[29/12/2015 12:47 PM] S. Bhargav: |ಶ್ರೀ ಗುರು ಚರಿತ್ರೆ – ಸಿದ್ಧನಾಮಧಾರಕ ಸಂವಾದೇ ಪೀಠಾಪುರೇ ಶ್ರೀಪಾದಾವತಾರೋ ನಾಮ ಪಂಚಮೋಧ್ಯಾಯಃ||
ಸಿದ್ಧಮುನಿಯು “ಪರಮೇಶ್ವರನೇ ತನ್ನ ಮಾನವ ಭಕ್ತರನ್ನು ಉದ್ಧರಿಸಲು ಅವತಾರ ಮಾಡುತ್ತಿರುತ್ತಾನೆ. ಭಗವಂತನು ನಾನಾರೂಪನು. ಅಂಬರೀಷನನ್ನು ರಕ್ಷಿಸಲು ದಶ ಅವತಾರಗಳನ್ನು ಧರಿಸಿದನು. ಮತ್ಸ್ಯ, ಕೂರ್ಮ, ನರಸಿಂಹಾವತಾರಗಳನ್ನು, ಕುಬ್ಜಯಾಚಕನಾಗಿ ವಾಮನಾವತಾರವನ್ನು, ವಿಪ್ರನಾದರೂ ಕ್ಷತ್ರಿಯಾಂತಕನಾದ ಪರಶುರಾಮಾವತಾರವನ್ನು, ದಶರಥಪುತ್ರನಾಗಿ, ರಾಜಭೂಷಣನಾಗಿ ರಾಮಾವತಾರವನ್ನು, ರಾಜನಾಗಿ ಜನಿಸಿದರೂ ಗೋಪಗೃಹದಲ್ಲಿ ಗೋರಕ್ಷಕನಾಗಿ ಕೃಷ್ಣಾವತಾರವನ್ನು, ವಸ್ತ್ರವಿಹೀನನಾಗಿ ಬುದ್ಧಧರ್ಮವನ್ನು ಪ್ರಸರಿಸಿದ ಬುದ್ಧಾವತಾರವನ್ನು ಧರಿಸಿದನು. ಮುಂದೆ ಯುಗಾಂತರದಲ್ಲಿ ಅಶ್ವವಾಹನ, ಮ್ಲೇಚ್ಛಹಂತಕನಾಗಿ ಕಲ್ಕ್ಯಾವತಾರವನ್ನು ಧರಿಸುತ್ತಾನೆ. ಇದೆಲ್ಲದರ ಜೊತೆಗೆ ಇನ್ನೂ ಅನೇಕ ವೇಷಗಳನ್ನು ಯುಗಯುಗಗಳಲ್ಲೂ ಧರಿಸಿ ಹೃಷೀಕೇಶನು ಸಾಧುಜನ ರಕ್ಷಣೆ, ದುಷ್ಟಜನ ಸಂಹಾರಕ್ಕಾಗಿ ಅವತರಿಸುತ್ತಲೇ ಇರುತ್ತಾನೆ.
ದ್ವಾಪರಾಂತ್ಯದಲ್ಲಿ ಕಲಿವ್ಯಾಪ್ತಿಯಾಗಲು ವಿಪ್ರರು ಅಜ್ಞಾನದಿಂದ ತುಂಬಿ, ದುರಾಚಾರಿಗಳಾಗಿ, ಕಲಿದೋಷದೂಷಿತರಾಗಿರಲು, ಭೂತಲದಲ್ಲಿ ಭಕ್ತ ರಕ್ಷಣೆಗಾಗಿ ಗುರುನಾಥನವತರಿಸಿದನು. ಭಗೀರಥನು ಪಿತೃಜನೋದ್ಧಾರಕ್ಕಾಗಿ ಗಂಗೆಯನ್ನು ಭೂಮಿಗೆ ತಂದಹಾಗೆ, ವಿಪ್ರಸ್ತ್ರೀಯ ಭಕ್ತಿಯಿಂದ ದತ್ತಾವತಾರವಾಯಿತು. ಆಕೆಗೆ ದತ್ತಾತ್ತ್ರೇಯನು ಮಗನಾಗಿ ಜನಿಸಿದನು. ಅದೂ ಒಂದು ವಿಚಿತ್ರವೇ!
ಪೂರ್ವದೇಶದಲ್ಲಿ ಪೀಠಾಪುರ ಎಂಬ ಊರಿನಲ್ಲಿ ಕುಲೀನನಾದ ಬ್ರಾಹ್ಮಣನೊಬ್ಬನಿದ್ದನು. ಆಪಸ್ಥಂಭಶಾಖೀಯನಾದ ಅವನು ರಾಜು ಎಂಬ ನಾಮಾಂಕಿತದಿಂದ ತನ್ನ ಧರ್ಮಕರ್ಮಗಳನ್ನು ತಪ್ಪದೇ ಆಚರಿಸುತ್ತಿದ್ದನು. ಆತನ ಭಾರ್ಯೆ ಸುಮತಿ. ಸದಾಚಾರ ತತ್ಪರಳಾದ ಪತಿವ್ರತೆ. ಅತಿಥಿಅಭ್ಯಾಗತರನ್ನು ಪ್ರತಿದಿನವೂ ಸತ್ಪ್ರವರ್ತನೆಯಿಂದ ಅರ್ಚಿಸುತ್ತಾ, ಸುಶೀಲಗುಣಸಂಪನ್ನೆಯಾಗಿ, ಪತಿಸೇವಪರಾಯಣಳಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಳು.
ಹೀಗಿರುವಾಗ ಒಂದುದಿನ, ದತ್ತಾತ್ತ್ರೇಯಸ್ವಾಮಿ ಅತಿಥಿರೂಪದಲ್ಲಿ ಆ ಪತಿವ್ರತೆಯಾದ ಸುಮತಿಯ ಮನೆಗೆ ಬಂದನು. ಅಂದು ಅವರ ಮನೆಯಲ್ಲಿ ಪಿತೃಶ್ರಾದ್ಧ. ಪಿತೃಸ್ಥಾನೀಯನಾದ ವಿಪ್ರಭೋಜನಕ್ಕೆ ಮುಂಚೆಯೇ ಆ ಸತೀಮಣಿ ಅತಿಥಿ ರೂಪದಲ್ಲಿ ಬಂದಿದ್ದ ದತ್ತನಿಗೆ ಭಿಕ್ಷೆಯಿತ್ತಳು. ಭಕ್ತಪ್ರಿಯನಾದ ದತ್ತನು, ಅದರಿಂದ ಪ್ರಸನ್ನನಾಗಿ, ಆಕೆಗೆ ತ್ರಿಗುಣಾತ್ಮಕವಾದ ತನ್ನ ತಾರಕ ಸ್ವರೂಪವನ್ನು ತೋರಿಸಿದನು. ಅದರಿಂದ ಪುಳಕಿತಗೊಂಡ ಸುಮತಿಯು ವಿನಯ ವಿಧೇಯತೆಗಳಿಂದ ತುಂಬಿ ಭಕ್ತಿಯಿಂದ ದತ್ತನ ಪಾದಗಳಿಗೆ ನಮಸ್ಕರಿಸಿ ಅವನಲ್ಲಿ ಶರಣಾದಳು. ಆಕೆಯ ಚರ್ಯೆಯಿಂದ ಸಂಪ್ರೀತನಾದ ದತ್ತಾತ್ತ್ರೇಯಸ್ವಾಮಿ ಆಕೆಯನ್ನು ವರ ಕೇಳಿಕೊಳ್ಳುವಂತೆ ಅನುಜ್ಞೆ ಕೊಟ್ಟನು. ಆ ಬ್ರಾಹ್ಮಣ ಪತ್ನಿ ಮತ್ತೆ ದತ್ತನಿಗೆ ನಮಸ್ಕರಿಸಿ, ವಿನಮ್ರಳಾಗಿ, ಜಗದೀಶ್ವರನನ್ನು ಈ ರೀತಿ ಪ್ರಾರ್ಥಿಸಿದಳು. “ಹೇ ಜಗನ್ನಾಥ, ಅನಂತ, ನೀನೇ ವಿಶ್ವೇಶ್ವರ. ವಿಶ್ವಕರ್ತ. ಭವತಾರಕ. ನೀನು ನನ್ನಲ್ಲಿ ಪ್ರಸನ್ನನಾಗಿ ನನ್ನ ಅಭೀಷ್ಟವನ್ನು ನೆರವೇರಿಸು. ಹೇ ಕೃಪಾಳು, ಎಲ್ಲದರಲ್ಲೂ ನೀನೇ ಇದ್ದೀಯೆಂದು ಪುರಾಣಾದಿಗಳಲ್ಲಿ ಪ್ರಸಿದ್ಧವಾಗಿದೆ. ದಯಾಭ್ಧಿ, ಭಕ್ತವತ್ಸಲ, ನಿನ್ನ ಕೀರ್ತಿಯನ್ನು ಬಣ್ಣಿಸಲು ಯಾರಿಗೆ ಸಾಧ್ಯ? ನಿನ್ನ ಮಾತುಗಳು ಎಂದಿಗೂ ವೃಥಾ ಆಗುವುದಿಲ್ಲ. ಧೃವನಿಗೆ ಅಚಂಚಲ ಶಾಶ್ವತ ಪದವಿಯನ್ನು ಕೊಟ್ಟ ದೇವದೇವನು ನೀನು. ವಿಭೀಷಣನಿಗೆ ಆಚಂದ್ರಾರ್ಕವಾದ ರಾಜ್ಯವನ್ನು ದಯಪಾಲಿಸಿದವನು ನೀನು. ಭಕ್ತರನ್ನು ಕಾಪಾಡಲು ಸದಾ ಭೂಮಿಯಲ್ಲಿ ಅವತರಿಸುತ್ತಿರುತ್ತೀಯೆ. ಚತುರ್ದಶ ಭುವನಗಳಲ್ಲೂ ನಿನ್ನ ಬಿರುದಾವಳಿಗಳು ಪ್ರಸರಿಸಿವೆ. ಹೇ ದೇವರಾಜ, ಕೃಪಾನಿಧಿ, ವಾಸನೆಗಳೆಂಬ ಕಾನನವನ್ನು ದಹಿಸುವವನು ನೀನು. ಹೇ ನಾರಾಯಣ, ಅನಾಥನಾಥ, ನನಗೆ ವರವನ್ನು ಕೊಡುವುದಾದರೆ ನನ್ನ ಮನೋವಾಸನೆಗಳನ್ನು ಸದಾ ನಿನ್ನ ನಾಮವೇ ಆವರಿಸಿರಲಿ. ಜಗತ್ತಿಗೇ ಜೀವಾಧಾರ ನೀನು. ನಿನ್ನನ್ನೆ ನಂಬಿ ನಿನ್ನ ಚರಣಗಳನ್ನು ಹಿಡಿದಿದ್ದೇನೆ.” ಎಂದು ಅವನ ಪಾದಗಳಲ್ಲಿ ಶಿರವನ್ನಿಟ್ಟಳು.
ಆ ಪತಿವ್ರತೆಯ ಸ್ತೋತ್ರವನ್ನು ಆಲಿಸಿ ಸಂತುಷ್ಟನಾದ ಅತ್ರಿತನಯನಾದ ದತ್ತಾತ್ತ್ರೇಯನು ದಯಾಪೂರ್ಣನಾಗಿ, ಆಕೆಯ ಭುಜಗಳನ್ನು ಹಿಡಿದು ಮೇಲಕ್ಕೆಬ್ಬಿಸಿ, “ಅಮ್ಮಾ” ಎಂದು ಕರೆದನು. ಆ ಕರೆಯನ್ನು ಕೇಳಿದ ಆ ಸಾಧ್ವಿ, “ದೇವ, ನೀನು ನನ್ನನ್ನು “ಅಮ್ಮಾ” ಎಂದು ಕರೆದ ಮಾತು ನನ್ನಲ್ಲಿ ಸಿದ್ಧಿಯಾಗಲಿ. ನನಗೆ ಅನೇಕ ಪುತ್ರರು ಜನಿಸಿದರೂ, ಇಬ್ಬರು ಮಾತ್ರವೇ ಉಳಿದಿದ್ದಾರೆ. ಅವರಲ್ಲೊಬ್ಬ ಕುರುಡ, ಇನ್ನೊಬ್ಬ ಕುಂಟನಾಗಿ, ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಯೋಗ್ಯನಾದ ಮಗನೊಬ್ಬ ಹುಟ್ಟಲಿಲ್ಲವೆಂಬ ಕೊರಗು ಕಾಡುತ್ತಿದೆ. ಸತ್ಪುತ್ರನಿಲ್ಲದ ಜನ್ಮ ನಿಷ್ಫಲವೇ ಎಂದುಕೊಳ್ಳುತ್ತೇನೆ. ಆಯುಷ್ಮಂತ, ಜ್ಞಾನವಂತ, ಶ್ರೀಮಂತ, ಜಗದ್ವಂದ್ಯನಾದ ನಿನ್ನಂತಹ ಪುತ್ರನೊಬ್ಬನಾದರೂ ನನ್ನ ಜನ್ಮ ಸಾಫಲ್ಯವಾಗುತ್ತದೆ.” ಎಂಂದು ಬೇಡಿಕೊಂಡ ಸುಮತಿಯ ಮಾತುಗಳನ್ನು ಕೇಳಿದ ಭಗವಂತನಾದ ದತ್ತಾತ್ತ್ರೇಯನು ಪ್ರಸನ್ನನಾಗಿ, ” ಅಮ್ಮಾ, ಸಾಧ್ವಿ, ನಿನಗೆ ನನ್ನ ಸದೃಶನಾದ ಪುತ್ರ ನಿನ್ನ ಕುಲದಲ್ಲಿ ಹುಟ್ಟಿ ಕುಲೋದ್ಧಾರಮಾಡಿ, ಜಗದ್ವಿಖ್ಯಾತನಾಗುತ್ತಾನೆ. ಆದರೆ ಅವನ ಮಾತುಗಳನ್ನು ನೀನು ಪರಿಪಾಲಿಸಬೇಕು. ಇಲ್ಲದಿದ್ದರೆ ಅವನು ನಿಮ್ಮ ಹತ್ತಿರ ನಿಲ್ಲುವುದಿಲ್ಲ. ಜ್ಞಾನ ಮಾರ್ಗ ಬೋಧಿಸಿ ನಿಮ್ಮ ದೈನ್ಯ ತಾಪಗಳನ್ನು ಪರಿಹರಿಸುತ್ತಾನೆ. ” ಎಂದು ಹೇಳಿ ದತ್ತ ಸ್ವಾಮಿಯು ಅಂತರ್ಧಾನನಾದನು.
ಆ ಸ್ವಾಮಿಯ ರೂಪವನ್ನು ಮತ್ತೆ ಮತ್ತೆ ಸ್ಮರಿಸುತ್ತಾ, ಆಶ್ಚರ್ಯಚಕಿತಳಾದ ಸುಮತಿ, ಒಳಗೆ ಬಂದು ತನ್ನ ಗಂಡನಿಗೆ ನಡೆದ ವಿಷಯವನ್ನೆಲ್ಲಾ, ತಾನು ಅವನನ್ನು ಕೇಳದೆ ಬಿಕ್ಷೆಯನ್ನು ನೀಡಿದ್ದನ್ನೂ, ವಿಸ್ತಾರವಾಗಿ ನಿವೇದಿಸಿದಳು. ಅದನ್ನು ಕೇಳಿ ಬಹು ಸಂತುಷ್ಟನಾದ ಅವನು, ಬಂದಿದ್ದ ಅತಿಥಿ ದತ್ತಸ್ವಾಮಿಯೆಂಬುದನ್ನು ಅರಿತು, “ಮಧ್ಯಾಹ್ನ ಸಮಯದಲ್ಲಿ ದ್ವಿಜಗೃಹಕ್ಕೆ ದತ್ತಸ್ವಾಮಿ ಅತಿಥಿಯಾಗಿ ಬರುತ್ತಾನೆ. ಬಹುಮುಖನಾಗಿ ಬರುವ ಆ ದತ್ತಸ್ವಾಮಿಗೆ ವಿಮುಖರಾಗದೆ ಭಿಕ್ಷೆ ನೀಡಬೇಕು. ಮಾಹುರ, ಕರವೀರ, ಪಾಂಚಾಲೇಶ್ವರಗಳು ದತ್ತ ದೇವನ ವಾಸಸ್ಥಾನಗಳು. ಆತ ಭಿಕ್ಷು ರೂಪದಲ್ಲಿ ಪ್ರತಿದಿನವೂ ಸಂಚರಿಸುತ್ತಿರುತ್ತಾನೆ. ನಾನಾ ರೂಪಗಳಲ್ಲಿ ಪರ್ಯಟನೆ ಮಾಡುತ್ತಿರುತ್ತಾನೆ. ನನ್ನನ್ನು ಕೇಳದೆಯೇ ನೀನು ಭಿಕ್ಷೆ ನೀಡಿದ್ದು ಬಹಳ ಒಳ್ಳೆಯದಾಯಿತು.” ಎಂದನು. ಮತ್ತೆ ಸುಮತಿ, “ನಾಥ, ನನ್ನ ಅಪರಾಧವನ್ನು ಮನ್ನಿಸಿ. ನಾನು ಭಗವಂತನಿಗೆ ಶ್ರಾದ್ಧೀಯಾನ್ನವನ್ನು ಶ್ರಾದ್ಧಕ್ಕೆ ಮುಂಚೆಯೇ ನೀಡಿದೆ.” ಎಂದಳು. ಅವಳ ಮಾತನ್ನು ಕೇಳಿದ ರಾಜು ನೀನು ಬಹಳ ಒಳ್ಳೆಯ ಕೆಲಸವನ್ನೇ ಮಾಡಿದೆ. ನಮ್ಮ ಪಿತೃಗಳೆಲ್ಲಾ ತೃಪ್ತರಾದರು. ಅದರಲ್ಲಿ ಸಂದೇಹವೇ ಇಲ್ಲ. ಪಿತೃಗಳನ್ನುದ್ದೇಶಿಸಿ ಕರ್ಮಗಳನ್ನು ಮಾಡಿ, ಶ್ರೀ ವಿಷ್ಣುವಿಗೆ ಶ್ರಾದ್ಧೀಯಾನ್ನವನ್ನು ಸಮರ್ಪಿಸುತ್ತೇವೆ. ಆ ವಿಷ್ಣುವೇ ದತ್ತ ರೂಪದಲ್ಲಿ ಸಾಕ್ಷಾತ್ಕರಿಸಿ ಭಿಕ್ಷೆಯಾಗಿ ಗ್ರಹಿಸಿದ್ದಾನೆ. ಅದರಿಂದ ನಮ್ಮ ಪಿತೃಗಳು ಕೃತಾರ್ಥರಾಗಿ, ತೃಪ್ತರಾದ ಅವರು ಸ್ವರ್ಗದಲ್ಲಿ ಬಹಳ ಕಾಲ ಇರುತ್ತಾರೆ. ನೀನು ಸಾಕ್ಷಾತ್ಭಗವಂತನ ತ್ರಿಮೂರ್ತಿರೂಪನಾದ ದತ್ತಸ್ವಾಮಿಯನ್ನು ಅರ್ಚಿಸಿದ್ದೀಯೆ. ನಿನಗೆ ಇಂತಹ ವರವು ಲಭಿಸಿದ್ದರಿಂದ ನಿನ್ನ ಮಾತಾಪಿತರು ಧನ್ಯರಾದರು. ನಿನಗೆ ದತ್ತ ಸದೃಶನಾದ ಪುತ್ರನು ಸಂಭವಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.” ಎಂದು ಸುಮತಿಗೆ ಹೇಳಿದನು.
ಇಂತಹ ನಿಶ್ಚಲಮನಸ್ಸಿನಿಂದ ಆ ದಂಪತಿಗಳು ಇರುತ್ತಿರಲು, ಆ ಸಾಧ್ವಿ ಗರ್ಭವತಿಯಾದಳು. ನವಮಾಸಗಳು ತುಂಬಿದಮೇಲೆ ಒಂದು ಶುಭ ಮುಹೂರ್ತದಲ್ಲಿ ಆಕೆ ಗಂಡುಮಗುವಿಗೆ ಜನ್ಮಕೊಟ್ಟಳು. ಆನಂದ ಭರಿತನಾದ ಆಕೆಯ ಗಂಡ ರಾಜು, ಸ್ನಾನಾದಿಗಳನ್ನು ಮುಗಿಸಿಕೊಂಡು, ಜಾತಕರ್ಮಾದಿಗಳನ್ನು ಮಾಡಿದನು. ಜ್ಯೋತಿಷ್ಯ ನಿಪುಣರು ಬಂದು ಆ ಬಾಲಕನ ಜನ್ಮ ಲಗ್ನವನ್ನು ಪರಿಶೀಲಿಸಿ, ಅವನು ಬಹುಮಾನ್ಯನಾದ ತಪಸ್ವಿಯಾಗಿ, ದೀಕ್ಷಾದಾತನಾದ ಜಗದ್ಗುರುವಾಗುತ್ತಾನೆ ಎಂದು ನುಡಿದರು. ತಂದೆತಾಯಿಗಳು “ಶ್ರೀಗುರುವಿನ ವರಪ್ರಸಾದದಿಂದ ಈ ಫಲ ಲಭ್ಯವಾಯಿತು. ನಮ್ಮ ಪಿತೃಗಳು ಉದ್ಧಾರವಾದರು” ಎಂದು ಸಂತಸಗೊಂಡರು.
ಬಾಲಕನ ಪಾದಗಳಲ್ಲಿ ಶ್ರೀ ಚಿಹ್ನೆಗಳಿದ್ದುದರಿಂದ ಹನ್ನೆರಡನೆಯ ದಿನ ನಾಮಕರಣ ಮಾಡಿ ’ಶ್ರೀಪಾದ’ನೆಂದು ಹೆಸರಿಟ್ಟರು. ಆ ಬಾಲಕ ಭಕ್ತೋದ್ಧಾರನಾದ ತ್ರಿಮೂರ್ತಿಯೇ! ಅವನು ವಿದ್ಯೆಗಳಲ್ಲಿ, ಸುಗುಣಗಳಲ್ಲಿ, ಬುದ್ಧಿಯಲ್ಲಿ ಸಮಸಮನಾಗಿ ಬೆಳೆಯುತ್ತಿದ್ದನು. ಎಂಟನೆಯ ವರ್ಷವಾಗುತ್ತಲೂ ತಂದೆ ಅವನಿಗೆ ಉಪನಯನ ಮಾಡಿದನು. ಬ್ರಹ್ಮಚರ್ಯ ವಿಧಾನದಂತೆ ಯಥಾವಿದಿಯಾಗಿ, ವಟುವಾದ ಆ ಬಾಲಕ, ಸಾಂಗೋಪಾಂಗವಾಗಿ, ವೇದಗಳನ್ನೂ, ಸರ್ವಶಾಸ್ತ್ರಗಳನ್ನೂ, ಸ್ವೀಕರಿಸಿದನು. ಆ ವಟುವಿಗಿದ್ದ ಗ್ರಹಣ ಶಕ್ತಿಯನ್ನು ಕಂಡು ಸೇರಿದ್ದವರೆಲ್ಲರೂ ಆಶ್ಚರ್ಯಗೊಂಡು ಅವನು ಸಾಕ್ಷಾತ್ ಪರಮೇಶ್ವರನೇ ಎಂದು ನುಡಿದರು. ಆಚಾರ ವ್ಯವಹಾರಗಳು, ಯತಾರ್ಥವಾಗಿ ಮಾಡಬೇಕಾದ ಪ್ರಾಯಶ್ಚಿತ್ತಗಳು, ವೇದಾಂತ ಭಾಷ್ಯಾರ್ಥ, ವೇದಾರ್ಥಗಳನ್ನು ಶ್ರೀಗುರುವು ಭ್ರಮೆ ಪ್ರಮಾದಗಳಿಲ್ಲದಂತೆ ಹೇಳುತ್ತಿದ್ದನು. ಹೀಗೆ ಲೀಲಾ ಮಾನುಷವಿಗ್ರಹನಾಗಿ ಸರ್ವವಿದ್ಯಾಪರಾಯಣನಾದ ಬಾಲಕನಿಗೆ ವಿವಾಹ ವಯಸ್ಸು ಬಂತು. ಅವನಿಗೆ ವಿವಾಹ ಮಾಡಬೇಕೆಂದು ಅವನ ಮಾತಾಪಿತರು ಯೋಚಿಸಿದರು. ಅವರನ್ನು ವಾರಿಸುತ್ತಾ, ಶ್ರೀಪಾದನು “ಮಾನುಷ ಸ್ತ್ರೀಯ ಉದ್ವಾಹನೆಗೆ ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ವೈರಾಗ್ಯವೇ ನನ್ನ ಹೆಂಡತಿ. ಆಕೆಯೊಡನೆ ನಾನು ವಿವಾಹವಾಗಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ. ಬೇರೆ ಯಾವ ಸ್ತ್ರೀಯೂ ನನಗೆ ಸರಿಹೋಗುವುದಿಲ್ಲ. ಸೌಂದರ್ಯವತಿಯಾದ ಯೋಗಶ್ರೀಯನ್ನು ನಾನು ವರಿಸಬೇಕು. ಆಕೆಯನ್ನು ಬಿಟ್ಟು ಮಿಕ್ಕ ಸ್ತ್ರೀಯರೆಲ್ಲರೂ ನನಗೆ ಮಾತೃಸಮಾನರು. ನಾನು ತಾಪಸಿ. ಬ್ರಹ್ಮಚಾರಿ. ಪ್ರವೃತ್ತಿಮುಖಕ್ಕೆ ವಿಮುಖನು. ಯೋಗಶ್ರೀಯನ್ನಲ್ಲದೆ ನಾನು ಇನ್ನಾರನ್ನೂ ಮನಸ್ಸಿನಲ್ಲೂ ಆಸೆಪಡುವುದಿಲ್ಲ. ನಾನು ಶ್ರೀವಲ್ಲಭನು. ಶ್ರೀಪಾದನು. ತತ್ತ್ವವೇತ್ತನಾಗಿ ಕೃತಾರ್ಥನಾದೆ. ನಿವೃತ್ತಿ ಮಾರ್ಗದಲ್ಲೇ ನಡೆಯತಕ್ಕವನು.” ಎಂದು ಜ್ಞಾನೋಪದೇಶ ಮಾಡಿದನು.
ಅತ್ರಿಪುತ್ರನಾದ ದತ್ತಾತ್ತ್ರೇಯನ ಮಾತುಗಳನ್ನು ಸ್ಮರಿಸಿಕೊಂಡು, ಶ್ರೀಪಾದನ ಹೃದಯವನ್ನು ಅರಿತು, ಶ್ರೀಪಾದನ ಮಾತುಗಳ ಉಲ್ಲಂಘನೆ ಮಾಡಿದರೆ ಮಹಾ ವಿಪತ್ತು ಉಂಟಾಗಬಹುದೆಂದು ಭಾವಿಸಿದ ಆ ತಂದೆತಾಯಿಗಳು, ತಮ್ಮ ದುಃಖವನ್ನು ಶ್ರೀಪಾದನಲ್ಲಿ ಬಿನ್ನವಿಸಿಕೊಂಡರು. “ನಿನ್ನ ಮನಸ್ಸಿಗೆ ಅದೇ ಸಂತೋಷವಾದರೆ ಹಾಗೇ ಆಗಲಿ. ಎಂದು ಸಾದರವಾಗಿ ಹೇಳಿ, “ಈ ಶ್ರೀದತ್ತನು ನಮ್ಮ ಮಗನಲ್ಲ. ಪರಮಪುರುಷನಾದ ಆ ದತ್ತನೇ!” ಎಂದು ನಿಶ್ಚಯಿಸಿಕೊಂಡರು. ನಂತರದಲ್ಲಿ ಅವನ ತಾಯಿ ಮಗನ ಮುಂದೆ ನಿಂತು, “ಕುಮಾರ, ನಮ್ಮ ಆಸೆಯನ್ನು ನಿಷ್ಫಲಮಾಡಬೇಡ. ನೀನೇ ನಮ್ಮ ಪಾಲಕ.” ಎಂದು ಹೇಳುತ್ತಾ, ವ್ಯಾಕುಲಳಾಗಿ ಕಣ್ಣಿರು ಸುರಿಸುತ್ತಾ, ಪುತ್ರ ಸ್ನೇಹದಿಂದ ಕೂಡಿ, ಗಾಳಿಯ ಹೊಡೆತಕ್ಕೆ ಸಿಕ್ಕಿದ ಬಾಳೆಯಗಿಡದಂತೆ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಹಾಗೆ ಬಿದ್ದ ತಾಯಿಯನ್ನು ಶ್ರೀಪಾದ ಹಿಡಿದೆತ್ತಿ, ಸಮಾಧಾನಪಡಿಸಿ, ಕಣ್ಣಿರೊರೆಸಿ ಹೇಳಿದನು.. “ಅಮ್ಮಾ, ಚಿಂತಿಸಬೇಡ. ನಿನಗಿಷ್ಟವಾದ ವರವನ್ನು ಕೇಳಿಕೋ. ಕೊಡುತ್ತೇನೆ. ಸ್ಥಿರಚಿತ್ತಳಾಗಿ ಸುಖವಾಗಿರು.” ಅವನ ಮಾತನ್ನು ಕೇಳಿದ ಸುಮತಿ, “ತಂದೆ, ನಿನ್ನನ್ನು ನೋಡುತ್ತಾ ನನ್ನ ಸರ್ವದುಃಖಗಳನ್ನು ಮರೆತಿದ್ದೆ. ವೃದ್ಧಾಪ್ಯದಲ್ಲಿ ದೈನ್ಯವನ್ನು ಪರಿಹರಿಸಿ ನಮ್ಮನ್ನು ರಕ್ಷಿಸುತ್ತೀಯೆ ಎಂದುಕೊಂಡಿದ್ದೆ. ನಾವಿಬ್ಬರೂ ವೃದ್ಧರು. ಇರುವ ಇಬ್ಬರು ಮಕ್ಕಳಲ್ಲಿ ಒಬ್ಬ ಕುರುಡ. ಇನ್ನೊಬ್ಬ ಕುಂಟ. ನೀನು ಸನ್ಯಾಸಿಯಾದರೆ ನಮ್ಮನ್ನು ರಕ್ಷಿಸುವವರು ಯಾರು?” ಎಂದಳು. ಅದನ್ನು ಕೇಳಿದ ಶ್ರೀಪಾದ ತನ್ನ ಇಬ್ಬರು ಅಣ್ಣಂದಿರ ಕಡೆ ತನ್ನ ಅಮೃತದೃಷ್ಟಿಯನ್ನು ಹರಿಸಿದನು. ತಕ್ಷಣವೇ ಅವರಿಬ್ಬರೂ ಸಂಪೂರ್ಣ ಸ್ವಸ್ಥರಾಗಿ, ಕುಂಟು ಕುರುಡುಗಳನ್ನು ಕಳೆದುಕೊಂಡು ಆರೋಗ್ಯವಂತರಾದರು. ಚಿಂತಾಮಣಿಯ ಸ್ಪರ್ಶದಿಂದ ಕಬ್ಬಿಣವು ಬಂಗಾರವಾದಂತೆ, ಆ ಮಹಾತ್ಮನ ದೃಷ್ಟಿ ತಾಕುತ್ತಲೇ ಅವರಿಬ್ಬರೂ ವೇದಶಾಸ್ತ್ರಗಳಲ್ಲಿ ಪ್ರವೀಣರಾಗಿ, ಯೋಗ್ಯವಂತರಾದರು. ಶ್ರೀಪಾದರ ಅನುಗ್ರಹದಿಂದ ಕೃತಾರ್ಥರಾದೆವೆಂದು ಅವನಲ್ಲಿ ಬಿನ್ನವಿಸಿಕೊಂಡರು.
ಆ ಸೋದರರಿಬ್ಬರನ್ನೂ ಆದರದಿಂದ ನೋಡಿ ಶ್ರೀಪಾದರು, “ನನ್ನ ಅನುಗ್ರಹದಿಂದ ಇವರು ಪುತ್ರಪೌತ್ರವಂತರಾಗಿ, ಧನಧಾನ್ಯಗಳಿಂದ ಕೂಡಿ, ವರ್ಧಮಾನರಾಗಿ,. ಜನನಿಜನಕರಿಗೆ ಇಹಪರಸೌಖ್ಯಗಳನ್ನು ಪ್ರಾಪ್ತಿಮಾಡಿಕೊಟ್ಟು, ಕೃತಾರ್ಥರಾಗಿ, ಕೈವಲ್ಯವನ್ನು ಪಡೆಯುತ್ತಾರೆ,” ಎಂದು ತಾಯಿಯ ಕಡೆ ನೋಡಿ ಹೇಳಿದರು. ಮತ್ತೆ ತಾಯಿಗೆ, “ಅಮ್ಮಾ, ಈಪುತ್ರರಿಬ್ಬರೊಡನೆ ಕೂಡಿ ಉತ್ತಮ ಸುಖಗಳನ್ನು ಅನುಭವಿಸು. ಇವರಿಬ್ಬರೂ ಶತಾಯುಷಿಗಳಾಗಿ, ಪುತ್ರಪೌತ್ರರಿಂದ ಕೂಡಿರುವುದನ್ನು ನೀನು ನಿನ್ನ ಕಣ್ಣಾರ ನೋಡುತ್ತೀಯೆ. ಚಿಂತಿಸಬೇಡ. ಇವರ ವಂಶದವರಲ್ಲಿ ಸಂಪತ್ತು ಅಚಂಚಲವಾಗಿ, ಶಾಶ್ವತವಾಗಿ ಇರುತ್ತದೆ. ವೇದ ವೇದಾಂಗ ಶಾಸ್ತ್ರ ಪರಿಣತರು ಇವರ ವಂಶದಲ್ಲಿ ಜನಿಸುತ್ತಾರೆ. ಅದರಿಂದ, ಅಮ್ಮಾ, ನೀನು ನನ್ನನ್ನು ಆದರಿಸಿ ನನಗೆ ಅನುಜ್ಞೆ ಕೊಡು. ನನ್ನ ಮಾತನ್ನು ತಿರಸ್ಕರಿಸಬೇಡ. ಸಾಧುಪುರುಷರಿಗೆ ದೀಕ್ಷೆ ಕೊಡಲು ನಾನು ನಿವೃತ್ತಿಮಾರ್ಗದಲ್ಲಿ ಸಂಚರಿಸಬೇಕಾಗಿದೆ.” ಎಂದು ಹೇಳಿ, ಶ್ರೀಪಾದರು ತಾಯಿಗೆ ನಮಸ್ಕರಿಸಿದರು.
ತಾಯಿಯ ಅನುಮತಿ ಪಡೆದು ತಕ್ಷಣವೇ ಭಕ್ತಿಭಾವಗಳಿಂದಕೂಡಿದ ಶ್ರೀಪಾದರು ಅದೃಶ್ಯರಾಗಿ ಕಾಶಿನಗರವನ್ನು ಸೇರಿದರು. ಆ ಲೀಲಾ ವಿಹಾರಿಯಾದ ಭಗವಂತನು ಅಲ್ಲಿಂದ ಬದರಿಕಾಶ್ರಮವನ್ನು ಸೇರಿ, ಅಲ್ಲಿ ನಾರಾಯಣ ಅಂಶನಾದ ನರನನ್ನು ದರ್ಶಿಸಿದರು. ಕಾರಣಜನ್ಮನಾದ ಶ್ರೀಗುರುವು, ಸ್ವಭಕ್ತರಿಗೆ ದೀಕ್ಷೆಕೊಡಲು, ಅಲ್ಲಿಂದ ಹೊರಟು, ಪರ್ಯಟನ ಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದರು.
||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಪೀಠಾಪುರೇ ಶ್ರೀಪಾದಾವತಾರೋ ನಾಮ ಪಂಚಮೋಧ್ಯಾಯಃ ಸಂಪೂರ್ಣಂ||
[31/12/2015 5:11 AM] S. Bhargav: ||ಶ್ರೀ ಗುರು ಚರಿತ್ರೆ – ಆರನೆಯ ಅಧ್ಯಾಯ||
“ಅಜ್ಞಾನ ತಿಮಿರವನ್ನು ಹೊಡೆದೋಡಿಸುವ ಗುರುಸತ್ತಮ, ಸಿದ್ಧಪುರುಷ, ಆರಂಭದಿಂದ ಗುರುಪೀಠವನ್ನು ಕುರಿತು ಹೇಳಿದೆ. ಈ ಪೀಠದಲ್ಲಿ ಅವತರಿಸಿದ ತ್ರಿಮೂರ್ತಿಸ್ವರೂಪನು ಭೂಮಿಯೆಲ್ಲವನ್ನೂ ಏಕೆ ಪರ್ಯಟನೆ ಮಾಡಿದನು? ವಿಶೇಷವಾಗಿ ಗೋಕರ್ಣಕ್ಷೇತ್ರವನ್ನು ಸೇರಿದ್ದೇಕೆ? ಪವಿತ್ರವಾದ ಅನೇಕ ತೀರ್ಥಪ್ರದೇಶಗಳಿದ್ದರೂ, ಅವೆಲ್ಲವನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಗೋಕರ್ಣ ಕ್ಷೇತ್ರವನ್ನೇಕೆ ಆರಿಸಿಕೊಂಡರು? ಎಂಬುದನ್ನು ವಿವರವಾಗಿ ತಿಳಿಸಿ.” ಎಂದು ನಾಮಧಾರಕನು ವಿನಯವಾಗಿ ಕೇಳಿಕೊಂಡನು.
ಅದಕ್ಕೆ ಸಿದ್ಧರು ಹೇಳಿದರು. “ನಾಮಧಾರಕ, ಆನಂದಕರವಾದ ಶ್ರೀ ಗುರುಚರಿತ್ರೆಯನ್ನು ಕೇಳು. ಅದನ್ನು ಹೇಳುವುದರಿಂದ ನನಗೂ ಸಹ ಆ ಸ್ವಾಮಿಯ ಲೀಲಾಸ್ಫೂರ್ತಿ ಲಾಭವು ದೊರೆಯುತ್ತದೆ. ಆ ಪ್ರಭುವು ತಾನೇ ತ್ರಿಮೂರ್ತಿಸ್ವರೂಪನಾದರೂ, ತೀರ್ಥಕ್ಷೇತ್ರಗಳ ಮಾಹಾತ್ಮ್ಯೆಯನ್ನು ಪ್ರಕಟಿಸುವುದಕ್ಕೆ ತೀರ್ಥಸ್ಥಳಗಳ ಪರ್ಯಟನೆ ಮಾಡಿದನು. ಭಕ್ತೋದ್ಧರಣಕ್ಕಾಗಿ, ವಿಶೇಷವಾಗಿ ಶಂಕರರೂಪದಲ್ಲಿ ಭಕ್ತರಿಗೆ ಉಪದೇಶನೀಡುತ್ತಾ, ಯಾತ್ರೆಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದನು. ಗೋಕರ್ಣ ಮಹಿಮೆ ಲೋಕದಲ್ಲಿ ಸಾಟಿಯಿಲ್ಲದ್ದು. ಅದನ್ನು ಹೇಳುತ್ತೇನೆ. ಸಾವಧಾನಚಿತ್ತನಾಗಿ ಕೇಳು.
ಗೋಕರ್ಣಕ್ಷೇತ್ರದಲ್ಲಿ ಬಹಳಜನ ಭಕ್ತರು ವರಗಳನ್ನು ಹೊಂದಿದವರಾದರು. ಅಲ್ಲಿ ಸದಾಶಿವನೇ ಸಾಕ್ಷಾತ್ತಾಗಿ ನೆಲಸಿದ್ದಾನಾಗಿ ಅದು ಬಹಳ ಅಪೂರ್ವವಾದ ಸ್ಥಳ. ಮಹಾಬಲೇಶ್ವರ ಲಿಂಗವು ಸ್ವಯಂಭುವಾದ ಶಿವನೇ! ಗಣಪತಿಯು ಶ್ರೀ ಮಹಾವಿಷ್ಣುವಿನ ಆಜ್ಞೆಯಂತೆ ಅದನ್ನು ಪ್ರತಿಷ್ಠಾಪಿಸಿದನು. ಆ ಮಹಾಬಲೇಶ್ವರನು ಸರ್ವಕಾಮದನು. ಪುಲಸ್ತ್ಯ ಬ್ರಹ್ಮನ ಮಗಳಾದ ಕೈಕಸಿ ಭಕ್ತಪರಾಯಣೆಯಾಗಿ ಸದಾ ಶಿವಪೂಜಾ ತತ್ಪರಳಾಗಿದ್ದಳು. ಶಿವಲಿಂಗಾರ್ಚನೆ ಮಾಡದೆ ಆಕೆ ಅನ್ನವನ್ನು ಮುಟ್ಟುತ್ತಿರಲಿಲ್ಲ. ಒಂದು ದಿನ ಅಕೆಗೆ ಶಿವಾರ್ಚನೆಗೆ ಶಿವಲಿಂಗವು ಸಿಕ್ಕಲಿಲ್ಲ. ತನ್ನ ದಿನನಿತ್ಯದ ವ್ರತ ಭಂಗವಾಗಬಾರದೆಂದು ಆಕೆ ಮೃತ್ತಿಕಾ ಲಿಂಗವನ್ನು ಮಾಡಿ ಏಕಾಗ್ರಮನಸ್ಕಳಾಗಿ, ಪರಮಭಕ್ತಿಯಿಂದ ಆ ಲಿಂಗವನ್ನು ಆರಾಧಿಸುತ್ತಿದ್ದಳು. ಆ ಸಮಯದಲ್ಲಿ ಆಕೆಯ ಮಗ ಲೋಕಕಂಟಕನಾದ ರಾವಣನು ತಾಯಿಯನ್ನು ಕಾಣಲು ಬಂದನು. ಅವನು ಅತಿಕೄರನಾದ ದಶಾನನನು. ಶಿವಲಿಂಗಾಪೂಜಾತತ್ಪರಳಾದ ತಾಯಿಯನ್ನು ಕಂಡು, ಪ್ರಣಾಮಮಾಡಿ, “ಅಮ್ಮಾ ನೀನು ಮಾಡುತ್ತಿರುವುದೇನು? ಸರ್ವಸಿದ್ಧಿಗಳು ನನ್ನ ಕೈವಶವಾಗಿರುವಾಗ ಈ ಮೃತ್ತಿಕಾಲಿಂಗವನ್ನು ಪೂಜಿಸುತ್ತಿರುವುದು ನನ್ನ ದೌರ್ಭಾಗ್ಯ. ಆದರೂ ಈ ಪೂಜೆಯಿಂದ ಬರುವ ಫಲವಾದರೂ ಏನು?” ಎಂದು ಕೇಳಿದನು. ಅದಕ್ಕೆ ಆಕೆ, “ತಂದೆ, ಈ ಪೂಜೆಯಿಂದ ಕೈಲಾಸಪದವಿ ದೊರೆಯುತ್ತದೆ.” ಎಂದಳು. ಅದಕ್ಕೆ ರಾವಣನು ” ನಿನ್ನ ಪ್ರಯಾಸವೆಲ್ಲ ವ್ಯರ್ಥ. ಕ್ಷಣ ಮಾತ್ರದಲ್ಲಿ ನಿನಗೆ ಕೈಲಾಸವನ್ನೇ ತಂದುಕೊಡುತ್ತೇನೆ. ಲಂಕಾಪುರಿಯಲ್ಲೇ ಶಿವ-ಪಾರ್ವತಿ ಸಹಿತವಾದ ಕೈಲಾಸವನ್ನು ಪ್ರತಿಷ್ಠಾಪಿಸುತ್ತೇನೆ. ನನ್ನ ಮಾತು ಸುಳ್ಳಲ್ಲ. ಶೀಘ್ರದಲ್ಲೇ ನೀನು ದಿನವೂ ಇಲ್ಲೇ ಶಿವನ ಪೂಜೆ ಮಾಡಿಕೊಳ್ಳಬಹುದು. ಈ ಮೃತ್ತಿಕಾಲಿಂಗವೇಕೆ?” ಎಂದು ಹೇಳಿ ಅಲ್ಲಿಂದ ಹೊರಟನು.
ಅತಿವೇಗದಿಂದ ರಾವಣನು ಕೈಲಾಸವನ್ನು ಸೇರಿ ತನ್ನ ಇಪ್ಪತ್ತು ಕೈಗಳಿಂದ ಆ ಧವಳಗಿರಿಯನ್ನು ಎತ್ತಲುಪಕ್ರಮಿಸಿದನು. ಆ ಮಹಾಬಲನು ಕೈಲಾಸವನ್ನು ಸಡಲಿಸಿ, ಗಿರಿಯ ಕೆಳಗೆ ತನ್ನ ಹತ್ತು ತಲೆಗಳನ್ನೂ ಇಟ್ಟು, ಕೈಗಳನ್ನು ತೊಡೆಯಮೇಲೆ ಊರಿ, ಗಿರಿಯನ್ನು ಎತ್ತುತ್ತಿರಲು, ಅವನ ಆ ಪ್ರಯತ್ನದಿಂದ ಕ್ಷಣಕಾಲದಲ್ಲಿ ಸಪ್ತ ಪಾತಾಳಗಳೂ ಕಂಪಿಸಿಹೋದವು. ಶೇಷನು ಚಕಿತನಾದನು. ಅಕಸ್ಮಾತ್ತಾಗಿ ಉಂಟಾದ ಚಲನದಿಂದ ಆದಿಕೂರ್ಮಕ್ಕೆ ಸಂದೇಹವುಂಟಾಯಿತು. ದೇವಗಣಗಳೆಲ್ಲಾ ಭಯಭೀತರಾದರು. ಅಮರಾವತಿ ಅಲ್ಲಾಡಿಹೋಯಿತು. ಸಪ್ತ ಊರ್ಧ್ವಲೋಕಗಳೂ, ಗಿರಿಕಾನನಗಳಿಂದ ಕೂಡಿದ ಭೂಮಂಡಲವೂ, ಮೇರು ಪರ್ವತಗಳೂ, ಪ್ರಳಯ ಬಂದಿತೇನೋ ಎಂದು ಭೀತಗೊಂಡವು. ಕೈಲಾಸದಲ್ಲಿ ಶಿವಗಣಗಳು ಭಯಪೀಡಿತರಾದರು. ಭಯಕಂಪಿತಳಾದ ಪಾರ್ವತಿ ಶಂಕರನಿಗೆ ಶರಣಾಗಿ, ಅವನನ್ನು ಆಲಂಗಿಸಿ, “ಕೈಲಾಸವು ಬಿದ್ದುಹೋಗುತ್ತಿದೆಯೇನೋ ಎನ್ನಿಸುತ್ತಿದೆ. ಆಕಸ್ಮಿಕವಾಗಿ ಸಭಾಗೃಹಗಳೆಲ್ಲವೂ ಕಂಪಿಸುತ್ತಿರುವುದಕ್ಕೆ ಕಾರಣವೇನು? ಸರ್ವವೂ ಅಲ್ಲಾಡಿಹೋಗುತ್ತಿರುವಾಗ ನೀವು ಮಾತ್ರ ನಿಶ್ಚಲರಾಗಿ ಹೇಗೆ ಕೂತಿದ್ದೀರಿ? ಇದಕ್ಕೆ ಏನೂ ಪ್ರತಿಕ್ರಿಯೆ ಮಾಡುವುದಿಲ್ಲವೇ?” ಎಂದು ಅವನ ಪಾದಗಳನ್ನು ಹಿಡಿದಳು.
ಶಂಕರನು ಆಕೆಯನ್ನು ನೋಡಿ, “ಗಿರಿಜಾ, ನನ್ನ ಭಕ್ತ ರಾವಣನ ಕ್ರೀಡೆಯಿದು. ಚಿಂತಿಸಬೇಕಾದ ಅವಶ್ಯಕತೆಯಿಲ್ಲ.” ಎಂದು ಹೇಳಲು, ಪಾರ್ವತಿ, “ಹೇ ಪ್ರಭು, ಸುರಗಣಗಳನ್ನು ರಕ್ಷಿಸಿ.” ಎಂದು ಮೊರೆಯಿಟ್ಟಳು. ಶಂಕರನು, ತನ್ನ ಎಡಕೈಯಿಂದ, ರಾವಣನೆತ್ತುತ್ತಿದ್ದ ಕೈಲಾಸವನ್ನು ಒತ್ತಿಹಿಡಿದನು. ಕೈಲಾಸದ ಕೆಳಗಿದ್ದ ರಾವಣನು ಆರ್ತನಾಗಿ, “ಶರಣಾಗತ ರಕ್ಷಕ, ಪಿನಾಕಪಾಣಿ, ಶರಣು ಬಂದಿದ್ದೇನೆ. ಶರಣಾಗತನಾದವನ ಸಾವು ನಿನಗೆ ಸಮ್ಮತವೇ?” ಎಂದು ಸ್ತುತಿಪೂರ್ವಕವಾಗಿ ಬೇಡಿಕೊಳ್ಳಲು, ಭಕ್ತವತ್ಸಲನಾದ ಶಂಕರನು, ಅಧೋಗತನಾಗಿದ್ದ ಆ ರಾವಣನನ್ನು ದಯಾಹೃದಯನಾಗಿ ಬಿಡುಗಡೆ ಮಾಡಿದನು. ಹಾಗೆ ಬಿಡುಗಡೆ ಹೊಂದಿದ ರಾವಣ, ಸುಸ್ವರದಿಂದ, ರಾಗಯುಕ್ತವಾಗಿ, ಶಂಕರನನ್ನು ಕುರಿತು ಗಾನಮಾಡಿದನು. ಅವನ ಭಕ್ತಿಗಾನಕ್ಕೆ ಪ್ರಸನ್ನನಾದ ಶಿವನು, ತನ್ನ ನಿಜರೂಪದಿಂದ ಆ ರಾಕ್ಷಸನಿಗೆ ಪ್ರತ್ಯಕ್ಷನಾಗಿ, “ನಿನ್ನ ಗಾನಕ್ಕೆ ನಾನು ಪ್ರಸನ್ನನಾಗಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳಿಕೊ. ಕೊಡುತ್ತೇನೆ.” ಎಂದನು. ಅದಕ್ಕೆ ರಾವಣನು, “ಸ್ವಾಮಿ, ಲಕ್ಷ್ಮಿ ನನ್ನ ಮನೆಯಲ್ಲಿ ದಾಸಿಯಾಗಿರುವಾಗ ನಾನು ನಿನ್ನನ್ನು ಪ್ರಾರ್ಥಿಸಿಕೊಳ್ಳುವುದಾದರೂ ಏನಿದೆ? ಅಷ್ಟಸಿದ್ಧಿಗಳು ನನ್ನ ಅಪ್ಪಣೆಗಾಗಿ ಕಾಯುತ್ತಾ ನಿಂತಿದ್ದಾರೆ. ನವ ನಿಧಿಗಳು ನನ್ನ ಮನೆಯಲ್ಲಿ ಬಿದ್ದಿವೆ. ಹೇ ಸದಾಶಿವ, ಚತುರಾನನು ನನ್ನ ವಶವರ್ತಿಯಾಗಿದ್ದಾನೆ. ಮೂವ್ವತ್ತು ಕೋಟಿ ಬೃಂದಾರಕರೂ ನನ್ನ ಸೇವಕರೇ ಅಲ್ಲವೆ? ಆಶ್ರಯವನ್ನೇ ನಾಶಮಾಡುವ ವಹ್ನಿ ನನ್ನಲ್ಲಿ ವಸ್ತ್ರಕ್ಷಾಳನ ಮಾಡಲು ನಿಯುಕ್ತನಾಗಿದ್ದಾನೆ. ಯಮರಾಜನೂ ನನ್ನ ಮಾತಿನಂತೆಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ. ನನ್ನ ಸೋದರ ಕುಂಭಕರ್ಣ. ನನ್ನ ಕುಮಾರ ಇಂದ್ರನನ್ನೇ ಗೆದ್ದವನು. ನನ್ನ ನಿವಾಸ ಸುರರಿಗೆ ದುರ್ಗಮವಾದ ಅಂಬುಧಿಯಲ್ಲಿದೆ. ಕಾಮಧೇನು ನನ್ನ ಮನೆಯಲ್ಲಿ ನೆಲೆಗೊಂಡಿದೆ. ಸಹಸ್ರ ಕೋಟಿ ವರ್ಷಗಳ ಆಯುಸ್ಸುಳ್ಳ ನನ್ನಂತಹವನು ಇನ್ನಾರಿದ್ದಾರೆ? ಈಶ್ವರ ನಿನಗೆ ಇದೆಲ್ಲವೂ ತಿಳಿದೇ ಇದೆ. ಕೊಡುವುದಾದರೆ ನಿನ್ನ ಕೈಲಾಸವನ್ನು ಕೊಡು. ನನ್ನ ತಾಯಿ ನಿತ್ಯವೂ ನಿನ್ನನ್ನು ಪೂಜಿಸುವ ವ್ರತವನ್ನು ಮಾಡುತ್ತಿದ್ದಾಳೆ. ಹೇ, ದಾತಾ, ನನ್ನ ಮನೋರಥವನ್ನು ನೆರವೇರಿಸು.” ಎಂದನು.
ಅದಕ್ಕೆ ಶಿವನು, “ಅಯ್ಯಾ, ಕೈಲಾಸದಿಂದ ನಿನಗೆ ಅಗಬೇಕಾದ್ದೇನು? ದುರ್ಲಭವಾದ ನನ್ನ ಆತ್ಮಲಿಂಗವನ್ನೇ ಕೊಡುತ್ತೇನೆ. ನನ್ನ ಪ್ರಾಣಲಿಂಗಾರ್ಚನೆಯಿಂದ ನಿನ್ನ ಯಾವುದೇ ಮನೋವಾಂಛನೆಗಳೂ ತಕ್ಷಣವೇ ಪೂರಯಿಸಲ್ಪಡುತ್ತವೆ. ರುದ್ರಾಭಿಷೇಕಪೂರ್ವಕವಾಗಿ ತ್ರಿಸಂಧ್ಯೆಗಳಲ್ಲೂ ನನ್ನ ಪೂಜೆಮಾಡಬೇಕು. ಷಡಕ್ಷರ ಮಂತ್ರದಿಂದ ಅಷ್ಟೋತ್ತರ ಜಪ ಮಾಡಬೇಕು. ಹೀಗೆ ಮೂರು ವರ್ಷಗಳು ಪೂಜೆಮಾಡಿದರೆ ಸರ್ವಕಾಮಗಳೂ ನೆರವೇರಿ, ನನ್ನ ಸ್ವರೂಪವನ್ನೇ ಪಡೆಯುತ್ತೀಯೆ. ಈ ಪ್ರಾಣಲಿಂಗಸನ್ನಿಧಿಯಲ್ಲಿರುವವನಿಗೆ ಮೃತ್ಯುಭಯವಿರುವುದಿಲ್ಲ. ಆತ್ಮಲಿಂಗ ದರ್ಶನದಿಂದಲೇ ಸರ್ವ ದೋಷಗಳೂ ನಿವಾರಣೆಯಾಗುವುವು. ಇದನ್ನು ತೆಗೆದುಕೋ. ಆದರೆ ಲಂಕೆಯನ್ನು ಸೇರುವವರೆಗೂ ಇದನ್ನು ಭೂಮಿಯಮೇಲೆ ಇಡಬಾರದು. ಮೂರು ವರ್ಷಗಳು ನಾನು ಹೇಳಿದ ರೀತಿಯಲ್ಲಿ ತಪ್ಪದೇ ಪೂಜಿಸುವುದರಿಂದ ನೀನೇ ಈಶ್ವರನಾಗುತ್ತೀಯೆ. ನಿನ್ನ ಪುರವೇ ಕೈಲಾಸವಾಗುತ್ತದೆ.” ಎಂದು ಹೇಳಿ, ಅ ಪರಮಶಿವನು ತನ್ನ ಆತ್ಮಲಿಂಗವನ್ನು ಕೊಟ್ಟು ಅನುಗ್ರಹಿಸಿದನು. ರಾವಣನು ಆ ಲಿಂಗವನ್ನು ಪಡೆದು, ಶಂಕರನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಲಂಕಾಗಮನೋದ್ಯುಕ್ತನಾದನು.
ಈ ಸಂಗತಿಯನ್ನೆಲ್ಲಾ ತಿಳಿದ ನಾರದ ಮಹರ್ಷಿ ಇದೆಲ್ಲವೂ ಅಸಮಂಜಸವೆಂದರಿತು, ತಕ್ಷಣವೇ ದೇವೇಂದ್ರನ ಬಳಿಗೆ ಹೋಗಿ, ದೇವೇಂದ್ರನನ್ನು ಕಂಡು, “ದೇವರಾಜ, ಇದೇನು ಸುಮ್ಮನೇ ಕುಳಿತಿದ್ದೀಯೆ? ನಿನ್ನ ಅಮರತ್ವ ಸಂಪದಗಳನ್ನೆಲ್ಲಾ ರಾವಣನು ಅಪಹರಿಸಿಕೊಂಡು ಹೋದನು. ಪರಮೇಶ್ವರನ ಪ್ರಾಣಲಿಂಗವನ್ನು ಪಡೆದು, ಲಂಕೇಶ್ವರನು ಚಿರಾಯುವಾಗುವುದೇ ಅಲ್ಲದೆ, ಪರಮಶಿವನಿಗೆ ಸಮಾನನಾಗುತ್ತಾನೆ. ಮೂರುವರ್ಷಗಳ ಆತ್ಮಲಿಂಗಪೂಜೆಯಿಂದ ನನ್ನ ಸಮಾನನೇ ಆಗಬಲ್ಲೆ ಎಂದು ಶಂಕರನು ರಾವಣನನ್ನು ಅನುಗ್ರಹಿಸಿದನು. ಅಷ್ಟೇಅಲ್ಲ. ಲಂಕೆಯೇ ಕೈಲಾಸವಾಗುತ್ತದೆ ಎಂದೂ ಹೇಳಿದ್ದಾನೆ. ರಾವಣನಿಗೆ ಮೃತ್ಯುಭಯವಿರುವುದಿಲ್ಲವಂತೆ! ಹೀಗೆ ಶಂಭುವರಲಬ್ಧನಾಗಿ ರಾವಣನು ಲಂಕೆಗೆ ಹೊರಟಿದ್ದಾನೆ. ಹೀಗಾದರೆ ಲಂಕೆಯಲ್ಲಿ ನೀವೆಲ್ಲರೂ ರಾವಣನ ಸೇವೆಯಲ್ಲಿ ಸದಾ ನಿರತರಾಗಿರಬೇಕಾದದ್ದೇ! ರಂಭೆ ಊರ್ವಶಿಯೇ ಮುಂತಾದ ಅಪ್ಸರಸೆಯರೂ ಅವನ ಸೇವೆಮಾಡಿಕೊಂಡಿರಬೇಕಾದದ್ದೇ!” ಎಂದು ಹೇಳಿದನು.
ನಾರದನ ಮಾತುಗಳನು ಕೇಳಿ ಇಂದ್ರನೊಡನೆ ದೇವತೆಗಳೂ ನಡುಗಿಹೋದರು. ಇಂದ್ರನು ನಾರದನಿಗೆ ನಮಸ್ಕರಿಸಿ “ಈಗ ಏನು ಮಾಡಬೇಕು?” ಎಂದು ಪ್ರಶ್ನಿಸಿದನು. ಅದಕ್ಕೆ ನಾರದ, “ಬ್ರಹ್ಮನಿಗೆ ಶರಣಾಗು. ಆತನು ಏನಾದರೂ ಉಪಾಯವನ್ನು ಸೂಚಿಸುತ್ತಾನೆ. ಆತನೇ ಸೃಷ್ಟಿಕರ್ತನಲ್ಲವೇ?” ಎಂದನು. ನಾರದನ ಸಲಹೆಯಂತೆ ನಾರದನೊಡನೆ, ದೇವತೆಗಳನ್ನು ಹಿಂದಿಟ್ಟುಕೊಂಡು, ತಕ್ಷಣವೇ ಬ್ರಹ್ಮನ ಬಳಿಗೆ ಹೋಗಿ, ನಾರದನು ಹೇಳಿದ ವಿಷಯವನ್ನೆಲ್ಲಾ, ಬಿನ್ನವಿಸಿಕೊಂಡನು. ಬ್ರಹ್ಮ, “ತಕ್ಷಣವೇ ನೀನು ವೈಕುಂಠಕ್ಕೆ ಹೋಗಿ ದೈತ್ಯಾರಿಯನ್ನು ಕಾಣು. ಅವನು ಏನಾದರೂ ಉಪಾಯವನ್ನು ಮಾಡಿಯೇ ಮಾಡುತ್ತಾನೆ. ತಡಮಾಡಬೇಡ.” ಎಂದು ಹೇಳಿ, ತಾನೇ ದೇವೇಂದ್ರನ ಜೊತೆಯಲ್ಲಿ ಹೊರಟು, ಮಹಾವಿಷ್ಣುವನ್ನು ಸೇರಿ, ತಮಗೆ ಬಂದಿರುವ ಆಪತ್ತನ್ನು ವಿವರಿಸಿ, “ಹೇನಾರಾಯಣ, ತಕ್ಷಣವೇ ಇದಕ್ಕೇನಾದರೂ ಪ್ರತೀಕಾರ ಮಾಡಬೇಕು. ಇಲ್ಲದಿದ್ದರೆ ಆ ಮಹಾ ಸಂಕಟ ನಮ್ಮೆಲ್ಲರಿಗೂ ತಟ್ಟುತ್ತದೆ. ಮುವ್ವತ್ತುಮೂರು ಕೋಟಿ ದೇವತೆಗಳೂ ರಾವಣನ ಬಂಧನದಲ್ಲಿರಬೇಕಾಗುತ್ತದೆ. ಅವರನ್ನು ಬಿಡಿಸಲು ನೀನು ಭೂಮಿಯಲ್ಲಿ ಮತ್ತೆ ಅವತರಿಸಬೇಕಾಗುತ್ತದೆ. ಆ ದುಷ್ಟ, ಈಶ್ವರನ ಪ್ರಾಣಲಿಂಗವನ್ನು ತೆಗೆದುಕೊಂಡುಹೋಗಿದ್ದಾನೆ. ಪ್ರಾಣಲಿಂಗಾರ್ಚನೆಯಿಂದ ಅವನೇ ಈಶ್ವರನಾಗುತ್ತಾನೆ! ಹೇ ಶ್ರೀಹರಿ, ತಕ್ಷಣವೆ ಇದಕ್ಕೇನಾದರೂ ಪ್ರತಿಚರ್ಯೆ ನಡೆಸದಿದ್ದಲ್ಲಿ ಆ ರಾಕ್ಷಸನ ಸಂಹಾರ ದುಸ್ತರವಾಗುತ್ತದೆ.” ಎಂದನು.
ಬ್ರಹ್ಮನ ಮಾತುಗಳನ್ನು ಕೇಳಿ ವಿಷ್ಣುವು ಕ್ರೋಧಗೊಂಡು, ತಕ್ಷಣವೇ ಕೈಲಾಸಕ್ಕೆ ಹೋಗಿ, ಶಂಕರನನ್ನು ಕಂಡು, “ಆ ದುರುಳನಿಗೆ ನಿನ್ನ ಪ್ರಾಣಲಿಂಗವನ್ನೇಕೆ ಕೊಟ್ಟೆ? ಅವನು ಬಲವಂತನಾಗಿ ದೇವತೆಗಳನ್ನೆಲ್ಲ ಬಂಧನದಲ್ಲಿಟ್ಟು ತನ್ನ ಸೇವಕರನ್ನಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಂದ ದೇವತೆಗಳಿಗೆ ಮುಕ್ತಿಯೆಲ್ಲಿಯದು? ಹಾವಿಗೆ ಹಾಲೆರೆದಂತೆ ಆ ದುರಾಚಾರಿಗೆ ನೀನು ವರವನ್ನು ಕೊಟ್ಟೆ. ಅವನು ಅಸುರತ್ವದಿಂದ ಅಮರತ್ವ ಪಡೆದು ದೇವತೆಗಳ ಸ್ವರ್ಗಭಾಗ್ಯವನ್ನು ಕಸಿದುಕೊಳ್ಳುತ್ತಾನೆ.” ಎಂದನು. ಅದಕ್ಕೆ ಶಂಕರನು, “ಅಯ್ಯಾ, ವಿಷ್ಣು, ಅವನ ಭಕ್ತಿಗೆ ಮೋಹಗೊಂಡು ಸಂತುಷ್ಟನಾಗಿ ಅವನಿಗೆ ಪ್ರಾಣಲಿಂಗವನ್ನು ಕೊಟ್ಟೆ. ಅವನು ತನ್ನ ಶಿರಸ್ಸನ್ನು ಛೇದಿಸಿ, ವೀಣೆಯನ್ನು ಮಾಡಿ, ನನ್ನ ಸ್ತುತಿ ಮಾಡಿದನು. ಆ ಸುಸ್ವರ ಸ್ತೋತ್ರಗಾನವು ಬಹುಹಿತವಾಗಿ, ಸಾಮಗಾನದಂತೆ ಕಿವಿಗೆ ಮಂಜುಲವಾಗಿತ್ತು. ಅವನ ಗಾನದಿಂದ ಮೋಹಾವಿಷ್ಟನಾದ ನಾನು ಅವನು ಪಾರ್ವತಿಯನ್ನು ಕೇಳಿದ್ದರೆ ಅವಳನ್ನೇ ಕೊಟ್ಟುಬಿಡುತ್ತಿದ್ದೆ.” ಎಂದನು. “ಹೇ ಉಮಾಕಾಂತ, ನೀನು ಹೀಗೆ ಇಂತಹ ದುರ್ಲಭವಾದ ವರಗಳನ್ನು ಯೋಚನೆಯಿಲ್ಲದೆ ಕೊಟ್ಟುಬಿಡುತ್ತೀಯೆ. ವರವನ್ನು ಪಡೆದವರು ಅದರಿಂದ ಮತ್ತರಾಗಿ, ಇನ್ನೂ ದುಷ್ಟರಾಗಿ, ದುರ್ದರ್ಷರಾಗಿ ದೇವ ಬ್ರಾಹ್ಮಣರನ್ನು ಪೀಡಿಸುತ್ತಾರೆ. ಅವರನ್ನು ಸಂಹರಿಸಲು ನಾನು ಮತ್ತೆ ಮತ್ತೆ ಅವತರಿಸಬೇಕಾಗುತ್ತದೆ. ನೀನು ಅ ರಾವಣನಿಗೆ ಪ್ರಾಣಲಿಂಗವನ್ನು ಕೊಟ್ಟು ಎಷ್ಟು ಹೊತ್ತಾಯಿತು? ಅವನು ಈ ವೇಳೆಗೆ ಲಂಕೆಯನ್ನು ಸೇರಿರುವ ಸಾಧ್ಯತೆಯಿದೆಯೇ?” ಎಂದು ಕೇಳಿದನು. ಅದಕ್ಕೆ ಶಂಕರನು, “ಪಂಚನಾಡಿಮಿಡಿತ ಸಮಯವಾಗಿದೆ.” ಎಂದುತ್ತರಕೊಟ್ಟನು.
ಶಿವನ ಮಾತನ್ನು ಕೇಳಿದ ವಿಷ್ಣುವು, ತಕ್ಷಣವೇ ಸೂರ್ಯನಿಗೆ ಭೂಲೋಕದಿಂದ ಮರೆಯಾಗುವಂತೆ ಕಟ್ಟುಮಾಡಿ, ನಾರದನನ್ನು ಕರೆದು, “ದೇವರ್ಷಿ, ಇನ್ನೂ ಅವನು ತನ್ನ ಮನೆಗೆ ಸೇರಿರುವುದಿಲ್ಲವೆಂದುಕೊಂಡಿದ್ದೇನೆ. ತಕ್ಷಣವೇ ನೀನು ಮನೋವೇಗದಲ್ಲಿ ಹೊರಟು ರಾವಣನು ಪ್ರಾಣಲಿಂಗವನ್ನು ಲಂಕೆಗೆ ಸೇರಿಸದಂತೆ ಮಾರ್ಗದಲ್ಲಿ ಅವನ ಗಮನಕ್ಕೆ ತಡೆಯನ್ನುಂಟುಮಾಡು. ಸೂರ್ಯನು ಅದೃಶ್ಯನಾಗಿರುವುದರಿಂದ ರಾವಣನು ತನ್ನ ಸಂಧ್ಯಾವಂದನೆಯನ್ನು ಪ್ರಾರಂಭಿಸಬೇಕು. ಆ ಸಮಯದಲ್ಲಿ ಅವನಿಗೆ ವಿಘ್ನವುಂಟಾಗುವಂತೆ ಮಾಡಬೇಕು.” ಎಂದನು. ಅದನ್ನು ಕೇಳಿದ ನಾರದ, ವಿಷ್ಣುವಿನ ಆಜ್ಞೆಯಂತೆ, ಮನೋವೇಗದಲ್ಲಿ ಹೊರಟು ಲಂಕಾಪುರಿಯ ಮಾರ್ಗದಲ್ಲಿ ಹೊರಟಿದ್ದ ರಾವಣನನ್ನು ಸೇರಿಕೊಂಡನು.
ವಿಷ್ಣುವು ವಿಘ್ನನಾಯಕನನ್ನು ಸ್ಮರಿಸಲು, ಗಣಪತಿ ಅಲ್ಲಿಗೆ ಬಂದನು. ಅವನನ್ನು ಕಂಡು ವಿಷ್ಣುವು, “ಗಣಪತಿ, ರಾವಣನು ನಿನ್ನನ್ನು ಉಪೇಕ್ಷಿಸಿದ್ದಾನೆ. ನಿನಗೆ ಸುರರೂ ನಮಸ್ಕರಿಸುತ್ತಾರೆ. ಅವರ ಮನೋರಥಗಳು ನೆರವೇರುತ್ತವೆ. ಆದರೆ ನಿನಗೆ ನಿವೇದನೆಮಾಡದೆಯೇ ರಾವಣನು ಶಿವನನ್ನು ಮೋಹಗೊಳ್ಳುವಂತೆ ಮಾಡಿ ಅವನ ಪ್ರಾಣಲಿಂಗವನ್ನು ಅಪಹರಿಸಿದ್ದಾನೆ. ಅದರಿಂದ ನೀನು ರಾವಣನನ್ನು ವಂಚಿಸಬೇಕು. ಬಾಲವೇಷಧಾರಿಯಾಗಿ ಹೋಗಿ ಅವನನ್ನು ಯಾವುದಾದರೊಂದು ರೀತಿಯಲ್ಲಿ ವಂಚಿಸು. ಆ ರಾವಣನು ಸೂರ್ಯಾಸ್ತಸಮಯದಲ್ಲಿ ತಪ್ಪದೇ ಸಂಧ್ಯೆಯನ್ನು ಆಚರಿಸುತ್ತಾನೆ. ನಾರದಮುನಿ ಈಗಾಗಲೇ ಅವನನ್ನು ಕಾಣಲು ಹೊರಟಿದ್ದಾನೆ. ಶಿವಾಜ್ಞೆಯಂತೆ ರಾವಣನು ಪ್ರಾಣಲಿಂಗವನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಇಡುವುದಿಲ್ಲ. ನೀನು ಬಾಲಕನಾಗಿ ಅಲ್ಲಿಗೆ ಹೋಗಿ, ಅವನ ಶಿಷ್ಯನಂತೆ ನಟಿಸಿ, ಅವನ ವಿಶ್ವಾಸ ಗಳಿಸಿ, ಸಂಧ್ಯಾಸಮಯದಲ್ಲಿ ನಿನ್ನಲ್ಲಿ ವಿಶ್ವಾಸವಿಟ್ಟು ಅವನು ಪ್ರಾಣಲಿಂಗವನ್ನು ನಿನ್ನ ಕೈಲಿಡುವಂತೆ ಮಾಡು. ಅವನು ಲಿಂಗವನ್ನು ನಿನ್ನ ಕೈಲಿಟ್ಟ ತಕ್ಷಣವೇ ಅದನ್ನು ಭೂಮಿಯ ಮೇಲೆ ಇಟ್ಟುಬಿಡು. ಅದು ಅಲ್ಲಿಯೇ ಶಾಶ್ವತವಾಗಿ ನೆಲೆಯಾಗುವುದು. ಇದೆಲ್ಲವನ್ನೂ ಕಪಟದಿಂದಲೇ ಸಾಧಿಸಬೇಕು. ದುಷ್ಟರನ್ನು, ಕಪಟಿಗಳನ್ನು ಕಪಟದಿಂದಲೇ ಜಯಿಸಬೇಕಲ್ಲವೇ?” ಎಂದು ಆದೇಶ ಕೊಟ್ಟನು. ವಿಘ್ನೇಶ್ವರನು, “ನನಗೆ ಮಾರ್ಗದಲ್ಲಿ ತಿನ್ನಲು ಏನಾದರೂ ಬೇಕು.” ಏಂದು ಕೇಳಲು, ವಿಷ್ಣುವು ಐದು ಕಡುಬು, ಹಾಲು, ತೆಂಗಿನಕಾಯಿ, ಕಬ್ಬಿನ ಜಲ್ಲೆಗಳು, ದಾಳಿಂಬರೆ ಹಣ್ಣು, ತುಪ್ಪದ ಲಾಡು, ಬೇಯಿಸಿದ ಕಳ್ಳೆಕಾಯಿ, ಸಕ್ಕರೆ ಮುಂತಾದವುಗಳನ್ನು ಭಕ್ಷ್ಯಗಳಾಗಿ ವಿನಾಯಕನಿಗೆ ಕೊಟ್ಟು, ತಕ್ಷಣವೇ ಹೊರಡುವಂತೆ ಹೇಳಲು, ಅವನು ವಟುವೇಷಧಾರಿಯಾಗಿ ಮಾರ್ಗದಲ್ಲಿ ತನಗೆ ಕೊಟ್ಟಿದ್ದ ಭಕ್ಷ್ಯಗಳನ್ನು ತಿನ್ನುತ್ತಾ ಹೊರಟನು.
ಅಷ್ಟರಲ್ಲಿ ನಾರದನು ಮನೋವೇಗದಲ್ಲಿ ಹೊರಟು ರಾವಣನಿಗಿಂತ ಮುಂದೆ ಹೋಗಿ, ಹಿಂತಿರುಗಿ ಬರುತ್ತಾ ಅವನಿಗೆ ಎದುರಾದನು. ದಶಮುಖನು ನಾರದನನ್ನು ಕಂಡು, “ಬ್ರಹ್ಮರ್ಷಿ, ಕೈಲಾಸಪರ್ವತಕ್ಕೆ ಹೋಗಿದ್ದೆ. ಪರಮಶಿವನು ನನ್ನಲ್ಲಿ ಪ್ರಸನ್ನನಾಗಿ ನನಗೆ ತನ್ನ ಆತ್ಮಲಿಂಗವನ್ನೇ ಪ್ರಸಾದಿಸಿದನು. ಅದು ನನಗೆ ಕಾಮಪ್ರದವು. ಅದರ ಜೊತೆಗೆ ನನಗೆ ಇನ್ನೂ ವರಗಳನ್ನು ಕೊಟ್ಟನು.” ಎಂದು ಹೇಳಿದನು. ಕಲಹಪ್ರಿಯನಾದ ನಾರದ, “ಲಂಕೇಶ್ವರ, ನಿನಗೆ ದೈವದೊಲುಮೆ ಆಯಿತು. ನೀನು ಸಂಪಾದಿಸಿದ ಆತ್ಮಲಿಂಗವು ಮೃತ್ಯುಂಜಯವಾದದ್ದು. ಅದನ್ನು ಇದಕ್ಕೆ ಮುಂಚೆ ನಾನು ನೋಡಿದ್ದೆ. ಅದನ್ನು ತೋರಿಸು. ಅದನ್ನು ಪರೀಕ್ಷೆಮಾಡಿ ಅದರ ಲಕ್ಷಣಗಳನ್ನು ನಿನಗೆ ವಿವರಿಸುತ್ತೇನೆ.” ಎಂದನು. ನಾರದನ ಮಾತುಗಳಿಂದ ಸಂದೇಹಗೊಂಡ ರಾವಣನು, ಅದಕ್ಕೆ ಮುಚ್ಚಿದ್ದ ಬಟ್ಟೆಯನ್ನು ಪಕ್ಕಕ್ಕೆ ಸರಿಸಿ, ದೂರದಿಂದಲೇ ಅದನ್ನು ನಾರದನಿಗೆ ತೋರಿಸಿದನು. ರಾವಣನ ಸಂದೇಹವನ್ನು ಅರಿತ ನಾರದ, ಮೆಲ್ಲಗೆ ರಾವಣನನ್ನು ಕುಳಿತುಕೊಳ್ಳುವಂತೆ ಮಾಡಿ, “ಲಿಂಗಮಹಿಮೆಯನ್ನು ಹೇಳುತ್ತೇನೆ. ಕಿವಿಗೊಟ್ಟು ಕೇಳು.” ಎಂದು ಹೀಗೆ ಹೇಳಿದನು.
ಪ್ರಾಣಲಿಂಗ ಮಹಿಮೆ
ಒಂದಾನೊಂದುಸಲ ಕಾಲಾಗ್ನಿ ಸದೃಶವಾದ ಮೃಗವೊಂದು ಮಹಿಷಮುಖವುಳ್ಳ ಮೃಗಗಳನ್ನೆಲ್ಲಾ ಭಕ್ಷಿಸುತ್ತಾ ವನದಲ್ಲಿ ಓಡಾಡುತ್ತಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರರು ಆ ವನದಲ್ಲಿ, ಅದೇಸಮಯದಲ್ಲಿ ಬೇಟೆಗೆಂದು ಬಂದಿದ್ದರು. ತ್ರಿಮೂರ್ತಿಗಳು ಆ ಮೃಗವನ್ನು ಬೇಟೆಯಾಡಿ ವಧಿಸಿ, ಅದರ ಮಾಂಸವನ್ನು ಭಕ್ಷಿಸಿದರು. ಆ ಮೃಗಕ್ಕೆ ಮೂರು ಕೊಂಬುಗಳಿದ್ದವು. ಆ ಕೊಂಬುಗಳ ಮೂಲದಲ್ಲಿ ಮೂರು ಲಿಂಗಗಳಿದ್ದವು. ಆ ಲಿಂಗಗಳು ಪ್ರಾಣಲಿಂಗಗಳು. ಒಬ್ಬೊಬ್ಬರು ಒಂದೊಂದರ ಹಾಗೆ, ಆ ಮೂವರೂ, ಆ ಲಿಂಗಗಳನ್ನು ಹಂಚಿಕೊಂಡರು. ರಾವಣ, ಆ ಲಿಂಗಗಳ ಮಹಿಮೆಯನ್ನು ಕೇಳು. ಮೂರು ವರ್ಷಗಳು ಏಕಾಗ್ರಚಿತ್ತನಾಗಿ ಆ ಲಿಂಗವನ್ನು ಪೂಜಿಸಿದವನಿಗೆ ಶಿವನು ವರದಾತನಾಗುತ್ತಾನೆ. ಆ ಲಿಂಗವಿರುವೆಡೆಯಲ್ಲೇ ಕೈಲಾಸವಿರುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ತ್ರಿಮೂರ್ತಿಗಳು ಆ ಲಿಂಗ ಧಾರಣದಿಂದಲೇ ಮಹಿಮಾನ್ವಿತರಾಗಿದ್ದಾರೆ. ಅಷ್ಟೇಅಲ್ಲ. ಅದರ ಮಹಿಮೆ ಇನ್ನೂ ಬಹಳವಿದೆ. ಸಾವಧಾನಚಿತ್ತನಾಗಿ ಕೇಳು.” ಎಂದು ನಾರದ ಹೇಳುತ್ತಿರುವಾಗ, ರಾವಣನು, “ನನಗೆ ಈಗ ಅದನ್ನು ಕೇಳಲು ವೇಳೆಯಿಲ್ಲ. ತ್ವರೆಯಾಗಿ ನಾನು ಲಂಕೆಯನ್ನು ಸೇರಿಕೊಳ್ಳಬೇಕು.” ಎಂದನು. ಅದಕ್ಕೆ ನಾರದ, “ಅಯ್ಯಾ, ಬ್ರಾಹ್ಮಣರಿಗೆ ಸಂಧ್ಯಾವಂದನೆಯ ಕಾಲ ಸಮೀಪಿಸಿದೆ. ನೀನು ವೇದಪಾರಂಗತನು. ಸತ್ಕರ್ಮಗಳ ವೇಳಾತಿಕ್ರಮವನ್ನು ಹೇಗೆ ಮಾಡಬಲ್ಲೆ? ಮಾರ್ಗ ಮಧ್ಯದಲ್ಲಿ ಸಂಧ್ಯಾಕಾಲ ಬಂದರೆ ಸಂಧ್ಯಾವಂದನೆ ಆಚರಿಸದಿದ್ದರೆ ಕರ್ತವ್ಯಲೋಪವಾಗುತ್ತದೆಯಲ್ಲವೇ? ನಾನು ಸಂಧ್ಯೆಯನ್ನು ಆಚರಿಸಲೆಂದೇ ಇಲ್ಲಿ ನಿಂತೆ.” ಎಂದು ಹೇಳಿ, ನಾರದನು ಅವನನ್ನು ನದೀ ತೀರಕ್ಕೆ ಕರೆದುಕೊಂಡು ಹೋದನು.
ಬ್ರಹ್ಮಚಾರಿಯ ವೇಷ ಧರಿಸಿದ್ದ ಗಣೇಶ, ಅಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದನು. “ಸಂಧ್ಯೆಯನ್ನು ಆಚರಿಸದಿದ್ದರೆ ವ್ರತಭಂಗವಾಗುವುದು. ಆದರೆ ಸಂಧ್ಯೆ ಆಚರಿಸುವ ಕಾಲದಲ್ಲಿ ಲಿಂಗವನ್ನು ಕೈಲಿ ಹಿಡಿದಿರಲು ಸಾಧ್ಯವಿಲ್ಲ. ಈ ಲಿಂಗವನ್ನು ಭೂಮಿಯಮೇಲೆ ಇಡುವಹಾಗಿಲ್ಲ. ಹಾಗಾದರೆ ಸಂಧ್ಯಾಚರಣೆಯ ಕಾಲದಲ್ಲಿ ಏನು ಮಾಡಬೇಕು?” ಎಂಬ ತೊಳಲಾಟದಲ್ಲಿ ಸಿಕ್ಕಿಬಿದ್ದಿದ್ದ ರಾವಣ, ಸಮೀಪದಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದ, ಕಪಟ ಬ್ರಹ್ಮಚಾರಿಯಾದ ಗಣಪತಿಯನ್ನು ಕಂಡನು. ಅವನನ್ನು ಕಂಡ ರಾವಣ, “ಈ ಬಾಲಬ್ರಹ್ಮಚಾರಿ ಸುಂದರನು. ಅವನನ್ನು ಕೇಳಿ ನೋಡೋಣ. ಅವನು ವಟುವಲ್ಲವೇ? ವಿಶ್ವಾಸಘಾತುಕನಾಗಿರಲಾರ. ಅವನ ಕೈಯಲ್ಲಿ ಈ ಲಿಂಗವನ್ನಿಟ್ಟು ಸಂಧ್ಯೆಯನ್ನು ಆಚರಿಸುತ್ತೇನೆ.” ಎಂದು ಯೋಚಿಸಿ, ಆ ವಟುವಿನ ಸಮೀಪಕ್ಕೆ ಹೋದನು.
ಆ ಕಪಟ ಬ್ರಹ್ಮಚಾರಿ, ರಾವಣನನ್ನು ಕಂಡು ಹೆದರಿದವನಂತೆ ನಟಿಸುತ್ತಾ, ಅಲ್ಲಿಂದ ಓಡಿಹೋಗಲು ಯತ್ನಿಸಿದನು. ರಾವಣ ಅವನಿಗೆ ಅಭಯ ಕೊಟ್ಟು, “ನೀನಾರು? ನಿನ್ನ ತಂದೆತಾಯಿಗಳು ಯಾರು? ನಿನ್ನ ವಂಶ ಯಾವುದು?” ಎಂದು ಪ್ರಶ್ನೆ ಮಾಡಿದನು. ಆ ಬ್ರಹ್ಮಚಾರಿ, “ನೀನೇಕೆ ಇವನ್ನೆಲ್ಲಾ ಕೇಳುತ್ತಿದ್ದೀಯೆ ಎಂಬುದನ್ನು ಮೊದಲು ಹೇಳು. ನನ್ನ ತಾಯಿತಂದೆಗಳು ಯಾರಾದರೆ ನಿನಗೇನು? ಅವರೇನು ನಿನಗೆ ಋಣಗ್ರಸ್ತರೇ?” ಎಂದು ಮರು ಪ್ರಶ್ನೆ ಮಾಡಿದನು. ರಾವಣನು, ನಗುತ್ತಾ, ಸ್ನೇಹದಿಂದ ಅವನ ಕೈಹಿಡಿದು, ” ಮಗು, ನಿನ್ನಲ್ಲಿ ಪ್ರೇಮದಿಂದ ಕೇಳುತ್ತಿದ್ದೇನೆ. ಹೇಳುವುದಿಲ್ಲವೇ?” ಎಂದು ಲಾಲಿಸಿ ಕೇಳಲು, ಆ ವಟುವು, “ನನ್ನ ತಂದೆ ಒಬ್ಬ ಮಹಾತ್ಮ. ರುದ್ರಾಕ್ಷ ಭೂಷಿತ, ಭಸ್ಮಲಿಪ್ತ ದೇಹದಿಂದ ಕೂಡಿದ ಜಟಾಧಾರಿ. ಅವನನ್ನು ಶಂಕರ ಎನ್ನುತ್ತಾರೆ. ಭಿಕ್ಷೆಗಾಗಿ ಅವನು ಹಗಲುರಾತ್ರಿ ಭೂಮಿಯಮೇಲೆ ಸಂಚರಿಸುತ್ತಿರುತ್ತಾನೆ. ನನ್ನ ತಾಯಿ ಉಮಾದೇವಿಯೆಂದು ಪ್ರಸಿದ್ಧಳಾದವಳು. ನಾನೊಬ್ಬ ಸಣ್ಣ ಬಾಲಕ. ನಿನ್ನನ್ನು ಕಂಡರೆ ನನಗೆ ಭಯವಾಗುತ್ತಿದೆ. ನನಗೆ ಧೈರ್ಯವಿಲ್ಲ. ನನ್ನ ಕೈಬಿಡು. ನಾನು ಹೋಗಬೇಕು.” ಎಂದು ನುಡಿದ ಗಣೇಶನ ಮಾತುಗಳನ್ನು ಕೇಳಿ ರಾವಣ, ಅವನೊಬ್ಬ ದರಿದ್ರ ಬ್ರಾಹ್ಮಣನ ಮಗ ಎಂದುಕೊಂಡು, “ನಿನ್ನ ತಂದೆ ದರಿದ್ರನಲ್ಲವೆ? ನಿನಗೇನು ಸುಖವಿದೆ? ನನ್ನ ಲಂಕಾಪುರಿ ಚಿನ್ನದಿಂದ ಮಾಡಲ್ಪಟ್ಟಿದೆ. ಅಲ್ಲಿ ನೀನು ದೇವತಾರ್ಚನೆ ಮಾಡಿಕೊಂಡಿರು. ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ. ನನ್ನೊಡನೆ ಬಂದು ಅಲ್ಲಿ ಸುಖವಾಗಿರಬಹುದು.” ಎಂದನು. ಅದಕ್ಕೆ ವಿಘ್ನೇಶ್ವರ, “ಅಯ್ಯಯ್ಯೋ! ನಾನು ಲಂಕೆಗೆ ಬರುವುದಿಲ್ಲ. ಅಲ್ಲಿ ಮನುಷ್ಯ ಭಕ್ಷಕರಾದ ರಾಕ್ಷಸರಿದ್ದಾರೆ. ಅವರು ನನ್ನನ್ನು ತಿಂದುಹಾಕುತ್ತಾರೆ. ನನ್ನ ಕೈಬಿಡು. ನನಗೆ ಹಸಿವೆಯಾಗುತ್ತಿದೆ. ನಾನು ಮನೆಗೆ ಹೋಗುತ್ತೇನೆ.” ಎಂದು ಅಳುಮುಖ ಮಾಡಿಕೊಂಡು ಹೇಳಿದನು. ಆದರೂ, ರಾವಣ ಅವನನ್ನು ಹೇಗೋ ಮಾಡಿ ಒಪ್ಪಿಸಿ, “ನಾನು ಸಂಧ್ಯೆಯಾಚರಿಸಿ ಬರುತ್ತೇನೆ. ಅಲ್ಲಿಯವರೆಗೂ ಈ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡಿರು.” ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಆ ವಟು, “ನಾನು ಸಣ್ಣವನು. ಈ ಭಾರವಾದ ಲಿಂಗವನ್ನು ನನಗೆ ಹೊರುವ ಶಕ್ತಿಯಿಲ್ಲ. ಈ ಲಿಂಗವನ್ನು ನಾನು ಹಿಡಿಯುವುದಿಲ್ಲ. ನನ್ನ ಕೈಬಿಡು. ನಾನು ಹೋಗುತ್ತೇನೆ.” ಎಂದು ಮತ್ತೆ ಮತ್ತೆ ಹೇಳಿದನು. ರಾವಣನು ಇನ್ನೊಮ್ಮೆ ಮತ್ತೊಮ್ಮೆ ಆ ಕಪಟವಟುವನ್ನು ಪ್ರಾರ್ಥಿಸಿಕೊಂಡು, ಅವನ ಕೈಲಿ ಆ ಪ್ರಾಣಲಿಂಗವನ್ನಿಟ್ಟು, ಸಂಧ್ಯೆಯಾಚರಿಸಲು ಹೊರಟನು. ಆಗ ಮತ್ತೆ ಆ ವಟುವು, ” ಅಯ್ಯಾ, ನನ್ನ ಕೈಲಿ ಇದನ್ನು ಹೊರಲು ಶಕ್ತಿಯಿರುವವರೆಗೂ ನಾನು ಇಟ್ಟುಕೊಂಡಿರುತ್ತೇನೆ. ನನ್ನ ಕೈಯಲ್ಲಿ ಇನ್ನು ಸಾಧ್ಯವಿಲ್ಲ ಎಂದಾದರೆ ನಿನ್ನನ್ನು ಮೂರು ಸಲ ಕರೆಯುತ್ತೇನೆ. ನೀನು ಅಷ್ಟರಲ್ಲಿ ಬರದಿದ್ದರೆ ಇದನ್ನು ನಾನು ಭೂಮಿಯ ಮೇಲೆ ಇಟ್ಟುಬಿಡುತ್ತೇನೆ.” ಎಂದು ಎಚ್ಚರಿಕೆ ಹೇಳಿ ಆ ಪ್ರಾಣಲಿಂಗವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಹಿಡಿದು ನಿಂತನು. ಅದೇ ಸಮಯಕ್ಕೆ ದೇವತೆಗಳೆಲ್ಲರೂ ಆಕಾಶದಲ್ಲಿ ಮುಂದಾಗುವುದನ್ನು ನೋಡಲು ಬಂದು ನಿಂತರು. ಆ ವಟುವೇಷಧಾರಿ ಗಣಪತಿಯು, ರಾವಣನು ಅರ್ಘ್ಯ ಕೊಡುತ್ತಿರುವ ಸಮಯವನ್ನು ಕಾದುಕೊಂಡಿದ್ದು, ಆ ಸಮಯಕ್ಕೆ ಸರಿಯಾಗಿ, “ಇನ್ನು ಈ ಲಿಂಗವನ್ನು ನನ್ನ ಕೈಯಲ್ಲಿ ಹಿಡಿದುಕೊಂಡಿರಲು ಸಾಧ್ಯವಿಲ್ಲ. ಬೇಗ ಬಾ.” ಎಂದು ರಾವಣನನ್ನು ಕರೆದನು. ರಾವಣನು ಕೈಸನ್ನೆಯಿಂದ ಅವನಿಗೆ “ಅರ್ಘ್ಯವನ್ನು ಮುಗಿಸಿ ಇನ್ನೊಂದು ಕ್ಷಣದಲ್ಲೇ ಬಂದು ಬಿಡುತ್ತೇನೆ. ಸ್ವಲ್ಪ ತಾಳು.” ಎಂದು ಸೂಚಿಸಿದನು. ಇನ್ನೊಂದು ಕ್ಷಣದಲ್ಲಿ ಗಣಪತಿಯು, ಅವನನ್ನು ಮೂರುಸಲ ಕರೆದು, “ಭಾರ ಸಹಿಸಲಾಗುತ್ತಿಲ್ಲ. ಬೇಗ ಬಾ.” ಎಂದು ಮತ್ತೆ ಕರೆದನು. ಮೂರುಸಲ ಹಾಗೆ ಕರೆದರೂ ರಾವಣ ಬರಲಿಲ್ಲವಾಗಿ, ಆಕಾಶದಲ್ಲಿ ದೇವತೆಗಳೆಲ್ಲರೂ ಸಾಕ್ಷಿಗಳಾಗಿ ನೋಡುತ್ತಿರುವಂತೆಯೇ, ವಿಘ್ನೇಶ್ವರ, ಮಹಾವಿಷ್ಣುವನ್ನು ಸ್ಮರಿಸಿಕೊಳ್ಳುತ್ತಾ, ಆ ಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟನು. ಅದನ್ನು ಕಂಡ ದೇವತೆಗಳೆಲ್ಲರೂ ಬಹಳ ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು. ಅರ್ಘ್ಯಪ್ರದಾನ ಮುಗಿಸಿ ದಶಮುಖನು ತ್ವರೆಯಾಗಿ ಅಲ್ಲಿಗೆ ಬಂದು, ಆ ಬಾಲಕನು ಪ್ರಾಣಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟಿರುವುದನ್ನು ಕಂಡು ಕ್ರುದ್ಧನಾಗಿ, ಆ ಮಾಯಾ ಬಾಲಕನನ್ನು ಕುರಿತು, “ಹೇ ವಿಶ್ವಾಸಘಾತುಕ, ಡಾಂಭಿಕ, ಕಪಟಿ, ವಂಚಕ, ಮೂರ್ಖ. ಬುದ್ಧಿಪೂರ್ವಕವಾಗಿಯೇ ನೀನು ಈ ಲಿಂಗವನ್ನು ಭೂಮಿಯಮೇಲೆ ಇಟ್ಟಿದ್ದೀಯೆ.” ಎಂದು ಬೈಯುತ್ತಾ, ಅವನನ್ನು ಹೊಡೆದನು. ಆ ವೇಷಧಾರಿ ಬಾಲಕ ಅಳುವವನಂತೆ ನಟಿಸುತ್ತಾ, “ನಾನು ನಿರಪರಾಧಿ. ಅಶಕ್ತ. ನನ್ನನ್ನು ಹೊಡೆದಿದ್ದೀಯೆ. ನಮ್ಮ ತಂದೆಗೆ ಹೇಳುತ್ತೇನೆ.” ಎನ್ನುತ್ತಾ ಅಲ್ಲಿಂದ ಹೊರಟು ಹೋದನು.
ರಾವಣನು ಭೂಮಿಯಮೇಲಿದ್ದ ಆ ಲಿಂಗವನ್ನು ತನ್ನ ಕೈಗಳಿಂದ ಎತ್ತಲು ಪ್ರಯತ್ನಿಸಿದನು. ಆದರೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಪ್ರಯತ್ನ ಮಾಡಿದರೂ, ಅವನಿಗೆ ಆ ಲಿಂಗವನ್ನು ಕದಲಿಸಲಾಗಲಿಲ್ಲ. ಅವನ ಪ್ರಯತ್ನಗಳಿಂದ ಭೂಮಿ ಅಲ್ಲಾಡಿತೇ ಹೊರತು ಆ ಲಿಂಗ ಮಾತ್ರ ಸ್ವಲ್ಪವೂ ಅಲ್ಲಾಡಲಿಲ್ಲ. ರಾವಣ ಕ್ಷೀಣಬಲನಾಗಿ, ಲಿಂಗ ಮಹಾಬಲವಾಯಿತು. ಅದರಿಂದಲೇ ಆ ಲಿಂಗಕ್ಕೆ ಮಹಾಬಲೇಶ್ವರ ಎಂಬ ಹೆಸರಾಯಿತು. ಲಿಂಗವನ್ನು ರಾವಣ ಹಿಡಿದು ಅಲುಗಾಡಿಸುವಾಗ ಅದು ಗೋಕರ್ಣದ ಆಕಾರವನ್ನು ಪಡೆಯಿತು. ಅದರಿಂದ ಆ ಕ್ಷೇತ್ರಕ್ಕೆ ಗೋಕರ್ಣ ಎಂಬ ಹೆಸರು ಬಂತು. ಮುಂದೆ ಲಂಕಾಧೀಶ್ವರ ಅಲ್ಲಿಯೆ ತಪಸ್ಸು ಮಾಡಿ ವರಗಳನ್ನು ಪಡೆದನು. ಅಂದಿನಿಂದ ಸಕಲ ದೇವತೆಗಳಿಗೂ ಅದು ವಾಸಸ್ಥಾನವಾಯಿತು.
ಸ್ಕಾಂದ ಪುರಾಣದಲ್ಲಿ ಗೋಕರ್ಣ ಕ್ಷೇತ್ರ ಅದ್ಭುತ ಮಹಿಮೆಯುಳ್ಳದ್ದು ಎಂದು ಹೇಳಲ್ಪಟ್ಟಿದೆ.
ಇಲ್ಲಿಗೆ ಆರನೆಯ ಅಧ್ಯಾಯ ಮುಗಿಯಿತು.
[31/12/2015 9:03 PM] S. Bhargav: ಶ್ರೀ ಗುರು ಚರಿತ್ರೆ – ಏಳನೆಯ ಅಧ್ಯಾಯ||
ಗೋಕರ್ಣ ಕ್ಷೇತ್ರ ವೃತ್ತಾಂತವನ್ನು ಕೇಳಿ, ನಾಮಧಾರಕ ಸಿದ್ಧಪುರುಷನಿಗೆ, ಆ ಕ್ಷೇತ್ರ ಮಹಿಮೆಯನ್ನು ಇನ್ನಷ್ಟು ವಿವರಿಸಿ ಹೇಳಬೇಕೆಂದು ಬಿನ್ನವಿಸಿಕೊಂಡನು. “ಸರ್ವ ತೀರ್ಥಗಳನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಅಲ್ಲಿಯೇ ನಿಲ್ಲಲು ಕಾರಣವೇನು? ಆ ಕ್ಷೇತ್ರದಲ್ಲಿ ಯಾರು ಯಾರು ವರಗಳನ್ನು ಪಡೆದರು? ಸದ್ಗುರುವಿನಲ್ಲಿ ಪ್ರೀತಿಯಿಟ್ಟವರಿಗೆ ಆ ತೀರ್ಥ ಮಹಿಮೆಯನ್ನು ಕೇಳಬೇಕೆಂಬ ಕೋರಿಕೆಯು ಸಹಜವಲ್ಲವೇ? ಹೇ ಕೃಪಾಮೂರ್ತಿ, ಜ್ಞಾನಸಿಂಧು, ನನಗೆ ಅಂತಹ ಕಥೆಗಳನ್ನು ವಿಸ್ತರಿಸಿ ಹೇಳಿ.” ಎಂದು ಸಿದ್ಧರನ್ನು ಪ್ರಾರ್ಥಿಸಿಕೊಂಡನು. ಅವನ ಪ್ರಾರ್ಥನೆಯನ್ನು ಕೇಳಿ ಸಿದ್ಧಮುನಿಯು ಹೇಳಿದರು. “ನಾಮಧಾರಕ, ಗೋಕರ್ಣ ಮಹಿಮೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಹಿಂದೆ ಇಕ್ಷ್ವಾಕು ವಂಶದಲ್ಲಿ ಮಿತ್ರಸಹನೆಂಬ ರಾಜನಿದ್ದನು. ಧರ್ಮಾನುಚರನಾದ ಆ ರಾಜ ಕ್ಷತ್ರಿಯರಲ್ಲೇ ಬಹು ಪ್ರತಾಪಿಯಾದವನು. ಸಕಲ ಧರ್ಮಗಳನ್ನೂ ಬಲ್ಲವನು. ವೇದ ಧರ್ಮಗಳನ್ನು ತಿಳಿದವನು. ವಿವೇಕಿ. ಕುಲಾಭಿಮಾನಿ. ಬಲಾಢ್ಯ. ದಯಾನಿಧಿ. ಪ್ರಯತ್ನಶಾಲಿ.
ಒಂದುಸಲ ಅವನು ಬೇಟೆಗೆಂದು ಹೊರಟು, ಅನೇಕ ವನ್ಯಮೃಗಗಳುಳ್ಳ ಅರಣ್ಯವನ್ನು ಪ್ರವೇಶಮಾಡಿದನು. ನಿರ್ಮಾನುಷ್ಯವಾದ ಆ ಅರಣ್ಯದಲ್ಲಿ ಮೃಗಗಳನ್ನನ್ನ್ವೇಷಿಸುತ್ತಾ ಹೊರಟ ಅವನು, ದಾರಿಯಲ್ಲಿ, ಅಗ್ನಿಯಂತೆ ಜ್ವಾಲಾಕಾರವಾಗಿ ಭಯಾನಕವಾಗಿ ಕಾಣುತ್ತಿದ್ದ ಒಬ್ಬ ರಾಕ್ಷಸನನ್ನು ನೋಡಿದನು. ಆ ರಾಕ್ಷಸನನ್ನು ಕಂಡ ಆ ರಾಜ ಕ್ರುದ್ಧನಾಗಿ ಅವನಮೇಲೆ ಶರ ವರ್ಷವನ್ನು ಕುರಿಸಿದನು. ಶರಘಾತದಿಂದ ಆ ರಾಕ್ಷಸ ಮೂರ್ಛೆಗೊಂಡು ಭೂಶಾಯಿಯಾದನು. ಸಾಯುತ್ತಾ ಬಿದ್ದಿರುವ ಅವನನ್ನು ಕಂಡು ಬಹು ದುಃಖಿತನಾದ ಅವನ ಸಹೋದರ, ಶೋಕತಪ್ತನಾಗಿ ಅಳುತ್ತಾ ಅವನ ಬಳಿಯೇ ಕುಳಿತನು. ಸಾಯುತ್ತಿದ್ದ ಆ ರಾಕ್ಷಸ, ಸರ್ವ ಪ್ರಯತ್ನದಿಂದಲೂ ತನ್ನ ಸಾವಿಗೆ ಕಾರಣನಾದ ಆ ರಾಜನನ್ನು ಕೊಲ್ಲಬೇಕೆಂದು ತನ್ನ ಸಹೋದರನಿಗೆ ಆಣತಿಕೊಟ್ಟು, ಪ್ರಾಣಬಿಟ್ಟನು.
ಸಮಯಕಾದು, ಮಾಯಾವಿಯಾದ ಆ ರಾಕ್ಷಸನ ಸಹೋದರ, ಮಾನವರೂಪದಲ್ಲಿ, ರಾಜನ ಬಳಿಗೆ ಬಂದು ಮೃದುವಾಕ್ಯಗಳಿಂದ ರಾಜನನ್ನು ಒಲಿಸಿಕೊಂಡು, ನಮ್ರತೆಯನ್ನು ನಟಿಸುತ್ತಾ, ರಾಜನ ಸೇವೆಯಲ್ಲಿ ನಿಂತನು. ಆ ಕಪಟಿ, ತನ್ನ ಸ್ವಾಮಿಯದ ರಾಜನ ಮನೋಗತಗಳನ್ನರಿತು, ಅವನಿಗೆ ಅನುಕೂಲನಾಗಿ, ಅವನ ಸೇವೆ ಮಾಡುತ್ತಾ, ಅವನನ್ನು ಸಂತುಷ್ಟನನ್ನಾಗಿ ಮಾಡಿ, ಅವನ ನಂಬಿಕೆಗೆ ಪಾತ್ರನಾದನು. ಒಂದುಸಲ ಪಿತೃಶ್ರಾದ್ಧ ಬರಲು, ರಾಜನು ವಸಿಷ್ಠಾದಿ ಮುನಿಗಳನ್ನು ಅಹ್ವಾನಿಸಿದನು. ಆ ದಿವಸ, ಕಪಟವನ್ನರಿಯದ ರಾಜನು ಆ ಕಪಟಿ ಸೇವಕನನ್ನು ಅಡಿಗೆಯ ಮೇಲ್ವಿಚಾರಕ್ಕೆ ನೇಮಿಸಿ, “ನೀನು ಪಾಕಶಾಲೆಯಲ್ಲಿದ್ದುಕೊಂಡು, ಅಡಿಗೆಗೆ ಬೇಕಾದ ಪದಾರ್ಥಗಳನ್ನು ತಂದುಕೊಟ್ಟು, ಅಡಿಗೆಯವನಿಗೆ ಸಹಾಯಕನಾಗಿ ನಿಂತು ಎಲ್ಲವನ್ನು ಸಿದ್ಧಪಡಿಸು.” ಎಂದು ಆಜ್ಞೆ ಮಾಡಿದನು. ರಾಜಾಜ್ಞೆಯನ್ನಂಗೀಕರಿಸಿ, ಆ ಕಪಟಸೇವಕ, ಅಡಿಗೆಯ ಪದಾರ್ಥಗಳನ್ನು ತಂದುಕೊಡುವಾಗ ಯಾರಿಗೂ ತಿಳಿಯದಂತೆ ನರಮಾಂಸವನ್ನು ಜೊತೆಗೆ ಸೇರಿಸಿ ತಂದು ಕೊಟ್ಟನು. ನಿಜವನ್ನರಿಯದ ಅಡಿಗೆಯವನು ಕಪಟಿ ತಂದುಕೊಟ್ಟಿದ್ದ ಪದಾರ್ಥಗಳನ್ನು ಉಪಯೋಗಿಸಿ ಅಡಿಗೆ ಸಿದ್ಧಪಡಿಸಿದನು.
ಭೋಜನಸಮಯದಲ್ಲಿ ತನ್ನ ದಿವ್ಯ ದೃಷ್ಟಿಯಿಂದ ಅಡಿಗೆಯಲ್ಲಿ ನರಮಾಂಸ ಬೆರೆತಿರುವುದನ್ನು ಅರಿತ ವಸಿಷ್ಠಮುನಿ, ಕ್ರೋಧಗೊಂಡು, “ಹೇ ರಾಜನ್, ಅಸ್ಪರ್ಶವಾದ ನರಮಾಂಸವನ್ನು ಉಪಯೋಗಿಸಿ ನಮಗೆ ಭೋಜನವನ್ನು ಸಿದ್ಧಪಡಿಸಿದ್ದೀಯೆ. ನೀನು ಮಾಡಿದ ಈ ಪಾಪದಿಂದ ಬ್ರಹ್ಮರಾಕ್ಷಸನಾಗು.” ಎಂದು ಶಾಪ ಕೊಟ್ಟನು. ಅದನ್ನು ಕೇಳಿದ ಆ ರಾಜ, ಪ್ರತಿಶಾಪ ಕೊಡಲು ಸಿದ್ಧನಾಗಿ, “ಮಹರ್ಷಿ, ಅಡಿಗೆಯಲ್ಲಿ ಯಾವ ಮಾಂಸವಿದೆ ಎಂಬುದರ ಅರಿವು ನನಗಿಲ್ಲ. ನನ್ನ ಆಜ್ಞೆಯಂತೆ ಅಡಿಗೆಯವನು ಅಡಿಗೆ ಮಾಡಿದ್ದಾನೆ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಅದರಿಂದಲೇ ನೀನು ಕೊಟ್ಟ ಶಾಪ ವ್ಯರ್ಥವು. ತಿಳಿಯದೇ ಆದ ಪಾಪಕ್ಕೆ ನೀನು ಅನಾವಶ್ಯಕವಾಗಿ ಶಾಪ ಕೊಟ್ಟೆ. ಈಗ ನಿನಗೆ ನಾನು ಪ್ರತಿಶಾಪ ಕೊಡುತ್ತೇನೆ.” ಎಂದು ಹೇಳಿ, ಕೈಯಲ್ಲಿ ನೀರು ತೆಗೆದುಕೊಂಡು ಶಾಪಕೊಡಲುದ್ಯುಕ್ತನಾದನು. ಅಷ್ಟರಲ್ಲಿ, ರಾಜನ ಪತ್ನಿ, ಮದಯಂತಿ ಅಡ್ಡಬಂದು, ರಾಜನನ್ನು ತಡೆದು, “ರಾಜಗುರುವನ್ನು ಶಪಿಸುವುದರಿಂದ ಮಹಾ ದೋಷವುಂಟಾಗುತ್ತದೆ. ಗುರುವಚನವು ವೃಥಾ ಅಗುವುದಿಲ್ಲ. ಅದರಿಂದ ಅವರ ಪಾದಗಳನ್ನು ಆಶ್ರಯಿಸಿಯೇ ಉದ್ಧಾರವಾಗಬೇಕು.” ಎಂದು ಅವನನ್ನು ತಡೆದಳು. ರಾಣಿಯ ಮಾತುಗಳನ್ನು ಕೇಳಿ ರಾಜ, ಕೈಯಲ್ಲಿ ಹಿಡಿದಿದ್ದ ನೀರನ್ನು ಕೆಳಕ್ಕೆ ಬಿಟ್ಟನು. ಆ ಕಲ್ಮಷವಾದ ನೀರು ಅವನ ಪಾದಗಳ ಮೇಲೆ ಬಿತ್ತು. ಅದರಿಂದ ಆ ರಾಜ ಕಲ್ಮಷಪಾದನೆಂದು ಹೆಸರುಗೊಂಡು, ಬ್ರಹ್ಮರಾಕ್ಷಸನಾದನು. ರಾಜಪತ್ನಿ, ಮದಯಂತಿ, ಮಹರ್ಷಿಯ ಪಾದಗಳಮೇಲೆ ಬಿದ್ದು, “ಹೇ ಮಹರ್ಷಿವರ್ಯ, ನಿನ್ನ ಕೋಪವನ್ನು ಉಪಸಂಹರಿಸಿಕೊಂಡು, ತಿಳಿಯದೆ ಮಾಡಿದ ಪಾಪದಿಂದ ನನ್ನ ಗಂಡನನ್ನು ಕಾಪಾಡು.” ಎಂದು ಬೇಡಿಕೊಂಡಳು. ಶಾಂತನಾದ ವಸಿಷ್ಠಮುನಿ, ಎಲ್ಲವನ್ನು ಅರಿತವನಾಗಿ, ಶಾಪಕಾಲವನ್ನು ತಗ್ಗಿಸಿ, ಹನ್ನೆರಡು ವರ್ಷಗಳು ಶಾಪವನ್ನನುಭವಿಸಿ ಯಥಾಪೂರ್ವದಂತೆ ಮಹಾರಾಜನಾಗಿ ಬಾಳುವಂತೆ ಅವನಿಗೆ ಶಾಪ ಉಪಸಂಹಾರವನ್ನು ಹೇಳಿ, ತನ್ನ ಆಶ್ರಮಕ್ಕೆ ಹೊರಟುಹೋದನು.
ಮಿತ್ರಸಹನು ಕಲ್ಮಾಷಪಾದನೆಂಬ ಬ್ರಹ್ಮರಾಕ್ಷಸನಾಗಿ ಅರಣ್ಯದಲ್ಲಿ ಮನುಷ್ಯರನ್ನೂ, ಮೃಗಗಳನ್ನು ಭಕ್ಷಿಸುತ್ತಾ ಅಲೆದಾಡುತ್ತಿದ್ದನು. ಹೀಗಿರಲು, ಒಂದು ದಿನ, ದೈವಯೋಗದಿಂದ ವಿಪ್ರ ದಂಪತಿಗಳು ಆ ದಾರಿಯಲ್ಲಿ ಪಯಣಿಸುತ್ತ ಬಂದರು. ಅವರನ್ನು ಕಂಡ ಬ್ರಹ್ಮರಾಕ್ಷಸ ಅವರನ್ನು ತಿನ್ನಲು ಅಲ್ಲಿಗೆ ಬಂದು, ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿ, ಶೋಕಗ್ರಸ್ತಳಾಗಿ, ಆ ಬ್ರಹ್ಮರಾಕ್ಷಸನನ್ನು ಕುರಿತು, “ಅಯ್ಯಾ, ರಾಕ್ಷಸ, ನನ್ನ ಸೌಭಾಗ್ಯವನ್ನು ಹಾಳುಮಾಡಬೇಡ. ನನ್ನ ಗಂಡನನ್ನು ಹಿಂಸಿಸಬೇಡ. ಅವನನ್ನು ಬಿಟ್ಟುಬಿಡು. ನನ್ನನ್ನು ಬೇಕಾದರೆ ತಿನ್ನು. ಗಂಡನಿಲ್ಲದ ಸ್ತ್ರೀ ಪಾಷಾಣಕ್ಕೆ ಸಮಾನ. ನನ್ನನ್ನು ಮೊದಲು ತಿಂದು ಅನಂತರ ಬೇಕಾದರೆ ಅವನನ್ನು ತಿನ್ನು. ಸುಂದರ ಯುವಕನಾದ ನನ್ನ ಪತಿ ವೇದಶಾಸ್ತ್ರ ವಿದ್ವಾಂಸನು. ಅವನನ್ನು ರಕ್ಷಿಸಿದರೆ ನಿನಗೆ ಜಗತ್ತನ್ನೇ ರಕ್ಷಿಸಿದ ಪುಣ್ಯ ಬರುವುದು. ನೀನು ದಯೆಮಾಡಿ ನನ್ನ ಮಾತು ನಡೆಸಿಕೊಟ್ಟರೆ ನಾನು ನಿನಗೆ ಮಗಳಾಗಿ ಹುಟ್ಟುತ್ತೇನೆ. ಅಥವಾ ನನಗೆ ಪುತ್ರಸಂತಾನವಾದರೆ ಅವನಿಗೆ ನಿನ್ನ ಹೆಸರನ್ನೇ ಇಡುತ್ತೇನೆ.” ಎಂದು ನಾನಾವಿಧವಾಗಿ ಆ ರಾಕ್ಷಸನನ್ನು ಬೇಡಿಕೊಂಡಳು. ಆದರೂ ಆ ರಾಕ್ಷಸ ಅವಳ ಮಾತಿಗೆ ಬೆಲೆ ಕೊಡದೆ ಆ ಬ್ರಾಹ್ಮಣನನ್ನು ತಿಂದುಬಿಟ್ಟನು. ಅದರಿಂದ ಕ್ರುದ್ಧಳಾದ ಆ ಹೆಂಗಸು, “ಎಲೈ ಪಾಪಿ, ನಾನು ಇಷ್ಟು ಬೇಡಿಕೊಂಡರೂ ನೀನು ನನ್ನ ಮಾತಿಗೆ ಬೆಲೆಕೊಡದೆ ನನ್ನ ಗಂಡನನ್ನು ತಿಂದುಹಾಕಿದೆ. ಇದೋ, ನನ್ನ ಶಾಪವನ್ನು ಕೇಳು. ನೀನು ಸೂರ್ಯವಂಶೀಯನಾದ ರಾಜನಾಗಿದ್ದೂ ಕೂಡ ಶಾಪಗ್ರಸ್ತನಾಗಿ ಬ್ರಹ್ಮರಾಕ್ಷಸನಾದೆ. ಹನ್ನೆರಡು ವರ್ಷಗಳು ಕಳೆದು ನೀನು ಮತ್ತೆ ರಾಜನಾದಾಗ, ನೀನು ನಿನ್ನ ರಾಣಿಯೊಡನೆ ಕೂಡಿದರೆ ಸಾಯುತ್ತೀಯೆ. ದುರಾತ್ಮ, ಅನಾಥ ವಿಪ್ರ ಭಕ್ಷಣೆಯ ಫಲವನ್ನು ಅನುಭವಿಸು.” ಎಂದು ಶಪಿಸಿ, ತನ್ನ ಗಂಡನ ಅಸ್ತಿಗಳನ್ನು ಕೂಡಿಸಿ ಅದರೊಡನೆ ಆ ಬ್ರಾಹ್ಮಣ ಸ್ತ್ರೀ ಅಗ್ನಿಪ್ರವೇಶಮಾಡಿದಳು.
ಶಾಪ ವಿಮೋಚನೆಯಾದ ಮೇಲೆ ಮತ್ತೆ ರಾಜನಾದ ಕಲ್ಮಷಪಾದನು ರಾಜಧಾನಿಗೆ ಹಿಂತಿರುಗಿದನು. ಸಂತೋಷಗೊಂದ ರಾಣಿ, ಅವನನ್ನು ಕಂಡು ಅವನೊಡನೆ ಸೇರಲು ಬಂದಳು. ರಾಜ ಅವಳನ್ನು ತಡೆದು, ತನಗುಂಟಾದ ಬ್ರಾಹ್ಮಣ ಸ್ತ್ರೀ ಶಾಪವನ್ನು ಕುರಿತು ಹೇಳಿದನು. ರಾಣಿ, ಮದಯಂತಿ, ಗಂಡನ ಮಾತು ಕೇಳಿ, ಬಹು ದುಃಖಿತಳಾಗಿ, ಪ್ರಾಣತ್ಯಾಗ ಮಾಡಲು ಉದ್ಯುಕ್ತಳಾದಳು. ಅದರಿಂದ ದುಃಖಿತನಾದ ರಾಜನನ್ನು ಕಂಡು, ಅವಳು, “ಪ್ರಾಣನಾಥ, ಹನ್ನೆರಡು ವರ್ಷಗಳು ನಿನಗಾಗಿ ಕಷ್ಟದಿಂದ ಕಾದಿದ್ದು, ನಿನ್ನ ಬರುವನ್ನೇ ಎದುರು ನೋಡುತ್ತಿದ್ದೆ. ಈಗ ಹೀಗಾಯಿತು. ಹೋಗಲಿ ಬಿಡು. ಸಂತಾನವಿಲ್ಲದಿದ್ದರೂ ನಷ್ಟವಿಲ್ಲ. ನಾವಿಬ್ಬರೂ ಒಟ್ಟಿಗೇ ಇರಬಹುದು.” ಏಂದು ಹೇಳಿದಳು. ಅವಳ ಮಾತನ್ನು ಕೇಳಿ ರಾಜ, ದುಃಖದಿಂದ ಕಣ್ಣೀರು ಸುರಿಸುತ್ತಾ, “ಏನು ಮಾಡಲು ಸಾಧ್ಯ? ವಿಧಿ ಬಲವತ್ತರವಾದದ್ದು.” ಎಂದು ನಿಟ್ಟುಸಿರುಬಿಟ್ಟ.
ಮತ್ತೆ ಆ ರಾಜ, ವೃದ್ಧರೂ, ಮತಿವಂತರೂ ಆದ ಪುರೋಹಿತರನ್ನೂ, ಮಂತ್ರಿವರ್ಗದವರನ್ನು ಕರೆಸಿ, ತನಗುಂಟಾದ ಅವಗಢವನ್ನು, ಬ್ರಹ್ಮಹತ್ಯಾಪಾಪವೂ ಸೇರಿದಂತೆ, ಎಲ್ಲವನ್ನೂ ವಿವರಿಸಿ ಹೇಳಿ, ಅದರಿಂದ ಪಾರಾಗುವ ಉಪಾಯವನ್ನು ಹೇಳಿ ಎಂದು ಬಿನ್ನವಿಸಿಕೊಂಡ. ಅವರು ಹೇಳಿದಂತೆ ಪಾಪವಿಮೋಚನಾರ್ಥವಾಗಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಹೋದಕಡೆಗಳಲ್ಲೆಲ್ಲ ಸ್ನಾನ, ಪೂಜಾರ್ಚನಾದಿಗಳನ್ನು ನಡೆಸಿ, ಬ್ರಾಹ್ಮಣರಿಗೆ ವಸ್ತ್ರ, ಧನ, ಅನ್ನ ದಾನಗಳನ್ನು ಮಾಡುತ್ತಾ, ದೇವಾದಿಗಳಿಗೆ ತರ್ಪಣಗಳನ್ನು ನೀಡುತ್ತಾ, ಇದ್ದನು. ಆದರೂ, ಶ್ರದ್ಧಾಭಕ್ತಿಗಳಿಂದ ಎಲ್ಲವನ್ನೂ ಮಾಡಿದರೂ, ಬ್ರಹ್ಮಹತ್ಯಾಪಾಪವು ಅವನನ್ನು ಬಿಡದೆ, ಅವನ ಬೆನ್ನಂಟಿ ಬರುತ್ತಲೇ ಇತ್ತು. ಆ ರಾಜ, ಅನೇಕ ಕಷ್ಟಗಳನ್ನು ಅನುಭವಿಸುತ್ತಾ, ಚಿಂತಾಕುಲನಾಗಿ, ವಿರಕ್ತಮನಸ್ಕನಾಗಿ, ದೈವಯೋಗದಿಂದಲೋ ಎಂಬಂತೆ ಮಿಥಿಲಾಪುರಕ್ಕೆ ಬಂದನು. ಅಲ್ಲಿ ಚಿಂತಾಗ್ರಸ್ತನಾಗಿ ಒಂದು ಮರದ ನೆರಳಿನಲ್ಲಿ ಕುಳಿತಿದ್ದಾಗ, ಆ ಮಾರ್ಗದಲ್ಲಿ ಋಷೀಶ್ವರೊಡನೆ ಕೂಡಿ, ಮಹಾರುದ್ರನಂತೆ ಪ್ರಕಾಶಿಸುತ್ತಿದ್ದ, ಗೌತಮ ಮಹರ್ಷಿ ಬಂದನು. ಅವನನ್ನು ಕಂಡ ರಾಜ ಅವನ ಪಾದಗಳಲ್ಲಿ ಬಿದ್ದು, ಭಕ್ತಿಯಿಂದ ನಮಸ್ಕರಿಸಿದನು. ಅದರಿಂದ ಸಂತುಷ್ಟನಾದ ಆ ಮುನಿಯು, ಕರುಣಾರ್ದ್ರಹೃದಯನಾಗಿ, ದುಃಖಿತನಾದ ಆ ರಾಜನನ್ನು ಆದರಿಸಿ, ಅವನಾರೆಂದು ವಿಚಾರಿಸಿದನು. ಅವನು ರಾಜನೆಂದರಿತು, “ಹೇ ರಾಜ, ನಿನ್ನ ರಾಜ್ಯವಾವುದು? ಅದನ್ನು ಯಾರು ವಶಪಡಿಸಿಕೊಂಡರು? ನಿನ್ನ ಈ ವನವಾಸಕ್ಕೆ ಕಾರಣವೇನು? ಚಿಂತಾಗ್ರಸ್ತನಾಗಿ ಹೀಗೇಕೆ ಕಾಡಿನಲ್ಲಿ ಅಲೆಯುತ್ತಿದ್ದೀಯೆ? ನಿನ್ನನ್ನು ಕಾಡುತ್ತಿರುವ ಚಿಂತೆಯೇನು?” ಎಂದು ವಿಚಾರಿಸಿದನು. ಅದಕ್ಕೆ ಆ ರಾಜ, “ಹೇ ಮುನಿವರ್ಯ, ವಿಧಿವಶದಿಂದ ಬ್ರಾಹ್ಮಣ ಶಾಪವು ಬ್ರಹ್ಮಹತ್ಯಾರೂಪದಲ್ಲಿ ನನ್ನ ಬೆನ್ನು ಹತ್ತಿದೆ. ಯಜ್ಞಾದಿಗಳನ್ನು ಮಾಡಿದರೂ, ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ, ತೀರ್ಥಯಾತ್ರೆಗಳನ್ನು ಮಾಡುತ್ತಾ ದಾನ ಧರ್ಮಗಳಲ್ಲಿ ನಿರತನಾದರೂ, ನನ್ನ ಪಾಪಗಳು ಕಳೆಯುತ್ತಿಲ್ಲ. ಘೋರವಾದ ಬ್ರಹ್ಮಹತ್ಯಾಪಾಪವು ನನ್ನ ಬೆನ್ನಂಟಿ ಬರುತ್ತಲೇ ಇದೆ. ಇಂದು ನಿಮ್ಮ ಚರಣಗಳ ದರ್ಶನದಿಂದ ನನ್ನ ಜನ್ಮ ಸಾಫಲ್ಯವಾಯಿತು. ಇನ್ನು ನನ್ನ ಕಷ್ಟಗಳೆಲ್ಲಾ ತೀರಿದಂತೆಯೇ!” ಎಂದು ಹೇಳುತ್ತಾ ರಾಜ ಮತ್ತೆ ಆ ಗೌತಮ ಮಹರ್ಷಿಯ ಚರಣಗಳಲ್ಲಿ ತಲೆಯಿಟ್ಟನು.
ರಾಜನ ಮಾತುಗಳನ್ನು ಆಲಿಸಿದ ಆ ಮಹಾಮುನಿ, ದಯಾಪೂರಿತನಾಗಿ, ಅವನನ್ನು ಕರುಣೆಯಿಂದ ನೋಡುತ್ತಾ, “ರಾಜ, ಭಯಪಡಬೇಡ. ಮೃತ್ಯುಂಜಯನಾದ ಶಂಕರನು ನಿನಗೆ ಅಭಯವಿತ್ತು ರಕ್ಷಿಸುತ್ತಾನೆ. ನಿನ್ನ ಪಾಪಗಳನ್ನೆಲ್ಲ ತೊಲಗಿಸುವ ಕ್ಷೇತ್ರವೊಂದನ್ನು ಹೇಳುತ್ತೇನೆ. ಗೋಕರ್ಣಕ್ಷೇತ್ರ ಪವಿತ್ರವಾದದ್ದು. ಮಹಾಪಾಪಹರವಾದದ್ದು. ಗೋಕರ್ಣ ಸ್ಮರಣೆಯಿಂದಲೇ ಬ್ರಹ್ಮಹತ್ಯಾದಿ ಪಾಪಗಳು ನಶಿಸಿಹೋಗುತ್ತವೆ. ಅಲ್ಲಿ ಶಿವನು ಮೃತ್ಯುಂಜಯನಾಗಿ ಕೂತಿದ್ದಾನೆ. ಕೈಲಾಸಪರ್ವತದಂತೆ, ಸುಂದರಕಂದರನೂ, ಕರ್ಪೂರಗೌರನೂ ಆದ ಶಿವನ ವಾಸಸ್ಥಾನ ಗೋಕರ್ಣ. ರಾತ್ರಿಯ ಸಮಯದಲ್ಲಿ ಚಂದ್ರನಾಗಲೀ, ವಹ್ನಿಯಾಗಲೀ ಸಂಪೂರ್ಣವಾಗಿ ತಮಸ್ಸನ್ನು ತೊಲಗಿಸುವುದಿಲ್ಲ. ಸೂರ್ಯೋದಯದಿಂದಲೇ ಕತ್ತಲು ಸಂಪೂರ್ಣವಾಗಿ ಕಳೆಯುತ್ತದೆ. ಅದರಂತೆಯೇ, ಇತರ ತೀರ್ಥಕ್ಷೇತ್ರಗಳು ಸಂಪೂರ್ಣವಾಗಿ ಪಾಪವನ್ನು ನಾಶಪಡಿಸಲಾರವು. ಗೋಕರ್ಣ ದರ್ಶನ ಮಾತ್ರದಿಂದಲೇ ಸಕಲ ಪಾತಕಗಳೂ ನಿವಾರಿಸಲ್ಪಡುತ್ತವೆ. ಒಂದುಸಲ ಗೋಕರ್ಣ ಕ್ಷೇತ್ರವನ್ನು ದರ್ಶಿಸಿದರೂ ಸಾಕು, ಸಹಸ್ರ ಬ್ರಹ್ಮಹತ್ಯಾಪಾಪಗಳು ನಶಿಸಿಹೋಗುತ್ತವೆ. ಗೋಕರ್ಣ ಸ್ಮರಣೆಯಿಂದಲೇ ಮನುಷ್ಯರು ಪುಣ್ಯಾತ್ಮರಾಗುತ್ತಾರೆ. ಇಂದ್ರೋಪೇಂದ್ರವಿರಂಚಿ ಪ್ರಭೃತಿಗಳು ಸಿದ್ಧಿಹೊಂದಿದ ಇತರ ದೇವತೆಗಳೂ, ಎಲ್ಲರೂ ಅಲ್ಲಿ ತಪಸ್ಸು ಮಾಡಿಯೇ ತಮ್ಮ ತಮ್ಮ ಮನೋರಥಗಳನ್ನು ಈಡೇರಿಸಿಕೊಂಡರು. ಗೋಕರ್ಣಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡಿದ ಜ್ಞಾನಿಗಳಿಗೆ ಕ್ಷೇತ್ರ ಪ್ರಭಾವದಿಂದ ಅವರೆಣಿಸಿದ್ದಕ್ಕಿಂತ ಅತಿಹೆಚ್ಚಾದ ಫಲ ಲಭಿಸುತ್ತದೆ. ಅಲ್ಲಿ ನಿವಸಿಸಿದ ಮಾತ್ರಕ್ಕೇ ಬ್ರಹ್ಮವಿಷ್ಣುದೇವೇಂದ್ರಾದಿಗಳು ಸಿದ್ಧಿ ಪಡೆದರು. ಅದಕ್ಕಿಂತ ಇನ್ನು ಹೆಚ್ಚು ಹೇಳಬೇಕಾದದ್ದೇನಿದೆ? ಗೋಕರ್ಣವೇ ಕೈಲಾಸವೆಂದೂ, ಮಹಾಬಲೇಶ್ವರನೇ ಸಾಕ್ಷಾತ್ಪರಮೇಶ್ವರನೆಂದೂ ತಿಳಿ. ಶ್ರೀ ಮಹಾವಿಷ್ಣುವಿನ ಆಜ್ಞೆಯಿಂದ ವಿಘ್ನೇಶ್ವರ ಅಲ್ಲಿ ಮಹಾಬಲೇಶ್ವರನನ್ನು ಸ್ಥಾಪಿಸಿದ. ಗೋಕರ್ಣ ಪುಣ್ಯಕ್ಷೇತ್ರದಲ್ಲಿ ಸಮಸ್ತ ದೇವತೆಗಳೂ, ಬ್ರಹ್ಮ, ವಿಷ್ಣು, ಇಂದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಸೂರ್ಯ, ಚಂದ್ರ, ಅಷ್ಟವಸುಗಳು ನೆಲಸಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಭಕ್ತಿಯುಕ್ತರಾಗಿ, ಮಹಾಬಲೇಶ್ವರನ ಪೂಜೆ ಮಾಡುತ್ತಾರೆ. ಯಮ, ಅಗ್ನಿ, ಚಿತ್ರಗುಪ್ತ, ರುದ್ರ, ಪಿತೃಗಣಗಳು, ದಕ್ಷಿಣದ್ವಾರವನ್ನು ಆಶ್ರಯಿಸಿದ್ದಾರೆ. ವರುಣಮುಖ್ಯರಾದ ದೇವತೆಗಳು ಪಶ್ಚಿಮದ್ವಾರವನ್ನು ಆಶ್ರಯಿಸಿದ್ದಾರೆ. ಕುಬೇರ, ಭದ್ರಕಾಳಿ, ವಾಯು ಸಪ್ತಮಾತೃಕೆಯರು, ಉತ್ತರದ್ವಾರವನ್ನು ಆಶ್ರಯಿಸಿದ್ದಾರೆ. ಇವರೆಲ್ಲರೂ ಪ್ರತಿದಿನವೂ ಭಕ್ತಿಶ್ರದ್ಧೆಗಳಿಂದ ಕೂಡಿ, ಪ್ರೀತ್ಯಾದರಗಳಿಂದ ಆ ಮಹಾಬಲೇಶ್ವರನನ್ನು ಉಪಾಸನೆ ಮಾಡುತ್ತಾರೆ. ವಿಶ್ವಾವಸು, ಚಿತ್ರರಥ, ಚಿತ್ರಸೇನಾದಿ ಗಂಧರ್ವರು ತಮ್ಮ ಗಾನದಿಂದ ಆ ಶಂಕರನನ್ನು ಸೇವಿಸುತ್ತಾರೆ. ಕಶ್ಯಪ, ಅತ್ರಿ, ವಸಿಷ್ಠ, ಕಣ್ವಾದಿ ನಿರ್ಮಲ ಮುನಿಶ್ರೇಷ್ಠರೆಲ್ಲರೂ ಗೋಕರ್ಣ ಕ್ಷೇತ್ರವನ್ನಾಶ್ರಯಿಸಿ ತಪಸ್ಸು ಮಾಡಿ ಪರಮೇಶ್ವರನ ಆರಾಧನೆ ಮಾಡುತ್ತಾರೆ. ಊರ್ವಶಿ, ತಿಲೋತ್ತಮೆ, ರಂಭೆ, ಘೃತಾಚಿ, ಮೇನಕಾದಿ ಅಪ್ಸರಸೆಯರು ಮಹಾಬಲೇಶ್ವರನಿಗೆ, ತಮ್ಮ ನಾಟ್ಯದಿಂದ ಸೇವೆ ಮಾಡುತ್ತಾರೆ.
ಕೃತಯುಗದಲ್ಲಿ ವಿಶ್ವಾಮಿತ್ರ ಪ್ರಮುಖರಾದ ಮಹರ್ಷಿಗಳು, ಜಾಬಾಲಿ, ಜೈಮಿನಿ, ಭಾರದ್ವಾಜಾದಿ ಮುನಿಗಳು, ಸನಕಾದಿಗಳೇ ಮೊದಲಾದ ಬಾಲತಪಸ್ವಿಗಳು, ನಾರದಾದಿ ಮಹರ್ಷಿಗಳು, ಮರೀಚ್ಯಾದಿ ಬ್ರಹ್ಮಮಾನಸಪುತ್ರರು, ಉಪನಿಷದ್ವೇತ್ತರು, ಸಿದ್ಧರು, ಸಾಧ್ಯರು, ಸನ್ಯಾಸಿಗಳು, ಬ್ರಹ್ಮಚಾರಿಗಳು, ಅಜಿನಧಾರಿಗಳಾದ ನಿರ್ಗುಣೋಪಾಸಕರು, ಮುಂತಾದವರೆಲ್ಲರೂ ಗೋಕರ್ಣದಲ್ಲಿ ಶಂಭುವಿನ ಉಪಾಸನೆ ಮಾಡುತ್ತಾರೆ. ತ್ವಗಸ್ಥಿ ಮಾತ್ರವೇ ಉಳಿದ ಶರೀರಗಳಿಂದ ಕೂಡಿದ ತಾಪಸರೂ ಭಕ್ತಿಯಿಂದ ಅಲ್ಲಿ ಚಂದ್ರಮೌಳಿಯನ್ನು ಅರ್ಚನೆ ಮಾಡುತ್ತಾರೆ. ಗಂಧರ್ವರು, ಪಿತೃಗಳು, ಸಿದ್ಧರು, ಅಷ್ಟವಸುಗಳು, ವಿದ್ಯಾಧರರು, ಕಿನ್ನರರು, ಆಗಿಂದಾಗ್ಗೆ ಗೋಕರ್ಣಕ್ಕೆ ಶಿವ ದರ್ಶನಕ್ಕೆ ಬರುತ್ತಲೇ ಇರುತ್ತಾರೆ. ಗುಹ್ಯಕರು, ಕಿಂಪುರುಷರು, ಶೇಷನಾಗತಕ್ಷಕರು, ಭೂತ ಭೇತಾಳ ಪಿಶಾಚಗಳೂ ಕೂಡ ಈಶ್ವರನ ದರ್ಶನಕ್ಕೆಂದು ಗೋಕರ್ಣಕ್ಕೆ ಬರುತ್ತಿರುತ್ತಾರೆ. ಅಲಂಕಾರಯುಕ್ತರಾದ ದೇವ ದೇವಿಯರೂ ಸ್ವರ್ಗದಿಂದ ವಿಮಾನ ಆರೋಹಣರಾಗಿ ಶಿವದರ್ಶನಕಾತುರರಾಗಿ ಹಗಲು ಹೊತ್ತಿನಲ್ಲಿ ಬರುತ್ತಿರುತ್ತಾರೆ. ಕೆಲವರು ಶಿವನ ಸ್ತೋತ್ರ ಮಾಡುತ್ತಾರೆ. ಕೆಲವರು ಅವನನ್ನು ಕುರಿತು ದಾನಾದಿಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಅವನ ಪ್ರೀತಿಗಾಗಿ ಅವನನ್ನು ನಾಟ್ಯದಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಶಿವನಿಗೆ ಪೂಜಾರ್ಚನೆಗಳನ್ನು ಮಾಡಿ ನಮಸ್ಕರಿಸುತ್ತಾರೆ.
ಹೇ ರಾಜ, ಪ್ರಾಣಿಗಳ ಮಾನಸಿಕ ವಾಸನೆಗಳೂ ಇಲ್ಲಿ ನೆರವೇರಿಸಲ್ಪಡುತ್ತವೆ. ಈ ಕ್ಷೇತ್ರ ಸದೃಶವಾದ ಕ್ಷೇತ್ರ ಮತ್ತೊಂದಿಲ್ಲ. ಅಗಸ್ತ್ಯಮುಖ್ಯರಾದ ಮಹರ್ಷಿಗಳು, ಕಂದರ್ಪ ಅಗ್ನಿ ಮೊದಲಾದ ದಿವ್ಯರು, ಪ್ರಿಯವ್ರತಾದಿಗಳಾದ ರಾಜರು, ಈ ಕ್ಷೇತ್ರದಲ್ಲಿ ವರಗಳನ್ನು ಪಡೆದರು. ಶಿಂಶುಮಾರ, ಭದ್ರಕಾಳಿಯರು ದಿನವೂ ಮೂರುಸಲ ಇಲ್ಲಿ ಪ್ರಾಣಲಿಂಗವನ್ನು ಅರ್ಚಿಸುತ್ತಾರೆ. ರಾವಣ ಕುಂಭಕರ್ಣರು, ರಾಕ್ಷಸಪ್ರಮುಖರನೇಕರು, ವಿಭೀಷಣನೂ ಸಹ ಇಲ್ಲಿ ಧೂರ್ಜಟಿಯನ್ನು ಪೂಜಿಸಿ, ವರಗಳನ್ನು ಪಡೆದರು. ಹೀಗೆ ಸಮಸ್ತ ದೇವಲೋಕ, ಸಿದ್ಧದಾನವ ಮಂಡಲಗಳು ಪರಮೇಶ್ವರನನ್ನು ಆರಾಧಿಸಿ ಕೃತಕೃತ್ಯರಾದರು. ಕೆಲವರು ತಮ್ಮ ತಮ್ಮ ಹೆಸರಿನಲ್ಲಿ ಇಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿ, ಚತುರ್ವಿಧ ಪಲಪುರುಷಾರ್ಥಗಳನ್ನು ಪಡೆದರು. ಬ್ರಹ್ಮ, ವಿಷ್ಣು, ಕುಮಾರಸ್ವಾಮಿ, ವಿನಾಯಕ ಮೊದಲಾದವರು ಯಮ, ಕ್ಷೇತ್ರಪತಿ ದುರ್ಗಾದೇವಿ, ಶಕ್ತಿ ಕೂಡಾ ಇಲ್ಲಿ ತಮ್ಮ ತಮ್ಮ ಹೆಸರಿನಲ್ಲಿ ಲಿಂಗಗಳನ್ನು ಸ್ಥಾಪಿಸಿದರು.
ಗೋಕರ್ಣವು ಒಂದು ಬಹು ಉತ್ತಮವಾದ ಕ್ಷೇತ್ರ. ಇಲ್ಲಿ ಹೆಜ್ಜೆ ಹೆಜ್ಜೆಗೂ ಅಸಂಖ್ಯಾತವಾದ ಲಿಂಗಗಳಿವೆ. ಕೃತಯುಗದಲ್ಲಿ ಬಿಳಿಯ ಲಿಂಗ, ತ್ರೇತಾಯುಗದಲ್ಲಿ ಲೋಹಿತ ಲಿಂಗ, ದ್ವಾಪರದಲ್ಲಿ ಪೀತ ಲಿಂಗ, ಕಲಿಯುಗದಲ್ಲಿ ಕೃಷ್ಣವರ್ಣದ ಲಿಂಗ ಇಲ್ಲಿರುತ್ತದೆ. ಸಪ್ತಪಾತಾಲಗಳವರೆಗೂ ವ್ಯಾಪಿಸಿರುವ ಮಹೋನ್ನತ ಲಿಂಗವು ಕಲಿಯುಗದಲ್ಲಿ ಮೃದುವಾಗಿ ಸೂಕ್ಷ್ಮವಾಗಿರಬಹುದು.
ಪಶ್ಚಿಮ ಸಮುದ್ರ ತೀರದಲ್ಲಿ ಗೋಕರ್ಣ ಕ್ಷೇತ್ರವಿದೆ. ಅದು ಬ್ರಹ್ಮಹತ್ಯವೇ ಮುಂತಾದ ಪಾಪಗಳನ್ನು ಹೋಗಲಾಡಿಸುವಂತಹುದು. ಪರಸ್ತ್ರೀಗಮನದಂತಹ ದುರಾಚಾರಗಳಿಂದುಂಟಾದ ಮಹಾಪಾಪಗಳೂ ಕೂಡ ಆ ಕ್ಷೇತ್ರ ದರ್ಶನಮಾತ್ರದಿಂದಲೇ ನಾಶವಾಗುವುವು. ಗೋಕರ್ಣಲಿಂಗ ದರ್ಶನಮಾತ್ರದಿಂದಲೇ ಸರ್ವಕಾಮಗಳೂ ಸಿದ್ಧಿಯಾಗಿ, ಮಾನವ ಮೋಕ್ಷವನ್ನು ಪಡೆಯುತ್ತಾನೆ. ಹೇ ರಾಜ, ಅಲ್ಲಿಯೇ ನೆಲೆಸಿ, ಪುಣ್ಯ ದಿನಗಳಲ್ಲಿ ಭಕ್ತಿಯಿಂದ ಆ ಲಿಂಗಕ್ಕೆ ಅರ್ಚನಪೂಜಾದಿಗಳನ್ನು ಮಾಡಿದವನು ರುದ್ರಲೋಕವನ್ನು ಸೇರುವುದರಲ್ಲಿ ಸಂದೇಹವೇ ಇಲ್ಲ! ದೈವಯೋಗದಿಂದ ಗೋಕರ್ಣವನ್ನು ಸೇರಿ ಅಲ್ಲಿ ಮಹೇಶನನ್ನು ಶ್ರದ್ಧಾ ಭಕ್ತಿಗಳಿಂದ ಅರ್ಚಿಸುವ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಭಾನು, ಸೋಮ, ಬುಧವಾರಗಳಂದು, ಹುಣ್ಣಿಮೆ ಮೊದಲಾದ ಪರ್ವದಿನಗಳಂದು, ಈ ಕ್ಷೇತ್ರದಲ್ಲಿ ಸಮುದ್ರಸ್ನಾನಮಾಡಿ ದಾನಾದಿಗಳನ್ನು ಕೊಟ್ಟು, ಶಿವಪೂಜಾವ್ರತಹೋಮಜಪಾದಿಗಳನ್ನೂ, ತರ್ಪಣಾದಿಗಳನ್ನೂ ಸ್ವಲ್ಪವೇ ಮಾಡಿದರೂ ಅದರಿಂದ ಅನಂತಫಲ ಲಭಿಸುತ್ತದೆ. ಗ್ರಹಪೀಡೆಗಳ ಸಮಯದಲ್ಲಿ, ಸೂರ್ಯಸಂಕ್ರಮಣದಲ್ಲಿ, ಶಿವರಾತ್ರಿಯಂದು ಆ ಕ್ಷೇತ್ರದಲ್ಲಿ ಪೂಜಾದಿಗಳನ್ನು ಮಾಡುವವರಿಗೆ ಉತ್ತಮೋತ್ತಮವಾದ ಪುಣ್ಯ ಲಭ್ಯವಾಗುತ್ತದೆ. ಆ ಕ್ಷೇತ್ರ ಮಹಿಮೆಯನ್ನು ಯಾರು ತಾನೇ ವರ್ಣಿಸಬಲ್ಲರು? ಭಕ್ತವತ್ಸಲನಾದ ಶಿವನು ಬರಿಯ ಪುಷ್ಪಾರ್ಚನೆಯಿಂದಲೇ ಸಂತುಷ್ಟನಾಗುತ್ತಾನೆ. ಅನೇಕರು ಅಲ್ಲಿ ಅನೇಕ ರೀತಿಯ ಪೂಜೆಗಳನ್ನು ಮಾಡಿ ವರಗಳನ್ನು ಪಡೆದಿದ್ದಾರೆ.
ಮಾಘ ಬಹುಳ ಶಿವರಾತ್ರಿಯ ದಿನ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಿದರೆ ತ್ರೈಲೋಕ್ಯದುರ್ಲಭವಾದ ಫಲ ಲಭಿಸುತ್ತದೆ. ಅಂತಹ ಸಾಟಿಯಿಲ್ಲದ ಕ್ಷೇತ್ರದರ್ಶನ ಮಾಡದವರು ದೌರ್ಭಾಗ್ಯರೇ ಸರಿ! ಆ ಕ್ಷೇತ್ರದ ಬಗ್ಗೆ ಕೇಳದ ಮೂಢರು ಕಿವುಡರೇ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಗೋಕರ್ಣಕ್ಷೇತ್ರ ಮಹಿಮೆ ಚತುರ್ವಿಧ ಪುರುಷಾರ್ಥಪ್ರದವು. ಗೋಕರ್ಣದಲ್ಲಿನ ಮುಖ್ಯ ತೀರ್ಥಗಳಲ್ಲಿ ಸ್ನಾನಮಾಡಿ, ಮುಕ್ತಿಯನ್ನು ನೀಡುವ ಮಹಾಬಲೇಶ್ವರ ಲಿಂಗವನ್ನು ಭಕ್ತಿಯಿಂದ ಅರ್ಚಿಸಿದ ನರನ ಪಾಪಕ್ಷಾಳನವಾಗುತ್ತದೆ.” ಎಂದು ಗೋಕರ್ಣಮಾಹಾತ್ಮ್ಯೆಯನ್ನು ಗೌತಮ ಮುನಿ ವಿವರವಾಗಿ ತಿಳಿಸಿದನು. ಅದನ್ನು ಕೇಳಿ ರಾಜ ಮಿತ್ರಸಹ ಬಹು ಸಂತೋಷಗೊಂಡವನಾಗಿ, “ಹೇ ಮಹರ್ಷಿ, ಗೋಕರ್ಣ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸಿದ್ದೀರಿ. ಅಲ್ಲಿ ಮಹಾಪಾಪದಿಂದ ಮುಕ್ತಿಗೊಂಡವರೊಬ್ಬರ ನಿದರ್ಶನವೊಂದನ್ನು ಹೇಳುವ ಕೃಪೆ ಮಾಡಿ.” ಎಂದು ಕೋರಿದನು.
ಅದಕ್ಕೆ ಗೌತಮಮುನಿಯು, “ಮಹೀಪತಿ, ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ. ಬಾಡಿದ ಮುಖ. ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದುಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲು ಅವಳು ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಯಲ್ಲಿದ್ದಳು. ಮೆಲ್ಲಮೆಲ್ಲಗೆ ನಡೆಯುತ್ತಾಅ ಮರದ ನೆರಳಿಗೆ ಬಂದು ಅಲ್ಲಿ ಕುಸಿದು ಬಿದ್ದಳು. ಹಾಗೆ ಬಿದ್ದ ಅವಳು ನಾನು ನೋಡುತ್ತಿರುವಂತೆಯೇ ಪ್ರಾಣ ಬಿಟ್ಟಳು. ಅಷ್ಟರಲ್ಲಿಯೇ ಆಕಸ್ಮಿಕವೋ ಎಂಬಂತೆ ವಿಮಾನವೊಂದು ಸೂರ್ಯನಂತೆ ಬೆಳಗುತ್ತಾ ಬಂದು ನನ್ನ ಸಮೀಪದಲ್ಲೇ ಇಳಿಯಿತು. ಕೈಲಾಸದಿಂದ ಬಂದ ಆ ವಿಮಾನದಿಂದ ಶೂಲಖಟ್ವಾಂಗ ಧಾರಿಗಳಾದ ನಾಲ್ವರು ದೂತರು ಇಳಿದರು. ಅವರೆಲ್ಲರೂ ಶೈವರು. ಕಿರೀಟಧಾರಿಗಳು. ದಿವ್ಯರೂಪರು. ಆ ದೂತರನ್ನು ನೀವು ಏತಕ್ಕೆ ಬಂದಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಈ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು. ಸೂರ್ಯಪ್ರಕಾಶದಂತೆ ಬೆಳಗುತ್ತಿದ್ದ ಆ ದಿವ್ಯ ವಿಮಾನ ಆ ಸತ್ತುಬಿದ್ದಿದ್ದ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡುಹೋಗಲು ಬಂದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿಹೋದೆ. ಮಹದಾಶ್ಚರ್ಯಗೊಂಡ ನಾನು, ’ಇಂತಹ ಚಂಡಾಲಿ ದಿವ್ಯವಿಮಾನಕ್ಕೆ ಅರ್ಹಳೇ? ನಾಯಿಯನ್ನು ದಿವ್ಯಸಿಂಹಾಸನದಮೇಲೆ ಕೂಡಿಸಬಹುದೇ? ಇವಳು ಹುಟ್ಟಿದಾಗಿನಿಂದಲೇ ಮಹಾಪಾಪಗಳನ್ನು ಸೇರಿಸಿಕೊಂಡು ಬಂದಿದ್ದಾಳೆ. ಅಂತಹ ಈ ಪಾಪರೂಪಿಣಿ ಕೈಲಾಸಕ್ಕೆ ಹೇಗೆ ಸೇರಬಲ್ಲಳು? ಪಶುಮಾಂಸವನ್ನು ಆಹಾರವಾಗಿ ತಿಂದು ಇವಳು ವೃದ್ಧೆಯಾದಳು. ಜೀವಹಿಂಸಾ ಪರಾಯಣೆಯಾಗಿ, ಕುಷ್ಠುರೋಗ ಪೀಡಿತಳಾಗಿ, ಪಾಪಿನಿಯಾದ ಈ ಚಂಡಾಲಿ ಕೈಲಾಸಕ್ಕೆ ಹೇಗೆ ಅರ್ಹಳಾದಳು? ಇವಳಿಗೆ ಶಿವಜ್ಞಾನವಿಲ್ಲ. ತಪಸ್ಸು ಎಂದರೇನು ಎಂದು ತಿಳಿಯದು. ದಯೆ ಸತ್ಯಗಳು ಎನ್ನುವುವು ಇವಳಲ್ಲಿ ಇಲ್ಲವೇ ಇಲ್ಲ. ಶಿವಪೂಜೆಯನ್ನು ಎಂದೂ ಮಾಡಲಿಲ್ಲ. ಪಂಚಾಕ್ಷರಿ ಜಪ ಮಾಡಿಲ್ಲ. ದಾನ ಮಾಡಲಿಲ್ಲ. ತೀರ್ಥಗಳ ವಿಷಯ ಏನೂ ತಿಳಿಯದು. ಪರ್ವದಿನಗಳಲ್ಲಿ ಸ್ನಾನಮಾಡಲಿಲ್ಲ. ಯಾವ ವ್ರತವನ್ನೂ ಮಾಡಲಿಲ್ಲ. ಇವಳ ಪಾಪಗಳಿಂದಾಗಿ ಇವಳ ಶರೀರವೆಲ್ಲ ವ್ರಣಗಳಾಗಿ ದುರ್ಗಂಧದಿಂದ ಕೂಡಿದೆ. ವ್ರಣಗಳು ಸೋರುತ್ತಿವೆ. ದುಶ್ಚರಿತೆಯಾದ ಈ ಚಂಡಾಲಿಯ ಮುಖದಲ್ಲಾಗಿರುವ ವ್ರಣಗಳಿಂದ ಇವಳ ಪಾಪಫಲವಾಗಿ ಹುಳುಗಳು ಬೀಳುತ್ತಿವೆ. ಇವಳಿಗೆ ಗಳತ್ಕುಷ್ಠ ಎನ್ನುವ ಮಹಾ ರೋಗ ಪ್ರಾಪ್ತಿಯಾಗಿದೆ. ಚರಾಚರಗಳಲ್ಲೇ ನಿಂದ್ಯವಾದ ಇಂತಹ ಪಾಪಿಯನ್ನು ಶಿವಾಲಯಕ್ಕೆ ಸೇರಿಸಲು ಬಂದಿದ್ದೀರೇಕೆ? ಅದಕ್ಕೆ ಕಾರಣವನ್ನು ತಿಳಿಸಿ.’ ಎಂದು ಆ ಶಿವದೂತರನ್ನು ಪ್ರಶ್ನಿಸಿದೆ.
ಅದಕ್ಕೆ ಆ ಶಿವದೂತರು ಹೇಳಿದರು. “ಈ ಚಂಡಾಲಿಯ ಪೂರ್ವಜನ್ಮ ವೃತ್ತಾಂತವನ್ನು ಹೇಳುತ್ತೇವೆ ಕೇಳಿ. ಇವಳು ಪೂರ್ವದಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದಳು. ಈ ಚಂದ್ರಮುಖಿಯ ಹೆಸರು ಸೌದಾಮಿನಿ. ಆ ಬಾಲಸುಂದರಿಯನ್ನು ಅವಳ ತಂದೆ ಅವಳಿಗೆ ಅನುರೂಪನಾದ ವರನಿಗಾಗಿ ಹುಡುಕಿ ಎಲ್ಲಿಯೂ ತಗುನಾದ ವರನು ದೊರಕದೇ ಇದ್ದುದರಿಂದ, ಚಿಂತಾಪರನಾಗಿ, ವಿವಾಹಕಾಲ ಮೀರಿಹೋಗುವುದು ಎಂಬ ಕಾರಣಕ್ಕಾಗಿ, ಕೊನೆಗೆ ಇವಳನ್ನು ಅತಿಸಾಮಾನ್ಯನಾದ ಒಬ್ಬ ಬ್ರಾಹ್ಮಣನನ್ನು ಕರೆತಂದು ಅವನಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ. ವಿವಾಹವಾದ ನಂತರ ಇವಳು ತನ್ನ ಗಂಡನ ಮನೆಗೆ ಹೋದಳು. ಅನತಿಕಾಲದಲ್ಲೇ ಇವಳ ಗಂಡ ಸತ್ತುಹೋದನು. ದುರದೃಷ್ಟದಿಂದ ಆ ಸುಂದರಿಯಾದ ಬಾಲಕಿ ಬಾಲ್ಯದಲ್ಲೇ ವಿಧವೆಯಾಗಿ ತೌರುಮನೆಗೆ ಹಿಂತಿರುಗಿದಳು. ಪತಿವಿರಹದಿಂದ ಖಿನ್ನಳಾಗಿ, ಕಾಮ ಪೀಡಿತಳಾಗಿದ್ದ ಆ ಸುಂದರ ಯುವತಿಗೆ, ಯುವಕರನ್ನು ಕಂಡಾಗಲೆಲ್ಲಾ ಮನಸ್ಸು ಚಂಚಲವಾಗುತ್ತಿತ್ತು. ಅದನ್ನು ತಡೆಯಲಾರದೆ ಕೊನೆಗೆ ಇವಳು ಕಾಮಾರ್ತೆಯಾಗಿ ರಹಸ್ಯವಾಗಿ ಯುವಕನೊಬ್ಬನನ್ನು ಸೇರಿ ಜಾರಿಣಿಯಾದಳು. ಇಂತಹ ರಹಸ್ಯಗಳು ಬಹಳಕಾಲ ಗುಪ್ತವಾಗಿರಲು ಸಾಧ್ಯವಿಲ್ಲವಲ್ಲವೇ? ಕಾಲಕಳೆದಂತೆ ಇವಳ ಪಾಪ ಪ್ರಕಟಗೊಂಡಿತು. ವಯಸ್ಸಿನಲ್ಲಿದ್ದ ಸುಂದರ ವಿಧವೆ. ವಿಷಯಾನ್ವಿತವಾದ ಮನಸ್ಸಿನಿಂದ ಕೂಡಿ ಚಂಚಲೆಯಾಗಿ ಜಾರಿಣಿಯಾದಳು. ಹಾಗೆ ದುಷ್ಟಾಚಾರಿಯೂ, ವ್ಯಭಿಚಾರಿಣಿಯೂ ಆದ ಇವಳನ್ನು ತಂದೆ ತಾಯಿಗಳು ಮನೆಯಿಂದ ಹೊರಕ್ಕೆ ಹಾಕಿದರು. ಬಂಧುಭಾಂದವರಿಂದಲೂ ಬಹಿಷ್ಕರಿಸಲ್ಪಟ್ಟಳು. ದೂಷಿತಳಾದ ಇವಳನ್ನು ಮನೆಯಿಂದ ಹೊರಕ್ಕೆ ಹಾಕಿ ತಂದೆತಾಯಿಗಳು ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು, ಇವಳ ಸಂಪರ್ಕವನ್ನು ಕಳೆದುಕೊಂಡು, ಇವಳಿಂದುಂಟಾದ ದೋಷದಿಂದ ಮುಕ್ತರಾದರು.
ಬಂಧುಭಾಂದವರಿಂದ ಪರಿತ್ಯಕ್ತಳಾದ ಸೌದಾಮಿನಿ ಸ್ವತಂತ್ರಳಾಗಿ, ಆ ಊರಿನಲ್ಲೆ ಮನೆಮಾಡಿಕೊಂಡು ತನಗಿಷ್ಟಬಂದವರೊಡನೆ ಸುಖವನ್ನನುಭವಿಸುತ್ತಾ, ಜೀವಿಸತೊಡಗಿದಳು. ತನ್ನ ಕುಲಕ್ಕೇ ಶತ್ರುವಾದ ಇವಳು, ಒಬ್ಬ ಬಹುಸುಂದರನಾದ ವೈಶ್ಯನನ್ನು ಮೋಹಿಸಿ ಅವನೊಡನೆ ಗೃಹಿಣಿಯಂತೆ ವಾಸಮಾಡಲಾರಂಭಿಸಿದಳು. ಸ್ತ್ರೀಯರು ಕಾಮದಿಂದ, ಬ್ರಾಹ್ಮಣರು ಹೀನರ ಸೇವೆಯಿಂದ, ರಾಜರು ಬ್ರಾಹ್ಮಣರನ್ನು ದಂಡಿಸುವುದರಿಂದ, ಯತಿಗಳು ಭೋಗಸಂಗ್ರಹದಿಂದ ನಾಶವಾಗುತ್ತಾರೆಯಲ್ಲವೆ? ವೈಶ್ಯ ಯುವಕನೊಡನೆ ಕೂಡಿಯಾಡುತ್ತಿದ್ದ ಇವಳಿಗೆ ಮಕ್ಕಳೂ ಆದರು. ಮಾಂಸಾಹಾರಿಯಾಗಿ, ಮದ್ಯಪಾನಾಸಕ್ತಳಾಗಿ, ವೈಶ್ಯನ ಹೆಂಡತಿಯಾಗಿ ತನ್ನ ಆಯುಷ್ಯವನ್ನು ಕಳೆಯಬೇಕೆಂದುಕೊಂಡಿದ್ದ ಇವಳು, ಒಂದುದಿನ, ಹಸುವಿನ ಕರುವೊಂದನ್ನು ಮೇಕೆಯೆಂದುಕೊಂಡು ಸಾಯಿಸಿ ಅದರ ತಲೆಯನ್ನು ಮುಚ್ಚಿಟ್ಟು, ಮಿಕ್ಕ ಮಾಂಸವನ್ನು ತಿಂದಳು. ಮದ್ಯಪಾನ ಮತ್ತಳಾಗಿ ಅಂತಹ ಅಕಾರ್ಯವನ್ನು ಮಾಡಿ, ಸುಖವಾಗಿ ನಿದ್ರಿಸಿದಳು. ಮರುದಿನ ಬೆಳಗ್ಗೆದ್ದು, ತಾನು ರಾತ್ರಿ ಮಾಡಿದ್ದ ಅಕಾರ್ಯವನ್ನು ಅರಿತು, ಭ್ರಾಂತಳಾಗಿ, ಮನೆಯೊಳಕ್ಕೆ ಬಂದು ಮುಚ್ಚಿಟ್ಟಿದ್ದ ಕರುವಿನ ತಲೆಯನ್ನು ನೋಡಿ ಭಯಪಟ್ಟಳು. ’ಅಯ್ಯೋ! ಅಜ್ಞಾನದಿಂದ, ದುರಾತ್ಮಳಾದ ನಾನು ಎಂತಹ ಪಾಪ ಮಾಡಿದೆ. ಇದು ನನ್ನ ಗಂಡನಿಗೆ ತಿಳಿದರೆ ಅವನು ನನ್ನ ಮೇಲೆ ಕೋಪಗೊಳ್ಳುತ್ತಾನೆ.’ ಎಂಬ ಹೆದರಿಕೆಯಿಂದ, ಆ ಕರುವಿನ ಅಸ್ಥಿಮಾಂಸಗಳನ್ನೂ, ತಲೆಯನ್ನೂ ಹಳ್ಳದೊಳಕ್ಕೆ ಬಿಸುಟು, ಮನೆಗೆ ಬಂದು, ಗಂಡನಿಗೆ ನಿಜವನ್ನು ಮುಚ್ಚಿಟ್ಟು, ಕರುವನ್ನು ಹುಲಿ ತಿಂದುಹಾಕಿತು ಎಂದು ಸುಳ್ಳು ಹೇಳಿದಳು.
ಇಂತಹ ದುರ್ಬುದ್ಧಿಯುಳ್ಳ ಈ ಸೌದಾಮಿನಿ, ಇನ್ನೂ ಅನೇಕ ಪಾಪಗಳನ್ನು ಮಾಡಿ ಮರಣಿಸಿದಳು. ಸತ್ತಮೇಲೆ, ನರಕಕ್ಕೆ ಹೋಗಿ, ಅನೇಕ ದುಸ್ತರವಾದ ಯಾತನೆಗಳನ್ನನುಭವಿಸಿ, ಈ ಜನ್ಮದಲ್ಲಿ ಚಂಡಾಲಿಯಾಗಿ ಜನ್ಮಿಸಿದಳು. ನೋಡಿ ಪರಿಶೀಲಿಸದೆ ಗೋಹತ್ಯೆ ಮಾಡಿದ ಪಾಪದಿಂದ ಇವಳು ನೇತ್ರಹೀನಳಾದಳು. ಉಪಪತಿಯೊಡನೆ ಇದ್ದುದರಿಂದ ಗಳತ್ಕುಷ್ಠುರೋಗ ಪೀಡಿತಳಾದಳು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ಇವಳು, ಬೆಳೆದು ದೊಡ್ಡವಳಾಗುತ್ತಾ ಬಂದಂತೆಲ್ಲ ಇವಳ ವ್ರಣಗಳೂ ದೊಡ್ಡದಾದವು. ದೀನಳಾಗಿ, ಕುಷ್ಠುರೋಗ ಪೀಡಿತಳಾಗಿ, ದುರ್ಗಂಧಪೂರಿತಳಾಗಿದ್ದ ಇವಳನ್ನು ಇವಳ ಸಹೋದರರೂ ಕೈಬಿಟ್ಟರು. ದಿನವೂ ಯಾಚನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ, ಅದು ಸಾಕಾಗದೆ ಹಸಿವು ಬಾಯಾರಿಕೆಗಳಿಂದ ಒದ್ದಾಡುತ್ತಿದ್ದ, ರೋಗಪೀಡಿತಳಾದ ಇವಳು, ಬೆಳೆದು ವೃದ್ಧೆಯಾದಳು. ಹೀಗೆ ತನ್ನ ಪೂರ್ವದುಷ್ಕರ್ಮ ಫಲಗಳನ್ನು ಅನುಭವಿಸುತ್ತಾ, ಇವಳು ದರಿದ್ರಳಾಗಿ, ಉಡಲು ಸರಿಯಾದ ಬಟ್ಟೆಯೂ ಇಲ್ಲದೆ, ದಾರಿಯಲ್ಲಿ ಕಂಡಕಂಡವರನ್ನೆಲ್ಲಾ ಬೇಡುತ್ತಾ ತಿರುಗುತಿದ್ದಳು. ಆದರೂ ಆಕೆಯ ಹಸಿವು ತೀರಲಿಲ್ಲ. ವ್ಯಾಧಿಗ್ರಸ್ತವಾದ ಶರೀರವು, ಸೊರಗಿ, ಹಸಿವು ತಾಳಲಾರದೆ, ರೋಗವು ಅತಿಯಾಗಿ ಭಾದಿಸುತ್ತಿರಲು, ತನ್ನ ಕರ್ಮಗಳನ್ನು ನಿಂದಿಸಿಕೊಳ್ಳುತ್ತಾ ಕಾಲಕಳೆಯುತ್ತಿದ್ದಳು.
ಹೀಗಿರುತ್ತಿರಲು ಒಂದುಸಲ ಮಾಘಮಾಸ ಬಂತು. ಅವಳಿದ್ದ ಊರಿನ ಜನರೆಲ್ಲರು, ಆಬಾಲಸ್ತ್ರೀವೃದ್ಧರಾದಿಯಾಗಿ ಗೋಕರ್ಣಕ್ಕೆ ಹೊರಟಿದ್ದರು. ಶಿವರಾತ್ರಿಗೆ, ಶಿವದರ್ಶನಕ್ಕೆಂದು ನಾನಾ ಕಡೆಗಳಿಂದ ಅನೇಕ ಜನ ಸಮೂಹಗಳು ಸೇರಿ ಹೊರಟಿದ್ದರು. ಇವಳೂ ಅವರ ಜೊತೆಯಲ್ಲಿ ಹೊರಟಳು. ಆ ಜನರಲ್ಲಿ, ಕೆಲವರು ಆನೆಗಳ ಮೇಲೆ ಕುಳಿತು, ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ, ಕೆಲವರು ಪಾದಚಾರಿಗಳಾಗಿ, ಅಲಂಕಾರ ಭೂಷಿತರಾಗಿ, ಹೀಗೆ ಅನೇಕ ರೀತಿಗಳಲ್ಲಿ, ಸಂತೋಷ ಸಂಭ್ರಮಗಳಿಂದ ಎಲ್ಲರೂ ಮಹಾಬಲೇಶ್ವರನ ದರ್ಶನಕ್ಕಾಗಿ ಹೊರಟಿದ್ದರು. ಎಲ್ಲ ವರ್ಗದ ಜನರೂ, ತಮತಮಗೆ ತೋಚಿದಂತೆ ಶಿವಸ್ಮರಣೆ ಮಾಡುತ್ತಾ ಹೊರಟಿದ್ದರು. ಅವರೊಡನೆ ಹೊರಟ ಚಂಡಾಲಿಯೂ, ಶಿವನಾಮೋಚ್ಚರಣೆಯೆಂಬ ಪುಣ್ಯದಿಂದ ಗೋಕರ್ಣ ಕ್ಷೇತ್ರವನ್ನು ಸೇರುವಂತಾಯಿತು. ಗೋಕರ್ಣವನ್ನು ಸೇರಿ ಅಲ್ಲಿ ಭಿಕ್ಷೆ ಮಾಡುತ್ತಿದ್ದಳು. “ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಂದ ಪೀಡಿಸಲ್ಪಡುತ್ತಿರುವ ಈ ಪಾಪಿಗೆ ಸ್ವಲ್ಪ ಅನ್ನವನ್ನು ನೀಡಿ. ರೋಗಪೀಡಿತಳಾಗಿ, ತಿಂಡಿ ಊಟಗಳಿಲ್ಲದೆ, ಬಟ್ಟೆಯೂ ಇಲ್ಲದೆ ಇರುವ ನನ್ನನ್ನು ಛಳಿ ಬಾಧಿಸುತ್ತಿದೆ. ಈ ಕುರುಡಿಯ ಹಸಿವನ್ನು ಹೋಗಲಾಡಿಸಿ. ಸಜ್ಜನರು ಧರ್ಮ ಮಾಡಿ. ಬಹಳ ದಿನಗಳಿಂದ ಸಹಿಸುತ್ತಿರುವ ಕ್ಷುಧ್ಭಾಧೆಯಿಂದ ನನ್ನನ್ನು ಮುಕ್ತಗೊಳಿಸಿ. ನಾನು ನನ್ನ ಹಿಂದಿನ ಜನ್ಮಗಳಲ್ಲಿ ಪುಣ್ಯ ಮಾಡಿಲ್ಲದಿರುವುದರಿಂದಲೇ ಇಷ್ಟು ಕಷ್ಟಪಡುತ್ತಿದ್ದೇನೆ. ಅಯ್ಯಾ ಸಜ್ಜನರೇ ದಯವಿಟ್ಟು ಧರ್ಮ ಮಾಡಿ.” ಎಂದು ಅನೇಕ ರೀತಿಗಳಲ್ಲಿ, ದೀನಳಾಗಿ, ಬೇಡಿಕೊಳ್ಳುತ್ತಾ ಆ ಜನರ ಹಿಂದೆ ಓಡಾಡುತ್ತಿದ್ದಳು.
ಅಂದು ಶಿವರಾತ್ರಿಯಾದದ್ದರಿಂದ ಯಾರೂ ಅವಳಿಗೆ ಅನ್ನ ನೀಡಲಿಲ್ಲ. ಕೆಲವರು ನಗುತ್ತಾ, “ಇಂದು ಶಿವರಾತ್ರಿ. ಉಪವಾಸವಾದದ್ದರಿಂದ ಅನ್ನವಿಲ್ಲ.” ಎಂದು ತಮ್ಮ ಕೈಯಲ್ಲಿದ್ದ ಬಿಲ್ವದಳಗಳನ್ನು ಅವಳ ಕೈಯಲ್ಲಿ ಹಾಕಿದರು. ಅವಳು ಅದನ್ನು ಮೂಸಿನೋಡಿ ಅದು ತಿನ್ನುವುದಲ್ಲ ಎಂಬುದನ್ನು ತಿಳಿದು ಕೋಪದಿಂದ ಬಿಸುಟಳು. ಹಾಗೆ ಅವಳು ಬಿಸಾಡಿದ ಬಿಲ್ವದಳ ಶಿವಲಿಂಗದ ತಲೆಯಮೇಲೆ ಬಿತ್ತು. ದೈವಯೋಗದಿಂದ ಅದು ಅವಳಿಗೆ ಶಿವಪೂಜೆಯ ಪುಣ್ಯವನ್ನು ತಂದಿತು. ಯಾರೂ ಅನ್ನ ಕೊಡಲಿಲ್ಲವಾಗಿ ಅವಳಿಗೆ ಉಪವಾಸವಾಯಿತು. ಅದರಿಂದ ಅವಳಿಗೆ ಉಪವಾಸ ಮಾಡಿದ ಪುಣ್ಯ ಲಭಿಸಿತು. ಹಸಿವಿನಿಂದಾಗಿ ಅವಳಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಅದರಿಂದ ಅವಳು ಜಾಗರಣೆ ಮಾಡಿದಂತಾಗಿ ಅವಳಿಗೆ ಜಾಗರಣೆಮಾಡಿದ ಪುಣ್ಯ ಲಭಿಸಿತು. ಆ ರೀತಿಯಲ್ಲಿ, ಅವಳಿಗೆ ಅರಿವಿಲ್ಲದೆಯೇ, ಅವಳ ವ್ರತ ಸಾಂಗವಾಗಿ ಮುಗಿದಂತಾಯಿತು. ಅವಳ ಪ್ರಯತ್ನವಿಲ್ಲದೆಯೇ ಅವಳಿಗೆ ವ್ರತ ಪುಣ್ಯವು ಲಭಿಸಿ, ಶಿವನು ಸಂತುಷ್ಟನಾಗಿ, ಅವಳಿಗೆ ಭವಾರ್ಣವ ತಾರಕನಾದನು. ಈ ವಿಧದಲ್ಲಿ, ರೋಗೋಪವಾಸಗಳಿಂದ ಶ್ರಾಂತಳಾಗುವ ಮಾರ್ಗವನ್ನರಿಯದ, ಹೆಜ್ಜೆ ಇಡಲೂ ಶಕ್ತಿಯಿಲ್ಲದ, ಈ ಚಂಡಾಲಿಗೆ ಮಹಾವ್ರತಫಲ ದೊರೆತು, ಪೂರ್ವ ಕರ್ಮಗಳಿಂದ ಮುಕ್ತಿ ದೊರೆತು, ಈ ಗಿಡದ ನೆರಳಿಗೆ ಬಂದು ಪ್ರಾಣ ಬಿಟ್ಟಳು. ಅದರಿಂದ ಶಿವನ ಆದೇಶದಂತೆ ನಾವು ಇಲ್ಲಿಗೆ ಬಂದೆವು. ಶಿವರಾತ್ರಿಯ ಬಿಲ್ವಾರ್ಚನೆ, ಉಪವಾಸ ಜಾಗರಣೆಗಳಿಂದ ದೊರೆತ ಪುಣ್ಯದಿಂದ ಇವಳ ಪಾಪಗಳೆಲ್ಲಾ ನಾಶವಾದವು. ನೂರು ಜನ್ಮಗಳಲ್ಲಿ ಸಂಪಾದಿಸಿದ್ದ ಪಾಪಗಳೆಲ್ಲಾ ಕ್ಷಯವಾಗಲು, ಇವಳು ಶಿವನಿಗೆ ಪ್ರೀತಿಪಾತ್ರಳಾದಳು.” ಎಂದು ಹೇಳಿ ಆ ಶಿವದೂತರು ಸೌದಾಮಿನಿಯ ಮೇಲೆ ಅಮೃತವನ್ನು ಚುಮುಕಿಸಿದರು. ತಕ್ಷಣವೇ ಅವಳು ದಿವ್ಯದೇಹಧಾರಿಯಾಗಿ, ಅವರ ಹಿಂದೆ ವಿಮಾನದಲ್ಲಿ ಹೊರಟಳು. ” ಎಂದು ಗೌತಮ ಮುನಿಯು ಕಥೆಯನ್ನು ಹೇಳಿ, ” ಹೇ ರಾಜ, ಇದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಗೋಕರ್ಣ ಮಾಹಾತ್ಮ್ಯೆ ಅಷ್ಟು ದೊಡ್ಡದು. ಲೋಕಪಾವನವಾದದ್ದು. ಜ್ಞಾನ ಹೀನಳಾದರೂ ಚಂಡಾಲಿಗೆ ಮುಕ್ತಿ ದೊರಕಿತು. ಅದರಿಂದ, ರಾಜ, ನೀನು ಅಲ್ಲಿಗೆ ಹೋಗು. ಅಲ್ಲಿ ನೀನು ಶುದ್ಧನಾಗಿ, ಇಹಪರಗಳೆರಡರಲ್ಲೂ ಒಳ್ಳೆಯದನ್ನು ಪಡೆಯಬಲ್ಲೆ.” ಎಂದನು.
ಹೀಗೆ ಗೌತಮ ಮುನಿಯು ಹೇಳಲಾಗಿ ಆ ರಾಜನು ತಡಮಾಡದೆ ಗೋಕರ್ಣ ಕ್ಷೇತ್ರವನ್ನು ಸೇರಿ, ಅಲ್ಲಿ ಮಹಾಬಲೇಶ್ವರನ ಪೂಜಾರ್ಚನೆಗಳನ್ನು ಮಾಡಿ, ಪಾಪ ವಿಮುಕ್ತನಾದನು. ಆದ್ದರಿಂದ ನಾಮಧಾರಕ, ಗೋಕರ್ಣ ಕ್ಷೇತ್ರವು, ಪವಿತ್ರವಾದದ್ದರಿಂದಲೇ, ಶ್ರೀಪಾದ ಗುರುವು ಅಲ್ಲಿ ನಿಂತರು. ಆ ಕ್ಷೇತ್ರದಲ್ಲಿ, ತಿಳಿಯದೆ ನಿವಾಸ ಮಾಡಿದ ದುರ್ಮಾರ್ಗಿಗಳಿಗೂ ಸತ್ಫಲವು ದೊರೆಯುವುದು. ಇನ್ನು
ವಿದ್ವಾಂಸರಿಗೆ/ಜ್ಞಾನಿಗಳಿಗೆ ದೊರೆಯುವ ಫಲವನ್ನು ಕುರಿತು ಹೇಳಬೇಕಾದ್ದೇನಿದೆ?
ಇಲ್ಲಿಗೆ ಏಳನೆಯ ಅಧ್ಯಾಯ ಮುಗಿಯಿತು.
[02/01 8:23 AM] S. Bhargav: ||ಶ್ರೀ ಗುರು ಚರಿತ್ರೆ – ಎಂಟನೆಯ ಅಧ್ಯಾಯ||
ಸಿದ್ಧರು ಹೇಳಿದ ಗೋಕರ್ಣ ಕ್ಷೇತ್ರದ ಮಹಿಮೆಯನ್ನು ಕೇಳಿದ ನಾಮಧಾರಕ, “ಸ್ವಾಮಿ, ಶ್ರೀಪಾದರು ಗೋಕರ್ಣದಲ್ಲಿ ಎಷ್ಟುಕಾಲ ಇದ್ದರು? ಅವರ ಚರಿತ್ರೆಯನ್ನು ಕೇಳುವುದು ಆನಂದಕರವಾಗಿದೆ.” ಎಂದು ಕೇಳಿದನು. ಆಗ ಸಿದ್ಧರು ಮತ್ತೆ ಹೇಳಿದರು.
ಗೋಕರ್ಣ ಕ್ಷೇತ್ರದಲ್ಲಿ ಶ್ರೀಪಾದ ಶ್ರೀವಲ್ಲಭರು ಮೂರು ವರ್ಷಗಳಿದ್ದರು. ಮತ್ತೆ ಲೋಕಾನುಗ್ರಹಕ್ಕಾಗಿ ಅವರು ಅಲ್ಲಿಂದ ಹೊರಟು ಶ್ರೀಶೈಲಕ್ಷೇತ್ರವನ್ನು ಸೇರಿದರು. ಶ್ರೀಪಾದರ ಚರಣ ದರ್ಶನದಿಂದ ಜನಸಾಮಾನ್ಯರಿಗೆ ಸರ್ವತೀರ್ಥ ದರ್ಶನ ಫಲ ದೊರೆಯುತ್ತದೆ. “ಚರಣಂ ಪವಿತ್ರಂ ವಿತತಂ” ಎಂದು ಶೃತಿ ಅವರ ಚರಣ ಮಹಿಮೆಯನ್ನು ವಿವರಿಸುತ್ತದೆ. ಅವರ ಪಾದಗಳಲ್ಲಿ ಸರ್ವ ತೀರ್ಥಗಳೂ ನೆಲೆಸಿವೆ. ಮಹಾತ್ಮರು ಪರ್ಯಟನೆಮಾಡುವುದು ಲೋಕಾನುಗ್ರಹಕ್ಕಾಗಿಯೇ!
ಶ್ರೀಶೈಲ ಪರ್ವತವನ್ನು ಸೇರಿದ ಶ್ರೀಪಾದರು, ಅಲ್ಲಿ ನಾಲ್ಕು ತಿಂಗಳಿದ್ದು, ಭಕ್ತರಿಗೆ ತಮ್ಮ ದರ್ಶನಭಾಗ್ಯವನ್ನೊದಗಿಸಿ, ನಿವೃತ್ತಿಸಂಗಮದಲ್ಲಿ ಸ್ನಾನವಾಚರಿಸಿ ಕುರುಪುರವನ್ನು ಸೇರಿದರು. ಅಲ್ಲಿ ಕೃಷ್ಣಾನದಿ ವೇಣಿನದಿಯೊಡನೆ ಕಲೆತು ಹರಿಯುತ್ತದೆ. ಭೂತಲದಲ್ಲಿ ಅದರಂತಹ ಇನ್ನೊಂದು ಮಹಿಮಾನ್ವಿತ ಪ್ರದೇಶ ದುರ್ಲಭ. ಆ ಮಹಿಮೆಯನ್ನು ವರ್ಣಿಸಬೇಕೆಂದರೆ ಗ್ರಂಥಬಾಹುಳ್ಯವಾಗುತ್ತದೆ. ಅದರಿಂದ ಸ್ವಲ್ಪವಾಗಿ ತಿಳಿಸುತ್ತೇನೆ. ಭೂಮಿಯಮೇಲೆ ಶ್ರೀಪಾದಶ್ರೀವಲ್ಲಭರಿಗೆ ಅಧಿಷ್ಠಾನ ಸ್ಥಾನವಾಗಿ ಖ್ಯಾತಿಗೊಂಡ ’ಕುರುಗಡ್ಡ’ ಎನ್ನುವ ಪ್ರದೇಶ, ಈಗಲೂ ಇದೆ. ಅಲ್ಲಿ ಶ್ರೀಪಾದರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ ಅರ್ಚಿಸಿ ಭಜಿಸಿದವರು ಪುತ್ರಪೌತ್ರಾದಿಯಾದ ಸಕಲ ಸಂಪತ್ತುಗಳನ್ನು ಪಡೆಯುವರು. ಶ್ರೀಪಾದರ ಮಹಿಮೆ ಅಶೇಷವಾದದ್ದರಿಂದ ಅದನ್ನು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಶ್ರೀಪಾದಶ್ರೀವಲ್ಲಭರು ಕುರುಪುರದಲ್ಲಿ ರಹಸ್ಯವಾಗಿದ್ದುಕೊಂಡು ತಮ್ಮ ಎರಡನೆಯ ಅವತಾರವೆತ್ತಲು ಉದ್ಯುಕ್ತರಾದರು.
ಕುರುಗಡ್ದ ಗ್ರಾಮದಲ್ಲಿ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣನೊಬ್ಬನಿದ್ದನು. ಅವನ ಹೆಂಡತಿ ಅಂಬಿಕ. ಪತಿಯೇ ದೈವವೆಂದು ತಿಳಿದ, ಆ ಸದಾಚಾರ ತತ್ಪರಳಾದ ಪತಿವ್ರತೆ, ಸುಶೀಲೆ. ಪತಿಸೇವಾಪರಾಯಣಳು. ಆಕೆಗೆ ಅನೇಕ ಮಕ್ಕಳಾಗಿ ಎಲ್ಲರೂ ಅತ್ಯಲ್ಪ ವಯಸ್ಸಿನಲ್ಲೇ ಮರಣಿಸಿದರು. ಆಕೆ ಅನೇಕ ತೀರ್ಥಗಳನ್ನು ದರ್ಶಿಸುತ್ತಾ, ಅಲ್ಲಿನ ದೇವರುಗಳ ಸೇವೆಮಾಡುತ್ತಾ, ಕೊನೆಗೆ ದೈವ ಕೃಪೆಯಿಂದ ಒಬ್ಬ ಮಗನನ್ನು ಪಡೆದಳು. ದುರದೃಷ್ಟದಿಂದ ಅವನು ಮಂದಮತಿಯಾದನು. ಅನೇಕ ಮಕ್ಕಳನ್ನು ಹೆತ್ತು, ಎಲ್ಲರನ್ನೂ ಕಳೆದುಕೊಂಡು, ಉಳಿದವನು ಇವನೊಬ್ಬನೇ ಎಂಬ ಅತಿಶಯ ಪ್ರೀತಿಯಿಂದ ಅವನನ್ನು ಬೆಳೆಸಿದಳು. ಅವನು ಬೆಳೆದು ಉಪನಯನದ ವಯಸ್ಸು ಬಂತು. ತಂದೆ ಅವನಿಗೆ ಉಪನಯನ ಮಾಡಿದರೂ, ಮೂಢನಾಗಿದ್ದುದರಿಂದ ಅವನಿಗೆ ಉಪದೇಶಮಾಡಿದ ಯಾವ ಮಂತ್ರವೂ ಕೈಗೂಡಲಿಲ್ಲ. ಅದರಿಂದ ಚಿಂತಾಕುಲನಾಗಿ, ಶ್ರೋತ್ರೀಯನಾದ ಅವನ ತಂದೆ ಬಹು ದುಃಖಿತನಾದನು. “ದೈವಾರಾಧನೆಯಿಂದ ಹುಟ್ಟಿದ ಇವನು ಹೀಗೆ ಮತಿಹೀನನಾಗಿ ಕುಲನಾಶಕನಾದನು. ಹಿಂದೆ ಮಾಡಿದ ಕರ್ಮಫಲವು ತಪ್ಪುವುದಿಲ್ಲವಲ್ಲ!” ಎಂದು ಯೋಚಿಸುತ್ತಾ, ಆ ಬ್ರಾಹ್ಮಣ ತನ್ನ ಮಗನನ್ನು ಹೊಡೆಯುತ್ತಿದ್ದನು. ಹಾಗೆ ಹೊಡೆಯುತ್ತಿದ್ದ ಗಂಡನನ್ನು, ದುಃಖಿತಳಾದ ಅಂಬಿಕ ಒಂದುಸಲ ತಡೆದು, “ಸ್ವಾಮಿ, ಅವನನ್ನು ಹೊಡೆಯಬೇಡ. ದಯೆಯಿಂದ ಕಾಣು. ಮಹಾಕಷ್ಟಗಳನ್ನನುಭವಿಸಿದ ನಮಗೆ ಕೊನೆಗೆ ಉಳಿದವನು ಈ ಮಗನೊಬ್ಬನೇ! ಅವನಿಗೆ ವಿದ್ಯೆ ಬರುವುದಿಲ್ಲ. ಹುಟ್ಟಿಸಿದ ಆ ದೈವವೇ ಇವನನ್ನು ಕಾಪಾಡುವುದು. ಅವನ ಹಿಂದಿನ ಕರ್ಮಗಳನ್ನು ನಾವು ಹೇಗೆ ತಪ್ಪಿಸಬಲ್ಲೆವು? ಇಷ್ಟಾದರೂ ನೀನು ಅವನನ್ನು ಹೊಡೆದರೆ ನಾನು ನಿನ್ನ ಮುಂದೆಯೇ ಪ್ರಾಣಕಳೆದುಕೊಳ್ಳುತ್ತೇನೆ” ಎಂದು ನಿಶ್ಚಿತವಾಗಿ ಹೇಳಿದಳು. ಅವಳ ಮಾತುಗಳನ್ನು ಕೇಳಿದ ಆ ಬ್ರಾಹ್ಮಣ, ’ನನ್ನ ಅದೃಷ್ಟವೇ ಹೀನವಾದರೆ ನಾನಾದರೂ ಮಾಡುವುದೇನು? ಆದದ್ದಾಗಲಿ’ ಎಂದು ಉದಾಸೀನನಾಗಿ ಸುಮ್ಮನಾದನು.
ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣ, ಆ ದುಃಖದಿಂದಲೇ ಮರಣಿಸಿದನು. ವಿಧವೆಯಾದ ಅಂಬಿಕ ತನ್ನ ಮೂರ್ಖ ಮಗನೊಡನೆ ದುಃಖದಿಂದ ಜೀವಿಸುತ್ತಿದ್ದಳು. ವಿವಾಹವಯಸ್ಕನಾದರೂ ಆ ಮತಿಹೀನನಿಗೆ ಯಾರೂ ಹೆಣ್ಣು ಕೊಡದೆ, “ತಾಯಿ ತಂದ ಭಿಕ್ಷೆ ತಿಂದು ಬದುಕುತ್ತಿದ್ದಾನೆ” ಎಂದು ಹೀಯಾಳಿಸುತ್ತಿದ್ದರು. ಕೆಲವರು ಅವನನ್ನು, ” ಮೂರ್ಖ ಶಿಖಾಮಣಿ, ತಲೆಯಮೇಲೆ ಮಡಕೆಯನ್ನಿಟ್ಟುಕೊಂಡು ಮನೆಗಳಿಗೆ ನದಿಯಿಂದ ನೀರು ತಂದುಹಾಕು. ಕಲ್ಲಿನಂತೆ ನಿನ್ನ ಜನ್ಮವೂ ವ್ಯರ್ಥ. ಕುಲಕಂಟಕ. ನಿನ್ನ ಜನ್ಮದಿಂದ ಕುಲಕ್ಕೇ ಕಲಂಕ ತಂದೆ. ನಿನ್ನ ತಂದೆ ಶಾಸ್ತ್ರಜ್ಞನಾಗಿ, ಸದಾಚಾರ ಪ್ರವೃತ್ತನಾಗಿ ಪ್ರಸಿದ್ಧಿಯಾಗಿದ್ದವನು. ನಿನ್ನ ಹುಟ್ಟಿನಿಂದ ಅವನು ಕಲಂಕಿತನಾದನು. ನೀನು ನಿನ್ನ ತಾಯಿ ಭಿಕ್ಷೆ ಬೇಡಿ ತಂದ ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀಯೆ. ನಾಚಿಕೆಯಾಗುವುದಿಲ್ಲವೇ? ನಿನ್ನಿಂದಾಗಿ ನಿನ್ನ ಪಿತೃದೇವತೆಗಳೂ ಅಧೋಗತಿಗೆ ಹೋಗಿದ್ದಾರೆ. ಪಶುಪ್ರಾಯನಾದ ನಿನಗೆ ಈ ವ್ಯರ್ಥಜನ್ಮವೇತಕ್ಕೆ? ಹೋಗಿ ನದಿಯಲ್ಲಿ ಮುಳುಗಿ ಸಾಯಬಾರದೇ? ” ಎಂದು ಅನೇಕ ರೀತಿಗಳಲ್ಲಿ ಅವನನ್ನು ನಿಂದಿಸುತ್ತಿದ್ದರು.
ಜನರ ಮಾತುಗಳನ್ನು ಕೇಳಿದ ಅ ಹುಡುಗ ಬಹು ದುಃಖಪಟ್ಟು, “ಅಮ್ಮ, ಎಲ್ಲರೂ ನನ್ನನ್ನು ಮೂರ್ಖ, ಮೂಢ ಎಂದು ಹೀಯಾಳಿಸುತ್ತಿದ್ದಾರೆ. ಇನ್ನು ನಾನು ಅಂತಹ ಮಾತುಗಳನ್ನು ಕೇಳಲಾರೆ. ನನ್ನನ್ನು ಪೋಷಿಸಲು ನೀನು ಕಷ್ಟಪಡುತ್ತಿದ್ದೀಯೆ. ಇಂತಹ ಈ ಜನ್ಮದಿಂದ ಪ್ರಯೋಜನವಾದರೂ ಏನು? ಅದರಿಂದ ನಾನು ಪ್ರಾಣ ಬಿಡಲು ನಿರ್ಧರಿಸಿ ಹೋಗುತ್ತಿದ್ದೇನೆ.” ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಅಂಬಿಕ, ಅತಿದುಃಖಿತಳಾಗಿ, ಕಣ್ಣೀರು ಕೋಡಿ ಹರಿಸುತ್ತಾ, ಅವನ ಜೊತೆಯಲ್ಲಿಯೇ ತಾನೂ ಕೃಷ್ಣಾ ನದಿಯಲ್ಲಿ ಮುಳುಗಿ ಸಾಯಲು ಹೊರಟಳು. ಅವರು ನದಿಯ ತೀರಕ್ಕೆ ಬಂದಾಗ, ಅಲ್ಲಿಗೆ ಸರ್ವಾಪತ್ತುಗಳನ್ನು ಹರಿಸುವ, ಸ್ನಾನಕ್ಕೆಂದು ಬಂದ, ಶ್ರೀಪಾದ ಶ್ರೀವಲ್ಲಭರನ್ನು ಕಂಡರು. ಆ ತಾಯಿ, ಮಗ ಇಬ್ಬರೂ ಶ್ರೀಪಾದರನ್ನು ಕಂಡು ಅವರ ಚರಣಗಳಿಗೆ ನಮಸ್ಕರಿಸಿ, “ನಾವು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮ ಅನುಜ್ಞೆ ಕೊಡಿ. ಆತ್ಮಹತ್ಯೆ ಎನ್ನುವುದು ಮಹಾಪಾಪವಾದದ್ದು. ನಿಮ್ಮ ಅಪ್ಪಣೆ ಬೇಡುತ್ತಿದ್ದೇವೆ. ಅದರಿಂದ ನಮಗೆ ಸದ್ಗತಿಯಾಗುವುದು” ಎಂದು ಬೇಡಿಕೊಂಡರು.
ದಯಾರ್ದ್ರಹೃದಯರಾದ ಶ್ರೀಪಾದರು, ಅವರ ಪ್ರಾರ್ಥನೆಯನ್ನು ಆಲಿಸಿ, ” ನಿಮಗೆ ಪ್ರಾಣತ್ಯಾಗ ಮಾಡುವಂತಹ ಆಪತ್ತೇನು ಬಂದಿದೆ?” ಎಂದು ಕೇಳಲು, ಆ ಬ್ರಾಹ್ಮಣ ಸ್ತ್ರೀ, ತಮಗೆ ಉಂಟಾಗಿರುವ ದುಃಖವನ್ನೆಲ್ಲಾ ಅವರೊಡನೆ ಹೇಳಿಕೊಂಡು, “ಹೇ ಭಕ್ತವತ್ಸಲ, ನಮ್ಮನ್ನು ಈ ಕಷ್ಟದಿಂದ ಪಾರುಮಾಡು. ಅನೇಕ ತೀರ್ಥಯಾತ್ರೆಗಳನ್ನೂ, ಉಪವಾಸ ವ್ರತಗಳನ್ನೂ, ದೇವತಾರ್ಚನೆಗಳನ್ನೂ ಮಾಡಿದ ಮೇಲೆ ಹುಟ್ಟಿದ ಈ ಮಗನೊಬ್ಬನು ಬದುಕುಳಿದ. ಆದರೆ ಇವನು ಮಂದಮತಿಯಾಗಿ ಜನರ ನಿಂದೆಗೆ ಗುರಿಯಾಗಿದ್ದಾನೆ. ನನ್ನ ಗಂಡ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣೋತ್ತಮನಾಗಿದ್ದವನು. ಆದರೆ ನಮಗೆ ಇಂತಹ ಮೂರ್ಖ ಮಗನಾಗಿ ಹುಟ್ಟಿದ. ಹೇ ಸ್ವಾಮಿ, ಇಂತಹ ಮಗ ಜನ್ಮಜನ್ಮಾಂತರಗಳಲ್ಲೂ ಬೇಡ. ಹಾಗಾಗುವಂತೆ ಏನಾದರೂ ಉಪಾಯವನ್ನು ಸೂಚಿಸು. ಹೇ ದಯಾಸಮುದ್ರ. ದೈನ್ಯಹರ. ನಿಮ್ಮ ಚರಣಗಳಲ್ಲಿ ಬಿದ್ದಿದ್ದೇನೆ. ನನ್ನನ್ನು ಅನುಗ್ರಹಿಸು. ನನ್ನ ಸೌಭಾಗ್ಯದಿಂದಲೇ ನಿಮ್ಮ ದರ್ಶನವಾಯಿತು. ಶರಣಾಗತರನ್ನು ನಿಮ್ಮ ಚರಣಗಳೇ ರಕ್ಷಿಸುತ್ತವೆ. ಈ ಜನ್ಮದಲ್ಲಿ ಹುಟ್ಟಿ ನಾನು ಬಹು ಕಷ್ಟಗಳನ್ನು ಅನುಭವಿಸಿದೆ. ಈ ಮೂರ್ಖನಿಂದ ನನ್ನ ಕಷ್ಟಗಳು ಇನ್ನೂ ಹೆಚ್ಚಿವೆ. ಅಜಾಗಳಸ್ತನನಂತೆ ಇವನು ಇನ್ನೂ ಬದುಕಿದ್ದಾನೆ. ಇವನ ಜನ್ಮ ವ್ಯರ್ಥ. ಗುರುವೇ ನನ್ನ ಬೇಡಿಕೆಯನ್ನು ಕೇಳು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನಂತಹ ಪುತ್ರ ಹುಟ್ಟುವಂತೆ ಆಶೀರ್ವದಿಸು. ಎಲ್ಲರಿಂದ ಪಾದಾಭಿವಂದನೆಗಳನ್ನು ಪಡೆಯುವಂತಹ ಪುತ್ರನಾಗಲೆಂದು ನನ್ನನ್ನು ಹರಸು” ಎಂದು ಆರ್ತಳಾಗಿ ಪ್ರಾರ್ಥಿಸುತ್ತಾ, ಶ್ರೀಪಾದರ ಚರಣಗಳಲ್ಲಿ ಬಿದ್ದಳು. “ಹೇ ಕರುಣಾಸಿಂಧು, ಮುಂದಿನ ಜನ್ಮದಲ್ಲಿ ನನಗಾಗುವ ಪುತ್ರನಿಂದ ನಮಗೆ ಜನ್ಮರಾಹಿತ್ಯವೂ, ಅವನ ಪಿತೃದೇವತೆಗಳಿಗೆ ಶಾಶ್ವತ ಸ್ವರ್ಗಲೋಕ ವಾಸವೂ, ಆಗುವಂತೆ ಅನುಗ್ರಹಿಸು” ಎಂದು ಮತ್ತೆ ಮತ್ತೆ ಬೇಡಿಕೊಂಡಳು. “ಯುವಕನಾಗಿರುವಾಗಲೇ ಅವನು ಬ್ರಹ್ಮಜ್ಞಾನಿಯಾಗಿ, ನಿಮ್ಮಂತೆ ಸರ್ವತ್ರ ಪೂಜನೀಯನಾಗುವ ಪುತ್ರನನ್ನು ಪ್ರಸಾದಿಸು” ಎಂದು ಇನ್ನೊಮ್ಮೆ ಕೇಳಿಕೊಂಡಳು. ಆ ಸ್ತ್ರೀಯ ಮಾತನ್ನು ಕೇಳಿದ ಶ್ರೀಪಾದರು, “ಈಶ್ವರಾರಾಧನೆ ಮಾಡು. ಶ್ರೀಹರಿಯಂತಹ ಪುತ್ರ ನಿನಗೆ ಜನಿಸುತ್ತಾನೆ. ಹಿಂದೆ ಗೋಪಿಕಾವ್ರತ ಮಾಡಿದ್ದರಿಂದಲೇ ಗೋಪಗೃಹದಲ್ಲಿ ಕೃಷ್ಣನು ದಯಾಕರಿಸಿದನು. ಹಾಗೆ ನೀನು ಶಿವಾರಾಧನೆ ಮಾಡುವುದರಿಂದ ನಿನಗೆ ಸುಪುತ್ರನು ಜನಿಸುತ್ತಾನೆ. ನಿನ್ನ ಮುಂದಿನ ಜನ್ಮದಲ್ಲಿ ಶಿವಪ್ರಸಾದದಿಂದ ಪ್ರಾಜ್ಞನಾದ ಪುತ್ರನಾಗುತ್ತಾನೆ” ಎಂದು ಅಭಯಕೊಟ್ಟರು.
ಶ್ರೀಪಾದರ ಆದೇಶವನ್ನು ಕೇಳಿದ ಆ ಬ್ರಾಹ್ಮಣ ಸ್ತ್ರೀ, “ಸ್ವಾಮಿ, ಗೋಪಿಕ ಯಾವ ವ್ರತವನ್ನು ಆಚರಿಸಿದಳು. ಚಂದ್ರಮೌಳಿಯನ್ನು ಹೇಗೆ ಪೂಜಿಸಿದಳು ಎಂಬುದನ್ನು ವಿವರಿಸಿ ಹೇಳಿ. ಅದರಂತೆ ನಾನು ವ್ರತಾಚರಣೆ ಮಾಡುತ್ತೇನೆ” ಎಂದು ಪ್ರಾರ್ಥಿಸಿದಳು. ಅದಕ್ಕೆ ಆ ಕೃಪಾಮೂರ್ತಿ ಶ್ರೀಪಾದರು, “ಶನಿವಾರದಂದು ಭಕ್ತಿಪುರಸ್ಸರವಾಗಿಮಾಡುತ್ತಿದ್ದ ಪೂಜೆಯನ್ನು ಗೋಪಿಕೆ ವೀಕ್ಷಿಸಿದಳು” ಎಂದು ಸ್ಕಾಂದಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವ ಸಗುಣರೂಪನಾದ ಶಿವನ ಕಥೆಯನ್ನು ಅಂಬಿಕೆಗೆ ಹೇಳಿದರು. ಶ್ರೀಗುರುವಿನ ಮಾತುಗಳನ್ನು ಕೇಳಿ ಸಂತುಷ್ಟಳಾದ ಅಂಬಿಕ ಗುರುಚರಣಗಳಿಗೆ ನಮಸ್ಕರಿಸಿ, “ಹೇ ಗುರುವೇ, ರಮ್ಯವಾದ ಕಥೆಯನ್ನು ಹೇಳಿದಿರಿ. ಪ್ರದೋಷಸಮಯದಲ್ಲಿ ಈಶ್ವರಾರ್ಚನೆಯನ್ನು ನೋಡಿದ ಮಾತ್ರಕ್ಕೇ ಕೃಷ್ಣನನ್ನು ಮಗನಾಗಿ ಪಡೆದ ಗೋಪಿಯ ಜನ್ಮ ಧನ್ಯ. ಅಂತಹ ಶಿವಪೂಜಾ ವಿಶೇಷಗಳನ್ನು ತಿಳಿಸಿ” ಎಂದು ಮತ್ತೆ ಕೇಳಿಕೊಂಡಳು. ಶ್ರೀಪಾದರು ಹೇಳಿದರು. “ಅದೂ ಸ್ಕಾಂದಪುರಾಣದಲ್ಲಿರುವ ಕಥೆಯೇ! ಉಜ್ಜಯಿನಿ ಎಂಬ ಸುಂದರವಾದ ನಗರವೊಂದಿತ್ತು. ಅಲ್ಲಿ ಬಹು ಧಾರ್ಮಿಕನಾದ ಚಿತ್ರಸೇನನೆಂಬುವ ರಾಜನಿದ್ದನು. ಅವನಿಗೆ ಮಣಿಭದ್ರನೆಂಬ, ಈಶ್ವರ ಭಕ್ತಿಸಂಪನ್ನನಾದ ಮಿತ್ರನಿದ್ದನು. ಮಣಿಭದ್ರ ಈಶ್ವರ ಪೂಜಾಪರಾಯಣನು. ಶಿವನನ್ನು ಪ್ರಸನ್ನಮಾಡಿಕೊಂಡ ಅವನಿಗೆ ಈಶ್ವರ, ಚಿಂತಾಮಣಿಯೆಂಬ ರತ್ನವೊಂದನ್ನು ಕೊಟ್ಟಿದ್ದನು. ಆ ಮಣಿ, ಕೋಟಿಸೂರ್ಯಪ್ರಭೆಯಿಂದ ಮೆರೆಯುತ್ತಿತ್ತು. ಮಣಿಭದ್ರನು ಅದನ್ನು ಸದಾಕಾಲ ಧರಿಸಿರುತ್ತಿದ್ದನು. ಅ ಮಣಿಯ ತೇಜಸ್ಸು ತಗುಲಿದ ಲೋಹಗಳು ಚಿನ್ನವಾಗಿ ಪರಿವರ್ತಿತವಾಗುತ್ತಿದ್ದವು. ಆ ಮಣಿಯನ್ನು ಹಿಡಿದು ಸ್ಮರಿಸಿದ ಮಾತ್ರಕ್ಕೇ ಕೋರಿದವರಿಗೆ ಕೋರಿದ ವಸ್ತು ದೊರೆಯುತ್ತಿತ್ತು. ಆ ಮಣಿಯ ಖ್ಯಾತಿಯನ್ನು ಕೇಳಿದ ಅನೇಕ ರಾಜಮಹಾರಾಜರು ಅದನ್ನು ಪಡೆಯಬೇಕೆಂಬ ಆಸೆಯಿಂದ ಬಲಾನ್ವಿತರಾಗಿ ಉಜ್ಜಯನಿಯನ್ನು ಸುತ್ತುಗಟ್ಟಿದರು. ಒಂದು ತ್ರಯೋದಶಿ ಶನಿವಾರ ಪ್ರದೋಷದಲ್ಲಿ ರಾಜನು ಶಾಸ್ತ್ರೋಕ್ತವಾಗಿ ಶಿವಪೂಜೆಮಾಡಲು ಕುಳಿತಿದ್ದನು. ಅವನು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಕೆಲವರು ಗೋಪಬಾಲಕರು ಅಲ್ಲಿಗೆ ಬಂದು ರಾಜನ ಪೂಜಾವಿಧಾನವನ್ನು ನೋಡಿದರು. ತಾವೂ ಲಿಂಗಪೂಜೆ ಮಾಡಬೇಕೆಂಬ ಮನಸ್ಸಿನಿಂದ, ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿ ಲಿಂಗವೊಂದನ್ನು ಮಾಡಿ, ಅದನ್ನು ಭಕ್ತಿಶ್ರದ್ಧೆಗಳಿಂದ, ತಮಗೆ ದೊರೆತ ಪತ್ರಪುಷ್ಪಗಳನ್ನು ತಂದು ಕಲ್ಪಿತೋಪಚಾರಗಳಿಂದ ಅರ್ಚಿಸಿದರು. ಅವರು ಪೂಜೆ ಮಾಡುತ್ತಿದ್ದ ಸಮಯದಲ್ಲಿ, ಗೋಪಸ್ತ್ರೀಯರು ಅಲ್ಲಿಗೆ ಬಂದು ತಮ್ಮ ಮಕ್ಕಳನ್ನು ಊಟಕ್ಕೆಂದು ಕರೆದುಕೊಂಡು ಹೋದರು. ಒಬ್ಬ ಹುಡುಗ ಮಾತ್ರ ಪೂಜೆಯಲ್ಲಿ ಬಹಳ ಆಸಕ್ತನಾಗಿ ಮನೆಗೆ ಹೋಗಲು ಇಷ್ಟಪಡಲಿಲ್ಲ. ಅವನ ತಾಯಿ ಅವನನ್ನು ಹೊಡೆಯುತ್ತಾ, “ಇದು ಊಟದ ಸಮಯ. ರಾತ್ರಿ ಕತ್ತಲಿನಲ್ಲಿ ನೀನೇನು ಮಾಡುತ್ತಿದ್ದೀಯೆ?” ಎಂದು ಕೇಳಲು, ಆ ಹುಡುಗ ಏನೂ ಉತ್ತರ ಕೊಡಲಿಲ್ಲ. ಅದರಿಂದ ಕೋಪಗೊಂಡ ಗೋಪಿಕ, ಅಲ್ಲಿ ನಡೆಯುತ್ತಿದ್ದ ಪೂಜೆಯನ್ನೆಲ್ಲಾ ಹಾಳುಮಾಡಿ ಆ ಲಿಂಗವನ್ನು ತೆಗೆದು ಬಿಸುಟು, ಮನೆಗೆ ಹೊರಟು ಹೋದಳು. ತನ್ನ ಪೂಜೆ ಹಾಳಾಗಿದ್ದಕ್ಕೆ ಬಹಳ ದುಃಖಿತನಾಗಿ, ಮನಸ್ಸಿನಲ್ಲೇ ಲಿಂಗ ಧ್ಯಾನವನ್ನು ಮಾಡುತ್ತಾ ಪ್ರಾಣ ಬಿಡಲು ಉದ್ಯುಕ್ತನಾದ ಆ ಹುಡುಗನಿಗೆ ಸದಾಶಿವನು ಪ್ರತ್ಯಕ್ಷನಾದನು.
ಆ ಪೂಜಾಸ್ಥಳವೇ ಶಿವಾಲಯವಾಯಿತು. ಅ ಲಿಂಗ ರತ್ನಮಯವಾಗಿ, ಸೂರ್ಯತೇಜಸ್ಸನ್ನು ಪಡೆದು ಪ್ರಕಾಶಿಸಿತು. ಎಚ್ಚೆತ್ತ ಬಾಲಕನನ್ನು ಪಾರ್ವತಿಪತಿಯು ಮೇಲೆತ್ತಿ, “ನಿನ್ನ ಅಭೀಷ್ಟವೇನು ಕೇಳಿಕೋ” ಎಂದನು. ಅದಕ್ಕೆ ಆ ಬಾಲಕ, “ಶಂಭೋ, ನನ್ನ ತಾಯಿ ಪೂಜೆಯನ್ನು ಹಾಳುಮಾಡಿದಳು. ಅವಳನ್ನು ಕ್ಷಮಿಸಿ ದಯೆತೋರು” ಎಂದು ಕೇಳಲು, ದಯಾಮೂರ್ತಿಯಾದ ಆ ಸಾಂಬಶಿವನು ಪ್ರೀತಿಯಿಂದ, “ಪ್ರದೋಷ ಸಮಯದಲ್ಲಿ ಅವಳು ನನ್ನ ಪೂಜೆಯನ್ನು ನೋಡಿದ್ದಾಳೆ. ಆದ್ದರಿಂದ ಅವಳು ದೇವಮಾತೆಯಾಗುತ್ತಾಳೆ. ಜನ್ಮಾಂತರದಲ್ಲಿ ಆಕೆಗೆ ವಿಷ್ಣುವು ಕುಮಾರನಾಗಿ, ಕೃಷ್ಣನಾಗಿ, ಬರುತ್ತಾನೆ” ಎಂದು ಹೇಳಿ, ಮತ್ತೆ “ಹೇ ಬಾಲಕ ನೀನು ಕೋರಿದ್ದೆಲ್ಲವೂ ನಿನಗೆ ಲಭಿಸುತ್ತದೆ. ಸರ್ವ ಸುಖಗಳನ್ನೂ ಅನುಭವಿಸುತ್ತೀಯೆ. ನಿನ್ನ ವಂಶವೆಲ್ಲವೂ ನಿನ್ನಂತೆಯೇ ಆಗುತ್ತದೆ” ಎಂದು ಆ ಬಾಲಕನಿಗೆ ವರಗಳನ್ನನುಗ್ರಹಿಸಿ ಅವನು ತನ್ನ ಚರಣಗಳಲ್ಲಿ ನಮಸ್ಕರಿಸುತ್ತಿದ್ದಂತೆಯೇ ಅಂತರ್ಧಾನನಾದನು.
ಆ ಬಾಲನು ಸ್ಥಾಪಿಸಿದ್ದ ಲಿಂಗವು ರತ್ನಮಯವಾಗಿ ಕೋಟಿಸೂರ್ಯಪ್ರಭೆಯಿಂದ ಬೆಳಗುತ್ತಿತ್ತು. ಜನರೆಲ್ಲರೂ ಅಲ್ಲಿ ಸೂರ್ಯನೇ ಉದಯಿಸಿದ್ದಾನೆ ಎಂದುಕೊಂಡರು. ಯುದ್ಧಸಿದ್ಧರಾಗಿ ಬಂದಿದ್ದ ರಾಜರೆಲ್ಲರೂ, ಸಂದೇಹಗ್ರಸ್ತರಾಗಿ, “ಇಲ್ಲಿನ ರಾಜ ಪವಿತ್ರನು. ಈ ನಗರದಲ್ಲಿ ರಾತ್ರಿವೇಳೆಯೂ ಸೂರ್ಯ ಉದಯಿಸುತ್ತಾನೆ. ಇಂತಹ ರಾಜನ ಮೇಲೆ ದ್ವೇಷದಿಂದ ಯುದ್ಧಮಾಡುವುದು ತರವಲ್ಲ. ಅವನೊಡನೆ ದ್ವೇಷ ಮಾಡಬಾರದು. ಬದಲಾಗಿ ಅವನಲ್ಲಿ ಸ್ನೇಹವಿರಬೇಕು” ಎಂದು ಯೋಚಿಸುತ್ತಾ ಅವರೆಲ್ಲರೂ ರಾಜನನ್ನು ಕಾಣಲು ಹೋಗಿ, ರಾಜನ ದರ್ಶನ ಮಾಡಲು ಬಂದೆವೆಂದು ಹೇಳಿಕಳುಹಿಸಿದರು. ಅದರಿಂದ ಸಂತೋಷಗೊಂಡ ರಾಜನು ತಾನೇ ಸ್ವತಃ ಬಂದು ಅವರೆಲ್ಲರನ್ನೂ ಒಳಕ್ಕೆ ಕರೆದೊಯ್ದನು. ಅವರು ಆ ರಾಜನನ್ನು, “ನಿಮ್ಮ ರಾಜ್ಯದಲ್ಲಿ ರಾತ್ರಿಯೂ ಸೂರ್ಯ ಹೇಗೆ ಉದಯಿಸುತ್ತಾನೆ?” ಎಂದು ಕೇಳಲಾಗಿ, ರಾಜನು ಆಶ್ಚರ್ಯಗೊಂಡು, ಅವರೊಡನೆ ರತ್ನಮಯವಾಗಿದ್ದ ಲಿಂಗವಿದ್ದ ಶಿವಾಲಯಕ್ಕೆ ಹೋದನು. ಅಲ್ಲಿದ್ದ ಹುಡುಗನಿಂದ ನಡೆದ ಕಥೆಯನ್ನೆಲ್ಲ ಕೇಳಿ, ಬಹು ಸಂತೋಷಪಟ್ಟು, ಅ ಹುಡುಗನಿಗೆ ಗೋಪಾಲಕ ಆಧಿಪತ್ಯವನ್ನೂ, ಸಂಪತ್ತನ್ನೂ ಕೊಟ್ಟರು. ನಂತರ ಅಲ್ಲಿಗೆ ಬಂದು ಸೇರಿದ್ದ ರಾಜರೆಲ್ಲರೂ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದರು. ಆ ರೀತಿಯಲ್ಲಿ ಚಿತ್ರಸೇನನಿಗೆ ಬಂದಿದ್ದ ಯುದ್ಧದ ಭಯ ನಿವಾರಣೆಯಾಯಿತು.
ಶನಿಪ್ರದೋಷ ವೇಳೆಯಲ್ಲಿ ಮಾಡಿದ ಶಿವಪೂಜಾ ಫಲವಂತಹುದು. ಶಿವಾರಾಧಕನಾದ ಆ ಬಾಲಕ ತನ್ನ ಮನೆಗೆ ಹಿಂತಿರುಗಿ, “ಪ್ರದೋಷ ಸಮಯದಲ್ಲಿ ನೀನು ಶಿವನ ಪೂಜೆಯನ್ನು ನೋಡಿದ್ದರಿಂದ ಶಿವನು ನಿನ್ನಲ್ಲಿ ಪ್ರಸನ್ನನಾದನು. ಸಂತುಷ್ಟನಾದ ಸದಾಶಿವನು, ಜನ್ಮಾಂತರದಲ್ಲಿ ನೀನು ವಿಷ್ಣುವಿಗೆ ತಾಯಿಯಾಗುತ್ತೀಯೆ, ಎಂಬ ವರವನ್ನು ನಿನಗೆ ದಯಪಾಲಿಸಿದನು. ಶಿವಪೂಜೆಗೆ ಅಡ್ಡಮಾಡಿದ ನಿನ್ನನ್ನು ಕ್ಷಮಿಸುವಂತೆ ನಾನು ಶಿವನನ್ನು ಬೇಡಿಕೊಂಡೆನು. ಆ ಪರಮೇಶ್ವರನು ನಿನ್ನನ್ನು ಕ್ಷಮಿಸಿ, ನನಗೂ ವರಗಳನ್ನು ಕೊಟ್ಟನು” ಎಂದು ತನ್ನ ತಾಯಿಗೆ ನಡೆದ ವೃತ್ತಾಂತವೆಲ್ಲವನ್ನೂ ಹೇಳಿದನು. ಈಶ್ವರನು ಪ್ರಸನ್ನನಾದರೆ ಯಾರಿಗೆ ಯಾವುದು ದುರ್ಲಭ?
“ಅಂಬಿಕ, ನಿನ್ನ ಮನಸ್ಸಿನಲ್ಲಿ ಸತ್ಪುತ್ರನಾಗಬೇಕೆಂಬ ಆಸೆಯಿದೆ. ಆದ್ದರಿಂದ ನೀನು ಪ್ರದೋಷ ಸಮಯದಲ್ಲಿ ಶಿವನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡು. ನಿಶ್ಚಯವಾಗಿಯೂ ನಿನಗೆ ಜನ್ಮಾಂತರದಲ್ಲಿ ನನ್ನಂತಹ ಪುತ್ರನೇ ಜನಿಸುತ್ತಾನೆ” ಎಂದು ಶ್ರೀಪಾದರು ಅಂಬಿಕೆಗೆ ಅಭಯ ಕೊಟ್ಟರು. ಆದರೂ ಅವಳ ದುಃಖ ತೀರಲಿಲ್ಲವೆಂಬುದನ್ನು ಗಮನಿಸಿದ ಭಕ್ತವತ್ಸಲನಾದ ಶ್ರೀಗುರುವು, ಅವಳ ಮಗನನ್ನು ಕರೆದು, ಅವನ ತಲೆಯಮೇಲೆ ಕೈಯಿಟ್ಟು ಅವನನ್ನು ಆಶೀರ್ವದಿಸಿದರು. ತಕ್ಷಣವೇ ಆ ಹುಡುಗ ಜ್ಞಾನಿಯಾಗಿ, ಮೂರುವೇದಗಳನ್ನು ಬಲ್ಲವನಾದನು. ಅಲ್ಲಿಯವರೆಗೂ ಮತಿಹೀನನಾಗಿದ್ದ ಅವನು ಆ ಕ್ಷಣದಲ್ಲಿ ವೇದಶಾಸ್ತ್ರಪಾರಂಗತನಾಗಿ, ವೇದಪಠನ ಮಾಡುವುದನ್ನು ಕಂಡ ಆ ತಾಯಿ, ಆಶ್ಚರ್ಯಚಕಿತಳಾದಳು.
ಅದರಿಂದಲೇ ಶ್ರೀಪಾದರು ನಿಸ್ಸಂದೇಹವಾಗಿ ಈಶ್ವರನೇ! ಲೋಕ ಕಾರ್ಯಾರ್ಥವಾಗಿ ಮಾನವರೂಪದಲ್ಲಿ ಅವತರಿಸಿದ್ದಾರೆ. ತನ್ನ ಪೂರ್ವಕೃತ ಪುಣ್ಯಫಲವಾಗಿ ಅಂಬಿಕ, ಆ ಗುರುನಾಥನನ್ನು ಕಾಣಬಲ್ಲವಳಾದೆನೆಂದು ಅತ್ಯಂತ ಸಂತೋಷಪಟ್ಟವಳಾಗಿ, ಮತ್ತೆ ಮತ್ತೆ ಶ್ರೀಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ, “ಸ್ವಾಮಿ, ನೀವೇ ಶಿವ. ಪ್ರದೋಷದಲ್ಲಿ ನಿಮ್ಮನ್ನೇ ಅರ್ಚಿಸುತ್ತೇನೆ. ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ನನಗೆ ನಿಮ್ಮಂತಹ ಮಗನೇ ಹುಟ್ಟುತ್ತಾನೆ” ಎಂದು ಅವರನ್ನು ಪೂಜಿಸಿ ತನ್ನ ಊರಿಗೆ ಹಿಂತಿರುಗಿದಳು. ಅಂದಿನಿಂದ ತಪ್ಪದೇ ಅವಳು ಶಿವಪ್ರದೋಷ ಪೂಜೆ ಮಾಡಲಾರಂಭಿಸಿದಳು. ಶ್ರೀಗುರುವಿನಿಂದ ಅನುಗ್ರಹೀತನಾದ ಅವಳ ಮಗ, ವೇದಶಾಸ್ತ್ರ, ಪುರಾಣ, ಪಾರಂಗತನಾಗಿ, ವಿನಯವಂತನಾಗಿ, ಎಲ್ಲರಿಂದಲೂ, ಎಲ್ಲೆಡೆಯಲ್ಲಿಯೂ ಪೂಜೆಗೊಳ್ಳುವವನಾಗಿ, ಸ್ವಾಮಿಯ ಅನುಗ್ರಹದಿಂದ ವಿವಾಹಿತನಾಗಿ ಪುತ್ರಪೌತ್ರಾದಿಗಳಿಂದ ಕೂಡಿ, ಸ್ವಗ್ರಾಮದಲ್ಲಿ ಸಂತೋಷದಿಂದ ಬಾಳಿದನು.
ಗುರುಕೃಪೆ ಭಕ್ತಜನರಿಗೆ ಸರ್ವಾರ್ಥಗಳನ್ನು ತಂದುಕೊಡಬಲ್ಲದು. ಕೃಪಾಸಿಂಧುವಾದ ಶ್ರೀಗುರುವು ಭಕ್ತರಿಗೆ ಸದಾನಂದಕಾರಕನಾಗಿ, ಸುಖ ಸಂಪತ್ತುಗಳನ್ನು ನೀಡುವನು” ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು.
ಇಲ್ಲಿಗೆ ಎಂಟನೆಯ ಅಧ್ಯಾಯ ಮುಗಿಯಿತು.
[03/01 7:54 AM] S. Bhargav: ||ಶ್ರೀ ಗುರು ಚರಿತ್ರೆ – ಒಂಭತ್ತನೆಯ ಅಧ್ಯಾಯ||
ನಾಮಧಾರಕನು ಮತ್ತೆ ಪ್ರಣಾಮ ಮಾಡಿ, ಸಿದ್ಧಮುನಿಯನ್ನು, “ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ವಿಸ್ತಾರವಾಗಿ ಕೇಳಬೇಕೆಂದಿದ್ದೇನೆ” ಎನ್ನಲು, ಸಿದ್ಧರು ಹೇಳಿದರು. “ನಾಮಧಾರಕ, ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ಹೇಳುತ್ತೇನೆ. ಕೇಳು.
ಕುರುವರಪುರದಲ್ಲಿ ರಜಕನೊಬ್ಬನಿದ್ದನು. ಶ್ರೀಪಾದರ ಸೇವಕನಾಗಿದ್ದ ಅವನು ತ್ರಿಕಾಲದಲ್ಲೂ ಭಕ್ತಿಯಿಂದ ಶ್ರೀಪಾದರಿಗೆ ನಮಸ್ಕಾರ ಮಾಡುತ್ತಿದ್ದನು. ಮನೋವಾಕ್ಕಾಯಗಳಲ್ಲಿ ಶ್ರದ್ಧೆಭಕ್ತಿ ತುಂಬಿ ಅವನು ಮಾಡುತ್ತಿದ್ದ ಸೇವೆ ಬಹಳಕಾಲದಿಂದ ನಡೆಯುತ್ತಿತ್ತು. ಕೃತಾರ್ಥರಾಗಿದ್ದರೂ, ಲೋಕಾನುಗ್ರಹಕ್ಕಾಗಿ ಶ್ರೀಪಾದರು ಪ್ರತಿದಿನವೂ ಕೃಷ್ಣಾನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಒಂದು ದಿನ ಶ್ರೀಪಾದರು ಸ್ನಾನಮಾಡುತ್ತಿದ್ದಾಗ ಆ ರಜಕನು ಅಲ್ಲಿ ಬಟ್ಟೆ ಒಗೆಯುತ್ತಿದ್ದನು. ಅವನಲ್ಲಿ ಪ್ರಸನ್ನರಾಗಿದ್ದ ಶ್ರೀಪಾದರು, “ಅಯ್ಯಾ ರಜಕ, ಪ್ರತಿದಿನವೂ ನೀನು ನನಗೆ ನಮಸ್ಕಾರ ಮಾಡಿಕೊಳ್ಳುತ್ತಿದ್ದೀಯೆ. ಅದರಿಂದ ನನಗೆ ಸಂತೋಷವಾಗಿದೆ. ಅದರಿಂದ ನಿನಗೆ ರಾಜ್ಯವನ್ನು ದಯಪಾಲಿಸುತ್ತಿದ್ದೇನೆ” ಎಂದರು. ಅವರ ಮಾತಿನಿಂದ ಚಕಿತನಾದ ಆ ರಜಕ, ಮುಸಿನಕ್ಕು, ಕೈಜೋಡಿಸಿ, “ಸ್ವಾಮಿ, ನೀವು ಈಶ್ವರನು. ಸತ್ಸಂಕಲ್ಪರು” ಎಂದು ಉತ್ತರ ಕೊಟ್ಟ. ಅಂದಿನಿಂದ ಅವನಿಗೆ ಸಂಸಾರ ಚಿಂತೆ ಬಿಟ್ಟುಹೋಗಿ ಶ್ರೀಪಾದರ ಸೇವೆಯಲ್ಲೇ ನಿರತನಾಗಿ ಹೋದ. ಪ್ರತಿದಿನವೂ ಗುರುವಿನ ಗುಡಿಸಿಲಿನ ಮುಂದೆ ಗುಡಿಸಿ, ನೀರು ಚೆಲ್ಲಿ, ಶುದ್ಧಿಮಾಡುತ್ತಿದ್ದನು. ಹೀಗೇ ಬಹಳಕಾಲ ಕಳೆಯಿತು.
ಒಂದು ಸಲ ವಸಂತ ಋತು, ವೈಶಾಖಮಾಸದಲ್ಲಿ, ಒಬ್ಬ ಯವನರಾಜ, ಸರ್ವಾಭರಣಾಲಂಕೃತನಾಗಿ, ತನ್ನ ಸಖೀಜನರೊಡನೆ, ನದಿಗೆ ಜಲಕ್ರೀಡೆಗೆಂದು ಬಂದನು. ಆ ರಾಜ, ನೌಕೆಯೊಂದರಲ್ಲಿ ತನ್ನ ಸ್ತ್ರೀಜನರೊಡನೆ, ವಾದ್ಯವೃಂದಗಳು ಸುಶ್ರಾವ್ಯವಾಗಿ ನುಡಿಯುತ್ತಿರಲು, ಸಂತೋಷದಿಂದ, ಉನ್ಮತ್ತನಾಗಿ ವಿಹರಿಸುತ್ತಿದ್ದನು. ಅವನನ್ನು ರಕ್ಷಿಸಲು ನದಿಯ ಎರಡೂ ತೀರಗಳಲ್ಲಿ ಅವನ ಸೈನಿಕರು ಕಾವಲು ಕಾಯುತ್ತಿದ್ದರು. ಅದನ್ನು ಕಂಡ ರಜಕ, ತಾನು ಸತತವಾಗಿ ಮಾಡಿಕೊಳ್ಳುತ್ತಿದ್ದ ಶ್ರೀಗುರುವಿನ ನಾಮಜಪವನ್ನೂ ಮರೆತು, ಆ ವಿಹಾರ ಲೀಲೆಯನ್ನು ನೋಡುತ್ತಾ ನಿಂತನು. “ಈ ಸಂಸಾರದಲ್ಲಿ ಜನಿಸಿ ಇಂತಹ ವೈಭವ ಸುಖಗಳನ್ನು ಪಡೆಯದಿದ್ದರೆ ಜನ್ಮವೇ ವ್ಯರ್ಥ. ಅಲಂಕಾರ ಶೋಭಿತರಾದ ಆ ಸ್ತ್ರೀಜನರು ಅವನ ಸೇವೆಯನ್ನು ಮಾಡುತ್ತಿದ್ದಾರೆ. ಆಹಾ! ಆ ರಾಜ ಅದೆಂತಹ ಪುಣ್ಯ ಮಾಡಿದ್ದನೋ! ಅವನು ಗುರುಸೇವೆಯನ್ನು ಹೇಗೆ ಮಾಡಿದ್ದನೋ! ಇಂತಹ ಮಹಾದೆಶೆ ಅವನಿಗೆ ಹೇಗೆ ಉಂಟಾಯಿತೋ!” ಎಂದು ಮನಸ್ಸಿನಲ್ಲಿ ಚಿಂತಿಸುತ್ತಾ, ಹಿಂದಿರುಗಿ ಬಂದು ತನ್ನ ಗುರುವನ್ನು ಕಂಡು ದಂಡ ಪ್ರಣಾಮ ಮಾಡಿ ಅವರೆದುರಿಗೆ ನಿಂತನು. ಅವನ ಮನಸ್ಸಿನ ಆಸೆಯನ್ನರಿತ ಶ್ರೀಪಾದರು, ಅವನನ್ನು ಕರೆದು,”ಏನು ಯೋಚನೆಮಾಡುತ್ತಿದ್ದೀಯೆ?” ಎಂದು ಕೇಳಿದರು. ಅದಕ್ಕೆ ಅವನು, “ಸ್ವಾಮಿ, ಆ ರಾಜನ ವೈಭವವನ್ನು ನೋಡಿದೆ. ಆ ರಾಜ ಶ್ರೀಗುರುವಿಗೆ ದಾಸನಾಗಿ, ಗುರುಸೇವೆಯನ್ನು ಏಕಾಗ್ರಚಿತ್ತನಾಗಿ ಮಾಡಿ ಇಂತಹ ಮಹಾದೆಶೆಯನ್ನು ಪಡೆದಿದ್ದಾನೆ ಎಂದು ಮನಸ್ಸಿಗೆ ತೋಚಿ, ಬಹಳ ಸಂತೋಷವಾಯಿತು” ಎಂದು ವಿನಮ್ರನಾಗಿ ಹೇಳಿದನು. ಮತ್ತೆ ಅವನೇ, “ಹೇ ಗುರುವರ, ಅವಿದ್ಯಾವಶದಿಂದ ಇಂತಹ ವಾಸನೆಗಳು ಹುಟ್ಟುತ್ತವೆ. ಈ ಇಂದ್ರಿಯ ಸುಖಗಳು ನನಗೆ ಬೇಕಾಗಿಲ್ಲ. ನಿಮ್ಮ ಪಾದಗಳಲ್ಲಿಯೇ ನನಗೆ ಹೆಚ್ಚಿನ ಸುಖವಿದೆ ಎಂದು ನನಗೆ ಈಗ ತೋರುತ್ತಿದೆ” ಎಂದು ಹೇಳಿದನು. ಅದಕ್ಕೆ ಶ್ರೀಗುರುವು, “ಜನ್ಮಾರಭ್ಯ ನೀನು ಕಷ್ಟದಲ್ಲೇ ಜೀವಿಸುತ್ತಿದ್ದೀಯೆ. ಅದರಿಂದಲೇ ನಿನಗೆ ರಾಜ್ಯಭೋಗದಲ್ಲಿ ಆಸೆಯುಂಟಾಗಿದೆ. ಇಂದ್ರಿಯಗಳು ತೃಪ್ತಿಹೊಂದದೆ ಮನಸ್ಸು ನಿರ್ಮಲವಾಗುವುದಿಲ್ಲ. ವಾಸನೆಗಳು ತೀರದಿದ್ದರೆ ಜನ್ಮಾಂತರಗಳಲ್ಲಿ ಅವು ನಿನ್ನನ್ನು ಕಷ್ಟಕ್ಕೀಡು ಮಾಡಬಲ್ಲವು” ಎಂದು ಶ್ರೀಪಾದರು ಹೇಳಿದರು. ಅದಕ್ಕೆ ಆ ರಜಕನು ಕೈಜೋಡಿಸಿ, “ಸ್ವಾಮಿ, ದಯಾನಿಧಿ, ದಯೆತೋರಿಸಿ. ನನ್ನನ್ನು ಉಪೇಕ್ಷಿಸಬೇಡಿ” ಎಂದು ಕೇಳಿಕೊಂಡನು. “ನಿನಗೆ ರಾಜ್ಯಭೋಗಗಳಲ್ಲಿ ಕಾಂಕ್ಷೆಯುಂಟಾಗಿದೆ. ಆದ್ದರಿಂದ ಇಂದ್ರಿಯ ತೃಪ್ತಿಗೋಸ್ಕರ ತ್ವರೆಯಲ್ಲೇ ನೀನು ಮ್ಲೇಚ್ಛನಾಗಿ ಜನಿಸಿ ರಾಜನಾಗುತ್ತೀಯೆ. ಆದರೆ, ಅಯ್ಯಾ ರಜಕ, ನಿನ್ನ ಆಸೆಯನ್ನು ಈ ಜನ್ಮದಲ್ಲೇ ತೀರಿಸಿಕೊಳ್ಳಲು ಇಷ್ಟಪಡುತ್ತೀಯೋ, ಇಲ್ಲ ಮತ್ತೊಂದು ಜನ್ಮದಲ್ಲಿ ಇದನ್ನು ಅನುಭವಿಸುತ್ತೀಯೋ ಹೇಳು” ಎಂದು ಕೇಳಿದರು. ಅದಕ್ಕೆ ರಜಕನು, “ಗುರುವೇ, ಈಗ ನಾನು ವೃದ್ಧನಾದೆ. ಶರೀರವು ಶಿಥಿಲವಾಗಿದೆ. ಇಂತಹ ಭೊಗಗಳನ್ನು ಈಗ ಅನುಭವಿಸಲಾರೆ. ಇನ್ನೊಂದು ಜನ್ಮದಲ್ಲಿ ಅವುಗಳನ್ನು ಅನುಭವಿಸುತ್ತೇನೆ” ಎಂದು ಬಿನ್ನವಿಸಿಕೊಂಡನು. ಅದಕ್ಕೆ ಶ್ರೀಪಾದರು, “ಹಾಗಾದರೆ ಶೀಘ್ರದಲ್ಲೇ ಮತ್ತೊಂದು ಜನ್ಮವೆತ್ತಿ ನಿಷ್ಕಂಟಕವಾಗಿ ರಾಜ್ಯಸುಖಗಳನ್ನು ಅನುಭವಿಸು” ಎಂದು ಹೇಳಿದರು. ಅದಕ್ಕೆ ಆ ರಜಕನು, “ಸ್ವಾಮಿ, ನಿಮ್ಮ ಚರಣ ವಿಯೋಗ ಸಹಿಸಲಸಾಧ್ಯವಾದದ್ದು. ನಿಮ್ಮ ಪುನರ್ದರ್ಶನವಾಗುವಂತೆ ಅನುಗ್ರಹಿಸಿ” ಎಂದು ಬೇಡಿಕೊಂಡನು. ಅದಕ್ಕೆ ಶ್ರೀಪಾದರು, “ನೀನು ವೈಡೂರ್ಯನಗರದಲ್ಲಿ ರಾಜನಾಗಿ ಜನಿಸುತ್ತೀಯೆ. ಅಂತ್ಯಕಾಲದಲ್ಲಿ ನಿನಗೆ ಮತ್ತೆ ನಮ್ಮ ದರ್ಶನವಾಗಿ, ನಿನಗೆ ಜ್ಞಾನೋದಯವಾಗುತ್ತದೆ. ಚಿಂತಿಸಬೇಡ. ನಾನು ಆಗ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಯತಿಯಾಗಿ ಅವತರಿಸಿರುತ್ತೇನೆ” ಎಂದು ಹೇಳಿದರು. ಗುರುವಿನ ಅನುಗ್ರಹ ಪಡೆದು ಹೊರಟ ರಜಕನು ಸ್ವಲ್ಪ ದೂರಹೋಗುವುದರಲ್ಲಿಯೇ ಕೆಳಗೆ ಬಿದ್ದು ಮರಣ ಹೊಂದಿದನು.
ನಾಮಧಾರಕ, ಆ ರಜಕನ ಕಥೆ ವಿಚಿತ್ರವಾದದ್ದು. ಮುಂದೆ ಪ್ರಸಂಗವಶಾತ್ ಆ ಕಥೆಯನ್ನು ವಿಸ್ತರಿಸಿ ಹೇಳುತ್ತೇನೆ. ಶ್ರಿಗುರುವು ಕುರುವರಪುರದಲ್ಲಿ ಶ್ರೀಪಾದ ಮಹಿಮೆಯನ್ನು ಲೋಕದಲ್ಲಿ ಪ್ರಸರಿಸಲೋ ಎಂಬಂತೆ ಸ್ವಲ್ಪಕಾಲ ಪ್ರತ್ಯಕ್ಷವಾಗಿ ನೆಲೆಸಿದ್ದರು. ಅವರ ಎಲ್ಲ ಮಹಿಮೆಗಳನ್ನೂ ಹೇಳಬೇಕೆಂದರೆ ಗ್ರಂಥ ಬಹಳ ದೊಡ್ಡದಾಗುತ್ತದೆ. ಅದರಿಂದ ಶ್ರೀಪಾದರ ಅವತಾರವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಅಮೃತದೃಷ್ಟಿಯ ಆ ಸ್ವಾಮಿ ನೆಲೆಯಾಗಿದ್ದ ಆ ಸ್ಥಾನದ ಮಹಿಮೆ ಯಾರು ತಾನೇ ವರ್ಣಿಸಬಲ್ಲರು? ಅಲ್ಲಿ ಅವರು ನೆಲಸಿದ್ದರು ಎನ್ನುವುದರಿಂದಲೇ, ಅವರ ಭಕ್ತವಾತ್ಸಲ್ಯಕ್ಕೆ ಗುರುತಾಗಿ, ಈಗಲೂ ಜನರ ಸರ್ವ ಕಾಮನೆಗಳೂ ತ್ವರೆಯಾಗಿ ನೆರವೇರುತ್ತವೆ.
ಶ್ರೀಪಾದರು ಕುರುವರಪುರದಲ್ಲಿ ಸ್ವಲ್ಪಕಾಲವಿದ್ದು, ಲೋಕಾನುಗ್ರಹದೃಷ್ಟಿಯಿಂದ ಇನ್ನೊಂದೆಡೆಯಲ್ಲಿ ಅವತರಿಸಲು ನಿರ್ಧರಿಸಿ, ಆಶ್ವಯುಜ, ಕೃಷ್ಣ ದ್ವಾದಶಿಯಂದು, ಹಸ್ತಾನಕ್ಷತ್ರದಲ್ಲಿ ಕೃಷ್ಣಾನದಿಯಲ್ಲಿ ಮುಳುಗಿ ಅಂತರ್ಧಾನರಾದರು. ಅವರು ಈಗ ಅಲ್ಲಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಇಂದಿಗೂ ಭಕ್ತರ ವಾಂಚಿತಾರ್ಥಗಳನ್ನು ಪೂರಯಿಸುತ್ತಾ ಅದೃಶ್ಯರಾಗಿ ನೆಲಸಿದ್ದಾರೆ. ಅವರು ಅಲ್ಲಿ ಹಾಗೆ ಅಪ್ರತ್ಯಕ್ಷವಾಗಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳು ಬಹಳವಾಗಿವೆ. ಭಕ್ತಿಯಿಂದ ಅಲ್ಲಿಗೆ ಹೋಗಿ ಅವರನ್ನು ಧ್ಯಾನಿಸಿದವರಿಗೆ ಅವರು ತಪ್ಪದೇ ಪ್ರತ್ಯಕ್ಷರಾಗುತ್ತಾರೆ. ಅದರಿಂದಲೇ ಕುರುವರಪುರ ಭೂತಲದಲ್ಲಿ ಪ್ರಸಿದ್ಧಿಯಾಗಿದೆ.
ಇಲ್ಲಿಗೆ ಒಂಭತ್ತನೆಯ ಅಧ್ಯಾಯ ಮುಗಿಯಿತು.
[04/01 5:35 AM] S. Bhargav: ||ಶ್ರೀ ಗುರು ಚರಿತ್ರೆ – ಹತ್ತನೆಯ ಅಧ್ಯಾಯ||
ನಾಮಧಾರಕನು, “ಸ್ವಾಮಿ ಕುರುವರಪುರದಲ್ಲಿ ಶ್ರೀಪಾದರು ಮತ್ತೊಂದು ಅವತಾರವೆತ್ತಲುದ್ಯುಕ್ತರಾದರು ಎಂದು ಹೇಳಿದಿರಿ. ಹಾಗಿದ್ದರೆ ಅವರು ಈಗ ಕುರವರಪುರದಲ್ಲಿ ಇಲ್ಲವೇ? ಅವರ ಮತ್ತೊಂದು ಅವತಾರವು ಎಲ್ಲಿ, ಹೇಗಾಯಿತು? ಎಂಬುದನ್ನು ವಿಸ್ತರಿಸಿ ಹೇಳುವ ಕೃಪೆಮಾಡಿ ” ಎಂದು ಕೇಳಿದನು. ಅದಕ್ಕೆ ಶ್ರೀಪಾದರು ಹೇಳಿದರು. “ಅಯ್ಯಾ, ನಾಮಧಾರಕ, ಶ್ರೀಪಾದರ ಮಹಿಮೆಯನ್ನು ಹೇಗೆ ತಾನೇ ವರ್ಣಿಸಬಲ್ಲೆ? ಅವರು ವಿಶ್ವವ್ಯಾಪಿ. ಪರಮಾತ್ಮ ಸ್ವರೂಪರು. ನಾನಾ ರೂಪ ಧರಿಸಿದ ನಾರಾಯಣನೇ ಅವರು. ಕಾರ್ಯಾರ್ಥವಾಗಿ ಬೇರೆಡೆ ಅವತರಿಸಿದರೂ, ಅವರು ಕುರುವರಪುರದಲ್ಲಿ ಗುಪ್ತವಾಗಿದ್ದುಕೊಂಡು ಭಕ್ತರ ಅಭೀಷ್ಟಗಳನ್ನು ನಡೆಸಿಕೊಡುತ್ತಿದ್ದಾರೆ. ಭಾರ್ಗವ ರಾಮನು ಚಿರಂಜೀವಿಯಾಗಿ ಈಗಲೂ ಇದ್ದಾನೆ ಎಂದು ಕೇಳಿದ್ದೀಯಲ್ಲವೆ? ಅದೇ ರೀತಿಯಲ್ಲಿ ಶ್ರೀಪಾದರು ಅಲ್ಲಿ ಈಗಲೂ ಇದ್ದಾರೆ.
ಕುರುವರಪುರ ತ್ರಿಮೂರ್ತಿ ನಿವಾಸ ಸ್ಥಾನ. ಆ ಕ್ಷೇತ್ರದರ್ಶನ ಮಾಡುವುದರಿಂದ ಮಾನವರ ಚಿಂತೆಗಳೆಲ್ಲ ತೀರಿಹೋಗುತ್ತವೆ. ಶ್ರೀಗುರುವಿನ ವಾಸಸ್ಥಾನವೇ ಕಾಮಧೇನು! ಅಂತಹ ವಾಸಸ್ಥಾನ ಮಹಿಮೆಯನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ನೀನು ಗುರುವಿನಲ್ಲಿ ಧೃಢಭಕ್ತಿಯುಳ್ಳವನು. ಋಜುಮಾರ್ಗವನ್ನು ತೋರಿಸಿ ಎಂದು ಕೇಳುತ್ತಿದ್ದೀಯೆ. ನಿನ್ನಂತಹ ಭಕ್ತರನ್ನು ಉಪೇಕ್ಷಿಸಬಾರದು. ಧೃಢಭಕ್ತಿಯುಳ್ಳವನು ಇಹದಲ್ಲಿ ಸುಖವನ್ನನುಭವಿಸಿ, ಪರದಲ್ಲೂ ಉದ್ಧರಿಸಲ್ಪಡುತ್ತಾನೆ” ಎಂದರು. ಅದಕ್ಕೆ ನಾಮಧಾರಕ, “ಸ್ವಾಮಿ, ಅವರು ಈಗಲೂ ಕುರುವರಪುರದಲ್ಲಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳಿವೆಯೇ?” ಎಂದು ಕೇಳಿದನು.
ಅದಕ್ಕೆ ಸಿದ್ಧಮುನಿ, “ಇದಕ್ಕೊಂದು ನಿದರ್ಶನವಾಗಿ ಅಲ್ಲಿ ನಡೆದ ಘಟನೆಯೊಂದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಕಾಶ್ಯಪಗೋತ್ರಕ್ಕೆಸೇರಿದ, ಆಚಾರವಂತ, ಸುಶೀಲ, ವಲ್ಲಭೇಶನೆಂಬ ಬ್ರಾಹ್ಮಣೊಬ್ಬನಿದ್ದನು. ವ್ಯಾಪಾರವನ್ನು ವೃತ್ತಿಯಾಗಿ ಅವಲಂಬಿಸಿದ್ದ ಆ ಬ್ರಾಹ್ಮಣ, ಪ್ರತಿವರ್ಷವೂ ಶ್ರೀಪಾದರು ಅಂತರ್ಧಾನರಾದಮೇಲೂ, ಅವರ ದರ್ಶನಕ್ಕೆ ಕುರುವರಪುರಕ್ಕೆ ಬರುತ್ತಿದ್ದನು. ಒಂದುಸಲ ಅವನು ವ್ಯಾಪಾರಕ್ಕೆ ಹೊರಡುವ ಮುಂಚೆ, ತನ್ನ ಕಾರ್ಯ ಸಿದ್ಧಿಯಾದರೆ ಕುರುವರಪುರಕ್ಕೆ ಬಂದು ಒಂದು ಸಾವಿರ ಬ್ರಾಹ್ಮಣರಿಗೆ ಊಟವಿಡುತ್ತೇನೆ ಎಂದು ಸಂಕಲ್ಪಮಾಡಿಕೊಂಡು ವ್ಯಾಪಾರಕ್ಕಾಗಿ ಹೊರಟನು. ಶ್ರೀಪಾದಶ್ರೀವಲ್ಲಭರ ಧ್ಯಾನಮಾಡುತ್ತಾ ಅವನು ಹೋದಕಡೆಯಲ್ಲೆಲ್ಲಾ ಅವನಿಗೆ ಬಹಳ ಲಾಭವಾಯಿತು. ತನ್ನ ಊಹೆಗೂ ಮೀರಿ, ಅವನೆಂದುಕೊಂಡದ್ದಕ್ಕಿಂತ ಹೆಚ್ಚಾದ ಲಾಭ ದೊರೆಯಿತು. ಊರಿಗೆ ಹಿಂತಿರುಗಿದಮೇಲೆ, ತಾನು ಮುಂಚೆ ಸಂಕಲ್ಪಮಾಡಿಕೊಂಡಿದ್ದಂತೆ ಅವನು ಬ್ರಾಹ್ಮಣ ಭೋಜನಕ್ಕೆ ಬೇಕಾದ ಹಣವನ್ನು ತೆಗೆದುಕೊಂಡು ಕುರುವರಪುರಕ್ಕೆ ಹೊರಟನು.
ದಾರಿಯಲ್ಲಿ, ಅವನ ಹತ್ತಿರ ಬಹಳ ಹಣವಿದೆಯೆಂಬುದನ್ನು ಹೇಗೋ ಅರಿತುಕೊಂಡ ಕೆಲವರು ಕಳ್ಳರು, ತಾವೂ ಕುರುವರಪುರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ, ಅವನ ಸ್ನೇಹ ಸಂಪಾದಿಸಿ, ಅವನ ಜೊತೆಗಾರರಾದರು. ಅವರ ಮಾತುಗಳನ್ನು ನಂಬಿದ ವಲ್ಲಭೇಶ ಅವರೊಡನೆ ಪ್ರಯಾಣ ಮುಂದುವರೆಸಿದ. ಸ್ವಲ್ಪ ಕಾಲ ಹಾಗೆ ಪ್ರಯಾಣಮಾಡುತ್ತಾ, ಅವನಲ್ಲಿ ನಂಬಿಕೆ ಹುಟ್ಟಿಸಿದ ಆ ಕಳ್ಳರು, ದಾರಿಯಲ್ಲಿ ನಿರ್ಜನಪ್ರದೇಶವೊಂದನ್ನು ಸೇರಿದಾಗ, ಅವನ ತಲೆಕಡಿದು ಅವನಲ್ಲಿದ್ದ ಹಣವನ್ನೆಲ್ಲಾ ಅಪಹರಿಸಿದರು. ವಲ್ಲಭೇಶ ಸಾಯುವುದಕ್ಕೆ ಮುಂಚೆ, ಶರಣ್ಯರಕ್ಷಕನೂ, ಭಕ್ತವತ್ಸಲನೂ ಆದ ಶ್ರೀಪಾದರನ್ನು ನೆನಸಿಕೊಂಡನು. ಆ ಪ್ರಭುವು ತಕ್ಷಣವೇ ಅಲ್ಲಿ ತ್ರಿಶೂಲ ಖಡ್ಗ ಧಾರಿಯಾಗಿ ಕಾಣಿಸಿಕೊಂಡು, ಆ ಕಳ್ಳರನ್ನು ಸಂಹರಿಸಿದನು. ಅವರಲ್ಲಿ ಒಬ್ಬ, ಭಕ್ತರಕ್ಷಕನಾದ ಶ್ರೀಪಾದರ ಪಾದಗಳನ್ನು ಹಿಡಿದು, ಅವರಿಗೆ ಶರಣಾಗಿ, “ಸ್ವಾಮಿ, ನಾನು ನಿರಪರಾಧಿ. ನನಗೆ ಕಳ್ಳತನವೆಂದರೇನು ಎಂದು ತಿಳಿಯದು. ಅಜ್ಞಾನದಿಂದಾಗಿ ನಾನು ಈ ಕಳ್ಳರ ಜೊತೆ ಸೇರಿದೆ. ನನ್ನನ್ನು ಮನ್ನಿಸಿ” ಎಂದು ಬೇಡಿಕೊಂಡ. ಶ್ರೀಪಾದರು ಅವನಿಗೆ ಅಭಯನೀಡಿ, “ಈ ಭಸ್ಮವನ್ನು ತೆಗೆದುಕೊಂಡು ಆ ಸತ್ತ ಬ್ರಾಹ್ಮಣನ ಮೇಲೆ ಚುಮುಕಿಸಿ, ಅವನ ಶಿರವನ್ನು ಶರೀರಕ್ಕೆ ಜೋಡಿಸು” ಎಂದು ಆಜ್ಞಾಪಿಸಿದರು. ಅವನು ಶ್ರೀಪಾದರು ಹೇಳಿದಂತೆ ಮಾಡಲು, ಅವರು ಆ ಮೃತದೇಹವನ್ನು ಒಮ್ಮೆ ತಮ್ಮ ಅಮೃತದೃಷ್ಟಿಯಿಂದ ನೋಡಿ, ಅಂತರ್ಧಾನರಾದರು. ಅವರ ದೃಷ್ಟಿ ತಾಕುತ್ತಲೇ ವಲ್ಲಭೇಶನು ಪುನರ್ಜೀವಿತನಾದನು.
ಇಷ್ಟೆಲ್ಲಾ ಆಗುವುದರಲ್ಲಿ ಸೂರ್ಯೋದಯವಾಯಿತು. ಕಳ್ಳರಲ್ಲಿ ಉಳಿದಿದ್ದವನೊಬ್ಬನು ಮಾತ್ರ ಅಲ್ಲಿದ್ದನು. ನಿದ್ರೆಯಿಂದೆದ್ದವನಂತೆ ಎಚ್ಚೆತ್ತು ಕುಳಿತ ವಲ್ಲಭೇಶನು, ಸುತ್ತಲೂ ನೋಡಿ, ಅಲ್ಲಿದ್ದ ಆ ಉಳಿದವನನ್ನು, “ಅಯ್ಯಾ, ಇವರನ್ನು ಯಾರು ಕೊಂದರು? ನೀನು ನನ್ನನ್ನೇಕೆ ಕಾಪಾಡುತ್ತಿದ್ದೀಯೆ?” ಎಂದು ಕೇಳಲು, ಆವನು “ಅಯ್ಯಾ, ಬ್ರಾಹ್ಮಣೋತ್ತಮ, ಈಗ ಇಲ್ಲೊಂದು ವಿಚಿತ್ರ ಘಟನೆ ನಡೆಯಿತು. ನಮ್ಮ ಜೊತೆಯಲ್ಲಿ ಬಂದ ಇವರೆಲ್ಲರೂ ಕಳ್ಳರು. ನಿನ್ನನ್ನು ಕೊಂದು ನಿನ್ನ ಹಣವನ್ನು ಅಪಹರಿಸಿದರು. ಅಷ್ಟರಲ್ಲಿ ಒಬ್ಬ ತಪಸ್ವಿ ಬಂದು ಆ ಕಳ್ಳರನ್ನು ತನ್ನ ತ್ರಿಶೂಲದಿಂದ ತಿವಿದು ಕೊಂದನು. ಆ ತಪಸ್ವಿ ಯಾರೋ ಗೊತ್ತಿಲ್ಲ. ಅವನು ನಿನ್ನನ್ನು ಮಂತ್ರ ಭಸ್ಮದಿಂದ ಜೀವಿಸುವಂತೆ ಮಾಡಿ, ನನ್ನನ್ನು ನಿನಗೆ ಕಾವಲಾಗಿಟ್ಟು ಹೋದನು. ಇದುವರೆಗೂ ಇಲ್ಲೇ ಇದ್ದ ಆತ ಈಗತಾನೇ ಅದೃಶ್ಯನಾದನು. ಆ ತಪಸ್ವಿ ತ್ರಿಪುರಾಂತಕನಾದ ಪರಮೇಶ್ವರನೇ ಇರಬೇಕು. ನಿನ್ನ ಪ್ರಾಣ ರಕ್ಷಣೆ ಮಾಡಲು, ಜಟಾಧಾರಿಯಾಗಿ, ಭಸ್ಮಲಿಪ್ತನಾಗಿ, ತ್ರಿಶೂಲ ಹಿಡಿದು ಬಂದನು. ನೀನು ಮಹಾಭಕ್ತನೆಂದು ತೋರುತ್ತಿದೆ” ಎಂದು ಹೇಳಿದನು.
ಅವನ ಮಾತುಗಳನ್ನು ಕೇಳಿದ ವಲ್ಲಭೇಶ, ಬಹು ಖಿನ್ನನಾಗಿ, ಶ್ರೀಪಾದರ ದರ್ಶನ ಭಾಗ್ಯ ತನಗಾಗಲಿಲ್ಲವೆಂದು ಬಹು ದುಃಖಪಟ್ಟನು. ಕಳ್ಳರು ಅಪಹರಿಸಿದ್ದ ಹಣವನ್ನೆಲ್ಲಾ ತೆಗೆದುಕೊಂಡು, ಗುರುಸ್ಥಾನವಾದ ಕುರುವರಪುರಕ್ಕೆ ಹೊರಟನು. ಅಲ್ಲಿ ವಲ್ಲಭೇಶ, ಶ್ರೀಪಾದರ ಪಾದುಕೆಗಳಿಗೆ ನಾನಾವಿಧವಾದ ಪೂಜೋಪಚಾರಗಳನ್ನು ಮಾಡಿ, ತಾನು ಸಂಕಲ್ಪಿಸಿದ್ದ ಸಾವಿರ ಬ್ರಾಹ್ಮಣರಿಗೆ ಬದಲಾಗಿ ನಾಲ್ಕು ಸಾವಿರ ಬ್ರಾಹ್ಮಣರಿಗೆ ಭೋಜನವಿತ್ತನು.
ಅದೇ ರೀತಿಯಲ್ಲಿ ಕುರುವರಪುರದಲ್ಲಿ ಅನೇಕ ಸದ್ಭಕ್ತರು ಶ್ರೀಪಾದರ ಪಾದುಕೆಗಳಿಗೆ ಪೂಜಾರ್ಚನೆಗಳನ್ನು ಮಾಡಿ ಸಿದ್ಧ ಸಂಕಲ್ಪರಾದರು. ಕುರುವರಪುರದಲ್ಲಿ ಶ್ರೀಪಾದರ ಕೀರ್ತಿ ಈ ರೀತಿಯಲ್ಲಿ ಪ್ರಖ್ಯಾತವಾಯಿತು. ನಾಮಧಾರಕ, ಅದೃಶ್ಯರೂಪದಲ್ಲಿ ಶ್ರೀಪಾದರು, ಅಲ್ಲಿ ನೆಲೆಸಿದ್ದಾರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆ ಸರ್ವಾಂತರ್ಯಾಮಿಯಾದ ನಾರಾಯಣ, ಇಲ್ಲಿದ್ದುಕೊಂಡೂ, ಬೇರೆಡೆಯಲ್ಲಿ ಅವತರಿಸಬಲ್ಲನು. ಶ್ರೀಪಾದರು, ಕುರುವರಪುರದಲ್ಲಿ ಲೋಕರ ದೃಷ್ಟಿಗೆ ಕಾಣದೇ ಹೋದರೂ, ಗುಪ್ತರೂಪದಲ್ಲಿ ಅಲ್ಲಿ ಸರ್ವಕಾಲದಲ್ಲೂ ಇದ್ದಾರೆ. ಇರುತ್ತಾರೆ. ಅವರ ನಂತರದ ಅವತಾರವೇ ಶ್ರೀ ನೃಸಿಂಹ ಸರಸ್ವತಿ ಯತಿಗಳು”
ಇಲ್ಲಿಗೆ ಹತ್ತನೆಯ ಅಧ್ಯಾಯ ಮುಗಿಯಿತು.
[05/01 7:12 AM] S. Bhargav: ||ಶ್ರೀ ಗುರು ಚರಿತ್ರೆ – ಹನ್ನೊಂದನೆಯ ಅಧ್ಯಾಯ||
“ಸ್ವಾಮಿ, ಶ್ರೀಪಾದರು ತಮ್ಮ ಮುಂದಿನ ಅವತಾರ ಎಲ್ಲಿ ಮಾಡಿದರು? ಆ ಅವತಾರದ ವಿಶೇಷಗಳೇನು? ಆ ಅವತಾರದಲ್ಲಿ ಅವರೇನು ಮಾಡಿದರು? ಎಂಬುದನ್ನು ದಯವಿಟ್ಟು ವಿಸ್ತಾರವಾಗಿ ತಿಳಿಸಿ” ಎಂದು ನಾಮಧಾರಕನು ಕೇಳಲು, ಸಿದ್ಧಮುನಿ ಹೇಳಿದರು. “ಮಗು, ಶ್ರೀಪಾದರು, ಹಿಂದೆ, ತಾವು ಅಂಬಿಕೆಗೆ ವರಕೊಟ್ಟಿದ್ದಂತೆ ಅವಳ ಮರುಜನ್ಮದಲ್ಲಿ ಅವಳಿಗೆ ಮಗನಾಗಿ ಜನಿಸಿದರು. ಅಂಬಿಕ, ಗುರೂಪದೇಶವನ್ನು ಪಾಲಿಸುತ್ತಾ, ಶ್ರದ್ಧಾಭಕ್ತಿಗಳಿಂದ ಮಾಡಿದ ಪ್ರದೋಷಪೂಜೆಗಳಿಂದ ವಿಶ್ವೇಶ್ವರನನ್ನು ಅರ್ಚಿಸುತ್ತಾ, ಮರಣಹೊಂದಿದವಳಾಗಿ, ತನ್ನ ಮರುಜನ್ಮದಲ್ಲಿ ಉತ್ತರದೇಶದಲ್ಲಿ ಕಾರಂಜಿನಗರದಲ್ಲಿ, ವಾಜಸನೇಯ ಬ್ರಾಹ್ಮಣನೊಬ್ಬನಿಗೆ ಮಗಳಾಗಿ ಜನಿಸಿದಳು. ಅವಳ ತಂದೆ ಅವಳಿಗೆ ವಿಧ್ಯುಕ್ತವಾಗಿ ಜಾತಕರ್ಮಗಳನ್ನು ಮಾಡಿ, ಅಂಬ ಎಂಬ ಹೆಸರಿಟ್ಟನು. ತಂದೆತಾಯಿಗಳ ಪ್ರೀತಿಪಾತ್ರಳಾಗಿ ದೊಡ್ಡವಳಾದ ಆಕೆಯನ್ನು, ಅವಳ ತಂದೆ, ಶಿವಪೂಜಾನಿರತನಾದ ಮಾಧವ ಎಂಬ ಬ್ರಾಹ್ಮಣನಿಗೆ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟನು. ಅವಳ ಗಂಡನ ಮನೆಯಲ್ಲಿ ಕೂಡಾ ಎಲ್ಲರೂ ಸದಾಚಾರಸಂಪನ್ನರು. ಆ ಸಾಧ್ವಿ, ತನ್ನ ಪೂರ್ವಜನ್ಮ ಸಂಸ್ಕಾರಗಳಿಂದ, ಈ ಜನ್ಮದಲ್ಲೂ ಈಶ್ವರೋಪಾಸನೆಯಲ್ಲಿ ನಿರತಳಾಗಿದ್ದಳು. ಆ ದಂಪತಿಗಳು ಪ್ರದೋಷಕಾಲದಲ್ಲಿ ಶ್ರದ್ಧಾಭಕ್ತಿಗಳಿಂದ, ನಿಯಮಬದ್ಧರಾಗಿ, ನಿರಂತರವಾಗಿ ಶಿವಪೂಜೆಯನ್ನು ಮಾಡುತ್ತಿದ್ದರು. ಶನಿತ್ರಯೋದಶಿಯ ದಿನ ಶಿವನನ್ನು ವಿಶೇಷಪೂಜೆಗಳಿಂದ ಅರ್ಚಿಸುತ್ತಿದ್ದರು.
ಹೀಗೆ ೧೬ವರ್ಷಗಳು ಕಳೆದ ಬಳಿಕ ಅಂಬ ಗರ್ಭಧರಿಸಿದಳು. ಪುಂಸವನಾದಿಗಳನ್ನು ಯಥಾಕಾಲದಲ್ಲಿ ನಡೆಸಿದ ಅವಳ ಗಂಡ ಮಾಧವ, ಅವಳ ಲಕ್ಷಣಗಳನ್ನು ಈಕ್ಷಿಸಿ, ಅವಳಿಗೆ ಜ್ಞಾನೋಪದೇಶಮಾಡಿದ. ಸೀಮಂತಕಾಲದಲ್ಲಿ ಅವಳು ಕೊಟ್ಟ ಬಾಗಿನಗಳನ್ನು ಸ್ವೀಕರಿಸಿದ ಸುವಾಸಿನಿಯರು ಆಕೆಗೆ ಆರತಿ ಮಾಡಿ ಅಶೀರ್ವದಿಸಿದರು. ಒಂಭತ್ತು ತಿಂಗಳು ತುಂಬಿದ ಅಂಬ ಒಂದು ಶುಭ ಮುಹೂರ್ತದಲ್ಲಿ, ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗನನ್ನು ಕಂಡ ಮಾಧವನ ಮನಸ್ಸು ಸಂತಸಗೊಂಡಿತು. ತನ್ನ ಅವತಾರವನ್ನು ಗುರುತಿಸುವುದಕ್ಕೋ ಎಂಬಂತೆ ಆ ಮಗುವು ಹುಟ್ಟುತ್ತಲೇ ಅಳುವುದಕ್ಕೆ ಬದಲು ಪ್ರಣವೋಚ್ಚಾರಣೆ ಮಾಡಿತು. ಅದನ್ನು ಕಂಡವರೂ, ಕೇಳಿದವರೂ ಆಶ್ಚರ್ಯಪಟ್ಟರು. ಜಾತಕರ್ಮಾದಿಗಳನ್ನು ಮಾಡಿದ ಮೇಲೆ, ಜ್ಯೋತಿಷ್ಕರು ಅವನ ಜನ್ಮಕುಂಡಲಿಯನ್ನು ನೋಡಿ, “ಈ ಹುಡುಗನ ಜಾತಕ ಬಹಳ ವಿಶೇಷವಾಗಿದೆ. ಇವನು ಗುರುಗಳಿಗೆ ಗುರುವಾಗುತ್ತಾನೆ. ಇವನ ಅನುಗ್ರಹ ಪಡೆದವನು ವಿಶ್ವವಂದ್ಯನಾಗುತ್ತಾನೆ. ಇವನ ಮಾತು ವೇದವಾಕ್ಯವಾಗುತ್ತದೆ. ಇವನ ಪಾದವು ಚಿಂತಾಮಣಿ ಸದೃಶವಾದದ್ದು. ಇವನ ಇರುವಿಕೆಯಿಂದ ದೇಶದಲ್ಲಿ ಸಮೃದ್ಧಿಯಿರುತ್ತದೆ. ಅಯ್ಯಾ, ಮಾಧವ, ಇವನು ನೆಲೆಸಿರುವ ಮನೆಯಲ್ಲಿ ನವನಿಧಿಗಳೂ ಲಾಸ್ಯವಾಡುತ್ತವೆ. ಇವನು ಗೃಹಸ್ಥನಾಗುವುದಿಲ್ಲ. ತ್ರಿಭುವನ ಪೂಜಿತನಾಗಿ ತನ್ನ ದೃಷ್ಟಿಯಿಂದಲೇ ಪತಿತರನ್ನು ಪುನೀತರನ್ನಾಗಿ ಮಾಡುತ್ತಾನೆ. ಇವನು ನಿಶ್ಚಯವಾಗಿಯೂ ಪರಮೇಶ್ವರನ ಅವತಾರವೇ!” ಎಂದು ಭವಿಷ್ಯ ನುಡಿದರು. ಅವರು ಮುಂದುವರೆದು, “ಅಷ್ಟೇಅಲ್ಲ. ಈತನ ಅನುಗ್ರಹದಿಂದ ಕಲಿಕಾಲಭಯಗಳೂ ಉಪಸಂಹರಿಸಲ್ಪಡುತ್ತವೆ. ನಿಮ್ಮ ಕೋರಿಕೆಗಳೆಲ್ಲವೂ ಅಪ್ರಯತ್ನವಾಗಿ ಸಿದ್ಧಿಯಾಗುತ್ತವೆ. ಮನೆಗೆ ಬಂದಿರುವ ಈ ಸುಪುತ್ರನನ್ನು ಜಾಗ್ರತೆಯಿಂದ ಬೆಳೆಸು” ಎಂದೂ ಹೇಳಿದರು. ಅದನ್ನು ಕೇಳಿದ ಆ ಬಾಲಕನ ಮಾತಾಪಿತೃಗಳು ಅತ್ಯಂತ ಸಂತೋಷಗೊಂಡು ಅಂತಹ ಭವಿಷ್ಯವನ್ನು ನುಡಿದ ಬ್ರಾಹ್ಮಣೋತ್ತಮರಿಗೆ ಯೋಗ್ಯವಾದ ಸತ್ಕಾರವನ್ನು ಮಾಡಿದರು. ಅವರೆಲ್ಲರೂ ಆ ಮಗುವಿಗೆ ಅಶೀರ್ವಾದಗಳನ್ನು ಮಾಡಿ ಹೊರಟು ಹೋದರು.
ಆ ದಂಪತಿಗಳು, ಮಗುವನ್ನು ಬಹು ಜಾಗ್ರತೆಯಿಂದ ಕಾಪಾಡುತ್ತಿದ್ದರು. ಹುಟ್ಟುತ್ತಲೇ ಪ್ರಣವೋಚ್ಚಾರಣೆ ಮಾಡಿತು ಎಂಬ ವಾರ್ತೆ ಊರೆಲ್ಲಾ ಹರಡಿ, ಆ ಮಗುವನ್ನು ನೋಡಲು ಜನ ಗುಂಪುಗುಂಪಾಗಿ ಮಾಧವನ ಮನೆಗೆ ಬರುತ್ತಿದ್ದರು. ಜನರ ದೃಷ್ಟಿ ತಗುಲಿ ಆ ಮಗುವಿಗೆ ತೊಂದರೆಯಾಗುವುದೇನೋ ಎಂದು, ಅಂಬ ಮಗುವನ್ನು ಯಾರಿಗೂ ತೋರಿಸುತ್ತಿರಲಿಲ್ಲ. ಆದರೂ ಅಂಬ ಮಗುವಿಗೆ ಆಗಾಗ ದೃಷ್ಟಿ ನಿವಾರಣೆ ಮಾಡುತ್ತಿದ್ದಳು. ಮಂತ್ರಿಸಿದ ತಾಯಿತವನ್ನು ಕಟ್ಟಿದರು. ಪರಮಾತ್ಮನ ಅವತಾರವಾದ ಆ ಮಗುವಿಗೆ ದೃಷ್ಟಿ ತಗುಲುವುದೆಂದರೇನು? ಆದರೂ ಆ ತಾಯಿತಂದೆಗಳು ಲೋಕರೀತಿಯನ್ನನುಸರಿಸಿ ಮಗುವನ್ನು ಹಾಗೆ ಕಾಪಾಡುತ್ತಿದ್ದರು. ಸಕಾಲದಲ್ಲಿ ಮಾಧವನು ನಾಮಕರಣ ಮಾಡಿ, ಜನರ ತಾಪ ದೈನ್ಯಗಳನ್ನು ಹರಿಸುವವನಾಗಲಿ ಎಂಬ ಇಚ್ಛೆಯಿಂದ, ಆ ಮಗುವಿಗೆ “ನರಹರಿ” ಎಂದು ಹೆಸರಿಟ್ಟನು.
ಮಹಾಪ್ರೀತಿಯಿಂದ ಮಗುವನ್ನು ಸಾಕುತ್ತಿದ್ದ ಅಂಬ, ಮಗುವಿಗೆ ಸ್ತನ್ಯ ಸಾಕಾಗುವುದಿಲ್ಲವೇನೊ ಎಂದು ಸಂದೇಹಪಟ್ಟು, ದಾದಿಯೊಬ್ಬಳನ್ನು ನೇಮಿಸಬೇಕೆಂದು ಮಾಧವನನ್ನು ಕೋರಿದಳು. ಆ ಮಾತು ಕೇಳಿಸಿಕೊಂಡ ಆ ಶಿಶುವು, ತನ್ನ ಚಿನ್ನಾರಿ ಕೈಗಳಿಂದ ತಾಯಿಯ ಸ್ತನಗಳನ್ನು ಸ್ಪರ್ಶಿಸಿದನು. ಆ ಸ್ಪರ್ಶಮಾತ್ರದಿಂದಲೇ ತಾಯಿಯ ಸ್ತನಗಳಿಂದ ಹನ್ನೆರಡು ಧಾರೆಗಳಲ್ಲಿ ಮಧುವಿನಂತಹ ಕ್ಷೀರ ಸುರಿಯಲು ಆರಂಭವಾಯಿತು. ಆ ಹಾಲು ಭೂಮಿಯಮೇಲೆ ಬೀಳುತ್ತಿದ್ದಂತೆಯೇ ಆ ತಾಯಿ ದೃಷ್ಟಿದೋಷದ ಭಯದಿಂದ, ಮಗುವನ್ನು ಉಡಿಯಲ್ಲಿ ತೆಗೆದುಕೊಂಡು ಅದಕ್ಕೆ ಹಾಲೂಡಿಸಲು ಪ್ರಾರಂಭಿಸಿದಳು. ಆ ಮಗುವು ತಾಯಿಯ ತೊಡೆಯ ಮೇಲೆ ಮಲಗದೆ ಸದಾ ನೆಲದಮೇಲೆ ಮಲಗಿ ಆಡುತ್ತಿತ್ತು. ಹೀಗೆ ಬೆಳೆಯುತ್ತಿದ್ದ ಆ ಮಗು, ಮಾತನಾಡುವ ವಯಸ್ಸು ಬಂದರೂ, ಓಂಕಾರವೊಂದನ್ನು ಬಿಟ್ಟು ಮತ್ತಾವ ಮಾತನ್ನೂ ಆಡಲಿಲ್ಲ. ತಂದೆತಾಯಿಗಳು ಇದರಿಂದ ಬಹಳ ಖಿನ್ನರಾಗಿ ಎಷ್ಟೇ ಪ್ರಯತ್ನಮಾಡಿದರೂ ಆ ಮಗುವು, ಅವರ ಮಾತುಗಳನ್ನು ಕೇಳಿಸಿಕೊಂಡು ಓಂಕಾರವನ್ನು ಹೇಳುತ್ತಿತ್ತೇ ಹೊರತು, ಮತ್ತಾವ ಮಾತನ್ನೂ ಆಡುತ್ತಿರಲಿಲ್ಲ. ಇವನು ಮೂಗನಾಗಿಹೋಗುತ್ತಾನೇನೋ ಎಂಬ ಭಯ ತಂದೆತಾಯಿಗಳನ್ನು ಕಾಡಿತು. ಇದಕ್ಕೆ ಕಾರಣವೇನಿರಬಹುದೆಂದು ಜ್ಯೋತಿಷಿಗಳನ್ನು ಕೇಳಲು ಅವರು, “ಕುಲದೇವತೆಯ ಪೂಜೆ ಮಾಡಿ, ಶನಿವಾರ ಭಾನುವಾರಗಳಲ್ಲಿ ಅಶ್ವತ್ಥದ ಎಲೆಯಮೇಲೆ ಊಟ ಮಾಡಿಸಿ” ಎಂದರು. ಕೆಲವರು ಅವನನ್ನು ಹೆಸರಿಟ್ಟು ಕರೆದು ಮಾತನಾಡಿಸಿ ಎಂದರು. ಯಾರು ಏನು ಹೇಳಿದರೂ ಆ ತಂದೆತಾಯಿಗಳು ಅದನ್ನೆಲ್ಲಾ ಮಾಡುತ್ತಿದ್ದರು. ಅದೆಲ್ಲವನ್ನೂ ಕೇಳಿಸಿಕೊಂಡ ನರಹರಿ ಮಾತ್ರ ಏನೂ ಹೇಳದೆ ಪ್ರಣವೋಚ್ಚಾರ ಮಾಡುತ್ತಿದ್ದನು. ಅದನ್ನು ಕೇಳಿದವರೆಲ್ಲ ಆಶ್ಚರ್ಯಪಟ್ಟು, “ಇವನು ಕಿವುಡನಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಂಡರೂ ಮಾತನಾಡುತ್ತಿಲ್ಲ. ಅದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ” ಎಂದರು. ಈ ರೀತಿಯಲ್ಲಿ ಆ ಹುಡುಗನಿಗೆ ಏಳು ವರ್ಷವಾಯಿತು. ಆದರೂ ಮಾತನಾಡದೇ ಇದ್ದ ಆ ಬಾಲಕನನ್ನು ಕಂಡು ಆ ಜನನಿಜನಕರು, “ಇದು ನಮ್ಮ ದುರದೃಷ್ಟ. ಈ ಮೂಕ ಬಾಲಕ ಉಪನಯನಯೋಗ್ಯನಾಗಿದ್ದಾನೆ. ಆದರೆ ಅವನಿಗೆ ಹೇಗೆ ಮುಂಜಿಮಾಡುವುದು?” ಎಂದು ಯೋಚಿಸುತ್ತಾ, ಬ್ರಾಹ್ಮಣ ಪಂಡಿತರನ್ನು ಕೇಳಿದರು. ಅವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾನಾದ್ದರಿಂದ ಎಂಟುವರ್ಷವಾದ ಮೇಲೆ ಮುಂಜಿಮಾಡಿ ಎಂದು ಹೇಳಿದರು. ಈ ಮೂಕ ಬಾಲಕನಿಗೆ ಬ್ರಹ್ಮೋಪದೇಶ ಮಾಡುವುದು ಹೇಗೆ ಎಂದು ಅಂಬ ಮಾಧವರು ಚಿಂತಿಸುತ್ತಿದ್ದರು. “ಮಹಾದೇವನನ್ನು ಆರಾಧಿಸಿದೆವು. ವಿಶೇಷವಾಗಿ ತ್ರಯೋದಶಿಯಂದು ಶಿವಪೂಜಾವ್ರತ ಮಾಡಿದೆವು. ಅವೆಲ್ಲವೂ ವ್ಯರ್ಥವಾಯಿತೇ? ಸುಗುಣನಾದ ಮಗನಾಗುತ್ತಾನೆಂದು ಶಿವ ಅನುಗ್ರಹಿಸಿದ್ದನು. ಆದರೆ ಈ ಬಾಲಕ ಮಾತೇ ಆಡುವುದಿಲ್ಲ. ಈಗೇನು ಮಾಡಬೇಕು? ನಾವು ಈ ಬಾಲಕನೊಬ್ಬನೇ ನಮಗೆ ಆಸರೆ ಎಂದು ನಂಬಿ, ಬೇರೆ ಏನನ್ನೂ ಕಾಣಲಿಲ್ಲ. ಇವನು ನಮ್ಮನ್ನು ವೃದ್ಧಾಪ್ಯದಲ್ಲಿ ಹೇಗೆ ರಕ್ಷಿಸುತ್ತಾನೆ? ಇವನು ಹೀಗಾಗಿರುವುದರಿಂದ ನಮ್ಮ ಕೋರಿಕೆಗಳು ತೀರಲಿಲ್ಲ. ಶನಿತ್ರಯೋದಶಿಯಂದು ಅರ್ಚಿಸಲ್ಪಟ್ಟ ಆ ಶಿವ ನಮಗೆ ಇಂತಹ ವರವನ್ನು ಕೊಟ್ಟನೇ?” ಎಂದು ನಾನಾಪ್ರಕಾರವಾಗಿ ದುಃಖಿಸುತ್ತಿದ್ದ, ಆ ತಂದೆತಾಯಿಗಳನ್ನು ಆ ಪಶುಬಾಲಕ ಸಮೀಪಿಸಿ, ಅವರನ್ನು ಸಂಜ್ಞೆಗಳಿಂದ ಸಮಾಧಾನಪಡಿಸಿದನು. ಆದರೂ ತಾಯಿಯಾದ ಅಂಬ ಇನ್ನೂ ದುಃಖಿಸುತ್ತಿರಲು, ಆ ಬಾಲಕ ಒಂದು ಲೋಹದ ತುಂಡನ್ನು ತಂದು ಅದನ್ನು ಸ್ಪರ್ಶಮಾತ್ರದಿಂದಲೇ ಚಿನ್ನವನ್ನಾಗಿ ಮಾಡಿ, ತಾಯಿಗೆ ಕೊಟ್ಟ. ಅದನ್ನು ಕಂಡ ಅಂಬ ಆಶ್ಚರ್ಯಪಟ್ಟು, ತನ್ನ ಗಂಡನನ್ನು ಕರೆದು ಆ ಚಿನ್ನದ ತುಂಡನ್ನು ತೋರಿಸಿದಳು. ಅವರು ಇನ್ನೊಂದು ಚೂರು ಲೋಹವನ್ನು ತಂದು ಅವನ ಕೈಲಿಟ್ಟರು. ಅದು ಕೂಡಾ ಚಿನ್ನವಾಯಿತು. ಹೀಗೆ ಮನೆಯಲ್ಲಿ ಸ್ವರ್ಣಾಭಿವೃದ್ಧಿಯನ್ನು ಕಂಡ ಅವರು, ಆ ಬಾಲಕ ಅವತಾರಪುರುಷನೆಂದು ಅವನಲ್ಲಿ ಹೆಚ್ಚಿನ ವಿಶ್ವಾಸ ತೋರಿದರು. ಆ ಬಾಲಕನನ್ನು ತಬ್ಬಿಕೊಂಡು ಅಂಬ, “ತಂದೆ, ನರಹರಿ, ನೀನು ದಯಾಳು. ಕುಲದೀಪಕ. ನಮಗೆ ಸಕಲ ಸುಖಗಳನ್ನೂ ಕೊಟ್ಟಿದ್ದೀಯೆ. ಆದರೂ ನಿನ್ನ ಈ ಮೌನಕ್ಕೆ ಕಾರಣವೇನು? ಮಾಯಾಮೋಹಿತರಾಗಿ, ಅಜ್ಞಾನವೆಂಬ ಕತ್ತಲೆಯಲ್ಲಿ ಬಿದ್ದಿರುವ ನಮ್ಮ ಕೋರಿಕೆಯನ್ನು ಮನ್ನಿಸಿ, ನಿನ್ನ ಅಮೃತತುಲ್ಯವಾದ ಮಾತುಗಳಿಂದ ನಮ್ಮನ್ನು ಸಂತೋಷಗೊಳಿಸು” ಎಂದು ಪ್ರಾರ್ಥಿಸಿದಳು. ಅದಕ್ಕೆ ನರಹರಿ, “ಮೌಂಜಿ ಬಂಧನ ಉಪವೀತಧಾರಣೆಗಳಾದ ಮೇಲೆ ನಿನ್ನೊಡನೆಯೇ ಮೊದಲ ಮಾತು ಆಡುತ್ತೇನೆ” ಎಂದು ತಾಯಿಗೆ ಸಂಜ್ಞಾಪೂರ್ವಕವಾಗಿ ತಿಳಿಸಿದನು.
ತಕ್ಷಣವೇ ಮಾಧವ ವಿದ್ವಾಂಸರಾದ ಜ್ಯೋತಿಷ್ಕರನ್ನು ಕರೆಸಿ, ಆ ಹುಡುಗನ ಉಪನಯನ ಮುಹೂರ್ತವನ್ನು ನಿಶ್ಚಯಮಾಡಿದನು. ಎಲ್ಲ ಏರ್ಪಾಡುಗಳನ್ನೂ ಮಾಡಿಕೊಂಡು, ಬಂಧುಬಾಂಧವರನ್ನೆಲ್ಲಾ ಆಹ್ವಾನಿಸಿ, ಬ್ರಾಹ್ಮಣೋತ್ತರಮನ್ನು ಕರೆಸಿ, ಮಂಟಪಾದಿಗಳನ್ನು ನಿರ್ಮಿಸಿ, ಎಲ್ಲವನ್ನೂ ಸಿದ್ಧಪಡಿಸಿದನು. ನೆಂಟರಿಷ್ಟರೆಲ್ಲರೂ ಸೇರಿದರು. ಮಾಡಿದ್ದ ಏರ್ಪಾಡುಗಳನ್ನು ಕಂಡು ಎಲ್ಲರೂ ಸಂತೋಷಗೊಂಡರು. ಅಷ್ಟೊಂದು ಅದ್ಧೂರಿಯಾಗಿ ಎಲ್ಲವನ್ನೂ ಮಾಡುತ್ತಿರುವ ಮಾಧವನನ್ನು ಕಂಡ ಆ ಊರಿನ ಜನ, “ಹುಡುಗ ಮೂಕನಲ್ಲವೇ? ಅವನ ತಂದೆ ಭ್ರಾಂತಿಯಿಂದ ಇಷ್ಟೆಲ್ಲಾ ಖರ್ಚು ವ್ಯರ್ಥವಾಗಿ ಮಾಡುತ್ತಿದ್ದಾನೆ. ಅವನ ಮಗ ಬ್ರಹ್ಮೋಪದೇಶವನ್ನು ಹೇಗೆ ಪಡೆಯಬಲ್ಲ? ಅವನ ತಂದೆ ಅವನಿಗೆ ಸಾವಿತ್ರಿ ಮಂತ್ರವನ್ನು ಹೇಗೆ ಉಪದೇಶಿಸಬಲ್ಲ?” ಎಂದು ನಾನಾವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಕೆಲವರು, “ಅವನಿಗೆ ಮಂತ್ರೋಪದೇಶವಾದರೆಷ್ಟು ಬಿಟ್ಟರೆಷ್ಟು? ಅದರಿಂದ ನಮಗೇನಾಗಬೇಕಾಗಿದೆ? ನಮಗೆ ಮೃಷ್ಟಾನ್ನ ಭೋಜನ, ದಾನ ದಕ್ಷಿಣೆಗಳು ಹೇರಳವಾಗಿ ಸಿಕ್ಕುವುದಲ್ಲವೇ? ಅಷ್ಟೇ ಸಾಕು” ಎನ್ನುತ್ತಿದ್ದರು. ಹೀಗೆ ಅಲ್ಲಿ ಸೇರಿದ್ದ ಅನೇಕರು ಅನೇಕ ರೀತಿಯಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, “ಈ ಬಾಲಕ ದೈವಾಂಶಸಂಭೂತನು” ಎಂಬ ಸದ್ಬುದ್ಧಿಯಿಂದ ಅವನ ತಂದೆ ತಾಯಿಗಳು, ಶಾಸ್ತ್ರೋಕ್ತವಾಗಿ ಎಲ್ಲ ವಿಧಿಗಳನ್ನೂ ಮುಗಿಸಿದರು. ನಂತರ, ಅವನ ತಂದೆ ವಟುವನ್ನು, ತಾಯಿಯೊಡನೆ ಭೋಜನ ಮಾಡೆಂದು ಹೇಳಿದನು. ತಂದೆಯ ಮಾತಿನಂತೆ, ವಟುವು ತಾಯಿಯೊಡನೆ ಭೋಜನ ಮುಗಿಸಿ, ತಾಯಿಯ ಆಣತಿಯಂತೆ ಮೌಂಜಿಧಾರಣೆ ಮಾಡಿ, ಮತ್ತೆ ತಂದೆಯ ಬಳಿಗೆ ಬಳಿಗೆ ಬಂದನು. ಸುಮುಹೂರ್ತದಲ್ಲಿ ಯಥಾವಿಧಿಯಾಗಿ ಉಪವೀತ ಧಾರಣೆ ಮಾಡಿ, ಮಂತ್ರೋಪದೇಶದ ಮೂಲಕ ಮೌಂಜಿಯನ್ನು ಕಟಿಯಲ್ಲಿ ಬಂಧಿಸಿದನು. ವಟುವು ಗಾಯತ್ರಿ ಉಪದೇಶವನ್ನು ಪಡೆದರೂ, ಮಂತ್ರವನ್ನು ಮೌನವಾಗಿ ಜಪಿಸಿದನೇ ಹೊರತು, ಒಂದು ಮಾತೂ ಅವನ ಬಾಯಿಂದ ಈಚೆಗೆ ಬರಲಿಲ್ಲ.
ತಾಯಿ, ಭಿಕ್ಷೆಯೊಡನೆ ಬಂದು, ಮಗನ ಮಾತುಗಳನ್ನು ಕೇಳುವ ಆಸೆಯಿಂದ, ಅವನನ್ನು ಅಶೀರ್ವದಿಸಿ, ಮೊದಲ ಭಿಕ್ಷೆಯನ್ನು ನೀಡಿದಳು. ಅದನ್ನು ಸ್ವೀಕರಿಸಿ, ವಟುವು, “ಅಗ್ನಿಮೀಳೇ….ಎಂದು ಪ್ರಾರಂಭಿಸಿ, ಋಗ್ವೇದವನ್ನು ಹೇಳಿದನು. ಮತ್ತೆ ತಾಯಿ ಎರಡನೆಯ ಭಿಕ್ಷೆ ನೀಡುತ್ತಲೂ, ಅವನು “ಇಷೇತ್ವಾ…..ಎಂದು ಪ್ರಾರಂಭಿಸಿ, ಯಜುರ್ವೇದವನ್ನು ಹೇಳಿದನು. ಅದನ್ನು ಕೇಳಿ ಜನರೆಲ್ಲಾ ಬೆರಗಾಗಿಹೋದರು. ತಾಯಿ ಮೂರನೆಯ ಭಿಕ್ಷೆ ಕೊಡಲು, ಅವನು “ಅಗ್ನ ಆಯಾಹಿ….ಎಂದು ಪ್ರಾರಂಭಿಸಿ ವೇದಪ್ರವರ್ತಕನಂತೆ ಸಾಮವೇದ ಗಾನಮಾಡಿದನು. ಆ ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲಾ, ಮೂಕವಿಸ್ಮಿತರಾಗಿ, “ಈ ಮೂಗ ಹೇಗೆ ವೇದಗಳನ್ನು ಹೇಳಿದನು?” ಎಂದು ದಂಗಾಗಿ ಹೋದರು.”ಇವನು ನಿಜವಾಗಿಯೂ ಪರಮಾತ್ಮನೇ! ದೇವರ ಅವತಾರವೇ! ನರನಲ್ಲ. ಜಗದ್ಗುರುವು” ಎಂದು ಭಾವಿಸಿ, ಎಲ್ಲರೂ ಅವನಿಗೆ ನಮಸ್ಕರಿಸಿದರು. ಮಾಧವನು ಬಹಳ ಸಂತುಷ್ಟನಾದನು.
ವಟುವಾದ ನರಹರಿ ತಾಯಿಯ ಬಳಿಗೆ ಹೋಗಿ, ’ಅಮ್ಮ, ನೀನು ನನಗೆ ಭಿಕ್ಷೆಯನ್ನು ಗ್ರಹಿಸು ಎಂದು ಆಜ್ಞೆ ಕೊಟ್ಟೆ. ನಿನ್ನಮಾತು ಅಸತ್ಯವಾಗಬಾರದು. ನನಗೆ ಅನುಮತಿ ಕೊಡು. ನಾನು ಭಿಕ್ಷುವಾಗಿ, ಬ್ರಹ್ಮಚಾರಿಯಾಗಿ, ಗೃಹಸ್ಥರ ಮನೆಗಳಲ್ಲಿ ಭಿಕ್ಷೆಯೆತ್ತುತ್ತಾ, ವೇದಾಂತನಿರತನಾಗಿ ಲೋಕಾನುಗ್ರಹಕ್ಕಾಗಿ ಲೋಕಸಂಚಾರ ಮಾಡುತ್ತೇನೆ” ಎಂದನು. ಅದನ್ನು ಕೇಳಿದ ಅಂಬ, ದುಃಖದಿಂದ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಒಂದುಕ್ಷಣಕಾಲ ಮೃತಪ್ರಾಯಳಾಗಿ ಕಂಡ ಅವಳು ಎದ್ದು, ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ, ಮಗನನ್ನು ಮತ್ತೆ ಮತ್ತೆ ನೋಡುತ್ತಾ, “ಮಗು, ನೀನು ವೃದ್ಧಾಪ್ಯದಲ್ಲಿ ನಮ್ಮನ್ನು ರಕ್ಷಿಸುತ್ತೀಯೆ ಎಂದು ಬಹಳ ಆಸೆಯಿಂದಿದ್ದ ನಮ್ಮ ಆಸೆಯಲ್ಲ ಚೂರುಚೂರಾಗಿ ಹೋಯಿತು. ನೀನು ನಿನ್ನ ಶೈಶವದಲ್ಲಿ ಮೌನಿಯಾಗಿ ಒಂದು ಮಾತೂ ಆಡಲಿಲ್ಲ. ಇದುವರೆಗೂ ನಿನ್ನ ಮಾತುಗಳನ್ನೇ ಕೇಳಿರಲಿಲ್ಲ. ಈಗ ಮಾತನಾಡಿ ನಮಗೆ ಅಮೃತವನ್ನು ಕುಡಿಸಿದೆ. ನನ್ನ ಈಶ್ವರಪೂಜೆಯೆಲ್ಲಾ ಸಫಲವಾಯಿತು ಎಂದುಕೊಳ್ಳುತ್ತಿರುವಾಗಲೇ ನಿನ್ನಿಂದ ನಾನು ಕೇಳುತ್ತಿರುವುದೇನು?” ಎಂದು ಮುಂತಾಗಿ ಪ್ರಲಾಪಿಸುತ್ತಾ ಕೇಳಿದಳು.
ಆಗ ನರಹರಿ ತನ್ನ ತಾಯಿಯನ್ನು ಸಮಾಧಾನಗೊಳಿಸಲು, “ಅಮ್ಮಾ, ನನ್ನ ಮಾತು ಕೇಳು. ಬ್ರಹ್ಮಜ್ಞಾನಿಯಾದ ನೀನು ಹೀಗೆ ದುಃಖಿಸಬಾರದು. ಧರ್ಮ ರಕ್ಷಣೆಗಾಗಿ ನಾನು ಭೂಮಿಯಲ್ಲಿ ಅವತರಿಸಿದ್ದೇನೆ. ನಿನಗೆ ಇನ್ನೂ ನಾಲ್ಕು ಪುತ್ರರು ಜನಿಸುತ್ತಾರೆ. ಅವರೆಲ್ಲರೂ ನಿಮ್ಮ ಸೇವೆಯಲ್ಲಿರುತ್ತಾರೆ. ಹಿಂದಿನ ಜನ್ಮದಲ್ಲಿ ನೀನು ಶ್ರದ್ಧಾಭಕ್ತಿಗಳಿಂದ ಶಿವಪೂಜೆಯನ್ನು ಮಾಡಿದ್ದೀಯೆ” ಎಂದು ಆಕೆಯ ತಲೆಯಮೇಲೆ ಕೈಯಿಟ್ಟನು. ಆ ಕರಸ್ಪರ್ಶದಿಂದ ಆಕೆಗೆ ಪೂರ್ವಜನ್ಮ ಸ್ಮೃತಿಗೆ ಬಂದು, ಆ ಜನ್ಮದಲ್ಲಿ ನಡೆದ ವಿಷಯವೆಲ್ಲಾ ಗೋಚರವಾಯಿತು. ತನ್ನ ಮಗನೇ ಹಿಂದಿನ ಶ್ರೀಪಾದ ಶ್ರೀವಲ್ಲಭರೆಂದು ಆಕೆ ಗುರುತಿಸಿ, ಅವನ ಪಾದಾಭಿವಂದನೆ ಮಾಡಿದಳು. ನರಹರಿ ತಾಯಿಯನ್ನು ಹಿಡಿದು ಮೇಲಕ್ಕೆಬ್ಬಿಸಿ, “ಅಮ್ಮಾ ನನ್ನ ಮಾತು ಕೇಳು. ಈ ವಿಷಯವನ್ನು ರಹಸ್ಯವಾಗಿಡು. ನಾನು ಈ ಸಂಸಾರದಲ್ಲಿ ಇರುವುದಿಲ್ಲ. ನನ್ನನ್ನು ಸನ್ಯಾಸಿಯೆಂದು ತಿಳಿದುಕೋ. ಆದ್ದರಿಂದ ನಾನು ತೀರ್ಥಯಾತ್ರೆಗೆ ಹೋಗಲು ಅನುಮತಿ ಕೊಡು” ಎಂದು ಹೇಳಿದನು.
ಸ್ವಲ್ಪಕಾಲ ಮೌನವಾಗಿದ್ದ ಅಂಬ, “ನೀನು ನಮ್ಮನ್ನು ಬಿಟ್ಟು ಹೊರಟುಹೋದರೆ ನಾನು ಮಗನಿಲ್ಲದವಳಾಗುತ್ತೇನೆ. ಮಗನಿಲ್ಲದೆ ನಾನು ಹೇಗೆ ಜೀವಿಸಲಿ? ನಿನಗಿದು ಧರ್ಮವಲ್ಲ. ಬಾಲ್ಯದಿಂದಲೇ ತಪೋವೃತ್ತಿ ಧರ್ಮವೆಂದು ಹೇಗೆ ಹೇಳುತ್ತೀಯೆ? ಗುರುಕುಲದಲ್ಲಿ ಬ್ರಹ್ಮಚರ್ಯೆ ಮಾಡುವುದೇ ನಿನ್ನ ಧರ್ಮ. ಹನ್ನೆರಡು ವರ್ಷ ಬ್ರಹ್ಮಚಾರಿಯಾಗಿದ್ದು ಆ ನಂತರ ಗೃಹಸ್ಥನಾಗಿ, ಪುಣ್ಯಕಾರ್ಯಗಳನ್ನೆಸಗಬೇಕು. ಗೃಹಸ್ಥಾಶ್ರಮವು ಬಹಳ ಮುಖ್ಯವಾದದ್ದು. ಅದರ ಆಚರಣೆಯಿಂದಲೇ ನರನು ಮುಂದಿನ ಆಶ್ರಮಗಳಿಗೆ ಸಮರ್ಥನಾಗುತ್ತಾನೆ. ಅದಾದನಂತರ ಈಷಣತ್ರಯಗಳನ್ನು ಬಿಟ್ಟು ಪರಿವ್ರಾಜಕನಾಗಬೇಕು. ಅದು ಧರ್ಮ. ಋಷಿಋಣ ತೀರಿಸಲು ವೇದಾಧ್ಯಯನ. ಆಮೇಲೆ ಅನುರೂಪಳಾದ ಕನ್ಯೆಯನ್ನು ವಿವಾಹವಾಗಿ. ಗೃಹಸ್ಥನಾಗಿ, ಪುತ್ರವಂತನಾಗಿ, ಪಿತೃಋಣವನ್ನು ತೀರಿಸಿ, ಯಜ್ಞ ಯಾಗಾದಿಗಳನ್ನು ಮಾಡಿ ಸನ್ಯಾಸಿಯಾಗಬೇಕು. ಬುದ್ಧಿವಂತನಾದವನು ಹಾಗೆ ಮಾಡದೆ ಮೊದಲೇ ಸನ್ಯಾಸಿಯಾದರೆ ಪತನವಾಗುತ್ತಾನೆ. ಇಂದ್ರಿಯವಾಸನೆಗಳು ತೃಪ್ತಿಗೊಂಡಮೇಲೆ ಸನ್ಯಾಸಿಯಾಗಬೇಕು” ಎಂದು ಹೇಳಿದಳು. ಅದನ್ನು ಕೇಳಿ ಶ್ರೀಗುರುವು ನಗುತ್ತಾ ಅವಳಿಗೆ ತತ್ತ್ವೋಪದೇಶ ಮಾಡಿದನು.
ಇಲ್ಲಿಗೆ ಹನ್ನೊಂದನೆಯ ಅಧ್ಯಾಯ ಮುಗಿಯಿತು.
[06/01 6:29 AM] S. Bhargav: ||ಶ್ರೀ ಗುರು ಚರಿತ್ರೆ – ಹನ್ನೆರಡನೆಯ ಅಧ್ಯಾಯ||
“ನಾಮಧಾರಕ, ಶ್ರೀಗುರುವು ತನ್ನ ತಾಯಿಗೆ ತಿಳಿಸಿದ ತತ್ತ್ವವನ್ನು ಹೇಳುತ್ತೇನೆ ಕೇಳು. ಶ್ರೀ ಗುರುವು ಹೇಳಿದರು.”ಅಮ್ಮಾ, ನೀನು ಹೀಗೆ ಆಣತಿ ಮಾಡುತ್ತಿದ್ದೀಯೆ. ಆದರೆ ದೇಹವು ಅನಿತ್ಯವಾದುದು. ಈ ಭೌತಿಕ ಶರೀರದ ಜೀವಿತಕಾಲ ಕ್ಷಣಭಂಗುರವಾದದ್ದು. ವೈಭವಗಳು ಶಾಶ್ವತವಲ್ಲ. ಮೃತ್ಯುವು ನಿತ್ಯವೂ ಹತ್ತಿರವಾಗುತ್ತಲೇ ಇದೆ. ಎಲ್ಲಿಯಾದರೂ ಯಾರಾದರೂ ಚಿರಂಜೀವಿಯಾಗಿದ್ದರೆ ಅವನಿಗೆ ನಿನ್ನ ಉಪದೇಶವನ್ನು ಕೊಡು. ಹಗಲು ರಾತ್ರಿಗಳೆನ್ನದೆ ಆಯುಸ್ಸು ಕ್ಷೀಣವಾಗುತ್ತಲೇ ಇರುತ್ತದೆ. ಅದರಿಂದಲೇ ಸಣ್ಣವನಾಗಿರುವಾಗಲಿಂದಲೇ ಧರ್ಮಾಚರಣೆಯನ್ನು ಮಾಡಲುಪಕ್ರಮಿಸಬೇಕು. ಸ್ವಲ್ಪವೇ ಆದ ನೀರಿನಲ್ಲಿ ಮೀನುಗಳು ಕಷ್ಟಪಡುವಂತೆ, ಮಾನವನು ಅಲ್ಪಾಯುಷಿಯಾಗಿ ಕಷ್ಟಪಡುತ್ತಿರುತ್ತಾನೆ. ಆದ್ದರಿಂದ ಮನುಷ್ಯನಿಗೆ ಧರ್ಮ ಸಂಗ್ರಹಣವು ಆದ್ಯ ಕರ್ತವ್ಯ. ಸೂರ್ಯರಥವು ಧಾವಿಸುತ್ತಾ, ಒಂದು ನಿಮಿಷಕಾಲದಲ್ಲಿ ನೂರಾರು ಯೋಜನೆಗಳನ್ನು ದಾಟುವಂತೆ, ಮನುಷ್ಯನ ಆಯುಸ್ಸು ಧಾವಿಸುತ್ತಿರುತ್ತದೆ. ಆದ್ದರಿಂದ ಕ್ಷಣಭಂಗುರವಾದ ಈ ದೇಹ ಇನ್ನೂ ಧೃಢವಾಗಿರುವಾಗಲೇ ಪುಣ್ಯವನ್ನು ಆಚರಿಸಬೇಕು. ವೃಕ್ಷದ ಕೊನೆಯಲ್ಲಿರುವ ಎಲೆಯಮೇಲೆ ಬಿದ್ದ ನೀರಿನ ಹನಿ ಜಾರಿ ಕೆಳಗೆ ಬೀಳುವಂತೆ, ಈ ಶರೀರವು ಪತನವಾಗುವುದು. ಆಕಸ್ಮಿಕವಾಗಿ ಮರಣವು ಆಸನ್ನವಾಗುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳಲ್ಲಿ ಎಂದಾದರೂ ಮರಣ ಉಂಟಾಗಿ, ಈ ಶರೀರ ನಾಶವಾಗಬಹುದು. ಅದರಿಂದಲೇ ಈ ನಶ್ವರವಾದ ಶರೀರವನ್ನು ನಂಬಬಾರದು. ಮೃತ್ಯುವು ಮಾನವನ ಬೆನ್ನಂಟಿಯೇ ಇರುತ್ತದೆ. ಅದರಿಂದ ಧರ್ಮವನ್ನು ಸಣ್ಣತನದಿಂದಲೇ ಆಚರಿಸಬೇಕು. ಒಣಗಿದ ಎಲೆ ಗಿಡದಿಂದ ಉದುರಿಹೋಗುವಂತೆ ಈ ದೇಹವು ಎಂದು ಬಿದ್ದುಹೋಗುವುದೋ ತಿಳಿಯದು. ಸಾಲವನ್ನು ಕೊಟ್ಟವನು ಸದಾ ಹೇಗೆ ದಿನಗಳನ್ನೆಣಿಸುತ್ತಿರುತ್ತಾನೋ ಹಾಗೆ ಮೃತ್ಯುವು ಮಾನವನ ಆಯುಸ್ಸಿನ ಲೆಕ್ಕ ಮಾಡುತ್ತಿರುತ್ತಾನೆ. ನದಿಗಳು ನೀರು ಹೊತ್ತು ಸಮುದ್ರವನ್ನು ಸೇರಿದಮೇಲೆ ಹೇಗೆ ಹಿಂದಿರುಗಲಾರವೋ, ಹಾಗೆ ಮನುಷ್ಯನ ಆಯುಸ್ಸು ಹಿಂತಿರುಗಿ ಬರುವುದಿಲ್ಲ. ಆಯುಸ್ಸನ್ನು ಹಿಂದೆ ಹಾಕಿ, ಹಗಲು ರಾತ್ರಿಗಳು ಮುಂದುಮುಂದಕ್ಕೆ ಓಡುತ್ತಿರುತ್ತವೆಯೇ ಹೊರತು, ಹಿಂತಿರುಗಿ ನೋಡುವುದಿಲ್ಲ. ಆದ್ದರಿಂದ ಜೀವಿತಕಾಲದಲ್ಲಿ ಪುಣ್ಯವನ್ನಾಚರಿಸದವನು ಪಶು ಸಮಾನನೇ! ಪುಣ್ಯಮಾಡದ ದಿನಗಳು ವ್ಯರ್ಥವಾದಂತೆಯೇ! ಯಮನಿಗೆ ದಯೆಯಿಲ್ಲ. ಆದ್ದರಿಂದ, ಈಗಲೇ, ಇಲ್ಲೇ, ಪುಣ್ಯಮಾಡಬೇಕು. ಹೆಂಡತಿ, ಮಕ್ಕಳು, ಮನೆ, ಸಂಪತ್ತು ಆಯುಸ್ಸು ಎಲ್ಲವೂ ಶಾಶ್ವತ ಎಂದು ನಂಬಿದವನು ಪಶುವಿಗೆ ಸಮಾನನು! ದುಸ್ತರವಾದ ಈ ಸಂಸಾರದಲ್ಲಿ ಮುದಿತನ, ಮೊಸಳೆಗಳಂತೆ ಕಾದು ಕೂತಿದೆ. ಅದರಿಂದ ಯೌವನದಲ್ಲಿಯೇ ಪುಣ್ಯಾರ್ಜನೆಯ ಕಾರ್ಯಗಳನ್ನು ಮಾಡಬೇಕು”.
ಹೀಗೆ ಶ್ರೀಗುರುವು ತಾಯಿಗೆ ಉಪದೇಶಕೊಟ್ಟು, “ಅಮ್ಮಾ, ನನ್ನನ್ನು ತಡೆಯಬೇಡ. ಶಠ, ಅಮರ್ತ್ಯ, ಇಲ್ಲವೇ ಯಮನ ಶಿಷ್ಯನಾದವನು ಮಾತ್ರವೇ ಧರ್ಮಾಚರಣೆಯನ್ನು ಮುಂದೆಂದಾದರೂ ಮಾಡೋಣ ಎಂದು ಆಲಸ್ಯ ಮಾಡುವವನು. ಈ ಸಂಸಾರ ಸಾರವಿಲ್ಲದ್ದು. ಜೀವನವೆಲ್ಲಾ ಸ್ವಪ್ನದಂತೆ. ಮಾಲತಿ ಪುಷ್ಪ ಬಹಳ ಬೇಗ ಬಾಡಿಹೋಗುವಂತೆ, ಈ ಜನ್ಮವೂ ಬಹು ಬೇಗ ಅಂತರಿಸಿಹೋಗುವುದು. ಮಿಂಚು ಕ್ಷಣಕಾಲ ಮೆರೆದು ಮರೆಯಾಗುವಂತೆ, ನೋಡುತ್ತಿರುವಂತೆಯೇ ಮರೆಯಾಗಿ ಹೋಗುವ ಈ ದೇಹವೂ ಸ್ಥಿರವಲ್ಲ” ಎಂದು ಅನೇಕ ವಿಧಗಳಲ್ಲಿ ಶ್ರೀಗುರುವು ತನ್ನ ತಾಯಿಗೆ ಉಪದೇಶಮಾಡಿದರೂ, ಆಕೆ ಆತನ ಉಪದೇಶಾಮೃತವನ್ನು ಕೇಳಿ, “ಪ್ರಭು, ನೀನು ಅನೇಕ ರೀತಿಗಳಲ್ಲಿ ಜ್ಞಾನೋಪದೇಶಮಾಡಿದೆ. ಆದರೂ ನನ್ನ ಬಿನ್ನಪವನ್ನು ಕೇಳು. ನೀನು ಹೇಳಿದ್ದೆಲ್ಲವೂ ಒಳ್ಳೆಯದೇ. ಆದರೂ, ನನಗೆ ಇನ್ನೂ ಮಕ್ಕಳು ಜನಿಸುತ್ತಾರೆ ಎಂದು ನೀನು ಹೇಳಿದೆ. ನನಗೆ ಇನ್ನೊಂದು ಮಗುವಾಗುವವರೆಗೂ ನೀನು ನಮ್ಮೊಡನೆ ಇರಬೇಕು. ನಂತರ ನಾನು ನಿನಗೆ ಅನುಮತಿ ಕೊಡುತ್ತೇನೆ. ಇದು ನನ್ನ ಬಿನ್ನಪ. ನನ್ನ ಮಾತನ್ನು ಮೀರಿ ನೀನು ಹೊರಟು ಹೋದರೆ, ನಾನು ಆ ಕ್ಷಣದಲ್ಲೆ ಪ್ರಾಣ ತ್ಯಜಿಸುತ್ತೇನೆ. ನೀನು ಕೇವಲ ನನ್ನ ಮಗ ಮಾತ್ರವಲ್ಲ. ನಮ್ಮ ಕುಲದೀಪಕನು. ರಕ್ಷಕನು” ಎಂದ ತಾಯಿಯ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, “ಅಮ್ಮಾ, ನನ್ನ ಮಾತುಗಳು ಸತ್ಯವಾದವು. ನೀನೂ ನಿನ್ನ ಮಾತನ್ನು ಸತ್ಯಮಾಡು. ನಾನು ಇನ್ನೊಂದು ವರ್ಷ ಈ ಮನೆಯಲ್ಲಿ ಇರುತ್ತೇನೆ. ಅಷ್ಟರಲ್ಲಿ ನಿನಗೆ ಇಬ್ಬರು ಮಕ್ಕಳಾಗುತ್ತಾರೆ. ಆ ಇಬ್ಬರು ಮಕ್ಕಳನ್ನು ಕಂಡು ನೀನು ನನಗೆ ಸಂತೋಷದಿಂದ ಹೊರಡಲು ಅನುಮತಿ ಕೊಡಬೇಕು. ನಿನ್ನ ಮಾತನ್ನು ನಿಲ್ಲಿಸಿಕೋ. ನಾನು ಆ ನಂತರ ಈ ಮನೆಯಲ್ಲಿರುವುದಿಲ್ಲ” ಎಂದು ಹೇಳಿದರು.
ತಮ್ಮ ಮಾತಿನಂತೆ ಶ್ರೀಗುರುವು, ಶಿಷ್ಯರಿಗೆ ವೇದೋಪದೇಶಮಾಡುತ್ತಾ ಮನೆಯಲ್ಲಿಯೇ ನಿಂತರು. ಊರಿನ ಜನರು ಕುತೂಹಲಿಗಳಾಗಿ ಅವರು ಪಾಠ ಹೇಳುತ್ತಿದ್ದಲ್ಲಿಗೆ ಬಂದು, ಅವರು ಹೇಳುತ್ತಿದ್ದ ಪಾಠಪ್ರವಚನಗಳನ್ನು ಕೇಳಿ, “ಆಹಾ, ಈ ಪಂಡಿತನು ಶಿಷ್ಯರಿಗೆ ಸಾಂಗೋಪಾಂಗವಾಗಿ ಚತುರ್ವೇದಗಳನ್ನೂ ಉಪದೇಶಿಸುತ್ತಿದ್ದಾನೆ” ಎಂದು ಆಶ್ಚರ್ಯಪಟ್ಟರು. ವಿದ್ವಾಂಸರು, ತ್ರಿವೇದಿಗಳು, ಷಟ್ಶಾಸ್ತ್ರನಿಪುಣರೂ ಕೂಡಾ ಶ್ರೀಗುರುವಿನ ಬಳಿಗೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿದರು. ತಾಯಿತಂದೆಗಳನ್ನು ಸಂತೋಷಪಡಿಸುತ್ತಾ ಶ್ರೀಗುರುವು ಗೃಹನಿವಾಸಿಯಾಗಿ ಒಂದು ವರ್ಷ ಕಳೆದರು. ತನ್ನ ಮಾತಿನಂತೆ ಮನೆಯಲ್ಲಿದ್ದ ಮಗನನ್ನು ದೇವಭಾವದಿಂದ ಅರ್ಚಿಸುತ್ತಾ, ಸಂತೋಷದಿಂದಿದ್ದ ಅಂಬ ಆ ಸಮಯದಲ್ಲಿ ಗರ್ಭ ಧರಿಸಿದಳು. ನವಮಾಸ ತುಂಬಿದಮೇಲೆ ಆಕೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಸುಂದರರಾಗಿದ್ದ ಆ ಮಕ್ಕಳನ್ನು ಕಂಡು ಮಾತಾಪಿತರು ಸಂತಸಗೊಂಡರು. ಶ್ರೀಗುರುವಿನ ಆಶೀರ್ವಾದ ವ್ಯರ್ಥವಾಗುವುದಾದರೂ ಹೇಗೆ? ತಾಯಿಯ ಪಾಲನೆಯಲ್ಲಿ ಆ ಮಕ್ಕಳು ಬೆಳೆದು, ಮೂರುತಿಂಗಳು ತುಂಬಿದವರಾದರು. ಆಗ ಶ್ರೀಗುರುವು ತಾಯಿಗೆ, “ಅಮ್ಮ, ನಿನ್ನ ಕೋರಿಕೆ ನೆರವೇರಿತಲ್ಲವೇ? ಈ ಮಕ್ಕಳಿಬ್ಬರೂ ಪೂರ್ಣಾಯುಷಿಗಳಾಗಿ ಸುಖ ಸಂಪತ್ತುಗಳನ್ನು ಪಡೆಯುತ್ತಾರೆ. ನಿನಗಿನ್ನೂ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಕೂಡಾ ಹುಟ್ಟುತ್ತಾರೆ. ನೆರವೇರಿದ ಕೋರಿಕೆಯುಳ್ಳವಳಾಗಿ ನೀನು ಸಂತೋಷದಿಂದಿರು. ನಾನು ನನ್ನ ಮಾತನ್ನು ನಿಲ್ಲಿಸಿಕೊಂಡಿದ್ದೇನೆ. ಇನ್ನು ನನಗೆ ನಿನ್ನ ಅನುಮತಿ ಕೊಡು. ನಾನು ಹೊರಡುತ್ತೇನೆ. ಸಂತೋಷದಿಂದ ನನ್ನನ್ನು ಕಳುಹಿಸಿಕೊಡು” ಎಂದು ಹೇಳಿದರು. ಅದನ್ನು ಕೇಳಿ ತಾಯಿತಂದೆಗಳು, ಅವರಿಗೆ ನಮಸ್ಕಾರಮಾಡಿ, “ಸ್ವಾಮಿ, ನೀನು ನಮ್ಮ ಕುಲದೈವ. ನಾವು ನಿನಗೆ ಹೇಳುವುದೇನಿದೆ? ಮಾಯಾಮೋಹ ಬದ್ಧರಾದ ನಾವು, ನಿನ್ನ ಮಹಿಮೆಯನ್ನು ಹೇಗೆ ತಾನೇ ತಿಳಿಯಬಲ್ಲೆವು? ನೀನು ನಮ್ಮ ಮಗನೆಂದು ಭ್ರಮಿತರಾಗಿದ್ದ ನಾವು, ನಿನ್ನೊಡನೆ ಏನಾದರೂ ನಿಷ್ಠುರ ಮಾತುಗಳನ್ನಾಡಿದ್ದರೆ ಅದೆಲ್ಲವನ್ನು ಕ್ಷಮಿಸು. ನಮ್ಮಿಂದ ನಿನಗೆ ಊಟೋಪಚಾರಗಳಲ್ಲಿ ಕೊರತೆಯುಂಟಾಗಿರಬಹುದು. ನಿನ್ನನ್ನು ಎತ್ತಿ, ಆಡಿಸಿ, ಲಾಲಿಸಿ, ಪಾಲಿಸಲಿಲ್ಲ. ನಾವು ಏನೇ ಪಾಪಗಳನ್ನು ಮಾಡಿದ್ದರೂ ಅದೆಲ್ಲವನ್ನೂ ಕ್ಷಮಿಸಿ ನಮ್ಮನ್ನನುಗ್ರಹಿಸು. ನೀನು ನಮ್ಮ ವಂಶೋದ್ಧಾರಕನಾಗಿ ಅವತರಿಸಿದ್ದೀಯೆ. ನಮ್ಮ ಪ್ರದೋಷ ಪೂಜೆಗಳು ನಿಸ್ಸಂಶಯವಾಗಿ ಫಲಕೊಟ್ಟಿವೆ. ಇನ್ನು ಮುಂದೆ ನಮ್ಮ ಗತಿಯೇನು? ನಮ್ಮನ್ನು ಈ ಜನನ ಮರಣ ದುಃಖಗಳಿಂದ ದೂರಮಾಡು. ನಾವು, ನಮ್ಮ ಎರಡೂ ವಂಶಗಳೂ, ನೀನು ನಮಗೆ ಮಗನಾಗಿ ಬಂದಿದ್ದರಿಂದ, ಪಾವನವಾದವು. ಸ್ವಾಮಿ, ಈ ದುಸ್ತರವಾದ ಸಂಸಾರದಲ್ಲಿ ನಮ್ಮನ್ನು ಇನ್ನೂ ಏಕೆ ನಿಲ್ಲಿಸಿದ್ದೀಯೆ? ನಿನ್ನ ದರ್ಶನವಿಲ್ಲದೆ ನಾವು ಹೇಗೆತಾನೇ ಜೀವಿಸಿರಬಲ್ಲೆವು?” ಎಂದು ಮುಂತಾಗಿ ಕಳಕಳಿಯಿಂದ ಮೊರೆಯಿಟ್ಟರು.
ಅವರ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, “ನಿಮಗೆ ನನ್ನ ದರ್ಶನವಾಗಬೇಕೆಂಬ ಇಚ್ಛೆಯಾದರೆ, ನನ್ನನ್ನು ಸ್ಮರಿಸಿ. ತಕ್ಷಣವೇ ನಾನು ನಿಮಗೆ ದರ್ಶನ ಕೊಡುತ್ತೇನೆ. ಚಿಂತಿಸಬೇಡಿ. ನಿಮ್ಮ ಮನೆಯಲ್ಲಿ ಇನ್ನು ಮೇಲೆ ದೈನ್ಯವೆಂಬುದು ಎಂದಿಗೂ ಇರುವುದಿಲ್ಲ. ಪ್ರತಿದಿನವೂ ಲಕ್ಷ್ಮಿ ಈ ಮನೆಯಲ್ಲಿ ಕಲಕಲವಾಡುತ್ತಾ ಓಡಾಡುತ್ತಾಳೆ. ಹಿಂದಿನ ಜನ್ಮದಲ್ಲಿ ನೀವು ಮಾಡಿದ ಪ್ರದೋಷ ಪೂಜೆಯ ಫಲವಿದು. ನಿಮ್ಮ ವಂಶವೂ ಶ್ರೀಮಂತಗೊಳ್ಳುತ್ತದೆ. ಇಹದಲ್ಲಿ ಸೌಖ್ಯ, ದೇಹಾಂತದಲ್ಲಿ ಪರಲೋಕಗಳನ್ನು ಪಡೆದು ನೀವು ಪುನರ್ಜನ್ಮ ರಹಿತರಾಗುತ್ತೀರಿ. ಅಮ್ಮಾ, ನೀನು ಶಂಕರನನ್ನಾರಾಧಿಸಿ ನನ್ನನ್ನು ಅವತರಿಸಿಕೊಂಡು, ಪೂರ್ಣಕಾಮಳಾದೆ. ಇನ್ನು ನನಗೆ ಅನುಮತಿ ಕೊಟ್ಟರೆ ನಾನು ಹೊರಡುತ್ತೇನೆ. ಮುವ್ವತ್ತು ವರ್ಷಗಳ ನಂತರ ಮತ್ತೆ ನಿಮಗೆ ನನ್ನ ದರ್ಶನವಾಗುತ್ತದೆ. ಬದರಿವನಕ್ಕೆ ಹೊರಡುತ್ತಿದ್ದೇನೆ” ಎಂದು ಹೇಳಿ ಶ್ರೀಗುರುವು ಪಯಣಕ್ಕೆ ಸಿದ್ಧರಾದರು.
ಹಾಗೆ ಹೊರಟ ಶ್ರೀಗುರುವಿನ ಹಿಂದೆ ಗುಂಪುಗುಂಪಾಗಿ ಜನ ಹೊರಟರು. “ಈ ಬ್ರಹ್ಮಚಾರಿ ತಪಸ್ಸು ಮಾಡಲು ಹೊರಟಿದ್ದಾನೆ. ಇವನು ಮಾನವನಂತೆ ಕಂಡರೂ, ಪುರಾಣ ಪುರುಷನೇ!’ ಎಂದು ಕೆಲವರು ಹೇಳುತ್ತಿದ್ದರು. “ಈ ವಿಚಿತ್ರವನ್ನು ನೋಡು. ಈ ಸಣ್ಣ ಬಾಲಕ ತಪಸ್ಸಿಗೆಂದು ಹೊರಡುತ್ತಿದ್ದರೆ ಅವನ ತಂದೆತಾಯಿಗಳು ಅವನನ್ನು ಸಂತೋಷದಿಂದ ಕಳುಹಿಸಿಕೊಡುತ್ತಿದ್ದಾರೆ” ಎಂದು ಇನ್ನು ಕೆಲವರು ಹೇಳುತ್ತಿದ್ದರು. “ಅವರ ಹೃದಯ ಕಲ್ಲಾಗಿರಬೇಕು. ಅಷ್ಟು ಸಣ್ಣ ಮಗನನ್ನು ಸನ್ಯಾಸಿಯಾಗಲು ಕಳುಹಿಸಿಕೊಡುವವರೂ ಇದ್ದಾರೆಯೇ?” ಎಂದು ಮತ್ತೆ ಕೆಲವರು ಹೇಳುತ್ತಿದ್ದರು. “ಇವನು ಪರಮಾತ್ಮನೇ! ಹೀಗೆ ಅವತರಿಸಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ಸಕಲ ವೇದಗಳನ್ನೂ ಅಧ್ಯಯನಮಾಡಿರುವ ಈ ಏಳು ವರ್ಷದ ಬಾಲಕ, ಅಶೇಷವಾಗಿ ವೇದಗಳನ್ನು ಪಠಿಸಿರುವ ಇವನು, ಸಾಮಾನ್ಯ ಮನುಷ್ಯನಾಗಿರಲು ಹೇಗೆ ಸಾಧ್ಯ?” ಎಂದು ಇನ್ನೂ ಕೆಲವರು ಹೇಳುತ್ತಿದ್ದರು. ಹೀಗೆ ಅನೇಕರು, ಅನೇಕ ರೀತಿಗಳಲ್ಲಿ ಮಾತನಾಡುತ್ತಾ ಶ್ರೀಗುರುವಿಗೆ ಪ್ರಣಾಮಗಳನ್ನು ಅರ್ಪಿಸಿ, ಅವರ ಸ್ತೋತ್ರಮಾಡಿದರು. ಹಾಗೆ ಶ್ರೀಗುರುವಿನ ಸ್ತೋತ್ರ ಮಾಡುತಿದ್ದ ಜನರನ್ನು ಅಲ್ಲಿಯೇ ತಟಸ್ಥಿಸಿ, ಗುರುವು ಮುಂದಕ್ಕೆ ಪ್ರಯಾಣ ಮಾಡಿದರು. ಜನರೆಲ್ಲರೂ ಹೊರಟುಹೋದಮೇಲೆ, ತಂದೆತಾಯಿಗಳು ಇನ್ನೂ ಸ್ವಲ್ಪದೂರ ಶ್ರೀಗುರುವಿನ ಜೊತೆಯಲ್ಲಿ ಮುಂದುವರೆದರು. ಆಗ ಶ್ರೀಗುರುವು, ಅವರಿಗೆ ತ್ರಿಮೂರ್ತಿಸ್ವರೂಪದಲ್ಲಿ ತನ್ನ ದರ್ಶನ ದಯಪಾಲಿಸಿದರು. ಏಂದರೆ, ದತ್ತಾತ್ತ್ರೇಯರೇ ಅವರಿಗೆ ಶ್ರೀಪಾದ ಶ್ರೀವಲ್ಲಭರಾಗಿ ಕಾಣಿಸಿಕೊಂಡರು. ನಿಜರೂಪದಿಂದ ಕಂಡ, ಕರ್ಪೂರಗೌರನಾದ ನರಹರಿಯನ್ನು ನೋಡಿದ ಅವರು, ಸಾಷ್ಟಾಂಗ ನಮಸ್ಕಾರಮಾಡಿ, ಅವರ ಸ್ತೋತ್ರಮಾಡಿದರು. “ಹೇ ತ್ರಿಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗದ್ಗುರು ನಿನ್ನ ದರ್ಶನದಿಂದ ನಮಗಿಂದು ಮಹಾಪುಣ್ಯ ಲಭ್ಯವಾಯಿತು. ಹೇ ವಿಶ್ವೋದ್ಧಾರಕ, ನಮ್ಮನ್ನು ಈ ಭವಾರ್ಣವದಿಂದ ಪಾರುಮಾಡಿದೆ. ಮತ್ತೆ ನಮಗೆ ನಿನ್ನ ದರ್ಶನ ಕೊಡು” ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತಾ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದರು. ಗುರುನಾಥನು ಅವರನ್ನು ಪ್ರೇಮದಿಂದ ಹಿಡಿದು ಮೇಲಕ್ಕೆತ್ತಿ, ಆಲಂಗಿಸಿ, ಸಂತುಷ್ಟನಾಗಿ, “ನಿಮಗೆ ತಪ್ಪದೇ ಮತ್ತೆ ದರ್ಶನ ಕೊಡುತ್ತೇನೆ” ಎಂದು ಮಾತು ಕೊಟ್ಟು, ಅವರನ್ನು ಹಿಂತಿರುಗುವಂತೆ ಹೇಳಿ, ತಾವು ಮುಂದಕ್ಕೆ ಹೊರಟರು. ಆ ಮಾತಾಪಿತರು ಶ್ರೀಗುರುವು ಹೋದ ದಾರಿಯನ್ನೇ ಮತ್ತೆ ಮತ್ತೆ ನೋಡುತ್ತಾ ತಮ್ಮ ಮನೆಗೆ ಹಿಂದಿರುಗಿದರು.
ಅಲ್ಲಿಂದ ಹೊರಟ ಶ್ರೀಗುರುವು, ಬದರಿನಾಥ, ಆನಂದ ಕಾನನವಾದ ಕಾಶಿಕ್ಷೇತ್ರವನ್ನು ದರ್ಶಿಸಿದರು. ವಾರಣಾಸಿಯಲ್ಲಿ ವಿಶ್ವೇಶ್ವರನು ಸ್ವಯಂ ನೆಲೆಸಿದ್ದಾನೆ. ಅದರಿಂದಲೇ ಅದು ತ್ರಿಲೋಕಗಳಲ್ಲೂ ಸಾಟಿಯಿಲ್ಲದ್ದು. ಶ್ರೀಗುರುವು ತ್ರಿಕಾಲದಲ್ಲೂ ಅನುಷ್ಠಾನ ಮಾಡಿಕೊಳ್ಳುತ್ತಾ, ವಿಶ್ವೇಶ್ವರನ ದರ್ಶನ ಮಾಡುತ್ತಾ ಕಾಶಿಯಲ್ಲಿ ಸ್ವಲ್ಪಕಾಲ ನಿಂತರು. ಅಲ್ಲಿ ಅಷ್ಟಾಂಗ ಯೋಗದಿಂದ ತಪಸ್ಸನ್ನಾಚರಿಸಿದರು. ಕಾಶಿಯಲ್ಲಿ ಬಹಳ ಜನ ತಪಸ್ವಿಗಳಿದ್ದರು. ಕೆಲವರು ಸನ್ಯಾಸಿಗಳು. ಕೆಲವರು ಅವಧೂತರು. ಅವರೆಲ್ಲರೂ ತಪೋನಿರತರೇ! ಯೊಗಾಭ್ಯಾಸ ನಿರತನಾದ ಈ ಬ್ರಹ್ಮಚಾರಿಯೇ ನಮಗಿಂತ ಉತ್ತಮ ಎಂದು ಭಾವಿಸಿದ ಅವರೆಲ್ಲರೂ, “ಈ ಬ್ರಹ್ಮಚಾರಿ ನಮ್ಮೆಲ್ಲರಿಗಿಂತ ದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದಾನೆ. ಇವನ ವೈರಾಗ್ಯವು ಅದ್ಭುತವಾಗಿದೆ. ದೇಹಾಭಿಮಾನವಿಲ್ಲದವನು. ಯೋಗ್ಯ, ಉತ್ತಮ ಸನ್ಯಾಸಿ. ತ್ರಿಕಾಲದಲ್ಲೂ ಮಣಿಕರ್ಣಿಕೆಯಲ್ಲಿ ಸ್ನಾನವಾಚರಿಸುತ್ತಾನೆ” ಎಂದು ಮಾತನಾಡಿಕೊಳ್ಳುತ್ತಿದ್ದರು.
ಅಲ್ಲಿದ್ದವರೆಲ್ಲರಲ್ಲಿ, ಮಹಾಮತಿಯಾದ ಕೃಷ್ಣ ಸರಸ್ವತಿ ಎನ್ನುವವರು ಬ್ರಹ್ಮಜ್ಞಾನಿ. ವೃದ್ಧ ತಪಸ್ವಿ. ಮಹಾಮುನಿ. ಆ ಯತಿವರ್ಯರು, ಶ್ರೀಗುರುವನ್ನು, ಸದಾ ಪ್ರೀತಿವಿಶ್ವಾಸಗಳಿಂದ ಕಾಣುತ್ತಾ, ಅವರಲ್ಲಿ ಭಕ್ತಿತತ್ಪರರಾದರು. ಕೃಷ್ಣ ಸರಸ್ವತಿ ಒಂದುಸಲ ಅಲ್ಲಿದ್ದ ಇತರ ಯತಿಗಳಿಗೆ, “ನೀವು ಈ ಬ್ರಹ್ಮಚಾರಿಯನ್ನು ಮಾನವ ಮಾತ್ರನೆಂದು ತಿಳಿಯಬೇಡಿ. ಈ ಪುರುಷ ಆ ವಿಶ್ವವಂದ್ಯನ ಅವತಾರವೇ! ವಯಸ್ಸಿನಲ್ಲಿ ಸಣ್ಣವನಾದರೂ, ಇವನಿಗೆ ನೀವು ಭಕ್ತಿಯಿಂದ ನಮಸ್ಕರಿಸಿಕೊಳ್ಳಬೇಕು. ತ್ರಿಭುವನ ವಂದ್ಯರಾದ ತ್ರಿಮೂರ್ತಿಗಳ ಅವತಾರವೇ ಇವನು. ವಯೋಜ್ಯೇಷ್ಠರು ಕನಿಷ್ಠರಿಗೆ ನಮಸ್ಕರಿಸಬಾರದು ಎಂಬುದು ಮೂರ್ಖ ದೃಷ್ಟಿ. ವಿದ್ವಾಂಸರಿಗೆ, ಇವನು ವಿಶ್ವವಂದ್ಯನೆಂಬ ಅರಿವಿದೆ. ಸನ್ಯಾಸವನ್ನು ಮತ್ತೆ ಸ್ಥಾಪಿಸುವುದರಿಂದ ನಮ್ಮ ಭಕ್ತಿ ಸ್ಥಿರವಾಗುವುದು. ಶರೀರಧಾರಿಗಳೆಲ್ಲರಿಗೂ ಅನುಗ್ರಹ ಮಾಡಲು ಇವನೇ ಸಮರ್ಥ. ಈ ಗುರುವಿನ ದರ್ಶನ ಮಾತ್ರದಿಂದಲೇ ಪತಿತನೂ ಪವಿತ್ರನಾಗುತ್ತಾನೆ. ಆದ್ದರಿಂದ ಈ ಬಾಲಕನನ್ನು ನಾವು ಪ್ರಾರ್ಥಿಸಿಕೊಳ್ಳೋಣ. ಇವನಿಗೆ ಸನ್ಯಾಸ ಕೊಟ್ಟು ನಾವು ಕೃತಾರ್ಥರಾಗೋಣ” ಎಂದು ಹೇಳಿದರು. ಯತಿಗಳೆಲ್ಲರೂ ಅವರು ಹೇಳಿದಂತೆ, ಆ ಬಾಲಬ್ರಹ್ಮಚಾರಿಯ ಬಳಿಗೆ ಹೋಗಿ, “ಹೇ ತಾಪಸ ಶ್ರೇಷ್ಠ, ನಮ್ಮ ಪ್ರಾರ್ಥನೆಯನ್ನು ಆಲಿಸಿ, ನೀನು ಲೋಕಾನುಗ್ರಹಾರ್ಥವಾಗಿ ಸನ್ಯಾಸ ಸ್ವೀಕಾರಮಾಡು. ನಮ್ಮ ಪೂಜಾದಿಗಳನ್ನು ಕೈಕೊಂಡು ನಮ್ಮನ್ನು ಉದ್ಧರಿಸು. ಈ ಕಲಿಯುಗದಲ್ಲಿ ಜನರು ಸನ್ಯಾಸಾಶ್ರಮವನ್ನು ನಿಂದಿಸುತ್ತಾರೆ. ಭೂಮಿಯಲ್ಲಿ ಸನ್ಯಾಸಮಾರ್ಗವನ್ನು ಸ್ಥಾಪಿಸುವಂತಹ ಸಮರ್ಥರು ಯಾರೂ ಇಲ್ಲ. ಅಗ್ನಿಹೋತ್ರ, ಗೋವಧೆ, ಸನ್ಯಾಸ, ಮಾಂಸಶ್ರಾದ್ಧ, ಮೈದುನನಿಂದ ಸಂತಾನೋತ್ಪತ್ತಿ, ಎನ್ನುವ ಐದನ್ನು ವಿಸರ್ಜಿಸಬೇಕೆಂಬುದನ್ನು ಶ್ರುತಿವಚನವಾಗಿ ಗ್ರಹಿಸಿ, ಕಲಿಯುಗದಲ್ಲಿ, ಜನರು ಸನ್ಯಾಸವನ್ನು ನಿಷೇಧಿಸುತ್ತಿದ್ದಾರೆ. ಆದರೆ ವೇದಗಳಲ್ಲಿ ಸನ್ಯಾಸವೆಂಬುದು ಪ್ರಸಿದ್ಧಾವಾಗಿದೆ. ಹಿಂದೆ ಅದನ್ನು ನಿಷೇಧಮಾಡಿದ್ದುದು ದುರ್ಬಲರಿಗೆ ಮಾತ್ರ. ವರ್ಣ ಬೇಧಗಳಿರುವವರೆಗೂ, ವೇದಗಳು ಆಚಾರದಲ್ಲಿರುವವರೆಗೂ, ಕಲಿಯುಗದಲ್ಲೂ ಸಹ ಅಗ್ನಿಹೋತ್ರ ಸನ್ಯಾಸಗಳನ್ನು ಪರಿತ್ಯಜಿಸಬಾರದು ಎಂದು ಶಂಕರಾಚಾರ್ಯರು ಸನಾತನ ಮತಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸನ್ಯಾಸಾಶ್ರಮ ಮುಂದುವರೆಯುತ್ತಲೇ ಇದೆ. ಆದರೆ ಈ ಕಲಿಕಾಲದಲ್ಲಿ, ಪಾಮರರು ಅದನ್ನು ನಿಂದಿಸುತ್ತಿದ್ದಾರೆ. ಈ ಸನ್ಯಾಸಾಶ್ರಮವನ್ನು ಉದ್ಧರಿಸಿ, ಜನರಿಗೆ ಉಪಕಾರ ಮಾಡು. ಹೇ ಮುನೀಶ್ವರ, ನೀನು ಕೃಪಾಸಾಗರನು. ನಮ್ಮನ್ನು ಈ ಸಂಸಾರ ಕೂಪದಿಂದ ಉದ್ಧರಿಸು” ಏಂದು ಪ್ರಾರ್ಥಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು ಸನ್ಯಾಸವನ್ನು ಸ್ವೀಕರಿಸಲು ನಿಶ್ಚಯಿಸಿ, ವೃದ್ಧರಾದ ಕೃಷ್ಣ ಸರಸ್ವತಿ ಅವರಿಂದ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ಪಡೆದರು.
ಸಿದ್ಧಮುನಿಯ ಈ ಮಾತುಗಳನ್ನು ಕೇಳಿದ ನಾಮಧಾರಕ, “ಸ್ವಾಮಿ, ಜಗತ್ತಿಗೇ ಗುರುವಾದ ಅವರಿಗೆ ಇನ್ನೊಬ್ಬರು ಹೇಗೆ ಗುರುವಾಗುತ್ತಾರೆ? ತ್ರಿಮೂರ್ತ್ಯವತಾರವಾದ ಶ್ರೀಗುರುವಿಗೆ ಮತ್ತೊಬ್ಬ ಗುರುವಿನ ಅವಶ್ಯಕತೆಯಾದರೂ ಏನು?” ಎಂದು ತನ್ನ ಸಂದೇಹವನ್ನು ವ್ಯಕ್ತಪಡಿಸಿದನು. ಅದಕ್ಕೆ ಸಿದ್ಧರು, “ಹಿಂದೆ ಶ್ರೀರಾಮ ವಸಿಷ್ಠರನ್ನು ಗುರುವಾಗಿ ಸ್ವೀಕರಿಸಿದ್ದನಲ್ಲವೆ? ಭಗವಂತನು, ತನ್ನ ಎಂಟನೆಯ ಅವತಾರದಲ್ಲಿ ಶ್ರೀ ಕೃಷ್ಣನಾಗಿ, ಸಾಂದೀಪನಿ ಮುನಿಯನ್ನು ಗುರುವಾಗಿ, ಮಾನವ ಧರ್ಮಾನುಸಾರವಾಗಿ, ಸ್ವೀಕರಿಸಿದ್ದನಲ್ಲವೆ? ಅದೇ ರೀತಿಯಲ್ಲಿ ಶ್ರೀಗುರುವು ಕೂಡ ಜ್ಞಾನವೃದ್ಧರಾದ ಕೃಷ್ಣ ಸರಸ್ವತಿಯನ್ನು ಗುರುವಾಗಿ ಸ್ವೀಕರಿಸಿದರು” ಎಂದು ಹೇಳಿದರು. ಅದಕ್ಕೆ ನಾಮಧಾರಕ, “ಅಲ್ಲಿ ಬಹಳ ಜನ ಯತೀಶ್ವರರಿದ್ದರೂ, ಶ್ರೀಗುರುವು ಕೃಷ್ಣ ಸರಸ್ವತಿಯನ್ನೇ ಗುರುವಾಗಿ ಆರಿಸಿಕೊಳ್ಳಲು ಕಾರಣವೇನು? ಅದನ್ನು ನನಗೆ ವಿಸ್ತಾರವಾಗಿ ಹೇಳಿ” ಎಂದು ಕೇಳಲು, ಸಿದ್ಧಮುನಿ ಮೂಲದಿಂದ ಆರಂಭಿಸಿ, ಗುರು ಪರಂಪರೆಯನ್ನು ಹೇಳಿದರು. “ಗುರು ಪರಂಪರೆಗೆ ಮೂಲವಾದವನು ಶಂಕರ. ಶಂಕರನ ಶಿಷ್ಯ ವಿಷ್ಣು. ವಿಷ್ಣುವಿಗೆ ಬ್ರಹ್ಮ ಶಿಷ್ಯ. ಬ್ರಹ್ಮನಿಗೆ ವಸಿಷ್ಠ, ವಸಿಷ್ಠರಿಗೆ ಶಕ್ತಿ, ಶಕ್ತಿಗೆ ಪರಾಶರ, ಪರಾಶರರೇ ಸ್ವಯಂ ನಾರಾಯಣನಾದ ವ್ಯಾಸ, ವ್ಯಾಸರಿಗೆ ಶುಕ, ಶುಕರಿಗೆ ಗೌಡಪಾದ, ಗೌಡಪಾದರಿಗೆ ಗೋವಿಂದಾಚಾರ್ಯ, ಅವರಿಗೆ ಶಂಕರಾಚಾರ್ಯ, ಶಂಕರಾಚಾರ್ಯರಿಗೆ ಬೋಧಜ್ಞಾನಗಿರಿ, ಅವರಿಗೆ ಸಿಂಹಗಿರಿ, ಸಿಂಹಗಿರಿಗೆ ಈಶ್ವರತೀರ್ಥ, ಅವರಿಗೆ ನೃಸಿಂಹತೀರ್ಥ ಹಾಗೂ ಸರ್ವವಿದ್ಯಾ ವಿಶಾರದರಾದ ವಿದ್ಯಾರಣ್ಯ, ಅವರಿಗೆ ಮಲಯಾನಂದ, ಅವರಿಗೆ ದೈವತೀರ್ಥ, ಅವರಿಗೆ ಯಾದವೇಂದ್ರ ಸರಸ್ವತಿ, ಅವರ ಶಿಷ್ಯ ಈ ಕೃಷ್ಣ ಸರಸ್ವತಿ. ಹೀಗೆ, ಈ ಗುರು ಪರಂಪರೆ ಶ್ರೀಗುರುವಿಗೆ ಸಮ್ಮತವಾದದ್ದರಿಂದ ಅವರು ಕೃಷ್ಣ ಸರಸ್ವತಿಯನ್ನು ತಮ್ಮ ಗುರುವಾಗಿ ಅಂಗೀಕರಿಸಿದರು. ಅವರ ಸನ್ಯಾಸಾಶ್ರಮದ ಹೆಸರು ನೃಸಿಂಹ ಸರಸ್ವತಿ ಎಂದಾಯಿತು” ಎಂದು ಗುರುಪರಂಪರೆಯನ್ನು ವಿಸ್ತರವಾಗಿ ತಿಳಿಸಿದರು.
ಹೀಗೆ ಸನ್ಯಾಸಮಾರ್ಗ ಸ್ಥಾಪನೆಗೆಂದು, ತಾವು ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಗುರುವು ಗುರುನಾಥನಾಗಿ ಕಾಶಿಯಲ್ಲಿ ಶಿಷ್ಯರಿಗೆ ವೇದೋಪದೇಶಮಾಡಿದರು. ವಯಸ್ಸಿನಲ್ಲಿ ಸಣ್ಣವರಾದರೂ, ಕಾಶಿಯಲ್ಲಿ ಇವರನ್ನು ಎಲ್ಲರೂ ಪೂಜಿಸಿದರು. ವಿಶೇಷವಾಗಿ, ಕಾಶಿಯಲ್ಲಿದ್ದ ಎಲ್ಲ ವಿದ್ವಾಂಸರೂ, ಯತಿಗಳೂ, ಶ್ರೀ ನೃಸಿಂಹ ಸರಸ್ವತಿಯವರನ್ನು ಆರಾಧಿಸುತ್ತಿದ್ದರು. ಶ್ರೀಗುರುವು ಕಾಶಿಯಲ್ಲಿ ಅನೇಕ ಶಿಷ್ಯರನ್ನು ಸೇರಿಸಿ, ಅಲ್ಲಿಂದ ಬದರಿಕಾವನವೇ ಮೊದಲಾದ ಅನೇಕ ತೀರ್ಥಗಳನ್ನು ಸಂದರ್ಶಿಸುತ್ತಾ, ಲೋಕಾನುಗ್ರಹಕ್ಕಾಗಿ ಪರ್ಯಟನೆ ಮಾಡುತ್ತಾ, ಮೇರು ಪರ್ವತವನ್ನು ಸೇರಿದರು. ಆ ಪರ್ವತಕ್ಕೆ ಪ್ರದಕ್ಷಿಣೆ ಮಾಡಿ, ಶಿಷ್ಯರೊಡನೆ ಸರ್ವ ತೀರ್ಥಗಳ ದರ್ಶನ ಮಾಡುತ್ತಾ, ಭೂಪ್ರದಕ್ಷಿಣೆ ಮಾಡಿ, ಗಂಗಾಸಾಗರ ಸಂಗಮ ಪ್ರದೇಶಕ್ಕೆ ಬಂದರು. ಪರ್ಯಟನಕಾಲದಲ್ಲಿ ಅವರು ನೆರವೇರಿಸಿದ ಲೋಕೋದ್ಧಾರ ಕಾರ್ಯಗಳನ್ನೆಲ್ಲ ತಿಳಿದವರು ಯಾರೂ ಇಲ್ಲ. ಅಲ್ಲದೆ ಶ್ರೀಗುರುವಿನ ಲೀಲೆಗಳನ್ನೆಲ್ಲ ವಿವರಿಸುತಾ ಹೋದರೆ ಗ್ರಂಥ ಬಹಳ ದೊಡ್ಡದಾಗುವುದು. ಆದ್ದರಿಂದ ಹೇ ನಾಮಧಾರಕ, ನನಗೆ ತಿಳಿದಮಟ್ಟಿಗೆ ಮಾತ್ರ ನಾನು ಎಲ್ಲವನ್ನೂ ತಿಳಿಸುತ್ತೇನೆ. ಗಂಗಾತೀರ್ಥ ಪರ್ಯಟನೆ ಮಾಡಿ, ಅವರು ಪ್ರಯಾಗವನ್ನು ಸೇರಿದರು. ಅಲ್ಲಿ ಮಾಧವನೆಂಬ ಬ್ರಾಹ್ಮಣ ಶ್ರೇಷ್ಠನೊಬ್ಬನು, ಗುರುದರ್ಶನಾಭಿಲಾಷಿಯಾಗಿ ಅವರಲ್ಲಿಗೆ ಬಂದನು. ಅವನಿಗೆ ಶ್ರೀಗುರುವು ಸನ್ಯಾಸ ಕೊಟ್ಟು , ಅದ್ವೈತವನ್ನು ಉಪದೇಶಿಸಿದರು. ಅವರ ಶಿಷ್ಯಗಣದಲ್ಲಿ, ಶ್ರೀಗುರುವಿಗೆ ಮಾಧವನನ್ನು ಕಂಡರೆ ಅತಿಶಯ ಪ್ರೀತಿ. ಶಿಷ್ಯರೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ಪ್ರಯಾಗವನ್ನು ಬಿಟ್ಟು ಹೊರಟರು.”
ಇಲ್ಲಿಗೆ ಹನ್ನೆರಡನೆಯ ಅಧ್ಯಾಯ ಮುಗಿಯಿತು.
[07/01 6:24 AM] S. Bhargav: ||ಶ್ರೀ ಗುರು ಚರಿತ್ರೆ – ಹದಿಮೂರನೆಯ ಅಧ್ಯಾಯ||
ನಾಮಧಾರಕ ವಿನಯದಿಂದ ಕೈಜೋಡಿಸಿ ಸಿದ್ಧಮುನಿಯನ್ನು, “ಯೋಗೀಶ್ವರ, ಭವಾರ್ಣವ ತಾರಕರು ನೀವು. ನೀವು ಹೇಳುತ್ತಿರುವ ಗುರುಕಥಾಮೃತವನ್ನು ಕೇಳಿದಷ್ಟೂ, ಇನ್ನೂ ಇನ್ನೂ ಕೇಳಬೇಕೆಂಬ ಅಭಿಲಾಷೆ ಉಂಟಾಗುತ್ತಿದೆ. ಗುರುಚರಿತ್ರೆ ಎನ್ನುವುದು ಕಾಮಧೇನುವು. ಹಸುವಿಗೆ ಹುಲ್ಲು ಕೊಟ್ಟಷ್ಟೂ ಅದರ ಹಸಿವು ಹೆಚ್ಚಾಗುವ ಹಾಗೆ, ನನಗೆ ಗುರುಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಕನಸಿನಲ್ಲೂ ಮಜ್ಜಿಗೆ ಸಿಕ್ಕದಿದ್ದವನಿಗೆ ಎಚ್ಚರದಲ್ಲಿ ಹಾಲಿನಸಮುದ್ರ ದೊರೆತರೆ ಅವನು ಅದನ್ನು ಬಿಟ್ಟು ಹೋಗುತ್ತಾನೆಯೇ? ಹಾಗೆಯೇ ಅಲ್ಪಜ್ಞನಾದ ನನಗೆ ಗುರುಕೀರ್ತಿ ಇದುವರೆಗೆ ತಿಳಿದಿರಲಿಲ್ಲ. ಅವಿದ್ಯೆಯಿಂದ ಭ್ರಷ್ಟನಾದ ನಾನು ಕಷ್ಟಗಳಿಗೀಡಾಗಿದ್ದೆ. ಮೋಹಾಂಧಕಾರದಲ್ಲಿ ಮುಳುಗಿ ಅಜ್ಞನಾಗಿದ್ದ ನನಗೆ ನೀವು ಶ್ರೀಗುರುವೆಂಬ ಆತ್ಮಜ್ಯೋತಿಯನ್ನು ತೋರಿಸಿದಿರಿ. ನೀವು ಮಾಡಿರುವ ಉಪಕಾರಕ್ಕೆ ನಾನು ಎಂತಹ ಪ್ರತ್ಯುಪಕಾರ ಮಾಡಬೇಕೆಂದು ತಿಳಿಯದ ಮೂಢ ನಾನು. ಕಲ್ಪವೃಕ್ಷವನ್ನು ಕೊಟ್ಟವನಿಗೆ ಭೂದಾನ ಮಾಡಿದರೆ ಅದು ಪ್ರತ್ಯುಪಕಾರವಾಗುವುದೇ? ಚಿಂತಾಮಣಿಯನ್ನು ಕೊಟ್ಟವನಿಗೆ ಬದಲಾಗಿ ಏನನ್ನು ತಾನೇ ಕೊಡಬಲ್ಲೆವು? ಅಂತಹ ಕೃಪಾಮೂರ್ತಿಯಾದ ನಿಮಗೆ ನಾನೇನು ಕೊಡಬಲ್ಲೆ? ಭವತಾಪವನ್ನು ಹರಿಸಿದಿರಿ. ನೀವು ಹೇಳಿದ ಧರ್ಮ ನನ್ನನ್ನು ಉದ್ಧರಿಸುತ್ತದೆ. ಸರ್ವಾರ್ಥಗಳನ್ನೂ ಕೊಡಬಲ್ಲ ಗುರುಭಕ್ತಿ ನನ್ನಲ್ಲಿ ನೆಲೆಯಾಯಿತು. ಶ್ರೀಗುರುವು ಪ್ರಯಾಗದಲ್ಲಿ ಮಾಧವನಿಗೆ ದೀಕ್ಷೆ ಕೊಟ್ಟ ಮೇಲೆ ನಡೆದ ವಿಷಯಗಳನ್ನು ವಿವರಿಸಬೇಕೆಂದು ಕೋರುತ್ತೇನೆ” ಎಂದು ವಿನಮ್ರನಾಗಿ ಬಿನ್ನವಿಸಿಕೊಂಡನು.
ಅವನ ಮಾತುಗಳನ್ನು ಕೇಳಿದ ಸಿದ್ಧಮುನಿ, ಅವನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದರು. “ಶಿಷ್ಯೋತ್ತಮ. ನಿನಗೆ ಗುರುಪದ ಲಭ್ಯವಾಯಿತು. ಧನ್ಯನಾದೆ. ಸಂಸಾರಸಾಗರದಿಂದ ಪಾರಾಗುವೆ. ಗುರುವೆಂದರೇನೆಂಬುದು ನಿನಗೆ ತಿಳಿಯಿತು. ಪುಣ್ಯಶ್ರವಣವಾದ ಗುರುಚರಿತ್ರೆಯನ್ನು ಹೇಳುತ್ತೇನೆ. ಮನಸ್ಸಿಟ್ಟು ಕೇಳು.
ಸ್ವಲ್ಪಕಾಲ ಶ್ರೀಗುರುವು ಪ್ರಯಾಗದಲ್ಲಿದ್ದು, ಅಲ್ಲಿ ಲೋಕೋದ್ಧಾರ ಕಾರ್ಯಗಳನ್ನು ಮಾಡಿದರು. ಮಾಧವನಿಗೆ ದೀಕ್ಷೆ ಕೊಟ್ಟು ಪ್ರಸಿದ್ಧರಾಗಿದ್ದ ಗುರುವಿನ ಬಳಿಗೆ ಅನೇಕರು ಬಂದು, ಅವರಿಗೆ ಶಿಷ್ಯರಾಗಿ, ಅವರ ಸೇವೆಯಲ್ಲಿ ನಿಂತರು. ಅವರಲ್ಲೆಲ್ಲಾ ಮಾಧವನು ಮುಖ್ಯನು. ಅವರಲ್ಲಿ ಪ್ರಮುಖರಾದ ಏಳುಜನ ಶಿಷ್ಯರ ಹೆಸರನ್ನು ಮಾತ್ರ ಹೇಳುತ್ತೇನೆ. ಮೊದಲನೆಯವನು ಬಾಲಸರಸ್ವತಿ. ನಂತರ ಕೃಷ್ಣ ಸರಸ್ವತಿ, ಉಪೇಂದ್ರ, ಮಾಧವ ಸರಸ್ವತಿ, ಸದಾನಂದ, ಆರನೆಯವನು ಜ್ಞಾನಜ್ಯೋತಿ ಸರಸ್ವತಿ. ಸಿದ್ಧನಾದ ನಾನು ಏಳನೆಯವನು. ನಮ್ಮೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ದಕ್ಷಿಣ ದೇಶದಲ್ಲಿನ ತೀರ್ಥಗಳನ್ನು ಪವಿತ್ರ ಮಾಡುತ್ತಾ, ಕಾರಂಜಿ ನಗರವನ್ನು ಸೇರಿದರು.
ಅಲ್ಲಿ ತಮ್ಮ ಪೂರ್ವಾಶ್ರಮದ ತಂದೆತಾಯಿಗಳನ್ನು ಸಂತುಷ್ಟರನ್ನಾಗಿ ಮಾಡಿ, ತಮ್ಮ ತಮ್ಮಂದಿರನ್ನು ಆದರಿಸಿದರು. ಪುರಜನರು ಶ್ರೀಗುರುವನ್ನು ಕಂಡು ಬಹಳ ಆನಂದದಿಂದ ಅವರ ಪೂಜಾರ್ಚನೆಗಳನ್ನು ಮಾಡಿದರು. ಅಲ್ಲಿನ ವಿಪ್ರರೆಲ್ಲರೂ ಅವರವರ ಮನೆಗಳಿಗೆ ಭಿಕ್ಷೆಗೆಂದು ಅಹ್ವಾನಿಸಿದರೆ, ಶ್ರೀಗುರುವು ಬಹುರೂಪಿಯಾಗಿ ಎಲ್ಲರ ಮನೆಗಳಿಗೂ ಒಂದೇಕಾಲದಲ್ಲಿ ಹೋಗಿ ಭಿಕ್ಷೆ ಸ್ವೀಕರಿಸಿದರು. ಅದನ್ನು ಕೇಳಿದವರೆಲ್ಲರೂ ವಿಸ್ಮಿತರಾಗಿ ತ್ರಿಮೂರ್ತಿಗಳೇ ಈ ಯತಿಯ ವೇಷದಲ್ಲಿ ಬಂದಿದ್ದಾನೆಂದುಕೊಂಡರು. ಶ್ರೀಗುರುವು ತಮ್ಮ ಮಾತಾಪಿತರಿಗೆ ಪೂರ್ವಸ್ಮರಣೆಯುಂಟಾಗುವಂತೆ ಶ್ರೀಪಾದಶ್ರೀವಲ್ಲಭರೂಪದಲ್ಲಿ ದರ್ಶನವಿತ್ತರು. ತಾಯಿ ಆ ಶ್ರೀಪಾದರೂಪವನ್ನು ಕಂಡು, ಅವರ ಪಾದಗಳಲ್ಲಿ ತಲೆಯಿಟ್ಟು, “ನನ್ನ ಪ್ರದೋಷಪೂಜೆ ಫಲಕೊಟ್ಟಿತು. ಚಂದ್ರಮೌಳಿ ಸತ್ಯಸಂಕಲ್ಪನು” ಎಂಬ ಭಾವನೆಯಿಂದ, ತನ್ನ ಗಂಡನಿಗೆ ತನ್ನ ಗತ ಜನ್ಮದ ವೃತ್ತಾಂತವನ್ನೆಲ್ಲ ಹೇಳಿ, “ಗತಜನ್ಮದಲ್ಲಿ ಶ್ರೀಪಾದರಾಗಿದ್ದ ಈ ವಿಶ್ವವಂದ್ಯನನ್ನು ಮಗನಾಗಿ ಪಡೆಯಲು ನಾನು ಮಹಾದೇವನನ್ನು ಆರಾಧಿಸಿದೆ. ಈ ಜನ್ಮದಲ್ಲಿ ನನ್ನ ಅಂದಿನ ಕೋರಿಕೆ ಸಫಲವಾಯಿತು” ಎಂದು ಆನಂದದಿಂದ ಹೇಳಿದಳು. ಅವರಿಬ್ಬರೂ ಶ್ರೀಗುರುವಿಗೆ ಶರಣಾಗಿ, “ಯತಿರಾಜ, ಜಗನ್ನಾಥ, ನಮ್ಮನ್ನು ಈ ಸಂಸಾರಸಾಗರದಿಂದ ಉದ್ಧರಿಸು” ಎಂದು ಬೇಡಿಕೊಂಡರು. ಅದಕ್ಕೆ ಶ್ರೀಗುರುವು, ಸನ್ಯಾಸಿಯಾದವನು ತನ್ನ ನಲವತ್ತೆರಡು ತಲೆಮಾರುಗಳನ್ನು ಉದ್ಧರಿಸುತ್ತಾನೆ. ಅವನ ವಂಶಕ್ಕೆ ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುವುದು. ಆ ಕುಲದಲ್ಲಿ ಜನಿಸಿದವರೆಲ್ಲರೂ ಶಾಶ್ವತವಾದ ಬ್ರಹ್ಮಪದ ಪಡೆಯುವರು. ಅವರ ಸಂತತಿಗೆ ಯಮನಿಂದಲೂ ಸಹ ಭಯ ದುಃಖಗಳುಂಟಾಗಲಾರವು. ಅವರ ಕುಲದಲ್ಲಿ ಅದಕ್ಕೆ ಮುಂಚೆ ನರಕಕ್ಕೆ ಹೋದವರೂ ಕೂಡಾ ಬ್ರಹ್ಮಲೋಕವನ್ನು ಸೇರಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಿಮಗೇನು ಹೇಳಲಿ? ನಿಮ್ಮಿಬ್ಬರಿಗೂ ಅಂತಕನ ಭಯವಿರುವುದಿಲ್ಲ. ಬ್ರಹ್ಮಪದವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳು ಶತಾಯುಷಿಗಳಾಗಿ, ಅಷ್ಟೈಶ್ವರ್ಯದಿಂದ ಕೂಡಿ, ಪುತ್ರಪೌತ್ರಾದಿಗಳೊಡನೆ ನಿಮ್ಮೊಡನೆ ಇದ್ದುಕೊಂಡು ನಿಮ್ಮನ್ನು ಸಂತೋಷಗೊಳಿಸುತ್ತಾರೆ. ನಿಮಗೆ ನಿಮ್ಮ ಅಂತ್ಯಕಾಲದಲ್ಲಿ ಕಾಶಿಕ್ಷೇತ್ರ ನಿವಾಸ ಲಭಿಸುವುದು. ಕಾಶಿಕ್ಷೇತ್ರ ಮೋಕ್ಷಸ್ಥಾನವೆಂದು ವೇದಾದಿಗಳಲ್ಲಿ ಪ್ರಸಿದ್ಧವಾಗಿದೆ. ಇನ್ನು ಮುಂದೆ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಬಿಟ್ಟು ಸಂತೋಷದಿಂದ ಬಾಳ್ವೆ ಮಾಡಿ” ಎಂದು ಹೇಳಿದರು.
ಅದೇ ಸಮಯಕ್ಕೆ ಅವರ ಪೂರ್ವಾಶ್ರಮದ ತಂಗಿಯಾದ ರತ್ನ ಅಲ್ಲಿಗೆ ಬಂದು, ಶ್ರೀಗುರುವಿಗೆ ನಮಸ್ಕರಿಸಿ, ವಿನೀತಳಾಗಿ, “ಸ್ವಾಮಿ, ನನ್ನನ್ನು ಉದ್ಧರಿಸಬೇಕು. ಸಂಸಾರಸಾಗರದಲ್ಲಿ ಮುಳುಗಿಹೋಗಿದ್ದೇನೆ. ತಾಪತ್ರಯಗಳೆಂಬ ಬಡಬಾಗ್ನಿ ನನ್ನನ್ನು ದಹಿಸುತ್ತಿದೆ. ಕಾಮಾದಿಗಳೆಂಬ ಮೊಸಳೆಗಳು ನನ್ನನ್ನು ಭಯಪಡಿಸುತ್ತಿವೆ. ಈ ದುರ್ಭರವಾದ ಸಂಸಾರಸಾಗರದಿಂದ ನನ್ನನ್ನು ಉದ್ಧರಿಸಿ” ಎಂದು ಕಳಕಳಿಯಿಂದ ಬೇಡಿಕೊಂಡಳು. ಅದಕ್ಕೆ ಶ್ರೀಗುರುವು, “ಅಮ್ಮಾ, ಸ್ತ್ರೀಯರಿಗೆ ಪತಿಸೇವೆಯೇ ತಪಸ್ಸು. ಬೇರೆ ತಪಸ್ಸೇಕೆ? ಅವರನ್ನು ಭವಾರ್ಣವದಿಂದ ಉದ್ಧರಿಸಬಲ್ಲವನು ಆ ಶಿವನೊಬ್ಬನೇ! ಅವನೇ ಪತಿವ್ರತೆಯರಿಗೆ ಸರ್ವಾಭೀಷ್ಟಗಳನ್ನೂ ದಯಪಾಲಿಸುವವನು. ಇದರಲ್ಲಿ ಸಂಶಯವಿಲ್ಲ. ಭವಸಾಗರವನ್ನು ದಾಟಲು ಪತಿಯೇ ದೈವವೆಂದು ಸ್ಮೃತಿಗಳು ಘೋಷಿಸುತ್ತಿವೆ. ಆದ್ದರಿಂದ ನೀನು ನಿನ್ನ ಮನಸ್ಸನ್ನು ಸ್ಥಿರಗೊಳಿಸಿ ಶಿವಸಮಾನನಾದ ನಿನ್ನ ಪತಿಯನ್ನು ಶ್ರದ್ಧಾಭಕ್ತಿಗಳಿಂದ ಸೇವಿಸು. ವೇದೋಕ್ತಿಗಳು ಹೇಳುವಂತೆ ಅವನೇ ನಿನಗೆ ಗತಿ. ನಿನ್ನನ್ನುದ್ಧರಿಸಬಲ್ಲವನು ಅವನೇ! ನಿನ್ನ ಅಂತಃಕರಣದಲ್ಲಿ ದುಃಖಬೇಡ” ಎಂದು ಅವಳಿಗೆ ಶ್ರೀಗುರುವು ಉಪದೇಶಿಸಿದರು. ರತ್ನಾದೇವಿ ಮತ್ತ್ತೊಮ್ಮೆ ಶ್ರೀಗುರುವಿಗೆ ನಮಸ್ಕರಿಸಿ, “ಸ್ವಾಮಿ, ಗುರುಮೂರ್ತಿಯಾದ ನಿಮಗೆ ನಮಸ್ಕಾರಗಳು. ನೀವು ಬ್ರಹ್ಮಜ್ಞಾನಿಗಳು. ಭೂತಭವಿಷ್ಯತ್ತುಗಳನ್ನರಿತವರು. ನನ್ನ ಪ್ರಾರಬ್ಧ ಹೇಗಿದೆಯೋ ತಿಳಿಸಿ. ನನ್ನ ಗತಿ ಎಂತಹುದು ಎಂಬುದನ್ನು ಹೇಳಿ” ಎಂದು ಕೇಳಿದಳು. ಅವಳ ಪ್ರಾರ್ಥನೆಯನ್ನು ಕೇಳಿ ಶ್ರೀಗುರುವು, “ರತ್ನ, ನಿನ್ನ ಮಾತುಗಳು ತಾಮಸಗುಣದಿಂದ ಕೂಡಿದ್ದು. ನೀನು ಪಾಪಗಳನ್ನು ಸಂಚಯಮಾಡಿದ್ದೀಯೆ. ಅನುಭವಿಸದೇ ಅವು ತೀರುವವಲ್ಲ. ಹಿಂದಿನ ಜನ್ಮದಲ್ಲಿ ನೀನು ಗೋವೊಂದನ್ನು ಕೋಲಿನಿಂದ ಹೊಡೆದಿದ್ದೀಯೆ. ನಿನಗೆ ಹತ್ತಿರವಾಗಿದ್ದ ದಂಪತಿಗಳಲ್ಲಿ ವಿರಸವನ್ನುಂಟು ಮಾಡಿದ್ದೀಯೆ. ಹೀಗೆ ನೀನು ಮಾಡಿರುವ ದೋಷಗಳು ಈ ಜನ್ಮದಲ್ಲಿ ಪರಿಪಾಕಗೊಳ್ಳುತ್ತವೆ. ಹಸುವನ್ನು ಹೊಡೆದ ಪಾಪಕ್ಕೆ ನೀನು ಕುಷ್ಠುರೋಗ ಅನುಭವಿಸಬೇಕು. ದಂಪತಿಗಳ ನಡುವೆ ವಿರಹ ಉಂಟುಮಾಡಿದ್ದಕ್ಕೆ ನಿನ್ನ ಗಂಡ ಸನ್ಯಾಸಿಯಾಗಿ ನಿನ್ನನ್ನು ಬಿಟ್ಟುಹೋಗುತ್ತಾನೆ. ನಿನ್ನ ಪೂರ್ವ ದೋಷಗಳಿಂದ ನಿನಗೆ ಇಂತಹ ಫಲಗಳು ದೊರೆಯಲಿವೆ” ಎಂದು ಹೇಳಿದರು. ಅದನ್ನು ಕೇಳಿ, ಆಕೆ ಅತ್ಯಂತ ದುಃಖಿತಳಾಗಿ, “ಗುರುನಾಥ, ನೀನೇ ನನ್ನನ್ನುದ್ಧರಿಸಬೇಕು” ಎಂದು ಅವರ ಪಾದಗಳನ್ನು ಹಿಡಿದು ಬೇಡಿಕೊಂಡಳು. ಅದಕ್ಕೆ ಅವರು, “ಮಗು, ಸ್ವಲ್ಪ ಕಾಲ ಸುಖವನ್ನನುಭವಿಸು. ನಿನ್ನ ಗಂಡ ವಯಸ್ಸಾದಮೇಲೆಯೇ ಸನ್ಯಾಸಿಯಾಗುತ್ತಾನೆ. ಆ ನಂತರದಲ್ಲಿಯೇ ನಿನಗೆ ಕುಷ್ಠುರೋಗ ಪ್ರಾಪ್ತಿಯಾಗುತ್ತದೆ. ಪಾಪಫಲಗಳನ್ನನುಭವಿಸಿದ ಮೇಲೆ ನಿನಗೆ ಸದ್ಗತಿಯಾಗುತ್ತದೆ. ಕುಷ್ಠುರೋಗವು ಆರಂಭವಾದ ಮೇಲೆ ನಿನಗೆ ನನ್ನ ದರ್ಶನವಾಗುತ್ತದೆ. ನಿನ್ನ ಪಾಪ ಪರಿಹಾರಕ್ಕಾಗಿ ಅನುಗುಣವಾದ ಕ್ಷೇತ್ರವು ಭೀಮಾತಟದ ದಕ್ಷಿಣಕ್ಕಿರುವ ಪಾಪವಿನಾಶನವೆಂಬ ತೀರ್ಥವು. ಕುಷ್ಠುರೋಗ ಬಂದೊಡನೆ ನೀನು ಆ ಕ್ಷೇತ್ರಕ್ಕೆ ಹೋಗು. ಗಂಧರ್ವನಗರವು ಭೀಮಾ-ಅಮರಜಾ ನದಿಗಳ ಸಂಗಮದಲ್ಲಿದೆ. ಅದು ಭೂಮಂಡಲದಲ್ಲಿಯೇ ಅತಿ ಪ್ರಸಿದ್ಧವಾದದ್ದು” ಎಂದು ಆದೇಶ ಕೊಟ್ಟು, ಶಿಷ್ಯರೊಡನೆ ಶ್ರೀಗುರುವು ಅಲ್ಲಿಂದ ಹೊರಟು ತ್ರ್ಯಂಬಕ ಕ್ಷೇತ್ರಕ್ಕೆ ಬಂದರು. ಅದು ಗೌತಮಿ ನದಿಯ ಉಗಮ ಸ್ಥಾನ. ತ್ರ್ಯಂಬಕದಿಂದ ಶ್ರೀಗುರುವು ನಾಸಿಕಕ್ಕೆ ಬಂದರು. ಅಲ್ಲಿ ಪುರಾಣೋಕ್ತವಾದ ಅನೇಕ ಪುಣ್ಯ ಕ್ಷೇತ್ರಗಳಿವೆ. ಅವುಗಳೆಲ್ಲದರ ಮಹಿಮೆಯನ್ನು ವಿಸ್ತರಿಸಿ ಹೇಳಲು ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಕೇಳು. ಗೋದಾವರಿ ಲೋಕದಲ್ಲಿ ಅಪಾರವಾದ ಮಹಿಮೆಯುಳ್ಳ ನದಿ. ಅದನ್ನು ವೃದ್ಧಗಂಗಾ ಎಂದೂ ಕರೆಯುತ್ತಾರೆ. ಅದರಲ್ಲಿ ಅನೇಕ ತೀರ್ಥಗಳಿವೆ. ಆ ನದಿ ಮಹೇಶ್ವರನ ಜಟೆಯಿಂದ ಅವತರಿಸಿದ ನದಿ. ಹಿಂದೆ ಋಷೀಶ್ವರನಾದ ಗೌತಮ ಮಹರ್ಷಿಯು ಪ್ರತಿದಿನವೂ ಧಾನ್ಯವನ್ನು ಹರಡಿ, ತಪಸ್ಸು ಮಾಡುತ್ತಿದ್ದನು. ಅಂದುಹರಡಿದ ಧಾನ್ಯ ಅಂದೇ ಮೊಳೆತು ಫಲಕೊಡುತ್ತಿತ್ತು. ಗೌತಮ ಮಹರ್ಷಿಯ ತಪೋ ಮಹಿಮೆ ಅಂತಹುದು. ಒಂದುಸಲ ಅಲ್ಲಿದ್ದ ಇತರ ಋಷಿಗಳೆಲ್ಲರೂ ಕೂಡಿ, “ಈ ಗೌತಮ ಮಹರ್ಷಿ ಶಿವಭಕ್ತ. ಈತ ಗಂಗೆಯನ್ನು ಇಲ್ಲಿಯ ಭೂಮಿಗೆ ತಂದರೆ ನಮಗೆ ಇಲ್ಲೇ ಗಂಗಾಸ್ನಾನವಾಗುತ್ತದೆ. ಯೋಗಯುಕ್ತರು, ಊರ್ಧ್ವರೇತಸ್ಸು ಗಳಾದ ಮುನಿಗಳಿಗೆ ಲಭಿಸುವ ಸದ್ಗತಿ ಈ ನದಿಯ ತೀರಗಳಲ್ಲಿ ವಾಸಿಸುವ ತಿರ್ಯಗ್ಜಂತುಗಳಿಗೂ ಲಭಿಸುತ್ತದೆ. ಮಹಾಮುನಿಗಳು ಕೋಟಿ ವರ್ಷಗಳು ತಪಸ್ಸು ಮಾಡಿ ಪಡೆಯುವ ತಪೋಫಲಕ್ಕೆ ಸಮನಾದ ಫಲ ಗಂಗಾಸ್ನಾನದಿಂದ ಸಿದ್ಧಿಸುತ್ತದೆ. ಈ ಗೌತಮ ಮುನಿ ಗಂಗೆಯನ್ನು ಭೂಮಿಗೆ ತರುವಂತಹ ಪ್ರಯತ್ನ ಮಾಡಬಹುದಾದ ಪ್ರಯತ್ನಶೀಲನು. ಆದ್ದರಿಂದ ಅವನಿಗೆ ಯಾವುದಾದರೂ ಸಂಕಟವನ್ನುಂಟು ಮಾಡಿದರೆ ನಮಗೆ ಗಂಗಾ ಸ್ನಾನ ಲಭ್ಯವಾಗುತ್ತದೆ” ಎಂದು ಯೋಚಿಸಿ, ದರ್ಭೆಗಳಿಂದ ಒಂದು ಗೋವು ಕರುವನ್ನು ಸೃಷ್ಟಿಸಿ ಅವನ್ನು ಗೌತಮ ಮಹರ್ಷಿ ಧಾನ್ಯ ಹರಡುತ್ತಿದ್ದ ಭೂಮಿಯಲ್ಲಿ ಬಿಟ್ಟರು. ಅವನ್ನು ಕಂಡ ಅ ಮುನಿ ಅವುಗಳನ್ನು ಒಂದು ಧರ್ಭೆಯಿಂದ ಅಟ್ಟಿದನು. ಆ ಧರ್ಭೆಯೇ ವಜ್ರಾಯುಧದಂತೆ ಆ ಪಶುಗಳನ್ನು ಮುಟ್ಟಿತು. ತಕ್ಷಣವೇ ಆ ಗೋವು ಕರುಗಳು ಅಲ್ಲಿಯೇ ಸತ್ತು ಬಿದ್ದವು. ಗೌತಮನಿಗೆ ಗೋಹತ್ಯಾ ಪಾಪ ಉಂಟಾಯಿತು. ಋಷಿಗಳೆಲ್ಲರೂ ಸೇರಿ, ಆ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಗಂಗೆಯನ್ನು ಭೂಮಿಗೆ ತಂದು, ಅದನ್ನು ಆ ಪಶುಗಳ ಮೇಲೆ ಹರಿಯುವಂತೆ ಮಾಡಿದರೆ ಅವನು ಪಾಪರಹಿತನಾಗುತ್ತಾನೆ ಎಂದು ಹೇಳಿದರು. ಹಾಗೇ ಆಗಲೆಂದು ಒಪ್ಪಿ, ಗೌತಮ ಮುನಿಯು, ಸಾವಿರ ವರ್ಷಗಳು ತಪಸ್ಸು ಮಾಡಿದನು. ಸದಾಶಿವನು ಪ್ರತ್ಯಕ್ಷನಾಗಿ, ವರ ಕೇಳೆಂದು ಹೇಳಲು, ಗೌತಮನು, ” ಸ್ವಾಮಿ ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಚರಾಚರಗಳನ್ನೆಲ್ಲ ಉದ್ಧರಿಸಲು ಗಂಗೆಯನ್ನು ಲೋಕಕ್ಕೆ ಕಳುಹಿಸು” ಎಂದನು. ಅವನ ಮಾತಿಗೆ ಒಪ್ಪಿ ಮಹೇಶ್ವರನು ಗಂಗೆಯನ್ನು ಬಿಟ್ಟನು. ಭೂಲೋಕದಲ್ಲಿ ಸರ್ವಹಿತಕ್ಕಾಗಿ, ಗಂಗೆ, ಉತ್ತರದಲ್ಲಿನ ಭಾಗೀರಥಿಯಂತೆ, ದಕ್ಷಿಣದಲ್ಲಿ ಹರಿದು ಬಂದಳು. ಅದೇ ಗೌತಮಿ ನದಿ. ಗೋದಾವರಿ ಎಂಬ ಹೆಸರಿನಿಂದ ಪ್ರಸಿದ್ಧವಾದದ್ದು. ಅದರ ಮಹಿಮೆ ವರ್ಣಿಸಲಸಾಧ್ಯವಾದದ್ದು. ಅದರಿಂದಲೇ, ನಾಮಧಾರಕ, ಶ್ರೀಗುರುವು ಅಲ್ಲಿಗೆ ಬಂದರು. ಅಲ್ಲಿಂದ ಸರ್ವತೀರ್ಥಗಳನ್ನು ಪರ್ಯಟಿಸುತ್ತಾ ಅವರು ಮಂಜರೀ ಕ್ಷೇತ್ರಕ್ಕೆ ಬಂದರು.
ಅಲ್ಲಿ ಮಾಧವಾರಣ್ಯನೆಂಬ ನರಸಿಂಹ ಸ್ವಾಮಿಯ ಅರ್ಚಕನೊಬ್ಬನು ತನ್ನ ಮಾನಸ ಪೂಜೆಯಲ್ಲಿ ಶ್ರೀಗುರುವಿನ ದರ್ಶನಮಾಡುತ್ತಿದ್ದನು. ತಾನು ಮನಸ್ಸಿನಲ್ಲಿ ಧ್ಯಾನಿಸುವ ಶ್ರೀಗುರುವನ್ನು ಪ್ರತ್ಯಕ್ಷವಾಗಿ ಕಂಡ ಆ ಅರ್ಚಕನು ಆಶ್ಚರ್ಯಪಟ್ಟು, ಶ್ರೀಗುರುವನ್ನು ಸ್ತ್ರೋತ್ರಗಳಿಂದ ಸ್ತುತಿಸುತ್ತಾ, “ಶ್ರೀಪಾದರ ಪಾದಯುಗ್ಮಗಳು ದಿವ್ಯನದೀ ತೀರದಲ್ಲಿ ಸ್ಥಾಪಿತವಾಗಿವೆ. ಉತ್ತರ ತೀರ ನಿವಾಸಿಯಾದ ಶ್ರೀನರಸಿಂಹನು ಲಕ್ಷ್ಮೀಸಮೇತನಾಗಿ ಅಲ್ಲಿ ನೆಲೆಸಿದ್ದಾನೆ” ಎಂದು ಹೇಳುತ್ತಾ, ಬಹಳ ಸಂತೋಷದಿಂದ ಶ್ರೀಗುರುವಿಗೆ ನಮಸ್ಕರಿಸಿದನು. ಅದಕ್ಕೆ ಶ್ರೀಗುರುವು, “ಸೇವಾ ಮಾರ್ಗವನ್ನು ಹಿಡಿದು ನೀನು ಸನ್ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದೀಯೆ. ನನ್ನ ದರ್ಶನದಿಂದ ನೀನು ಸಂಸಾರಮಾರ್ಗವನ್ನು ಬಿಟ್ಟು ನನ್ನ ರೂಪವನ್ನು ದರ್ಶನ ಮಾಡಿಕೊಂಡಿರು” ಎಂದು ಹೇಳಿ, ಹರ್ಷಪೂರ್ಣರಾಗಿ ಆ ಅರ್ಚಕನಿಗೆ ತಮ್ಮ ನಿಜ ರೂಪವನ್ನು ತೋರಿಸಲು, ಆ ಅರ್ಚಕನು ಆನಂದ ತುಂಬಿದವನಾಗಿ, ಅವರನ್ನು ಮತ್ತೆ ಮತ್ತೆ ಅನೇಕ ಸ್ತೋತ್ರಗಳಿಂದ ಸ್ತುತಿಸಿದನು.
“ಜಗದ್ಗುರು, ಲೋಕದೃಷ್ಟಿಯಲ್ಲಿ ಮಾನವರಾದರೂ, ನೀವು ಆ ತ್ರಿಮೂರ್ತ್ಯವತಾರವಾದ ಜಗಜ್ಜ್ಯೋತಿಯೇ! ಪರಮಪುರುಷನು. ವಿಶ್ವವನ್ನೇ ಉದ್ಧರಿಸುವಂತಹವನು. ಭೂಲೋಕದಲ್ಲಿ ಅವತರಿಸಿದ ದತ್ತದೇವರು. ನನ್ನನ್ನು ಕೃತಾರ್ಥರನ್ನಾಗಿ ಮಾಡಿ ನಿಮ್ಮ ಚರಣ ದರ್ಶನ ಭಾಗ್ಯವನ್ನು ಕೊಟ್ಟಿರಿ.” ಎಂದು ಅನೇಕ ರೀತಿಯಲ್ಲಿ ಸ್ತುತಿಸಿದ, ಅವನ ಸ್ತೋತ್ರಕ್ಕೆ ಹರ್ಷಿತರಾದ ಶ್ರೀಗುರುವು ಅವನಿಗೆ, “ಮಾಧವಾರಣ್ಯ, ನಿನಗೆ ಮಂತ್ರ ಸಿದ್ಧಿಯಾಗಿದೆ. ಅದರಲ್ಲಿ ಸಂಶಯವಿಲ್ಲ. ಸದ್ಗತಿ ಪಡೆದು ಬ್ರಹ್ಮಲೋಕವನ್ನು ಸೇರುತ್ತೀಯೆ. ದಿನವೂ ನೃಸಿಂಹಮೂರ್ತಿರೂಪದಲ್ಲಿ ನಮ್ಮನ್ನೇ ಮನಸಾ ಪೂಜೆಮಾಡಿದೆ. ಅದರಿಂದಲೇ ನಿನಗೆ ಪ್ರತ್ಯಕ್ಷ ದರ್ಶನ ಕೊಟ್ಟೆವು” ಎಂದು ಹೇಳಿ, ಅವನಿಂದ ಬೀಳ್ಕೊಂಡು, ಶ್ರೀಗುರುವು ಅಲ್ಲಿಂದ ಹೊರಟು ವಾಸರ ಬ್ರಹ್ಮಕ್ಷೇತ್ರವನ್ನು ಸೇರಿದರು. ಅಲ್ಲಿ ಶಿಷ್ಯರೊಡನೆ ಸ್ನಾನಕ್ಕೆಂದು ನದಿಗೆ ಬಂದಾಗ, ಸಾಯಲು ಸಿದ್ಧನಾಗಿ ಬಂದಿದ್ದ ಬ್ರಾಹ್ಮಣನೊಬ್ಬನನ್ನು ಕಂಡರು. ಅವನು ಹೊಟ್ಟೆನೋವಿನಿಂದ ಬಹಳವಾಗಿ ನರಳುತ್ತಾ, ಆ ವೇದನೆಯನ್ನು ಸಹಿಸಲಾರದೆ ಪ್ರಾಣಬಿಡಬೇಕೆಂದು ಬಂದಿದ್ದನು. ಅವನಿಗೆ ಊಟ ಮಾಡಿದರೆ ಪ್ರಾಣಾಂತಿಕವಾದ ನೋವುಂಟಾಗುತ್ತಿತ್ತು. ಆ ನೋವನ್ನು ಸಹಿಸಲಾಗದೆ ಅವನು ಊಟ ಮಾಡುವುದನ್ನೇ ಬಿಟ್ಟಿದ್ದನು. ಅನ್ನ ದ್ವೇಷವಾಗಿದ್ದುದರಿಂದ ಅವನು ಪಕ್ಷಕ್ಕೋ, ತಿಂಗಳಿಗೋ ಒಂದುಸಲ ಊಟ ಮಾಡುತ್ತಿದ್ದನು. ಹೀಗೆ, ಕಷ್ಟವನ್ನನುಭವಿಸುತ್ತಾ ಅವನು ಮಹಾನವಮಿಗೆ ಮುಂಚಿನ ದಿನ ಊಟ ಮಾಡಿದನು. ಅದರಿಂದುಂಟಾದ ನೋವನ್ನು ಭರಿಸಲಾರದೆ ಪ್ರಾಣತ್ಯಾಗಮಾಡಲುದ್ಯುಕ್ತನಾಗಿ, “ಈ ಪ್ರಪಂಚದಲ್ಲಿ ನನ್ನಂತಹ ಪಾಪಾತ್ಮ ಬದುಕಿರಬಾರದು. ಅನ್ನವಿಲ್ಲದೆ ಬದುಕುವುದಾದರೂ ಹೇಗೆ ಸಾಧ್ಯ? ಅನ್ನಕ್ಕೆ ನಾನು ದ್ವೇಷಿಯಾದೆ. ಅದಕ್ಕಿಂತ ಮರಣವೇ ಲೇಸು” ಎಂದು ನಿಶ್ಚಯ ಮಾಡಿಕೊಂಡು, ಕತ್ತಿಗೆ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಸಾಯಲು ಬಂದಿದ್ದ ಆ ಬ್ರಾಹ್ಮಣ, ಶಿವ ಸ್ಮರಣೆ ಮಾಡುತ್ತಾ, “ಹಿಂದಿನ ಜನ್ಮದಲ್ಲಿ ನಾನು ಅನ್ನದಾನವೇ ಮುಂತಾದ ಪುಣ್ಯಕಾರ್ಯಗಳನ್ನು ಮಾಡಲಿಲ್ಲವೆಂದು ತೋರುತ್ತದೆ. ಅಥವಾ ಬ್ರಾಹ್ಮಣನ ಭೋಜನವನ್ನೋ ಇಲ್ಲ ಗೋಗ್ರಾಸವನ್ನೋ ಅಪಹರಿಸಿದ್ದಿರಬೇಕು. ಇಲ್ಲವೇ ವಿಶ್ವಾಸಘಾತ ಮಾಡಿದ್ದೆನೋ ಏನೋ? ಅದಕ್ಕೇ ಇಂತಹ ಫಲ ಉಂಟಾಗಿದೆ. ಸದ್ಗುರುವನ್ನು ನಿಂದಿಸಿದ್ದೆನೇನೋ? ಅತಿಥಿಗಳನ್ನು ಆದರಿಸಿ ಭೋಜನವಿಡಲಿಲ್ಲವೇನೋ? ಮಾತಾಪಿತರನ್ನು ಆದರದಿಂದ ಕಾಣದೆ, ಅವರನ್ನು ಹಸಿವಿಟ್ಟು ನಾನು ಮೃಷ್ಟಾನ್ನ ಭೋಜನಮಾಡಿ, ಅವಮಾನಿಸಿದ್ದೆನೇನೋ? ಅಂತಹ ಯಾವುದೋ ಅಕಾರ್ಯ ಮಾಡಿದ್ದಿದುದರಿಂದಲೇ ಈ ಜನ್ಮದಲ್ಲಿ ನಾನು ಇಂತಹ ಯಾತನೆಯನ್ನನುಭವಿಸುತ್ತಿದ್ದೇನೆ” ಎಂದು ವ್ಯಥೆಪಡುತ್ತಾ ನದಿಯಲ್ಲಿ ಪ್ರವೇಶಮಾಡಿದನು. ಅದನ್ನು ಕಂಡ ಶ್ರೀಗುರುವು ಶಿಷ್ಯರನ್ನು ಕರೆದು ತಕ್ಷಣವೇ ಅವನನ್ನು ಕರೆತರಲು ಹೇಳಿದರು. ಶಿಷ್ಯರು ಬೇಗನೇ ಹೋಗಿ ನೀರಿನಲ್ಲಿಳಿದಿದ್ದ ಆ ಬ್ರಾಹ್ಮಣನನ್ನು ಗುರುವಿನ ಬಳಿಗೆ ಕರೆದುತಂದರು. ದುಃಖಿತರಿಗೆ ದಯಾಳುವಾದ ಆ ಗುರುವು, “ಹೇ ಬ್ರಾಹ್ಮಣ, ನೀನೇಕೆ ಪ್ರಾಣತ್ಯಾಗ ಮಾಡಲು ಹೊರಟಿದ್ದೀಯೆ? ಆತ್ಮಹತ್ಯೆ ಮಹಾಪಾಪವಲ್ಲವೇ?” ಎಂದು ಕೇಳಲು, ಆ ಬ್ರಾಹ್ಮಣ, “ಯತೀಶ್ವರ, ನಾನು ಹೇಳಿದ್ದನ್ನು ಕೇಳಿ ನೀವೇನು ಮಾಡಬಲ್ಲಿರಿ? ನನ್ನ ಜನ್ಮವೇ ವ್ಯರ್ಥವಾಗಿದೆ. ಪಕ್ಷಕ್ಕೊಂದುಸಲವೋ ಮಾಸಕ್ಕೊಂದುಸಲವೋ ಊಟಮಾಡಿದರೂ ತಡೆಯಲಾಗದ ಉದರ ಶೂಲೆಯುಂಟಾಗುತ್ತದೆ. ಅದನ್ನು ಸಹಿಸಲಾಗದೆ ಪ್ರಾಣತ್ಯಾಗಮಾಡಲು ನಿಶ್ಚಯಿಸಿದೆ. ಶರೀರವು ಅನ್ನಮಯವು. ಅಂತಹ ಅನ್ನವೇ ನನಗೆ ವೈರಿಯಾಗಿದೆ. ಗುರುನಾಥ, ಅನ್ನವಿಲ್ಲದೆ ಜೀವಿಸುವ ರೀತಿಯನ್ನು ನೀವೇ ತಿಳಿಸಿ” ಎಂದನು. ಅದನ್ನು ಕೇಳಿದ ಶ್ರೀಗುರುವು, “ನಿನ್ನ ಬಾಧೆಯನ್ನು ಒಂದು ನಿಮಿಷದಲ್ಲಿ ಹೊರಗಟ್ಟುವಂತಹ ಔಷಧವನ್ನು ಹೇಳುತ್ತೇನೆ. ಸಂಶಯಪಡಬೇಡ. ನಿನ್ನ ವ್ಯಾಧಿ ಭೂಮಿಯಲ್ಲಿ ಕಲೆತುಹೋಯಿತೆಂದು ತಿಳಿ. ನಿನಗಿಷ್ಟವಾದ ಮೃಷ್ಟಾನ್ನ ಭೋಜನ ಮಾಡು” ಎಂದರು. ಅವರ ಮಾತನ್ನು ಕೇಳಿದ ಆ ಬ್ರಾಹ್ಮಣ ದಿಕ್ಕು ತೋರದೆ, ಮೌನವಾಗಿ ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ನಮಸ್ಕರಿಸಿದನು.
ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಅಲ್ಲಿನ ಗ್ರಾಮಾಧಿಕಾರಿ ಸ್ನಾನಕ್ಕೆ ಬಂದನು. ಶ್ರೀಗುರುವನ್ನು ನೋಡಿದ ತಕ್ಷಣವೇ ಅ ಬ್ರಾಹ್ಮಣ. ಅವರ ಬಳಿಗೆ ಬಂದು ಶ್ರೀಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ, ಭಕ್ತಿಯುಕ್ತನಾಗಿ ಅವರನ್ನು ಪ್ರಾರ್ಥಿಸುತ್ತಾ ನಿಂತನು. ಅವನನ್ನು ಕಂಡು ಶ್ರೀಗುರುವು ಆದರದಿಂದ, “ಅಯ್ಯಾ, ನೀನು ಎಲ್ಲಿಯವನು? ನಿನ್ನ ಹೆಸರೇನು? ಎಲ್ಲವನ್ನು ತಿಳಿಸು” ಎಂದರು. ಅದಕ್ಕೆ ಅವನು, “ನಾನು ಆಪಸ್ತಂಭ ಶಾಖೀಯನು. ಕೌಂಡಿನ್ಯಸ ಗೋತ್ರದವನು. ನನ್ನನ್ನು ಸಾಯಂದೇವನೆನ್ನುವರು. ಕಾಂಚಿಪುರ ನನ್ನ ನಿವಾಸಸ್ಥಾನ. ಉದರಭರಣಕ್ಕಾಗಿ ಯವನೇಶ್ವರನಿಗೆ ಸೇವಕನಾಗಿ, ಇಲ್ಲಿ ಗ್ರಾಮಾಧಿಕಾರಿಯಾಗಿ ಒಂದು ವರ್ಷದಿಂದ ಇದ್ದೇನೆ. ಇಂದು ನಾನು ಧನ್ಯನಾದೆ. ನಿಮ್ಮ ದರ್ಶನವನ್ನು ಮಾಡಿದವನಾದೆ. ಕೃತಾರ್ಥನಾದೆ. ನೀವು ವಿಶ್ವೋದ್ಧಾರಕರು. ಜನ್ಮಜನ್ಮಾಂತರಗಳಲ್ಲಿ ನಾನು ಮಾಡಿದ ಪಾಪಫಲಗಳೆಲ್ಲವೂ ಇಂದು ನಾಶವಾದವು. ನಿಮ್ಮ ಅನುಗ್ರಹ ಪಡೆದವನು ಭವಸಾಗರವನ್ನು ದಾಟುತ್ತಾನೆ. ಅಪ್ರಯತ್ನವಾಗಿ ನಿಮ್ಮ ದರ್ಶನ ನನಗೆ ಲಭ್ಯವಾಯಿತು. ಗಂಗೆ ಪಾಪಗಳನ್ನು, ಚಂದ್ರ ತಾಪವನ್ನು, ಕಲ್ಪವೃಕ್ಷ ದೈನ್ಯವನ್ನು ಹೋಗಲಾಡಿಸುತ್ತವೆ. ಆದರೆ ಶ್ರೀಗುರು ದರ್ಶನವು ಪಾಪ ತಾಪ ದೈನ್ಯಗಳನ್ನು ತಕ್ಷಣವೇ ಪರಿಹರಿಸುತ್ತದೆ. ಗಂಗೆಯಲ್ಲಿ ಸ್ನಾನಮಾಡಿದರೇನೇ ಪಾಪ ಪರಿಹಾರವಾಗುತ್ತದೆ. ಚಂದ್ರನು ರಾತ್ರಿಹೊತ್ತಿನಲ್ಲಿ ಮಾತ್ರ ತಾಪವನ್ನು ಕಳೆಯುತ್ತಾನೆ. ಕಲ್ಪವೃಕ್ಷ ತನ್ನ ನೆರಳಿಗೆ ಬಂದವನಿಗೆ ಮಾತ್ರವೇ ದೈನ್ಯ ಪರಿಹಾರಕವಾಗುತ್ತದೆ. ಹಾಗಲ್ಲದೆ ನಿಮ್ಮ ದರ್ಶನ ಮಾತ್ರದಿಂದಲೇ ಪಾಪ, ತಾಪ, ದೈನ್ಯಗಳು ನಶಿಸಿಹೋಗುತ್ತವೆ. ಚತುರ್ವರ್ಗಫಲಪ್ರದವಾದ ನಿಮ್ಮ ದರ್ಶನವಂತಹದು” ಎಂದು ಸ್ತೋತ್ರಮಾಡುತ್ತಾ ಮತ್ತೆ ಅವರ ಕಾಲಿಗೆರಗಿದನು.
ಶ್ರೀಗುರುವು ಅವನನ್ನು ಮೇಲಕ್ಕೆತ್ತಿ, ಪಕ್ಕದಲ್ಲಿ ಕೂಡಿಸಿಕೊಂಡು, “ಅಯ್ಯಾ, ನನ್ನ ಮಾತು ಕೇಳು. ಈ ಬ್ರಾಹ್ಮಣ ಉದರಶೂಲೆಯಿಂದ ನರಳುತ್ತಿದ್ದಾನೆ. ವ್ಯಾಧಿ ಉಪಶಮನವಾಗಲು ಇವನಿಗೆ ಒಂದು ಔಷಧವನ್ನು ಹೇಳಿದ್ದೇನೆ. ಇವನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಬಹು ಇಷ್ಟವಾದ ಭೋಜನವನ್ನು ನೀಡು. ಅನ್ನ ಊಟಮಾಡುವುದರಿಂದ ಅವನ ವ್ಯಾಧಿಪೀಡೆ ನಾಶವಾಗಿಹೋಗುವುದು. ಇವನು ಹಸಿದುಗೊಂಡಿದ್ದಾನೆ. ಆದ್ದರಿಂದ ತ್ವರೆಯಾಗಿ ಅವನನ್ನು ಕರೆದುಕೊಂಡುಹೋಗಿ ಊಟಮಾಡಿಸು” ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಸಾಯಂದೇವ, ವಿನಯದಿಂದ, “ಸ್ವಾಮಿ, ಇವನು ಊಟಮಾಡಿ ಪ್ರಾಣ ಬಿಡುತ್ತಾನೇನೋ? ತಿಂಗಳಿಗೊಂದು ಸಲದಂತೆ ನಿನ್ನೆ ಊಟಮಾಡಿ ಆ ಬಾಧೆ ತಡೆಯಲಾರದೆ ಪ್ರಾಣ ತ್ಯಾಗಕ್ಕೆ ಸಿದ್ಧನಾದನು. ಇವನಿಗೆ ಅನ್ನ ದಾನಮಾಡಿದರೆ ನನಗೆ ಬ್ರಹ್ಮಹತ್ಯಾ ಪಾಪ ಬರುವುದು” ಎಂದು ಸಂದೇಹ ಪೂರ್ವಕವಾಗಿ ಹೇಳಿದನು. ಅದಕ್ಕೆ ಶ್ರೀಗುರುವು, “ಅಯ್ಯಾ, ಇವನಿಗೆ ಔಷಧವನ್ನು ಹೇಳುತ್ತೇನೆ. ಮಾಷಾನ್ನ, ಪರಮಾನ್ನ, ಕಜ್ಜಾಯಗಳು ಇವನಿಗೆ ಪರಮೌಷಧ. ಅವನ್ನು ತಿಂದರೆ ಇವನ ವ್ಯಾಧಿ ನಾಶವಾಗುತ್ತದೆ. ಸಂದೇಹಪಡದೆ ತಕ್ಷಣವೇ ಕರೆದುಕೊಂಡು ಹೋಗಿ, ಅತಿತ್ವರೆಯಾಗಿ ಇವನಿಗೆ ಭೋಜನ ಮಾಡಿಸು” ಎಂದು ಆದೇಶಕೊಟ್ಟರು. ಸಾಯಂದೇವನು ಓಂ ಎಂದು ಹೇಳುತ್ತಾ, ಶ್ರೀಗುರುವನ್ನೂ ಶಿಷ್ಯರೊಡನೆ ತನ್ನ ಮನೆಗೆ ಭಿಕ್ಷೆಗೆ ಬರಬೇಕೆಂದು ಪ್ರಾರ್ಥಿಸಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಮನ್ನಿಸಿದರು. ಸಾಯಂದೇವನು ಬಹಳ ಸಂತೋಷಗೊಂಡನು. ನಾನು, ಇತರಶಿಷ್ಯರು, ಅ ರೋಗಿಯಾಗಿದ್ದ ಬ್ರಾಹ್ಮಣ, ಎಲ್ಲರೂ ಶ್ರೀಗುರುವಿನೊಡನೆ ಸಾಯಂದೇವನ ಮನೆಗೆ ಹೋದೆವು. ಪತಿವ್ರತೆಯಾದ ಅವನ ಪತ್ನಿ, ಬಹಳ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದಳು. ಶಿಷ್ಯರ ಸಹಿತ, ಆ ದಂಪತಿಗಳು, ಗುರುವಿಗೆ ಷೋಡಶೋಪಚಾರಗಳಿಂದ ಸತ್ಕರಿಸಿದರು. ಅವರು ಮಾಡಿದ ಗುರುಪೂಜಾ ವಿಧಾನವೇ ನನಗೆ ವಿಚಿತ್ರವಾಗಿ ತೋರಿತು. ರಂಗವಲ್ಲಿಯಿಂದ ಒಂದು ಮಂಟಪವನ್ನು ರಚಿಸಿ, ನಾನಾ ವರ್ಣಗಳಿಂದ ಅಷ್ಟದಳಪದ್ಮಗಳನ್ನು ಬರೆದು, ಐದು ಬಣ್ಣಗಳಿಂದ ಚಿತ್ರಚಿತ್ರವಾಗಿ ಆ ಸ್ಥಳವನ್ನು ಅಲಂಕರಿಸಿ, ನಂತರ ಸಂಕಲ್ಪ ಮಾಡಿ, ಸಾಷ್ಟಾಂಗ ನಮಸ್ಕಾರ ಮಾಡಿ, ಸಾಯಂದೇವ ವಿನಯದಿಂದ, ಶಾಸ್ತ್ರೀಯವಾಗಿ ಚಿತ್ರಾಸನದಲ್ಲಿ ಶ್ರೀಗುರುವನ್ನೂ, ಶಿಷ್ಯರನ್ನೂ ಒಂದೊಂದು ಮಂಡಲದಲ್ಲಿ ಕೂಡಿಸಿ, ಕ್ರಮವಾಗಿ ಉಪಚಾರಗಳನ್ನು ಮಾಡಿ, ಪಂಚಾಮೃತವೇ ಮುಂತಾದುವುಗಳಿಂದ, ರುದ್ರಸೂಕ್ತಗಳನ್ನು ಹೇಳುತ್ತಾ ಅವರೆಲ್ಲರ ಪಾದಗಳಿಗೆ ಅಭಿಷೇಕ ಮಾಡಿದರು. ಭಕ್ತಿಯಿಂದ ಮಾಲ್ಯಾದಿಗಳನ್ನು ಶ್ರೀಗುರುವಿಗೆ ಅರ್ಪಿಸಿ, ಜ್ಞಾನಿಯಾದ ಸಾಯಂದೇವನು ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಸ್ವೀಕರಿಸಿದನು. ಅ ಪಾದೋದಕಕ್ಕೆ ಮತ್ತೆ ಪೂಜಾದಿಗಳನ್ನು ಮಾಡಿ, ಸದ್ಗುರುವಿಗೆ ನೀರಾಜನ ಕೊಟ್ಟು, ಗೀತವಾದ್ಯಗಳಿಂದ ಸಂತಸಗೊಳಿಸಿದನು. ನಂತರ ಶಿಷ್ಯರಿಗೂ ಅದೇವಿಧದಲ್ಲಿ ಷೋಡಶೋಪಚಾರ ಪೂಜಾದಿಗಳನ್ನು ಮಾಡಿದರು. ವೇದಮಂತ್ರಘೋಷಗಳಿಂದ ಪುಷ್ಪಾಂಜಲಿಯನ್ನು ಕೊಟ್ಟು ಶ್ರೀಗುರುವನ್ನು ಗೀತೋಪಚಾರ ನಮಸ್ಕಾರಗಳಿಂದ ಸಂತೋಷಗೊಳಿಸಿದರು. ಪತಿವ್ರತೆಯಾದ ಪತ್ನಿಯೊಡನೆ ಸಾಯಂದೇವನು ಈ ರೀತಿಯಾಗಿ ಗುರುವನ್ನು ಪೂಜಿಸಿ, ಪರಮಾದರದಿಂದ ಎಲ್ಲರಿಗೂ ನಮಸ್ಕರಿಸಿದನು. ಅವನ ಪೂಜಾದಿಗಳಿಂದ ಸಂತುಷ್ಟನಾದ ಶ್ರೀಗುರುವು, “ನಿನ್ನ ಸಂತತಿಯೆಲ್ಲವೂ ನನ್ನಲ್ಲಿ ಭಕ್ತಿಯಿಂದಿದ್ದು ನಿನ್ನ ಕುಲವನ್ನು ವೃದ್ಧಿಗೊಳಿಸುತ್ತಾರೆ. ನಿನಗೆ ಗುರುಮಹಿಮೆಯ ಅರಿವಾಗಿದೆ. ಪುತ್ರಪೌತ್ರಾದಿಗಳಿಂದ ಕೂಡಿ ನಿನ್ನ ವಂಶವು ವೃದ್ಧಿಯಾಗಲಿ” ಎಂದು ಅವನನ್ನು ಅನುಗ್ರಹಿಸಿದರು. ಆ ನಂತರ ಸಾಯಂದೇವನು ಮಂಡಲಗಳನ್ನು ರಚಿಸಿ, ಪಾತ್ರೆಗಳನ್ನಿಟ್ಟು, ಕ್ರಮವಾಗಿ ಪಾಯಸಾನ್ನ, ಪಕ್ವಾನ್ನ, ಮಾಷಾನ್ನ, ವಿಧವಿಧವಾದ ಭಕ್ಷ್ಯಗಳು, ಸಿಹಿಪದಾರ್ಥಗಳು, ನಾನಾ ವಿಧವಾದ ಪಲ್ಯಗಳು, ಉತ್ತಮವಾಗಿ ತಯಾರಿಸಿದ ವ್ಯಂಜನಗಳು ಮುಂತಾದುವೆಲ್ಲವನ್ನೂ ಬಡಿಸಿ, ಎಲ್ಲರಿಗೂ ಸಾದರವಾಗಿ ಭೋಜನ ಮಾಡಿಸಿದನು. ಉದರಶೂಲೆಯಿಂದ ನರಳುತ್ತಿದ್ದ ಬ್ರಾಹ್ಮಣನು ಯಥೇಷ್ಟವಾಗಿ ಊಟಮಾಡಿದನು. ಆಗ ಒಂದು ವಿಚಿತ್ರವಾಯಿತು. ಸದ್ಗುರು ಕೃಪಾದೃಷ್ಟಿಯಿಂದ ಅವನ ರೋಗವು ಆ ಕ್ಷಣದಲ್ಲೇ ಮಾಯವಾಗಿ ಹೋಯಿತು. ಚಿಂತಾಮಣಿಯ ಸ್ಪರ್ಶಮಾತ್ರದಿಂದ ಕಬ್ಬಿಣ ಚಿನ್ನವಾಗುವಂತೆ ಆ ಉದರಶೂಲಾ ಬಾಧಿತನಾದ ಬ್ರಾಹ್ಮಣ ರೋಗವಿಹೀನನಾದನು. ಸೂರ್ಯೋದಯದಿಂದ ಅಂಧಕಾರವು ತೊಲಗಿ ಹೋಗುವಂತೆ, ಶ್ರೀಗುರುವಿನ ಕೃಪೆಯಿದ್ದರೆ ದೈನ್ಯವೇಕುಂಟಾಗುವುದು? ಶ್ರೀಗುರು, ಅವರ ಶಿಷ್ಯರೊಡನೆ ಸಹಪಂಕ್ತಿ ಭೋಜನ ಮಾಡಿದ ಆ ವಿಪ್ರ ಬಹು ಸಂತುಷ್ಟನಾದನು. ಆ ವಿಚಿತ್ರವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಆಹಾ! ಅವನಿಗೆ ಶತ್ರುವಾಗಿದ್ದ ಆನ್ನವೇ ಅವನಿಗೆ ದಿವ್ಯೌಷಧವಾಗಿ ಅವನ ರೋಗವು ನಾಶವಾಯಿತು!
ನಾಮಧಾರಕ, ಏನು ಹೇಳಲಿ? ಗುರುಕೃಪೆಯಿಂದ ಜನ್ಮಾಂತರ ಪಾಪಗಳೂ ಕೂಡಾ ನಾಶವಾಗಬಲ್ಲವು. ಇದೊಂದು ವ್ಯಾಧಿಯ ವಿಷಯವೇನು ದೊಡ್ಡದು? ಗುರುಚರಿತ್ರೆಯಲ್ಲಿನ ಈ ಪವಿತ್ರವಾದ ಆಖ್ಯಾನವನ್ನು ಭಕ್ತಿಯಿಂದ ಪಠಿಸಿದವನು, ಕೇಳುವವನು ಇಬ್ಬರಿಗೂ, ಅವರವರ ಮನೆಗಳಲ್ಲಿ ರೋಗ ಭಯವಿರುವುದಿಲ್ಲ.”
ಇಲ್ಲಿಗೆ ಹದಿಮೂರನೆಯ ಅಧ್ಯಾಯ ಮುಗಿಯಿತು.
[08/01 7:50 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನಾಲ್ಕನೆಯ ಅಧ್ಯಾಯ||
ಸಚ್ಛಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, “ಯೋಗೀಶ್ವರ, ಜ್ಞಾನಸಾಗರ, ನಿನಗೆ ಜಯವಾಗಲಿ. ಹೊಟ್ಟೆನೋವಿನಿಂದ ನರಳುತ್ತಿದ್ದ ಬ್ರಾಹ್ಮಣನ ರೋಗವನ್ನು ಹೋಗಲಾಡಿಸಿದ ನಂತರದ ವೃತ್ತಾಂತವನ್ನು ಹೇಳಿ” ಎಂದು ಕೇಳಿದನು. ಅದಕ್ಕೆ ಸಿದ್ಧಮುನಿಯು, “ಶ್ರೀಗುರುವು, ಭಿಕ್ಷೆಯನ್ನಿಟ್ಟ ಬ್ರಾಹ್ಮಣ ಸಾಯಂದೇವನನ್ನು ಕರೆದು, “ನಿನ್ನಲ್ಲಿ ಪ್ರಸನ್ನನಾಗಿದ್ದೇವೆ. ನಿನ್ನ ವಂಶಸ್ಥರು ನಮ್ಮ ಭಕ್ತರಾಗುತ್ತಾರೆ” ಎಂದರು. ಅದಕ್ಕೆ ಸಾಯಂದೇವನು ಗುರುವಿಗೆ ಸಾಷ್ಟಾಂಗ ನಮಸ್ಕಾರಮಾಡಿ, “ಸ್ವಾಮಿ, ನೀವು ಮನುಷ್ಯ ರೂಪದಲ್ಲಿರುವ ತ್ರಿಮೂರ್ತಿಗಳ ಅವತಾರವೇ! ನಿಮ್ಮ ಮಹಿಮೆಯನ್ನು ವೇದಗಳೂ ಅರಿಯಲಾರವು. ವಿಶ್ವವ್ಯಾಪಕರಾದ ಬ್ರಹ್ಮ, ವಿಷ್ಣು, ಮಹೇಶ್ವರ ರೂಪಗಳನ್ನು ಮುಚ್ಚಿಟ್ಟು ಈ ರೂಪದಲ್ಲಿ ಭಕ್ತರನ್ನುದ್ಧರಿಸಲು ಬಂದಿದ್ದೀರಿ. ನಿಮ್ಮ ಮಹಿಮೆಯನ್ನು ವರ್ಣಿಸಲು ನನಗೆ ಸಾಧ್ಯವೇ? ನನ್ನದೊಂದು ಪ್ರಾರ್ಥನೆಯಿದೆ. ನನ್ನ ವಂಶದಲ್ಲಿ ಹುಟ್ಟಿದವರಿಗೆ ನಿಮ್ಮಲ್ಲಿ ಭಕ್ತಿ, ಪುತ್ರಪೌತ್ರಾದಿಗಳಿಂದ ಕೂಡಿದ ಸುಖಸಂತೋಷಗಳನ್ನು ಕೊಟ್ಟು, ಕೊನೆಯಲ್ಲಿ ಅವರಿಗೆ ಸದ್ಗತಿಯನ್ನು ಪ್ರಸಾದಿಸಿ. ಕ್ರೂರವಾದ ಯವನನಲ್ಲಿ ಸೇವೆ ಮಾಡುತ್ತಿದ್ದೇನೆ. ಅವನು ರಾಕ್ಷಸನಂತೆ ಪ್ರತಿವರ್ಷವೂ ಒಬ್ಬ ಬ್ರಾಹ್ಮಣನನ್ನು ಸಂಹರಿಸುತ್ತಾನೆ. ಇಂದು ನನ್ನನ್ನು ಸಂಭ್ರಮಾದರಗಳಿಂದ ಆಹ್ವಾನಿಸಿದ್ದಾನೆ. ಅವನ ಬಳಿಗೆ ಹೋದರೆ ಅವನು ನನ್ನನ್ನು ತಪ್ಪದೇ ಸಂಹರಿಸುತ್ತಾನೆ. ನಿಮ್ಮ ಚರಣಗಳನ್ನಾಶ್ರಯಿಸಿದ ನನಗೆ ಅಂತಹ ಮರಣವು ಉಂಟಾಗಬಾರದು” ಎಂದು ಬಿನ್ನವಿಸಿಕೊಳ್ಳಲು, ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಅಭಯ ನೀಡಿ, “ಚಿಂತಿಸಬೇಡ. ಕ್ರೂರನಾದ ಆ ಯವನನ ಕಡೆಗೆ ದುಃಖಪಡದೆ ಹೋಗು. ಅವನು ಪ್ರೇಮದಿಂದ ನಿನ್ನನ್ನು ಮತ್ತೆ ನನ್ನೆಡೆಗೆ ಕಳುಹಿಸುತ್ತಾನೆ. ಅಲ್ಲಿಯವರೆಗೂ ನಾವು ಇಲ್ಲಿಯೇ ಇರುತ್ತೇವೆ. ನೀನು ಹಿಂತಿರುಗಿದ ಮೇಲೆ ನಾವು ಸಂತೋಷದಿಂದ ಇಲ್ಲಿಂದ ಹೊರಡುತ್ತೇವೆ. ನಿನ್ನಂತೆಯೇ ನಿನ್ನ ವಂಶಸ್ಥರೆಲ್ಲರೂ ನಮ್ಮ ಭಕ್ತರಾಗುತ್ತಾರೆ. ಪುತ್ರಪೌತ್ರಾದಿಗಳೆಲ್ಲರೂ ಸುಖಸಂತೋಷಗಳುಳ್ಳವರಾಗುವರು. ನಿನ್ನ ಕುಲದಲ್ಲಿ ಎಲ್ಲರಿಗೂ ಆಯುರಾರೋಗ್ಯಗಳು ಇರುತ್ತವೆ” ಎಂದು ಹೇಳಿ ಸಾಯಂದೇವನನ್ನು ಕಳುಹಿಸಿಕೊಟ್ಟರು.
ಅಲ್ಲಿಂದ ಹೊರಟ ಸಾಯಂದೇವನು, ಆ ಯವನ ರಾಜನ ಬಳಿಗೆ ಹೋದನು. ಕಾಲಾಂತಕ ಸದೃಶನಾದ ಆ ಯವನನು ಸಾಯಂದೇವನನ್ನು ನೋಡುತ್ತಲೇ ಅವನಿಗೆ ವಿಮುಖನಾಗಿ, ತನ್ನ ಅಂತರ್ಗೃಹಕ್ಕೆ ಹೊರಟು ಹೋದನು. ಭಯಗೊಂಡ ಸಾಯಂದೇವನು ಮನಸ್ಸಿನಲ್ಲಿಯೇ ಶ್ರೀಗುರುವನ್ನು ಧ್ಯಾನಿಸಿಕೊಂಡನು. ಗುರು ಕೃಪೆಯಿರುವನನ್ನು ಯವನನು ಏನುತಾನೇ ಮಾಡಬಲ್ಲನು? ಹಾವು ಕೄರವಾದರೂ ಗರುಡನನ್ನು ಭಕ್ಷಿಸಬಲ್ಲದೇ? ಐರಾವತವನ್ನು ಸಿಂಹವು ನುಂಗಬಲ್ಲದೇ? ಗುರು ಕೃಪೆಯಿರುವವನಿಗೆ ಕಲಿಯ ಭಯವೂ ಇರುವುದಿಲ್ಲ. ಸದಾ ಮನಸ್ಸಿನಲ್ಲಿ ಗುರು ಧ್ಯಾನಮಾಡುತ್ತಿರುವವನಿಗೆ ಯಾವುದೇ ಭಯವೂ ಇರುವುದಿಲ್ಲ. ಕಾಲಮೃತ್ಯುವು ಕೂಡ ಗುರುಭಕ್ತನನ್ನು ಮುಟ್ಟಲಾರದು. ಅಪಮೃತ್ಯುಭಯವೆಂಬುದು ಅವನಿಗೆ ಇರುವುದಿಲ್ಲ. ಮೃತ್ಯುವಿನ ಭಯವೇ ಇಲ್ಲದವನಿಗೆ ಯವನನ ಭಯ ಹೇಗೆ ಉಂಟಾಗುತ್ತದೆ? ಸಾಯಂದೇವನನ್ನು ಕಂಡ ಆ ಯವನನು ಕಾರಣವೇ ಇಲ್ಲದೆ ಭೀತನಾಗಿ, ಅಂತಃಪುರವನ್ನು ಸೇರಿ, ದುಃಖಿತನಾಗಿ ಗಾಢನಿದ್ರೆಯಲ್ಲಿ ಮುಳುಗಿಹೋದನು. ಎಚ್ಚರಗೊಂಡು, ಹೃದಯವೇದನೆಯಿಂದ ಪ್ರಾಣಾಂತಿಕವಾದ ಬಾಧೆಪಡುತ್ತಾ, ಸ್ವಪ್ನದಲ್ಲಿ ಕಂಡ ದೃಶ್ಯಗಳ ನೆನಪುಗಳು ಬರುತ್ತಿರಲು, “ಆ ಬ್ರಾಹ್ಮಣ ಶಸ್ತ್ರಗಳಿಂದ ನನ್ನ ಅಂಗಾಂಗಗಳನ್ನು ಕತ್ತರಿಸುತ್ತಿದ್ದಾನೆ” ಎಂದು ಹೇಳುತ್ತಾ, ಸಾಯಂದೇವನ ಬಳಿಗೆ ಓಡಿಬಂದು, ನಡುಗುತ್ತಾ, “ಸ್ವಾಮಿ, ನೀನೆ ದಿಕ್ಕು. ನಿನ್ನನ್ನು ಇಲ್ಲಿಗೆ ಯಾರು ಕರೆದರು? ತಕ್ಷಣವೇ ನೀನು ನಿನ್ನ ಮನೆಗೆ ಹಿಂತಿರುಗು” ಎಂದು ಹೇಳಿ, ಅವನಿಗೆ ವಸ್ತ್ರಾದಿಗಳನ್ನು ಅರ್ಪಿಸಿ ಕಳುಹಿಸಿಕೊಟ್ಟನು.
ಸಂತೋಷಗೊಂಡ ಸಾಯಂದೇವನು, ಹಿಂತಿರುಗಿ ಶ್ರೀಗುರುದರ್ಶನ ಕಾತುರನಾಗಿ, ಶ್ರೀಗುರುವು ಇದ್ದ ಗಂಗಾತೀರಕ್ಕೆ ಬಂದನು. ಶ್ರೀಗುರುವನ್ನು ಕಂಡು ಅವರಿಗೆ ನಮಸ್ಕರಿಸಿ, ಸ್ತೋತ್ರಾದಿಗಳಿಂದ ಅವರನ್ನು ಸ್ತುತಿಸಿ, ಅವರಿಗೆ ನಡೆದದ್ದನ್ನೆಲ್ಲಾ ತಿಳಿಸಿದನು. ಶ್ರೀಗುರುವು ಸಂತೃಪ್ತನಾಗಿ, “ನಾವು ದಕ್ಷಿಣದಿಕ್ಕಿನಲ್ಲಿ ಹೊರಟು ಮಾರ್ಗದಲ್ಲಿನ ತೀರ್ಥಗಳನ್ನು ಸಂದರ್ಶಿಸುತ್ತೇವೆ” ಎಂದು ಹೇಳಲು, ಸಾಯಂದೇವನು ವಿನಯದಿಂದ ಕೈಜೋಡಿಸಿ, “ನಾನು ನಿಮ್ಮಪಾದಸೇವಕ. ಪಾಪಹರವಾದ ನಿಮ್ಮ ಚರಣಗಳನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ. ಸಗರರನ್ನುದ್ಧರಿಸಲು ಗಂಗೆ ಬಂದಂತೆ ನೀವು ನನಗೆ ದರ್ಶನಕೊಡಲೆಂದೇ ಇಲ್ಲಿಗೆ ದಯಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಯಾರಿಗೆ ಸಂಪೂರ್ಣವಗಿ ತಿಳಿದಿದೆ? ನನ್ನನ್ನು ಬಿಟ್ಟು ಹೋಗಬೇಡಿ. ನಿಮ್ಮಜೊತೆಯಲ್ಲಿಯೇ ಬರುತ್ತೇನೆ” ಎಂದು ಅವರ ಚರಣಗಳಲ್ಲಿ ಬಿದ್ದನು. ಅವನು ವಿನಯದಿಂದ ಮಾಡಿದ ಆ ಪ್ರಾರ್ಥನೆಯನ್ನು ಕೇಳಿದ ಗುರುವು ಸಂತೋಷದಿಂದ, “ಕಾರ್ಯನಿಮಿತ್ತವಾಗಿ ದಕ್ಷಿಣದೇಶಕ್ಕೆ ಹೋಗುತ್ತಿದ್ದೇವೆ. ನಿನಗೆ ಮತ್ತೆ ಹತ್ತು ವರ್ಷಗಳ ನಂತರ ನಮ್ಮ ದರ್ಶನವಾಗುತ್ತದೆ. ಆಗ ನಿನ್ನ ಗ್ರಾಮದ ಹತ್ತಿರದಲ್ಲೇ ಇರುತ್ತೇವೆ. ಆಗ ನೀನು ನಿನ್ನ ಹೆಂಡತಿ ಮಕ್ಕಳೊಡನೆ ಬಂದು ನಮ್ಮನ್ನು ಕಾಣು. ಚಿಂತಿಸಬೇಡ. ನಿನ್ನ ದುರಿತಗಳೆಲ್ಲಾ ನಾಶವಾದವು. ಸುಖವಾಗಿರು” ಎಂದು ಅನುಗ್ರಹ ಮಾಡಿ, ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ಅಲ್ಲಿಂದ ಹೊರಟ ಶ್ರೀಗುರುವು ಶಿಷ್ಯರೊಡನೆ ವೈದ್ಯನಾಥ ಕ್ಷೇತ್ರವನ್ನು ಸೇರಿದರು. ಅಲ್ಲಿ ಆರೋಗ್ಯಭವಾನಿ ಇದ್ದಾಳೆ. ಶಿಷ್ಯರೊಡನೆ ಕ್ಷೇತ್ರ ಸಂದರ್ಶನ ಮಾಡುತ್ತಾ, ಪ್ರಸಿದ್ಧವಾದ ವೈದ್ಯನಾಥದಲ್ಲಿ ಗುರುವು ರಹಸ್ಯವಾಗಿ ನಿಂತರು” ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, “ಸ್ವಾಮಿ, ಅಲ್ಲಿ ಶ್ರೀಗುರುವು ರಹಸ್ಯವಾಗಿ ಏಕೆ ನಿಂತರು? ಶಿಷ್ಯರೆಲ್ಲರೂ ಎಲ್ಲಿದ್ದರು?” ಎಂದು ಕೇಳಲು, ಸಿದ್ಧರು ಮುಂದಿನ ಕಥೆಯನ್ನು ಹೇಳಲು ಉಪಕ್ರಮಿಸಿದರು.
ಇಲ್ಲಿಗೆ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು.
[09/01 6:37 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನೈದನೆಯ ಅಧ್ಯಾಯ||
“ಅಯ್ಯಾ, ಶಿಷ್ಯಶಿಖಾಮಣಿ, ನೀನು ಹೇಳುತ್ತಿರುವುದು ಧರ್ಮಯುಕ್ತವಾಗಿದೆ. ಗುರು ಚರಣಗಳಲ್ಲಿ ನಿನ್ನ ಮನಸ್ಸು ಧೃಢವಾಗಿ ನಿಂತಿದೆ. ಶ್ರೀಗುರುವು ರಹಸ್ಯವಾಗಿರಲು ಕಾರಣವನ್ನು ಹೇಳುತ್ತೇನೆ. ಕೇಳು. ಶ್ರೀಗುರುವಿನ ಮಹಿಮೆ ಲೋಕದಲ್ಲಿ ಪ್ರಖ್ಯಾತವಾಗಿದ್ದರಿಂದ ಬಹಳ ಜನ ದೂರದೂರಗಳಿಂದ ಅವರ ದರ್ಶನಕ್ಕಾಗಿ ಬರುತ್ತಿದ್ದರು. ಕಲಿಯುಗವಾದದ್ದರಿಂದ, ಸಾಧುಗಳು, ಸಾಧುಗಳಲ್ಲದವರು, ಧೂರ್ತರು ಮುಂತಾದ ಬಹಳ ಜನ ಶಿಷ್ಯರಾಗುತ್ತೇವೆಂದು ಅವರಲ್ಲಿಗೆ ಬರುತ್ತಿದ್ದರು. ಪರಶುರಾಮನು ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನಮಾಡಿ ತಾನು ಲವಣ ಸಮುದ್ರದ ಪಶ್ಚಿಮ ತೀರ ಸೇರಿದನು. ಅಲ್ಲಿ ತಪಸ್ಸು ಮಾಡುತ್ತಿರುವಾಗ ಅಲ್ಲಿಯೂ ಕೂಡ ಮತ್ತೆ ಕೆಲವರು ಬಂದು ಅವನನ್ನು ಯಾಚಿಸಲಾರಂಭಿಸಿದರು. ಅಷ್ಟೇ ಅಲ್ಲ ಕೆಲವರು, “ಈ ಭೂಮಿಯನ್ನೆಲ್ಲಾ ನಮಗೆ ಕೊಟ್ಟುಬಿಟ್ಟಮೇಲೆ, ನಮಗೆ ಕೊಟ್ಟ ಭೂಮಿಯಲ್ಲಿ ನೀವು ಇರುವುದು ಸಮಂಜಸವಲ್ಲ” ಎಂದೂ ಹೇಳಿದರು. ಅದರಿಂದ ಭಾರ್ಗವನು ಸಹ್ಯಪರ್ವತದ ದಕ್ಷಿಣಕ್ಕಿರುವ ಕೊಂಕಣವೆಂದು ಕರೆಯುವ ಪ್ರದೇಶವನ್ನು ಬಿಟ್ಟು, ಯಾಚಕರಿಂದ ತಪ್ಪಿಸಿಕೊಳ್ಳಲು ಸಮುದ್ರದ ಒಳಗೆ ರಹಸ್ಯವಾಗಿ ನಿಂತನು. ಅದರಂತೆಯೇ ಶ್ರೀಗುರುವು ಕೂಡಾ ಈ ಜನಗಳು ಕೇಳುವ ಅನೇಕ ವರಗಳು ಸಾಧುವಲ್ಲ ಎಂದು ಯೋಚಿಸಿ ರಹಸ್ಯವಾಗಿರಲು ನಿರ್ಧರಿಸಿದರು. ಶ್ರೀಗುರುವು ಜಗದ್ವ್ಯಾಪಕನು. ಕೇಳಿದ ವರದಾನ ಸಮರ್ಥನಾದರೂ, ಅನಿತ್ಯವಾದ ವರಗಳಿಂದ ಪ್ರಯೋಜನವಿಲ್ಲ ಎಂದು ಯೋಚಿಸಿ, ತನ್ನದೇ ಮಾಯೆಯಿಂದ ಅದೃಶ್ಯನಾಗಲು ನಿರ್ಧರಿಸಿದನು.
ಹಾಗೆ ನಿರ್ಧಾರಮಾಡಿ, ಒಂದು ದಿನ ಶ್ರೀಗುರುವು, ತನ್ನ ಶಿಷ್ಯರೆಲ್ಲರನ್ನೂ ಕರೆದು, “ನೀವೆಲ್ಲರೂ ತೀರ್ಥಯಾತ್ರೆಗಳಿಗೆ ಹೊರಡಿ. ಮತ್ತೆ ನಿಮಗೆ ಶ್ರೀಶೈಲದಲ್ಲಿ ನಮ್ಮ ದರ್ಶನವಾಗುತ್ತದೆ” ಎಂದರು. ಶಿಷ್ಯರೆಲ್ಲರೂ, ಶ್ರೀಗುರುವಿನ ಚರಣಗಳನ್ನು ಹಿಡಿದು, “ಹೇ ಕೃಪಾನಿಧಿ, ಗುರುರಾಯ, ನಮ್ಮನ್ನೇಕೆ ಹೀಗೆ ಉಪೇಕ್ಷಿಸುತ್ತಿದ್ದೀರಿ? ನಿಮ್ಮ ಪಾದ ದರ್ಶನವೇ ನಮಗೆ ಸರ್ವತೀರ್ಥ ದರ್ಶನವಲ್ಲವೇ? ನಿಮ್ಮ ಚರಣಗಳನ್ನು ಬಿಟ್ಟು ನಾವು ಇನ್ನೆಲ್ಲಿಗೆ ಹೋಗಬೇಕೋ ನಮಗೆ ತಿಳಿಯದು. ಶ್ರೀಗುರುವಿನ ಪಾದಗಳಲ್ಲಿ ಸರ್ವತೀರ್ಥಗಳೂ ಇವೆ ಎಂಬುದು ಶೃತಿವಾಕ್ಯವಲ್ಲವೇ? ಸರ್ವ ಶಾಸ್ತ್ರಗಳ ಸಿದ್ಧಾಂತವೂ ಅದೇ ಅಲ್ಲವೇ? ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುತ್ತಾರೆಯೇ? ಕಲ್ಪವೃಕ್ಷವನ್ನು ಬಿಟ್ಟು ದೂರದ ಮುಳ್ಳುಗಿಡಕ್ಕೆ ಕೈನೀಡುತ್ತಾರೆಯೇ?” ಎಂದು ಕಳಕಳಿಯಿಂದ ಕೇಳಿದರು.
ಅದಕ್ಕೆ ಶ್ರೀಗುರುವು, “ಶಿಷ್ಯರೇ, ನಾವು ಸನ್ಯಾಸಿಗಳು. ಒಂದೇಸ್ಥಳದಲ್ಲಿ ಐದು ದಿನಗಳಿಗಿಂತ ಹೆಚ್ಚುಕಾಲ ನಿಲ್ಲಬಾರದು. ಸನ್ಯಾಸಾಶ್ರಮವನ್ನು ಸ್ವೀಕರಿಸಿ ಭೂಲೋಕದಲ್ಲಿನ ತೀರ್ಥಗಳನ್ನೆಲ್ಲಾ ದರ್ಶಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಚಿತ್ತವು ಸ್ಥಿರವಾಗಿ, ಏಕಾಂತ ವಾಸವೂ ಪ್ರಶಸ್ತವಾಗುತ್ತದೆ. ನನ್ನ ಮಾತನ್ನು ಕೇಳಿ, ನಿಮ್ಮ ಆಶ್ರಮ ಧರ್ಮವನ್ನು ಪಾಲಿಸಿ. ತೀರ್ಥ ಸ್ನಾನಗಳನ್ನು ಮಾಡಿ ಶುದ್ಧರಾಗಿ, ಮತ್ತೆ ನನ್ನನ್ನು ಸೇರಿಕೊಳ್ಳಿ. ಬಹುಧಾನ್ಯ ಸಂವತ್ಸರದಲ್ಲಿ ಶ್ರೀಶೈಲವನ್ನು ಸೇರಿ ಅಲ್ಲಿ ನನ್ನ ದರ್ಶನ ಮಾಡಿಕೊಳ್ಳಿ” ಎಂದರು. ಶಿಷ್ಯರು ಧೃಢಮನಸ್ಕರಾಗಿ, ಅವರ ಆದೇಶವನ್ನು ಸ್ವೀಕರಿಸಿ, ದೈನ್ಯಭಾವದಿಂದ ಶ್ರೀಗುರುವನ್ನು, “ಸ್ವಾಮಿ, ನಿಮ್ಮ ಮಾತುಗಳೇ ನಮಗೆ ಪ್ರಮಾಣ. ಈ ಭೂತಲದಲ್ಲಿರುವ ತೀರ್ಥಗಳನ್ನು ದರ್ಶಿಸಿ ಕೃತಾರ್ಥರಾಗುತ್ತೇವೆ. ಗುರು ವಾಕ್ಯವನ್ನು ಉಲ್ಲಂಘಿಸಿದವನು ರೌರವನರಕವನ್ನು ಸೇರುತ್ತಾನೆಯಲ್ಲವೇ? ಅಂತಹವನಿಗೆ ಯಮಲೋಕವೇ ಮನೆಯಾಗುವುದು. ಹೇ ಗುರುಸಾರ್ವಭೌಮ, ಯಾವಯಾವ ತೀರ್ಥಗಳನ್ನು ನಾವು ಸಂದರ್ಶಿಸಬೇಕು ಎಂಬುದನ್ನು ಹೇಳಿ. ನೀವು ಅಪ್ಪಣೆ ಕೊಟ್ಟ ಹಾಗೆ ನಾವು ನಡೆದುಕೊಳ್ಳುತ್ತೇವೆ. ನಿಮ್ಮ ಮಾತೇ ನಮಗೆ ಸರ್ವಸಿದ್ಧಿಗಳನ್ನು ತಂದುಕೊಡುವುದು” ಎಂದು ಬೇಡಿಕೊಂಡರು. ಅವರ ಮಾತುಗಳಿಂದ ಪ್ರಸನ್ನನಾದ ಶ್ರೀಗುರುವು ಯಾವ ರೀತಿಯಲ್ಲಿ ತೀರ್ಥಯಾತ್ರೆಗಳನ್ನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.
“ಈ ಬ್ರಹ್ಮಾಂಡದಲ್ಲಿ ವಿಶೇಷವಾದ, ಪ್ರಸಿದ್ಧವಾದ ತೀರ್ಥರಾಜನು ಕಾಶಿಕ್ಷೇತ್ರವು. ಅಲ್ಲಿಗೆ ಹೋಗಿ ಶುಭಪ್ರದವಾದ, ಭಾಗೀರಥಿಯ ಸೇವೆ ಮಾಡಿ. ಭಾಗೀರಥಿ ತೀರ್ಥಯಾತ್ರೆ (ತಟಯಾತ್ರೆ) ಅರವತ್ತು ಯೋಜನಗಳ ವಿಸ್ತೀರ್ಣವಾದ ಪವಿತ್ರ ಪ್ರದೇಶ. ಅರವತ್ತು ಪಾಪಗಳು ಪರಿಹಾರವಾಗುತ್ತವೆ. ಗಂಗಾ ದ್ವಾರವು ಅದರ ಎರಡರಷ್ಟು ಫಲವನ್ನು ಕೊಡುವುದು. ಯಮುನಾ ತಟಯಾತ್ರೆ ಇಪ್ಪತ್ತು ಯೋಜನಗಳುಳ್ಳದ್ದು. ಅದರಿಂದ ಇಪ್ಪತ್ತು ಪಾಪಗಳು ಪರಿಹಾರಗೊಳ್ಳುತ್ತವೆ. ಮಹಾಗಂಗ ಎನ್ನಿಸಿಕೊಳ್ಳುವ ಸರಸ್ವತಿ, ಕುಮಾರಿಯಾಗಿ, ಭೂಮಿಯಲ್ಲಿ ಅಂತರ್ವಾಹಿನಿಯಾಗಿದ್ದಾಳೆ. ಇಪತ್ತನಾಲ್ಕು ಯೋಜನಗಳಿಂದ ಇಪ್ಪತ್ತನಾಲ್ಕು ಪಾಪಗಳನ್ನು ನಾಶಮಾಡಬಲ್ಲಳು. ತೀರ್ಥಕ್ಷೇತ್ರಗಳು ಎಷ್ಟು ಯೋಜನಗಳೋ ಅಷ್ಟು ಪಾಪಗಳು ಪರಿಹರಿಸಲ್ಪಡುತ್ತವೆ. ಪಿತೃತ್ವ, ಯಜ್ಞಫಲ, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ.
ವರುಣ, ಕುಶಾವರ್ತ, ಶತದ್ರು, ವಿಪಾಶಕ, ಶರಾವತಿ, ವಿತಸ್ತ, ಅಸಿಕ್ನಿ, ಮರುಧ್ವದ, ಮಧುಮತಿ, ಪಯಸ್ಥಿತ, ಘೃತವತಿ ಎನ್ನುವ ನದೀತೀರಗಳ ಯಾತ್ರೆಯು ಶುಭಪ್ರದವು. ಭೂಮಂಡಲದಲ್ಲಿ ದೇವನದಿ ಎಂದು ಪ್ರಖ್ಯಾತವಾದ ನದಿತಟಯಾತ್ರೆ ಹದಿನೈದು ಯೋಜನಗಳಷ್ಟು ವಿಸ್ತಾರವಾಗಿದೆ. ಇದು ಪಂಚದಶ ಪಾಪಗಳನ್ನು ಹೋಗಲಾಡಿಸುತ್ತದೆ. ಚಂದ್ರಭಾಗ, ರೇವತಿ, ಸರಯು, ಗೋಮತಿ, ವೇದಿಕ, ಕೌಶಿಕ, ನಿತ್ಯಜಲ, ಮಂದಾಕಿನಿ, ಸಹಸ್ರವಕ್ತ್ರ, ಪೂರ್ಣ, ಬಾಹುದ ಎನ್ನುವ ನದಿಗಳು ಹದಿನಾರು ಯೋಜನಗಳ ವಿಸ್ತಾರವುಳ್ಳದ್ದು. ಅವುಗಳ ಸಂಗಮ ಸ್ಥಾನದಲ್ಲಿ ಸ್ನಾನವು ಬಹು ಪುಣ್ಯ ಫಲವು. ನದಿ ಸಂಗಮದಲ್ಲಿ ಮಾಡಿದ ಸ್ನಾನಕ್ಕೆ ತ್ರಿವೇಣಿ ಸ್ನಾನಫಲ ಉಂಟಾಗುತ್ತದೆ. ವೈರೋಚಿನಿ, ಉತ್ತಮ ತೀರ್ಥವಾದ ಪುಷ್ಕರ, ಫಲ್ಗುನದಿ, ಗಯಾ ಕ್ಷೇತ್ರಗಳು ಬಹು ಫಲದಾಯಕವಾದದ್ದು. ಬದರಿನಾರಾಯಣ, ಅಲಕನಂದ, ಅತಿ ಪುಣ್ಯ ಪ್ರದವಾದವು. ಕುರುಕ್ಷೇತ್ರ, ಶ್ರೀಶೈಲ, ಅನಂತ, ಸೇತು ಬಂಧದಲ್ಲಿ ರಾಮೇಶ್ವರ, ಶ್ರೀರಂಗ, ಪದ್ಮನಾಭ, ನೈಮಿಶಾರಣ್ಯ, ಮನೋಹರವಾದ ಪುರುಷೋತ್ತಮ ತೀರ್ಥಗಳು. ಸೇವೆ ಮಾಡ ತಕ್ಕಂಥ ಕ್ಷೇತ್ರಗಳು. ಮಹಾಲಯತೀರ್ಥ ಪಿತೃಗಳಿಗೆ ತೃಪ್ತಿದಾಯಕವು. ಅಲ್ಲಿ ಸ್ನಾನ ಮಾಡುವುದರಿಂದ ಹನ್ನೆರಡು ತಲೆಮಾರಿನವರು ಸ್ವರ್ಗವನ್ನು ಸೇರಿಕೊಳ್ಳುತ್ತಾರೆ. ಕೇದಾರ, ಕೋಟಿರುದ್ರ, ನರ್ಮದ ಮಹಾಫಲದಾಯಕವಾದವು. ಮಾತೃಕೇಶ, ಕುಬ್ಜತೀರ್ಥ, ಕೋಕಾಮುಖಿ, ಪ್ರಸಾದತೀರ್ಥ, ವಿಜಯತೀರ್ಥ, ಚಂದ್ರತೀರ್ಥ, ಗೋಕರ್ಣ, ಶಂಖಕರ್ಣ, ಈ ಸ್ಥಳಗಳಲ್ಲಿ ಮಾಡಿದ ಸ್ನಾನವು ಮನೋಹರವು.
ಅಯೋಧ್ಯ, ಮಧುರ, ಮಾಯ, ದ್ವಾರವತಿ, ಕಂಚಿ, ಪುರಿ, ಸಾಲಗ್ರಾಮ, ಶಬಲ ಗ್ರಾಮಗಳು ಮುಕ್ತಿದಾಯಕಗಳು. ಗೋದಾವರಿ ತೀರಯಾತ್ರೆ ಆರು ಯೋಜನಗಳ ವಿಸ್ತೀರ್ಣವುಳ್ಳದ್ದು. ಅದು ಅನಂತ ಫಲವನ್ನು ಕೊಡುವಂತಹುದು. ವಾಜಪೇಯ ಯಾಗಪಲವನ್ನು ಕೊಡುವಂತಹುದು. ಗೋದಾವರಿ ತಟಯಾತ್ರೆಯನ್ನು ಮೂರುಸಲ ಮಾಡಿದವರು ಸರ್ವಪಾಪಗಳಿಂದ ಮುಕ್ತಿಪಡೆದು ಜ್ಞಾನಿಗಳಾಗುತ್ತಾರೆ. ಭೀಮೇಶ್ವರ, ಪಂಜರ ಎನ್ನುವ ಎರಡು ಸಂಗಮ ಸ್ಥಾನಗಳು ಪ್ರಯಾಗಕ್ಕೆ ಸಮನಾದವು. ಕುಶ ತರ್ಪಣ ತೀರ್ಥ ದ್ವಾದಶ ಯೋಜನ ಪರಿಮಿತವಾದದ್ದೆಂದು ಪ್ರಸಿದ್ಧಿ. ಇದು ಗೋದಾವರಿ ಸಮುದ್ರ ಸಂಗಮ ಸ್ಥಾನ. ಮುವ್ವತ್ತಾರು ಪಾಪಗಳ ಪರಿಹಾರಕವು. ಪೂರ್ಣಾನದಿ ತಟಯಾತ್ರೆ ಮುವ್ವತ್ತು ಯೋಜನಗಳ ಪ್ರಮಾಣವಿರುವುದು. ಮುವ್ವತ್ತು ಪಾಪಗಳನ್ನು ಹೊರಗಟ್ಟಿ ಪುಣ್ಯವನ್ನು ನೀಡುತ್ತದೆ. ಕೃಷ್ಣವೇಣಿ ಹದಿನೈದು ಪಾಪಗಳನ್ನು ನಾಶಮಾಡುತ್ತದೆ. ತುಂಗಭದ್ರಾ ಯಾತ್ರೆ ಇಪ್ಪತ್ತು ಪಾಪಗಳನ್ನು ನಾಶಮಾಡುತ್ತದೆ. ಪವಿತ್ರವಾದ ಪಂಪಾ ಸರಸ್ಸಿನ ಮಹಿಮೆ ಅನಂತವಾದದ್ದು. ಹಾಗೆಯೇ ಎರಡೂ ಹರಿಹರ ಕ್ಷೇತ್ರಗಳು ಸರ್ವಪಾಪ ಪರಿಹಾರಕಗಳು. ಭೀಮಾ ತಟಯಾತ್ರೆ ಮಾಡಿದವರಿಗೆ ಹತ್ತು ಪಾಪಗಳು ನಿವಾರಣೆಯಾಗಿ, ಪುಣ್ಯ ಲಭ್ಯವಾಗುತ್ತದೆ. ಪಾಂಡುರಂಗ, ಮಾತುಲಿಂಗ, ಗಂಧರ್ವಪುರಗಳಲ್ಲಿ ಅನೇಕ ತೀರ್ಥಗಳಿವೆ. ಅಲ್ಲಿ ದೇವತೆಗಳು ಜನರ ಕೋರಿಕೆಗಳನ್ನು ತೀರಿಸುತ್ತಾರೆ. ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಕೋಟಿತೀರ್ಥವಿದೆ. ಅಲ್ಲಿ ಕಲ್ಪವೃಕ್ಷಕ್ಕ್ಕೆ ಸಮಾನವಾದ ಅಶ್ವತ್ಥ ವೃಕ್ಷವಿದೆ. ಅದು ಸರ್ವಕಾಮದಾಯಕ. ಆ ಅಶ್ವತ್ಥದ ಎದುರಿಗೆ ನೃಸಿಂಹ ತೀರ್ಥವಿದೆ. ಅದಕ್ಕೆ ಉತ್ತರದಲ್ಲಿನ ಪ್ರದೇಶ ಕಾಶಿ-ವಾರಣಾಸಿಗಳಿಗೆ ಸಮಾನವಾದ ಪಾಪಹರವಾದ ಪ್ರದೇಶ. ಅದರ ಪೂರ್ವದಲ್ಲಿ ಪರಮ ಪಾವನವಾದ ಪಾಪವಿನಾಶ ತೀರ್ಥವಿದೆ. ಅದೂ ಸರ್ವಪಾಪಹಾರಿಣಿ.
ಚಕ್ರತೀರ್ಥದಲ್ಲಿ ದೇವ ನಾಯಕನಾದ ಕೇಶವನಿದ್ದಾನೆ. ಆ ನಂತರ ಕೋಟಿತೀರ್ಥ ಮನ್ಮಥತೀರ್ಥಗಳಿವೆ. ಕಲ್ಲೇಶ್ವರನಿರುವ ಸ್ಥಳ ಸಾಕ್ಷಾತ್ತು ಗೋಕರ್ಣವೇ ಎನ್ನುತ್ತಾರೆ. ಗಂಧರ್ವಪುರ ಸಿದ್ಧಭೂಮಿ. ಅದಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಅಲ್ಲಿ ಅನುಷ್ಠಾನ ಮಾಡಿದವರಿಗೆ ಬಹು ಶೀಘ್ರವಾಗಿ ಇಷ್ಟ ಸಿದ್ಧಿಯಾಗುವುದು. ಕಲ್ಪವೃಕ್ಷವಿರುವೆಡೆಯಲ್ಲಿ ಏನುತಾನೇ ಸಿದ್ಧಿಯಾಗುವುದಿಲ್ಲ? ಕಾಕಿಣಿ ಸಂಗಮವು ಅತ್ಯಂತ ಪುಣ್ಯಫಲದಾಯಕವು. ಅದು ಪ್ರಯಾಗ ಸಂಗಮಕ್ಕೆ ಸಮಾನವಾದುದು. ಹಾಗೆಯೇ ಭೀಮಾನದಿಯೂ ಮಹಾಫಲದಾಯಕವಾದದ್ದು. ತುಂಗಭದ್ರೆಯು ವರದಾಯಿನಿ. ಈ ನದಿಯ ಸಂಗಮಸ್ಥಳವೂ ಬಹು ಫಲಗಳನ್ನು ನೀಡುವಂತಹುದು. ಮಲಾಪಹಾ ಸಂಗಮವು ನೂರುಜನ್ಮಗಳ ಪಾಪವನ್ನು ನಾಶಮಾಡಬಲ್ಲದು. ನಿವೃತ್ತಿ ಸಂಗಮವು ಬ್ರಹ್ಮಹತ್ಯೆಯಂತಹ ಪಾಪವನ್ನು ನಿವಾರಿಸುವಂತಹುದು. ಶಿಷ್ಯರೇ, ಪ್ರೀತಿ, ಭಕ್ತಿ, ಶ್ರದ್ಧೆಗಳಿಂದ ಈ ತೀರ್ಥಗಳೆಲ್ಲವನ್ನೂ ದರ್ಶಿಸಿ. ಪಾಪಗಳೆಲ್ಲವೂ ನಾಶವಾಗುವುವು.
ಬೃಹಸ್ಪತಿ ಸಿಂಹರಾಶಿಯಲ್ಲಿದ್ದಾಗ ಗಂಗೆ ಗೋದಾವರಿಯಲ್ಲಿ ಒಂದುವರ್ಷಕಾಲ ಇರುತ್ತಾಳೆ. ಗುರುವು ಕನ್ಯಾರಾಶಿಯಲ್ಲಿರುವಾಗ ತುಂಗಭದ್ರೆಯಲ್ಲಿ ಗಂಗೆಯಿರುತ್ತಾಳೆ. ಬೃಹಸ್ಪತಿಯು ಕರ್ಕಾಟಕದಲ್ಲಿರುವಾಗ ಗಂಗೆ ಮಲಾಪಹಾ ನದಿಯಲ್ಲಿರುತ್ತಾಳೆ. ಆ ಸಮಯದಲ್ಲಿ ಮಲಾಪಹಾ ನದಿಯಲ್ಲಿ ಸ್ನಾನಮಾಡಿದವರಿಗೆ ಬ್ರಹ್ಮಹತ್ಯಾದಿ ಪಾಪಗಳೂ ತೊಲಗಿಹೋಗುತ್ತವೆ. ಭೀಮಾ ಕೃಷ್ಣಾ ಸಂಗಮದಲ್ಲಿ ಸ್ನಾನಮಾಡಿದವನು ಶುದ್ಧನಾಗಿ ಅರವತ್ತು ಜನ್ಮಗಳಲ್ಲಿ ಸದ್ಬ್ರಾಹ್ಮಣ ವಂಶದಲ್ಲಿಯೇ ಹುಟ್ಟುತ್ತಾನೆ. ತುಂಗಭದ್ರಾ ಸಂಗಮವು ಅದಕ್ಕೆ ಮೂರರಷ್ಟು ಪುಣ್ಯವನ್ನು ಕೊಡುವುದು. ನಿವೃತ್ತಿ ಸಂಗಮವು ನಾಲ್ಕರಷ್ಟುಫಲ ನೀಡುವುದು. ಪಾತಾಳಗಂಗ ಸ್ನಾನ, ಮಲ್ಲಿಕಾರ್ಜುನ ದರ್ಶನ ಆರರಷ್ಟು ಪುಣ್ಯ ನೀಡಿ ಪುನರ್ಜನ್ಮವಿಲ್ಲದಂತೆ ಮಾಡುವುದು. ಯುಗಾಲಯವು ಎರಡರಷ್ಟು ಪುಣ್ಯದಾಯಕವು. ಕಾವೇರಿ ಸಾಗರ ಸಂಗಮ, ಕೃಷ್ಣಾ ಸಮುದ್ರ ಸಂಗಮ ಅದರ ಹದಿನೈದರಷ್ಟು ಪುಣ್ಯಫಲವನ್ನು ಕೊಡುವುದು.
ಮಹಾನದಿ, ತಾಮ್ರಪರ್ಣಿಗಳಲ್ಲಿ ಸ್ನಾನಮಾಡುವವರಿಗೆ ಮಹಾಪುಣ್ಯವು ಲಭಿಸುತ್ತದೆ. ಕೃತಮಾಲಾ ನದಿ ಸರ್ವಪಾಪ ಪರಿಹಾರಕವಾದದ್ದು. ಪಯಸ್ವಿನಿ ನದಿ ಭವನಾಶಿನಿ. ಸಮುದ್ರಸ್ಕಂದ ದರ್ಶನವು ಸಕಲ ಪಾಪನಾಶಕವು. ಶೇಷಾದ್ರಿ, ಶ್ರೀರಂಗನಾಥ, ಪದ್ಮನಾಭ, ಶ್ರೀಮಂತನಾದ ಅನಂತ, ಮಲ್ಲಿಕಾರ್ಜುನ ಪೂಜ್ಯರು. ಕುಂಭಕೋಣವು, ಸಮಸ್ತ ತೀರ್ಥಗಳಿಗೂ ಸಮಾನವಾದ ಪುಣ್ಯಪ್ರದಾಯಿನಿ. ಕನ್ಯಾಕುಮಾರಿಯಲ್ಲಿ, ಮತ್ಸ್ಯತೀರ್ಥಗಳಲ್ಲಿ ಮಾಡಿದ ಸ್ನಾನ ಭವತಾರಿಣಿ. ಪಕ್ಷಿತೀರ್ಥ, ರಾಮೇಶ್ವರ, ಧನುಷ್ಕೋಟಿ, ರಂಗನಾಥನ ಸಮೀಪದಲ್ಲಿನ ಕಾವೇರಿತೀರ್ಥ, ಉತ್ತಮವಾದ ಪುರುಷೋತ್ತಮ ತೀರ್ಥ, ಚಂದ್ರಕುಂಡ, ಮಹಾಲಕ್ಷ್ಮೀಪುರಗಳು ಹೆಸರಾದವು. ಕರವೀರಪುರವು ದಕ್ಷಿಣ ಕಾಶಿಯೇ! ಕೃಷ್ಣಾನದಿ ಉದ್ಭವವಾದ ಪ್ರದೇಶದಲ್ಲಿರುವ ಮಹಾಬಲೇಶ್ವರನು ಶ್ರೇಷ್ಠನಾದವನು. ಕೃಷ್ಣಾತೀರದಲ್ಲಿ ಪವಿತ್ರವಾದ ರಾಮೇಶ್ವರ ಸ್ನಾನ ಪುಣ್ಯಪ್ರದವು. ನೃಸಿಂಹ ದೇವನಿರುವ ಕೋಲ್ಹಾ ಗ್ರಾಮವು ಮಹಾ ಪುಣ್ಯಪ್ರದವಾದದ್ದು ಆ ನೃಸಿಂಹನು ಸದಾಶಿವನೇ! ಪ್ರತ್ಯಕ್ಷವಾಗಿ ಕಾಣಬರುವ ಈಶ್ವರನು. ಕೃಷ್ಣಾತೀರದಲ್ಲಿ ಭಿಲ್ಲವಟಿಯಲ್ಲಿ ಭುವನೇಶ್ವರಿ ಎನ್ನುವ ಶಕ್ತಿರೂಪಿಣಿ ಇದ್ದಾಳೆ. ಅಲ್ಲಿ ತಪವನ್ನಾಚರಿಸಿದವರು ಈಶ್ವರ ಕಳೆಯನ್ನು ಹೊಂದುತ್ತಾರೆ. ಅದಕ್ಕೆ ಮುಂದೆ ವರುಣಾ ಸಂಗಮವಿದೆ. ಅದು ಪಾಪಘ್ನವಾದದ್ದು. ಅಲ್ಲಿ ಮಾಡಿದ ಸ್ನಾನ ಮಾತ್ರದಿಂದಲೇ ಮಾರ್ಕಂಡೇಯ ಸಮಾನತ್ವ ಉಂಟಾಗುತ್ತದೆ. ಆದ್ದರಿಂದ ಆ ಪ್ರದೇಶವನ್ನು ತಪ್ಪದೇ ದರ್ಶನ ಮಾಡಿ.
ಕೃಷ್ಣಾತೀರದಲ್ಲಿ ಅತ್ಯುತ್ತಮವಾದ ಋಷ್ಯಾಶ್ರಮ ಒಂದಿದೆ. ಅಲ್ಲಿ ಕೃಷ್ಣಾನದಿಯಲ್ಲಿ ಸ್ನಾನ ಮಾಡುವವರು ಜ್ಞಾನಿಗಳಾಗುವುದರಲ್ಲಿ ಎಂತಹ ಸಂಶಯವೂ ಇಲ್ಲ. ಅಮರಪುರ ಕೃಷ್ಣವೇಣಿ ನದಿಗಳ ಸಂಗಮ ಸ್ಥಳ. ಪಂಚನದೀ ಸಂಗಮ ಸ್ಥಳವೆಂದು ಪ್ರಸಿದ್ಧಿಯಾಗಿದೆ. ಮಾಘ ಮಾಸದಲ್ಲಿ ಅಲ್ಲಿ ಸ್ನಾನ ಮಾಡಿದರೆ ಪ್ರಯಾಗದಲ್ಲಿ ಮಾಡಿದ ಸ್ನಾನಕ್ಕೂ ಮಿಂಚಿದ ಪುಣ್ಯ ಲಭಿಸುತ್ತದೆ. ಅದು ನಿತ್ಯ ಸತ್ಯ! ಅಲ್ಲಿ ಅನೇಕ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದರು. ಆ ಕ್ಷೇತ್ರಕ್ಕೆ ಸಮನಾದದ್ದು ಬೇರೊಂದಿಲ್ಲ. ಅಲ್ಲಿ ಸರ್ವ ತೀರ್ಥಗಳೂ ಇವೆ ಎಂದು ಪ್ರಖ್ಯಾತಿ. ಅಲ್ಲಿ ಮೂರು ದಿನಗಳು ಅನುಷ್ಠಾನ ಮಾಡಿದವನು ಸರ್ವಾಭೀಷ್ಟಗಳನ್ನೂ ಸಿದ್ಧಿಸಿಕೊಂಡು, ಶೀಘ್ರವಾಗಿ ಪರಮಾರ್ಥವನ್ನು ಪಡೆಯುತ್ತಾನೆ. ನಂತರ ಇರುವ ಯುಗಾಲಯವೆಂಬ ತೀರ್ಥವು ದರ್ಶನ ಮಾತ್ರದಿಂದಲೇ ಮುಕ್ತಿಯನ್ನು ಕೊಡುವುದು. ಅದಾದ ಮೇಲೆ ಶೂರ್ಪಾಲಯ ತೀರ್ಥ. ಇದು ಪರಮ ಪಾವನವಾದದ್ದು. ವಿಶ್ವಾಮಿತ್ರನ ಆಶ್ರಮಕ್ಕೆ ಸಮಾನವಾದ ಮಲಾಪಹಾರ ತೀರ್ಥವು. ಕೃಷ್ಣಾ ಸಂಗಮದಿಂದಾಗಿ ಸರ್ವದೋಷ ಪರಿಹಾರಿಣಿ. ಕಪಿಲಮಹರ್ಷಿ ಸಾಕ್ಷಾದ್ವಿಷ್ಣುವೇ! ಆ ಮುನಿಯ ಆಶ್ರಮವು ಮಹಾತೀರ್ಥವು. ಅಲ್ಲಿ ಕೃಷ್ಣಾ ನದಿ ಉತ್ತರ ವಾಹಿನಿಯಾಗಿದೆ. ಆ ಮಹಾತೀರ್ಥದಲ್ಲಿ ಒಂದುಸಲ ಮಾಡಿದ ಜಪವು ಕೋಟಿ ಜಪದ ಫಲವನ್ನು ನೀಡುತ್ತದೆ. ಅಲ್ಲಿಂದ ಮುಂದೆ ಕೇದಾರೇಶ್ವರ ತೀರ್ಥವಿದೆ.
ನಂತರ ಪೀಠಾಪುರವಿದೆ. ಅದು ಸನಾತನವಾದ ದತ್ತಾತ್ತ್ರೇಯಸ್ವಾಮಿಯ ಶಾಶ್ವತ ನೆಲೆ. ಆ ನಂತರ ಪ್ರಸಿದ್ಧವಾದ ಮಹಾತೀರ್ಥ ಮಣಿಗಿರಿ. ಆಲಿ ಸಪ್ತರ್ಷಿಗಳು ನಿರ್ಮಲರಾಗಿ ತಪವನ್ನಾಚರಿಸಿ ಧನ್ಯರಾದರು. ಮಹಾ ಪುಣ್ಯದಾಯಕವಾದ ಋಷಭಾದ್ರಿಯೂ ಕಲ್ಯಾಣನಗರವೂ ಇವೆ. ಕಲ್ಯಾಣ ನಗರದಲ್ಲಿರುವ ತೀರ್ಥವನ್ನು ಸೇವಿಸುವವನು ಪುನರ್ಜನ್ಮ ರಹಿತನಾಗುತ್ತಾನೆ. ಅಹೋಬಲ ದರ್ಶನದಿಂದ ಮಾನವರು ಅರವತ್ತು ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು ಪಡೆಯುತ್ತಾರೆ. ಶ್ರೀರಂಗ ದರ್ಶನದಿಂದಲೂ ಸಹ ಮಾನವರಿಗೆ ಪುನರ್ಜನ್ಮವಿರುವುದಿಲ್ಲ.
ಶಿಷ್ಯರೇ, ನಾನು ಹೇಳಿದ ಸರ್ವ ತೀರ್ಥಗಳನ್ನೂ ವಿಧ್ಯುಕ್ತವಾಗಿ ಸೇವಿಸಿರಿ. ನದಿ ರಜಸ್ವಲೆಯಾಗಿರುವಾಗ ಅದರಲ್ಲಿ ಸ್ನಾನ ಮಾಡುವುದು ದೋಷಕರವು. ರವಿ ಕರ್ಕಾಟಕ ಸಂಕ್ರಾಂತಿಯಿಂದ ಎರಡು ತಿಂಗಳು ನದಿಸ್ನಾನಗಳನ್ನು ಬಿಟ್ಟುಬಿಡಬೇಕು. ನದೀ ತೀರದಲ್ಲಿ ವಾಸಿಸುವವರಿಗೆ ಮಾತ್ರ ಈ ದೋಷವಿರುವುದಿಲ್ಲ ಎಂಬುದು ವಿಶೇಷ. ಮಳೆಗಾಲದಲ್ಲಿ ಸರ್ವನದಿಗಳೂ ರಜಸ್ವಲೆಯರಾಗೇ ಇರುತ್ತವೆ. ರಜೋದೋಷವು ಉಂಟಾದಾಗ ಮೂರುದಿನ ನದಿಗಳಲ್ಲಿ ಸ್ನಾನಾದಿಗಳು ಮಾಡುವುದನ್ನು ಬಿಟ್ಟುಬಿಡಬೇಕು. ಭಾಗೀರಥಿ, ಚಂದ್ರಭಾಗ, ಸಿಂಧು, ಗೌತಮಿ, ಸರಯು, ನರ್ಮದ, ನದಿಗಳಿಗೆ ರಜೋದೋಷವು ಬಂದಾಗಲೂ ಮೂರುದಿನ ಸ್ನಾನಾದಿಗಳು ನಿಷಿದ್ಧ. ಗ್ರೀಷ್ಮ ಋತುವು ಮುಗಿದನಂತರ ಸರ್ವ ನದಿಗಳೂ ಹತ್ತು ದಿನಗಳ ಕಾಲ ರಜಸ್ವಲೆಯಾಗಿರುತ್ತವೆ. ವಾಪಿ ಕೂಪ ತಟಾಕಾದಿಗಳು ಸರ್ವ ಕಾಲದಲ್ಲೂ ರಜಸ್ವಲ್ವೆಗಳೇ! ಹೊಸನೀರು ಬಂದಾಗ ನದಿಗಳು ರಜಸ್ವಲೆಯರೆಂದು ತಿಳಿಯಬೇಕು. ಆಗ ಸ್ನಾನಾದಿಗಳನ್ನು ಮಾಡುವುದು, ಮುಂಚೆಯೇ ಹೇಳಿದಂತೆ, ಮಹಾದೋಷ. ಆದ್ದರಿಂದ ಆ ಕಾಲದಲ್ಲಿ ನದಿಗಳನ್ನು ಬಿಡಬೇಕು. ಅಂತಹ ಸಮಯದಲ್ಲಿ ತೀರ್ಥ ದರ್ಶನವಾದರೆ, ವಿಧ್ಯುಕ್ತವಾಗಿ ಸ್ನಾನ ಕ್ಷೌರ ಉಪವಾಸಗಳನ್ನು ಆಚರಿಸಬೇಕು” ಎಂದು ಶ್ರೀಗುರುವು ಅವರಿಗೆ ವಿವರಿಸಿ, ಹೊರಡಲು ಅಪ್ಪಣೆ ಕೊಟ್ಟರು. ಶಿಷ್ಯರೆಲ್ಲರೂ, ಗುರುವಚನಗಳನ್ನು ಮನಸ್ಸಿನಲ್ಲಿಟ್ಟು, ಅವರಿಗೆ ನಮಸ್ಕರಿಸಿ, ತೀರ್ಥಯಾತ್ರೆಗಳಿಗೆ ಹೊರಟರು. ಶ್ರೀಗುರುವು ಮಾತ್ರ ಅಲ್ಲಿಯೇ ರಹಸ್ಯವಾಗಿ ನಿಂತರು. ಶ್ರೀಗುರುವಿನ ಸೇವೆಗೆಂದು ನಾನು ಅವರ ಜೊತೆಯಲ್ಲಿಯೇ ಇದ್ದೆ” ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು.
ಇಲ್ಲಿಗೆ ಹದಿನೈದನೆಯ ಅಧ್ಯಾಯ ಮುಗಿಯಿತು.
[09/01 8:54 PM] S. Bhargav: ||ಶ್ರೀ ಗುರು ಚರಿತ್ರೆ – ಹದಿನಾರನೆಯ ಅಧ್ಯಾಯ||
ಶಿಷ್ಯನಾದ ನಾಮಧಾರಕನು ವಿನಯದಿಂದ, “ಸ್ವಾಮಿ, ಆ ನಂತರದ ಗುರುಚರಿತ್ರೆಯನ್ನು ಹೇಳಿ. ಯಾವ ಯಾವ ಶಿಷ್ಯರು ತೀರ್ಥಯಾತ್ರೆಗಳಿಗೆ ಹೊರಟರು? ಯಾರು ಯಾರು ಅವರ ಸೇವೆಯಲ್ಲಿ ನಿಂತರು? ಎಲ್ಲವನ್ನೂ ತಿಳಿಸಿ” ಎಂದು ಕೇಳಲು, ಸಿದ್ಧಮುನಿ ಹೇಳಿದರು. “ಅಯ್ಯಾ, ನಾಮಧಾರಕ, ಬಹಳ ಕಾಲದಿಂದ ಗುರುಚರಿತ್ರೆಯ ಬಗ್ಗೆ ಮಾತನಾಡದೆ ನನ್ನ ಮನಸ್ಸು ಜಡವಾಗಿತ್ತು. ನೀನು ಅದರ ಬಗ್ಗೆ ಕೇಳಿದ್ದರಿಂದ ನನ್ನ ಮನಸ್ಸು ಈಗ ಉಲ್ಹಾಸಗೊಂಡಿದೆ. ನೀನು ನನ್ನ ಪ್ರಾಣಸಖನಾದೆ. ನಿನ್ನನ್ನು ಕಲೆತಾಗಿನಿಂದಲೂ ಗುರುಚರಿತ್ರೆಯು ನನ್ನ ನೆನಪಿಗೆ ಬರುತ್ತಿದೆ. ಇತರ ಯೋಚನೆಗಳಲ್ಲಿ ಮುಳುಗಿ ಹೋಗಿದ್ದ ನಾನು, ಈಗ ನಿನ್ನಿಂದಾಗಿ ಗುರುಚರಿತ್ರೆ ಎಂಬುವ ಅಮೃತವನ್ನು ಕುಡಿಯುವುದರಲ್ಲಿ ಮಗ್ನನಾಗಿ, ಮನಸ್ಸು ಶಾಂತಿಗೊಂಡಿದೆ. ನೀನು ನನಗೆ ಇಂತಹ ಉಪಕಾರ ಮಾಡಿ ಸಂತೋಷವನ್ನು ತಂದುಕೊಟ್ಟೆ. ನಿನ್ನ ಕುಲ ಉದ್ಧಾರವಾಗುತ್ತದೆ. ನೀನು ಪುತ್ರ ಪೌತ್ರರಿಂದ ಕೂಡಿ ಆನಂದಪಡುವೆ. ನಿನ್ನ ಮನೆಯಲ್ಲಿ ದೈನ್ಯವೆಂಬುದು ಇರುವುದಿಲ್ಲ. ಗುರುವಿನ ಅನುಗ್ರಹದಿಂದ ನೀನು ಈ ಲೋಕದಲ್ಲಿ ಮಾನ್ಯನಾಗುತ್ತೀಯೆ. ಸಂಶಯಪಡಬೇಡ. ನನ್ನನ್ನು ನಂಬು. ನಿನಗೆ ಸರ್ವ ಸಂಪದಗಳೂ ಸಿದ್ಧಿಸುತ್ತವೆ. ಗುರುಚರಿತ್ರೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.
ಶ್ರೀಗುರುವು ವೈದ್ಯೇಶ್ವರ ಸನ್ನಿಧಿಯಲ್ಲಿ ರಹಸ್ಯವಾಗಿದ್ದರು. ಶಿಷ್ಯರೆಲ್ಲರೂ ಗುರುವಿನೆ ಆಜ್ಞೆಯಂತೆ ತೀರ್ಥಾಟನೆಗೆಂದು ಹೊರಟು ಹೋಗಿದ್ದರು. ನಾನು ಗುರುದೇವರ ಸೇವೆಗೆಂದು ಅವರ ಜೊತೆಯಲ್ಲಿ ಇದ್ದೆ. ಒಂದು ವರ್ಷಕಾಲ ಶ್ರೀಗುರುವು ವೈದ್ಯನಾಥದಲ್ಲಿ ರಹಸ್ಯವಾಗಿದ್ದರು. ಅಲ್ಲಿ ಆರೋಗ್ಯಭವಾನಿ ಮಾತೆ ಇದ್ದಾಳೆ. ಅದೊಂದು ಮನೋಹರವಾದ ಸ್ಥಳ. ಅವರು ಅಲ್ಲಿದ್ದಾಗ ಒಬ್ಬ ಬ್ರಾಹ್ಮಣ ಬಂದು ಸದ್ಗುರುವಿಗೆ ನಮಸ್ಕಾರಮಾಡಿ, “ಅಜ್ಞಾನವೆನ್ನುವ ಕತ್ತಲೆಯಲ್ಲಿ ಬಿದ್ದಿರುವ ನನ್ನನ್ನು ಉದ್ಧರಿಸಿ. ಬಹಳ ಕಾಲ ತಪಸ್ಸು ಮಾಡಿದರೂ ನನ್ನ ಮನಸ್ಸು ಇನ್ನೂ ಸ್ಥಿರವಾಗಿಲ್ಲ. ಸನ್ಮಾರ್ಗವು ಯಾವುದೆಂದು ತಿಳಿಯುತ್ತಿಲ್ಲ. ಜ್ಞಾನವಿಲ್ಲದ ತಪಸ್ಸು ವ್ಯರ್ಥವಲ್ಲವೇ? ಈಗ ನಿಮ್ಮ ದರ್ಶನ ಮಾತ್ರದಿಂದಲೇ ನನ್ನ ಮನಸ್ಸು ಶಾಂತಗೊಂಡಿದೆ. ಬಹಳಕಾಲ ಗುರುಸೇವೆ ಮಾಡಲಿಲ್ಲವೆಂದೋ ಅಥವಾ ಇನ್ನಾವುದಾದರೂ ಕಾರಣಕ್ಕಾಗಿಯೋ ನನ್ನ ಮನಸ್ಸು ಸ್ಥಿರವಾಗುತ್ತಿಲ್ಲ. ನೀವೇ ಲೋಕೋದ್ಧಾರಕರು. ನನಗೆ ಉಪದೇಶಕೊಟ್ಟು ಜ್ಞಾನೋದಯವಾಗುವಂತೆ ಮಾಡಿ” ಎಂದು ಪ್ರಾರ್ಥಿಸಿಕೊಂಡನು. ಅವನ ಮಾತು ಕೇಳಿ ಗುರುವು ಅವನನ್ನು, “ಅಯ್ಯಾ, ಗುರುವಿಲ್ಲದೆ ನೀನು ಹೇಗೆ ತಪಸ್ಸು ಮಾಡಿದೆ?” ಎಂದು ಕೇಳಿದರು.
ಅದಕ್ಕೆ ಆ ಬ್ರಾಹ್ಮಣ, ಕಣ್ಣೀರು ಸುರಿಸುತ್ತಾ, “ಸ್ವಾಮಿ, ಗುರುನಾಥ, ನನಗೆ ಗುರುವೊಬ್ಬರಿದ್ದರು. ಆತ ಶೀಘ್ರಕೋಪಿ. ಬಹಳ ನಿಷ್ಠೂರವಾದ ಮಾತುಗಳನ್ನಾಡುತ್ತಾ, ನನ್ನಾನ್ನು ದುಷ್ಕರವಾದ ಸೇವೆಯಲ್ಲಿ ನಿಯಮಿಸಿ ಬಹಳವಾಗಿ ಪೀಡಿಸುತ್ತಿದ್ದರು. ವೇದ, ಶಾಸ್ತ್ರ, ತರ್ಕ, ವ್ಯಾಕರಣಗಳೇನನ್ನೂ ಬೋಧಿಸಲಿಲ್ಲ. ಬರಿಯ ಸೇವೆ ಮಾಡಿಸುತ್ತಿದ್ದರು. ನನ್ನ ಮೇಲೆ ಸದಾ ಕೋಪಿಸಿಕೊಳ್ಳುತ್ತಿದ್ದರು. ಅದರಿಂದ ನನ್ನ ಮನಸ್ಸು ಸ್ಥಿರಗೊಳ್ಳಲಿಲ್ಲ. ಅಂತಹ ನಿಷ್ಠುರಗಳನ್ನಾಡುವ ಗುರುವನ್ನು ಬಿಟ್ಟು ಬಂದೆ” ಎಂದು ಹೇಳಿದನು.
ಅದನ್ನು ಕೇಳಿ, ಶ್ರೀಗುರುವು, “ಅಯ್ಯಾ ಬ್ರಾಹ್ಮಣ, ನೀನು ಆತ್ಮಘಾತಕನಾದೆ. ಮೂಢನೊಬ್ಬ ದೇವಾಲಯದೊಳಗೆ ಮಲವಿಸರ್ಜನೆ ಮಾಡುತ್ತಿದ್ದನು. ಅದನ್ನು ಕಂಡ ಇನ್ನೊಬ್ಬ ಅವನನ್ನು ನಿಂದಿಸಿದನು. ಅದಕ್ಕೆ ಆ ಮೂಢ ತನ್ನನ್ನು ನಿಂದಿಸಿದವನನ್ನು ಹಿಂತಿರುಗಿಸಿ ಬೈದನು. ಹಾಗೆ ನೀನು ಕಿವಿ ಮೂಗುಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದೀಯೆ. ಅದೇನೆಂದು ಕೇಳಿದವನನ್ನು ನಿಂದಿಸುತ್ತಿದ್ದೀಯೆ. ನಿನ್ನ ಅವಗುಣಗಳನ್ನು ತಿಳಿದುಕೊಳ್ಳದೆ ನಿನಗೆ ಜ್ಞಾನ ಹೇಗೆ ಲಭ್ಯವಾಗುತ್ತದೆ? ಅಷ್ಟೇ ಆಲ್ಲದೆ ಗುರುನಿಂದೆ ಮಾಡಿ ದುರ್ಬುದ್ಧಿಯಾದ ನೀನು ಗುರು ದ್ರೋಹಿಯಾದೆ. ಮನೆಯನ್ನು ಬಿಟ್ಟು ಕಾಡಿನಲ್ಲಿ ಅಲೆಯುತ್ತಿರುವೆ. ಕಾಮಧೇನುವಂತಹ ಗುರುವನ್ನು ಬಿಟ್ಟು ಓಡಿಹೋಗುತ್ತಿದ್ದೀಯೇಕೆ? ನೀನೇ ನಿನ್ನ ಗುರುವಿನ ದೋಷಗಳನ್ನು ಎತ್ತಿತೋರಿಸಿ ಆಡಿಕೊಳ್ಳುತ್ತಿದ್ದೀಯೆ. ನಿನಗೆ ಮನಸ್ಸು ಹೇಗೆ ಸ್ಥಿರವಾಗಬಲ್ಲದು? ಜ್ಞಾನ ಹೇಗೆ ಉಂಟಾಗುತ್ತದೆ? ಗುರುದ್ರೋಹಿಗೆ ಇಹಪರಗಳೆರಡರಲ್ಲೂ ಸುಖವಿರಲಾರದು. ಅಜ್ಞಾನಾಂಧಕಾರದಲ್ಲಿ ಮುಳುಗಿದವನಿಗೆ ಜ್ಞಾನ ಹೇಗೆ ಲಭಿಸುವುದು? ಗುರುಸೇವಾ ಪದ್ಧತಿಯನ್ನು ಅರಿತವನಿಗೆ ಮಾತ್ರವೇ ವೇದಾದಿಗಳು ತಿಳಿಯುತ್ತವೆ. ಸದ್ಗುರುವು ಸಂತುಷ್ಟನಾದರೆ ಸರ್ವಜ್ಞತ್ವ ಲಭ್ಯವಾಗುತ್ತದೆ. ಸದ್ಗುರುವನ್ನು ಸಂತೋಷಗೊಳಿಸಿದವನು ಅಷ್ಟಸಿದ್ಧಿಗಳನ್ನೂ ಪಡೆಯುತ್ತಾನೆ. ಕ್ಷಣಮಾತ್ರದಲ್ಲಿ ವೇದಶಾಸ್ತ್ರಗಳೆಲ್ಲ ಸುಲಭವಾಗುತ್ತವೆ” ಎಂದು ಹೇಳಿದರು. ಅದನ್ನು ಕೇಳಿದ ಆ ಬ್ರಾಹ್ಮಣ, ಗುರುವಿನ ಚರಣಗಳಲ್ಲಿ ತಲೆಯಿಟ್ಟು, ವಿನೀತನಾಗಿ, ದೀನನಾಗಿ, “ಜ್ಞಾನಸಾಗರ, ನೀವು ನಿರ್ಗುಣರು. ದುರ್ಬುದ್ಧಿಯಾದ ನನ್ನನ್ನು ಉದ್ಧರಿಸಿ. ಮಾಯಾ ಮೋಹಿತನಾದ ನಾನು ಸದ್ಗುರುವನ್ನು ಗುರುತಿಸಲಾರದೆ ಹೋದೆ. ನನ್ನಲ್ಲಿ ದಯೆತೋರಿ ಜ್ಞಾನದಾನ ಮಾಡಿ. ಗುರುಸೇವಾ ರೀತಿ ಹೇಗೆ? ನನ್ನ ಮನಸ್ಸು ಸ್ಥಿರವಾಗಿ, ಹೇಗೆ ಗುರುವನ್ನು ತಿಳಿದುಕೊಳ್ಳಬೇಕು? ಹೇ ವಿಶ್ವವಂದ್ಯ, ಎಲ್ಲವನ್ನೂ ವಿಸ್ತರಿಸಿ ಹೇಳಿ, ನನಗೆ ಉಪಕಾರ ಮಾಡಿ” ಎಂದು ಪ್ರಾರ್ಥಿಸಿಕೊಂಡನು.
ಅವನ ಮಾತುಗಳನ್ನು ಕೇಳಿದ ಗುರುವು ಅವನಲ್ಲಿ ಕೃಪೆಮಾಡಿ, “ಅಯ್ಯಾ, ಗುರುವೇ ತಂದೆ, ತಾಯಿ, ಹಿತಕರ್ತ, ಉದ್ಧರಿಸುವವನು. ಅವನೇ ತ್ರಿಮೂರ್ತಿ ಸ್ವರೂಪನು. ಅದರಲ್ಲಿ ಸಂಶಯಬೇಡ. ಮನಸ್ಸನ್ನು ಸ್ಥಿರಮಾಡಿ ಕಷ್ಟಪಟ್ಟಾದರೂ, ಗುರುಸೇವೆಯನ್ನು ಮಾಡಬೇಕು. ಮಹಾಭಾರತದ ಆದಿಪರ್ವದಲ್ಲಿ ಗುರುಸೇವೆಯ ಬಗ್ಗೆ ವಿಶೇಷವಾಗಿ ಹೇಳಲ್ಪಟ್ಟಿದೆ. ಅದಕ್ಕೆ ನಿದರ್ಶನವಾಗಿ ಒಂದು ಕಥೆಯನ್ನು ಹೇಳುತ್ತೇನೆ. ಸಮಾಧಾನಚಿತ್ತನಾಗಿ ಕೇಳು.
ದ್ವಾಪರಯುಗದಲ್ಲಿ ಧೌಮ್ಯನೆಂಬ ಋಷಿವರ್ಯನೊಬ್ಬನಿದ್ದನು. ಆತ ಮಹಾಜ್ಞಾನಿ. ಆತನಿಗೆ ಅರುಣ, ಬೈದ, ಉಪಮನ್ಯು ಎಂಬ ಮೂರು ಜನ ಗುರುಸೇವಾ ಪರಾಯಣರಾದ ಶಿಷ್ಯರಿದ್ದರು. ಶಿಷ್ಯನ ಸೇವೆಯನ್ನು ಸ್ವೀಕರಿಸಿ, ಅವನ ಅಂತಃಕರಣ ಶುದ್ಧಿಗಾಗಿ ಅವನನ್ನು ಪರೀಕ್ಷಿಸಿ, ಅವನಲ್ಲಿ ಭಕ್ತಿ ಧೃಢವಾಗಿ ನೆಲೆಗೊಂಡಿದೆ ಎಂಬುದನ್ನು ಖಚಿತ ಮಾಡಿಕೊಂಡ ನಂತರ ಅವನ ಅಭೀಷ್ಟಗಳನ್ನು ನೆರವೇರಿಸುವುದು, ಅವನನ್ನು ಅನುಗ್ರಹಿಸುವುದು ಪ್ರಾಚೀನ ಗುರು ಸಂಪ್ರದಾಯ. ಅದರಂತೆ ಧೌಮ್ಯನು ಅವರನ್ನು ಪರೀಕ್ಷಿಸಲು ನಿರ್ಧರಿಸಿಕೊಂಡನು.
ಅದರಂತೆ, ಒಂದು ದಿನ ಧೌಮ್ಯನು ಅರುಣನನ್ನು ಕರೆದು, “ಅರುಣ, ಹೊಲದಲ್ಲಿ ಧಾನ್ಯವನ್ನು ಹಾಕಿದ್ದೇವೆ. ನೀರಿಲ್ಲದಿದ್ದರೆ ಅದು ಒಣಗಿಹೋಗುತ್ತದೆ. ನೀನು ಹೋಗಿ ಕೆರೆಯಿಂದ ನೀರು ಹಾಯಿಸಿ ಹೊಲದಲ್ಲಿ ನೀರು ತುಂಬಿಸಿ ಬಾ” ಎಂದನು. ಗುರುವಿನ ಆಜ್ಞೆಯಂತೆ ಅರುಣ ಹೊಲಕ್ಕೆ ಹೋಗಿ ನದಿಯಿಂದ ಹೊಲಕ್ಕೆ ಕಾಲುವೆ ಮಾಡಿದನು. ಆದರೆ ನೀರಿನ ಪ್ರವಾಹವು ಕಾಲುವೆಯೊಳಕ್ಕೆ ಬಹಳ ವೇಗವಾಗಿದ್ದುದರಿಂದ ಕಾಲುವೆಯ ಪಕ್ಕಗಳು ಕುಸಿದು ನೀರು ಅಕ್ಕ ಪಕ್ಕಗಳಿಗೆ ಹರಿದು ಹೋಗಿ, ಹೊಲ ಸ್ವಲ್ಪ ಎತ್ತರದಲ್ಲಿದ್ದುದರಿಂದ, ಹೊಲದೊಳಕ್ಕೆ ಹೋಗುತ್ತಿರಲಿಲ್ಲ. ನೀರನ್ನು ಹೊಲದೊಳಕ್ಕೆ ಹರಿಸಲು ಮಾಡಿದ ಅವನ ಎಲ್ಲ ಪ್ರಯತ್ನಗಳೂ ವಿಫಲವಾದವು. ನೀರನ್ನು ಸರಿಯಾದ ದಾರಿಗೆ ತರಲು ಅವನು ದೊಡ್ಡ ದೊಡ್ಡ ಕಲ್ಲುಗಳನ್ನು ಅಡ್ಡ ಇಟ್ಟನು. ಆದರೆ ನೀರು ಹೋಗ ಬೇಕಾದ ದಾರಿಯನ್ನೇ ಬಿಟ್ಟು ಬೇರೆ ದಾರಿ ಹಿಡಿಯಿತು. ಹೊಲದೊಳಕ್ಕೆ ನೀರು ಹರಿಯಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅವನು ನೀರನ್ನು ಹೊಲದೊಳಕ್ಕೆ ತರಲಾಗಲಿಲ್ಲ. ಅದರಿಂದ ಬಹಳ ನಿರಾಶನಾದ ಅರುಣ, ದೇವರನ್ನು ಸ್ಮರಿಸುತ್ತ, ನೀರು ಹೊಲದೊಳಕ್ಕೆ ಹೋಗದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ ಎಂದು ನಿರ್ಧರಿಸಿ, ಶ್ರೀಗುರುವಿನ ಧ್ಯಾನಮಾಡುತ್ತಾ, ಕಲ್ಲುಗಳಿಟ್ಟುದದರಿಂದ ಅಡ್ಡ ದಾರಿಯನ್ನು ಹಿಡಿದಿದ್ದ ನೀರಿನ ಎದುರಿಗೆ ತನ್ನ ದೇಹವನ್ನೇ ಇಟ್ಟು ನೀರಿನ ಪ್ರವಾಹವನ್ನು ತಡೆದನು. ಆಗ ನೀರು ಸರಿಯಾದ ದಾರಿಯನ್ನು ಹಿಡಿದು ಹೊಲದೊಳಕ್ಕೆ ಹೊರಟಿತು. ಆ ಪ್ರಯತ್ನದಿಂದ ಅವನ ದೇಹವು ನೀರಿನಲ್ಲಿ ಮುಳುಗಿ ಹೋಯಿತು. ಹಾಗೆ ಅವನು ಗುರುವಿನ ಆಜ್ಞೆಯನ್ನು ಪಾಲಿಸಿದನು. ಬಹಳ ಹೊತ್ತಾದರೂ ಅರುಣ ಹಿಂತಿರುಗಿ ಬರಲಿಲ್ಲವೆಂದು ಆತಂಕಗೊಂಡ ಗುರುವು ಅಲ್ಲಿಗೆ ಬಂದು ಹೊಲದಲ್ಲಿ ನೀರು ತುಂಬಿರುವುದನ್ನು ನೋಡಿ ಬಹಳ ಸಂತೋಷಗೊಂಡನು. ಆದರೆ ಶಿಷ್ಯನಾದ ಅರುಣ ಎಲ್ಲಿಯೂ ಕಾಣಲಿಲ್ಲವಾದ್ದರಿಂದ ಅವನನ್ನು ಹುಡುಕುತ್ತಾ, “ಹೇ ಅರುಣ ಎಲ್ಲಿದ್ದೀಯೆ?” ಎಂದು ಗಟ್ಟಿಯಾಗಿ ಕೂಗುತ್ತಾ, ಅವನ ಜಾಡನ್ನು ಹುಡುಕಲು ಆರಂಭಿಸಿದನು. ಗುರುವಿನ ಕೂಗು ಅರುಣನ ಕಿವಿಗೆ ಬಿದ್ದು, ಅವನು ಪ್ರಯತ್ನಮಾಡಿ ಮೆಲ್ಲಮೆಲ್ಲಗೆ ಎದ್ದುಬಂದು ಗುರುವಿನ ಪಾದಗಳಿಗೆ ನಮಸ್ಕರಿಸಿ, ಭಕ್ತಿಯಿಂದ ಗುರುವಿನ ಎದುರಿಗೆ ನಿಂತನು. ಅವನಿಂದ ಎಲ್ಲವನ್ನೂ ಕೇಳಿಸಿಕೊಂಡ ಗುರುವು, ಅವನನ್ನು ಆಲಂಗಿಸಿಕೊಂಡು, “ನೀನು ನನ್ನ ಶಿಷ್ಯರಲ್ಲಿ ಉತ್ತಮನು. ನೀನು ವೇದಶಾಸ್ತ್ರ ನಿಪುಣನಾಗು” ಎಂದು ಆಶೀರ್ವದಿಸಿದನು. ಮತ್ತೊಮ್ಮೆ ತನ್ನ ಪಾದಗಳಿಗೆ ನಮಸ್ಕರಿಸಿದ ಅರುಣನನ್ನು, ಕೃಪಾನಿಧಿಯಾದ ಧೌಮ್ಯನು, “ಮಗು ನೀನು ಇನ್ನು ನಿನ್ನ ಮನೆಗೆ ಹೋಗಿ, ಅನುರೂಪಳಾದ ಕನ್ಯೆಯನ್ನು ವಿವಾಹ ಮಾಡಿಕೊಂಡು ಕೃತಾರ್ಥನಾಗು” ಎಂದು ಮತ್ತೊಮ್ಮೆ ಅಶೀರ್ವದಿಸಿ ಕಳುಹಿಸಿದನು. ಗುರ್ವಾಜ್ಞೆಯನ್ನು ಶಿರಸಾವಹಿಸಿ ಅರುಣ ತನ್ನ ಮನೆಗೆ ಹಿಂತಿರುಗಿ ವಿದ್ವದ್ವೇತ್ತನಾಗಿ ಸುಖವಾಗಿ ಜೀವಿಸಿದನು.
ಅರುಣ ಹೊರಟುಹೋದಮೇಲೆ ಧೌಮ್ಯನಿಗೆ ಇನ್ನೂ ಇಬ್ಬರು ಶಿಷ್ಯರಿದ್ದರು. ಅವರಲ್ಲಿ ಬೈದನನ್ನು ಪರೀಕ್ಷಿಸಲು ಧೌಮ್ಯನು ಅವನನ್ನು ಕರೆದು, “ಬೈದ, ಹೊಲಕ್ಕೆ ಹೋಗಿ ಅಲ್ಲಿ ದಿನಪೂರ್ತಿ ಕಾವಲಿದ್ದು ಬೆಳೆಯನ್ನು ಕಾಪಾಡಿ, ಅದು ಪಕ್ವವಾದ ಮೇಲೆ ಕೊಯ್ದು, ಧಾನ್ಯವನ್ನೆಲ್ಲಾ ಮನೆಗೆ ತೆಗೆದುಕೊಂಡು ಬಾ” ಎಂದು ಹೇಳಿದನು. ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬೈದನು ಸಂತೋಷದಿಂದ ಹೊಲಕ್ಕೆ ಹೋಗಿ ಫಸಲು ಪಕ್ವವಾಗುವವರೆಗೂ ಅದನ್ನು ಕಾಯುತ್ತಿದ್ದು, ಪಕ್ವವಾದಮೇಲೆ ಅದನ್ನು ಕೊಯ್ದು ಧಾನ್ಯವನ್ನೆಲ್ಲಾ ಬೇರೆಮಾಡಿ, ಗುರುವಿನ ಸನ್ನಿಧಿಗೆ ಬಂದು, “ಧಾನ್ಯವನ್ನೆಲ್ಲಾ ಬೇರೆಮಾಡಿ, ರಾಶಿಮಾಡಿದ್ದೇನೆ. ಅದನ್ನು ಮನೆಗೆ ತರಲು ಅನುಮತಿ ಕೊಡಿ” ಎಂದು ಹೇಳಿದನು. ಧೌಮ್ಯನು ಅವನಿಗೆ ಗಾಡಿಯೊಂದನ್ನು ಕೊಟ್ಟು, “ಬೇಗ ಹೋಗಿ ಧಾನ್ಯವನ್ನೆಲ್ಲ ತಂದು ಮನೆಗೆ ಸೇರಿಸು” ಎಂದು ಹೇಳಿದನು. ಆ ಗಾಡಿಗೆ ಎರಡು ಎಮ್ಮೆಗಳ ಬದಲಾಗಿ ಒಂದೇ ಎಮ್ಮೆಯಿತ್ತು. ಬೈದನು, ಗಾಡಿಯಲ್ಲಿ ಧಾನ್ಯವನ್ನೆಲ್ಲ ತುಂಬಿ, ಒಂದೇ ಎಮ್ಮೆ ಇದ್ದದ್ದರಿಂದ ಅದನ್ನು ಒಂದು ಕಡೆ ಕಟ್ಟಿ, ಇನ್ನೊಂದು ಕಡೆ ತಾನೇ ನೊಗವನ್ನು ಹಿಡಿದು ಗಾಡಿಯನ್ನು ಎಳೆದು ತರುತ್ತಿರುವಾಗ, ದಾರಿಯಲ್ಲಿ ಎಮ್ಮೆ ಒಂದು ಹಳ್ಳದಲ್ಲಿ ಬಿದ್ದು ಹೋಯಿತು. ಬೈದನು ಆ ಎಮ್ಮೆಯನ್ನು ನೊಗದಿಂದ ಬಿಡಿಸಿ, ತಾನೊಬ್ಬನೇ ಗಾಡಿಯನ್ನು ಎಳೆಯಲು ಪ್ರಯತ್ನಿಸಿದನು. ತನ್ನ ಬಲವನ್ನೆಲ್ಲ ಬಿಟ್ಟು ಬಹು ಭಾರವಾದ ಆ ಗಾಡಿಯನ್ನು ಎಳೆಯುತ್ತಿರಲು, ಉಸಿರುಕಟ್ಟಿ ಮೂರ್ಛಿತನಾಗಿ ಬಿದ್ದುಬಿಟ್ಟನು. ಬಹಳ ಸಮಯವಾದರೂ ಮನೆಗೆ ಬೈದನು ಬರಲಿಲ್ಲವೆಂದು ಅವನನ್ನು ಹುಡುಕುತ್ತಾ ಬಂದ ಧೌಮ್ಯನು, ಅವನು ಮೂರ್ಛಿತನಾಗಿ ಬಿದ್ದಿದ್ದುದನ್ನು ಕಂಡು, ಅವನನ್ನು ಎಬ್ಬಿಸಿ, ಆಲಂಗಿಸಿಕೊಂಡು, “ನೀನು ವೇದಶಾಸ್ತ್ರವೇತ್ತನಾಗು” ಎಂದು ಆಶೀರ್ವದಿಸಿದನು, ಕ್ಷಣದಲ್ಲಿಯೇ ಸರ್ವವಿದ್ಯಾ ವಿಶಾರದನಾಗಿ ಬೈದನು, ಗುರುವಿನ ಅನುಮತಿ ಪಡೆದು, ತನ್ನ ಮನೆಗೆ ಹಿಂತಿರುಗಿ ಪ್ರಖ್ಯಾತನಾದನು.
ಮೂರನೆಯವನು ಉಪಮನ್ಯುವು. ಅವನೂ ಗುರುಸೇವಾ ಪರಾಯಣನೇ! ಆದರೆ ಅವನು ಆಹಾರ ಪ್ರಿಯನಾದದ್ದರಿಂದ ಅವನಿಗೆ ವಿದ್ಯಾಭ್ಯಾಸದಲ್ಲಿ ಮನಸ್ಸು ಸ್ಥಿರವಾಗಲಿಲ್ಲ. ಅದರ ಬಗ್ಗೆ ಚಿಂತಿಸಿ ಧೌಮ್ಯನು ಒಂದು ಉಪಾಯವನ್ನು ಮಾಡಿದನು. ಒಂದು ದಿನ ಧೌಮ್ಯನು ಉಪಮನ್ಯುವನ್ನು ಕರೆದು, “ಮಗು, ಹಸುಗಳನ್ನು ಪ್ರತಿದಿನವೂ ಕಾಡಿಗೆ ಕರೆದುಕೊಂಡು ಹೋಗಿ ಅವನ್ನು ಮೇಯಿಸಿಕೊಂಡು ಬಾ” ಎಂದು ಹೇಳಿದನು. ಉಪಮನ್ಯುವು ಗುರುವಾಜ್ಞೆಯನ್ನು ಶಿರಸಾವಹಿಸಿ, ಹಸುಗಳನ್ನು ಕರೆದುಕೊಂಡು ಹೋಗುತ್ತಿದ್ದನು. ಆದರೆ ಅವನಿಗೆ ಹಸಿವು ಹೆಚ್ಚಾಗಿದ್ದುದರಿಂದ ಅವನು ಹಸಿವೆಯನ್ನು ತಾಳಲಾರದೆ, ಬಹಳ ಬೇಗ ಮನೆಗೆ ಹಿಂತಿರುಗುತ್ತಿದ್ದನು. ಅದನ್ನು ಗಮನಿಸಿದ ಗುರುವು, ಕೋಪಗೊಂಡು, “ನೀನೇಕೆ ಹಸುಗಳನ್ನು ಬೇಗನೆ ಮನೆಗೆ ಕರೆದುಕೊಂಡು ಬರುತ್ತಿದ್ದೀಯೆ? ಸೂರ್ಯಾಸ್ತಮದವರೆಗೂ ಅವುಗಳನ್ನು ಮೇಯಿಸಿಕೊಂಡು ಬರಬೇಕು” ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು ಹಸುಗಳನ್ನು ಕರೆದುಕೊಂಡು ಹೋಗಿ, ಹಸಿವೆಯನ್ನು ತಾಳಲಾರದೆ, ಅಲ್ಲಿ ನದಿಯಲ್ಲಿ ಸಂಧ್ಯಾ ಕರ್ಮಗಳನ್ನಾಚರಿಸಿ, ಹತ್ತಿರದಲ್ಲಿದ್ದ ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳಲ್ಲಿ ಭಿಕ್ಷೆಯೆತ್ತಿ, ಭಿಕ್ಷಾನ್ನವನ್ನುಂಡು, ಸಾಯಂಕಾಲದವೇಳೆಗೆ ಹಸುಗಳನ್ನು ಮನೆಗೆ ಕರೆತರುತ್ತಿದ್ದನು. ಅವನನ್ನು ಗಮನಿಸುತ್ತಿದ್ದ ಧೌಮ್ಯನು ಶಿಷ್ಯನು ಹಸಿವೆಯಿಂದ ಒದ್ದಾಡದೇ ಇರುವುದನ್ನು ಕಂಡು, “ಶಿಷ್ಯ, ನೀನು ಕಾಡಿನಲ್ಲಿ ಉಪವಾಸ ಇರುತ್ತೀಯೆ ಅಲ್ಲವೇ? ಆದರೂ ನಿನ್ನ ಶರೀರವು ಪುಷ್ಟಿಯಾಗಿಯೇ ಕಾಣುತ್ತಿದೆ. ಅದಕ್ಕೆ ಕಾರಣವೇನು?” ಎಂದು ಕೇಳಿದನು. ಉಪಮನ್ಯುವು, “ಗುರುದೇವ, ನಾನು ವಿಪ್ರರ ಮನೆಗಳಲ್ಲಿ ಭಿಕ್ಷೆಯೆತ್ತಿ ಹಸಿವೆ ತೀರಿಸಿಕೊಂಡು ಹಸುಗಳನ್ನು ಮೇಯಿಸುತ್ತಿದ್ದೇನೆ” ಎಂದು ಹೇಳಿದನು. ಅದನ್ನು ಕೇಳಿ ಧೌಮ್ಯನು ಕೋಪದಿಂದ, “ನನಗೆ ನಿವೇದಿಸದೆ ಹೇಗೆ ನೀನು ಭಿಕ್ಷಾನವನ್ನು ತಿನ್ನುತ್ತೀಯೆ? ಇನ್ನುಮೇಲೆ, ಪ್ರತಿದಿನವೂ ಭಿಕ್ಷೆಮಾಡಿದ ನಂತರ ಅದನ್ನು ನನಗೆ ತಂದುಕೊಟ್ಟು ಮತ್ತೆ ಕಾಡಿಗೆ ಹೋಗಿ ಹಸುಗಳನ್ನು ಮೇಯಿಸಿಕೊಂಡು ಬಾ” ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು, ಪ್ರತಿದಿನ ಭಿಕ್ಷಾನ್ನವನ್ನು ತಂದು ಗುರುವಿಗೆ ಅರ್ಪಿಸಿ ಕಾಡಿಗೆ ಹಿಂತಿರುಗಿ, ಎರಡನೆಯ ಸಲ ಭಿಕ್ಷೆಯೆತ್ತಿ ತಿಂದು ಹಸುಗಳನ್ನು ಕಾಯಲು ಹೋಗುತ್ತಿದ್ದನು. ಹೀಗೇ ಸ್ವಲ್ಪ ಕಾಲವಾದಮೇಲೆ ಅವನು ಇನ್ನೂ ಪುಷ್ಟಿಯಾಗಿಯೇ ಇರುವುದನ್ನು ಕಂಡ ಧೌಮ್ಯನು, ಮತ್ತೆ ಅವನನ್ನು ಅದಕ್ಕೆ ಕಾರಣವೇನೆಂದು ಕೇಳಿದನು. ಉಪಮನ್ಯುವು ತನ್ನ ಹಸಿವಿನ ಉಪಶಮನಕ್ಕಾಗಿ ತಾನು ಎರಡನೆಯ ಸಲ ಭಿಕ್ಷೆ ಎತ್ತುತ್ತಿರುವುದಾಗಿ ಹೇಳಿದನು. ಅದಕ್ಕೆ ಧೌಮ್ಯನು ಕ್ರುದ್ಧನಾಗಿ, “ಎರಡನೆಯ ಸಲ ಮಾಡಿದ ಭಿಕ್ಷೆಯನ್ನೂ ನನಗೇ ತಂದು ಕೊಡಬೇಕು” ಎಂದು ಆಜ್ಞೆ ಮಾಡಿದನು. ಉಪಮನ್ಯುವು ಗುರುವಿನ ಆಜ್ಞೆಯಂತೆ ಎರಡನೆಯಸಲ ಮಾಡಿದ ಭಿಕ್ಷೆಯನ್ನೂ ತಂದು ಗುರುವಿಗೆ ಅರ್ಪಿಸಿ ಮತ್ತೆ ಕಾಡಿಗೆ ಹಸುಗಳನ್ನು ಕಾಯಲು ಹೋಗುತ್ತಿದ್ದನು. ಆದರೆ ತಾಳಲಾರದ ಹಸಿವಿನಿಂದ ಅವನು ಕರುಗಳು ಹಾಲು ಕುಡಿದಾದಮೇಲೆ ಹಾಲು ಸುರಿಯುವುದನ್ನು ಕಂಡು, ಅ ಎಂಜಲು ಹಾಲನ್ನು ಕುಡಿಯಬಹುದೆಂದು ತಿಳಿದು ಅದನ್ನು ಕುಡಿದು ಹಸಿವೆ ತೀರಿಸಿಕೊಳ್ಳುತ್ತಿದ್ದನು. ಹೀಗೆ ದಿನವೂ ಹಾಲು ಕುಡಿದು ಪುಷ್ಟಿಯಾಗಿದ್ದ ಅವನನ್ನು ಕಂಡು ಧೌಮ್ಯನು ಅವನನ್ನು ಕಾರಣ ಕೇಳಲು, ತಾನು ಕರುಗಳು ಕುಡಿದು ಬಿಟ್ಟ ಹಾಲನ್ನು ಕುಡಿಯುತ್ತಿದ್ದೇನೆಂದು ನಿಜವನ್ನು ನುಡಿದನು. ಅದಕ್ಕೆ ಗುರುವು, “ಎಂಜಲು ಹಾಲು ಕುಡಿಯುವುದರಿಂದ ಅನೇಕ ದೋಷಗಳುಂಟಾಗುತ್ತವೆ. ಅದರಿಂದ ಅದನ್ನು ಕುಡಿಯಬೇಡ” ಎಂದು ಆಣತಿಯಿತ್ತನು. ಆ ಆಣತಿಯನ್ನೂ ಪಾಲಿಸಿದ ಉಪಮನ್ಯುವು ಹಸಿವಿನಿಂದ ಕಂಗೆಟ್ಟು, ಚಿಂತಾಕುಲನಾಗಿ, ಹಸುಗಳನ್ನು ಮೇಯಿಸುತ್ತಾ, ದಾರಿಯಲ್ಲಿ ಎಕ್ಕದ ಗಿಡವೊಂದರಿಂದ ಹಾಲು ಸುರಿಯುತ್ತಿರುವುದನ್ನು ಕಂಡನು. ಈ ಹಾಲು ಎಂಜಲಲ್ಲ. ಇದನ್ನು ಕುಡಿಯಬಹುದು ಎಂದು ಯೋಚಿಸಿ, ಒಂದು ಎಲೆಯಲ್ಲಿ ಆ ಹಾಲನ್ನು ಹಿಡಿದು ಕುಡಿಯುತ್ತಿರುವಾಗ ಆ ಹಾಲು ಅವನ ಕಣ್ಣಲ್ಲಿ ಬಿದ್ದು ಅವನಿಗೆ ಕಣ್ಣು ಕಾಣದೇ ಹೋಯಿತು. ಕಣ್ಣಿಲ್ಲದವನಾಗಿ, ದಾರಿ ತಿಳಿಯದೆ, ಎಲ್ಲಿ ಹೋಗುತ್ತಿದ್ದೇನೆಂಬ ಅರಿವಿಲ್ಲದೆ, ಚಿಂತಾ ಕ್ರಾಂತನಾಗಿ ಹಸುಗಳನ್ನು ಹುಡುಕುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಭಾವಿಯಲ್ಲಿ ಬಿದ್ದುಹೋದನು.
ಹಿಂತಿರುಗಿದ ಹಸುಗಳ ಜೊತೆಗೆ ಉಪಮನ್ಯುವು ಬರದಿದ್ದುದನ್ನು ಕಂಡ ಗುರುವು ಅವನೇನಾದನೋ ಎಂದು ಚಿಂತೆಗೊಂಡು, ಅವನನ್ನು ಹುಡುಕಲು ಕಾಡಿಗೆ ಹೋಗಿ, ಅವನ ಹೆಸರು ಕೂಗುತ್ತಾ, ಹುಡುಕಾಡಿದನು. ಗುರುವಿನ ಕೂಗನ್ನು ಕೇಳಿದ ಉಪಮನ್ಯುವು ಭಾವಿಯೊಳಗಿಂದಲೇ ಕ್ಷೀಣವಾದ ಧ್ವನಿಯಿಂದ ಉತ್ತರಿಸಿದನು. ಅದನ್ನು ಕೇಳಿ ಗುರುವು ಅಲ್ಲಿಗೆ ಬಂದು ನಡೆದದ್ದೆಲ್ಲವನ್ನೂ ಅವನಿಂದ ತಿಳಿದುಕೊಂಡು ಅವನಿಗೆ ಅಶ್ವಿನಿದೇವತೆಗಳನ್ನು ಪ್ರಾರ್ಥಿಸಿಕೊಳ್ಳುವಂತೆ ಹೇಳಿದನು. ಉಪಮನ್ಯುವು ಅದೇ ರೀತಿ ಪ್ರಾರ್ಥಿಸಿಕೊಳ್ಳಲು, ಅಶ್ವಿನಿ ದೇವತೆಗಳ ಅನುಗ್ರಹದಿಂದ ಅವನಿಗೆ ಹಿಂದಿನಂತೆ ದೃಷ್ಟಿ ಬಂತು. ಭಾವಿಯಿಂದ ಮೇಲಕ್ಕೆ ಬಂದು ಅವನು ಗುರು ಪಾದಗಳಿಗೆ ನಮಸ್ಕರಿಸಿ, ಸ್ತೋತ್ರಮಾಡಿದನು. ಅದರಿಂದ ಸಂತೋಷಗೊಂಡ ಧೌಮ್ಯನು, “ಶಿಷ್ಯೋತ್ತಮ ನಿನ್ನ ಭಕ್ತಿಗೆ ಮೆಚ್ಚಿದೆ” ಎಂದು ಹೇಳಿ ಅವನ ತಲೆಯಮೇಲೆ ಕೈಯಿಟ್ಟು ಅಶೀರ್ವದಿಸಿದನು. ತಕ್ಷಣವೇ ಉಪಮನ್ಯುವು ವೇದಶಾಸ್ತ್ರನಿಪುಣನಾದನು. ಗುರುವು, “ಮಗು, ನೀನು ನಿನ್ನ ಮನೆಗೆ ಹಿಂತಿರುಗಿ, ನಿನಗೆ ಅನುರೂಪಳಾದ ಕನ್ಯೆಯನ್ನು ಮದುವೆಯಾಗಿ ಸುಖವಾಗಿ ಜೀವನಮಾಡು. ನಿನ್ನ ಕೀರ್ತಿ ನಾಲ್ಕೂ ದಿಕ್ಕುಗಳಲ್ಲಿ ಹರಡಿ, ನಿನ್ನ ಶಿಷ್ಯರೂ ನಿನ್ನಂತಹವರೇ ಆಗುತ್ತಾರೆ. ಅವರಲ್ಲಿ ಉದಂಕನೆಂಬುವನೊಬ್ಬನು ಪ್ರಸಿದ್ಧಿಯಾಗುತ್ತಾನೆ. ನಾಗರನ್ನು ಜಯಿಸಿ ನಿನಗೆ ದಕ್ಷಿಣೆಯೆಂದು ಅವನು ನಾಗಕುಂಡಲಗಳನ್ನು ತಂದುಕೊಡುತ್ತಾನೆ. ಜನಮೇಜಯನ ಸರ್ಪಯಾಗದಲ್ಲಿ ಸರ್ಪಗಳಹೋಮ ಮಾಡಿ ಸರ್ಪಗಳ ನಾಶಮಾಡುತ್ತಾನೆ” ಎಂದು ಅವನನ್ನು ಆಶೀರ್ವದಿಸಿ ಕಳುಹಿಸಿದರು. ಉಪಮನ್ಯುವು ಮನೆಗೆ ಹಿಂತಿರುಗಿ ಗುರುವು ಹೇಳಿದಂತೆ ಮಾಡಿ ಪ್ರಖ್ಯಾತನಾದನು.
ಉಪಮನ್ಯುವಿನ ಶಿಷ್ಯ ಉದಂಕನು ಇಂದ್ರ ರಕ್ಷಿತ ತಕ್ಷಕನನ್ನು ಕೂಡ, ಗುರುಕೃಪಾ ಸಾಮರ್ಥ್ಯದಿಂದ, ಯಾಗದಲ್ಲಿ ಕರೆಯಲು ಸಮರ್ಥನಾದನು. ಗುರುದ್ರೋಹಿಗೆ ಇಹಪರಗಳಲ್ಲಿ ಸುಖವಿಲ್ಲ. ಗುರುದ್ರೋಹಿಯಾದ ಶಿಷ್ಯನು ಕುಂಭೀಪಾಕ ನರಕದಲ್ಲಿ ಬೀಳುತ್ತಾನೆ. ಗುರುವು ಸಂತುಷ್ಟನಾದರೆ ಸಾಧಿಸಲಸಾಧ್ಯವೆನ್ನುವುದು ಯಾವುದೂ ಇರುವುದಿಲ್ಲ. ಗುರುವು ಸಂತೋಷಗೊಂಡರೆ ಕ್ಷಣದಲ್ಲಿ ಶಿಷ್ಯನಿಗೆ ವೇದಶಾಸ್ತ್ರಾದಿಗಳು ಲಭ್ಯವಾಗುತ್ತವೆ. ಇದನ್ನು ತಿಳಿಯದೆ ನೀನು ಭ್ರಮೆಯಲ್ಲಿ ಬಿದ್ದಿದ್ದೀಯೆ. ಈಗಲಾದರೂ ಗುರುವಿನ ಬಳಿಗೆ ಹೋಗು. ಅವನೇ ನಿನ್ನನ್ನು ಉದ್ಧರಿಸಬಲ್ಲವನು. ನಿನ್ನ ಗುರುವು ಸಂತೋಷಗೊಂಡರೆ ನಿನಗೆ ಮಂತ್ರಸಿದ್ಧಿ ಶೀಘ್ರವಾಗಿ ಆಗುವುದು. ಈ ವಿಷಯವನ್ನು ನಿನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ನೀನು ನಿನ್ನ ಗುರುವಿನ ಬಳಿಗೆ ಹೋಗು” ಎಂದು ಶ್ರೀಗುರುವು ಆ ಬ್ರಾಹ್ಮಣನಿಗೆ ಹೇಳಲು, ಅವನಿಗೆ ನಿಜದ ಅರಿವುಂಟಾಗಿ, ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು, “ಹೇ ಗುರುದೇವ, ಪರಾರ್ಥ ಸಾಧನವು ನೀವೇ! ಕೃಪೆಯಿಟ್ಟು ನನಗೆ ತತ್ತ್ವಬೋಧೆ ಮಾಡಿದಿರಿ. ನಿಜವಾಗಿಯೂ ನಾನು ಗುರುದ್ರೋಹಿಯೇ! ನನ್ನ ಅಪರಾಧಗಳಿಗೆ ಕೊನೆಯಿಲ್ಲ. ನನ್ನ ಗುರುವಿನ ಮನಸ್ಸಿಗೆ ನೋವುಂಟುಮಾಡಿದೆ. ಅವನು ನನ್ನಲ್ಲಿ ಹೇಗೆ ಪ್ರಸನ್ನನಾಗುತ್ತಾನೆ? ಚಿನ್ನ ಬೆಳ್ಳಿ ಮುಂತಾದ ಲೋಹಗಳು ಮುರಿದರೆ ಅವನ್ನು ಸರಿಮಾಡಬಹುದು. ಆದರೆ ಮುತ್ಯವು ಒಡೆದರೆ ಅದನ್ನು ಸರಿಮಾಡಲಾಗುವುದೇ? ಹಾಗೆ ನಾನು ನನ್ನ ಗುರುವಿನ ಅಂತಃಕರಣವನ್ನು ಒಡೆದು ಬಿಟ್ಟಿದ್ದೇನೆ. ಅದನ್ನು ಸರಿಪಡಿಸಲಾಗುವುದಿಲ್ಲ. ಈ ಗುರುದ್ರೋಹಿಯ ಶರೀರವು ಇನ್ನು ಇರಬಾರದು. ಗುರ್ವಾರ್ಪಣವೆಂದು ಈ ಶರೀರವನ್ನು ತ್ಯಾಗಮಾಡುತ್ತೇನೆ” ಎಂದು ಹೇಳಿ, ಶ್ರೀಗುರುವಿಗೆ ನಮಸ್ಕಾರಮಡಿ, ಪಶ್ಚಾತ್ತಾಪ ದಗ್ಧನಾದ ಆ ಬ್ರಾಹ್ಮಣನು ಪ್ರಾಣ ತ್ಯಾಗಮಾಡಲು ಉದ್ಯುಕ್ತನಾದನು. ಹಾಗೆ ಪಶ್ಚಾತ್ತಾಪ ದಗ್ಧವಾದ ಬ್ರಾಹ್ಮಣನ ಮನಸ್ಸು ನಿಷ್ಕಲ್ಮಷವಾಯಿತು. ನಿಜವಾದ ಪಶ್ಚಾತ್ತಾಪದಿಂದ ನೂರು ಜನ್ಮಗಳಲ್ಲಿ ಮಾಡಿದ್ದ ಪಾಪಗಳೂ ಕೂಡಾ ನಾಶವಾಗಿ ಹೋಗಬಲ್ಲವು.
ಹೀಗೆ ವಿರಕ್ತನಾಗಿ ದೇಹತ್ಯಾಗಕ್ಕೆ ಸಿದ್ಧನಾಗುತ್ತಿದ್ದ ಬ್ರಾಹ್ಮಣನನ್ನು ಕರೆದು, “ಅಯ್ಯಾ ವಿಪ್ರ. ಚಿಂತಿಸಬೇಡ. ನಿನ್ನ ದುರಿತಗಳೆಲ್ಲ ನಾಶವಾದವು. ನಿನಗೆ ವೈರಾಗ್ಯವುಂಟಾಗಿದೆ. ಈಗ ನಿನ್ನ ಗುರುವನ್ನು ಸಮಾಧಾನ ಚಿತ್ತನಾಗಿ ಸ್ಮರಿಸಿಕೋ” ಎಂದು ಅಪ್ಪಣೆ ಮಾಡಿದರು. ತಕ್ಷಣವೇ ಅವನು, “ಸ್ವಾಮಿ, ನೀವು ತ್ರಿಮೂರ್ತ್ಯವತಾರರು. ಜಗದ್ಗುರುವು. ಭವತಾರಕರು. ನಿಮ್ಮ ಕೃಪೆ ನನ್ನ ಮೇಲೆ ಸರ್ವವಿಧದಲ್ಲೂ ಇರಲು ನನಗೆ ಪಾತಕಗಳಿನ್ನೆಲ್ಲಿಯದು?” ಎಂದು ಶ್ರೀಗುರುವನ್ನು ಭಕ್ತಿಯಿಂದ ಸ್ತುತಿಸಿ, ಪುಲಕಿತನಾಗಿ, ನಿರ್ಮಲ ಮನಸ್ಕನಾಗಿ, ಕಣ್ಣೀರುಸುರಿಸುತ್ತಾ, ವಿನಯ ವಿನಮ್ರತೆಗಳಿಂದ, “ಉದ್ಧರಿಸು, ಉದ್ಧರಿಸು” ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾ, ಸಾಷ್ಟಾಂಗನಮಸ್ಕಾರ ಮಾಡಿದನು.
ಅವನು ನಮಸ್ಕಾರಮಾಡಿ ಏಳುತ್ತಿದ್ದಹಾಗೆಯೇ, ವೇದಶಾಸ್ತ್ರ ನಿಪುಣನಾಗಿ, ಶ್ರೀಗುರುವಿನಿಂದ ಉದ್ಧರಿಸಲ್ಪಟ್ಟನು. ಶಂಕರನೇ ಪ್ರಸನ್ನನಾದಮೇಲೆ ಬೇರೆ ದೇವತೆಗಳ ಅವಶ್ಯಕತೆಯಾದರೂ ಏನು? ಗುರುಪಾದ ಸ್ಪರ್ಶದಿಂದ ಆ ಬ್ರಾಹ್ಮಣನು ಜ್ಞಾನಿಯಾಗಿ ಆನಂದ ತುಂಬಿದವನಾದನು. ಆಗ ಶ್ರೀಗುರುವು ಅವನನ್ನು ನೋಡಿ, “ಅಯ್ಯಾ, ನನ್ನ ಮಾತು ಕೇಳಿ, ಈಗ ನೀನು ನಿನ್ನ ಗುರುಸನ್ನಿಧಿಯನ್ನು ಸೇರು. ನಿನ್ನ ಹಿಂತಿರುಗುವಿಕೆಯಿಂದ ಆತನು ಸಂತುಷ್ಟನಾಗುತ್ತಾನೆ. ನೀನು ಆತನಿಗೆ ನಮಸ್ಕರಿಸುತ್ತಲೂ ಆತ ಇನ್ನೂ ಹೆಚ್ಚಿನ ಸಂತೋಷದಿಂದ ನಿನ್ನನ್ನು ಆದರಿಸುತ್ತಾನೆ. ಆತನೇ ನಾನೆಂದು ತಿಳಿದುಕೋ. ಇದರಲ್ಲಿ ನಿನಗೆ ಸಂದೇಹಬೇಡ” ಎಂದು ಹೇಳಿ ಆ ಬ್ರಾಹ್ಮಣನನ್ನು ಕಳುಹಿಸಿಕೊಟ್ಟರು. ಆ ಬ್ರಾಹ್ಮಣ ತನ್ನ ಗುರುಸನ್ನಿಧಿಯನ್ನು ಸೇರಿ ಮುಕ್ತನಾದನು.
ನಂತರ ಶ್ರೀಗುರುವು ಕೃಷ್ಣಾನದೀ ತೀರ ಯಾತ್ರೆಮಾಡುತ್ತಾ ಭಿಲ್ಲವಟಿ ಎಂಬ ಊರನಲ್ಲಿರುವ ಭುವನೇಶ್ವರಿಯನ್ನು ಸೇರಿದರು. ಕೃಷ್ಣವೇಣಿಯ ಪಶ್ಚಿಮತೀರದಲ್ಲಿ ಔದುಂಬರ ವೃಕ್ಷವಿದೆ. ಅದರ ಮೂಲದಲ್ಲಿ ಶ್ರೀಗುರುವು ನಿಂತರು. ಆ ಸ್ಥಳದಲ್ಲಿ ಸರ್ವಸಿದ್ಧಿಗಳೂ ಇವೆ. ಆ ಪ್ರದೇಶದ ಮಹಿಮೆಯನ್ನು ಕೇಳಿದರೂ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ.”
ಇಲ್ಲಿಗೆ ಹದಿನಾರನೆಯ ಅಧ್ಯಾಯ ಮುಗಿಯಿತು.
[11/01 5:17 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನೇಳನೆಯ ಅಧ್ಯಾಯ||
ಸಿದ್ಧಮುನಿಯು ನಾಮಧಾರಕನಿಗೆ ಮತ್ತೆ, “ನಿನಗೆ ಗುರು ಪಾದಗಳಲ್ಲಿ ಧೃಢಭಕ್ತಿಯುಂಟಾಗಿದೆ. ಗುರು ಕಥೆಗಳಲ್ಲಿ ನೀನು ತೋರಿಸುತ್ತಿರುವ ಅಭಿರುಚಿ ನಿನ್ನ ಗುರು ಭಕ್ತಿಯನ್ನು ತೋರಿಸುತ್ತಿದೆ. ಕಾಮಧೇನುವಿನಂತೆ ಕೋರಿದ್ದನ್ನು ಕೊಡುವ ಗುರುಚರಿತ್ರೆಯನ್ನು ಆಲಿಸು.
ಕೃಷ್ಣಾನದಿಯ ಪಶ್ಚಿಮ ತೀರದಲ್ಲಿರುವ ಭುವನೇಶ್ವರಿಯಲ್ಲಿ ಶ್ರೀಗುರುವು ರಹಸ್ಯವಾಗಿ ನಿಂತರು. ಆ ಸ್ಥಳವು ಔದುಂಬರ ವೃಕ್ಷಮೂಲವು. ಕಲ್ಪವೃಕ್ಷ ಸಮಾನವಾದ ಪರಿಶುದ್ಧ ಪ್ರದೇಶವದು. ಶ್ರೀಗುರುವು ಅಲ್ಲಿ ಅನುಷ್ಠಾನ ಪರರಾಗಿ ಚಾತುರ್ಮಾಸ್ಯ ವ್ರತವನ್ನು ಅಚರಿಸಿದರು. ಶ್ರೀಗುರುವು ಆ ಪ್ರದೇಶದಲ್ಲಿ ನಿಂತಿದ್ದರಿಂದ ಅದರ ಮಹಿಮೆ ಅಧಿಕವಾಯಿತು” ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, “ಸ್ವಾಮಿ, ಪರಮಾತ್ಮನೇ ಆದ ಶ್ರೀಗುರುವು ಅಲ್ಲಿ ರಹಸ್ಯವಾಗಿ ಏಕೆ ನಿಂತರು? ಶ್ರೀಗುರುವಿಗೆ ತಪೋನುಷ್ಠಾನ, ಭಿಕ್ಷೆಗಳೇತಕ್ಕೆ?” ಎಂದು ಕೇಳಿದನು.
ಅದಕ್ಕೆ ಸಿದ್ಧಮುನಿ, “ಮಗು, ನಾಮಧಾರಕ, ಈಶ್ವರ ಭಿಕ್ಷೆ ಬೇಡಿದನು. ದತ್ತಾತ್ತ್ರೇಯರು ತಪವನ್ನಾಚರಿಸಿದರು. ಭಕ್ತಾನುಗ್ರಹಕ್ಕಾಗಿ ತ್ರಿಮೂರ್ತ್ಯವತಾರ ಧರಿಸಿ, ಭಿಕ್ಷುರೂಪದಲ್ಲಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಭಿಕ್ಷೆ ಬೇಡಿದರು. ಅವೆಲ್ಲವೂ ಕೇವಲ ಭಕ್ತರಿಗೆ ಬೋಧಿಸುವುದಕ್ಕಾಗಿಯೇ! ಕಾಲವಶವಾಗಿ ತೀರ್ಥಗಳೆಲ್ಲಾ ಗುಪ್ತವಾಗಿ ಹೋದವು. ಅವನ್ನು ಮತ್ತೆ ಭಕ್ತಾನುಕೂಲಕ್ಕಾಗಿ ಶ್ರೀಗುರುವು ವ್ಯಕ್ತಗೊಳಿಸಿದನು. ಶ್ರೀಗುರುವು ನಮಗೆ ಉಪಕಾರ ಮಾಡಲೆಂದು ಸ್ವಯಂ ಗುಪ್ತವಾಗಿ ತೀರ್ಥಯಾತ್ರೆಗಳನ್ನು ಮಾಡಿದರು. ದುಷ್ಟರಿಂದ ದೂರವಿರಲು ಅವರು ಗುಪ್ತರಾಗಿದ್ದಾರೆಯೇ ಹೊರತು ಭಕ್ತರ ವಾಂಛೆಗಳನ್ನು ನೆರವೇರಿಸುತ್ತಲೇ ಇದ್ದಾರೆ. ಅವರು ಅಲ್ಲಿ ಹಾಗಿರಲು ನಡೆದ ಒಂದು ವಿಚಿತ್ರವನ್ನು ಹೇಳುತ್ತೇನೆ ಕೇಳು. ಅದರಿಂದ ಶ್ರೀಗುರುವಿನ ಮಹಿಮೆ ಮತ್ತೆ ಭೂಮಿಯಲ್ಲಿ ಪ್ರಕಟಗೊಂಡಿತು.
ಕರವೀರವೆಂಬ ಊರಿನಲ್ಲಿ ಕಣ್ವ ಶಾಖೀಯನಾದ ಸಕಲವಿದ್ಯಾ ಪಾರಂಗತನಾದ ಉತ್ತಮ ಚರಿತನಾದ ಬ್ರಾಹ್ಮಣನೊಬ್ಬನಿದ್ದನು. ಅವನಿಗೊಬ್ಬ ಮಗನಾದನು. ಆದರೆ ವಿಧಿವಶಾತ್ ಅವನಿಗೆ ಹುಟ್ಟಿದ ಮಗ ಮಂದಮತಿ. ಅವನಿನ್ನೂ ಸಣ್ಣವನಾಗಿದ್ದಾಗಲೇ ಆ ಬ್ರಾಹ್ಮಣನು ಮರಣಿಸಿದನು. ಹುಡುಗನಿಗೆ ಏಳು ವರ್ಷವಾದಾಗ ಆ ಊರಿನ ಬ್ರಾಹ್ಮಣರು ಅವನಿಗೆ ಉಪನಯನ ಮಾಡಿದರು. ಆ ಹುಡುಗನಿಗೆ ಸ್ನಾನ, ಸಂಧ್ಯಾವಂದನೆ, ಗಾಯತ್ರಿಜಪ ಮುಂತಾದುವುಗಳಲ್ಲಿ ಆಸ್ತೆ ಇರಲಿಲ್ಲ. ಹಾಗಾಗಿ ಅವನು ವೇದಾಧ್ಯಯನವನ್ನೂ ಮಾಡಲಿಲ್ಲ. ಅವನೊಬ್ಬ ಓದಿದ್ದನ್ನು ತಕ್ಷಣವೇ ಮರೆಯುತ್ತಿದ್ದ ಮಹಾ ಮೂರ್ಖ. ಆ ಊರಿನ ವಿದ್ವಾಂಸರು ಆ ಮೂರ್ಖನನ್ನು, “ವಿದ್ವಾಂಸನಾದ ಬ್ರಾಹ್ಮಣನೊಬ್ಬನಿಗೆ ಮಗನಾಗಿ ಹುಟ್ಟಿದರೂ ಮೂರ್ಖನಾದೆ. ನಿನ್ನ ತಂದೆ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಬಲ್ಲ ಜ್ಞಾನಿಯಾಗಿದ್ದನು. ಅವನಿಗೆ ಕಲ್ಲುಬಂಡೆಯಂತಹ ನೀನು ಹೇಗೆ ಜನಿಸಿದೆ? ನಿನ್ನ ಹುಟ್ಟು ವ್ಯರ್ಥ. ನಿನ್ನ ತಂದೆಯ ಹೆಸರು, ಕೀರ್ತಿ ನಿನ್ನಿಂದ ಕಲಂಕಿತವಾಯಿತು. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿ ಸಾಯಿ. ಯಾವುದಾದರೂ ಕೆರೆಯೋ ಭಾವಿಯೋ ನೋಡಿ ಅದರಲ್ಲಿ ಹೋಗಿ ಬೀಳು. ಇಲ್ಲಿ ಹಂದಿಯಂತೆ ಏಕೆ ಬಾಳುತ್ತಿರುವೆ? ವಿದ್ಯೆಯುಳ್ಳವನು ಮನುಷ್ಯರಲ್ಲಿ ಅಧಿಕನೆನಿಸುತ್ತಾನೆ. ವಿದ್ಯಾವಿಹೀನನು ವಯಸ್ಸಿನಲ್ಲಿ ದೊಡ್ಡವನಾದರೂ ಪೂಜಿತನಾಗುವುದಿಲ್ಲ. ವಿದ್ಯಾವಂತನು ವಯಸ್ಸಿನಲ್ಲಿ ಸಣ್ಣವನಾದರೂ ಎಲ್ಲರೂ ಅವನನ್ನು ಗೌರವಿಸುತ್ತಾರೆ. ಒಡಹುಟ್ಟಿದವರಿಲ್ಲದವರಿಗೆ ವಿದ್ಯೆಯೇ ಸಹೋದರ. ಎಲ್ಲಕಡೆಗಳಲ್ಲೂ ವಿದ್ವಾಂಸನು ಗೌರವಿಸಲ್ಪಡುತ್ತಾನೆ. ರಾಜರೂ ಕೂಡಾ ವಿದ್ವಾಂಸರನ್ನು ಆದರದಿಂದ ಕಂಡು ಪೂಜಿಸುತ್ತಾರೆ. ಅಧನನಿಗೆ ವಿದ್ಯೆಯೇ ಮಹಾಧನ. ಅದರಿಂದಲೇ ವಿದ್ಯಾರ್ಜನೆ ಮಾಡಬೇಕು. ವಿದ್ಯೆಯಿಲ್ಲದವನು ಪಶು ಸಮಾನನು” ಏಂದು ಅವನಿಗೆ ಬುದ್ಧಿ ಮಾತುಗಳನ್ನು ಹೇಳಿದರು.
ಅವರ ಮಾತುಗಳನ್ನು ಕೇಳಿದ ಆ ಹುಡುಗ, ಅವರಿಗೆ ನಮಸ್ಕರಿಸಿ, “ಅಯ್ಯಾ, ನೀವು ಹೇಳುವುದೆಲ್ಲ ನಿಜವೇ! ವಿದ್ಯಾವಂತನು ಪ್ರಶಸ್ತಿ ಪಡೆಯುತ್ತಾನೆ. ನಾನು ಹಿಂದಿನ ಜನ್ಮಗಳಲ್ಲಿ ವಿದ್ಯಾದಾನ ಮಾಡಲಿಲ್ಲ. ಅದರಿಂದಲೇ ಈಗ ನನಗೆ ವಿದ್ಯೆ ಹತ್ತುತ್ತಿಲ್ಲ. ನಾನೇನು ಮಾಡಲಿ? ನೀವೇ ಕೃಪೆಮಾಡಿ ನನ್ನನ್ನು ಉದ್ಧರಿಸಿ. ವಿದ್ಯೆ ಕಲಿಯಲು ಯಾವುದಾದರೂ ಉಪಾಯವನ್ನು ಹೇಳಿ” ಎಂದು ಕೇಳಿಕೊಂಡನು. ಅದಕ್ಕೆ ಆ ಬ್ರಾಹಣರು, “ನಿನಗಿನ್ನು ಈ ಜನ್ಮದಲ್ಲಿ ವಿದ್ಯೆ ಲಭಿಸುವುದಿಲ್ಲ. ಮುಂದಿನ ಜನ್ಮದಲ್ಲಿಯಾದರೂ ವಿದ್ಯಾವಂತನಾಗಲು ಕೃಷಿ ಮಾಡು. ವಿದ್ಯೆಯಿಲ್ಲದ ನೀನು ಪಶು ಸಮಾನನು. ಭಿಕ್ಷೆಯೆತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ನೀನು ಕುಲನಾಶಕನಾಗಿದ್ದೀಯೆ. ವಿದ್ವಾಂಸನ ಮಗನಾಗಿಯೂ ನೀನು ಮತಿಹೀನನಾಗಿದ್ದೀಯೆ” ಎಂದು ನಿಂದಿಸಿದರು. ಆ ಬ್ರಾಹ್ಮಣರ ನಿಂದೆಗಳನ್ನು ಕೇಳಿದ ಅವನಿಗೆ ಒಂದು ತರಹೆಯ ವೈರಾಗ್ಯವುಂಟಾಗಿ, ಹತ್ತಿರದಲ್ಲೇ ಇದ್ದ ಅರಣ್ಯಕ್ಕೆ ಹೋದನು.
ಅಲ್ಲಿಗೆ ಹೋಗಿ, “ನನ್ನನ್ನೆಲ್ಲರೂ ದೂಷಿಸುತ್ತಿದ್ದಾರೆ. ಇನ್ನು ನಾನು ಪ್ರಾಣದಿಂದಿದ್ದೇನು ಪ್ರಯೋಜನ? ನನಗಿಂತಲೂ ನಾಯಿ ಜನ್ಮ ಒಳ್ಳೆಯದು. ಇನ್ನು ಈ ಜೀವನ ಸಾಕು” ಎಂದು ಆಲೋಚಿಸುತ್ತಾ, ಭಿಲ್ಲವಟಿಯನ್ನು ಸೇರಿ, ದೈವವಶಾತ್ ಕೃಷ್ಣಾ ನದಿಯ ಪೂರ್ವ ತೀರದಲ್ಲಿರುವ ಭುವನೇಶ್ವರಿಯ ಗುಡಿಗೆ ಹೋದನು. ಅಲ್ಲಿ ದೇವಿಯ ದರ್ಶನ ಮಾಡಿ, ಪ್ರಾಯೋಪವೇಶ ಮಾಡಲು ನಿರ್ಧರಿಸಿ ಕೂತನು. ಹೀಗೆ ನಿರ್ವಿಣ್ಣ ಮನಸ್ಕನಾದ ಅವನು ಮೂರು ದಿನ ಉಪವಾಸ ಮಾಡುತ್ತಾ ಜಗನ್ಮಾತೆಯನ್ನು ಧ್ಯಾನಿಸುತ್ತಿದ್ದನು. ದೇವಿಯು ಅವನಿಗೆ ಸ್ವಪ್ನ ದರ್ಶನವನ್ನೂ ಕೊಡಲಿಲ್ಲ ಎಂಬ ದುಃಖದಿಂದ, ದೇವಿ ನನ್ನನ್ನು ಉಪೇಕ್ಷಿಸುತ್ತಿದ್ದಾಳೆ ಎಂದು ಆಗ್ರಹಗೊಂಡು, ತನ್ನ ನಾಲಗೆಯನ್ನು ಕತ್ತರಿಸಿ ದೇವಿಯ ಪಾದಗಳಲ್ಲಿಟ್ಟು, “ಅಮ್ಮಾ, ಇನ್ನೂ ನೀನು ನನ್ನನ್ನು ಅನುಗ್ರಹಿಸದಿದ್ದರೆ, ನಾನು ನಾಳೆ ನನ್ನ ತಲೆಯನ್ನು ಕತ್ತರಿಸಿ ನಿನಗೆ ಒಪ್ಪಿಸುತ್ತೇನೆ” ಎಂದು ಘೋರವಾದ ಹರಕೆಯನ್ನು ಮಾಡಿದನು. ಹಾಗೆ ದೃಢವಾದ ಮನಸ್ಸಿನಿಂದ ತನ್ನ ತಲೆಯನ್ನೂ ಅರ್ಪಿಸಲು ಸಿದ್ಧನಾದ ಅವನಿಗೆ ದೇವಿ ಪ್ರತ್ಯಕ್ಷಳಾಗಿ, “ಅಯ್ಯಾ ಬಾಲಕ, ಅನವಶ್ಯಕವಾಗಿ ನನ್ನ ಮೇಲೆ ಏಕೆ ಕೋಪಗೊಳ್ಳುತ್ತೀಯೆ? ನದಿಯ ಪಶ್ಚಿಮ ತೀರದಲ್ಲಿ, ಔದುಂಬರ ವೃಕ್ಷದ ಛಾಯೆಯಲ್ಲಿ ಒಬ್ಬ ಯತಿಯಿದ್ದಾನೆ. ನೀನು ಅವನ ಬಳಿಗೆ ಹೋಗು. ತಪಸ್ಸು ಮಾಡುತ್ತಿರುವ ಆ ಯತಿ ಸಾಕ್ಷಾತ್ತು ಈಶ್ವರನ ಅವತಾರವೇ! ಅವನು ನಿನ್ನ ಇಚ್ಚೆಯನ್ನು ಪೂರೈಸುತ್ತಾನೆ” ಎಂದು ಹೇಳಿದಳು. ಅದರಿಂದ ಸಂತೋಷಗೊಂಡ ಆ ಹುಡುಗ ತಕ್ಷಣವೇ ದೇವಿ ಹೇಳಿದ ಜಾಗಕ್ಕೆ ಹೋಗಿ, ಅಲ್ಲಿ ನೆಲೆಸಿದ್ದ ಶ್ರೀಗುರುವಿನ ದರ್ಶನ ಮಾಡಿ ಅವರನ್ನು ಮನಸ್ಸಿನಲ್ಲಿಯೇ ಸ್ತುತಿಸಿದನು. ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, ಅವನಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಾ ಅವನ ತಲೆಯ ಮೇಲೆ ಕೈಯಿಟ್ಟು ಅನುಗ್ರಹಿಸಿದರು. ತಕ್ಷಣವೇ ಕತ್ತರಿಸಿಕೊಂಡಿದ್ದ ಅವನ ನಾಲಗೆ ಬಂದುದಲ್ಲದೆ, ಅವನು ಸಕಲ ವಿದ್ಯಾ ಪಾರಂಗತನೂ ಆದನು. ಹಾಗೆ ಆ ಮಂದಮತಿ ಮಹಾಜ್ಞಾನಿಯಾಗಿ ಪರಿವರ್ತಿತನಾದನು. ಗುರು ಸ್ಪರ್ಶ ಮಾತ್ರದಿಂದಲೇ ಆ ಮೂಢ ವಿದ್ವಾಂಸನಾದನು. ನಾಮಧಾರಕ, ನೋಡಿದೆಯಾ ಶ್ರೀಗುರುವಿನ ಮಹಿಮೆಯನ್ನು! ಅದನ್ನು ಅರಿತವರಾರು? ಆ ಗುರುವಿಗೇ ಅದು ಗೊತ್ತು” ಎಂದು ಸಿದ್ಧರು ತಾವು ಕಂಡ ವಿಚಿತ್ರ ವಿಶೇಷವನ್ನು ನಾಮಧಾರಕನಿಗೆ ಹೇಳಿದರು.
ಇಲ್ಲಿಗೆ ಹದಿನೇಳನೆಯ ಅಧ್ಯಾಯ ಮುಗಿಯಿತು.