ತಿಯೇ ಪರಬ್ರಹ್ಮ. ಬೇರೊಂದಿಲ್ಲ. ನಾನು ಹೇಳುವುದನ್ನು ಚಿತ್ತವಿಟ್ಟು ಕೇಳು. ಪರಿಶುದ್ಧವಾದ ಮನಸ್ಸಿನಿಂದ ಗುರುವನ್ನು ಸೇವಿಸು. ಭಕ್ತಿ ತುಂಬಿ ಅವನನ್ನು ಭಜಿಸು. ಅವನ ಸ್ತೋತ್ರ ಮಾಡು. ಅದರಿಂದ ನಾನು ಸಂತೋಷಗೊಳ್ಳುತ್ತೇನೆ. ಆ ಸ್ತುತಿಯು ನನಗೇ ಸೇರುತ್ತದೆ. ಲೋಕದಲ್ಲಿ ಶ್ರದ್ಧಾ ಭಕ್ತಿಗಳಿಂದ ವೇದವೇದಾಂಗ ಶೃತಿ ಸ್ಮೃತಿಗಳಲ್ಲಿ ನಿರತರಾದವರೆಲ್ಲರೂ ಗುರುಸೇವಾ ನಿರತರೇ! ಅವರೆಲ್ಲರೂ ನನ್ನ ಪ್ರೀತಿಪಾತ್ರರೇ! ವೇದ ಸಿದ್ಧಾಂತದಲ್ಲಿ ಪರಬ್ರಹ್ಮನೇ ಸದ್ಗುರುವು. ಆದುದರಿಂದ ಗುರುವನ್ನೇ ಸೇವಿಸು. ಭಜಿಸು. ಹಾಗೆ ಮಾಡಿದರೆ ದೇವತೆಗಳೆಲ್ಲರೂ ನಿನ್ನ ವಶರಾಗುತ್ತಾರೆ. ಗುರು ಎನ್ನುವ ಎರಡು ಅಕ್ಷರಗಳು ಅಮೃತ ಸಾಗರವೇ! ಆ ಸಮುದ್ರದಲ್ಲಿ ಮುಳುಗಿದವನನ್ನು ತಾಪತ್ರಯಗಳು ಮುಟ್ಟಲಾರವು. ಸದ್ಗುರುವಿನಲ್ಲಿ ಚಿತ್ತವನ್ನು ಸದಾ ನಿಲ್ಲಿಸಿಕೊಂಡಿರುವವನು ಪೂಜಾರ್ಹನು. ಗುರುನಾಮಾಮೃತವನ್ನು ಸದಾ ಪಾನಮಾಡುವವನು ಸುರನೇ ಆಗಬಲ್ಲನು. ನಾನು, ಬ್ರಹ್ಮ, ಬ್ರಹ್ಮಜ್ಞಾನ ಸಂಪನ್ನನಾದವನು ಯಾರನ್ನು ಅನುಗ್ರಹಿಸುತ್ತೇವೋ ಅವನಿಗೆ ಸದ್ಗುರುವು ಲಭ್ಯನಾಗುತ್ತಾನೆ. ನಾವು ತ್ರಿಮೂರ್ತಿಗಳು ಕೊಡಬಲ್ಲ ವರವನ್ನು ಸದ್ಗುರುವೇ ಕೊಡಬಲ್ಲನು. ಅದರಿಂದಲೇ ಗುರುವು ತ್ರಿಮೂರ್ತ್ಯಾತ್ಮಕನು.” ಎಂದು ಹೇಳಿ ಅದೃಶ್ಯನಾದನು.

ಕಲಿಪುರುಷ, ಸದ್ಗುರು ಸೇವಾನಿರತನಾದ ಮಹಾತ್ಮನ ಮಾಹಾತ್ಮ್ಯೆ ಎಂತಹುದು ಎಂಬುದನ್ನು ಕೇಳು. ವಿಷ್ಣುವಿನಿಂದ ವರ ಪಡೆದ ದೀಪಿಕ ತನ್ನ ಗುರುವಿನ ಬಳಿಗೆ ಬಂದು ಗುರುವಿಗೆ ನಮಸ್ಕರಿಸಿದನು. ಸರ್ವಜ್ಞನಾದ ಆ ಗುರುವು ಅವನನ್ನು “ಶಿಷ್ಯ, ನಾರಾಯಣನು ನಿನ್ನೊಡನೆ ಏನು ಮಾತನಾಡಿದ? ನೀನು ಅವನಲ್ಲಿ ನನಗೆ ಆತಂಕ ತರುವಂತಹುದನ್ನು ಏನು ಬೇಡಿದೆ? ಅವನು ನಿನಗೆ ಏನನ್ನು ಕೊಟ್ಟ?” ಎಂದು ಕೇಳಲು, ದೀಪಕನು, “ಗುರುವೇ ನಾನು ವಿಷ್ಣುವನ್ನು ನಿಮ್ಮ ಪಾದಗಳಲ್ಲಿ ಅಚಂಚಲವಾದ ಭಕ್ತಿಯಿರುವಂತೆ ವರ ಬೇಡಿದೆ. ವಿಷ್ಣುವು ಇನ್ನೂ ಹೆಚ್ಚು ದೃಢಭಕ್ತಿಯಿಂದ ನಿಮ್ಮ ಪಾದ ಸೇವೆಮಾಡಿಕೊಳ್ಳುವಂತೆ ನನಗೆ ವರ ನೀಡಿದನು.” ಎಂದು ಹೇಳಿದನು. ದೀಪಕನ ಮಾತುಗಳನ್ನು ಕೇಳಿದ ಗುರುವು ಬಹು ಸಂತುಷ್ಟನಾಗಿ, ಪ್ರಸನ್ನನಾಗಿ ಕಾಶಿಕ್ಷೇತ್ರದಲ್ಲಿ ಚಿರಂಜೀವಿಯಾಗಿ ನಿವಾಸಮಾಡು. ಅಷ್ಟಸಿದ್ಧಿಗಳೂ, ನವನಿಧಿಗಳೂ ನಿನ್ನ ವಶವರ್ತಿಗಳಾಗಿರುತ್ತಾರೆ. ಕಾಶಿ ವಿಶ್ವನಾಥನೂ ನಿನಗೆ ಅಧೀನನಾಗಿರುತ್ತಾನೆ. ನಿನ್ನ ಸ್ಮರಣ ಮಾತ್ರದಿಂದಲೇ ಜನಗಳ ಕಷ್ಟಗಳು ದೂರವಾಗುತ್ತವೆ. ಪುತ್ರಪೌತ್ರರಿಂದ ಕೂಡಿ ಸುಖ ಸೌಖ್ಯಗಳಿಂದ ಜೀವನ ಮಾಡುತ್ತಾರೆ.” ಎಂದು ದೀಪಕನನ್ನು ಆಶೀರ್ವದಿಸಿ ವೇದಧರ್ಮನು ಪಾಪರಹಿತನಾಗಿ ನಿರೋಗಿಯಾಗಿ ದಿವ್ಯ ದೇಹದಿಂದ ಪ್ರಕಾಶಿಸಿದನು. ಶಿಷ್ಯನ ಗುರುಭಕ್ತಿಯನ್ನು ಪರೀಕ್ಷಿಸಲೆಂದೇ ಶ್ರೀ ಗುರುವು ಕುಷ್ಟುರೋಗಿಯಾದನೇ ಹೊರತು, ಆ ಮಹಾಜ್ಞಾನಮೂರ್ತಿಯಾದ ಮುನಿ ವೇದಧರ್ಮನಿಗೆ ಪಾಪ ಹೇಗೆ ಆವರಿಸಬಲ್ಲುದು? ಅನೇಕ ಜನ್ಮ ಸಂಚಿತವಾದ ಪಾಪರಾಶಿಯನ್ನು ನಾಶಮಾಡುವಂತಹ ಕಾಶಿಕ್ಷೇತ್ರ ಮಹಿಮೆಯನ್ನು ಪ್ರಕಟಗೊಳಿಸಲು ಆತ ಹಾಗೆ ಮಾಡಿದರೇ ಅಲ್ಲದೆ ಶ್ರೀ ಗುರುವಿಗೆ ಪಾಪವೆಲ್ಲಿಂದ ಬಂತು? ಕಾಶಿಯಲ್ಲಿ ಸದಾ ನಿವಾಸಮಾಡುವವರು ಅಧರ್ಮಿಗಳಾಗಿದ್ದರೂ ಅವರನ್ನು ಪಾಪಫಲಗಳು ಅಂಟಲಾರವು.”

ಬ್ರಹ್ಮನ ಮಾತುಗಳನ್ನು ಕೇಳಿದ ಕಲಿ ಅವನಿಗೆ ನಮಸ್ಕರಿಸಿ ಬ್ರಹ್ಮನ ಆಜ್ಞೆಯನ್ನು ಶಿರಸಾವಹಿಸಿ, ನೀನು ಹೇಳಿದಂತೆ ನನ್ನ ಧರ್ಮವನ್ನು ನೆರವೇರಿಸುತ್ತೇನೆ ಎಂದು ಬ್ರಹ್ಮನಿಗೆ ಆಶ್ವಾಸನೆ ಕೊಟ್ಟು ಹೊರಟು ಹೋದನು. ಎಂದು ಹೇಳಿ ಸಿದ್ಧಮುನಿಯು, “ನಾಮಧಾರಕ, ಗುರುಭಕ್ತಿ ಬಹು ಶೀಘ್ರವಾಗಿ ಸಂಸಾರಸಾಗರವನ್ನು ದಾಟಿಸಿ ಸದ್ಗತಿಯನ್ನು ಕೊಡುವುದು. ದೃಢವಾದ ಗುರುಭಕ್ತಿಯುಳ್ಳವನು ನೆಲೆಸಿರುವ ಎಡೆಯಲ್ಲಿ ಈಶ್ವರನು ನೆಲೆಸಿರುತ್ತಾನೆ. ಗುರುವಿನಲ್ಲಿ, ಹರಿಹರರಲ್ಲಿ ಸ್ಥಿರಭಕ್ತಿಯುಳ್ಳವನಿಗೆ, ಮನೋವಾಕ್ಕಾಯಗಳಿಂದ ಗುರುಸೇವೆಯಲ್ಲಿ ನಿರತನಾದವನಿಗೆ, ದೀಪಕನಿಗೆ ಲಭಿಸಿದಂತೆ ಈಶ್ವರಾನುಗ್ರಹ ಮೊದಲಾದವು ಸಿದ್ಧಿಸುವುವು. ಸದ್ಗುರುವು ಅಂತಹ ಸನ್ನಿಹಿತ ಭಕ್ತರ ಬುದ್ಧಿಯನ್ನು ವಿಕಾಸಗೊಳಿಸಿ ಅವರನ್ನು ಸದಾ ಋಜುಮಾರ್ಗದಲ್ಲಿ ನಡೆಸುತ್ತಾನೆ.” ಎಂದು ಹೇಳಿದನು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

ಶ್ರೀ ಗುರು ಚರಿತ್ರೆ-ಅಧ್ಯಾಯ ೧

||ಶ್ರೀ ಗುರು ಚರಿತ್ರೆ – ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ||

||ಜ್ಞಾನ ಕಾಂಡ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ||
||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||

ವಿಘ್ಹಹರ್ತಾ ಗಣಾಧಿಪತಿ, ಪಾರ್ವತೀಪುತ್ರ ಲಂಬೋದರಾ, ನಿನಗೆ ನಮಸ್ಕಾರ. ಓ ಏಕದಂತಾ! ನಿನಗೆ ಜಯವು ಜಯವು. ನಿನ್ನ ಮೊರದಂತಹ ಕಿವಿಗಳನ್ನ್ನು ಕದಲಿಸಿದಾಗ ಬರುವ ಗಾಳಿಗೆ ವಿಘ್ನಗಳೆಲ್ಲವೂ ಓಡಿಹೋಗುತ್ತವೆ. ನಿನ್ನ ಮುಖವು ಸ್ಫುಟವಿಟ್ಟ ಬಂಗಾರದಂತೆ ಹೊಳೆಯುತ್ತಿದೆ. ಉದಯಸೂರ್ಯನಂತೆ ಕಾಂತಿ ತೋರುತ್ತಿದೆ ನಿನ್ನ ತೇಜಸ್ಸು. ವಿಘ್ನಗಳೆಂಬ ಅರಣ್ಯಗಳನ್ನು ನಾಶಮಾಡಲು ನಿನ್ನ ಕೈಯಲ್ಲಿ ಪರಶುವನ್ನು ಧರಿಸಿದ್ದೀಯೆ. ನಿನ್ನ ನಡುವಿನಲ್ಲಿ ನಾಗಬಂಧವಿದೆ. ಸರ್ಪಗಳನ್ನೇ ಉಪವೀತವಾಗಿ ಹಾಕಿಕೊಂಡಿದ್ದೀಯೆ. ನಾಲ್ಕು ಭುಜಗಳ ವಿನಾಯಕಾ, ನಿನ್ನ ಕಣ್ಣುಗಳು ವಿಶಾಲವಾಗಿ ಕಾಣುತ್ತಿವೆ. ನೀನು ವಿಘ್ನ ಸಮೂಹಗಳನ್ನು ತೊಲಗಿಸಿ ವಿಶ್ವವನ್ನೆಲ್ಲಾ ರಕ್ಷಿಸುತ್ತೀಯೆ. ನಿನ್ನ ಧ್ಯಾನ ಮಾಡುವವರನ್ನು ವಿಘ್ನಗಳು ಬಾಧಿಸಲಾರವು. ಇಷ್ಟಾರ್ಥಗಳೆಲ್ಲವೂ ತ್ವರಿತವಾಗಿ ಈಡೇರುತ್ತವೆ. ಶುಭಕಾರ್ಯಗಳಲ್ಲಿ ಎಲ್ಲರಿಗಿಂತಲೂ ಮೊದಲು ನಿನ್ನನ್ನೇ ಪೂಜಿಸುತ್ತಾರೆ. ಓ ಲಂಬೋದರಾ, ನೀನೇ ಹದಿನಾಲ್ಕು ವಿದ್ಯೆಗಳನ್ನು ನೀಡುವವನು. ಅದರಿಂದಲೇ ಬ್ರಹ್ಮಾದಿ ದೇವತೆಗಳೆಲ್ಲರೂ ನಿನ್ನನ್ನೇ ಪೂಜಿಸಿದರು. ಶಂಕರನೂ ಕೂಡಾ ತ್ರಿಪುರಾಸುರನನ್ನು ಸಂಹರಿಸುವುದಕ್ಕೆ ಮುಂಚೆ ನಿನ್ನನ್ನೇ ಪೂಜೆಮಾಡಿದನು. ವಿಷ್ಣುವು ಕೂಡಾ ನಿನ್ನನ್ನು ಸ್ತೋತ್ರಮಾಡಿದ್ದರಿಂದಲೇ ದೈತ್ಯರನ್ನು ತ್ವರೆಯಾಗಿ ಸಂಹರಿಸಲು ಶಕ್ತನಾದನು. ಓ ಗಣಪತಿ, ವಿಷ್ಣುವೇ ಮೊದಲಾದ ದೇವತೆಗಳೆಲ್ಲರೂ ನಿನ್ನನ್ನು ಮೊದಲು ನಮಸ್ಕರಿಸಿ ಕೆಲಸಗಳನ್ನು ಪ್ರಾರಂಭಿಸಿದ್ದರಿಂದಲೇ ಅವರವರ ಇಷ್ಟಾರ್ಥಸಿದ್ಧಿಗಳನ್ನು ಪಡೆದರು. ಓ ಗಣನಾಥಾ, ದಯಾಸಾಗರಾ, ರಾಕ್ಷಸಾಂತಕಾ, ವಿಘ್ನಹರ್ತಾ, ನನ್ನ ಭಯವನ್ನೆಲ್ಲಾ ನೀಗಿ, ನನ್ನ ಮನಸ್ಸನ್ನು ಸ್ವಚ್ಛಗೊಳಿಸು. ಓ ಗಣನಾಯಕಾ, ವಿಘ್ನಹಂತಾ, ನಿನ್ನನ್ನು ನಮಸ್ಕರಿಸಿದರೆ ಸಾಕು. ಲೋಕದಲ್ಲಿ ಕಾರ್ಯಸಿದ್ಧಿಯಾಗುತ್ತದೆ. ನೀನೇ ಸರ್ವಕಾರ್ಯಗಳಿಗೂ ಆಧಾರ. ದಯಾಸಮುದ್ರ. ಗೌರಿಪುತ್ರ. ನನ್ನ ಬುದ್ಧಿಯನ್ನು ಸ್ವಚ್ಛಗೊಳಿಸು. . ಓ ಗಜಾನನ, ನನ್ನ ಮನೋವಾಸನೆಗಳನ್ನೇಲ್ಲಾ ಪೂರಯಿಸು. ನನಗೆ ವಿದ್ಯಾದಾನ ಮಾಡು. ಗುರುಚರಿತ್ರೆಯನ್ನು ಬರೆಯಬೇಕೆಂಬ ನನ್ನ ಹಂಬಲವನ್ನು ನಿನ್ನ ಕರುಣಾದೃಷ್ಟಿ ಹಾಯಿಸಿ ಪೂರ್ಣಗೊಳಿಸು. ಸರ್ವವಿದ್ಯಾನಿಧಿಯಾದ ನೀನೇ ನಿನ್ನ ಶರಣು ಬಂದವರಿಗೆ ವರದಾತ. ನಿನಗೆ ಅನಂತ ನಮಸ್ಕಾರಗಳು.

ವಾಗ್ದೇವಿ ಸರಸ್ವತಿಗೆ ನಮಸ್ಕರಿಸುತ್ತಿದ್ದೇನೆ. ತಾಯಿ, ಶಾರದಾಂಬೆ, ನಿನ್ನ ಎರಡು ಕೈಗಳಲ್ಲ್ಲಿ ವೀಣೆ ಪುಸ್ತಕಗಳನ್ನು ಹಿಡಿದ್ದಿದ್ದೀಯೆ. ಹಂಸ ನಿನ್ನ ವಾಹನ. ವೇದ ಶಾಸ್ತ್ರ ವಿದ್ಯೆಗಳನ್ನು ಕಲಿಯಬೇಕೆಂದಿರುವವರಿಗೆ ಸಂತೋಷದಿಂದ ನೀನು ಅಧಿಕಾರವನ್ನು ನೀಡುತ್ತೀಯೆ. ನಿನ್ನನ್ನು ನಮಸ್ಕರಿಸಿದವರಿಗೆ ಸದಾಕಾಲದಲ್ಲೂ ಜ್ಞಾನ ಲಭ್ಯವಾಗುತ್ತದೆ. ನಿನ್ನ ಪಾದಗಳನ್ನು ಹಿಡಿದು ಬೇಡಿಕೊಳ್ಳುತ್ತಿದ್ದೇನೆ. ನನ್ನ ನಾಲಗೆಯ ತುದಿಯಲ್ಲಿನಿಂತು ಈ ಗ್ರಂಥ ಸಿದ್ಧಿಗೊಳ್ಳುವಂತೆ ಮಾಡು. ಹೇ ಮಾತೆ! ನನ್ನ ಪ್ರಾರ್ಥನೆಯನ್ನು ಮನ್ನಿಸಿ ನನಗೆ ಸುಮತಿಯನ್ನು ಕೊಡು. ಸನ್ಮತಿಯನ್ನು ಕೊಟ್ಟು ಈ ಗುರು ಚರಿತ್ರೆ ಪ್ರಸಿದ್ಧಿಗೆ ಬರುವಂತೆ ಮಾಡು. ಹೇ ವಾಗ್ದೇವಿ, ಜಗನ್ಮಾತೆ ನಿನಗೆ ಜಯವಾಗಲಿ. ನಿನಗೆ ನಮಸ್ಕರಿಸುತ್ತಿದ್ದೇನೆ. ಸಕಲ ವೇದಶಾಸ್ತ್ರಗಳೂ ನಿನ್ನನ್ನೇ ಹೊಗಳುತ್ತಿವೆ. ಷಡ್ದರ್ಶನಗಳು ನಿನ್ನಿಂದಲೇ ಬಂದವಲ್ಲವೇ! ನನ್ನ ಗುರುದೇವರು ಶ್ರೀ ನರಸಿಂಹ ಸರಸ್ವತಿಗಳು ನೀನೇ ಎಂದು ಲೋಕ ಪ್ರಸಿದ್ಧಿ. ಅವರಿಗೆ ಅಂಕಿತನಾದ ನನ್ನಲ್ಲಿ ನಿನ್ನ ಪ್ರೀತಿಯನ್ನು ತೋರಿಸು. ಸೂತ್ರಧಾರನು ನಡೆಸಿದಂತೆ ಗೊಂಬೆಗಳು ನಾಟ್ಯಮಾಡುತ್ತವೆ. ಆ ಗೊಂಬೆಗಳು ನಿಜವಲ್ಲ. ಜಡ. ಅವಕ್ಕೆ ಸ್ವಾತಂತ್ರ್ಯವೆಲ್ಲಿ? ಹಾಗೆಯೇ ನಿನ್ನ ಇಷ್ಟವನ್ನನುಸರಿಸಿ ನನ್ನ ಮಾತುಗಳನ್ನು ಹೊರಡಿಸು. ಹೇ ತಾಯಿ ದಯಾನಿಧಿ, ವಾಗ್ದೇವಿ, ಜ್ಞಾನಹೀನನಾದ ನಾನು ಪ್ರಾರ್ಥಿಸುತ್ತಿದ್ದೇನೆ. ನನ್ನ ಭಯವನ್ನು ಹೋಗಲಾಡಿಸು. ತಾಯಿ, ಭಾರತಿ, ನಿನ್ನ ಪಾದಗಳನ್ನು ಆಶ್ರಯಿಸಿದ್ದೇನೆ. ನನ್ನಲ್ಲಿ ಪ್ರಸನ್ನಳಾಗಿ ಈ ಗುರುಚರಿತ್ರೆ ವಿಕಾಸಗೊಳ್ಳುವಂತೆ ಅನುಗ್ರಹಮಾಡು. ತ್ರಿಗುಣಸ್ವರೂಪಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಣಾಮಗಳು. ವಿದ್ಯಾಪ್ರವರ್ತಕರಾದ ಅವರನ್ನು ಒಬ್ಬೊಬ್ಬರಾಗಿ ಬೇಡಿಕೊಳ್ಳುತ್ತಿದ್ದೇನೆ. ಚತುರ್ಮುಖನಾದ ಆ ಬ್ರಹ್ಮ ಜಗತ್ಸೃಷ್ಟಿಕರ್ತ. ಆ ಪರಮೇಷ್ಠಿಯ ನಾಲಕ್ಕು ಮುಖಗಳಿಂದ ನಾಲಕ್ಕು ವೇದಗಳು ಹೊರಬಂದವು. ಆ ವಿರಂಚಿಯ ಪಾದಗಳು ನನಗೆ ಶರಣ್ಯವು. ಸರ್ವೇಂದ್ರಿಯಗಳನ್ನು ಪ್ರೇರೇಪಿಸುವ ಆ ಮಹಾವಿಷ್ಣುವು ಹೃಷೀಕೇಶನೆಂದು ಹೆಸರುಗೊಂಡಿದ್ದಾನೆ. ಅವನೇ ವಿಶ್ವನಾಥ. ಶ್ರೀ ಮಹಾಲಕ್ಷ್ಮಿಯೊಡನೆ ಕೂಡಿ ಆ ದೇವದೇವನು ಕ್ಷೀರಸಾಗರದಲ್ಲಿ ನೆಲಸಿದ್ದಾನೆ. ಅವನು ಚತುರ್ಭುಜ. ಶಂಖ ಚಕ್ರ ಗದಾಧಾರಿ. ಮುರವೈರಿ. ಪದ್ಮಹಸ್ತ. ಪದ್ಮನಾಭನಾದ ಅವನು ನನ್ನ ಅಭೀಷ್ಟವನ್ನು ನೆರವೇರಿಸಲಿ. ಆ ನಾರಾಯಣ ಪೀತಾಂಬರಧಾರಿ. ಲೋಕಗಳನ್ನೆಲ್ಲಾ ಬೆಳಗಿಸುವ ವೈಜಯಂತಿಮಾಲೆಯನ್ನು ಧರಿಸಿರುವವನು. ಅಂತಹ ಮಹಾವಿಷ್ಣು ನನಗೆ ಹಿತವನ್ನುಂಟುಮಾಡಲಿ. ಅವನು ಶರಣಾಗತರ ಕೋರಿಕೆಗಳನ್ನು ನೆರವೇರಿಸುವವನು.

ಸರ್ವಸುರಶ್ರೇಷ್ಲರೂ, ಯಕ್ಷಗಂಧರ್ವಕಿನ್ನರರು, ಪರಮಾತ್ಮನ ಅಂಶವೇ ಆದ ಸಿದ್ಧ ಸಾಧ್ಯರು, ಋಷಿಸಮೂಹಕ್ಕೆಲ್ಲ ನಮಸ್ಕರಿಸುತ್ತಿದ್ದೇನೆ. ಸುಚರಿತ್ರರೂ, ನಿರ್ಮಲರೂ ಆದ ಕವಿಕುಲಸಮೂಹಕ್ಕೆಲ್ಲ ನನ್ನ ನಮಸ್ಕಾರ. ಪರಾಶರ, ವ್ಯಾಸ, ವಾಲ್ಮೀಕಿ ಮುಂತಾದ ಕವೀಶ್ವರರಿಗೆಲ್ಲ ನನ್ನ ನಮಸ್ಕಾರ. ಸಾಹಿತ್ಯವನ್ನರಿಯದ ನಾನು ಕವಿತಾರೀತಿನೀತಿಗಳನ್ನರಿಯದವನು. ಆದರೂ ನನ್ನನ್ನು ತಮ್ಮ ಸೇವಕನೆಂದೆಣಿಸಿ ನನ್ನನ್ನೂ ಕವಿಯೆಂದು ಕರೆಯಿರಿ. ನಾನು ಎಂದೂ ಗ್ರಂಥರಚನೆಯನ್ನು ಮಾಡಿಲ್ಲ. ಭಾಷಾ ಪ್ರವೀಣನಲ್ಲ. ಶಾಸ್ತ್ರಗಳನ್ನು ಅರಿತವನಲ್ಲ. ಹೇ ಕವೀಂದ್ರರೇ! ನಿಮಗೆಲ್ಲಾ ನಮಸ್ಕಾರಗಳು. ನೀವೆಲ್ಲರೂ ಕೂಡಿ ನನಗೆ ಒತ್ತಾಸೆಯಾಗಿ ನಿಲ್ಲಿ. ಕವಿತ್ವನ್ನರಿಯದ ನನ್ನನ್ನು ಕವಿಕುಲವೇ ಕಾಪಾಡಬೇಕು. ಹೀಗೆಂದು ಕವಿಕುಲಕ್ಕೆಲ್ಲಾ ನಮಸ್ಕರಿಸಿ ನನ್ನ ಪೂರ್ವೀಕರು, ಮಹಾಭಾಗರಾದ ಜನನೀಜನಕರುಗಳನ್ನು ಧ್ಯಾನಿಸುತ್ತೇನೆ.

ಆಪಸ್ತಂಭಶಾಖೆಗೆ ಸೇರಿದ ಕೌಂಡಿನ್ಯಗೋತ್ರೋದ್ಭವರಾದ ಸಾಖರೆ ಎಂಬ ಮನೆತನದ ಹೆಸರುಳ್ಳ ಗುರುದೇವರಾದ ಸಾಯಂದೇವರೆಂಬುವವರೊಬ್ಬರಿದ್ದರು . ಅವರ ಮಗ ನಾಗನಾಥ. ಆತನ ಮಗ ದೇವರಾಜು. ಅವರ ಪುತ್ರ ಗುರುಭಕ್ತನಾದ ಗಂಗಾಧರ. ಅವರು ನನ್ನ ತಂದಯವರು. ಶರಣ್ಯರಾದ ಅವರ ಪಾದಗಳಿಗೆ ನನ್ನ ನಮಸ್ಕಾರಗಳು. ನನ್ನ ತಾಯಿಯ ಪೂರ್ವೀಕರು ಆಶ್ವಲಾಯನ ಶಾಖೆಗೆ ಸೇರಿದವರು. ಆ ಶಾಖೆಯಲ್ಲಿ ಕಾಶ್ಯಪಗೋತ್ರೀಯರೂ ಇದ್ದಾರೆ. ನನ್ನ ಮಾತಾಮಹ ಗಂಗಾನದಿಗೆ ಜನಕರಾದ ಜಹ್ನುಮಹರ್ಷಿ, ಭಗೀರಥರಂತಹವರು. ಅವರ ಮಗಳು ಪಾರ್ವತಿಯಂತೆ ಪತಿವ್ರತೆ, ಸುಶೀಲೆ. ಆಕೆಯ ಹೆಸರು ಚಂಪ. ಆಕೆ ನನ್ನ ತಾಯಿ. ಜನನೀ ಜನಕರ ಪಾದಪದ್ಮಗಳಿಗೆ ನಮಸ್ಕಾರಮಾಡಿದ್ದುದರಿಂದಲೇ ನನ್ನ ಗುರುಭಕ್ತಿ ವಿಕಾಸಗೊಂಡಿದೆ. ಸದ್ಗುರು ಸ್ಮರಣೆಮಾಡುತ್ತಾ ಸದಾ ಏಕಾಗ್ರತೆಯಿಂದ ಸದ್ಗುರು ಚರಣಗಳಲ್ಲಿ ಸೇವೆಮಾಡುತ್ತಿದ್ದ. ನನಗೆ ಜನ್ಮ ಕೊಟ್ಟ ಗಂಗಾಧರರಿಗೆ ನನ್ನ ನಮಸ್ಕಾರಗಳು. ನಾನು ಸರಸ್ವತಿ ಎಂದು ಹೆಸರಾದವನು. ಸತ್ಪುರುಷರು ನನ್ನನ್ನು ಕ್ಷಮಿಸಬೇಕು. ಏಕೆಂದರೆ ನಾನು ಸಜ್ಜನರ ಪಾದಧೂಳಿಯಂತಹವನು. ವೇದಾಧ್ಯಯನ ತತ್ಪರರು, ಯತಿಗಳು, ಯೋಗೀಶ್ವರರು, ತಾಪಸಿಗಳು ಸದ್ಗುರುವನ್ನು ಬಹಳ ಪ್ರೇಮದಿಂದ, ಭಕ್ತಿಯಿಂದ ಭಜಿಸುತ್ತಾರೆ. ಅಂತಹವರಿಗೆ ನನ್ನಂತಹ ಅಲ್ಪಬುದ್ಧಿ ಪ್ರಾರ್ಥಿಸುತ್ತಿದ್ದಾನೆ. ನಾನು ಕಾವ್ಯ ರಚನೆಗೆ ತಕ್ಕ ಪಾಂಡಿತ್ಯವಿಲ್ಲದವನು. ಆದರೂ ಈ ಗುರುತರ ಕಾರ್ಯಕ್ಕೆ ಕೈಹಾಕಿದ್ದೇನೆ. ನಮ್ಮ ವಂಶದಲ್ಲಿ ದತ್ತ ಪ್ರಸನ್ನವಾಗುವುದು ಪರಂಪರೆಯಾಗಿ ಬಂದಿದೆ. ತನ್ನ ಕಥೆಯನ್ನು ಕೀರ್ತಿಸಲು ಆ ದತ್ತಸ್ವಾಮಿಯೇ ನನಗೆ ಪ್ರಚೋದನೆ ಕೊಟ್ಟಿದ್ದಾರೆ. “ದತ್ತ ಚರಿತ್ರೆ ಎಂಬ ಅಮೃತ ಭಾಂಡಾರವನ್ನು ನಿನಗೆ ಕೊಟ್ಟಿದ್ದೇನೆ. ಆದ್ದರಿಂದ ನೀನು ನನ್ನ ಕಥೆಯನ್ನು ರಚಿಸು. ಅದರಿಂದ ನಿನಗೂ, ನಿನ್ನ ವಂಶಕ್ಕೂ ಇಷ್ಟಾರ್ಥ ಸಿದ್ಧಿ ಆಗುತ್ತದೆ.” ಎಂದು ಶ್ರೀ ಗುರುವು ನನಗೆ ಆಣತಿಕೊಟ್ಟರು. ಗುರುವಾಕ್ಯ ಕಾಮಧೇನುವಿನಂತಹುದು. ಅದರಲ್ಲಿ ಯಾವ ಸಂಶಯವೂ ಇಲ್ಲ. ಆದ್ದರಿಂದ ದತ್ತ ಚರಿತ್ರೆ ರಚಿಸಿದೆ. ನೃಸಿಂಹ ಸರಸ್ವತಿಗಳು ತ್ರಿಮೂರ್ತ್ಯವತಾರರು. ಅವರ ಚರಿತ್ರೆಯನ್ನು ಸಾಂತವಾಗಿ ತಿಳಿದುಕೊಳ್ಳಲು ದೇವತಾಯುಸ್ಸು ಆದರೂ ಶಕ್ಯವಿಲ್ಲ. ಅನಂತವಾದ ಅವರ ಚರಿತ್ರೆ ಎಲ್ಲಿ? ಜಡಬುದ್ಧಿಯಾದ ನಾನೆಲ್ಲಿ? ಆದರೂ ಆ ಗುರುವಿನ ಪ್ರೇರಣೆ ಪ್ರೋತ್ಸಾಹಗಳಿಂದ ನನ್ನ ಬುದ್ಧಿಗೆ ಎಷ್ಟು ತಿಳಿಯುವುದೋ ಅಷ್ಟು ಹೇಳ ಬಯಸುತ್ತೇನೆ. ಪುತ್ರ,ಪೌತ್ರ, ಇಹ, ಪರ ಸುಖಗಳನ್ನು ಬಯಸುವಂತಹ ಮಾನವರಿಗೆ ಈ ಕಥೆಗಳು ರುಚಿಸುತ್ತವೆ. ಅಂತಹವರ ಮನೆಗಳಲ್ಲಿ ಲಕ್ಷ್ಮಿ ಸದಾ ನೆಲಸಿರುತ್ತಾಳೆ. ಈ ರಮಣೀಯ ಕಥೆಗಳನ್ನು ನಿತ್ಯವೂ ಓದುವವರ ಮನೆಗಳಲ್ಲಿ ಶ್ರೀದೇವಿ ನಲಿದಾಡುತ್ತಾಳೆ. ಅಂತಹ ಮನೆಗಳಲ್ಲಿ ವಾಸಮಾಡುವವರ ಕುಲ ಸುಶೀಲವಾಗಿ, ನಿರ್ಮಲವಾಗಿರುತ್ತದೆ. ಶ್ರೀ ಗುರುವಿನ ಕೃಪೆಯಿಂದ ಆ ಮನೆಗಳಲ್ಲಿ ರೋಗಪೀಡೆಗಳಿರುವುದಿಲ್ಲ. ದೀಕ್ಷೆಯಿಂದ ಗುರುಚರಿತ್ರೆಯ ಸಪ್ತಾಹ ಮಾಡಿದರೆ ಆದು ಮನೋರಥಗಳನ್ನೆಲ್ಲಾ ತೀರಿಸುವುದು. ಕಾರ್ಯಸಿದ್ಧಿ ಅನಾಯಾಸವಾಗಿ ತಪ್ಪದೇ ಆಗುವುದು. ಅಪ್ರಯತ್ನವಾಗಿ ಇಂತಹ ನಿಧಿ ದೊರೆತಿರುವಾಗ ಬೇರೆ ಶ್ರಮಗಳೇಕೆ? ನನ್ನ ಮಾತಿನಲ್ಲಿ ನಂಬಿಕೆಯಿದ್ದರೆ ತಕ್ಷಣವೇ ಫಲ ಅನುಭವಿಸಬಹುದು. ನಾನು ಅಂತಹ ಫಲವನ್ನು ಅನುಭವಿಸಿಯೇ ಕೇಳುಗರಲ್ಲಿ ಈ ರೀತಿ ಪ್ರಾರ್ಥಿಸುತ್ತಿದ್ದೇನೆ.. ಶ್ರೀ ದತ್ತ ಸ್ಮರಣೆ ತಕ್ಷಣವೇ ಇಷ್ಟಸಿದ್ಧಿಯನ್ನು ಕೊಡುವಂತಹುದು. ಹೊಟ್ಟೆ ತುಂಬಾ ತಿಂದವನಿಗೆ ತೃಪ್ತಿಯಿಂದ ತೇಗು ಬಂದಂತೆ ದತ್ತ ಸ್ಮರಣೆ ತೃಪ್ತಿಯನ್ನು ಉಂಟು ಮಾಡುತ್ತದೆ. ದತ್ತಾತ್ರೇಯ ಕಥೆ ಎನ್ನುವ ಅಮೃತವನ್ನು ಆಸ್ವಾದನೆಮಾಡಿ ನಾನು ತೇಗುತ್ತಿದ್ದೇನೆ. ನನ್ನ ಮಾತನ್ನು ಎಂದೂ ಉಪೇಕ್ಷೆ ಮಾಡಬೇಡಿ. ಜೇನುಹುಳುವಿನ ಮುಖದಲ್ಲಿ ರುಚಿಕರವಾದ ಮಧುವಿರುತ್ತದೆ., ಅಂದವಿಲ್ಲದ ಚಿಪ್ಪಿನಲ್ಲಿ ಅಂದವಾದ ಮುತ್ತು ದೊರೆಯುತ್ತದೆ. ಅಸ್ಪೃಶ್ಯವಾದ ಕಾಗೆಯ ಮಲದಿಂದ ಪೂಜನೀಯವಾದ ಅಶ್ವತ್ಥವೇ ಮುಂತಾದ ವೃಕ್ಷಗಳು ಹುಟ್ಟುತ್ತವೆ. ಮಲಿನವಾದ ಕಬ್ಬು ಮಧುರವಾದ ರಸ ನೀಡುತ್ತದೆ. ಅದರಂತೆಯೇ ಗುರುಸ್ಮರಣೆಯಲ್ಲಿ ಪ್ರೀತಿಯಿರುವವರು, ಅಲ್ಪನಾದ ನನ್ನಿಂದ ಹೊರಬಿದ್ದ ಈ ರಚನೆಯಿಂದ, ಉದಾಸೀನ ಮಾಡದೆ ಗುರುಕಥಾರಸವನ್ನು ಗ್ರಹಿಸಿ, ಸ್ವೀಕರಿಸಿ, ಆಸ್ವಾದಿಸಿ. ಈ ಕಥೆಯಿಂದ ಬ್ರಹ್ಮಾನಂದರಸಾಸ್ವಾದಫಲವನ್ನು ಗ್ರಹಿಸಿ ಆಸ್ವಾದಿಸಿ. ನನ್ನ ಈ ಮಾತುಗಳಲ್ಲ್ಲಿ ನಂಬಿಕೆಯಿರುವವರಿಗೆ ತಕ್ಷಣವೇ ಅದರ ಅನುಭವವಾಗುತ್ತದೆ. ಗುರುಕಥೆಯಿಂದ ಜ್ಞಾನ ಉಂಟಾಗುತ್ತದೆ. ಕಾಮಧೇನುವಿನಂತೆ ಕಾಮಿತಾರ್ಥಗಳನ್ನು ನೀಡುತ್ತದೆ. ನಾನು ಹೇಳುತ್ತಿರುವುದು ವ್ಯರ್ಥವಾದ ಮಾತುಗಳಲ್ಲ. ಕೇಳುಗರು ಶ್ರದ್ಧೆಯಿಂದ ಕೇಳಿ. ಶ್ರೀ ನೃಸಿಂಹ ಸರಸ್ವತಿ ಅವರು ಗಂಧರ್ವನಗರಿಯಲ್ಲಿ ಇದ್ದಾರೆ. ಅವರ ಮಹಿಮೆ ಅದ್ಭುತವಾದದ್ದು. ಮೂರುಲೋಕಗಳಲ್ಲೂ ವಿಖ್ಯಾತವಾದದ್ದು.

ಶ್ರೀ ದತ್ತ ಮಹಿಮೆಯನ್ನು ಮಾಹಾತ್ಮ್ಯವನ್ನು ಕೇಳಿದ ಸಹೃದಯರು ದೂರದೂರಗಳಿಂದಬಂದು ಆ ಸ್ವಾಮಿಯನ್ನು ಸೇವಿಸಿ ತ್ವರಿತವಾಗಿ ಫಲ ಪಡೆಯುತ್ತಿದ್ದಾರೆ. ಶ್ರೀಗಳ ಸೇವೆಯಿಂದ ಸ್ತ್ರೀಯರಿಗೆ ಪುತ್ರೋತ್ಪತ್ತಿ, ಧನಧಾನ್ಯಾದಿಗಳು ಮುಂತಾದ ಕಾಮಿತಾರ್ಥಗಳು ಲಭಿಸುತ್ತಿವೆ. ಗುರುದರ್ಶನದ ಸಂಕಲ್ಪದಿಂದಲೂ ಕೂಡ ಕಾಮಿತಾರ್ಥಗಳು ಈಡೇರುತ್ತಿವೆ. ಇದನ್ನೆಲ್ಲಾ ಕೇಳಿದ ನಾಮಧಾರಕನೆಂಬ ಬ್ರಾಹ್ಮಣಶ್ರೇಷ್ಠನೊಬ್ಬನು ಶ್ರೀಗುರುಚರಣಗಳನ್ನು ದರ್ಶಿಸಬೇಕೆಂಬ ಅಭಿಲಾಷೆಯಿಂದ ಕೂಡಿ, ಚಿಂತಾನ್ವಿತನಾಗಿ, ನಿರ್ವಿಣ್ಣನಾಗಿ , ಕಷ್ಟವ್ಯಾಕುಲಮನಸ್ಕನಾಗಿ, ನಾನು ಈ ಕರ್ತವ್ಯವನ್ನು ಸಾಧಿಸುವೆನು ಇಲ್ಲವೇ ಈ ಶರೀರವನ್ನು ವಿಸರ್ಜಿಸುವೆನು ಎಂದು ನಿಶ್ಚಯಮಾಡಿಕೊಂಡು ಮನೆಯಿಂದ ಹೊರಟನು. ಶ್ರೀಗುರುವಿನ ಪಾದದರ್ಶನಮಾಡದ ಈ ಜಡ ಶರೀರವಿದ್ದರೇನು? ಇಲ್ಲದಿದ್ದರೇನು? ಎಂದುಕೊಳ್ಳುತ್ತಾ ಗುರುಚರಣಗಳನ್ನು ಧ್ಯಾನಮಾಡುತ್ತಾ ಹಸಿವು ನೀರಡಿಕೆಗಳನ್ನು ಮರೆತು ಗುರು ಅಶ್ರಮವನ್ನು ಸೇರುವ ಸಂಕಲ್ಪದಿಂದ ಹೊರಟನು.

ಗುರುನಾಮ ಸ್ಮರಣೆಯಿಂದ ಮಾನವರ ದೈನ್ಯಗಳು ನಶಿಸಿಹೋಗಬೇಕಲ್ಲವೇ? ಆದರೂ ನನ್ನ ದೈನ್ಯತೆ ಏಕೆ ನಾಶವಾಗಲಿಲ್ಲ? ದೈವವೇ ಪ್ರತಿಕೂಲವಾದರೆ ನನ್ನ ಭಕ್ತಿಯಿಂದ ಆಗುವ ಪ್ರಯೋಜನವಾದರೂ ಏನು? ನಾನು ಹೀನ. ಪಾಪಿ. ಸ್ಪರ್ಶವೇದಿಯನ್ನು ಮುಟ್ಟಿದ ಲೋಹವು ಬಂಗಾರವಾಗುತ್ತದೆಯಲ್ಲವೇ? ನಿನ್ನ ನಾಮವೇ ಪಾಪಿಗಳ ತಾಪವನ್ನು ಹೋಗಲಾಡಿಸಬೇಕಲ್ಲವೇ? ನಿನ್ನ ನಾಮ ನನ್ನಲ್ಲಿರುವಾಗ ನನಗೆ ಏಕೆ ಕಷ್ಟಗಳು ಬರಬೇಕು? ಹೇ ಸದಾಶಿವಸ್ವರೂಪಾ, ಗುರುಮೂರ್ತಿ, ನನ್ನ ಮಾತುಗಳನ್ನು ಕೇಳಿ ನನಗೆ ನಿನ್ನ ದರ್ಶನ ಕೊಟ್ಟು ನಿನ್ನ ಪ್ರೀತಿಯನ್ನು ನಿರೂಪಿಸು. ನೀನು ಸರ್ವಭೂತ ದಯಾಳುವು. ಎಂದು ವ್ಯಾಕುಲಚಿತ್ತನಾಗಿ, ಭಕ್ತಿಯಿಂದ ಕೂಡಿದ ಗದ್ಗದವಚನಗಳಿಂದ ಗುರುವನ್ನು ಸ್ತುತಿಸಲುದ್ಯುಕ್ತನಾದನು. ಪಾಂಡುರಂಗ ವಿಘ್ನೇಶ್ವರ ಶಾರದೆಯರನ್ನು ನಮಸ್ಕರಿಸಿ ನಾಮಧಾರಕ ಶ್ರೀಗುರುವನ್ನು ಸ್ತುತಿಸಲುಪಕ್ರಮಿಸಿದನು.

ಶ್ರೀನಾಥನೆಂದು, ಶ್ರೀಗುರುವೆಂದು ಶ್ರುತಿಸ್ಮೃತಿಗಳು ಹೊಗಳುತ್ತವೆ. ಕಲಿಯುಗದಲ್ಲಿ ನೀನೇ ತಕ್ಷಣಫಲದಾತನು ಎನ್ನುತ್ತಾರೆ. ಕಲಿಯುಗದಲ್ಲ್ಲಿ ಶ್ರೀ ನೃಸಿಂಹ ಸರಸ್ವತಿ ನೀನೇ ಎಂದು ಖ್ಯಾತನಾಗಿದ್ದೀಯೆ. ಹೇ ಕೃಪಾನಿಧಿ, ನೀನು ಭಕ್ತಸಾರಥಿಯೆಂದು ಪ್ರಸಿದ್ಧಿ ಪಡೆದಿದ್ದೀಯೆ. ಕೃಪಾಸಿಂಧು, ಭಕ್ತಬಂಧು, ವೇದಗಳು ನಿನ್ನನ್ನು ಹೊಗಳುತ್ತವೆ. ನೀನು ಗುರುನಾಥ. ಪುಣ್ಯಚರಿತ. ತ್ರಿಗುಣಸ್ವರೂಪ. ನೀನೇ ನನ್ನ ರಕ್ಷಕ. ನೀನು ತ್ರಿಗುಣಾತ್ಮಕನಾದರೂ ಒಬ್ಬನೇ! ನೀನೇ ಅವ್ಯಯವಾದ ಬೀಜ. ಹೇ, ದಯಾನಿಧಿ, ಭಕ್ತರ ಸಂಕಟಹರಿಸಿ ರಕ್ಷಿಸುವವನೂ ನೀನೇ! ನೀನೇ, ಯತಿರಾಜ, ಶ್ರೀನಾಥಾ, ನಿನ್ನಲ್ಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಅಷ್ಟಸಾತ್ವಿಕ ಚಿಹ್ನೆಗಳನ್ನು ನನ್ನ ಮನಸ್ಸಿನಲ್ಲಿ ಏಕೆ ನಿಲಿಸುತ್ತಿಲ್ಲ?ನನ್ನ ಮನಸ್ಸು ಚಂಚಲವಾಗಿದೆ. ಸ್ಥಿರವಾಗಿ ನಿಲ್ಲುತ್ತಿಲ್ಲ. ಬಾ, ತಂದೆ, ಬೇಗ ಬಂದು ನನ್ನನ್ನು ರಕ್ಷಿಸು.

“ಹೇ ನರಹರಿ, ಅನಂತಾ, ಸರ್ವವ್ಯಾಪಿ, ತ್ವರೆಮಾಡು. ನನ್ನಲ್ಲಿ ದಯೆತೋರು. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ತಾಯಿ ಓಡಿ ಬರುತ್ತಾಳೆಯಲ್ಲವೆ? ನೀನೇ ನನ್ನ ತಾಯಿ, ತಂದೆ, ಸಖ, ನನ್ನ ವಂಶವೆನ್ನುವುದು ಲೌಕಿಕ ವ್ಯವಹಾರಕ್ಕೆ ಮಾತ್ರವೇ. ನೀನೇ ನನ್ನ ಕುಲದೈವ. ಹಾಗೆಂದೇ ಭಕ್ತಿಯಿಂದ ನಿನ್ನನ್ನು ಭಜಿಸುತ್ತಿದ್ದೇನೆ. ನೀನು ಸರ್ವಗತನು. ನೀನೇ ನೃಸಿಂಹ ಸರಸ್ವತಿ. ಸರಸ್ವತಿ ಎನ್ನುವ ಹೆಸರೇ ನನ್ನನ್ನು ನಿನಗೆ ಅರ್ಪಿತಮಾಡಿಕೊಂಡಿದ್ದು. ನೀನೇ ನನ್ನ ಆಶ್ರಯದಾತ. ನಿನ್ನ ದ್ವಾರಸ್ಥನಾದ ನನಗೇಕೆ ಇಷ್ಟು ದೈನ್ಯ? ಇಷ್ಟು ಸಂಕಟ? ಈ ಚಿಂತೆ ಸಂಕಟಗಳನ್ನು ನನಗೇಕೆ ಉಂಟುಮಾಡಿದ್ದೀಯೋ ಹೇಳು ಭಕ್ತವತ್ಸಲನೆಂದು ನೀನು ಪ್ರಸಿದ್ಧನಲ್ಲವೇ? ಕೃಪಾನಿಧಿ, ದೀನಬಂಧು, ಅನಂತ ಸದ್ಗುಣಗಳ ಮೂರ್ತಿ. ಹೇ ಅನಂತ, ನೀನೇ ಪರಮಾತ್ಮ. ತ್ರಿನಾಥ. ದಯಮಾಡು. ನನ್ನನ್ನು ಬಿಡಬೇಡ. ಹೇ ವಿಶ್ವಪಾಲಕಾ, ನೀನು ದಯಾಳುವೆಂದು ಖ್ಯಾತಿಪಡೆದವನಲ್ಲವೇ? ದೇವತೆಗಳಲ್ಲೆಲ್ಲ ನೀನೇ ಬಹುದಾತನು. ದೇವತೆಗಳಿಗೂ ನೀನೇ ಬಹುದಾತ. ಹೇ ಸದ್ಗುರು, ನಿನ್ನನ್ನು ಬಿಟ್ಟು ನಾನು ಇನ್ನಾರನ್ನು ಯಾಚಿಸಲಿ? ನೀನೇ ನನ್ನ ದಾತ. ನೀನೇ ನನ್ನ ಪರದೈವವಲ್ಲವೇ? ನಿನಗಿಂತ ಬೇರೆ ದಾತರಿನ್ನಾರಿದ್ದಾರೆ? ಈ ವಿಶ್ವಕ್ಕೆಲ್ಲಾ ನೀನೇ ನಿತ್ಯಪೋಷಕ. ನೀನೇ ಸರ್ವವೇತ್ತ, ಸರ್ವಜ್ಞ ಎಂದು ಶ್ರುತಿಗಳು ಸಾರುತ್ತಿವೆ. ಸರ್ವಜ್ಞನಾದ ನಿನಗೆ ನಾನು ಸಾಕ್ಷಿ ಹೇಗೆ ಆಗಬಲ್ಲೆ? ಸರ್ವಸಾಕ್ಷಿತ್ವವೆನ್ನುವ ಲಕ್ಷಣ ನಿನ್ನಲ್ಲೇ ಇದೆ. ಅದರಿಂದ ನೀನು ನನ್ನನ್ನು ಉಪೇಕ್ಷಿಸಲಾಗದು. ಯಾರು, ಎಲ್ಲಿ, ಹೇಗೆ ಎನ್ನುವುದೆಲ್ಲಾ ನಿನಗೆ ತಿಳಿಯುತ್ತದೆಯಲ್ಲವೇ? ಹಾಗಿರುವಾಗ, ಹೇ ದಯಾಳು ಈ ಉಪೇಕ್ಷೆಯಾಕೆ? ನೀನು ಸರ್ವವೇತ್ತನಾದದ್ದರಿಂದ ನನ್ನ ಸ್ಥಿತಿ ಹೇಗೆ ಎನ್ನುವುದು ತಿಳಿಯುತ್ತದೆಯಲ್ಲವೇ? ಹೇ ತಂದೆ, ಈ ಬಾಲಕ ಹಸಿದುಗೊಂಡಿದ್ದಾನೆ ಎಂಬುದು ನಿನಗೆ ತಿಳಿಯದೇ? ತನ್ನ ಮಗು ಹಸಿದುಗೊಂಡು ಅಳುತ್ತಿದೆ ಎಂಬುದನ್ನು ತಿಳಿದ ಮಾನವಮಾತ್ರಳಾದ ಯಾವ ತಾಯಿತಾನೇ ಅದನ್ನು ಉಪೇಕ್ಷಿಸುತ್ತಾಳೆ? ದೇವನಾದ ನೀನು ಸುಮ್ಮನೇಕಿದ್ದೀಯಾ? ನನಗೆ ಇವನೇನೂ ಕೊಟ್ಟಿಲ್ಲ ಎಂದು ನನ್ನನ್ನು ಉಪೇಕ್ಷಿಸುತ್ತಿದ್ದೀಯ ಹೇಳು? ಹೇ ಬಹುಪ್ರದ, ನನ್ನಿಂದ ಸ್ವಲ್ಪ ಗ್ರಹಿಸಿ ನನಗೆ ಅಧಿಕವಾಗಿ ಕೊಡಬೇಕೆಂದುಕೊಂಡಿದ್ದೀಯಾ? ನೀನು ಬಲಿಚಕ್ರವರ್ತಿಯಿಂದ ಸಮಸ್ತಭುವನವನ್ನು ಗ್ರಹಿಸಿ ಅವನಿಗೆ ಸ್ವರ್ಗರಾಜ್ಯ ನೀಡಿ ಪ್ರಸಿದ್ಧಿಯಾದೆ ಎಂದು ಹೇಳುತ್ತಾರೆ. ಇನ್ನೊಂದು ಮಾತು. ನೀನು ವಿಭೀಷಣನಿಗೆ ಸ್ವರ್ಣಮಯವಾದ ಲಂಕೆಯನ್ನು ಕೊಟ್ಟೆಯಲ್ಲವೇ? ಹೇ ಈಶ್ವರಾ, ಅವನು ಅದಕ್ಕೆ ಮುಂಚೆ ನಿನಗೇನು ಕೊಟ್ಟಿದ್ದ? ಹಿಂದೆ ನೀನು ಧ್ರುವನಿಗೆ ಧೃವಸ್ಥಾನವನ್ನು ಕೊಟ್ಟೆಯಲ್ಲವೆ? ಆ ಧ್ರುವ ನಿನಗೇನು ಕೊಟ್ಟಿದ್ದ? ಇಷ್ಟೆಲ್ಲಾ ಇದ್ದರೂ ನನ್ನನ್ನು ಏನಾದರೂ ಕೊಡು ಎಂದು ಏಕೆ ಕೇಳುತ್ತೀಯೆ? ನೀನು ಸೇವಕರ ಪರಿಪಾಲಕ. ಕ್ಷತ್ರಿಯರನ್ನು ನಿಶ್ಶೇಷಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ಪರಶುರಾಮನಾಗಿ ಹಂಚಿದೆ. ಆ ವಿಪ್ರರು ನಿನಗೇನು ಕೊಟ್ಟರು? ಹೇ ಪೋಷಕಾ, ನಿನಗೆ ನಾನೇನು ಕೊಡಬಲ್ಲೆ? ಸರ್ವಸೃಷ್ಟಿಗೂ ನೀನೇ ಪೋಷಕ. ಹೇ ಲಕ್ಶ್ಮೀಪತಿ, ದರಿದ್ರನಾದ ನಾನು ನಿನಗೇನು ಕೊಡಬಲ್ಲೆ? ನಾನು ಮಶಕದಂತೆ ದುರ್ಬುದ್ಧಿಯುಳ್ಳವನು. ಪರಾಧೀನನಾದ ನಾನೆಲ್ಲಿ? ಶ್ರೀಮಂತನಾದ ನೀನೆಲ್ಲಿ? ಮಹಾಲಕ್ಷ್ಮಿ ವಿಲಾಸದಿಂದ ನಿನ್ನೆದುರಿಗೆ ನರ್ತನಮಾಡುತ್ತಾಳೆ. ಹೇ ಸದಾನಂದಾ, ಇದಕ್ಕಿಂತ ಹೆಚ್ಚಾಗಿ ಏನನ್ನುತಾನೇ ಕೊಡಬಲ್ಲೆ ನೀನೇ ಹೇಳು. ಹೇ ಹೃಷೀಕೇಶ, ನಾನೊಬ್ಬ ಗರ್ವಗಂಧಿ. ನಿನ್ನ ಮಗು. ಮಗು ತಾಯಿಯ ಉಡಿಸೇರಿ ಕ್ಷುಧಾತುರನಾಗಿ, ದೀನನಾಗಿ ಹಾಲು ಕೇಳುವಂತೆ ಮುಖ ತೋರಿಸಿದಾಗ ಆ ತಾಯಿ ಮಗುವನ್ನು ಮೊದಲು ಏನಾದರೂ ಕೊಡು ಎಂದು ಕೇಳುತ್ತಾಳೆಯೇ? ಹೇ ಗುರುನಾಥಾ, ಆದರೆ ನೀನೀಗ ಕೇಳುತ್ತಿದ್ದೀಯೆ. ನಾನೇನು ಕೊಡಬಲ್ಲೆ? ಏನಾದರು ತೆಗೆದುಕೊಂಡು ಕೊಡುವವನು, ಸೇವೆ ಮಾಡಿಸಿಕೊಂಡು ಕೊಡುವವನು ದಾತ ಹೇಗಾಗುತ್ತಾನೆ?
ಹೇ ದಯಾರ್ದ್ರಹೃದಯಾ, ಸದ್ಗುರು, ದಯಾನಿಧಿ, ನಿನ್ನೆದುರಿಗೆ ನಾನು ಹೇಳುವುದು ತಾನೇ ಏನಿದೆ?”

“ಹೇ ಕೊಡುಗೈದಾತ, ಸದ್ಗುರು, ದಯಾನಿಧೇ, ನಿನ್ನ ಮುಂದೆ ನಾನೇನು ಹೇಳಬಲ್ಲೆ? ಈಗ ನನ್ನನ್ನು ಕೊಡು ಎಂದು ಕೇಳುವುದು ನಿನಗೆ ತರವಲ್ಲ. ಹೇ ಪ್ರಭು, ಹದಿನಾಲ್ಕು ಲೋಕಗಳ ರಕ್ಷಕ ನೀನು. ’ಸೇವೆ ಮಾಡಿಸಿಕೊಂಡೇ ನೀಡುವುದು ನನ್ನ ಇಚ್ಛೆ. ಆದ್ದರಿಂದ ನಿನ್ನ ಅಭೀಷ್ಟವನ್ನು ತೀರಿಸಲು ಸಾಧ್ಯವಿಲ್ಲ.’ ಎಂದು ನೀನು ಹೇಳಬಾರದು. ಸೇವೆಯನ್ನಿಚ್ಛಿಸಿ ಕೊಡುವವನು ಹೊಡುಗೈದಾತ ಹೇಗಾದಾನು? ಸೇವ್ಯ-ಸೇವಕ ಎಂಬ ಭಾವವಿರುವೆಡೆಯಲ್ಲಿ ದಾತೃತ್ವಕ್ಕೆಲ್ಲಿದೆ ಜಾಗ? ಹೇ ಭಗವಂತ, ಭಕ್ತಿಯೋಗವನ್ನು ತಿಳಿದವನು ನೀನು. ಅಕಾಶದಲ್ಲಿನ ಮೇಘಗಳು ಭೂಮಿಯಲ್ಲಿ ವಾಪಿಕೂಪಗಳಿರುವ ಕಡೆ ಯಾವ ಅಪೇಕ್ಷೆಯೂ ಇಲ್ಲದೆ ನೀರು ಸುರಿಸುತ್ತವೆ. ಹಾಗೆ ನೀರು ಸುರಿಸುವ ಮೇಘಗಳಿಗೆ ವಾಪಿಕೂಪಗಳು ಯಾವ ಸೇವೆಯನ್ನೂ ಮಾಡುವುದಿಲ್ಲ ಎಂಬುದು ತಥ್ಯವಲ್ಲವೇ? ನೀನು ಈಶ್ವರ. ವೇತನ ಗ್ರಾಹಿಯಲ್ಲ. ಸೇವೆಯನ್ನಪೇಕ್ಷಿಸುವವನು ದಾತ ಹೇಗಾದಾನು? ನೀನು ಉದಾರನೆಂದು ಹೇಗೆ ಶ್ಲಾಘಿಸಲಿ? ಹೇ ಸ್ವಾಮಿ, ಸೇವೆ ಮಾಡಬಾರದೆಂಬ ಹಠವೇನೂ ನನ್ನಲ್ಲಿಲ್ಲ. ಸೇವೆ ಹೇಗೆ ಮಾಡಬೇಕೆಂಬುದು ನನಗೆ ತಿಳಿಯದು.

ದೇವ ದೇವ, ನನ್ನ ಪೂರ್ವಿಕರೆಲ್ಲರು ನಿನ್ನ ಸೇವಕರೇ ಆಗಿದ್ದರಲ್ಲವೇ? ನಾನು ಸೇವಕ ವಂಶದಲ್ಲಿ ಹುಟ್ಟಿದವನು. ನಾನೊಬ್ಬ ಆಲಸಿ. ದುಷ್ಟಬುದ್ಧಿಯವನು. ಆದರೂ ಈ ದರಿದ್ರನನ್ನು ನಿನ್ನ ಸೇವಕನೆಂದು ತಿಳಿದುಕೊ. ಹೇ ಸ್ವಾಮಿ, ಸೇವಕನ ವಂಶದಲ್ಲಿ ಜನಿಸಿದವರನ್ನು ಈ ಲೋಕದಲ್ಲಿ ರಾಜನಾದವನು ಪುತ್ರವತ್ ರಕ್ಷಿಸುತ್ತಾನೆಂಬುದು ಪ್ರಸಿದ್ಧವಲ್ಲವೇ? ಆ ನ್ಯಾಯದಿಂದಲಾದರೂ ನಾನು ಈಗ ಸೇವಕನಲ್ಲದಿದ್ದರೂ ನನ್ನನ್ನು ರಕ್ಷಿಸು. ನಿನ್ನ ಸೇವಕರಾದ ನನ್ನ ಪೂರ್ವಿಕರು ನಿನ್ನ ಪಾದಗಳಲ್ಲಿ ನಿರಪೇಕ್ಷೆಯಿಂದ ಸೇವೆ ಮಾಡಿದ್ದಾರೆ. ಆದ್ದರಿಂದ ನೀನು ನನಗೆ ಋಣಪಟ್ಟಿದ್ದೀಯೆ. ಆ ನನ್ನ ಋಣವನ್ನು ತೀರಿಸುವುದಕ್ಕಾದರೂ ನನ್ನನ್ನು ರಕ್ಷಿಸು.

ಹೇ ಕೃಪಾನಿಧಿ, ನಮ್ಮಿಂದ ಪಡೆದ ಋಣವನ್ನು ನಮಗೇ ಕೊಡಬೇಕು. ನೀನು ನನ್ನ ಋಣವನ್ನು ತೀರಿಸದಿದ್ದರೆ ಸಾಲಗಾರನೆಂದು ನಿನ್ನನ್ನು ತಪ್ಪಿತಸ್ಥನನ್ನಾಗಿ ಎಣಿಸುತ್ತೇನೆ. ಹೇ ಪರಮೇಶ್ವರ, ನೀನು ಕಾಠಿಣ್ಯವನ್ನು ತೋರಿಸುತ್ತಿರುವಂತಿದೆ. ಈ ಸನಾತನ ಸೇವಕನಲ್ಲಿ ಕಾಠಿಣ್ಯವೇಕೆ ತಂದೆ? ಹೇ ಸ್ವಾಮಿ, ಸೇವಕನಲ್ಲಿ ಸ್ವಾಮಿಗೆ ಸ್ಪರ್ಧೆಯೇಕಯ್ಯ? ಸ್ಪರ್ಧೆ ಎನ್ನುವುದು ಸಮಾನರ ಮಧ್ಯೆ ಮಾತ್ರ ಸಮಂಜಸವಲ್ಲವೇ? ಹೇ ಈಶ್ವರ, ನಾನೆಲ್ಲಿ, ನೀನೆಲ್ಲಿ. ಭಕ್ತವತ್ಸಲನಾದ ನಿನ್ನ ಮನಸ್ಸು ಇದಕ್ಕೆ ಮುಂಚೆ ಬಹಳ ಮೃದುವಾಗಿತ್ತು. ದೈತ್ಯರು ಹಿಂಸಿಸಿದ ಪ್ರಹ್ಲಾದನಲ್ಲಿ ನೀನು ತೋರಿಸಿದ ವಾತ್ಸಲ್ಯ ಬಹಳ ಪ್ರಸಿದ್ಧಿಯಾದುದಲ್ಲವೇ? ದಯನೀಯನಾದ ಸೇವಕ ಅಪರಾಧ ಮಾಡಿದರೆ ದಯಾಳುವಾದ ಸ್ವಾಮಿ ಅವನ ಮೇಲೆ ಕಠಿಣನಾಗುವುದು ಅವನಿಗೆ ಶೋಭೆ ತರುವಂತಹುದೇ? ನನ್ನ ಅಪರಾಧದಿಂದ ನಿನ್ನ ಮನಸ್ಸು ನನ್ನ ಮೇಲೆ ಕ್ರೋಧಗೊಂಡಿದೆಯೇ/ ಅಸಂಗತ ಮಾತುಗಳನ್ನಾಡಿದ ಈ ಬಾಲಕನನ್ನು ಕರುಣೆಯಿಂದ ನೋಡುವುದಿಲ್ಲವೇ? ಅಸಂಬದ್ಧಮಾತುಗಳನ್ನಾಡುತ್ತಾ ತೊಡೆಯಮೇಲೆ ಕುಳಿತ ತನ್ನ ಮಗುವನ್ನು. ಮಾತುಮಾತಿಗೂ ಹೊಡೆಯುತ್ತಿದ್ದರೂ, ಮಾನವ ಮಾತ್ರಳಾದ ತಾಯಿಯು ಆ ಬಾಲಕನ ಮೇಲೆ ಕೋಪಗೊಂಡು ಬಿಟ್ಟುಬಿಡುತ್ತಾಳೆಯೇ? ಹಾಗಲ್ಲದೆ ಅವಳು ಆ ಮಗುವನ್ನು ಅಪ್ಪಿಕೊಂಡು ಮುದ್ದುಮಾಡುತ್ತಾಳೆಯಲ್ಲವೇ?

ದೇವದೇವ ಏಕೆ ಮೌನವಾಗಿದ್ದೀಯೆ? ನಾನು ಮಾಡಿದ ತಪ್ಪಾದರೂ ಏನು? ಇನ್ನೂ ಏನೆಂದು ನಿನ್ನನ್ನು ಪ್ರಾರ್ಥಿಸಲಿ? ಹೃಷೀಕೇಶ, ನೀನೇ ನನ್ನ ತಂದೆ. ಪರಮೇಶ್ವರ, ತಂದೆ ತನ್ನ ಮಗನಮೇಲೆ ಕೋಪಗೊಳ್ಳುತ್ತಾನೆಯೇ? ತಂದೆ ಮಗನ ಮೇಲೆ ಕೋಪಗೊಂಡರೆ ತಾಯಿ ಅವನನ್ನು ಸಮಾಧಾನ ಮಾಡುತ್ತಾಳೆ. ಮತ್ತೊಮ್ಮೆ, ಅಪರಾಧವೆಸಗಿದ ಮಗನಮೇಲೆ ತಾಯಿ ಕೋಪಗೊಂಡರೆ ತನ್ನ ದುಃಖವನ್ನು ಹೇಳಿಕೊಳ್ಳಲು ಬಂದ ಮಗನನ್ನು ತಂದೆ ಸಮಾಧಾನಗೊಳಿಸುತ್ತಾನೆ. ನನಗೆ ತಾಯಿ ತಂದೆ ಇಬ್ಬರೂ ನೀನೇ ಅಲ್ಲವೇ? ನಿಮಿತ್ತ-ಉಪಾದಾನ ಕಾರಣದಿಂದ ಜನನಿ ಜನಕರಿಗಿಂತ ನೀನು ಭಿನ್ನನಲ್ಲ. ಸದ್ಗುರು ನೀನೇ ಕೃದ್ಧನಾದರೆ ಕ್ಷಮಿಸೆಂದು ಯಾರನ್ನು ಕೇಳಿಕೊಳ್ಳಲಿ? ಸ್ವಾಮಿ, ನನ್ನ ಮೇಲೆ ದಯೆತೋರು. ದೀನವತ್ಸಲ. ಅನಾಥಬಂಧು. ನಿನ್ನ ಮುಂದೆ ಸಾಷ್ಟಾಂಗವೆರಗುತ್ತಿರುವ ನಾನು ನಿನ್ನ ದಾಸ. ದೀನ. ನನ್ನನ್ನು ರಕ್ಷಿಸು ತಂದೆ. ನೀನು ಅನಾಥರಕ್ಷಕನೆಂದು ಹೇಳುತ್ತಾರೆ. ಹೇ ಅನಾಥನಾಥ, ನಾನೊಬ್ಬ ಅನಾಥ. ನನ್ನನು ಕಾಪಾಡು. ಕೃಪಾಳು, ನೀನು ದೀನರ ರಕ್ಷಕನೆಂದು ವೇದಗಳು ವರ್ಣಿಸುತ್ತಿವೆ. ನೀನು ಏಕೆ ನನ್ನ ಬಿನ್ನಪವನ್ನು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ? ಯಾವ ಕಾರಣಕ್ಕಾಗಿ ನನ್ನ ಈ ದೀನಾಲಾಪಗಳು ನಿನ್ನ ಕಿವಿಯನ್ನು ಸೇರುತ್ತಿಲ್ಲ? ಗುರುರಾಜ, ನೀನು ವಿಮನಸ್ಕನಾದರೆ ಹೇಗೆ ಸ್ವಾಮಿ? ನೀನು ನಿರ್ದಯತ್ವವನ್ನು ವಹಿಸಿದ್ದೀಯೆ ಎಂದು ನನಗೆ ತೋರುತ್ತಿದೆ. ಏಕೆಂದರೆ ನನ್ನ ಈ ಬಿನ್ನಪಗಳನ್ನು ಕೇಳಿದರೆ ಕಲ್ಲೂ ಕೂಡಾ ಕರಗುತ್ತದೆ. ನಿನ್ನ ದಯೆ ಎಲ್ಲಿ ಅಡಗಿಹೋಗಿದೆ ತಂದೆ? ಜನ ನಿನ್ನನ್ನು ಹೇಗೆ ಕರುಣಾಕರ ಎನ್ನುತ್ತಾರೆ? ಹೇ ಸ್ವಾಮಿ, ನೀನು ದಯಾಘನನೆನ್ನುವುದೇ ನಿಜವಾದರೆ ಈಗಲೇ ನನ್ನ ಮೇಲೆ ದಯೆ ತೋರಿಸು.” ಎಂದು ಹೇಳುತ್ತಾ ಮೂರ್ಛಿತನಾದನು. ದಯಾಸಿಂಧುವಾದ ಆ ಗುರುನಾಥ, ಭಯಗೊಂಡ ತನ್ನ ಕರುವಿನಮೇಲೆ ವಾತ್ಸಲ್ಯವನ್ನು ತೋರುವ ಹಸು ಓಡಿ ಬರುವಂತೆ, ತಕ್ಷಣವೇ ನಾಮಧಾರಕನಿಗೆ ಸ್ವಪ್ನದಲ್ಲಿ ಸಾಕ್ಷಾತ್ಕರಿಸಿದನು.

ಸ್ವಪ್ನದಲ್ಲಿ ನಾಮಧಾರಕನು ಎದ್ದು, ಬಂದಿದ್ದ ಗುರುವಿನ ಪಾದಗಳಲ್ಲಿ ಸಾಷ್ಟಾಂಗವೆಸಗಿ, ಗುರುವಿನ ಪಾದಗಳನ್ನು ಹಿಡಿದುಕೊಂಡನು. ಪಾದಗಳ ಮೇಲಿದ್ದ ಧೂಳನ್ನು ತನ್ನ ಕೂದಲಿನಿನಂದ ಒರೆಸಿ, ಆನಂದದಿಂದ ಸುರಿಯುತ್ತಿದ್ದ ಬಾಷೊಅಜಲಿಗಳಿಂದ ತೊಳೆದನು. ಉಪಚಾರಗಳನ್ನೆಲ್ಲಾ ಮಾಡಿ, ಶುಭವಾದ ಗಂಧಾಕ್ಷತೆಗಳಿಂದ ಅಲಂಕರಿಸಿ, ಆ ಈಶ್ವರನನ್ನು ತನ್ನ ಹೃದಯಮಂದಿರದಲ್ಲಿ ಪ್ರತಿಷ್ಠಿಸಿಕೊಂಡು, ಆನಂದಭರಿತನಾದ ಆ ನಾಮಧಾರಕ ಗುರುವಿಗೆ ಸದ್ಭಕ್ತನಾದನು.

ಆ ಭಕ್ತನನ್ನು ನೋಡಿದ ಗುರುವು ಅವನ ಮನಸ್ಸಿನಲ್ಲಿ ಸಿದ್ಧಮುನಿಯಾಗಿ ನಿಂತನು. ಸಂತೋಷದಿಂದ ಗುರುನಾಥನು ತನ್ನ ನಿಜಭಕ್ತನ ಹೃದಯದಲ್ಲಿ ನೆಲೆನಿಂತದ್ದರಿಂದ ಉಂಟಾದ ಆನಂದವು ತನಗೂ ಉಂಟಾಗಲೆಂದು ಸರಸ್ವತಿಯು ಮೋದಿತಳಾದಳು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

ಕಗ್ಗ-೫

ಕಗ್ಗ-೫

ದೇವರೆಂಬುದದೇನು ಕಗ್ಗತ್ತಲ ಗವಿಯೆ?

ನಾವರಿಯಲಾದೆಲ್ಲದರೊಟ್ಟು ಹೆಸರೇ?

ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?

ಸಾವು ಹುಟ್ಟುಗಳೇನು?- ಮಂಕುತಿಮ್ಮ

ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?

ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ.

ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.

ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವಿನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವೀ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ. ಕಾಡು ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ. ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣು ಹಂಪಲುಗಳು ಯತೇಚ್ಚವಾಗಿ ಸಿಗುತ್ತದೆ. ಹಾಗೇ ಗಗನದಿಂದ ಬಂದ ಮಳೆ ತನಗೆ ಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು” ದೇವರು” ಎಂದ. ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನ ಸ್ತಿತಿ ಹಾಗೆ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ ಪಕ್ಷಿ ಗಿಡ ಮರ,ನದಿ ಸಮುದ್ರ, ಮಳೆ ಬಿಸಿಲು ಬೆಳಕು ಹೂವು ಹಣ್ಣು ಹೀಗೆ ಎಲ್ಲವೂ ಅವನಿಗೆ ದೈವ ಸಮಾನ.

ಆದರೆ ಆ ದೇವರೇನು ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ ” ಅದು ” ಇದೇ” ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ ಅಲ್ಲವೆ?. ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ( ಪರಿಭಾಷೆ = definition )ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ.

ವಾಚಕರೆ, ನೋಡಿ ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ? ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಕೇಳುತ್ತಾರೆ.
ಹಾಗೆ ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ? ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಕಗ್ಗದ ಮೂಲಕ ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.

Leave a comment

Filed under ಕಗ್ಗದ ಹುಗ್ಗಿ

ಕಗ್ಗ -೪

ಕಗ್ಗ-೪

ಏನು ಜೀವನದರ್ಥ? ಏನು ಪ್ರಪಂಚಾರ್ಥ ?

ಏನು ಜೀವಪ್ರಪಂಚಗಳ ಸಂಬಂಧ?

ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು?

ಜ್ಞಾನಪ್ರಮಾಣವೇಮ್? ಮಂಕುತಿಮ್ಮ

ಕಾಣದಿಲ್ಲಿರ್ಪುದೇನಾನುಮುಂಟೆ = ಕಾಣದೆ + ಇಲ್ಲಿ+ ಇರ್ಪುದು(ಇರುವುದು)+ಏನಾನುಂ( ಏನಾದರೂ)+ ಉಂಟೆ

“ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? ” ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ ಯವರು.

ವಾಚಕರೆ, ಅಲ್ಪ ಸ್ವಲ್ಪ ವಿಚಾರಮಾಡುವ ಶಕ್ತಿ ಇರುವವರೂ ಸಹ ಈ ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಅನೇಕ ಬಾರಿ ಕೇಳಿಕೊಳ್ಳುತ್ತಾರೆ. ಅಲ್ಲವೇ?

ನಾವು ಹುಟ್ಟುತ್ತೇವೆ, ಬೆಳೆಯುತ್ತೇವೆ, ಬದುಕುತ್ತೇವೆ ಮತ್ತು ಒಂದು ದಿನ ಸಾವಿನ ತೆಕ್ಕೆಗೆ ಬೀಳುತ್ತೇವೆ. ಈ ಎಲ್ಲಕ್ಕೂ ಏನಾದರೂ ಅರ್ಥವಿದೆಯೇ? ನಾವು ಇಲ್ಲಿರುವಾಗ ನಮ್ಮ ಜೀವನದಲ್ಲಿ ಜ್ಞಾನದ ಜೊತೆಯಲ್ಲಿ ಪ್ರೀತಿ, ಪ್ರೇಮ, ಕೋಪ, ದ್ವೇಷ, ಅಸೂಯೆ, ಅನುರಾಗ ಮುಂತಾದ ಹಲವಾರು ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಭಾವನೆಗಳ ಜೊತೆಗೆ ಜೀವಿಸುತ್ತೇವೆ. ಈ ರೀತಿಯ ಜೀವನಕ್ಕೇನಾದರೂ ಅರ್ಥವಿದೆಯೇ? ವಾಸ್ತವ ಬದುಕಿಗೆ ಮಾತ್ರ ಮಾಸ್ತವವೇ ಕಾರಣವೋ ಅಥವಾ ನಮ್ಮ ಕಣ್ಣಿಗೆ ಕಾಣದ ಆದರೂ ಈ ಎಲ್ಲವನ್ನೂ ನಿಯಂತ್ರಿಸುವ ಬೇರೆ ಯಾವುದಾದರೂ ಶಕ್ತಿ ಇದೆಯೇ. ಇದ್ದರೆ ಅದರ ಸ್ವರೂಪವೇನು ಮತ್ತು ಅದರ ಕಾರ್ಯ ವೈಖರಿಯೇನು ಎನ್ನುವುದು ಎಲ್ಲ ವಿಚಾರವಂತರಿಗೂ ಬರುವ ಸಂದೇಹಗಳು.

ಪ್ರತಿ ಜೀವಿಯ ಹುಟ್ಟು ಏಕಾಗುತ್ತದೆ? ಭೌತಿಕ ಕಾರಣವು ಎಲ್ಲರಿಗೂ ಗೊತ್ತು. ಆದರೆ ಈ ಭೌತಿಕ ಕಾರಣವಲ್ಲದೆ ಬೇರೆ ಏನಾದರೂ ಕಾರಣವಿದೆಯೇ? ಆ ಕಾರಣವೇ ನಮ್ಮ ಪ್ರತಿ ನಿಮಿಷದ ಕಾರ್ಯಗಳನ್ನೂ ನಿಯಂತ್ರಿಸುತ್ತದೆಯೇ?

ನಮ್ಮ ಭಾರತೀಯ ಸಿದ್ಧಾಂತದ ಪ್ರಕಾರ ಪ್ರತಿ ಜೀವಿಯೂ ಒಂದು ಪೂರ್ವ ನಿಯೋಜಿತ ಕಾರಣಕ್ಕಾಗಿ ಜನಿಸಿ ಮತ್ತು ಆ ಪೂರ್ವ ನಿಯೋಜಿತ ಕ್ರಮದಲ್ಲಿಯೇ ತನ್ನ ಜೀವನವನ್ನು ನಡೆಸುತ್ತದೆ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆ ಕಾರಣದ ಮೂಲವೇನು? ಆ ಕಾರಣಕ್ಕೆ ಕಾರಕರಾರು? ಬಹಳ ಕ್ಲಿಷ್ಟವಾದ ಪ್ರಶ್ನೆ.

ನಮ್ಮ ಋಷಿ ಮುನಿಗಳೂ ಸಹ ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಾಣಲು ಮಾಡಿದ ಪ್ರಯತ್ನದ ಫಲವೇ ಭಾರತೀಯ ವೇದ ಶಾಸ್ತ್ರಗಳು, ಉಪನಿಷತ್ತುಗಳು . ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಉದ್ಭವವಾಗುವ ಮತ್ತು ಎಲ್ಲರೂ ವಿಚಾರ ಮಾಡಬಹುದಾದ ಅಥವಾ ಮಾಡಲೇಬೇಕಾದ ಪ್ರಶ್ನೆಗಳ ಸ್ವರೂಪವೇ ಈ ಕಗ್ಗ.

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೩

ಕಗ್ಗ-೩
ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ I

ಮಹಿಯಿಂ ಜಗವಾಗಿ ಜೀವವೇಷದಲಿ II

ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ I

ಗಹನ ತತ್ತ್ವಕೆ ಶರಣೋ – ಮಂಕುತಿಮ್ಮ II

ತಿಳಿಯಗೊಡದೊಂದು=ತಿಳಿಯಗೊಡದ ಒಂದು

ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು

ನಿಸದವಾದೊಡಾ = ನಿಸದವಾದೊಡೆ + ಆ

ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.

ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. ಆ ದೇವರೆಂಬ ವಸ್ತು ಇದೆಯೋ ಇಲ್ಲವೋ ಎಂದು. ಇದೆ ಎಂದರೆ, ಅದಕ್ಕೆ  ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ” ಚಾರ್ವಾಕ” ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ ವಸ್ತುವನ್ನು ನಂಬದಿರುವರು ಇದ್ದಾರೆ. ಕೆಲವರಿಗೆ ಧೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು, ಕೆಲವರಿಗೆ ಬರೀ ತೋರಿಕೆಗೆ ಭಕ್ತಿ. ಮತ್ತು ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುಧ್ಧ ಭಕ್ತಿ.

ಇಲ್ಲಿ ಡಿ.ವಿ.ಜಿ ಯವರೂ ಸಹ ” ನಿಸದವಾದೊಡೆ” ಎಂದಿದ್ದಾರೆ. ” ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ” ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ ತನ್ನ ಇಷ್ಟದಂತೆ ಪರಮಾತ್ಮ ಆಡಿಸುವನೆಂಬ ಅರ್ಥದಲ್ಲಿದೆ ದಾಸರ ಉಕ್ತಿ. ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ಗಹನಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ . ಇಲ್ಲಿ ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ? ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಮಾತಿಗೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ನಾನು ನಂಬಲ್ಲ ಎಂಬುವವನೂ ಸಹ ” ನಾನು ದೇವರನ್ನು ನಂಬುವುದಿಲ್ಲ ” ಎನ್ನುತ್ತಾನೆ. ಅಂದರೆ ಅವನು ” ” ದೇವರು” ಎನ್ನುವ ವಸ್ತುವೊಂದಿದೆ ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ?

ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುಧ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ .

Leave a comment

Filed under ಕಗ್ಗದ ಹುಗ್ಗಿ

ಕಗ್ಗ ೨

ಕಗ್ಗ೨
ಜೀವ ಜಡರೂಪ ಪ್ರಪಂಚವನದಾವುದೋ I
ಆವರಿಸಿಕೊಂಡುಮೊಳನೆರೆದುಮಿಹುದಂತೆ II
ಭಾವಕೊಳಪಡದಂತೆ ಅಳತೆಗಳವಡದಂತೆ I
ಆ ವಿಶೇಷಕೆ ಮಣಿಯೋ – ಮಂಕುತಿಮ್ಮ II

(ಜೀವ ಜಡ ರೂಪ ಪ್ರಪಂಚವನು ಅದಾವುದೋ ಆವರಿಸಿಕೊಂಡು ಒಳನೆರೆದು ಇಹುದಂತೆ ಭಾವಕ್ಕೆ ಒಳಪಡದಂತೆ ಅಳತೆಗೆ ಅಳವಡದಂತೆ ಆ ವಿಶೇಷಕೆ ಮಣಿಯೋ- ಮಂಕುತಿಮ್ಮ )

(ಒಳನೆರೆದು=ಒಳಗೆ ತುಂಬಿ , ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ)
ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ ತುಂಬಿಕೊಂಡಿರುವ,

ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ (ಪರಮಾತ್ಮನಿಗೆ) ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ.
“ಯತಃ ಸರ್ವಾಣಿ ಭೂತಾನಿ ಭವ೦ನ್ತ್ಯಾದಿ ಯುಗಾಗಮೆ – ಯಸ್ಮಿನ್ಸ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೇ.” ಎಂದು ಯುಧಿಷ್ಠಿರನು ಕೇಳುವ ಐದು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪರಮಾತ್ಮ ಸ್ವರೂಪವನ್ನು ವಿವರಿಸುವಾಗ ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ಹೇಳುತ್ತಾರೆ. ಎಂದರೆ “ಯುಗದ ಆದಿಯಲ್ಲಿ ಯಾರಿಂದ ಎಲ್ಲವೂ ಪ್ರಕಟಗೊಳ್ಳುತ್ತದೋ ಮತ್ತು ಯುಗದ ಅಂತ್ಯದಲ್ಲಿ ಯಾರಲ್ಲಿ ಎಲ್ಲವೂ ವಿಲೀನವಾಗುತ್ತದೋ, ಅದೇ ಪರಮಾತ್ಮ ” ಎನ್ನುತ್ತಾರೆ.

ಈ ಪರಮಾತ್ಮ -ಜಡ-ಜೀವ ಪರಸ್ಪರ ಸಂಬಂಧವನ್ನು ಕುರಿತು ಹೇರಳವಾದ ವ್ಯಾಖ್ಯಾನಗಲಿದ್ದರೂ “ಇದೇ” ಇದು ಎಂದು ಹೇಳುವುದು ಅಸಾಧ್ಯ. ಅದು ಅನುಭವ ವೇಧ್ಯ. ” ಅನ್ನಮಾಚಾರ್ಯರು” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಆಟು ತಾನೈ” ಎಂದು ಹೇಳುತ್ತಾರೆ. ಅಂದರೆ ಎಲ್ಲರಲ್ಲೂ ಹುಟ್ಟು ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ” ಎಂದು ಆ ಪರಮಾತ್ಮನನ್ನು ವರ್ಣಿಸುತ್ತಾರೆ. ಇಲ್ಲಿ ನಮಗೆ ಆ ಪರಮ ಪುರುಷನು ತಾನೇ ಇಡೀ ಜಗತ್ತು ಮತ್ತು ಅದರಲ್ಲಿರುವ ಸಕಲವೂ ಆಗಿ ತಾನೇ ಪ್ರಕಟಗೊಂಡಿದ್ದಾನೆ ಎಂದು ಅರ್ಥ ಬರುತ್ತದೆ. ಇರಲಿ ನಾವೂ ಸಹ ಇದನ್ನು ನಮ್ಮ ನಮ್ಮ ಮತಿಯ ಮಿತಿಯಲ್ಲಿ ವಿಚಾರದ ಒರೆಗೆ ಹಚ್ಚಿ ನಮ್ಮ ನಮ್ಮ ವಿಚಾರದ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡಬೇಕು.

ಆದರೆ ಎಂತೆಂತ ಮಹಾಮಹಿಮಾನ್ವಿತರಿಗೂ ಊಹಿಸಲು, ಅಳೆಯಲು ಮತ್ತು ತಿಳಿಯಲು ಕಷ್ಟಸಾಧ್ಯವಾದ ಆ ಪರಮಾತ್ಮ ಸ್ವರೂಪವನ್ನು ,ವಿಚಿತ್ರ-ವಿಶೇಷ ಎಂದು ಕರೆದಿದ್ದಾರೆ, ಡಿ.ವಿ.ಜಿ.ಯವರು. ಅದಕ್ಕೆ, ನಮಿಸು ಮಣಿ ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು.

Leave a comment

Filed under ಕಗ್ಗದ ಹುಗ್ಗಿ