Category Archives: ಲೇಖನಗಳು

I’m back after a short break!

images-4ಇಷ್ಟೊಂದು ನಿರ್ಲಿಪ್ತತೆ ನನ್ನನ್ನು ಯಾವತ್ತೂ ಆವರಿಸಿರಲಿಲ್ಲ. ಸೋತ ಶರಣಾಗತಿಯದ್ದೋ, ವೀರ ವಿಜಯದ್ದೋ ಹಂಗೂ ಅದಕ್ಕಿರಲಿಲ್ಲ. ಇದೇ ವಾಸ್ತವ, ಇದೇ ನಿನ್ನ ಆಪ್ಯಾಯಮಾನ ಸುಸ್ಥಿತಿ ಎಂದು ಪಿಸುಗುಟ್ಟುವ ಹಾಗೆ ಅವ್ಯಾಹತವಾಗಿ ಅದೆಷ್ಟೋ ನಿಟ್ಟುಸಿರುಗಳು ಹೊರಹೊಮ್ಮುತ್ತಾ ಹೆಪ್ಪುಗಟ್ಟಿದ ಮೋಡ ಹನಿಗಳನ್ನುದುರಿಸಿ ಆಕಾಶವನ್ನು ತೊಳೆದು ಶುಭ್ರ ಮಾಡಿದಂತೆ ಮನದಂಗಳವನ್ನು ಸಾರಿಸುತ್ತಿದ್ದವು.  ಇವತ್ತು ಎಲ್ಲಾ ಹೊಸದು. ಮುಗಿಲೆತ್ತರ ನಿಂತ ಮರಗಳು, ಗೂಡು ಸೇರುತ್ತಿರುವ ಹಕ್ಕಿಗಳು ಎಲ್ಲವೂ ಮತ್ತಷ್ಟು ಮಗದಷ್ಟು confident ಆಗಿ ಕಂಡವು. ದೂರದ watchman shed ನಲ್ಲಿ ರೊಟ್ಟಿ ಸುಡುವ ಪರಿಮಳ ಮಳೆಯ ಕಂಪಿನೊಡನೆ ಸ್ಫರ್ಧೆಗೆ ಬಿದ್ದಂತೆ ಹಿತವಾಗಿತ್ತು. ಎಲ್ಲಾ ಕಡೆ ನಿರಮ್ಮಳ. ಜೀವನದ ಅಡೆತಡೆಗಳನ್ನು ಒಂದೊಂದಾಗಿ ದಾಟುತ್ತಾ ಓಡುತ್ತಾ ಸಾಗುವ life ಎಂಬ ರಿಲೇ ರೇಸಿನಲ್ಲಿ ಯಾವುದಕ್ಕೂ ಆತ್ಮರತಿಗೆ ಅವಕಾಶವಿರಲಿಲ್ಲ. Yes, I am that I am. ಊದಿಯೇ ಊದುವ ಕೊಳಲ ಯಾವನೋ ಮರುಳ, ಕೇಳುತ್ತಾ ಕಳೆಯೋಣ ಹೀಗೆಯೇ ಇರುಳ ಎನ್ನುವ ಪರವಶತೆಯ ಸ್ಥಿತಿ ಅಥವಾ ಅದಕ್ಕೂ ಮೀರಿದ್ದು.

ಸಾವಿನಂಚು ಮುಟ್ಟಿ ವಾಪಸ್ಸಾದವವರ ಮನಸ್ಥಿತಿ ಹೇಗಿರುತ್ತದೆ ಎಂಬುದು ಅನುಭವಿಸಿರುವ ನಮ್ಮಲ್ಲನೇಕರಿಗೆ ಗೊತ್ತು. ಆದರೆ ದಿನಾ ಸಾಯುವ ನಮ್ಮಲ್ಲನೇಕರಿಗೆ ಬದುಕನ್ನು ಮೌಲ್ಯಮಾಪಿಸುವ ಕೆಲವೊಂದು parameters,  shift+delete ಆಗಿ ಹೋಗಿರುತ್ತದೆ. ಇವತ್ತು ಓದಿದ English WhatsApp message ಒಂದರ ಸಾರಾಂಶ ಹೀಗಿದೆ. ಒಬ್ಬ ವ್ಯಕ್ತಿ hi tech ಆಸ್ಪತ್ರೆಯಲ್ಲಿ ಹುಟ್ಟಿ, private school ನಲ್ಲಿ ಓದಿ, ದೊಡ್ಡ ಕಾರು ಪಡೆದು, iPhone 6+ ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಮತ್ತೊಬ್ಬ ಮನೆಯಲ್ಲಿ ಹುಟ್ಟಿ, ಸರ್ಕಾರೀ ಶಾಲೆಯಲ್ಲಿ ಓದಿ, ರಸ್ತೆ ಸಾರಿಗೆಯಲ್ಲಿ ಓಡಾಡಿ, ಸಾಧಾರಣ smart phone ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಇಲ್ಲಿ ತಳುಕು ಹಾಕಿಕೊಳ್ಳುವ ಒಂದು ಅಂಶವೆಂದರೆ lifestyle ಅನ್ನೋದು competition ಅಲ್ಲದೇ ಅಲ್ಲ, ದಾರಿ ಬೇರೆ ಬೇರೆಯಾದರೂ ಗಮ್ಯ ಒಂದೇ ಎನ್ನುವುದು. ನಮ್ಮ ಮಗ್ಗುಲಿನವನಲ್ಲಿ ದುಬಾರಿ ವಸ್ತುಗಳಿವೆ ಎಂದ ಮಾತ್ರಕ್ಕೆ ನಾವು failures ಅಲ್ಲ. ಸಂತೋಷವೆಂಬುದು ನಾವು ಹೊಂದಿರುವ ದುಬಾರಿ ವಸ್ತುಗಳು ನಮಗೆ ಕೊಡುತ್ತಿರುವ ಹಿರಿಮೆಯಲ್ಲಿಲ್ಲ. ನಮ್ಮಲ್ಲಿರುವ ಸಾಧಾರಣಾತಿಸಾಧಾರಣ ವಸ್ತುಗಳ ಸಮರ್ಪಕ ಬಳಕೆಯಲ್ಲಿದೆ. Happiness is not having what we like, it is liking what we have and learning to make most of it by giving it. Happiness is a state of mind!!!

ಬಿಡಿ, ಇವೆಲ್ಲಾ ನಮಗೆ ಗೊತ್ತಿಲ್ಲದ್ದೇ..?? ಇಂತಹ ಮಾತು-ಕತೇಲಿ ನಾವು SME ಗಳು. ಎಲ್ಲಿ ಕಮಾನ್ practical ಆಗಿ ಅಳವಡಿಸಿಕೋ ನೋಡೋಣ ಎನ್ನುವ ಸವಾಲನ್ನೇ ಎದುರಿಸಲು ಅನವರತ ಹೊರಟು ಸೋತವರು. ಉತ್ತರ ನಮಗೆ ನಿಚ್ಚಳವಾಗಿ ಗೊತ್ತಿದ್ದರೂ ಬರೆಯಲು ಭಯ. ಎಲ್ಲಿ distinction ನಲ್ಲಿ ಪಾಸಾಗಿ ನೆಲಕಚ್ಚಿಬಿಡುತ್ತೇವೋ ಎನ್ನುವ ವಿಚಿತ್ರ ದಿಗಿಲು! ಸಂತೋಷವಾಗಿರಲು ನಮಗೆ ಏನೆಲ್ಲಾ ಬೇಕು ಎನ್ನುವುದರ ಬ್ರಹ್ಮಾಂಡದುದ್ದದ list ನಮ್ಮ ಬಳಿಯಿದೆ. ಒಳ್ಳೆಯ ಗಂಡ/ಹೆಂಡತಿ, ಕಾರು, ಬ್ಯಾಂಕ್ ಬ್ಯಾಲೆನ್ಸ್, gym, healthy food, lifestyle, ಗೆಳೆಯ/ಗೆಳತಿ, ಕೊನೇ…ಗೆ ಆರೋಗ್ಯ, ಸ್ವಾತಂತ್ರ್ಯ…ಹೀಗೇ ಪಟ್ಟಿ endless ಆಗುತ್ತದೆ. ಅಯ್ಯೋ ಹೋಗಮ್ಮ, ಇದೆಲ್ಲಾ ಹೊಟ್ಟೆ ತುಂಬಿದವರ wants, ನಮ್ಮದು ಬೇರೆನೇ ಇದೆ ಅಂತೀರಾ? ಅದಕ್ಕೂ ಬರ್ತೀನಿ ಇರಿ. ಚೈನಾ ದ ಕವಿಯೊಬ್ಬನ ಬಗ್ಗೆ  ಒಂದು ಲೇಖನದಲ್ಲಿ ಓದುತ್ತಿದ್ದೆ. ಅವನ ಹೆಸರು L. ಎಲ್ಲೆಲ್ಲಿ ಹುಡುಕಿದರೂ ಸಿಗೋದೇ ಅಷ್ಟು L! ಅವನ ಕವನಗಳು ಮಾತ್ರ ವಿಪರೀತ ಹರಿತ. ಎಷ್ಟರಮಟ್ಟಿಗೆ ಬರೆಯುತ್ತಾನೆಂದರೆ ಮೊದಮೊದಲು ಕನ್ನಡಿಯಲ್ಲಿ ಕಾಣುತ್ತಿದ್ದ ನನ್ನ ಮುಖ ಈಗ ಕಾಣುತ್ತಿಲ್ಲ, ನನ್ನ boss ನ ಮುಖ ಕಾಣುತ್ತದೆ ಎನ್ನುತ್ತಾನೆ. ಕೊನೆಗೆ ಅದೂ ಇಲ್ಲ ಬರೀ ಡಾಲರುಗಳು ಕಾಣುತ್ತವೆ ಎನ್ನುತ್ತಾನೆ. ನಮಗೂ ಹಾಗೇ ಆಗಿದೆ. ನಮ್ಮ limits ನಮಗೆ ಗೊತ್ತಾದರೂ ಒಪ್ಪಿಕೊಳ್ಳುವ ತಾಕತ್ತು ನಮ್ಮ ಆಂತರ್ಯ ಕಳೆದುಕೊಂಡಿದೆ. ಕನ್ನಡಿಯಲ್ಲಿ ನಮ್ಮ ಮುಖ ನಮಗೆ ಹೇಗೆ ಕಂಡೀತು? ಎಡವನ್ನು ಬಲ ಮಾಡಿ, ಬಲವನ್ನು ಎಡ ಮಾಡಿ ಕನ್ನಡಿಯಂತೂ ತೋರಿಸುವ ಕೆಲಸ ಮಾಡುತ್ತಲೇ ಇದೆ. ಆದರೆ ನಮ್ಮ ಮುಖ ನಮಗೆ ಕಾಣುತ್ತಲೇ ಇಲ್ಲ. ಇಷ್ಟೊಂದು ಹಣೆ ನೆರಿಗೆ, ಈಗಾಗಲೇ ಇಷ್ಟು ದಪ್ಪವೇ, ಕೂದಲು ಬಿಳಿ, ಬೊಕ್ಕ ತಲೆ, ಇಲ್ಲ ಇಲ್ಲ ಇದು ನಾನಲ್ಲ, ನಮ್ಮ (ನಮಗೆ ಬೇಕಾದ) ಮುಖ ನಮಗೆ ಕಾಣಿಸುತ್ತಲೇ ಇಲ್ಲ. ಆದರೆ ವಿಚಿತ್ರ ನೋಡಿ, ನಮ್ಮ ಗಂಡ/ಹೆಂಡತಿ, ಮಕ್ಕಳು, ಮತ್ತು ಸಮಾಜದ ಕಣ್ಣಿಗೆ ನಮ್ಮ ಮುಖ ಕಾಣಿಸುತ್ತಿದೆ. ಪರಿಚಯಸ್ತರೆಲ್ಲಾ ಇದೇನು ಹೀಗಾಗಿ ಹೋದೆ, ಹುಷಾರಿಲ್ಲವೇ? ಎಂದು ಲೊಚಗುಡುತ್ತಾರೆ. ಅಂದರೆ …….ನಾವು ಸತ್ತಿಲ್ಲ, ಬದುಕಿದ್ದೇವೆ! ಬೇರೆಯವರ ದೃಷ್ಟಿಯಿಂದ, ಬೇರೆಯವರಿಗಾಗಿ ಬದುಕಿದ್ದೇವೆ. ಹಾಗಾದರೆ ನಮಗೆ ನಾವು ಯಾವತ್ತೋ ಸತ್ತಾಗಿದೆ, ಹೌದಾ!? ಬದುಕೆಂದರೆ ಇದೇನಾ ಅಥವಾ ಇದೇ ಸಾವಾ? ಬದುಕಿದ್ದರೆ ಸಂತೋಷ ಬೇಕು OK  ಸತ್ತಮೇಲೆ ಅವೆಲ್ಲಾ ಏಕೆ? ಹಾಗಾದರೆ  in reality ನಮಗೆ ಏನು ಬೇಕು? ತುಂಬಾ ತುಂಬಾ ಪ್ರೀತಿನಾ, ಕಾಮನಾ, ಹಣವಾ, ಹೊಗಳಿಕೆ ಯಾ..ಏನು? ಏನು???

ಕುವೆಂಪು ಹೇಳಿದರು,

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ

ಹರಿವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ

ದನಿಯು ದನಕಾಯುವನ ಕೊಳಲೊಡನೆ ಬರಲಿ.

ಬಾಂದಳದಿ ಹಾರಿದರು ಭುವಿಯಲ್ಲಿ ಜಾರುತಿಹ

ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.

ಬೈಗಾಗೆ ನಮ್ಮೊಡನೆ ಗೆಳಪಿಯಲೆದದ್ದಾಡೆ

ಗೋಪಾಲನಾಗಿರುವ ತಿಮ್ಮನೆನಗಿರಲಿ.

ನಮಗೂ ಇದೇ ಮತ್ತು ಇಷ್ಟೇ ಬೇಕೇ? ನಾವಿವತ್ತು ಅನುನಯದ ಕೊಳಲನ್ನು ಮೂಲೆಗೆಸೆದು ಅನುರಣದ ಶಂಖವನ್ನು ಕೈಗೆತ್ತಿಕೊಂಡಾಗಿದೆ. ಗೋಕುಲ ಯಾವಾಗಲೋ ಬಿಟ್ಟು ಮಥುರೆಯ permanent ಆಧಾರ್ ಕಾಡ್೯ ಹೋಲ್ಡರ್ ಗಳಾಗಿದ್ದೇವೆ. ಬಿಲಿಯನಿಯರ್ಗಳಾಗಿರುವ ಫಾರಿನ್ ನಲ್ಲಿ settle ಆಗಿರುವ ನಮ್ಮ ಸ್ನೇಹಿತರು, ಅಂಕಲ್, ಆಂಟಿ, ಕಸಿನ್ನು ಆಗಿರುವ ಅಕ್ರೂರರು ಪದೇ ಪದೇ ನಮ್ಮನ್ನು ಭಡಕಾಯಿಸುತ್ತಲೇ ಇದ್ದಾರೆ. ನಮ್ಮೊಳಗೆ ಕೃಷ್ಣ ಬಲರಾಮರಿಬ್ಬರೂ ನಮಗರಿವಿಲ್ಲದೆಯೇ ಒಂದಾಗಿಬಿಟ್ಟಿದ್ದಾರೆ!

ಮೊನ್ನೆ ಮಲ್ಯ ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಾಗ ಬರುತ್ತಿದ್ದ ಭಾವನೆಗಳಿವು. ಹೊರಟಾಗ ನಾನೊಬ್ಬಳೇ. ಗಂಡ, ಮಗ ಯಾರೂ ಊರಿನಲ್ಲಿಲ್ಲ. ಬಾಬು ಆಗಿನ್ನೂ ಎದ್ದಿದ್ದ. ಕರೆಮಾಡಿದಾಗ ಹೇಳಿದ ‘ಈ ಸ್ಥಿತಿಯಲ್ಲಿ ತಡಮಾಡಬೇಡ, ಬೇಗ ಹೊರಡು, ಆಸ್ಪತ್ರೆಗೆ ನಾನು ನೇರವಾಗಿ ಬರುತ್ತೇನೆ.’ Ola ದಲ್ಲಿ ಅರ್ಧ ದಾರಿಯಲ್ಲೇ ಪುಷ್ಪ ಅತ್ತೆಯ ಕರೆ ಬಂತು. ‘ಒಬ್ಬಳೇ ಹೇಗೆ ಹೊರಟೆಯಮ್ಮಾ, ಹತ್ತಿರದ ಆಸ್ಪತ್ರೆಗೆ ಸೇರ್ಕೊಳ್ಳೇ, ‘ ಆತಂಕ ವ್ಯಕ್ತಪಡಿಸಿದರು. Emergency room ಗೆ ದೌಡಾಯಿಸುತ್ತಿರುವ ನನ್ನ ಹಿಂದೆ ola ಹುಡುಗ ಓಡಿ ಬರುತ್ತಿದ್ದಾನೆ. ಅಕ್ಕಾ..ನನ್ನ ಕೈ ಹಿಡ್ಕಳಕ್ಕಾ ಎನ್ನುತ್ತಾನೆ. ಅಲ್ಲಂತೂ ಡಾಕ್ಟರ್ ಗಳು ECG, IV, oxygen mask, injection ಏನೇನೋ ಹಾಕುತ್ತಿದ್ದಾರೆ. ಉಹೂಂ, ನನಗಿವೆಲ್ಲಾ ಬೇಡ! ನನ್ನ ಮುಖ ಇದಲ್ಲವಲ್ಲಾ? ನಾನು ಎದ್ದು ಕೂಡುತ್ತೇನೆ. ನನ್ನನ್ನು patient ರೀತಿ ಮಲಗಿಸಲು ಹರಸಾಹಸ ಮಾಡುತ್ತಿದ್ದಾರೆ. ಉಮಕ್ಕ ಪೋನ್ ಮಾಡುತ್ತಾಳೆ, ಏನೂ ಆಗಿಲ್ಲದವಳಂತೆ ಮುದ್ದುಗರೆಯುತ್ತೇನೆ. ‘ಒಬ್ಬಳೇ ola ಮಾಡ್ಕೊಂಡು ಹೊರಟುಹೋಗ್ತಾರೇನೋ ಕಂದಾ..ದಾರಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ’..ಬಿಕ್ಕಿಬಿಕ್ಕಿ ಅಳ್ತಾಳೆ. ಪ್ರಥಮ ಚಿಕಿತ್ಸೆಯ ತರುವಾಯ ವಾರ್ಡಿಗೆ ಶಿಪ್ಟು ಮಾಡಲು ನನ್ನ ಕಡೆಯ attendant ಬೇಕು.  ನಾನು oxygen mask ತೆಗೆದು ಪ್ರಾಣಾಯಾಮ ಮಾಡುತ್ತೇನೆ, iv ಚುಚ್ಚಿದ ಕೈಗಳಲ್ಲೇ ಅಪಾನವಾಯು ಮುದ್ರ ಹಿಡಿಯುತ್ತೇನೆ. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೇ..sister ಗಳು doctor ಗಳು ಅಚ್ಚರಿಯ (ಅಸಹಾಯಕ!?) ನಗೆಬೀರುತ್ತಾರೆ. ಅಷ್ಟರಲ್ಲಿ ಬಂದ ಬಾಬು ‘ಧಿಮ್ಮನೆ ರಂಗಾ’ ಎಂದು ಕೂತಿದ್ದ ನನ್ನನ್ನು ಅಪ್ಪಿಕೊಂಡೊಡನೆಯೇ ಎಲ್ಲಿತ್ತೋ ಅಳು ಮುಳು ಮುಳು ಹೊರಬರುತ್ತದೆ. Doctor, my brother has come, you can shift me to ward now, ಸಂತೋಷದಿಂದ ಅಳುತ್ತೇನೆ. ಇದು ಸಂತೋಷವಾ, ದುಃಖವಾ, ನಾನು ಉಳಿಯುತ್ತೇನಾ, ಸಾಯುತ್ತೇನಾ? ಒಂದೂ ಗೊತ್ತಿಲ್ಲ. Wheelchair ಬೇಡ ಎನ್ನುತ್ತೇನೆ. ಇದೆಲ್ಲಾ ಬೇಡ ಕಣೋ lift ನಲ್ಲಿ ಹೋಗೋಣ, ಅಲ್ಲಿಯವರೆಗೂ ನಡೀತಿನಿ ಎಂದು ಬಾಬಣ್ಣನ ಕೈ ಹಿಡಿದು ಅಂಗಲಾಚುತ್ತೇನೆ. ಡಾಕ್ಟರ್ ನಿರಾಕರಿಸುತ್ತಾರೆ. ಬಾಬಣ್ಣ ಅಳಲಾಗದೇ ನಗುತ್ತಾನೆ. ‘ಕೂತ್ಕೊಳೆ ಏನಾಗುಲ್ಲ, ಇದೊಂದು ಥರ ಸನ್ಮಾನ ಕಣೆ ನಿಂಗೆ. ನೋಡು, ಕಲರ್ ಕಲರ್ ಪ್ಯಾಂಟು ಶರಟು, ಮ್ಯಾಚಿಂಗ್ ವಾಚು, ನಾನು ನಿನ್ನ ಜೊತೆಗೆ ಇರ್ತೀನಿ’ ಎನ್ನುತ್ತಾ ತಾನೇ wheelchair ಹಿಡಿದು ನಿಲ್ತಾನೆ. ಸಿಬ್ಬಂದಿ ವರ್ಗದ ಜನರ ಮೇಲೆ ಕೂಗಾಡಿ ಗಾಳಿ ಬೆಳಕು ಇರುವ ರೂಮ್ ವ್ಯವಸ್ಥೆ ಮಾಡ್ತಾನೆ. ಅರ್ಧ ಇಡ್ಲಿ ಬಲವಂತವಾಗಿ ತಿನ್ನುವ ಹಾಗೆ ಮಾಡ್ತಾನೆ. ನನಗೆ ಮಂಪರು ಕವಿಯುತ್ತದೆ.

ಅವತ್ತು TMT positive ಬರುತ್ತದೆ. Angiogram ಗೆ cathlab ಸೇರುತ್ತೇನೆ. ರಾತ್ರಿ ಯಮಯಾತನೆ. ಕಾಲು ಮಡಿಚುವಂತಿಲ್ಲ, ಏಳಲು ಸಾಧ್ಯವಿಲ್ಲ. ನೆನ್ನೆ ಬಾಬಣ್ಣನಿಂದ  ಬೈಯಿಸಿಕೊಂಡಿದ್ದ sister ಅನ್ನು ಅಣ್ಣ ಬಾಗಿಲಲ್ಲಿ ಮೆಲುಧ್ವನಿಯಲ್ಲಿ angiogram results ಕೇಳುತ್ತಾನೆ. ‘ಕೊತ್ತಿಲ್ಲಾ ಸಾರ್, ಟಾಕ್ಟರ್ went off, ಡಿ. ಎಂ. ಡಿ. ವಾಸ್ ಪೋಸಿಟಿವ್ ನೋ’ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಡುತ್ತಾಳೆ. ಬೋನಲ್ಲಿ ಕೂಡಿಟ್ಟ ಹುಲಿಯಂತಿರುವ ನನ್ನನ್ನು ಬಾಬಣ್ಣ ತರಾವರಿ ತಮಾಷೆ ಮಾಡುತ್ತಾನೆ. ಸೂಜಿ ಕಂಡರೆ ಹೆದರುವ ಮತ್ತು ಅದಕ್ಕಾಗಿ blood tests postpone ಮಾಡಿಕೊಳ್ಳುವ ಬಾಬಣ್ಣ ನನಗೆ ಊಟಮಾಡಿಸಿ sister ಅನ್ನು ಕರೆದು ಈಗ ಏನೇನು injections ಕೊಡ್ತೀರೋ ಕೊಡಿ ಎನ್ನುತ್ತಾನೆ. ಶಾಮೂ ಇದ್ದಿದ್ದರೆ ಇಬ್ಬರೂ ಸೇರಿ ಇಷ್ಟು ಹೊತ್ತಿಗೆ ನಿನ್ನ ಮನೆಗೇ ಕರ್ಕೊಂಡು ಹೋಗಿರ್ತಿದ್ವಿ ಎಂದು ನನ್ನನ್ನೂ ಹನಿಗಣ್ಣಾಗಿಸಿ ತಾನೂ ಗದ್ಗದಿತನಾಗುತ್ತಾನೆ. ‘ಎಲ್ಲಾ normal ಕಣೇ, ಅದಕ್ಕೇ ಡಾಕ್ಟರ್ ಹಾಗೇ ಹೋಗಿರೋದು, ನಾಳೆ ಮನೆಗೆ ಬಾ’ ತಲೆಸವರುತ್ತಾನೆ. ಹೌದು, ಈ ಬಾಬಣ್ಣ ನಿಜಕ್ಕೂ ಕುವೆಂಪು ಹೇಳಿದ ತಿಮ್ಮ. ಅದೇ ಸಮಯದಲ್ಲಿ  ಶಾಮ ಪೋನಾಯಿಸಿ ನನ್ನ ವರಸೆ ಕೇಳಿ ‘ನೀನೇ ಡಾಕ್ಟರ್ ಆಗೋಕ್ಕೆ ಹೋಗಬೇಡ್ವೇ..ನಿನಗೇನಾದ್ರೂ ಆಗೋದಾದ್ರೆ ನಾನು ಅಲ್ಲಿ ಇದ್ದೇ ಇರ್ತಿದ್ದೆ, ನಿನ್ನ heart ಏನೂ ಆಗಿಲ್ಲ, ಊರಿಗೆ ಬಂದ ತಕ್ಷಣ ಬರ್ತೀನಿ, ಚೆನ್ನಾಗಿ ನಿದ್ರೆಮಾಡು, ಧ್ಯಾನ ಮಾಡು’ ಎಂದು  ಪ್ರೀತಿಯಿಂದ ಗದರುತ್ತಾನೆ. ಇವನು ಇನ್ನೊಬ್ಬ ತಿಮ್ಮ!

ಯಾವುದು ಹೇಗೇ ಆಗಲಿ, ವನಮಾಲಿ ಎಂದಿಗೂ ಕೊಳಲ ಗಾನ ನಿಲ್ಲಿಸದಿರಲಿ! ಇಂತಹ ತಿಮ್ಮಂದಿರು ಎಲ್ಲರಿಗೂ ಸಿಗಲಿ!!!

Leave a comment

Filed under ಲೇಖನಗಳು

ಅಬ್ಬೇಪಾರಿ ಮತ್ತು ಕಳ್ಳಾ ಪುಲಿ (ಗೆಳತಿಗೊಂದು ಪತ್ರ)

images

ನಿಮ್ಮ ಮಗ ಅಥವಾ ಮಗಳು ಮುಂದೆ ಏನಾಗಬೇಕೆಂದು ನೀವು ಬಯಸುತ್ತೀರಿ?

Self -aware parenting ಬಗ್ಗೆ ChicagoNow ನಲ್ಲಿನ ಲೇಖನವೊಂದನ್ನು ಇತ್ತೀಚಿಗೆ ಓದುತ್ತಿರುವಾಗ ಅನೇಕ ವಿಚಾರಗಳು ಕಣ್ಮುಂದೆ ಬಂದವು. ಈ ಲೇಖನದ ಲೇಖಕಿ ಒಬ್ಬ motivational writer . ಇವರಿಗೆ ಪತ್ರ ಬರೆಯುವ ಅನೇಕರು ತಮ್ಮ ಮಕ್ಕಳನ್ನು ಈ ವರ್ಷಕ್ಕಿಂತ ಮುಂದಿನ ವರ್ಷ ತಮ್ಮ ಶಾಲಾ ವಿಷಯಗಳಲ್ಲಿ ಹೇಗೆ ಮುಂದೆ ತರುವುದು, ಅವರ ಅಂಕಗಳನ್ನು ಹೆಚ್ಚಿಸುವ ಬಗೆ ಹೇಗೆ ಎನ್ನುವ ವಿಚಾರಗಳನ್ನೇ ಚರ್ಚಿಸುತ್ತಾರೆ. ಬೇಸಿಗೆ ರಜೆ ಅವಧಿಯಲ್ಲಿ ತಮ್ಮ ಮಕ್ಕಳನ್ನು ಯಾವರೀತಿಯಲ್ಲಿ engage ಮಾಡುವುದು ಎನ್ನುವ ಬಗ್ಗೆಯೂ ಲೇಖಕಿಯ ಅಭಿಪ್ರಾಯ ಕೇಳುತ್ತಾರೆ. ಮುಂದೆ ಓದುತ್ತಾ ಹೋದಂತೆಲ್ಲಾ ಲೇಖಕಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ರ್ಯ ಮತ್ತು ಅವರನ್ನು ಕಾಡುವ ಅನೇಕ anxiety ಸಮಸ್ಯೆಗಳು ಮತ್ತು ಅದರಿಂದ ಹೊರತರುವ ಬಗ್ಗೆ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸಾಗುವಾಗ ಒಂದು race to nowhere ಎನ್ನುವ documentary ನೆನಪಿಗೆ ಬರುತ್ತದೆ. ಇದರ ಕರ್ತೃ ವಿಕಿ ಅಬ್ಲೆಸ್  ತನ್ನ ಮಗಳು ಅನುಭವಿಸಿದ ವಿಚಿತ್ರ anxiety ಸಮಸ್ಯೆಗಳು ಮತ್ತು ಶಾಲೆಯ stress ನ ಬಗ್ಗೆ ಅಧ್ಯಯನ ಮಾಡಿ ಬರೆದು ನಿರ್ಮಿಸಿರುವ ಡಾಕ್ಯುಮೆಂಟರಿ ಇದು. ನೀವಿದನ್ನು ನೋಡಿಲ್ಲದಿದ್ದಲ್ಲಿ ಈ URL ನಲ್ಲಿ ವೀಕ್ಷಿಸಬಹುದು.

https://www.youtube.com/watch?v=GAxoSd7BJiY .

ವೀಕ್ಷಿಸಲು ಸೋಮಾರಿತನವಿದ್ದವರಿಗೆ ಇದೋ ಈ ಡಾಕ್ಯುಮೆಂಟರಿಯ Plot summary

RACE TO NOWHERE is a close-up look at the pressures on today’s students, offering an intimate view of lives packed with activities, leaving little room for down-time or family time. Parents today are expected to raise high-achieving children, who are good at everything: academics, sports, the arts, community-service. The film tackles the tragic side of our often achievement-obsessed culture, with interviews that explore the hidden world of over-burdened schedules, student suicide, academic cheating, young people who have checked out. RACE TO NOWHERE asks the question: Are the young people of today prepared to step fully and productively into their future? We hear from students who feel they are being pushed to the brink, educators who worry students aren’t learning anything substantive, and college professors and business leaders, concerned their incoming employees lack the skills needed to succeed in the business world: passion, creativity, and internal motivation.

ಇದನ್ನು ಓದಿದ ಅಥವಾ ನೋಡಿದ ನಂತರ ನಿಮ್ಮಲ್ಲಿ ಕೆಲವರು ಇದನ್ನು ಅತಿಯಾಗಿ ಮೆಚ್ಚಲೂ ಬಹುದು. ಕೆಲವರು ಕೈಲಾಗದವರ ಮೈಪರಚಿಕೊಳ್ಳುವಿಕೆಯಂತಿದೆ ಎಂದು ಸಮರ್ಥನೆಯನ್ನೂ ಕೊಡಬಹುದು. ಇಲ್ಲಿ ಮಧ್ಯೆ ಮಧ್ಯೆ ಇಣುಕುವ ಹದಿಹರೆಯದವರ ಆತ್ಮಹತ್ಯೆ, ಸಮೂಹಮಾಧ್ಯಮಗಳು ಬೀರುತ್ತಿರುವ ಪ್ರಭಾವ, ಪೋಷಕರ ಸಂಪಾದನೆಯಲ್ಲಿರುವ ಏರುಪೇರುಗಳು ಎಲ್ಲವಕ್ಕೂ ಶಿಕ್ಷಣದ ಪದ್ಧತಿಯೇ ಗುರಿಯೇ ಎಂದು ನೀವು ವಾದಿಸಲೂ ಬಹುದು. ಇವೆಲ್ಲಾ ಏನೇ ಇರಲಿ, ನಾವೆಲ್ಲರೂ ನಮ್ಮ ಮಕ್ಕಳು ಮುಂದೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಹಾಗೂ ಸಾಮಾಜಿಕ ವ್ಯಕ್ತಿತ್ವದಲ್ಲೂ ಮೇರು ಸ್ಥಾನ ಗಳಿಸಲಿ ಎಂದು ಖಂಡಿತಾ ಆಶಿಸುತ್ತಿರುತ್ತೇವೆ. ಆದರೆ ಕೆಲವು ಮಕ್ಕಳಿಗೆ ಇದು ಸಾಧ್ಯವಾದರೆ ಮತ್ತೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಒಂದೇ ತಂದೆ-ತಾಯಿಯರ ಎರಡು ಮಕ್ಕಳಲ್ಲಿ ಒಂದೇ ಬಗೆಯ ಬುದ್ಧಿಶಕ್ತಿ ಕಾಣಸಿಗುವುದಿಲ್ಲ ಮತ್ತು ಕೆಲವೊಮ್ಮೆ ಇಬ್ಬರೂ ಬುದ್ಧಿವಂತರಾದ ಉದಾಹರಣೆಯೂ ಇರುತ್ತವೆ. ನಮ್ಮ ದೇಶದ ಅಂಕಿ-ಅಂಶಗಳನ್ನೇ ತೆಗೆದುಕೊಂಡರೂ ಅನೇಕ ಕಡಿಮೆ ಸೌಲಭ್ಯ ಹೊಂದಿದ ಗ್ರಾಮೀಣ ಮಕ್ಕಳು ಉನ್ನತ ಸ್ಥಾನಕ್ಕೇರಿರುವ ಉದಾಹರಣೆಗಳಿವೆ. ಎಲ್ಲಾ ಸೌಲಭ್ಯ ಹೊಂದಿರುವ ಮಕ್ಕಳು ಹಿಂದುಳಿವ ಸಾಧ್ಯತೆಗಳೂ ಇವೆ. ಈ ಎಲ್ಲ ವೈವಿಧ್ಯಗಳು ಏಕೆ ಮಕ್ಕಳಲ್ಲಿ ಕಾಣಸಿಗುತ್ತವೆ. ಇವುಗಳ ಕಾರಣಗಳೇನು? 

ಮೊದಲನೆಯಾದಾಗಿ ಸ್ವಾಭಾವಿಕವಾಗಿ ಅನುವಂಶೀಯವಾಗಿ ಬಂದಿರುವ ಬುದ್ಧಿಶಕ್ತಿ, ತಾಯಿಯ ಗರ್ಭಾವಸ್ಥೆಯಲ್ಲಿ ತಗುಲಿರಬಹುದಾದ ಏನಾದರು ಸೋಂಕುಗಳ ಅಥವಾ ದುಶ್ಚಟಗಳ ಪ್ರಭಾವ, ಶಿಶುವಿನ ಜನನಾನಂತರ ಬಂದಿರಬಹುದಾದ ಆರೋಗ್ಯದ ಏರುಪೇರು, ಅಪಘಾತಗಳು (ದೈಹಿಕ-ಮಾನಸಿಕ), ಮತ್ತು ಕೊನೆಯದಾಗಿ stress handling threshold (ಇದಕ್ಕೆ ಪೂರಕವಾಗುವ ಮನೆಯ ವಾತಾವರಣ, ಸಾಮಾಜಿಕ ವಾತಾವರಣ ಹಾಗೂ ತಂದೆತಾಯಿಗಳ ಪ್ರೋತ್ಸಾಹ) ಇವೆಲ್ಲವುಗಳಿಂದ ಒಂದು ಮಗುವಿನ ಜೀವನದ ಗಟ್ಟಿತನ ನಿರ್ಧಾರವಾಗುತ್ತದೆ. ಎಷ್ಟೋಸಾರಿ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಮಗುವಿಗೆ ಬೇಕಾದ ಭದ್ರತೆ ಕೊಡಲು ಸೋತಿರುತ್ತಾರೆ; ಅಥವಾ ಅನವಶ್ಯಕ ಓವರ್-ಪ್ರೊಟೆಕ್ಷನ್ ಕೊಟ್ಟು ಮಗುವನ್ನು ಸೋಲಿಸುತ್ತಾರೆ. ಇಲ್ಲಿ ಎಲ್ಲಾ ಕಡೆಯಲ್ಲೂ ಶೈಕ್ಷಣಿಕ ಪದ್ಧತಿಯನ್ನೇ ದೂರುವುದು ಸಮಂಜಸವಲ್ಲ. ಜೊತೆಗೆ ತಮ್ಮ ಬದುಕನ್ನು ಮಗುವಿನ ಮೂಲಕ ಬದುಕುವ ಅನೇಕ ತಾಯ್ತಂದೆಗಳ ಧೋರಣೆಯೂ ಸಮಂಜಸವಲ್ಲ. ಬದುಕಿಗೆ ಪುರುಷಾಕಾರ ಪ್ರಧಾನವಾದ ಮಹತ್ವಾಕಾ0ಕ್ಷೆಗಳನ್ನು ಬಿಡುವುದೂ ಅಲ್ಲ. ಪ್ರಯತ್ನ, ಛಲ, ಸಾಧನೆ, ಶ್ರದ್ಧೆಗಳ ಮೊದಲ ಪಾಠ ಮನೆಯಲ್ಲಿ ಆಗಲೇಬೇಕು. ಎಲ್ಲಾ ತಾಯ್ತಂದೆಗಳೂ ಎಲ್ಲದರಲ್ಲೂ ಪರಿಪಕ್ವರಲ್ಲ ಹಾಗೆಯೇ ಅವರವರ ಮಕ್ಕಳೂ ಕೂಡ! ಪ್ರತಿಯೊಬ್ಬರೂ ಮೊದಲನೆಯದಾಗಿ ಮಗುವಿನ ಆರೋಗ್ಯ, ಓದು ಬರಹದ ಜೊತೆಗೆ ಸಮಾಜದಲ್ಲಿ ಅವನು/ಅವಳು ಹೇಗೆ ಹೊಂದಿಕೊಂಡು ಬಾಳುವುದು ಎನ್ನುವುದರ ಅರಿವು ಮಗುವಿನಲ್ಲಿ ಮೂಡಿಸಬೇಕಾಗುತ್ತದೆ. ವೈರುಧ್ಯಗಳ ಜೊತೆ, ವೈಪರೀತ್ಯಗಳ ಜೊತೆ ಹೋರಾಡುವ ಮಾನಸಿಕ ಶಕ್ತಿಯನ್ನೂ ಬೆಳೆಸಿಕೊಳ್ಳುವ ಬಗ್ಗೆ ಜ್ಞಾನ ಕೊಡಬೇಕಾಗುತ್ತದೆ. ಇದೆಲ್ಲಾ ಮಾಡಿದ ನಂತರವೂ ಮಗು ಹಿಂದುಳಿದಿದ್ದೇ ಆದರೆ ವಿಧಿಯನ್ನು ದೂರುವುದೇ?………..

ಖಂಡಿತಾ ಅಲ್ಲ. ಬದುಕು ಎನ್ನುವುದು ಒಂದು ದಿನದ ಆಟವಲ್ಲ, ಇದು ನಿರಂತರ ಬದಲಾವಣೆಗಳ, ಪ್ರಯತ್ನಗಳ, ಪರೀಕ್ಷೆಗಳ ಪ್ರಯೋಗಶಾಲೆ. ಇಲ್ಲಿ ತಂದೆತಾಯ್ಗಳೂ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಮತ್ತು ಮಕ್ಕಳೂ ಹೋರಾಟಗಾರರಾಗಬೇಕಾಗುತ್ತದೆ. ಕಷ್ಟಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಕೂರುವಂತಿಲ್ಲ, ಮರಳಿ ಯತ್ನವ ಮಾಡಿ ಗುರಿಸಾಧಿಸುವ ಛಲ ಬೆಳೆಸಿಕೊಳ್ಳುವ ಆತ್ಮ ಬಲ ಮಕ್ಕಳಲ್ಲಿ ಬೆಳೆಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಸಂಪಾದಿಸುವ ಎಲ್ಲರೂ ತಮ್ಮ ಕೆಲಸವನ್ನು ಪ್ರೀತಿಸುತ್ತಿರಲಾರರು, ದೊಡ್ಡ ಓದು ಓದಿಕೊಂಡ ಎಲ್ಲರೂ ಸಂತೋಷವಾಗಿರುತ್ತಾರೆಂದುಕೊಂಡರೆ ಅದೂ ಸರಿಯಲ್ಲ. ಇಷ್ಟ ಪಟ್ಟು, ಕಷ್ಟಪಟ್ಟು ಕಲಿತು, ಮಾಡುವ ಕೆಲಸದಲ್ಲಿ ನೆಮ್ಮದಿ ಕಾಣುತ್ತಾ, ಸಾಮಾಜಿಕ ಜವಾಬ್ದಾರಿಗಳನ್ನೂ ಜೊತೆಯಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನೂ ಸರಿತೂಗಿಸುವ contentment ಇರುವ ಬದುಕು ಸರ್ವಕಾಲೀನ ಸುಂದರ. ಈ ಹಂತ ತಲುಪುವವರೆಗೂ ಹೋರಾಟ ತಪ್ಪಿದ್ದಲ್ಲ, ಅಲ್ಲವೇ?

ನಿರಂತರ ತಲೆ ಕೆಡಿಸಿಕೊಂಡು ಪೇಚಾಡುವ ನನ್ನ ಆತ್ಮೀಯ ಗೆಳತಿಯೇ ಈ ನಿರಂತರ ಹೋರಾಟದಲ್ಲಿ ತೊಡಗಿರುವ ನಿನಗೂ ಒಂದು ಜೀವನವಿದೆ. ಬದುಕಿನ lighter side ಗೂ ಒಮ್ಮೊಮ್ಮೆ ನೀನು ನಿನ್ನ ಮನಸ್ಸನ್ನು ತಂದು ರಿಫ್ರೆಶ್ ಮಾಡಿಕೊಳ್ಳದಿದ್ದರೆ ನಿರಂತರ ಮನೋರೋಗಿಯಾದೇಯೆ!

 ಒಂದು ವಿಷಯ ಹೇಳೋದಿತ್ತು ನಿನಗೆ! ಮನೆಯಿಂದ ಹೊರಗೆ ನಾನು ಇಣುಕಿ ಮೊನ್ನೆಗೆ ಸರಿಯಾಗಿ 15 ದಿನಗಳಾಗಿತ್ತು. ಕಳೆದ ವಾರ ಬಂದಿದ್ದ ನನ್ನ ಶಾಮಣ್ಣನೆದುರು ‘ಯಾಕೋ ತಲೆ ಒಂಥರಾ ಆಗುತ್ತೆ ಕಣೋ, ಈ viral fever ನ ನಂತರ’ ಎಂದು ಪೇಚಾಡಿಕೊಂಡೆ. ಅದಕ್ಕವನು ಅಯ್ಯೋ ಅಷ್ಟೇ ತಾನೇ ಎನ್ನುವ ಹಾಗೆ “ಮನೆಯಿಂದ ಹೊರಗೇ ಹೋಗುತ್ತಿಲ್ಲ ನೀನು ಅನ್ಸುತ್ತೆ ಕಣೆ. ಹೊರಗೆ ನಾಲ್ಕು ಹೆಜ್ಜೆ ಹಾಕಿಕೊಂಡು ಬಾ, ಎಲ್ಲಾ ಸರಿಹೋಗುತ್ತೆ” ಎಂದು ಸುಲಭೋಪಾಯ ಸೂಚಿಸಿದ. ಅವನು ಹೇಳಿದ್ದು ನಿಜ, ಚಿಕ್ಕ ವಯಸ್ಸಿಂದಲೂ ತಿರುಗಿದ ಜೀವ, ಈಗ ಮನೇಲಿ ಕೂತರೆ ಇಲ್ಲದ ಸಮಸ್ಯೆಗಳು. ಎಷ್ಟಾದರೂ ಜೊತೆಯಲ್ಲಿ ಅಲೆದ ಜೀವಗಳಲ್ಲವೇ, ನಮ್ಮ ನಮ್ಮ ದೇವರ ಸತ್ಯ ನಮಗೆ ಚೆನ್ನಾಗಿ ಗೊತ್ತು, ಹೀಗಾಗಿ ತಲೆ imbalance ನ ಒಳಮರ್ಮ ಅವನಿಗೆ ಗೊತ್ತಾಯಿತು. ಮೊನ್ನೆ ದೊಡ್ಡ ಮನಸ್ಸು ಮಾಡಿ ನಸುಕಿಗೇ ಮನೆಬಿಟ್ಟೆ. ದೊಡ್ಡ ವಾಕ್ ನಿಜಕ್ಕೂ ಚೇತೋಹಾರಿಯಾಗಿತ್ತು. ಮರೆತ ಎಷ್ಟೋ ಸದ್ವಿಚಾರಗಳು ನೆನೆಪಿಗೆ ಬಂದವು; ಬೇಡದ ಎಷ್ಟೋ ಕ್ಲೀಷೆಗಳು ಮರೆವಿಗೆ ಸಂದವು. ಈರುಳ್ಳಿ ಮಾರುವ ಬಸವರಾಜು “ಅಕ್ಕಾ ನನ್ನ ಮಗಳಿಗೆ ಮಗು ಆಯ್ತು, ತಾಯಿ ಮಗಳು ಆರೋಗ್ಯವಾಗಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಂಡ. ಅವನಿಗೆ ಶುಭಾಶಯ ಹೇಳಿದೆ. ಮನೆಗೆ ಮರಳಿ ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ.  ನಮ್ಮನೆ ರೋಡ್ ನಲ್ಲಿ ಪ್ಬತಿದಿನವೂ ಬೆಳಗ್ಗೆ 8:30 ರ ಸುಮಾರಿಗೆ ‘ಅ.. ಬ್ಬೇ.. ಪಾ… ರೀ …’ ಎನ್ನುವ ಕೂಗು ಘಂಟಾಘೋಷವಾಗಿ ಕೇಳುತ್ತಿರುತ್ತದೆ. ಅದು ನನಗೆ ತೀರಾ ಪರಿಚಿತವೇ ಮತ್ತು ಆ ಧ್ವನಿಯ ಒಡೆಯನೂ ಕೂಡ. ಅಬ್ಬೇಪಾರಿ ಎಂದರೆ irresponsible fellow ಅಂತಿರಬಹುದು ಅರ್ಥ, ಈತ ಹಾಗಲ್ಲ. ಈ ದಿನಗಳಲ್ಲಿ ನಾನು ಆತನನ್ನು ಮಾತೇ ಆಡಿಸಿರಲಿಲ್ಲ, ಪಾಪ! ಇವತ್ತು ನಾನಾಗಿ ನಾನೇ ಮಾತನಾಡಿಸಲು ಹೋದೆ. ಅವನು ತನ್ನ ರಥ ನಿಲ್ಲಿಸಿ ಮಾತಿಗೆ ಬಂದ. ಮಾಮೂಲಿನಂತೆ ‘ಏನಾದ್ರೂ ಐತಕಾ’ ಎಂದ. ಅವನ accent ಟೇ ಹಾಗೆ! ‘ಏನೂ ಇಲ್ಲಪ್ಪ, ಚೆನ್ನಾಗಿದ್ದೀಯ, ಏನು ಸಮಾಚಾರ’ ನಾನು ಕುಶಲೋಪರಿ ವಿಚಾರಿಸಿದೆ. ‘ಊಂ ನಕಾ ..ಈಗ ನೀ ಉಸಾರಾ? ನಮ್ ಅಳಗು ಕು ಮ್ಯಾರೇಜ್ ಸೆಟ್ ಅಯ್ತಕಾ ‘ ಎಂದು ಹಲ್ಲು ಕಿರಿದ. ಎಷ್ಟೊಂದು ದಿನದ ತಪಸ್ಸು ಆತನದು, ಮಗಳ ಮದುವೆ ಆಗಬೇಕೆನ್ನುವುದು!, ಸಧ್ಯ ಸೆಟ್ಲ್ ಆಯಿತಲ್ಲಾ ..ನನಗೂ ಸಂತೋಷವಾಯ್ತು. ‘ಯಾರಪ್ಪ ಹುಡುಗ ?’ ನಾನು ಕುತೂಹಲದಿಂದ ಕೇಳಿದೆ. ‘ಏ ಅದೇಕಾ …ಕಳ್ಳಾಪುಲಿ ಮಗ ಮುರುಗನ್.’ ಅವನ ಧ್ವನಿಯಲ್ಲಿ ನೆಮ್ಮದಿಯ ನಗೆಯಿತ್ತು. ‘ತುಂಬಾ ಸಂತೋಷ ಕಣಪ್ಪ…ಕರ್ಕೊಂಡು ಬಾ ಮಗಳನ್ನ ಯಾವಾಗ್ಲಾದ್ರು ‘ ಎಂದೆ. ‘ಸರೇಕಾ ..’ ಎನ್ನುತ್ತಾ ಅವನು ತನ್ನ ರಥ ಚಾಲೂ ಮಾಡಿ ಮತ್ತಷ್ಟು ಹುಮ್ಮಸ್ಸಿನಿಂದ ಕೂಗುತ್ತಾ ಹೊರಟ, ಆ ಬ್ಬೇ ಪಾ ರೀ …. ನಾವು medical transcriptionist ಗಳಿಗೆ ಒಂದು ವಿಶೇಷ ಚಟ ಅಂಟಿಕೊಂಡಿರುತ್ತದೆ, ಅದೇನೆಂದರೆ ಒಂದು ಪದವನ್ನು ಮೂರು ನಾಲ್ಕು ಥರಾ ಕೇಳಿಸಿಕೊಳ್ಳುವುದು! ಇದು ಎಷ್ಟೋ ಸಾರಿ ಎರ್ರಾಬಿರ್ರಿ ಖುಷಿಯನ್ನು ಸಹಾ ತಂದುಕೊಡಲು ನೆರವಾಗುತ್ತದೆ.  ಈ ಆ.. ಬ್ಬೇ.. ಪಾ.. ರೀ.. ಯಾರೆಂದುಕೊಂಡೇ?  ತಮಿಳು accent ನಲ್ಲಿ ‘ಆ.. ಪೇ..ಪ..ರ್..ರ್ರಿ …’ ಎಂದು ಕೂಗುವ ಹಳೇ ಪೇಪರ್ ಮತ್ತು ಗುಜರಿ ವಸ್ತುಗಳನ್ನು ಕೊಳ್ಳುವವನು.  ಮತ್ತೆ ಆ ಕಳ್ಳಾ-ಪುಲಿ ? ದಿನವೂ ವ್ಯಾಪಾರವಾಗಲೀ- ಬಿಡಲಿ ಕಡಲೆಪುರಿ ಮಾರುತ್ತಾ ಬರುವ ಕರ್ಮಜೀವಿ. ಅಂದಹಾಗೇ ಇವರಿಬ್ಬರೂ ನನ್ನ ತಾಯಿ ಒಂದು ವರ್ಷದ ಹಿಂದೆ ಬಚ್ಚಲಲ್ಲಿ ಕಾಲು ಜಾರಿ ಬಿದ್ದಾಗ ಕರೆದೊಡನೆಯೇ ಬಂದು ಎತ್ತಿ ಕೂರಿಸಿ ನೆರವಾದ ಬಂಧುಗಳು! ಸಂತೋಷದ definition ಒಬ್ಬರಿಂದೊಬ್ಬರಿಗೆ ಬೇರೆ ಬೇರೆಯಾಗಿರುತ್ತವೆ, ಹಾಗೆಯೇ ಬದುಕೂ ಕೂಡ ಅಲ್ವಾ….. ಹೇಗೋ ಬದುಕುವುದನ್ನು ಕಲಿಸಿಯೇ ಬಿಡುತ್ತದೆ!

Leave a comment

Filed under ಲೇಖನಗಳು

ಅಲೆಮಾರಿ ಅಕ್ಕ-ತಂಗಿಯರ ಟ್ರಯಲ್ಗಳು ಮತ್ತು ಟ್ರಾಮಾಗಳು!

imagesಆಗ ನಾನು ಹೈಸ್ಕೂಲಿನಲ್ಲಿದ್ದೆ. ಲಕ್ಷ್ಮಿಯ ಸಿ.ಇ.ಟಿ. ಜಸ್ಟ್ ಮುಗಿದು ಸೀಟಿನ ನಿರೀಕ್ಷೆಯಲ್ಲಿದ್ದಳು. ಲಕ್ಷ್ಮಿ ನನ್ನ ದಾವಣಗೆರೆಯ ಅಕ್ಕ. ಆಗ ಇಬ್ಬರೂ ಲಂಗ-ಬ್ಲೌಸ್ ತೊಡುತ್ತಿದ್ದ ಕಾಲ, ಜೊತೆಗೆ ಇಬ್ಬರಿಗೂ ಶಾಪಿಂಗ್ ಹುಚ್ಚು ಅದು ಹೇಗೋ ಮೈಗಂಟಿಕೊಂಡಿತ್ತು. ನಮ್ಮಿಬ್ಬರಿಗೂ ಪ್ರತ್ಯೇಕವಾಗಿ ಮನೆಯಲ್ಲಿ ಪಾಕೆಟ್ ಮನಿ ಕೊಡುತ್ತಿದ್ದರೆಂದು ನೀವು ಭಾವಿಸಿದರೆ ಮೂರ್ಖರಾದೀರಿ! ಒಂದು ಹತ್ತು ರೂಪಾಯಿ ನಮ್ಮ ಪರ್ಸಿನಲ್ಲಿ ಜಮಾ ಆಗಿದ್ದರೆ ಅದೇ ಇಬ್ಬರಿಗೂ ದೊಡ್ಡ ಮೊತ್ತ. ಆದರೂ ಆಸೆಗಳು ಇಬ್ಬರಿಗೂ ನೂರಾರು, ಅದು ಚೆನ್ನ, ಇದು ಚೆನ್ನ ಎಂದು ಇಬ್ಬರೂ ಮನಸ್ಸಲ್ಲಿ ಮಂಡಿಗೆ ತಿಂದೂ ತಿಂದೂ ಖುಷಿಪಡುತ್ತಿದ್ದೆವು. ಅದೇನೋ ಇಬ್ಬರೂ ವಿಪರೀತ ಮಾತನಾಡುತ್ತಿದ್ದೆವು. ರಾತ್ರಿ, ಬೆಳಗು, ಮಧ್ಯಾಹ್ನ ಸಮಯ ಸಿಕ್ಕಾಗೆಲ್ಲ ವಿಪರೀತ ವಿಷಯಗಳು ಮಾತಾಡಿದ್ದೂ ಆಡಿದ್ದೆ. ಅದೇನೇನು ಎನ್ನುವುದು ದೇವರೇ ಬಲ್ಲ! ತಿರುಗಾಟದ ಹುಚ್ಚು ನಮ್ಮ ಖಾಂದಾನ್-ಖಾಂದಾನಿಗೆ ಇತ್ತು ಒಂದು ವಯಸ್ಸಿನಲ್ಲಿ ಅನ್ನಿಸುತ್ತೆ. ತರಕಾರಿ ತರುವ ನೆಪದಲ್ಲಿ ನಾನೂ ಲಕ್ಷ್ಮಿಯೂ ಬೆಳಗ್ಗೆ ೭ ಕ್ಕೆ ಹೊರಬಿದ್ದರೆ ಪಕ್ಕದ ರೋಡ್ ನಿಂದ ೮ ಕ್ಕೇ ಬರುತ್ತಿದ್ದುದು. ಅದೇನು ಅಷ್ಟೊಂದು ಲೇಟು ಅಂತೀರಾ? ಹೌದು, ನಮ್ಮ ಮರೆತಿದ್ದ ಮಾತುಗಳು ಇದ್ದಕ್ಕಿದ್ದ ಹಾಗೇ ಮನೆಯಿಂದ ಕಾಲ್ತೆಗೆದ ಕೂಡಲೇ ನೆನಪಾಗುತ್ತಿದ್ದವು! ಯಾರ್ಯಾರೋ ನಮ್ಮ ಗೆಳತಿಯರ ಕಸಿನ್ಸು, ಅವರ ಕಷ್ಟ ಸುಖ ಇವೆಲ್ಲಾ…ಈಗಿನ ಕಾಲದ ಹುಡುಗಿಯರೂ ಅಥವಾ ಎಲ್ಲಾ ಹುಡುಗಿಯರೂ ಹೀಗೆನಾ? ಅಥವಾ ನಾವು ಎಕ್ಸೆಪ್ಶನ್ನಾ? ಈ ಥರ ತಲೆ ಹುಳ ನೆಲಕ್ಕೆ ಕೊಡವಿಕೊಳ್ಳುವ ಹುಡುಗಿಯರನ್ನು ಕಂಡು ಅಮ್ಮನಂಥಾ ಅಮ್ಮನೂ ದಂಗಾಗಿದ್ದಳು. ಅವರೇನು ಕಡಿಮೆಯಿರಲಿಲ್ಲ. ಅಕ್ಕ ತಂಗಿಯರೆಲ್ಲ ಒಟ್ಟು ಸೇರಿದಾಗ ರಾತ್ರಿ ಮಾತಿಗೆ ಕೂತರೆ(ಮಲಗಿದರೆ?!) ಬೆಳಕು ಹರಿಸುವಂಥಾ ಗಟ್ಟಿಗರು. ಅವರ ಮಕ್ಕಳಲ್ಲವೇ ನಾವು, ನಾವೂ ಅವರಂತೆಯೇ ತಯಾರಾಗುತ್ತಿದ್ದೆವು. ಉಮ (ಶ್ರೀರಂಗಪಟ್ಟಣದ ಅಕ್ಕ) , ಲಕ್ಷ್ಮಿ ಮತ್ತು ನಾನು ಮೂರೂ ಹುಡುಗಿಯರೂ ಮಾತು ವಿಪರೀತ ಆಡುತ್ತವೆ, ಒಂದರ ಜೊತೆ ಒಂದು ಸೇರಿದರೇ ಎಂದು ಅಮ್ಮ ರಿಸರ್ಚು ಮಾಡಿ ಕಂಡುಕೊಂಡಿದ್ದಳು. ನಾನೂ ಲಕ್ಷ್ಮಿಯಂತೂ ಇತಿಹಾಸವನ್ನೇ ಸೃಷ್ಠಿ ಮಾಡುವಷ್ಟು ಮಾತನಾಡಿ ಅಮ್ಮನ ಕೆಂಗಣ್ಣಿಗೆ ಕಾರಣರಾಗಿದ್ದೆವು. ಹೀಗಿರುವಾಗಿನ ಒಂದು ದಿನವೇ ನಮ್ಮಿಬ್ಬರಿಗೂ ಶಾಪಿಂಗ್ ಹುಚ್ಚು ತಲೆಗಡರಿಕೊಂಡಿದ್ದು! ಇಬ್ಬರ ಹತ್ತಿರವೂ ಹತ್ತು ಹತ್ತು ರೂಪಾಯಿ ಇದ್ದು ಬಸ್ಸ್ ಚಾರ್ಜಿಗೆ ೨-೨ ರೂಪಾಯಿ ಹೋದರೂ ಇನ್ನೂ ೮-೮ ರೂಪಾಯಿಗಳು ಇರುತ್ತವೆ ಎಂದು ನಮ್ಮ ಲೆಕ್ಖಾಚಾರ, ಇದು 1986 ರ ಸುಮಾರಿನ ವರ್ಷದಲ್ಲಿ. ಆಗ ನಮ್ಮ ಮನೆ ರಾಜಾಜಿನಗರ ಎಂಟ್ರೆನ್ಸಿನಲ್ಲಿತ್ತು. ನಮ್ಮ ಶಾಪಿಂಗ್ ಸ್ಪಾಟು ಮೆಜೆಸ್ಟಿಕ್ ಎಂದು ಒಂದು ದಿನ ರಾತ್ರಿಯೇ ರಾತ್ರಿ ಸುತ್ತಿನ ಮಾತುಕತೆಯಲ್ಲಿ ತೀರ್ಮಾನಿಸಿಕೊಂಡು ಬೆಳಗ್ಗೆ ಇಬ್ಬರೂ ಹೆಚ್ಚುಕಡಿಮೆ ಒಂದೇಬಣ್ಣದ ಲಂಗ-ಬ್ಲೌಸ್ ಧರಿಸಿಕೊಂಡು ತಯಾರಾದೆವು. ಮಾಮೂಲಿನಂತೆ ಹತ್ತು ಗಂಟೆಗೆಲ್ಲಾ ಬ್ರಂಚ್ ಮುಗಿಸಿ ಬಸ್ಸು ಹತ್ತಿದೆವು. ಮೆಜೆಸ್ಟಿಕ್ ತಲುಪುವವರೆಗೂ ಮಾತೂ ಮಾತೂ! ತಲುಪಿದಮೇಲಂತೂ ಸ್ವರ್ಗಕ್ಕೆ ರೆಕ್ಕೆ ಹಚ್ಚಿದ ಹಕ್ಕಿಗಳು ನಾವಿಬ್ಬರೂ! ತಿರುಗಾಡದ ಗಲ್ಲಿಗಳೇ ಇಲ್ಲ, ನೋಡದ ವಸ್ತುಗಳೂ ಇಲ್ಲ. ವಿಪರೀತ ಅಲೆದು ಸುಸ್ತಾದರೂ ಕ್ಯಾಂಟೀನಿನಂಥಾ ಕಡೆ ಏನಾದರೂ ಕುಡಿದು ತಿಂದು ಮಾಡಲು ಇಬ್ಬರಿಗೂ ಭಯ; ನೀರು ಕುಡಿಯಲು ಬಿಸ್ಲೇರಿಯೂ ಇಲ್ಲ, ಬಿಸಿಲೇರಿ ಸತ್ತು ಬೀಳುವವರೆಗೂ ಅಲೆದಿದ್ದೇ ಸೌಭಾಗ್ಯ! ಆದರೂ ನಮ್ಮಿಬ್ಬರ ವ್ಯಾಪಾರಕ್ಕೇನೂ ಕೊರತೆಯಿರಲಿಲ್ಲ. ಶಾಂತಲ ಸಿಲ್ಕ್ ಹೌಸಿಗೆ ಹೋಗಿ ನಮ್ಮಕ್ಕನ ಮದುವೆಗೆ ಸೀರೆ ವೆರೈಟೇಸ್ ನೋಡಬೇಕು ಅಂತ ಹತ್ತಾರು ಸಲ ಮಹಡಿ ಹತ್ತಿ-ಇಳಿದು ನೂರಾರು ಸೀರೆಗಳನ್ನು ನೋಡಿದ್ದೇ ನೋಡಿದ್ದು. ನಮ್ಮ ಓಡಾಟದಲ್ಲಿದ್ದ ಸಡಗರ, ಉತ್ಸಾಹ ಬಹುಶಃ ಶಾಂತಲ ಸಿಲ್ಕ್ ಹೌಸ್ನವರನ್ನೂ ದಂಗುಬಡಿಸಿದ್ದೀತು! ಕೊನೆಗೆ ಎಲ್ಲಾ ಸೆಲೆಕ್ಷನ್ ಮಾಡಿ ದೊಡ್ಡವರನ್ನು ಕರೆತರುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಪರಾರಿಯಾದಾಗ ಅರ್ಧ ಬೆಂಗಳೂರೇ ಗೆದ್ದ ಹಾಗೆ ಬೀಗಿದೆವು. ಅಲ್ಲೇ ಹತ್ತಿರದಲ್ಲಿದ್ದ ಪಾರ್ಕೊಂದರಲ್ಲಿ ಇಬ್ಬರೂ ದಣಿವಾರಿಸಿಕೊಳ್ಳಲು ಕುಳಿತು ಮಾತನಾಡುತ್ತಿರುವಾಗ ಯಾರೋ ದಾರಿಹೋಕ ವೃದ್ಧರೊಬ್ಬರು ‘ನಿಮ್ಮಂಥಾ ಹೆಣ್ಣುಮಕ್ಳು ಬರೋ ಜಾಗ ಅಲ್ಲ ಕಣ್ರಮ್ಮ ಇದು, ಮನೆಗೆ ಹೋಗಿ’ ಎಂದು ಹೊರಗೆ ಕಳುಹಿಸಿದ್ದರು. ಸರಿ, ಅಷ್ಟು ಹೊತ್ತಿಗೆ ನಮ್ಮ ಕಾಲುಗಳು ಮತ್ತೆ ನಡೆಯಲು ತಯಾರಾಗಿದ್ದವು! ನಾವು ಅವತ್ತು ಖರೀದಿ ಮಾಡದಿರುವ ವಸ್ತುಗಳೇ ಕಡಿಮೆ. ಪಾತ್ರೆಗಳು, ಟೊವೆಲ್ಲುಗಳು, ಬೆಡ್ಶೀಟುಗಳು ಇನ್ನೂ ಏನೇನೋ (ನಮ್ಮಕ್ಕನ ಮದುವೆಗೆ ಬೇಕಲ್ಲಾ ಅಹ್ಹಹ್ಹ !!!). ಕೊನೆಗೆ ರಸ್ತೆ ಬದಿಯಲ್ಲಿನ ಟೇಬಲ್ ಕ್ಲಾತ್ಗಳ ಕಡೆಗೆ ನಮ್ಮಿಬ್ಬರ ಗಮನ ನಿಂತಿತು. ೨೦ ರೂಪಾಯಿ ಹೇಳಿದ ಟೇಬಲ್ ಕ್ಲಾತ್ ಗೆ ೬ ರೂಪಾಯಿ ಬೆಲೆಕಟ್ಟಿ ಅವನು ಕೊಡೋದಿಲ್ಲ ಎಂದಾಗ ನಮ್ಮ ಜಾಣ್ಮೆಗೆ ನಾವೇ ಮೆಚ್ಚುತ್ತಾ ಮುಂದೆಸಾಗುತ್ತಿರುವಾಗ ಒಬ್ಬ ವ್ಯಾಪಾರಿಗೆ ಏನನ್ನಿಸಿತೋ ನಮ್ಮ ಬೆಲೆಗೇ ಕೊಡಲು ಮುಂದಾಗಿಬಿಟ್ಟ. ಆಗ ಶುರುವಾಗಿದ್ದು ನಿಜವಾದ ಟೆನ್ಷನ್ನು! ಇಲ್ಲಿಂದ ಮುಂದಕ್ಕೆ “ಟುಡೇ ಇಸ್ ನಾಟ್ ಅವರ್ ಡೇ ” ಅಂತ ನಮ್ಮಿಬ್ಬರ ಅಂತರ್ವಾಣಿ ಹೇಳತೊಡಗಿತು! ‘ಈಗ ಬರುತ್ತೇವೆ, ೫ ನಿಮಿಷ, ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಾಳೆ’ ಅಂತ ಇಬ್ಬರೂ ಲಗುಬಗೆಯಿಂದ ಕಂಬಿ ಕಿತ್ತೆವು. ‘ನಿಜವಾಗಿಯೂ ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಿದ್ದರೆ ನಮ್ಮಿಬ್ಬರಿಗೂ ಕಪಾಳಕ್ಕೆ ಹೊಡೆದು ಹಲ್ಲು ಉದುರಿಸಿ ನೆಲಕಚ್ಚಿಸಿಬಿಡುತ್ತಿದ್ದಳು ಅಲ್ಲವಾ’ ಎಂದು ಇಬ್ಬರೂ ಬಿದ್ದು ಬಿದ್ದು ನಗುತ್ತಾ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂಥಾ ಅವರ್ಚನೀಯ ಖುಷಿಯಿಂದ ಮನೆಕಡೆಗೆ ಬಸ್ಸು ಹತ್ತಿದೆವು.  ಆಗ ಬೇಸಿಗೆ ರಜೆ ಕಾಲವಾದ್ದರಿಂದ ಬಸ್ಸೆಲ್ಲ ಖಾಲಿ ಖಾಲಿ. ಹಾಗಿದ್ದರೂ ನಾವಿಬ್ಬರೂ ನಿಂತುಕೊಂಡು ಕಿಸಿ ಕಿಸಿಗುಟ್ಟುತ್ತಿರುವುದನ್ನು ಕಂಡ ಕಂಡಕ್ಟರ್ ‘ಕೂತ್ಕೊಳ್ರಮ್ಮ ಸುಮ್ನೆ, ಕೂತ್ಕೊಂಡು ಮಾತಾಡಕ್ಕಾಗಲ್ವ ನಿಮಗೆ’ ಎಂದು ಗದರಿದಾಗಲೇ ನಮಗೆ ಎಚ್ಚರ! ಪಾಪ! ಹಂಚಿಕಡ್ಡಿ ಪರ್ಸನಾಲಿಟಿ ಇದ್ದ ನಾವಿಬ್ಬರೂ ಎಲ್ಲಿ ಮಾತಲ್ಲಿ ಎಚ್ಚರ ತಪ್ಪಿ ಗಾಳಿಯಲ್ಲಿ ಹೊರಗೆ ಹಾರಿ ಬಿಡುತ್ತೇವೆಯೊ ಎಂದು ಅವನ ಕಾಳಜಿ! ಅಂತೂ ನಾವಿಬ್ಬರೂ ೧೦೦ ವ್ಯಾಟ್ ಬಲ್ಬಿನ ಮುಖಗಳೊಂದಿಗೆ ಕ್ಷೇಮವಾಗಿ ಹೋಗಿ ಹಾಗೇ ಮನೆ ಸೇರಿದೆವು. ಮಟ ಮಟ ಮಧ್ಯಾಹ್ನ ೩ ಗಂಟೆಯವರೆಗೂ ಅಮ್ಮ ಔಟ್ ಹೌಸ್ ನಿಂದ ಹೊರಗಿನ ಗೇಟಿನವರೆಗೂ ೧೦ ಸಾರಿ ಶತಪಥ ತಿರುಗಿದ್ದಳು. ಮುಂದಿನ ಮನೆಯ ಓನರ್ ಅಜ್ಜ (ರಿಟೈರ್ಡ್ ಮಿಲಿಟರಿ ಮ್ಯಾನ್) ನಿಗೂ ನಾವಿಬ್ಬರೂ ಇನ್ನೂ ಬಂದಿಲ್ಲದ ಸುದ್ದಿ ತಲುಪಿತ್ತು. ಹಾಗಾಗಿ ಅಜ್ಜನೂ ಅಲ್ಲೇ ಗಸ್ತು ಹೊಡೆಯುತ್ತಿದ್ದರು. ಇದ್ಯಾವುದರ ಪರಿವೆಯೂ ಇಲ್ಲದ ಹುಚ್ಚುಖೋಡಿ ಅಕ್ಕ ತಂಗಿಯರಿಬ್ಬರೂ ಕಿಲ ಕಿಲ ನಗುತ್ತಾ ಗೇಟು ತೆಗೆಯುವುದನ್ನು ಕಂಡ ಅಜ್ಜ ‘ರಾಮ ರಾಮ ಅದೇನು ಮಾತಮ್ಮ ನಿಮ್ಮಿಬ್ಬರದ್ದು; ಮರದ ಬಾಯಾಗಿದ್ದರೆ ಒಡೆದು ಹೋಗಿರುತ್ತಿತ್ತು ಇಷ್ಟು ಹೊತ್ತಿಗೆ’ ಎಂದು ತಲೆತಲೆ ಚೆಚ್ಚಿಕೊಂಡರು. ನಾವಿಬ್ಬರೂ ೧-೨ ನಿಮಿಷ ಮಾತು ನಿಲ್ಲಿಸಿದ ಶಾಸ್ತ್ರ ಮಾಡಿ ಹೊರಗಿನ ನಲ್ಲಿಯಲ್ಲಿ ಕೈಕಾಲು ತೊಳೆದು ಮನೆ ಹೊಕ್ಕೆವು. ಅಮ್ಮ, ‘ಸಧ್ಯ ಬಂದ್ರಲ್ಲ , ಯಾಕ್ರಮ್ಮ ಬಿಸಿಲಲ್ಲಿ ಬೀದಿ ಬೀದಿ ಅಲೆದು ಬಾಳಕದ ಮೆಣಸಿನ ಕಾಯಿ ಥರ ಆಗ್ತೀರಾ, ಆ ದೇವರೇ ನಿಮ್ಮಿಬ್ಬರಿಗೂ ಬುದ್ಧಿ ಕೊಡಬೇಕು ಅಷ್ಟೇ’ ಎನ್ನುತ್ತಾ ನಿಡುಸೊಯ್ದು ಒಂದಿಷ್ಟು ಮೊಸರನ್ನ ಕಲೆಸಿ ತಿನ್ನಲು ಕೊಟ್ಟಳು. ನಾವಿಬ್ಬರೂ ಅದಕ್ಕೂ ನಗುತ್ತಾ ಬೇಗಬೇಗ ತಿಂದು ಬೆಳಗಿನಿಂದ ಅಲ್ಲಿಯವರೆಗಿನ ನಮ್ಮ ದಿಗ್ವಿಜಯದ ವೀರಗಾಥೆಯನ್ನೇ ವಿಷಯವಾಗಿಸಿಕೊಂಡು ಮತ್ತೆ ಮಾತು ಶುರುವಿಟ್ಟುಕೊಂಡೆವು!

Leave a comment

Filed under ಲೇಖನಗಳು

ಅಣ್ಣ-ತಂಗಿ ಜೈಲಿಗೆ ಹೋದ ಪ್ರಸಂಗ !!!!!

8TAo6ydTa ಶ್ರೀರಂಗಪಟ್ಟಣ ಬಿಟ್ಟು ಕೊಳ್ಳೇಗಾಲಕ್ಕೆ ಬಂದಮೇಲೆ ನನಗೆ ನಾನೇ ಸ್ನೇಹಿತೆಯಾಗಿದ್ದೆ. ಆಟೋಟಕ್ಕೆ ಹಲವಾರು ಗೆಳೆಯರಿದ್ದರೂ ನನ್ನ ಅಕ್ಕ, ತಮ್ಮನ ಕೊರತೆ ನೀಗುತ್ತಲೇ ಇರಲಿಲ್ಲ. ಹೀಗಿರುವಾಗ ನನ್ನ ಜೀವನದಲ್ಲಿ ತನ್ನಿರುವಿಕೆಯನ್ನು ನೆನಪುಮಾಡಿಸಿದವನೇ ನನ್ನಣ್ಣ ಶಾಮಣ್ಣ! ಅವನನ್ನು ಶಾಮ ಅಂತಲೇ ಕರೆಯುವುದು. ಅವನಾದರೋ ಬೆಂಗಳೂರು ದೊಡ್ಡಮ್ಮನ ಮಗ. ಹಾಗಂತ ಗೊತ್ತೇ ಆಗುತ್ತಿರಲಿಲ್ಲ. ಎಲ್ಲರೂ ಜೊತೆಯಲ್ಲೇ ಹುಟ್ಟಿ ಬೆಳೆಯುತ್ತಿದ್ದೇವೆ; ಕಾರಣಾಂತರಗಳಿಂದ ಬೇರೆ ಬೇರೆ ಊರು ಸೇರಿದ್ದೇವೆ ಎನಿಸುತ್ತಿತ್ತು. ಬೇಸಿಗೆ ರಜೆ ಬಂತೆಂದರೆ ಶಾಮ ಬಂದೇಬರುತ್ತಾನೆ ಎನ್ನುವ ನಿರೀಕ್ಷೆ ನನ್ನದು. ಆಗ ಅವನೂ ಪುಟ್ಟ ಹುಡುಗನಾದರೂ ಅವನೊಬ್ಬ ಚ್ಯೆಲ್ಡ್ ಜೀನಿಯಸ್ ಎಂದು ಅಣ್ಣ ತಾವು ಬದುಕಿರುವವರೆಗೂ ಹೇಳುತ್ತಿದ್ದರು. ಅದು ನಿಜವಾದ ಮಾತೇ!  ತನ್ನ ಎಳೇ ವಯಸ್ಸಿನಲ್ಲೇ ಎಷ್ಟೇ ಉದ್ದದ ಹಾಡನ್ನಾದರೂ ಬರೆದುಕೊಳ್ಳದೆ  ನೆನಪಿನಲ್ಲಿಟ್ಟುಕೊಂಡು ಹಾಡಬಲ್ಲವನಾಗಿದ್ದ, ಒಂದು ಹಾಡನ್ನು ಮತ್ತೊಂದು ರಾಗದಲ್ಲಿ (ತನ್ನ ಸ್ವಂತದ್ದು) ಎಷ್ಟೇ ದೊಡ್ಡ ಸಭೆ ಸಮುದಾಯವಿದ್ದರೂ ಅಂಜಿಕೆಯಿಲ್ಲದೆ ಹಾಡಬಲ್ಲವನಾಗಿದ್ದ! ಇಂಗ್ಲಿಷ್ ಹಾಗು ಕನ್ನಡದಲ್ಲಿ ಯಾರೊಬ್ಬರ ಸಹಾಯವೂ ಇಲ್ಲದೆ ಪುಟಗಟ್ಟಲೆ ಪತ್ರಬರೆಯುವ, ಪ್ರಾಣಿ, ಪಕ್ಷಿ, ಮನುಷ್ಯರನ್ನು ಅನುಕರಿಸುವ, ಒಂದು ವಿಷಯದ ಬಗ್ಗೆ ನಿರರ್ಗಳವಾಗಿ ವಯಸ್ಸಿಗೆ ಮೀರಿ ಮಾತನಾಡುವ ತಾಕತ್ತು ಎಲ್ಲಾ ನನ್ನ ಶಾಮಣ್ಣನಿಗಿತ್ತು! ಹಾಗೆಯೇ ಅಪ್ರತಿಮ ತುಂಟ.  ನಾವಿಬ್ಬರೂ ಅತೀ ಚಟುವಟಿಕೆಯಿರುವ ಜೀವಿಗಳಾದ್ದರಿಂದ ಅವನನ್ನು ಮತ್ತು ನನ್ನನ್ನು ಖಾಸಾ ಅಣ್ಣ ತoಗಿಯೆಂದು ಇಡೀ ಲೋಕ ಅಂಗೀಕರಿಸಲೇಬೇಕಿತ್ತು.  ಪಶು-ಪಕ್ಷಿಗಳಿಗಿಂತಾ ಮುಂಚಿತವಾಗಿಯೇ ನಾವಿಬ್ಬರೂ ದಿನಾ ಏಳುತ್ತಿದ್ದುದು. ನಮ್ಮನ್ನು ಏಳಿಸುವ ಜವಾಬ್ದಾರಿಯನ್ನು ನಾವು ಹಿರಿಯರಿಗೆ “ರಜೆಯಲ್ಲಿ” ಮಾತ್ರ ಎಂದಿಗೂ ಕೊಟ್ಟಿದ್ದಿಲ್ಲ. ನಾವಿಬ್ಬರೂ ಸುಮಾರು 6-7 ವರ್ಷದವರಿರಬಹುದು ಆಗ. ದಿನಾ ಬೆಳಗ್ಗೆ ಸುಮಾರು ಒಂದು ಪುಟ ದಿನಪತ್ರಿಕೆ ಓದಿ ಮನಸ್ಸಿಗೆ ತೋಚಿದ್ದನ್ನು ಬರೆಯುವಂತೆ ಶಾಮ ಪೀಡಿಸಿಬಿಡುತ್ತಿದ್ದ. ಅವನೂ ಹಾಗೆ ಬರೆಯುತ್ತಿದ್ದ! ಬರೆಯದಿದ್ದರೆ ‘ನಿನ್ನನ್ನು ತಿರುಗಾಡಿಸಲು ಕೆರೆದುಕೊಂಡು ಹೋಗುವುದಿಲ್ಲ; ನಾನು ಬೆಳಗ್ಗೆ ನೋಡಿದ ಎರಡು ಕೊಕ್ಕಿನ ಹಕ್ಕಿಯನ್ನು ನಿನಗೆ ತೋರಿಸುವುದಿಲ್ಲ’ ಎಂದೆಲ್ಲಾ ವಿಚಿತ್ರ ಬೆದರಿಕೆಗಳನ್ನು ಹಾಕುತ್ತಲೇ ನನ್ನನ್ನು ಬರೆಯುವಂತೆ ಮಾಡುತ್ತಿದ್ದ. ಆಗೆಲ್ಲಾ ಇವನ ರಜೆ ಬೇಗ ಮುಗಿದು ಊರಿಗೆ ಹೊರಡಬಾರದೇ ಎನ್ನಿಸುತ್ತಿತ್ತು. ಇವತ್ತು ಅರಿವಾಗುತ್ತಿದೆ ಅವನು ಅವತ್ತು ಹಾಕಿಕೊಟ್ಟ ಮೇಲ್ಪಂಕ್ತಿ ಈ ಎಲ್ಲಾ ಬರವಣಿಗೆಯ ಮೂಲವೆಂದು!

ಇಂತಹ ದಿನಗಳಲ್ಲೇ ನಮ್ಮಿಬ್ಬರ ಜೀವನದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಆ ದಿನ ಒದಗಿಬಂದದ್ದು! ಅಂದು ಒಂದು ರೋಚಕವಾದ ಆಮಿಷವೊಂದನ್ನು ಮುಂದಿಟ್ಟು ಈ ದಿನ ನನ್ನ ಕನ್ನಡ ಬರವಣಿಗೆಯ ಪುಟವನ್ನೂ ನೀನೇ ಬರೆದರೇ ನಿನ್ನನ್ನು ಜೈಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಶಾಮ ಘೋಷಿಸಿ ನನ್ನ ಸಂತೋಷವನ್ನು ಸೀಮಾತೀತಗೊಳಿಸಿಬಿಟ್ಟ! ಇಂತಹ ಸೌಭಾಗ್ಯ ಇಷ್ಟು ಸಲೀಸಾಗಿ ಒದಗಿಬರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದ್ದರಿಂದ ಬೇಗಬೇಗನೆ ‘ಅಷ್ಟೇ ತಾನೆ’ ಎನ್ನುತ್ತಾ ದುರಹಂಕಾರದಲ್ಲಿ ಎರೆಡು ಪುಟ ಬರೆದು ಬಿಸಾಕಿಬಿಟ್ಟೆ. ಶಾಮನೂ ‘ವೆರಿಗುಡ್’ ಎಂದು ಹರ್ಷದಿಂದ 4-1/2 ಸ್ಟಾರನ್ನು ಕೊಟ್ಟೇಬಿಟ್ಟ (ಬರಹ ಗುಂಡಾಗಿಲ್ಲ, ಇದ್ದಿದ್ದರೆ 5 ಸ್ಟಾರನ್ನೇ ಕೊಡುತ್ತಿದ್ದೆ ಎಂದು ಸುಳ್ಳು ಹೇಳಿಯೇಬಿಟ್ಟ). ಏಕೆಂದರೆ ಅವತ್ತು ನಾನು ಗಡಿಬಿಡಿಯಲ್ಲಿ ಏನೇನೂ ಚೆನ್ನಾಗಿ ಬರೆದಿರಲಿಲ್ಲ. ಅವೆಲ್ಲ ಇರಲಿ, ಈ ಜೈಲು ಯಾತ್ರೆಗೆ ಶಾಮ ಅಣ್ಣನನ್ನು(ನಮ್ಮ ಅಪ್ಪನ್ನ ನಾನು ಹಾಗೇ ಕರೆಯೋದು) ಅದೆಷ್ಟು ಸುಲಭವಾಗಿ ಒಪ್ಪಿಸಿಬಿಟ್ಟ! ಅಣ್ಣ ದೊಡ್ಡ ಲಾಯರ್ ಆಗಿದ್ದರಿಂದ ಅವರ ಕೋರ್ಟಿನ ಪಕ್ಕದಲ್ಲೇ ಇದ್ದ ಪೋಲಿಸ್ ಸ್ಟೇಷನ್ನಿಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದಾಗಿತ್ತು. ಆದರೆ ನನಗೆ ಅಲ್ಲಿಗೆ ಹೋಗಿ ನೋಡುವ ಆಸೆಯಿದ್ದರೂ ಏನೋ ಭಯದಿಂದಾಗಿ ತೆಪ್ಪಗಿದ್ದೆ. ಈ ದಿನ ಶಾಮನಿಗೆ ಧಾರಾಳವಾಗಿ ಅನುಮತಿಯಿತ್ತಿದ್ದ ಅಣ್ಣ ಇಂತಿಷ್ಟು ಹೊತ್ತಿಗೆ ಬಾ ಎಂದು ಹೇಳಿ ಹೋಗಿದ್ದರು. ಈ ಶಾಮನೋ ಕೋರ್ಟು ಯಾವ ಕಡೆ ಇದೆ, ಹೇಗೆ ಬರೋದು ಅನ್ನುವ ವಿಚಾರಗಳನ್ನೇ ಕೇಳಿರಲಿಲ್ಲ. ಅಣ್ಣನಿಗೆ ಯಾವಾಗಲೂ ಶಾಮನ ಮೇಲೆ ಓವರ್ ಕಾನ್ಫಿಡೆನ್ಸು! ಈ ನಟೋರಿಯಸ್ ಫೆಲೋ (ಪ್ರೀತಿಗೆ ಶಾಮನ್ನ ಹಾಗೆನ್ನುತ್ತಿದ್ದರು) ಅಮೇರಿಕಾಗೆ ಬೇಕಾದರೂ ಒಬ್ಬನೇ ಹೋಗಿ ಬರುತ್ತಾನೆ ಎಂದು ಖುಷಿ ಪಡುತ್ತಿದ್ದರು. ಅದು ನಿಜವೇ, ಈಗಿನ ಹಾಗೆ ಜೀ.ಪಿ.ಎಸ್ಸು ಇಲ್ಲ, ಮ್ಯಾಪೂ ಇಲ್ಲ, ಶಾಮಣ್ಣ ನಡೆದಿದ್ದೇ ದಾರಿ.  ಅಮ್ಮ ತಿಂಡಿ ತಿಂದು ಹೋಗ್ರೋ ಎಂದು ಒಂದಿಷ್ಟು ಅನ್ನ-ಸಾರು ಕಲೆಸಿ ಹಾಕಿದ್ದಳು. ನಮಗೆ ಅದೇ ತಿಂಡಿ, ಒಂಥರಾ ಬ್ರಂಚ್! ಗಬಬಗನೆ ತಿಂದು ಇಬ್ಬರೂ ಹೊರಟಾಗ ಅಮ್ಮ ದಾರಿ ಖರ್ಚಿಗೆಂದು ಎಂಟಾಣೆ ಕೂಡಾ ಕೊಟ್ಟಿದ್ದಳು! ಅದರಲ್ಲಿ ಸೀಬೇಕಾಯೋ, ಹಾಲುಕೋವಾನೊ, ಬೊಂಬೆ ಮಿಠಾಯೋ ಯಾವುದು ತಿನ್ನುತ್ತೇವೆ ಎನ್ನುವುದು ಕಾಲವೇ ನಿರ್ಧರಿಸಬೇಕಿತ್ತು. ಇಂತಹಾ ಒಂದು ಸುಡುಬಿಸಿಲಿನ ಮಧ್ಯಾಹ್ನ ನಾವಿಬ್ಬರೂ ಪಾದಯಾತ್ರೆ ಹೊರಟಿದ್ದು. ಎಡ, ಬಲ, ಪೇಟೆ, ಅಲ್ಲಿ, ಇಲ್ಲಿ ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ನಮ್ಮಿಬ್ಬರಿಗೆ ಕಾಲುನೋವೇ ಬರುತ್ತಿರಲಿಲ್ಲವಾ!? ಹೀಗೆಲ್ಲ ಎಷ್ಟೋ ಸಾರಿ ಅಲ್ಲಿಲ್ಲಿ ನೋಡುತ್ತಾ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೋಗುವಾಗ ಕೆಲವು ಅಪರೂಪದ ದೃಶ್ಯಗಳನ್ನು ಶಾಮಣ್ಣ ಪರಿಚಯಿಸುತ್ತಿದ್ದ. ಗಿಣಿ ಶಾಸ್ತ್ರ, ಕೊರವಂಜಿಯರು, ಮಹದೇಶ್ವರನಿಗೆ ಹರಕೆ ಹೊರಟವರು, ಕಡಲೇ ಪುರಿ ಮಾರುವವರು, ಮುಖದ ತುಂಬಾ ವಿಭೂತಿ ಹಚ್ಚಿಕೊಂಡು ಓಡಾಡುವ ಗೊರವಯ್ಯಗಳು, ಬುಡುಬುಡಿಕೆ ಗೊಗ್ಗಯ್ಯಗಳು ಹೀಗೆ ಎಲ್ಲರನ್ನೂ ತೋರಿಸಿ ಅವರ ಗುಣ ವಿಶೇಷಗಳನ್ನು ವರ್ಣಿಸುತ್ತಾ ‘ನೀನು ಒಂಟಿಯಾಗಿ ಕುಣುಕುಣಿತಾ ಇಲ್ಲೆಲ್ಲಾ ಬಂದು ಇವರ ಕೈಗೆ ಸಿಕ್ಕಿಬಿದ್ದರೆ ನಿನ್ನನ್ನು ಕದ್ದುಕೊಂಡು ಹೋಗಿ ತಿಂದುಬಿಡುತ್ತಾರೆ’ ಎನ್ನುವ ಕಟ್ಟೆಚ್ಚರಿಕೆಯನ್ನೂ ದೊಡ್ಡ-ದೊಡ್ಡ ಕಣ್ಣು ಬಿಟ್ಟುಕೊಂಡು ಹೇಳಿ ತನ್ನ ಜವಾಬ್ದಾರಿ ಮೆರೆಯುತ್ತಿದ್ದ. ಯಾವ ಊರಾದರೂ ಹಾಳಾಗಲಿ ಈಗ ನಮ್ಮ ಶಾಮ ನನ್ನ ಜೊತೆಗಿರುವುದರಿಂದ ನನ್ನನ್ನು ಯಾರೂ ಎನೂ ಮಾಡಲಾರರು ಎನ್ನುವ ಧೈರ್ಯದಿಂದ ನಾನು ಮತ್ತಷ್ಟು ಶ್ರೀಮದ್ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದೆ.

ಅವತ್ತೂ ಹೀಗೇ ಅಲೆದಲೆದು ಕೊನೆಗೆ ಕೋರ್ಟು ತಲುಪಿದೆವು. ಕೋರ್ಟಿನ ಮುಂದೆ ಸಾಲಾಗಿದ್ದ ಐಸ್ ಕ್ಯಾಂಡಿ, ಸೀಬೇಕಾಯಿಗಳ ಕಡೆಗೆ ಇಬ್ಬರಿಗೂ ಜೀವ ಎಳೆಯುತ್ತಿತ್ತು. ಇದ್ದ ಎಂಟಾಣೆಯಲ್ಲಿ ಒಂದೊಂದು ಸೀಬೇಕಾಯಿ ಗುಳುಂ ಮಾಡಿ ಕೋರ್ಟನ್ನು ಹೊಕ್ಕೆವು. ಹೇಗೋ ಮಾಡಿ ನಮ್ಮಪ್ಪನ ಆಫೀಸನ್ನು ಪತ್ತೆಹಚ್ಚಿ ಅವರ ಜೊತೆ ಪೋಲಿಸ್ ಸ್ಟೇಶನ್ನಿಗೆ ಹೋದೆವು.  ಅಣ್ಣ ಅಲ್ಲಿದ್ದ ಪೋಲಿಸಿನವರೊಬ್ಬರಿಗೆ ನಮ್ಮಿಬ್ಬರಿಗೂ ಲಾಕಪ್ ತೋರಿಸಲು ಹೇಳಿ ಹೊರಟುಬಿಟ್ಟರು. ನಾನು ಶಾಮ ಇಬ್ಬರಿಗೂ ಕುತೂಹಲ ಮತ್ತು ಅತೀ ಕುತೂಹಲ. ದಪ್ಪ ಮೀಸೆಯ, ಎತ್ತರದ, ಕೆಂಪು ಕಣ್ಣಿನ ಆಜಾನುಬಾಹು ಕಳ್ಳರು ಒಬ್ಬರಿಗಿಂತಾ ಒಬ್ಬರು ಭಯಂಕರವಾಗಿ ಇರುತ್ತಾರೆ ಎಂದು ಹಲವಾರುದಿನಗಳಿಂದ ಕನಸು ಕಂಡಿದ್ದ ನನಗೆ ಅತೀವ ದುಃಖಕರವಾದ ನೋಟ ಕಾದಿತ್ತು. ಅವರೆಲ್ಲಾ ಸಾಧಾರಣ ಮನುಷ್ಯರಂತೆ ಇದ್ದು ನನಗೆ ಇಷ್ಟೊಂದು ನಿರಾಶೆಯನ್ನುಂಟುಮಾಡಿದ್ದು ನಿಜಕ್ಕೂ ತಪ್ಪು ತಾನೆ? ಅಲ್ಲಿದ್ದ ನಾಲ್ಕು ಜನರಲ್ಲಿ ಒಬ್ಬ ಕಳ್ಳ ಮಾತ್ರ ಇದ್ದಿದ್ದರಲ್ಲಿ ಕಪ್ಪಗೆ, ದಪ್ಪಗೆ ಇದ್ದು ಕಳ್ಳರ ಜಾತಿಗೆ ಆಗಬಹುದಾಗಿದ್ದ ಅವಮಾನವನ್ನು ತಪ್ಪಿಸುವಂತಿದ್ದ. ಅದೇಕೋ ಅವನನ್ನು ಮುರಾರೀ, ಮುರಾರೀ  ಎಂದು 3-4 ಸಾರಿ ಪೋಲೀಸಿನವರು ಕೂಗಿ ಏನೋ ಹೇಳಿ, ಕೇಳಿ ಸಹಿ ಮಾಡಿಸಿಕೊಂಡರು. ಅಚಾನಕ್ ನನ್ನ ಕಡೆಗೆ ನೋಡಿದ ಮುರಾರೀ ದೊಡ್ಡದಾಗಿ ಕಣ್ಣು ಬಿಟ್ಟು, ಕೆಂಪು ಹಲ್ಲು ತೋರಿಸಿ ನಕ್ಕುಬಿಟ್ಟ. ಆ ಕ್ಷಣದಲ್ಲೇ ಭೂಮಿ ನಡುಗಿದಹಾಗಾಗಿ ಹೆದರಿ ಗುಬ್ಬಚ್ಚಿಯಾದ ನಾನು ಹೊರಡೋಣ ಬಾರೋ ಬಾರೋ ಎಂದು ಶಾಮನಿಗೆ ದುಂಬಾಲು ಬಿದ್ದು ‘ತಡಿಯೇ ಇವಳೊಬ್ಳು, ಈಗಿನ್ನೂ ಬಂದಿದೀವಿ ಅದು ಹ್ಯಾಗೆ ಹೋಗೊಕ್ಕಾಗುತ್ತೆ ‘ ಎಂದು ಬೈಸಿಕೊಂಡೆ. ಶಾಮ ಮಾತ್ರ ಅಲ್ಲಿದ್ದ ಎಲ್ಲಾ ಕಳ್ಳರ ಜೊತೆಗೆ ಪೋಲೀಸರನ್ನೂ ಮಾತಾಡಿಸಿ ಶೇಕ್ ಹ್ಯಾಂಡ್ಸ್ ಕೊಟ್ಟು, ನನಗೂ ಹಾಗೇ ಶೇಕ್ ಹ್ಯಾಂಡ್ಸ್ ಕೊಡಿಸಿ ಹೊರಗೆ ಕರೆತಂದ. ನಾನು ಅರ್ಧ ಬಿಳುಚಿದ ಮುಖದಿಂದ ಜೊತೆಗೆ ಅಲ್ಲಿಂದ ಪಾರಾಗಿ ಹೊರಬಿದ್ದ ನೆಮ್ಮದಿಯಿಂದ ಶಾಮನ ಜೊತೆಗೆ ಮನೆ ತಲುಪಿದೆ. ಆ ದಿನವೆಲ್ಲಾ ಶಾಮ ಜೈಲಿನ ಬಗ್ಗೆ ವಿವರಿಸಿದ್ದೇ ವಿವರಿಸಿದ್ದು. ಅಣ್ಣ ಮನೆಗೆ ಬಂದನಂತರ  ಪೋಲಿಸಿನೋರು ನಮ್ಮಿಬ್ಬರನ್ನೂ  ತುಂಬಾ ಗಂಭೀರವಾದ (!) ಮಕ್ಕಳೆಂದು ಹೊಗಳಿದ್ದನ್ನು ಸಂತೋಷದಿಂದ ಅಮ್ಮನೊಡನೆ ಹೇಳಿಕೊಂಡರು. ಅವತ್ತೆಲ್ಲಾ ಮನೆಯಲ್ಲಿ ಹಬ್ಬದ ವಾತಾವರಣವಿತ್ತು.  ನನಗೆ ಮಾತ್ರ ಯಾವುದೂ ಬೇಕಾಗಿರಲಿಲ್ಲ. ಮುರಾರಿ ಕಳ್ಳನ ಬೆದರಿಕೆಯ ನೋಟ, ನಗು ಪದೇ ಪದೇ ನೆನಪಾಗಿ ನಡುಕ ಬಂದಹಾಗಾಗುತ್ತಿತ್ತು. ಕೊನೆಗೆ ಶಾಮನೇ ‘ಯಾಕೇ ಹೀಗಿದ್ದೀಯ’ ಎಂದಾಗ ಕಾರಣ ಹೇಳಿ ನನ್ನ ಕಾಲಮೇಲೆ ನಾನೇ ಚಪ್ಪಡಿ ಎಳೆದುಕೊಂಡೆ. ಮುರಾರಿ ಕಳ್ಳನನ್ನು ನಾನು ಎಷ್ಟು ಮರೆಯಲು ಪ್ರಯತ್ನಿಸಿದರೂ ಈ ಶಾಮ ‘ನಾರಿಯಾ ಸೀರೆ ಕದ್ದ…ಕೃಷ್ಣಾ …ಮುರಾರೀ ಎಂದು ಹಾಡಿ ಹಾಡಿ ನಕ್ಕು ನೆನಪು ಮಾಡಿಸಿಬಿಡುತ್ತಿದ್ದ. ನಾನು ಅವನನ್ನು ಹೊಡೆಯಲು ಅಟ್ಟಿಸಿಕೊಂಡು ಹೋಗುವುದು, ಅವನು ಮನೆ ಹಿಂದಿದ್ದ ಕುಳ್ಳು ಮಾವಿನ ಮರ, ಕಾಂಪೌಂಡು ಇತ್ಯಾದಿ ಏರಿ ಅಣಕಿಸುವುದು ಎಲ್ಲಾ ಮಾಮೂಲಾಯಿತು. ಅದು ಹೇಗೋ ಒಂದೆರಡು ದಿನಗಳಲ್ಲಿ ಭಯ ತಾನೇತಾನಾಗಿ ಹೋಯಿತು.

ನಮ್ಮ ಇಂಡೋರ್ ಗೇಮ್ಸ್ ಕೂಡ ಔಟ್ ಡೋರಿನಲ್ಲೇ ಇರುತ್ತಿದ್ದರಿಂದ ನಮ್ಮ ಅಮ್ಮಂದಿರು ಬಚಾವಾಗಿದ್ದರು. ಅದರೂ ಅಟ ಮುಗಿಸಿ ಬಂದೆವಂದರೆ ನಮ್ಮ ಇಡೀ ಶರೀರಗಳು ಬಟ್ಟೆ-ಬರೆಯ ಸಮೇತವಾಗಿ ಮಣ್ಣಿನ ಬಣ್ಣಕ್ಕೆ ತಿರುಗಿ ಟಾಪ್ ಟು ಬಾಟಮ್ ಮಣ್ಣಿನ ಮಕ್ಕಳಾಗಿರುತ್ತಿದ್ದೆವು. ಅ ಮಣ್ಣಿನ ಬಣ್ಣವೇ ತೀರಾ ಅಷ್ಟೊಂದು ಡಾಕ್೯ ಅಗಿದ್ದರೆ ನಮ್ಮ ತಪ್ಪೇನಿದೆ ಹೇಳಿ? ಹಾಗಾಗಿ ನಮ್ಮ ಅಮ್ಮಂದಿರು ಸಹ ನಮ್ಮಂತಹ ಮಕ್ಕಳನ್ನು ಹೆತ್ತ ಮೇಲೆ ಯಾವುದೇ ಸಫ್೯ನ ಖರೀದಿಯಲ್ಲೂ ಸಮಜ್ದಾರಿ ಉಳಿದಿಲ್ಲ ಎನ್ನುವ ಸತ್ಯ ಮನಗಂಡಿದ್ದರು . ಇದೆಲ್ಲದರ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಹಾಗಂತ ನಾವು ದಿನಾ ಮಣ್ಣಾಟ ಆಡುತ್ತಿರಲಿಲ್ಲ, ಫಾರ್ ಎ ಛೇಂಜ್ ಒಮ್ಮೊಮ್ಮೆ ದೇಶಭಕ್ತಿ ಕಥೆಗಳನ್ನು ಹೇಳಿಕೊಳ್ಳುವುದು, ಹಿತ್ತಲಿನ ಗಿಡಮರಗಳಿಗೆ ಪಿಕ್ ಅಂಡ್ ಸ್ಪೀಕ್ ಮಾಡಿಸುವುದು, ಬೊಂಬೆಗೆ ಆಪರೇಶನ್ನು, ಇನ್ನೊಂದು ದಿನ ಪರ್ವತಾರೋಹಣ (ಮರಳಿ ಗುಡ್ಡಾ), ಮ್ಯಾಚೆಸ್ಸ್ ಕಲೆಕ್ಷನ್ನು, ಶಾಮನ ಸ್ಥಳೀಯ ಗೆಳೆಯರು ಮತ್ತು ಅವನು ಆಡುವ ಗೋಲಿ ಆಟ ಮತ್ತು ಲಗೋರಿ ನೋಡುವುದು (ಇದಕ್ಕೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ನನಗೆ ತುಂಬಾ ಕೋಪವಿತ್ತು), ಇರುವೆಗಳು ಹೇಗೆ ಓಡಾಡುತ್ತವೆ ಎನ್ನುವ ಬಗ್ಗೆ ರಿಸರ್ಚು, ಅಮ್ಮ ಒಣಗಿಸಲೆಂದು ಇಟ್ಟಿದ್ದ ಸಂಡಿಗೆಗಳನ್ನು ಮಳೆ ಬಂದಾಗ ಎತ್ತಿ ತರುವ ನೆಪದಲ್ಲಿ ಅರೆ-ಹಸಿ ಸ್ಟೇಜಿನಲ್ಲೇ ಸ್ವಾಹಾ ಮಾಡುವುದು, ಮನೆಯ ಹೊರಗಿನ ಮರದಲ್ಲಿದ್ದ ಅಂಟು ಕಾಯಿಗಳನ್ನು ಜಜ್ಜಿ ಬಾಲ್ ಮಾಡುವುದು, ಸೈಕಲ್ ಶಾಪಿನ ಮುಂದೆ ಮಣ್ಣಲ್ಲಿ ಮಣ್ಣಾಗಿದ್ದ ಗುಂಡುಗಳನ್ನು ವಜ್ರಕ್ಕಿಂತಾ ಅಮೂಲ್ಯ ಎನ್ನುವಂತೆ ಆರಿಸಿ ಸೈಕಲ್ ಶಾಪಿನವರ ಹತ್ತಿರ ಛೀ, ಥೂ ಎನ್ನಿಸಿಕೊಂಡು ಓಡಿಬರುವುದು ಇಂತಹ ನೂರೆಂಟು ಆಟಗಳನ್ನು ಆಡುತ್ತಾ, ಕುಣಿಯುತ್ತಾ ಕಾಲ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ, ಅಷ್ಟರಲ್ಲಿ ಶಾಮನ ರಜೆ ಮುಗಿದು ಅವನು ಊರಿಗೆ ಹೋಗುವ ದಿನ ಬಂದುಬಿಡುತ್ತಿತ್ತು, ಶಾಮ ಬೆಂಗಳೂರಿಗೆ ಹೊರಡಬೇಕಾಗುತ್ತಿತ್ತು. ಬೆಳಗಿನ ನಸು ಬೆಳಕಿನಲ್ಲೇ ನಾನೂ ಅಣ್ಣ ಹೋಗಿ ಅವನನ್ನು ಬಸ್ಸಿನಲ್ಲಿ ಕೂರಿಸಿ ಟಾಟಾ ಮಾಡಿ ಬೀಳ್ಕೊಡುತ್ತಿದ್ದೆವು. ವಾಪಸ್ಸಾಗುವಾಗ ದಾರಿಯುದ್ದಕ್ಕೂ ನಾನು ಸೊರ ಸೊರ ಅಳುತ್ತಾ ಬಂದು ಮರುದಿನದ ನನ್ನ ಶಾಲೆಯ ತಯಾರಿ ನಡೆಸಲು ಅನುವಾಗುತ್ತಿದ್ದೆ.  ಹಾಗೆಯೇ …ಶಾಮಣ್ಣನ ಮುಂದಿನ ರಜೆಯ ಬರುವಿಕೆಗೆ ದಾರಿ ಕಾಯುತ್ತಿದ್ದೆ.

Leave a comment

Filed under ಲೇಖನಗಳು

ಎಲ್ಲಿಂದಲೋ ಬಂದವಳು

t ಬೇಸರ ಯಾರಿಗಾಗುವುದಿಲ್ಲ ಹೇಳಿ? ಮನಸ್ಸು ಇರುವವರೆಗೂ ಇದರ ಗೊಡವೆ ತಪ್ಪಿದ್ದಲ್ಲ. ಬೇಸರವನ್ನು ವಿಜೃಂಭಿಸುವಲ್ಲಿ ಕವಿಗಳೇನು ಹಿಂದುಳಿದಿಲ್ಲ ಬಿಡಿ….ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…ಇಂಥಾ ಒಂದು ಸಂಜೆಯಲ್ಲೇ ಮನಸ್ಸು ರಾಡಿಯಾಗಿ, ಬೋಡಿಯಾಗಿ, ಜೋಡಿಯಿಲ್ಲದ ಮೂಡಿಯಾಗಿ, ಕೊನೆಗೆ ತಾನೇ ಕಿಡಿಗೇಡಿಯಾಗಿ, ಬೇಸರ ಪುಡಿ ಪುಡಿಯಾಗಿ…ಮತ್ತೆ ಹೂನಗು ಅರಳಬೇಕು!….ಕತ್ತಲಾದ ಮೇಲೆ ಬೆಳಕು ಖಂಡಿತ……ಕಾರ್ಮೋಡದಂಚಿನ ಬೆಳ್ಳಿ ಕಿರಣ….ಇವೆಲ್ಲಾ ನಿಜವೇ?

ಯಾವುದು ಹೇಗೋ…ಅಡ್ರಿನಲಿನ್ ಎನ್ನುವ ಹಾರ್ಮೋನ್ ಬಗ್ಗೆ ಕೇಳಿದ್ದೀರಾ? ಅತೀವ ಆತಂಕದ ಕ್ಷಣಗಳಲ್ಲಿ ಬಿಡುಗಡೆಯಾಗುವ ಈ ವಸ್ತು “ಫೈಟ್ ಅಥವ ಫ್ಲೈಟ್” ತಂತ್ರದಿಂದ ಕಾರ್ಯ ನಿರ್ವಹಿಸುತ್ತದೆ. ಆತಂಕವನ್ನೆದುರಿಸಲು ಶರೀರವನ್ನು ಹಾಗು ಮನಸ್ಸನ್ನು ತಯಾರು ಮಾಡುತ್ತದೆ. ಈ ಗ್ರಂಥಿ ಮೂತ್ರಜನಕಾಂಗದ ಮೇಲೆ ಸುಮಾರು ೩ ಇಂಚುಗಳಷ್ಟು ಉದ್ದಕ್ಕೆ ತನ್ನ ಸ್ಥಾನವನ್ನಲಂಕರಿಸಿದೆ. ಆದರೆ ಇದರ ಕಾರ್ಯನಿರ್ವಹಣೆಯ ವೈಖರಿ ನೋಡಿ….ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನಿಸಲಿಲ್ಲವೆ?

ಕೆಲವೊಮ್ಮೆ ಅತಿ ಸಣ್ಣ ವಸ್ತುಗಳು ದೊಡ್ಡ ಪ್ರಮಾಣದ ಬೇಸರಗಳ ಬಾಯ್ಮುಚ್ಚಿಸಲು ಕಾರಣವಾಗುತ್ತವೆ. ಅತೀವ ಸಂಕಟದ ಹೊಟ್ಟೆನೋವು ಬಾಧಿಸುತ್ತಿರುವಾಗ ಗೆಳತಿಯ ಪುಟ್ಟ ಎಸ್.ಎಮ್.ಎಸ್……ತುಟಿಯಂಚಲ್ಲಿ ನಗೆಯುಕ್ಕಿಸುವಲ್ಲಿ ಸಮರ್ಥವಾಗಬಹುದು. ಅಪ್ಪ-ಅಮ್ಮನ ಜಗಳದಲ್ಲಿ ಮಗುವಿನ ಮುದ್ದು ಮೊದ್ದು ತೊದಲು ನುಡಿಯೊಂದು ಜಗಳದ ವಸ್ತುವೇ ಬಡವಾಯ್ತು ಎನ್ನಿಸುವ ತಂಗಾಳಿ ಬೀಸಿಬಿಡಬಹುದು. ಹೀಗೆ….ಸುತ್ತಮುತ್ತಲಿನ ಹಲವಾರು ನಡೆದಾಡುವ ಸಂತಸಗಳು ನಮ್ಮನ್ನು ಸುತ್ತುವರೆದಿರುತ್ತವೆಯೇನೋ!!!! ಗಮನಿಸುವ ತಾಳ್ಮೆ ನಮಗೆ ಬೇಕು ಅಲ್ಲವೆ?

ಹಲವು ಸಾರಿ ಪುಟ್ಟ ಪುಟ್ಟ ಘಟನೆಗಳು ಬದುಕುವ ಕಲೆಯನ್ನು ಕಲಿಸುತ್ತಾ ಸಾಗುತ್ತಿರುವ ಮೊಬೈಲ್ ಜ್ಞಾನಕೇಂದ್ರಗಳಾಗಿರುತ್ತವೆ. ಬದುಕುವುದು ಹೇಗೆ ಎನ್ನುವುದಕ್ಕೆ ಅನೇಕ ಸೂತ್ರಗಳೂ, ವಾದ-ವಿವಾದಗಳೂ ಬದುಕಿನ ಜೊತೆ ಜೊತೆಗೇ ಹುಟ್ಟಿ ಬೆಳೆಯುತ್ತವೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೇ ಸ್ಥಿತಪ್ರಜ್ಞನಾಗಿರು ಎಂದುಬಿಟ್ಟಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ.  ಅಲ್ಲಾ…ಅಪರೂಪಕ್ಕೆ ಒಮ್ಮೆ ಯಾರಾದರೂ ಹೊಗಳಿದರೆ ಹಿಗ್ಗಿ ಹೀರೇಕಾಯಾಗಿ ಹಲ್ಲು ಕಿರಿಯುವುದು ಬಿಟ್ಟು ಶ್ರೀಮದ್ಗಾಂಭೀರ್ಯ ನಟಿಸುವುದೇ….ಅದಾಗುವುದಿಲ್ಲ ಬಿಡಿ! ಹಾಗೇ ಮನೆಯಲ್ಲಿ ಮಾರಾಮಾರಿ ಜಗಳವಾಗುತ್ತಿರುವಾಗ ನಗುನಗುತಾ ನಲಿ ನಲಿ ಎಂದು ಕೂತರೆ ಹುಚ್ಚಾಸ್ಪತ್ರೆ ಗ್ಯಾರಂಟಿಯಷ್ಟೆ! ನೀವೇನೇ ಅನ್ನಿ…ಮನಸ್ಸು ಎನ್ನುವ ಮಾಯಾಂಗನೆ ಬಲು ಚಂಚಲೆ.  ಎಲ್ಲಿ ಅಳಿಸುವಳೋ, ಎಲ್ಲಿ ನಗಿಸುವಳೋ, ಎಲ್ಲಿ ನಿಲ್ಲಿಸುವಳೋ, ಎಲ್ಲಿ ತೇಲಿಸಿ ಮುಳುಗಿಸುವಳೋ ಅರಿವಾಗದಂತೆ ಮೀನ ಹೆಜ್ಜೆಯಿಡುತ್ತಲೇ ನಡೆಯುವ ಮೋಹನಾಂಗಿಯವಳು.  ಆದರೂ ಸಮಯೋಚಿತ ತಿಳಿಹಾಸ್ಯಪ್ರಜ್ಞೆ ಎಲ್ಲಿಯವರೆಗೆ ನಮ್ಮೊಂದಿಗಿರುವುದೋ ಅಲ್ಲಿಯವರೆಗೂ ನಮ್ಮನ್ನು ಅಲ್ಲಾಡಿಸಲು ಯಾವ ಡಿಪ್ರೆಷನ್ ಗೂ ಸಾಧ್ಯವಿಲ್ಲ ಬಿಡಿ. ಇದರರ್ಥ ಬದುಕನ್ನು ಹಗುರವಾಗಿ ಪರಿಗಣಿಸಿ ಎಂದಲ್ಲ, ಬರುವ ಕಷ್ಟ-ಸುಖಗಳನ್ನು ಹಗುರವಾಗಿ ನೋಡಿ ಪರಿಹಾರಕ್ಕೆ ಗಮನಕೊಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು.  ಹೀಗೆ ನಮ್ಮನೆ ಆಮೆ ನನಗೊಂದು ಪಾಠ ಕಲಿಸಿ ನನ್ನ ಹೃದಯದಲ್ಲಿ ಮೇಷ್ಟ್ರ ಸ್ಥಾನ ಪಡೀತು ಅಂದ್ರೆ ನಂಬ್ತೀರಾ?

ಅಯ್ಯೋ..ಆ ಆಮೆದೇ ದೊಡ್ಡ ಕಥೆ ಕಣ್ರೀ….ನನ್ನ ಮಗನ ಗೆಳೆಯನ ತೋಟದ ಬಾವಿಯಲ್ಲಿ ಜಾಯಿಂಟ್ ಫ್ಯಾಮಿಲಿನಲ್ಲಿ ಜಗಳ ಕಾಯುವ ಬಜಾರಿ ಕಿರಿ ಮಗಳಂತಿದ್ದ ಇದಕ್ಕೆ ತಾನು ನಮ್ಮನೆಗೆ ಬಂದಿದ್ದು, ಪೇಯಿಂಗ್ ಗೆಸ್ಟ್ ಆಗಿ ತಾನು ನಮ್ಮನೆ ಅಕ್ವೇರಿಯಂನಲ್ಲಿ ನೆಲೆಸಿದ್ದು ಅತೀವ ಹೆಮ್ಮೆ ಮೂಡಿಸಿದೆ. ಪೇಯಿಂಗ್ ಗೆಸ್ಟ್ ಹೇಗೆ ಅಂತೀರಾ? ಇವಳು ಕೊಡುವ ಸಂತೋಷ ಎಷ್ಟು ದುಡ್ಡಿಗೂ ಸಿಗೋಲ್ಲ ಬಿಡ್ರೀ! ಅದೇನು ಧಿಮಾಕು ಅಂತೀರಾ ಈಕೆಗೆ? ಮನೆ ಮಂದಿಯೆಲ್ಲಾ ಅವರವರ ತಲೆಗೊಂದೊಂದರಂತೆ ಹೆಸರಿಟ್ಟು ಇವಳನ್ನು ಕರೆದರೂ ತನ್ನೆಲ್ಲಾ ಹೆಸರೂ ಇವಳಿಗೆ ನೆನಪಿದೆ ಗೊತ್ತಾ!? ಮಿಟ್ಟೂ, ಟರ್ಟೂ, ಚಿಂಟೂ…ಇದೆಲ್ಲದರ ಜೊತೆಗೆ ಇಟ್ಟಿರೊ ಅಚ್ಚ ಕನ್ನಡದ ಹೆಸರು “ಕಣ್ಮಣಿ.” ಇದೊಂದು ಉಭಯ ಜೀವಿ. ನೀರು ಮತ್ತು ನೆಲ ಎರಡರ ಮೇಲೂ ಬಾಳುವ ತಾಕತ್ತು ಹೊಂದಿರೊ ಪ್ರಾಣಿ. ಯಾವತ್ತೂ ಬೇಸರಗೊಂಡು ಚಲನೆ ಮರೆತು ಕುಳಿತ ದಿನಗಳೇ..ಉಹೂಂ…ನನಗೆ ನೆನಪಿಲ್ಲ. ನೆಲದ ಮೇಲೆ ಬಿಟ್ಟೊಡನೆ ತಪ್ಪು ಹೆಜ್ಜೆಯಿಡುತ್ತಾ ಓಡುವ ಮಕ್ಕಳ ಥರ…ಚಿನ್ನಾಟವಾಡುತ್ತಾ ಓಡಲು ಮೊದಲಾಗುತ್ತಾಳೆ. “ಮೊಲ ಮತ್ತು ಆಮೆ ಪಂದ್ಯ” ದಲ್ಲಿ ಇವಳಿದ್ದಿದ್ರೆ….ನಾನು ಛಾಲೆಂಜ್ ಮಾಡ್ತೀನಿ, ಇವಳೇ ಕಣ್ರಿ ಗೆಲ್ತಿದ್ದಿದ್ದು. ಇನ್ನು ಅಕ್ವೇರಿಯಂನಲ್ಲಿ ಬಿಟ್ಟಾಗ…  ಬ್ಯಾಸ್ಕಿಂಗ್ ಏರಿಯಾ ಅಂತ ಅಕ್ವೇರಿಯಂನಲ್ಲಿ ಒಂದಿರುತ್ತೆ, ನೀರಿಂದ ಮೇಲೆ ಗಾಳಿ ಸೇವನೆಗೆ ಬಂದು ಕುಳಿತುಕೊಳ್ಳುವ ಅಟ್ಟದಂಥಾ ಜಾಗ…ಅಲ್ಲೂ ಅವಳೇ ಬಾಸ್. ಕರೆದರೆ ಕುಪ್ಪಳಿಸುತ್ತಾ ಬಂದು ನಮ್ಮ ಮಾತುಗಳನ್ನೆಲ್ಲಾ ಕತ್ತು ಕೊಂಕಿಸಿ ಕೇಳಿಕೊಂಡು, ಬಿಟ್ಟಿ ಸಲಹೆನೂ ಕೊಟ್ಟು (ಅವರವರ ಭಾವಕ್ಕೆ), ಇಷ್ಟೇನಾ ನಿನ್ನ ಗೋಳೂ…ವೆರಿ ಸಿಂಪಲ್..ಡೊಂಟ್ ವರಿ ಎನ್ನುತ್ತಾ ನೀರಲ್ಲಿ ಧುಮುಕಿ ಅಂತರ್ಧಾನಳಾಗಿಬಿಡೊ ಇವಳು ಒಮ್ಮೆ ನನ್ನ ಬದುಕಿನ ಗತಿನ ಹೇಗೆ ಬದಲಿಸಿಬಿಟ್ಳು ಅಂತೀರಾ…!!!! ಇವಳಿಗೇನೂ ಚಿಂತೆಗಳೇ ಇಲ್ಲವೇ? ದೂರದಿಂದ ಎಲ್ಲಿಂದಲೋ ಬಂದವಳು …ಮೊದ ಮೊದಲು ನನಗೆ ಇವಳ ಮೇಲಿದ್ದ ಅತೀ ಕಾಳಜಿ ನೋಡಿ ನನ್ನನ್ನು ‘ಆಹಾ ಮಳ್ಳಿ’ ಎಂದುಕೊಂಡಿರಬಹುದು…’ಲೀವ್ ಮಿ ಅಲೋನ್’ ಎಂದು ನನಗೆ ವಾರ್ನಿಂಗೂ ಕೊಟ್ಟಿರಬಹುದು. ನನ್ನ ಮಗನನ್ನು ನೋಡಿ ತನ್ನ ಅಣ್ಣನನ್ನು ಮಿಸ್ ಮಾಡಿಕೊಂಡಿರಬಹುದು. ವರ್ಲ್ಡ್ ಕಪ್‌ನ ನನ್ನ ಮಗನ ಜೊತೆ ತದೇಕಚಿತ್ತವಾಗಿ ನೋಡಿ, ಸಚಿನ್ ಔಟ್ ಆದಾಗ ಮುಖ ಸಿಂಡರಿಸಿಕೊಂಡು, ಕೊನೇಲಿ ಧೋನಿ ಸಿಕ್ಸ್ ಹೊಡೆದಾಗ ಸಂತೋಷದಿಂದ ನೀರಲ್ಲಿ ಲಗಾಟೆ ಹಾಕಿ ಸೆಲಿಬ್ರೇಟ್ ಮಾಡಿದ ಇವಳ ರೀತಿ….ಅಮೇಜಿಂಗ್ ಕಣ್ರೀ!  ನನ್ನ ಗೆಳತಿಯ ಮೌನ ಸಂಭಾಷಣೆ (ನನ್ನ ಗೆಳತಿ ಕಣ್ಮಣಿಯ ಜೊತೆ ನನ್ನ ಹಾಗೆ ಅಬ್ಬರಿಸಿ ಬೊಬ್ಬಿರಿಯುವುದಿಲ್ಲ) ತಾಯಿಯ, ಅಕ್ಕನ ಅಥವ ಮಗಳ ನೆನಪನ್ನು ತಂದಿರಬಹುದು. ಹಲವು ಬಾರಿ ಇವಳು ಹಾಗು ನನ್ನ ಗೆಳತಿ ಇಬ್ಬರೂ ಏನೋ ತದೇಕ ಚಿತ್ತರಾಗಿ ಒಬ್ಬರನ್ನೊಬ್ಬರು ನೋಡುತ್ತಾ, ನಸು ನಕ್ಕು ಟೆಲಿಪತಿ ಮೂಲಕ ಸಂಭಾಷಿಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಉಭಯ ಕುಶಲೋಪರಿಯಂತೆ ಕಂಡರೂ ಅದೇನೇನು ವಿಷಯ ಹಂಚಿಕೊಳ್ಳುತ್ತಾರೋ ಕಾಣೆ..ತವರಿಗೆ ಬಂದು ತಾಯಬಳಿ ಕಷ್ಟ-ಸುಖ ಮಾತಾಡಿಕೊಂಡು ಗೆಲುವಾದ ಹೆಣ್ಣುಮಕ್ಕಳಂತೆ ಇಬ್ಬರೂ ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅದೇನು ಚರ್ಚೆ ನಡೆಸುತ್ತಾರೋ…ಅದು ಬಿಡಿ…ಟಾಪ್ ಸೀಕ್ರೆಟ್!

ಅಂದು ಸಂಜೆ ಮನದ ಮುಗಿಲಿನ ತುಂಬಾ ಚಿಂತೆಯದೇ ಕಾರ್ಮೋಡವಿತ್ತು.  ಮೊದಲಿನಂತೆ ಹರಟದೆ ನನ್ನ ಗೆಳತಿಯ ಹಾಗೆ ಆಮೆಯ ಜೊತೆ ಅವಳ ಆಟ ನೋಡುತ್ತಾ ನೋಡುತ್ತಾ ಮೌನ ಸಂಭಾಷಣೆಗಿಳಿದೆ.  ಅವಳು ಹೇಳಿದ್ದಿಷ್ಟು. ಚಿತೆಗೂ ಚಿಂತೆಗೂ ಒಂದು ಸೊನ್ನೆಯಷ್ಟೇ ವ್ಯತ್ಯಾಸ….ಚಿತೆ ನಿರ್ಜೀವವನ್ನು ಸುಟ್ಟರೆ ಚಿಂತೆ ಜೀವವನ್ನೇ ಸುಡುತ್ತದೆ. ಚಿಂತೆಯಿಲ್ಲದ ಮನಸ್ಸನ್ನು ಹುಡುಕುವುದು ಸಾವಿಲ್ಲದ ಮನೆಯ ಸಾಸಿವೆಕಾಳನ್ನು ತರುವಷ್ಟೇ ಕಷ್ಟ. ಪ್ರತಿಯೊಬ್ಬ ಮನುಷ್ಯನೂ ತನ್ನ ಚಿಂತೆಗಳ ಮೊತ್ತವನ್ನು ಹೇಗೆ ತನ್ನ ಚಿಂತನೆಯ ಮುಖಾಂತರ ಬಗೆಹರಿಸಿಕೊಳ್ಳುತ್ತಾನೋ ಆ ಆಧಾರದ ಮೇಲೆ ಅವನು ಪ್ರತ್ಯೇಕ ವ್ಯಕ್ತಿಯೆನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕು ಭೌತಿಕವಾಗಿ ಇಂತಿಷ್ಟೇ ಎಂದು ಒಂದಿಷ್ಟು ಅಕ್ವೇರಿಯಂ, ಒಂದಿಷ್ಟು ಬ್ಯಾಸ್ಕಿಂಗ್ ಏರಿಯಾ, ಒಂದಿಷ್ಟು ನೆಲ, ಒಂದು ಪರಿಸರ, ಒಂದಿಷ್ಟು ಸಂಗಡಿಗರು ಇತ್ಯಾದಿಗಳನ್ನು ಹಲವಾರು ಚಿಂತೆಗಳ ಫ್ರೀ ಪ್ಯಾಕೇಜ್ ಜೊತೆಗೆ ಕೊಟ್ಟಿದೆ. ಇದರ ಜೊತೆಗೆ ಬಾಳಲು ನಮ್ಮ ಚಿಂತನೆಯ ಉಪಯೋಗ ನಾವು ಮಾಡಿಕೊಳ್ಳಬೇಕಷ್ಟೆ. ಈ ಕಟ್ಟುಪಾಡು ಭೌತಿಕವಾಗಿಯೇ ಹೊರತು ಮಾನಸಿಕವಾಗಿ ಸುಮೇರುವಾಗಲು ಯಾರಿಗೂ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ವಿಧಿಯ ಮಳೆಗರೆಯೆ…..ಎಲ್ಲರೊಳಗೊಂದಾಗು ಮಂಕುತಿಮ್ಮ. ಚಿಂತೆ ಹಾಗು ಸಂತಸಗಳು ಮಗ್ಗುಲು ಬದಲಾಯಿಸಿದ ಹಾಗೆ. ಒಂದೇ ಕಡೆ ಮಲಗಿ ಜಡ್ಡುಗಟ್ಟುವ ಮೊದಲು ಪಕ್ಕಕ್ಕೆ ಹೊರಳುವ ಅಲ್ಪ ಪ್ರಯೋಗ ನಮ್ಮ ಮನಸ್ಸಿನ ಮೇಲೆ ನಾವು ಮಾತ್ರ ಮಾಡಿಕೊಳ್ಳಬಹುದು…ಇತರರು ಕಾರಣವಾಗಬಹುದು, ಉದಾಹರಣೆಯೂ ಆಗಬಹುದು. ನಮ್ಮೊಳಗೊಂದು ಜಗತ್ತಿದೆ, ಹೊರಗಿರುವಂತೆಯೇ. ಒಳಜಗತ್ತಿನ ಕರ್ತೃ ಕೇವಲ ನೀನೆ. ಅವಳು ತನ್ನ ಮಾತು ಮುಗಿಸಿ ಜಲಕ್ರೀಡೆಗೆ ಅನುವಾದಳು.

ಬಾಗಿಲು ತೆರೆದು ಹೊರಬಂದ ನಾನು ಸಂಜೆಯ ಆಗಸಕ್ಕೆ ಮುಖಮಾಡಿ ನಿಂತೆ. ಮತ್ತದೇ ಸಂಜೆ, ಅದೇ ಏಕಾಂತವಿತ್ತು…ಆದರೆ ಮತ್ತದೇ ಬೇಸರ?…ಉಹೂಂ…ಇಲ್ಲ..ಇರಲಿಲ್ಲ!  ಆಕಾಶದಲ್ಲಿ ಹತ್ತಿ ಹಿಂಜಿದಂತೆ ಬೆಳ್ಮುಗಿಲು, ಮರಳಿ ಮನೆಗೆ ಸಾಗುತ್ತಿರುವ ಬೆಳ್ಳಕ್ಕಿ ಹಿಂಡು..ನಮ್ಮೊಳಗಿನ ಯೋಚನೆ ಹಾಗು ಯೋಜನೆಗಳಂತೆ!

Leave a comment

Filed under ಲೇಖನಗಳು

ಮರೆತೇನೆಂದರೆ ಮರೆಯಲಿ ಹ್ಯಾಂಗಾ……

imagesDISCLIMER:  ಈ ಲೇಖನದಲ್ಲಿ ಬರುವ ಅನೇಕ ಪಾತ್ರಗಳು ಹಾಗು ಸನ್ನಿವೇಶಗಳು ಕಾಲ್ಪನಿಕ. ಒಂದುವೇಳೆ ಅವು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಗಳನ್ನು ಹೋಲುತ್ತಿದ್ದರೆ ಅದು ಕಾಕತಾಳೀಯ.

ಹಳೆಯ ನೆನಪುಗಳ ಜಾಡಿನಲ್ಲಿ ಅಲೆದಾಡಿ ಬರುವುದು ಎಷ್ಟೋ ಬಾರಿ ಚೇತೋಹಾರಿ, ಹಾಗೆಯೇ ಒಮ್ಮೊಮ್ಮೆ ತಿಳಿಯಾದ ಎದೆಗೊಳವ ರಾಡಿಗೊಳಿಸುವ ಹೆಮ್ಮಾರಿ.

ಹೀಗೊಂದು ಸವಿನೆನಪು ನನ್ನ ಪಟ್ಟಣದ ಮನೆ. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂತಾರೆ. ನಾನು ಹುಟ್ಟಿದ ಊರು, ನಾನು ಹುಟ್ಟಿ ಬೆಳೆದ ಮನೆ ನನ್ನೊಲುಮೆಗೆ ಪಾತ್ರವೆಂದುಕೊಳ್ಳುವುದು ನನ್ನ ನಿಹಿತ ಸ್ವಾರ್ಥಗಳ ಪಟ್ಟಿಯಲ್ಲಿ ಮೊದಲನೆಯದು. ಇದರ ಬಗ್ಗೆ ಹೇಳುವಾಗ ಹೇಗೆ ಹೇಗೋ ಆತಾತುರವಾಗಿ ಹೇಳಲಾಗುವುದಿಲ್ಲ. ಮಗು ತನ್ನ ಸುತ್ತ ಆಟಿಕೆಗಳನ್ನು ಹರಡಿಕೊಂಡು ಸಂಭ್ರಮಿಸುವ ಹಾಗೆ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಡಿಸಿಡುತ್ತಾ ನಾನೂ ಸವಿದು ಮೆಲುಕುಹಾಕಬೇಕು.

ಪಟ್ಟಣವೆಂದರೆ ಯಾವೂರೆಂದುಕೊಂಡಿರೀ? ಅದೇ ಶ್ರೀರಂಗಪಟ್ಟಣ..ಟಿಪ್ಪೂ ಸುಲ್ತಾನ್, ಐತಿಹಾಸಿಕ ನಗರಿ, ಮಣ್ಣು ಮಸಿ….ನನ್ನ ಪಾಲಿಗೆ …ಉಹೂಂ….ಅದೊಂದು ಅಜೀವ ಜೀವಸೆಲೆ. ಆ ಊರು ತಲುಪುತ್ತಲೇ ಮನಸ್ಸು ಗರಿಗೆದರುತ್ತದೆ. ಊರ ಧೂಳು, ಬಿಸಿ ಮಿಶ್ರಿತ ಬಿಸುಪು ತಂಗಾಳಿ (!) ಬಾಚಿ ತಬ್ಬಿ ತಲೆ ನೇವರಿಸುತ್ತದೆ…ಬೀದಿಗಳುದ್ದಕ್ಕೂ ಹಳೇ ನೆನಪುಗಳು ಮೆರವಣಿಗೆ ಹೊರಟಾಗ ಮನಸ್ಸೇಕೋ ಸುಖಾಸುಮ್ಮನೆ ಉತ್ಸವ ಮೂರ್ತಿ…ಈಗಿನಂತೆ ಆಗ ಆಟೋ ಇರಲಿಲ್ಲ..ಕುದುರೆಗಾಡಿ, ಕಮಾನು, ಕುಚ್ಚು ಟೇಪು, ಮುಂದೆ ಸುರಿದ ಹುಲ್ಲು, ಕುದುರೆ ಲದ್ದಿಯ ವಾಸನೆ, ನಮ್ಮ ಗಾಡಿಗೇ ಬನ್ನಿ ಎಂದು ನನ್ನಂಥಾ ಕಿಡಿಗೇಡಿ ಮಕ್ಕಳ ಕೈಗೆ ಚಾಟಿ ಕೊಟ್ಟು (ಗಾಡಿ ಏರಿದ ನಂತರ ಕಸಿದು) ಮನವೊಲಿಸುವ ಜಟಕಾ ಸಾಬಣ್ಣ. ಗಾಡಿ ಹತ್ತಿ ಕುಳಿತು ಕಣ್ಣುಮುಚ್ಚಿದರೆ ಮನಸ್ಸು ಕಾಮನಬಿಲ್ಲಂತೆ ಬಣ್ಣ ಬಣ್ಣ. ಕೋಟೆ ಬಾಗಿಲು ದಾಟುತ್ತಿದ್ದಂತೆ ನನ್ನ ಕುರುಡು ಅಂದಾಜು ಬಾಲ ಬಿಚ್ಚುತ್ತಿತ್ತು. ಟೊಕ್ ಟೊಕ್ ಟೊಕ್…ಲಾಳ ಬಡಿಸಿಕೊಂಡ ಕುದುರೆಯ ಲಯಬದ್ಧ ಚಲನೆಯಲ್ಲಿ ಈಗ ಫೌಂಟನ್ ದಾಟಿದ್ದೇವೆ, ಮುಂದಕ್ಕೆ ಮೂರು ಮತ್ತೊಂದು ಅಂಕಣವಿರುವ ನಮ್ಮೂರ ರಾಜಮಾರ್ಗ.  ಆಹಾ…ಚುರ್ ಅನ್ನುತ್ತೆ…ಕಲ್ಲ ಮೇಲೆ ಗಾಡಿ ಚಕ್ರ ಹತ್ತಿದ್ದಕ್ಕೆ ಕುದುರೆಗೆ ಚಾಟಿ ಪ್ರಹಾರ….ಹೆಹ್ಹೆಯ್..ಬಾಜು ಬಾಜು…ಆ ಕಿರು ಓಣಿಯಂಥಾ ರಾಜಬೀದಿಯಲ್ಲೇ ಎಡಕ್ಕೆ ಮಾಯಣ್ಣ ಡಾಕ್ಟ್ರ ಶಾಪು, ಪಟ್ಟಾಭಿ ರಾಮ ಮಂದಿರ, ಬಲಕ್ಕೆ ಗಣಪತಿ ಅಂಗಡಿ, ವೆಂಕಣ್ಣನ ಅಂಗಡಿ, ಅಲ್ಲೀ..ಅಲ್ಲೇ ಮುಂದಕ್ಕೆ ಮಹಡಿ ಮೇಲೆ ನನ್ನಪ್ಪನ ಲಾಯರ್ ಆಫೀಸು…ಹಾಗೇ ಬಂದು ಎಡಕ್ಕೆ ಅಂಬಾಭವನ್ ಹೋಟ್ಲು ಮತ್ತು ಬಲಕ್ಕೆ ಉಶಾ ಡಾಕ್ಟ್ರ ಶಾಪು….ಹಾಂ….ಹೋಲ್ಡ್ ಆನ್..ಇಲ್ಲೇ ನಾವು ಬಲಕ್ಕೆ ತಿರುಗಬೇಕು…ಬಲ ಮೂಲೆಗೆ  ಉಶಾ ಡಾಕ್ಟ್ರ ಶಾಪಾದರೆ ಎಡ ಮೂಲೆಗೆ ಪೇಟೆ ನಾರಾಯಣಸ್ವಾಮಿ ಗುಡಿ…ಈಗ ನಾನು ಕಣ್ಣು ಬಿಡಲೇ ಬೇಕಲ್ಲಾ..ತಲೆ ತಗ್ಗಿಸಿದ ಹಾಗೆ ಮಾಡಿ, ಅರೆಗಣ್ಣು ಮುಚ್ಚಿ, ಕೈಜೋಡಿಸಿ ನಮಸ್ಕಾರ ಮಾಡೊ ಹಾಗೆ ಮಾಡಿದರೂ ಕಳ್ಳಗಣ್ಣು ಅಲ್ಲಿನ ಪ್ರಸಾದದ ಆಸೆಗೆ (ಇದರ ಐತಿಹ್ಯ ಆಮೇಲೆ ಹೇಳ್ತೀನಿ) ದೇವಸ್ಥಾನ ಬಾಗಿಲು ತೆಗೆದಿದ್ಯೊ ಇಲ್ವೊ ಅನ್ನೊದನ್ನೇ ಗಮನಿಸ್ತಿದ್ದಿದ್ದು!  ದೊಡ್ಡ ಪ್ರಾಂಗಣದ ಈ ಕಡೆ ಮಧ್ಯಕ್ಕೊಂದು ಬಾವಿಕಟ್ಟೆ. ಸಧ್ಯ! ಅದರ ಆಚೀಚೆ ಬದಿ ಮುಚ್ಚಿಲ್ಲ ಅನ್ನೊ ಅಂಶ ಗೋಚರವಾದರೆ ಸಾಕು..ಅರ್ಧ ಲೋಕ ಗೆದ್ದ ಸಮಾಧಾನ..ಅಮ್ಮನ ಕಣ್ಣು ತಪ್ಪಿಸಿ ಮೋಟುಗೋಡೆ ಹಾರಲು ನನಗಿದ್ದ ಕಳ್ಳಗಿಂಡಿಯದು ಎನ್ನುವ ನಗ್ನ ಸತ್ಯ ನಿಮಗೆ ಮಾತ್ರ ಈಗ ನಾನು ಹೇಳುತ್ತಿರುವುದು. ಅಲ್ಲೇ ಆ ಬದಿಗೆ ಇಡ್ಲಿ ಅತ್ತೆ ಮನೆ, ಈ ಬದಿಗೆ ಜಯಾ ಅತ್ತೆ ಮನೆ (ಆಂಟಿ ಎನ್ನುವುದು “ಆಂಟಿಬಯೋಟಿಕ್” ಗೆ ಮಾತ್ರ ಸೀಮಿತವಾಗಿತ್ತು ನಮ್ಮೂರಲ್ಲಿ)..ಹಾಗೇ ಒಂದು ಮಾರು ಮುಂದೆ ಬಂದರೆ ಎಡಕ್ಕೆ ಎರಡು ಜಗುಲಿ ಕಾಣ್ತಿದೆಯಲ್ಲಾ…ತಗ್ಗಿನ ಮನೆ ಜಗುಲಿಯಲ್ಲ…ಅದು ಕಾಶೀರಾಮು ಮಾವನ ಮನೆ, ಅದಾದಮೇಲೆ ಬಲಕ್ಕೆ ಸೀತಾ-ಸರೋಜ ಮನೆ..ಎಡಕ್ಕೆ ನೋಡಿ..ಅದೇ..ಕರೆಕ್ಟ್..ನೀಲಿ ಬಾಗಿಲು..ಜಗುಲಿಗೆ ಅಂಟಿಕೊಂಡಿರೋ ಪುಟ್ಟ ಪುಟ್ಟ ಕಿಟಕಿ..ಹೊರಗೋಡೆಯ ಮೇಲೆ ಅಣ್ಣನ  (ಅಪ್ಪನ್ನ ಅಣ್ಣ ಅಂತಲೇ ನಾನು ಕರೆಯೋದು) ಬೋರ್ಡು, ಬಾಗಿಲ ಹೊರತುದಿ ಗೋಡೆಗೆ ಯಾವತ್ತೂ ಸ್ವರ ಹೊರಡಿಸದ ಕರೆಗಂಟೆಯ ಗುಂಡಿ (ನನ್ನ ಬಾಲಲೀಲೆಗೆ ಬಲಿಪಶುವಾದ್ದು).

ಒಳಗೆ ಕಾಲಿಡುತ್ತಿರುವಂತೆಯೇ ಸ್ವಾಗತಿಸೋದು ವರಾಂಡವಲ್ಲದಂಥಾ ವರಾಂಡದ ಬೆಣಚುಕಲ್ಲು ನೆಲದ ತಂಪು. ಎಡಕ್ಕೆ ಅಣ್ಣನ ಆಫೀಸ್ ರೂಮು, ಬಲಕ್ಕೆ ದೊಡ್ಡಮ್ಮನ ಮಿಷಿನ್ ರೂಮು (ಟೈಲರಿಂಗ್ ಮೆಷೀನ್ ಅಲ್ಲಿತ್ತು). ಹಾಗೆ ಮುಂದಕ್ಕೆ ಎಡವಿ ಮುಗ್ಗರಿಸುವಷ್ಟೆತ್ತರದ ಹೊಸಿಲು ದಾಟುತ್ತಿದ್ದಂತೆ ಚಿಕ್ಕ ಹಾಲು, ಅದರ ಮುಂದಿನದ್ದೇ ದೊಡ್ಡ ಹಾಲು. ಚಿಕ್ಕ ಹಾಲು ಮತ್ತು ದೊಡ್ಡ ಹಾಲನ್ನು ಬೇರ್ಪಡಿಸಿದ್ದುದು ದೊಡ್ಡ ದೊಡ್ಡ ಆಚೀಚೆ ಬದಿಯ ಡೈಮಂಡ್ ಶೇಪಿನ ಮನೆ ಮನೆ ಹೊಂದಿದ್ದ ಕಿಟಕಿಗಳು ಮತ್ತು ಅದಕ್ಕೆ ಕಟ್ಟಿದ್ದ ರುಕ್ಮಿಣೀ ಅತ್ತೆ ಹೆಣೆದಿದ್ದ ಜೋಡಿ-ಗಿಣಿ ತೋರಣ. ಈ ಕಟಾಂಜನಕ್ಕೇ ಒಂದು ಬಲವಾದ ತಂತಿ ಬಿಗಿದು ಇನ್ನೊಂದು ಕೊನೆಯನ್ನು ಫ್ರೀ ಬಿಟ್ಟು ಮನೆಗೆ ಬರುವ ಪತ್ರಗಳನ್ನೆಲ್ಲಾ ಅದರಲ್ಲಿ ಸಿಕ್ಕಿಸಿಡುತ್ತಿದ್ದರು.  ಅಲ್ಲೇ ನಾನು ಪತ್ರ ಲೇಖನ, ಒಕ್ಕಣೆ, ಸಂಬೋಧನೆ ಮುಂತಾದುವುಗಳ ಪ್ರಥಮ ಪಾಠ ಕಲಿತದ್ದು. ಅಣ್ಣ ಒಂದು ಹಳೇ ಕಾಲದ ತೊಟ್ಟಿ ಮನೆಯನ್ನು ಕೊಂಡುಕೊಂಡು ರೂಪಾಂತರ ಮಾಡಿಸಿದ್ದ ಮನೆಯಿದು. ಹುಶ್…ಎಲ್ಲೀ…ಕಿವಿ ತನ್ನಿ…ನನ್ನಪ್ಪ, ದೊಡ್ಡಪ್ಪನ ಇತರೆ ಕೆಲಸಗಳು ಏ ವನ್ ಅಂತ ಯಾರು ಬೇಕಾದ್ರು ಒಪ್ಕೋಬಹುದು…ಆದ್ರೆ ಆರ್ಕಿಟೆಕ್ಚರ್ ಭಾಳ ಡಲ್ಲು ಕಣ್ರೀ…ಜೋರಾಗಿ ಹೇಳಿದ್ರೆ ಈಗ ಸ್ವರ್ಗದಿಂದಲೇ ವಾಪಸ್ ಬಂದು ನನ್ನ ಕಥೆ ಮುಗಿಸಿಬಿಟ್ಟಾರು!..ಹಾಗೆ ಹೀಗೆ ಅಂತ ಕೆಡವಿಸಿ, ಕಟ್ಟಿಸಿ ಮನೆಯೆಂಬ ಮನೆನೇ ನನ್ನಜ್ಜಿಯ ಮಾತುಗಳಲ್ಲಿ ಹೇಳೋದಾದ್ರೆ ಕಚ್ಚರಿವೆ ಮಾಡಿಬಿಟ್ಟಿದ್ದರು. ಹಾಂ….ವಿಷಯಕ್ಕೆ ಬರೋಣ…ದೊಡ್ಡ ಹಾಲಲ್ಲಿ ಸುಮಾರು ಆರೇಳು ಅಡಿ ಎತ್ತರಕ್ಕೆ ಒಂದು ತೇಗದ ಹಲಗೆಯ ಬಡು. ಅದರ ಮೇಲೆ ಬುಲ್ಡೋಜರ್ ಗಾತ್ರದ ರೇಡಿಯೋ…ಅದರಲ್ಲೇ “ಸಂಪ್ರತಿ ವಾರ್ತಾಮ್ ಶ್ರುಯಂತಾಮ್, ಪ್ರವಾಚಕಃ…” ಕೇಳಿ ಏದ್ದದ್ದು, ದಸರಾ ಕಾಲದ “ಅರಮನೆ ಸಂಗೀತ” ಕೇಳುತ್ತಾ ಅಮ್ಮನ ಮೆತ್ತನೆಯ ಸೀರೆ ಹೊದ್ದುಕೊಂಡು ಮಲಗಿದ್ದು. ದೊಡ್ಡ ಹಾಲಿನ ಎಡಭಾಗಕ್ಕೆ ಸೇರಿದಂತೆ ಅಡಿಗೆ ಮನೆ ಹಾಗು ಅದರ ಮುಂದಿನ ಊಟದ ಮನೆ. ನಾನು ಅಡಿಗೆ  ಮನೇಲೆ ಹುಟ್ಟಿದ್ದಂತೆ. ಅಮ್ಮ ತಟ್ಟೆಗೆ ಉಪ್ಪಿಟ್ಟು ಹಾಕಿಕೊಳ್ಳಲು ಅಡಿಗೆ ಮನೆಗೆ ಹೋಗಿ, ಭಯಂಕರ ಹೆರಿಗೆ ಬೇನೆ ಶುರುವಾಗಿ, ಟಾಂಗ ತರಲು ನಮ್ಮ ದೊಡ್ಡಪ್ಪ ಓಡಿ, ಅಮ್ಮ ಆ ಅಡಿಗೆ ಮನೆ ಹೊಸಿಲು ಕೂಡ ದಾಟಲು ಆಗದ ಹಾಗಾಗಿ, ಉಪ್ಪಿಟ್ಟಿನ ಘಮಕ್ಕೆ ಮೂಗರಳಿಸಿಕೊಂಡೇ ಆತುರಗೇಡಿ ನಾನು ತಟಕ್ಕನೆ ಹುಟ್ಟಿಬಿಟ್ಟೆನಂತೆ. ಬಹುಶಃ ಇದೇ ಕಾರಣಕ್ಕಿರಬಹುದು ಉಪ್ಪಿಟ್ಟು ನನ್ನ ಪಂಚಪ್ರಾಣಗಳಲ್ಲಿ ಮೊದಲನೆಯದು.  ಇಂಥಾ ಭವ್ಯ ಇತಿಹಾಸಕ್ಕೆ ಮೂಕ ಸಾಕ್ಷಿಯಾದ ಊಟದ ಮನೇಲಿ ಹತ್ತು ಹದಿನೈದು ಜನ ಧಾರಾಳವಾಗಿ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುತ್ತಿದ್ದೆವು. ಅದೇನೋ ಗೊತ್ತಿಲ್ಲ ಮಕ್ಕಳಿಗೆ ಮೊದಲು ಊಟವಾಗಿ ಹೋಗುತ್ತಿತ್ತು. ನಂತರ ದೊಡ್ಡವರೆಲ್ಲಾ ಕೂತು ಹರಟುತ್ತಾ ಊಟ ಮಾಡುತ್ತಿದ್ದರು. ವಿಶೇಷದ ದಿನಗಳಲ್ಲಿ ಮಾತ್ರ ಮಕ್ಕಳಿಗೂ ಸಹಪಂಕ್ತಿ ಭೋಜನದ ಅವಕಾಶವಿತ್ತು. ಅಡಿಗೆ ಮನೆಗೂ ಮತ್ತು ಊಟದ ಮನೆಗೂ ಮಧ್ಯೆಯೂ ಸುಮಾರು ಒಂದುವರೆ ಅಡಿ ಎತ್ತರದ ಹೊಸಿಲು. ತಟ್ಟೆಯಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಿ ಅನ್ನ ತರಲು ದೊಡ್ಡಮ್ಮ ಒಳಗೆ ಹೋಗಿ ಬರುವಷ್ಟರಲ್ಲಿ ಉಪ್ಪು, ಉಪ್ಪಿನಕಾಯೇ ಖಾಲಿಯಾಗಿ ಬಿಟ್ಟಿರುತ್ತಿತ್ತು ನಮ್ಮ ತಟ್ಟೆಗಳಲ್ಲಿ. ಅಂಥಾ ಯಮ ಹಸಿವು ನಮಗೆಲ್ಲಾ…”ರಾಕ್ಷಸ ಮುಂಡೇವು” ಅಂತ ಪ್ರೀತಿಯಿಂದ ಗದರಿಕೊಳ್ಳುತ್ತಲೇ ತಟ್ಟೆಗೆ ದಿನಾ ದೊಡ್ಡಮ್ಮ ಅನ್ನ ಸುರಿಯುತ್ತಿದ್ದುದು. ಸಾರು ತರುವಷ್ಟರಲ್ಲಿ ಅರ್ಧ ಅನ್ನ ಖಾಲಿ ಎಂದು ವಿಶೇಷವಾಗೇನೂ ಹೇಳಬೇಕಿಲ್ಲ ಅಲ್ಲವೆ?  ಆ ಊಟದ ಮನೆಯಲ್ಲೇ ಬಲಕ್ಕೆ ಗೋಡೆ ಬದಿಗೆ ಮಡಿ ಬಟ್ಟೆ ಒಣಗಿ ಹಾಕಲು ಸಾಲಾಗಿ ಕಟ್ಟಿದ್ದ ಮೂರು ಸಾಲು ತಂತಿಗಳು, ಮೂಲೆಯಲ್ಲಿ ಬಹೂಪಯೋಗಿ (ಬಟ್ಟೆ ಹರವಲು, ಹಿತ್ತಲಿಗೆ ನುಗ್ಗಿ ಬಂದ ಪುಂಡ ದನಗಳನ್ನಟ್ಟಲು, ನಮ್ಮಂಥಾ ಕೋತಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹಾಗು ಸಮಯ ಬಿದ್ದಾಗ ಸೆಲ್ಫ್ ಸರ್ವೀಸ್ನಲ್ಲಿ ಅಜ್ಜಿ ಬೆನ್ನು ಕೆರೆದುಕೊಳ್ಳಲು) ಮಡಿ ಕೋಲು, ಆಮೇಲೆ ಅಲ್ಲೇ ಹಿಂದೆ ಅಣ್ಣನ ಫೈಲ್ಸ್ ಜೋಡಿಸಿದ್ದ ಕಡತದ ಬೀರುಗಳು. ಇಷ್ಟಕ್ಕೆ ಊಟದ ಮನೆ ಸಿಂಗಾರ ಮುಗಿಯಿತೆಂದುಕೊಳ್ಳಬೇಡಿ. ಕಡತದ ಬೀರುಗಳ ಹಿಂದಕ್ಕೆ ನೆಲದಲ್ಲಿ ನನ್ನ ವಿನಃ ಬೇರಾರಿಗೂ ಅರಿವಿಗೇ ಬಂದಿರದ ಒಂದು ದೊಡ್ಡ ದೊಗರಿದ್ದು ಅದರಲ್ಲಿ ಇಲಿ, ಜಿರಳೆಗಳು ಉಚಿತ ಊಟ ವಸತಿಯೊಂದಿಗೆ ಹಾಯಾಗಿದ್ದವು. ಮನೆಯ ಇತಿಹಾಸ ಹೇಳಲು ಮರೆತೆ. ಮೈಸೂರು ಸಂಸ್ಥಾನದ ಉನ್ನತ ಹುದ್ದೆಯಲ್ಲಿದ್ದ ಪುಟ್ಟಣ್ಣ ಎನ್ನುವವರು ಆ ಮನೆಯ ಮೂಲ ನಿವಾಸಿಗಳಾಗಿದ್ದು ಅಲ್ಲಿ ದಸರಾ ಹಬ್ಬ ವಿಶೇಷವಾಗಿತ್ತಂತೆ. ರಾತ್ರಿಯಲ್ಲಿ ಗೊಂಬೆಗಳು ಮಾತನಾಡುತ್ತಿದ್ದವಂತೆ, ಕಥೆ ಹೇಳುತ್ತಿದ್ದವಂತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ದೊರಕದೇ ಕೊನೆಗೆ ಅಣ್ಣನ ಕಕ್ಷೀದಾರಳಾಗಿದ್ದ ಕನ್ನಂಬಾಡಿ ತಿಮ್ಮಮ್ಮಜ್ಜಿಯನ್ನು ಕೇಳಿ ಅವಳು ಹೇಳಿದ ಬೇರೆಲ್ಲಿಯದೋ ಗೊಂಬೆ ಮಾತಾಡಿದ ಕಥೆ ಕೇಳಿ…”ಅಯ್ಯೋ ಇದು ನಮ್ಮನೆ ಗೊಂಬೆ ಕಥೆಯೇ ಆಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ” ಅಂದುಕೊಂಡು ಮಮ್ಮಲ ಮರುಗಿದ್ದೆ.  ನಿಧಿಯೂ ಅಲ್ಲೋ ಇಲ್ಲೋ ಒಟ್ಟಿನಲ್ಲಿ ಮನೆಯಲ್ಲೆಲ್ಲೋ ಹೂತಿಟ್ಟಿರಬಹುದು ಎಂದು ಅಜ್ಜಿ, ಅತ್ತೆ(ಅಣ್ಣನ ಅಕ್ಕ) ಮಾತನಾಡುತ್ತಿದ್ದುದನ್ನು ನಾನು ಅನೇಕ ಸಾರಿ ಕದ್ದು ಕೇಳಿ ರೋಮಾಂಚನಗೊಂಡಿದ್ದೆ. ನನ್ನ ಪತ್ತೇದಾರಿಕೆಗೆ ಕನ್ನಡಿ ಹಿಡಿಯುವಂಥಾ ವಿಷಯಗಳು ಸಾಕಷ್ಟಿದ್ದವು ಮನೆಯಲ್ಲಿ. ದೊಡ್ಡ ಹಾಲಿನಲ್ಲಿ ಕರೀ ಗಾರೆ ನೆಲ ಅಲ್ಲಲ್ಲಿ ಉಬ್ಬಿ ಬರುತ್ತಿದ್ದು ನನ್ನ ಕುತೂಹಲ ಇಮ್ಮಡಿಗೊಳಿಸುತ್ತಿತ್ತು.

ರಾತ್ರಿ ಊಟವಾದ ನಂತರ ದೊಡ್ಡವರು ಊಟ ಮುಗಿಸುವವರೆಗೂ ಮಕ್ಕಳೆಲ್ಲಾ ದೊಡ್ಡ ಹಾಲಿನ ದೊಡ್ಡ ಚಾಪೆಯ ಮೇಲೆ ಪವಡಿಸಿರುವ ಪದ್ದತಿ ಜಾರಿಯಲ್ಲಿತ್ತು. ನನ್ನ ಹಾಗು ಸುಮಕ್ಕನ ಕಿಸಿ ಕಿಸಿ ಗುಸು ಗುಸು ಮುಗಿದ ನಂತರ ಅವಳು ನಿದ್ರೆಗೆ ಶರಣಾದರೆ ನಾನು ಮುಖದ ಮೇಲೆ ಅಮ್ಮನ ಕಾಟನ್ ಸೀರೆಯ ಮುಸುಕು ಮೇಲೆಳೆದುಕೊಂಡು ಅಂತರ್ಮುಖಿಯಾಗಿಬಿಡುತ್ತಿದ್ದೆ. ಆ ಸೀರೆಯದೂ ಒಂದು ಮಹತ್ತರ ಕಥೆಯಿದೆ. ಸೊಸೈಟಿ (ನ್ಯಾಯಬೆಲೆ ಅಂಗಡಿ) ಯಿಂದ ತಂದಿದ್ದ ಆ ಕಡು ನೀಲಿ ಚೌಕದಲ್ಲಿ ಬಿಳೀ ಬಳ್ಳಿಗಳಿರುವ ಸೀರೆ ನನ್ನ ತೊಟ್ಟಿಲಿನ ಹಾಸಿಗೆಗೆ ಒಂದು ತುಂಡು, ಹೊದಿಕೆಗೆ ಮತ್ತೊಂದು, ಒಗೆದು ಉಪಯೋಗಿಸಲು ಅನುಕೂಲವಾಗುವ ಹಾಗೆ ಒಟ್ಟು ನಾಲ್ಕು ಪೀಸುಗಳಲ್ಲಿ ಕಂಗೊಳಿಸುತ್ತಿದ್ದು ನಾನು ಬೆಳೆದಂತೆಲ್ಲಾ ಹೊದಿಕೆಗೆ ಮಾತ್ರ ಅದರ ಪಾತ್ರ ಸೀಮಿತವಾಯ್ತು. ರಾತ್ರಿ ದೊಡ್ಡ ಹಾಲಿನಲ್ಲಿ ಮಲಗಿ ಮುಸುಕೆಳೆದು ಅಲ್ಲಿ ನಿರ್ಮಿತವಾಗುತ್ತಿದ್ದ ಮಂದ ಬೆಳಕಲ್ಲಿ ಮೀಯುತ್ತಿದ್ದಂತೆಯೇ ನೀಲಿ ಬಿಳಿಯ ಚೌಕ ಬಳ್ಳಿಗಳು ನನ್ನನ್ನು ಕಲ್ಪನಾಲಹರಿಯಲ್ಲಿ ತೇಲಿಸಿ ಮುಳುಗಿಸಲು ಸಮರ್ಥವಾಗುತ್ತಿದ್ದವು. ಅಲ್ಲಲ್ಲಿ ಉಬ್ಬುತ್ತಿದ್ದ ಗಾರೆ ನೆಲದ ಕೆಳಗಿರುವ ಸುರಂಗ ಮಾರ್ಗದಲ್ಲಿ ಮೆಟ್ಟಿಲು ಇಳಿಯುತ್ತಾ ಹೋಗಿ ಕೊನೆಗೆ ನಿಧಿಯನ್ನು ಕಾಯುತ್ತಾ ಕುಳಿತಿರುವ ಹಾವನ್ನು ಹಿಮ್ಮೆಟ್ಟಿಸಿ, ಕೊಪ್ಪರಿಗೆಯ ತುಂಬಾ ಚಿನ್ನದ ನಾಣ್ಯಗಳು, ಒಡವೆಗಳನ್ನು ಹೊರತಂದು, ಕೊನೆಗೆ ಸರ್ಕಾರಕ್ಕೊಪ್ಪಿಸಿ (ಪುಟಾಣಿ ಏಜೆಂಟ್ ೧೨೩ ಯ ಪ್ರಭಾವ), ನನಗೆಂಥಾದ್ದೊ ಪ್ರಶಸ್ತಿ ಸಿಕ್ಕಿ ಲೋಕವೆಲ್ಲಾ ನನ್ನ ಕೊಂಡಾಡಿ…ಹುಶ್…..ಅಷ್ಟರಲ್ಲಿ ನನಗೆ ಸುಖನಿದ್ರೆ ತೂಗಿಬಿಡುತ್ತಿತ್ತು.  ದೊಡ್ಡ ಹಾಲಿಗೂ ಹಿತ್ತಲಿಗೂ ನಡುವೆ ಒಂದು ಒರಳುಕಲ್ಲು ಹಜಾರವಿತ್ತು.  ಅಲ್ಲಿನ ಒರಳುಕಲ್ಲಿನಲ್ಲಿ ರಾಶಿ ರಾಶಿ ದೋಸೆ, ಇಡ್ಲಿ ಹಿಟ್ಟುಗಳು ತಯಾರಾಗುತ್ತಿದ್ದರೆ ಆಗಾಗ ರುಬ್ಬುತ್ತಿರುವ ಹುದುಗು ತಿನ್ನಲು ನನ್ನ ಪ್ರವೇಶವಾಗುತ್ತಿತ್ತು.  ಹದ ನೋಡಲು ನೀರ ಕೈ ಮಾಡಿಕೊಂಡು ಸ್ವಲ್ಪ ಹಿಟ್ಟು ಕೈಗೆತ್ತಿಕೊಂಡು ಮತ್ತೆ ಒರಳು ಕಲ್ಲಿಗೆ ಹಾಕುವಾಗ ಮೂಡುವ “ಟೊಕ್” ಎನ್ನುವ ಸದ್ದು ನನಗೆ ಬಹಳ ಪ್ರಿಯವಾದುದಾಗಿರುತ್ತಿತ್ತು.  ಆ ಐತಿಹಾಸಿಕ ಒರಳು ಕಲ್ಲಿನ ಮಗ್ಗುಲಿಗೇ ಇದ್ದಿದ್ದು ಇನ್ನೊಂದು ನಿಗೂಢ ರಹಸ್ಯದ ಅಟ್ಟದ ಮನೆ. ಅದರ ಮರದ ಮೆಟ್ಟಿಲ ಮೇಲೆ ನಡೆಯುವುದೇ ಒಂದು ಸೊಗಸು.  ಹಳೇಕಾಲದ ಪಾತ್ರೆ, ಪಡಗ, ಬೇಕಾದ್ದು, ಬೇಡವಾದ್ದು, ಹೆಚ್ಚುವರಿ ಪದಾರ್ಥಗಳ ನೆಲೆವೀಡಾದ ಇದು “ನಾಗವಲ್ಲಿ” ರೂಮಿಗಿಂತಲೂ ರೋಚಕ ಗೊತ್ತಾ? ಇಲ್ಲಿ ಅಮ್ಮ ನನಗೆ ತಿಳಿದಂತೆ ಮೂರು ನಾಲ್ಕು ಸಾರಿ ಚೇಳು ಕಡಿಸಿಕೊಂಡಿದ್ದಿದೆ. ವಾರಕ್ಕೊಮ್ಮೆ ಕಸ ಬಳಿಯಲು ಅಲ್ಲಿಗೆ ನುಗ್ಗುವ ಕಸಮುಸ್ರೆ ಮಾದಮ್ಮಂಗೆ (ಮಾದು ಅನ್ನೋದು ಪ್ರೀತಿಯ ಹೆಸರು) ಮಾತ್ರ ಅದ್ಯಾಕೋ ಒಂದು ಸಾರಿಯೂ ಚೇಳು ಕಡೀಲಿಲ್ಲ. ಆಲ್ಲಿದ್ದ ಚಿತ್ರ ವಿಚಿತ್ರ ಮರದ ಆಕೃತಿಗಳನ್ನು ನೋಡುವುದೇ ಕಣ್ಣಿಗೆ ಸೊಬಗು. ಅರ್ಧ ಕೆತ್ತಿ ಮರೆತಿದ್ದವುಗಳು, ಕೆಲವಕ್ಕೆ ಒಂದು ಕಣ್ಣು ದೊಡ್ಡ ಬಾಯಿ, ಹಲ್ಲು ಕಿರಿದ ಹುಲಿ, ಬಿಂದಿಗೆ ಹೊತ್ತ ನೀರೆ, ನಾಗರಕಲ್ಲನ್ನು ಹೋಲುವ ಕೆಲವು ಮರದ ತುಂಡುಗಳು, ಕರೀ ಕೆಂಪು ಮರದ ಮನುಷ್ಯ ಹಾಗು ಪ್ರಾಣಿಯಾಕೃತಿಗಳು, ಮುರಿದ ತೊಲೆಗಳ ಚಿತ್ತಾಕರ್ಷಕ ಚೂರುಗಳು ಅಟ್ಟದ ರೂಮಿನ ಹಿಂಬದಿಯ ಧೂಳಿನಲ್ಲಿ ಅಟ್ಟಾಡುತ್ತಿರುವುದನ್ನು ಸಹಿಸಲಾರದೆ ಒಂದೆರಡನ್ನು ಒಮ್ಮೆ ಹೊರಲಾರದೆ ತುಸು ಮುಂದೆ ಹೊತ್ತು ತಂದು ಬೀಳಿಸಿ ಅಲ್ಲಿಯೇ ನಿಂತಿದ್ದ ಅತ್ತೆ ಮತ್ತು ಅಜ್ಜಿ ಕಂಡು…”ಏನು ಪಾಪಕರ್ಮ ತಂತೋ ಈ ಶನಿಮುಂಡೆದು…ಹಿಂದಕ್ಕೆ ಬಿಸಾಡು ಮೊದಲು, ಎಲ್ಲಾ ದೆವ್ವದ ಬೊಂಬೆಗಳು” ಎಂದು ಯಥಾ ಶಕ್ತಿ ಚಟಿ ಚಟಿ ಏಟೂ ಕೊಟ್ಟಿದ್ದರು (ಆಗೆಲ್ಲಾ ಮಕ್ಕಳನ್ನು ಮನೆಯಲ್ಲಿನ ದೊಡ್ಡವರು  “ಮಕ್ಕಳೆಂದರೆ ಎಲ್ಲಾ ಒಂದೇ” ಎಂಬ ಉದಾತ್ತ ಐಕ್ಯತೆಯ ಭಾವನೆಯಿಂದ ಯಾರು ಬೇಕಾದರೂ ಮನಸೋಇಚ್ಛೆ ಥಳಿಸಬಹುದಾಗಿತ್ತು).  ಬಿದ್ದ ಏಟಿನ ನೋವಿನ ಕಣ್ಣೀರಿಗಿಂತಲೂ “ದೆವ್ವದ ಗೊಂಬೆಗಳು” ಎನ್ನುವ ಪದಗಳು “ನನ್ನ ಹುಡುಕಾಟ ಕೊನೆಗೂ ಸಫಲವಾಯ್ತು” ಎನ್ನುವ ದಿವ್ಯಾನುಭೂತಿ ನನ್ನಲ್ಲಿ ಮೂಡಿಸಿ ಆನಂದ ಬಾಷ್ಪವುಕ್ಕಿಸುವಲ್ಲಿ ಸಮರ್ಥವಾಗಿದ್ದವು.

ಇನ್ನೇನು ನನ್ನ ಜೀವನದ ಒಂದು ಅಲ್ಟಿಮೇಟ್ ಗೋಲ್ ನಾನು ತಲುಪಿದಂತೆಯೇ ಎಂದು ಹಿರಿಹಿರಿ ಹಿಗ್ಗಿದೆ.  ಅಲ್ಲಾ…ಗೊಂಬೆಗಳ ಮಾತು, ಕಥೆ, ಓಡಾಟ ಎಲ್ಲಾ ನಡೆಯುತ್ತಿದ್ದ ಈ ಮನೆಯಲ್ಲಿ ಏಕಾಏಕಿ ಏನೂ ಕಾಣಬರುತ್ತಿಲ್ಲವೆಂದರೆ ಎಂತಹ ನೀರಸ ಜೀವನವಿದ್ದೀತು ಅವುಗಳದ್ದು ಪಾಪ.  ಈಗಂತೂ “ದೆವ್ವದ ಗೊಂಬೆಗಳು” ಎಂದು ಅಜ್ಜಿಯಂಥಾ ಅಜ್ಜಿಯೇ ಹೇಳಿದ ಮೇಲೆ ಅವುಗಳು ಮಾತನಾಡಲಾರವೇ? ಇದುವರೆಗೂ ಅವು ಏಕೆ ಸುಮ್ಮನಿದ್ದವೆಂಬ ಬಿಳಿ ಸತ್ಯ ನನಗೆ ಹೊಳೆದುಬಿಟ್ಟಿತ್ತು.  ಜೀವನದಲ್ಲಿ ದೆವ್ವದ ಗೊಂಬೆಗಳಿಗೆ ಜೊತೆಗಾರರ ಕೊರತೆಯಿತ್ತು. ಈಗ ಅವು ನನ್ನ ಸ್ನೇಹ ಸಹವಾಸ ಮಾಡಿದರೆ ಅವಕ್ಕೂ ಒಂದು ಹೊಸ ಬದುಕು ಹಾಗು ನನಗೂ ಗೊಂಬೆಗಳ ಮಾತು, ಕಥೆ, ಓಡಾಟದ ಜೊತೆಗೆ ಒಡನಾಟದ ಭಾಗ್ಯವೂ ಲಭಿಸುತ್ತದೆ ಎನ್ನುವ ಆಲೋಚನೆಯೇ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು.  ಅದನ್ನು ಕಾರ್ಯರೂಪಕ್ಕೆ ತರಲು ನಾನು ಹಾಕಿದ ಯೋಜನೆಗಳು ಒಂದೇ ಎರಡೇ.  ಮನೆಯಲ್ಲಿ ಯಾರನ್ನು ಜೊತೆಮಾಡಿಕೊಳ್ಳಲಿ ಈ ಕಾರ್ಯಾಚರಣೆಗೆ ಎನ್ನುವ ಯೋಚನೆ ಮುತ್ತಿ ಕಾಡುತ್ತಿತ್ತು. ಸುಮಕ್ಕ…ಉಹೂಂ…ಶಿಸ್ತಿನ ಸಿಪಾಯಿ ಅದು. ಎಲ್ಲದರಲ್ಲೂ ಅಚ್ಚುಕಟ್ಟು. ನನ್ನ ಕೋತಿ ಚೇಷ್ಟೆ ತಪ್ಪಿಸಿಬಿಡುತ್ತಿತ್ತು.  ಇನ್ನು ಅವಿ…ಪಾಪ ಅದಕ್ಕಿನ್ನೂ ಮಾತೇ ಸರಿಯಾಗಿ ಬಾರದು. “ಅಜ್ಜಿ”ಗೆ “ಅಂಜಿ” ಅನ್ನುತ್ತೆ, “ಮಗು” ನ “ಮಂಗು” ಅನ್ನುತ್ತೆ. ಆದ್ದರಿಂದ ನಾನು ಹೋರಾಟದಲ್ಲಿ ಒಂಟಿ ಸಲಗ ಎಂದು ತೀರ್ಮಾನವಾದಹಾಗಾಯಿತು. ಅದೇ ಸಮಯಕ್ಕೆ “ಗಂಡಭೇರುಂಡ” ಚಲನ ಚಿತ್ರ ನಮ್ಮೂರಿನ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಬಂದು ನನ್ನ ಸಾಹಸಕ್ಕೆ ಉತ್ತೇಜನ ಕೊಡುವಲ್ಲಿ ಸಹಕಾರಿಯಾಯ್ತು. ಅಟ್ಟದ ಮನೆಗೆ ಹೋಗುವ ಮುಹೂರ್ತವೂ ಒಂದು ದಿನ ರಾತ್ರಿಯೆಂದು ತೀರ್ಮಾನವಾಯಿತು. ಈ ಸಾಹಸ ಕಾರ್ಯಕ್ಕೆ ಹೊರಟಾಗ ಬೇಕಾಗುವ ವಸ್ತುಗಳನ್ನು ಮನಸ್ಸು ಒಂದೊಂದಾಗಿ ಪಟ್ಟಿಮಾಡಿಕೊಳ್ಳತೊಡಗಿತು.  ನೀರಿನ ಕ್ಯಾನು (ರುಕ್ಮಿಣಿ ಅತ್ತೆ ಬೆಂಗಳೂರಿಂದ ತಂದುಕೊಟ್ಟಿದ್ದ ಪ್ಲಾಸ್ಟಿಕ್ಕಿನ ಕೆಂಪು ಬಣ್ಣದ ನೀರಿನ ಕ್ಯಾನ್ ಗೆ ನೀರು ತುಂಬಿಸಿ) ರೆಡಿ ಮಾಡಿಕೊಂಡೆ. ದೀಪ ಹಾಕಿದರೆ ಒರಳುಕಲ್ಲಿನ ಹಜಾರದಲ್ಲೇ ಮಲಗಿರುವ ಅಜ್ಜಿಗೆ ಎಚ್ಚರವಾಗಿ ಕೆಲಸ ಕೆಡುವುದಿಲ್ಲವೇ? ಹಾಗಾಗಿ ರೇಡಿಯೋದ ಪಕ್ಕದಲ್ಲಿ ಸದಾ ವಿಜೃಂಭಿಸುತ್ತಿರುವ ಬೃಹದಾಕಾರದ ಬ್ಯಾಟರಿ (ಟಾರ್ಚು) ನನ್ನ ವಶಕ್ಕೆ ತೆಗೆದುಕೊಳ್ಳುವುದು ನನ್ನ ಎರಡನೇ ಸಿದ್ಧತೆ. ಒರಳು ಕಲ್ಲಿನ ಹಜಾರದಿಂದಾಚೆಗೆ ಹಿತ್ತಲಿದ್ದು ಅಲ್ಲಿಯೇ ದನದ ಮನೆಯಿದ್ದಿದ್ದು.  ಕೆಲವೊಮ್ಮೆ ರಾತ್ರಿಗಳಲ್ಲಿ ದನಗಳು ವಿಚಿತ್ರವಾಗಿ ಕೂಗುಹಾಕತೊಡಗುತ್ತಿದ್ದವು. ಯಾವುದಾದರೂ ಅತಿಮಾನುಷ ಆಕೃತಿಗಳು ಅವುಗಳ ಕಣ್ಣಿಗೆ ಬಿದ್ದರೆ ಮಾತ್ರ ಅವು ಹೀಗೆ ಕೂಗುವುದು ಎಂದು ಅಜ್ಜಿ ಹೇಳುತ್ತಿದ್ದರು.  ಹಾಗೆ ಅವು ಕೂಗಿದಾಗೆಲ್ಲಾ ಅಜ್ಜಿ ಎದ್ದು, ಕಣ್ಣು, ಮೂಗು ಮಾತ್ರ ಕಾಣಿಸುವ ಹಾಗೆ ಕಂಬಳಿ ಗುಬುರು ಹಾಕಿಕೊಂಡು (ಅತಿಮಾನುಷರನ್ನು ಹೆದರಿಸಲು!), ಕೈಯಲ್ಲಿ ಟಾರ್ಚುಹಿಡಿದು ಹಿತ್ತಿಲ ಬಾಗಿಲು ತೆರೆದು ದನಗಳಿಗಿಂತಾ ಜೋರಾಗಿ ಗುಟುರು ಹಾಕುತ್ತಿದ್ದರು. ಅಜ್ಜಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನಾಲ್ಕನೇ ತರಗತಿಯ ಮೇಡಂ ಆಗಿದ್ದಿದ್ದರಿಂದ ಅವರ ಸ್ವರ ತೀರ ಎಫರ್ಟ್ಲೆಸ್ ಆಗಿ ತಾರಕಕ್ಕೇರುತ್ತಿತ್ತು. ರಾತ್ರಿಯಾದೊಡನೇ ರೇಡಿಯೋ ಪಕ್ಕದಲ್ಲಿರುತ್ತಿದ್ದ ಆ ಟಾರ್ಚು ಅಜ್ಜಿಯ ದಿಂಬಿನ ಎಡಪಕ್ಕಕ್ಕೆ ಗದೆಯಂತೆ ವಾಲಿಕೊಂಡು ಅಜ್ಜಿ “ಕುರುಕ್ಷೇತ್ರಮು” ಸಿನಿಮಾದ ಭೀಮನಂತೆ ಮಲಗುತ್ತಿದ್ದರು.  ಅದನ್ನು ನೋಡಿಕೊಂಡಿದ್ದ ನನಗೆ ಟಾರ್ಚನ್ನು ನನ್ನದಾಗಿಸಿಕೊಳ್ಳುವುದು ಯಾವ ಗಿಡದ ತೊಪ್ಪಲು? ಇನ್ನು ಸಾಹಸಿಗಳು ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗು..ಅದಕ್ಕೆ ನನ್ನ ಸ್ಕೂಲ್ ಬ್ಯಾಗಿಗಿಂತಾ ಬೇಕಾಗಿತ್ತೆ?  ಒಟ್ಟಿನಲ್ಲಿ ದೆವ್ವದ ಗೊಂಬೆಗಳ ಸ್ನೇಹಸಂಪಾದನೆಗೆ ಬೇಕಾದ ಎಲ್ಲಾ ಪೂರ್ವಭಾವಿ ಸಿದ್ದತೆಗಳೂ ಹೂವಿನ ಸರ ಎತ್ತಿದಂತೆ ಸುಲಭವಾಗಿ ಜರುಗಿದವು. ಒಂದು ಶುಭ ಮುಹೂರ್ತದಂದು ರಾತ್ರಿಯ ವೇಳೆಯಲ್ಲಿ ನನ್ನ ಕಾರ್ಯಾಚರಣೆ ಪ್ರಾರಂಭಿಸಿಯೇ ಬಿಡುವುದೆಂದು ತೀರ್ಮಾನಿಸಿ ಎಲ್ಲರೂ ಮಲಗಲಿ ಎಂದು ಕಾಯುತ್ತಾ ಅಮ್ಮನ ಸೀರೆಯೊಳಕ್ಕೆ ಸೇರಿ ಕಾಯತೊಡಗಿದೆ. ಆದರೆ ನಾನೊಂದು ಬಗೆದರೆ ದೈವ (ದೆವ್ವ?) ವೊಂದು ಬಗೆದುಬಿಡೋದೇ….ಎಲ್ಲರೂ ಮಲಗಿರಬಹುದೆಂದು ನಾನು ಕಣ್ಣು ಬಿಡುವಷ್ಟರಲ್ಲಿ “ಇಯಂ ಆಕಾಶವಾಣಿ..ಸಂಪ್ರತಿ ವಾರ್ತಾಂ ಶ್ರುಯಂತಾಂ…” ಎಂದು ನಮ್ಮನೆ ಬುಲ್ಡೋಜರ್ ರೇಡಿಯೋ ಒದರುತ್ತಿದ್ದು ಬೆಳ್ಳಗೆ ಬೆಳಗಾಗೇಬಿಟ್ಟಿತ್ತು. ಆಗೆಲ್ಲಾ ಅಲಾರಂ ಗಡಿಯಾರ ನಮ್ಮ ಮನೆಯಲ್ಲಿಲ್ಲದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು. ಅಮ್ಮ ಹೇಳುತ್ತಿದ್ದರು. ಒಮ್ಮೆ ಅಣ್ಣನ ಕಕ್ಷೀದಾರರು ಯಾರೋ ಪುಣ್ಯಾತ್ಮರು ಅಣ್ಣನಿಗೊಂದು ಅಲಾರಂ ಗಡಿಯಾರ ಕೊಡಲು ತಂದಿದ್ದರಂತೆ. ಆದರೆ ಅಣ್ಣ “ಮನೆಯಲ್ಲಿ ಐ.ಎ.ಎಸ್. ಓದೋರು ಯಾರಿದ್ದಾರೆ ಸಧ್ಯ? ಬಿಲ್ಕುಲ್ ಇವೆಲ್ಲಾ ಬೇಡ” ಎಂದು ವಾಪಸ್ಸು ಕಳಿಸಿಬಿಟ್ಟರಂತೆ. ಅದೂ ನಿಜ ಬಿಡಿ. ಅವಿ ಶಿಶುವಿಹಾರಕ್ಕೆ ಹೋಗಿ ಬಂದು ಹಾಯಾಗಿರುತ್ತಿತ್ತು.  ಸುಮಕ್ಕ ರಾತ್ರಿ ಊಟಕ್ಕೆ ಮುಂಚೆಯೇ ಮನೆಕೆಲಸ (ಹೋಂ ವರ್ಕ್) ಮುಗಿಸಿಬಿಡುತ್ತಿದ್ದಳು. ಇನ್ನು…ಅವಳ ಹಾಗೆ ನಾನು ಚಂದ್ರವಂಶಿಯಲ್ಲ, ಸೂರ್ಯವಂಶಿ…ಬೆಳಗ್ಗೆ ಮಾತ್ರವೇ ನಾನು ಬರೆದು ಸಂತೆ ಹೊತ್ತಿಗೆ ಮೂರು ಮೊಳ ನೈಯ್ದು ಮುಗಿಸುತ್ತಿದ್ದುದು. ಆದರೂ ಅಣ್ಣ…ಛೇ..ಎಂಥಾ ಅರಿವುಗೇಡಿತನವಲ್ಲವೇ….ಮುಂದೆ ಅಲಾರಂ ಗಡಿಯಾರ ನನ್ನಂಥಾ ಸಾಹಸಿ ಮಗಳ ಉಪಯೋಗಕ್ಕೆ ಬಂದೀತೆಂಬ ಮುಂದಾಲೋಚನೆ ಸ್ವಲ್ಪವೂ ಮಾಡಿರಲಿಲ್ಲ ನೋಡಿ.

ನಾನು ಸೂರ್ಯವಂಶಿಯಾಗಲು ಹಲವಾರು ಕಾರಣಗಳಿದ್ದವು.  ನಾನು ಶಾಲೆಯಿಂದ ಬಂದನಂತರ ಆಟವಾಡದೆ ಜೀವನ ಎಲ್ಲಾದರೂ ಸಾಗೋದು ಉಂಟೆ? ನಂತರ ಸರಿಯಾಗಿ ೬ ಗಂಟೆ ಸುಮಾರಲ್ಲಿ ಅಜ್ಜಿಯ ಜೊತೆ ವಾಕಿಂಗು. ರಂಗನಾಥನ ಗುಡಿಯ ಲೌಡ್ ಸ್ಪೀಕರಿನಲ್ಲಿ “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೆ..” ಅಂತ ವಿಷ್ಣುಸಹಸ್ರನಾಮ ಶುರುವಾಗಿರೋದು. ಅದನ್ನು ಗುನುಗುನಿಸುತ್ತಾ ಪೂರ್ಣಯ್ಯನ ಬೀದಿಯುದ್ದಕ್ಕೆ ನಡೆದು ರಂಗನಾಥನ ಗುಡಿಯವರೆಗೂ ಹೋಗಿ ಅದನ್ನು ಬಳಸಿ ಸಿಟಿ ಬಸ್ ಸ್ಟಾಂಡಿನ ಮೂಲಕ ಮಾರಮ್ಮನ ಗುಡಿ ಮುಂದೆ ಬಂದು ಮತ್ತೆ ಎಡಕ್ಕೆ ತಿರುಗಿದರೆ ನಾರಾಯಣ ಸ್ವಾಮಿ ಗುಡಿ ಬೀದಿಯಲ್ಲಿ ಮನೆಗೆ ವಾಪಸ್ಸು. ಹಾಗೆ ಹಿಂತಿರುಗಿದ ಮೇಲೆ ಸ್ವಾಮಿ ಮೇಷ್ಟರ ಮನೆಗೆ ಬಾಯಿಪಾಠಕ್ಕೆ ಓಟ. ನಾನು ಅಲ್ಲಿಗೆ ತಲುಪುವ ವೇಳೆಗಾಗಲೇ..”ಯೂಢಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾಂ..” ಭಗವದ್ಗೀತಾ ಪಾಠ ನಡಿತಿರೋದು. ಸ್ವಾಮಿ ಮೇಷ್ಟರ ಮುದ್ದಿನ ಶಿಷ್ಯೆಯಾದ್ದರಿಂದ ದಿನಾ ಮಾಫಿ. ಇದೆಲ್ಲಾ ಬಿಡಿ..ಮುಂದಿನ ಅಂಕವೇ ಗಮ್ಮತ್ತಿನದು. ಸ್ವಾಮಿ ಮೇಷ್ಟರ ಮನೆಯಿಂದ ಸೀದಾ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ದೌಡು. ಆಗಾಗ ಮನೆಯ ಹಿರಿಯರು…”ಅಯ್ಯೋ ಪಾಪ ಅವನು ಬಿಡಿ ದೇವರ ಹಾಗೆ, ಯಾವ ತಂಟೆಗೂ ಬರೋಲ್ಲ” ಅಂದು ಕೆಲವರನ್ನು ಕೆಲವಾರು ಸನ್ನಿವೇಶಗಳಲ್ಲಿ ಹೋಲಿಸಿದ್ದರಿಂದ ನಾನು ದೇವರನ್ನು “ದೇವರ ಹಾಗೆ”  ಎಂದು ಮಾತ್ರ ತಿಳಿದಿದ್ದೆ ವಿನಃ ಅವನ ಮಹಿಮೆ, ಲೀಲೆಗಳೆಲ್ಲಾ ಅಷ್ಟೊಂದು ತಲೆ ಕೆಡಿಸಿಕೊಳ್ಳುವ ವಿಚಾರ ಮಾಡಿಕೊಂಡಿರಲಿಲ್ಲ.  ನಾನು ಅಲ್ಲಿಗೆ ಹೋಗುತ್ತಿದ್ದುದು ಅಲ್ಲಿ ಪ್ರಸಾದವೆಂದು ಕೊಡುತ್ತಿದ್ದ ಪುಟ್ಟ ಪುಟ್ಟ ದೋಸೆಯ ಆಸೆಗೆ! ಅಲ್ಲಿ ಎಲ್ಲರಂತೆ ಕೈಮುಗಿದು, ಗಲ್ಲ ಗಲ್ಲ ಬಡಿದುಕೊಳ್ಳುವವರನ್ನು ವಿಚಿತ್ರವಾಗಿ ನೋಡುತ್ತಾ ಮರುಗುತ್ತಾ ನಿಂತರೂ ದೀರ್ಘದಂಡ ನಮಸ್ಕಾರ ಹಾಕುವುದು ಮಾತ್ರ ನನ್ನ ಪ್ರಿಯವಾದ ಕೆಲಸವಾಗಿತ್ತು. ಆಷ್ಟುಹೊತ್ತಿಗಾಗಲೇ ಅಯ್ಯಂಗಾರ್ ತಾತ (ಅರ್ಚಕರು) ನೈವೇದ್ಯ ಮಾಡಲು ಮುಕ್ಕಾಲು ಮುಚ್ಚಿದ ಪರದೆಯ ಹಿಂದೆ ಮರೆಯಾಗಿರುತ್ತಿದ್ದರು. ನನ್ನ ತಲೆಯ ಅಂಕಿ ಅಂಶದ ಪ್ರಕಾರ ತಾತ ತೆರೆಯ ಹಿಂದೆ ನಿಂತು ದೋಸೆ ಎಣಿಕೆ ಮಾಡುತ್ತಿರುತ್ತಾರೆ. ಅಯ್ಯೋ ಇವತ್ತು ಕಡಿಮೆ ತಂದಿದ್ದು ನನ್ನ ಸರದಿ ಬರುವಷ್ಟರಲ್ಲಿ ದೋಸೆ ಮುಗಿದುಹೋದರೇನು ಗತಿ ಎನ್ನುವುದು ನನ್ನ ಚಿಂತೆಗೆ ಕಾರಣವಾಗಿದ್ದು ದೀರ್ಘದಂಡ ನಮಸ್ಕಾರ ಮಾಡುವ ನೆಪದಲ್ಲಿ ಪರದೆಯಾಚೆ ಇಣುಕಿ ದೇವರ ಪಾದದ ಬುಡದಲ್ಲಿ ದೋಸೆಯ ಪಾತ್ರೆ  ಕಂಡು “ಓಹೋ..ಸಧ್ಯ…ಪಾತ್ರೆಯಲ್ಲಿ ಸಾಕಷ್ಟು ದೋಸೆಗಳಿವೆ” ಎನ್ನುವುದನ್ನು ಖಾತ್ರಿಪಡಿಸಿಕೊಂಡು ಹಸನ್ಮುಖಿಯಾಗಿ ಮೇಲೇಳುತ್ತಿದ್ದೆ. ದೋಸೆಯನ್ನು ಮನಃಪೂರ್ತಿಯಾಗಿ ಸವಿದು ಎಲ್ಲರೂ ಹೊರಡುವವರೆಗೂ ಕಾದಿದ್ದು, ತಾತನನ್ನು ಕಂಡು ನಸುನಗೆ ನಕ್ಕು, ಅವರು “ಅರ್ಥವಾಯ್ತು” ಎಂಬಂತೆ ನನಗಿಂತಾ ಜೋರಾಗಿಯೇ ನಕ್ಕು ಅಳಿದುಳಿದ ದೋಸೆ ಚೂರನ್ನು ನನ್ನ ಕೈಲಿಟ್ಟು ಪ್ರೀತಿಯಿಂದ “ಇಪ್ಪು ವಾಷ್ಕಿ ಪೋ ಕಣ್ಣಾ (ಇನ್ನು ಓದ್ಕೊ ಹೋಗು ಕಂದಾ)” ಎನ್ನುತ್ತಿದ್ದರು. ತಕ್ಷಣವೇ ನಾನು “ಓಹೋ..ತಾತ ವಾಷ್ಕಿ ಪೋ ಎಂದಿದ್ದಾರೆ. ಅಂದರೆ ನಾನು ಕೈ ವಾಷ್ ಮಾಡಿಕೊಳ್ಳಬೇಕು” ಎಂದುಕೊಂಡು ನನ್ನ ದೊಡ್ಡ ಜವಾಬ್ದಾರಿ (ದೋಸೆ ತಿನ್ನುವುದು) ಮುಗಿದ ಸಂತೃಪ್ತಿಯಿಂದ ದೇವಾಲಯದ ಹೊರಗಿದ್ದ ನಲ್ಲಿಯಲ್ಲಿ ಅಚ್ಚುಕಟ್ಟಾಗಿ ಕೈತೊಳೆದುಕೊಂಡು ಮನೆಕಡೆಗೆ ಸವಾರಿ ಹೊರಟುಬಿಡುತ್ತಿದ್ದೆ. ಇಷ್ಟೆಲ್ಲಾ ಬಹುಮುಖ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ನನಗೆ ದಿನಕ್ಕೆ ೨೪ ಗಂಟೆ ಸಾಕಾಗುತ್ತಿತ್ತೆ? ನೀವೇ ಹೇಳಿ. ಓಹ್..ಕ್ಷಮಿಸಿ, ದೆವ್ವದಿಂದ ದೋಸೆಗೆ ಪಲಾಯನ ಮಾಡಿಬಿಟ್ಟೆ ಅಲ್ಲವೆ? ಸರಿ ಇನ್ನು ದೆವ್ವಕ್ಕೆ ಬರೋಣ.

ನಾನು ಉನ್ನತ ಮಟ್ಟದ ಪೂರ್ವಭಾವಿ ಸಿದ್ಧತೆಗಳೊಂದಿಗೆ ದೆವ್ವದರ್ಶನಕ್ಕೆ ತಯಾರಿದ್ದೆ ಎಂದು ನಿಮಗೆ ಮೊದಲೇ ಹೇಳಿದ್ದೆ. ಆದರೂ ಅದೇನು ನನ್ನ ಗ್ರಹಚಾರವೋ….೨-೩ ದಿನ ಕಳೆದರೂ ಅಪರಾತ್ರಿಯಲ್ಲಿ ಎಚ್ಚರವಾಗಲೇ ಇಲ್ಲ. ದೆವ್ವದ ಮೀಟಿಂಗ್ಗಿಂತಾ ..ಎಚ್ಚರವಾಗುವುದು ಹೇಗೆ ಎನ್ನುವ ವಿಷಯವೇ ಹೆಡ್ ಈಟಿಂಗ್ ವಿಷಯವಾಯಿತು. ಆಗ ಸಹಾಯಕ್ಕೆ ಬಂದವರೇ ದೇವಲೋಕದ ಏಂಜಲ್ ನಮ್ಮ ಗೌರಜ್ಜಿ. ಗೌರಜ್ಜಿ ಎಂದರೆ ನಮ್ಮ ತಾತನ ತಂಗಿ. ಮನೆಯಲ್ಲಿ ತಿಥಿ-ಮತಿಗಳು ನಡೆವಾಗ ಅವರಿಲ್ಲದೇ ಏನೂ ಸಾಗದು. ಹಾಗಂತ ಅವರೇನು ಮಡಿಗೆ ಬರ್ತಾರೆಯೇ ಎನ್ನೋದು ಮನೆಯಲ್ಲಿ ಭಿನ್ನಮತೀಯರ ಅಂಬೋಣವಾದರೆ..ಇಂಥಾ ಅಡ್ಡಾದಿಡ್ಡಿ ಮುಂಡೇವು (ನನ್ನಂಥಾ ಪಾಮರ ಮಕ್ಕಳು) ಗಳನ್ನು ನೋಡ್ಕೊಳ್ಳೊಕ್ಕೆ ಅವರಿಲ್ಲದೇ ಯಾರಿಂದ ಸಾಧ್ಯ ಎನ್ನುವುದು ಸರ್ವಾನುಮತದ ಅಂಗೀಕಾರವಾಗಿಬಿಟ್ಟಿತ್ತು. ಅದು ಸತ್ಯವಾದ ಮಾತು. ಗೌರಜ್ಜಿಯಾದರೇ ಬ್ರಾಹ್ಮಣರ ಊಟವಾಗುವವರೆಗೂ ತಮ್ಮ ನಾನ್ ಸ್ಟಾಪ್ ಕಥೆಗಳಿಂದ ನಮ್ಮಂಥ ಪುಂಡ ಪೋರಕಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿವಂತರು. ದಸರಾ ರಜೆಯ ಷಷ್ಠಿಯಲ್ಲಿ ನಮ್ಮ ತಾತನ ತಿಥಿಯಿದ್ದು ಆ ಸಂದರ್ಭದಲ್ಲಿ ಅವರ ಆಗಮನ ನನ್ನ ಆಲೋಚನೆಯ ದಿಗಂತವನ್ನು ಹಿರಿದಾಗಿಸಿಕೊಳ್ಳಲು ಸಹಾಯವಾಯ್ತು. ಗೌರಜ್ಜಿಯೆಂದರೆ ಕಥೆಗಳ ಆಗರ. ಅವರೇನು ಕಥೆ ಕೇಳಿ, ಓದಿ ಹೇಳಬೇಕಾಗಿರಲಿಲ್ಲವೆಂದು ತೋರುತ್ತದೆ. ನಿರರ್ಗಳವಾಗಿ ಕಥೆ ಹೆಣೆದು ಹೇಳುವ ಸಾಮರ್ಥ್ಯವೂ ಅವರಿಗಿತ್ತು. ಹೀಗೆ ಗೌರಜ್ಜಿ ಹೇಳಿದ ಕಥೆಗಳಲ್ಲಿ ನನ್ನ ಮನ ಸೆಳೆದದ್ದು “ಗಾಜಿನ ಕಂಬದ ರಾಜಕುಮಾರಿಯ ಕಥೆ.” ಇದರ ಸಾರಾಂಶವಿಷ್ಟೆ. ಒಬ್ಬಳು ರಾಜಕುಮಾರಿ ಅರಮನೆಯ ಉದ್ಯಾನದಲ್ಲಿರುವ ಗಾಜಿನ ಕಂಬದಲ್ಲಿ ಸೇರಿಕೊಂಡಿರುತ್ತಾಳೆ. ಅವಳು ಪ್ರತಿ ರಾತ್ರಿ ಅದರಿಂದ ಹೊರಬಂದು ಉದ್ಯಾನದಲ್ಲಿರುವ ದೇವಾಲಯ ಚೊಕ್ಕಟ ಮಾಡಿ, ಪೂಜಿಸಿ, ಹಣ್ಣು-ಹೂಗಳನ್ನು ತಾನೂ ಸ್ವೀಕರಿಸಿ ಮತ್ತೆ ಗಾಜಿನ ಕಂಬಕ್ಕೆ ಮರಳುತ್ತಿರುತ್ತಾಳೆ. ಇದನ್ನು ಕಂಡುಹಿಡಿಯಲೆಂದು ಉದ್ಯಾನವನಕ್ಕೆ ಬರುವ ರಾಜಕುಮಾರನದೂ ಹೆಚ್ಚು ಕಡಿಮೆ ನನ್ನ ಪಾಡೆ!  ದಿನಾಲೂ ನಿದ್ರೆಹೋಗಿಬಿಡುತ್ತಿರುತ್ತಾನೆ. ಇದಕ್ಕೆ ಉಪಾಯವಾಗಿ ಒಮ್ಮೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡು ಅದರ ಉರಿಯಿಂದ ಹಾಗೆಯೇ ಎಚ್ಚರಾಗಿದ್ದು ಗಾಜಿನ ಕಂಬದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗುತ್ತಾನೆ. ಇದನ್ನು ಕೇಳಿದ ನನ್ನ ಬುದ್ಧಿಗೆ ಸಾಣೆ ಹಿಡಿದಹಾಗೆ ಆಯಿತು. ನಾನು ಎಚ್ಚರವಾಗಿರಬೇಕಾದರೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡರಾಯ್ತು ಅದೇನು ಮಹಾ ಎಂದು ತೀರ್ಮಾನಿಸಿಕೊಂಡೆ. ಮರುದಿನ ಕೈ ಕುಯ್ಯುವ ಶಸ್ತ್ರ ಸಂಪಾದೆನೆಯಾಗಬೇಕಲ್ಲಾ..ಅದಕ್ಕಾಗಿ ಅಡಿಗೆ ಮನೆಗೆ ಶತಪಥ ತಿರುಗಿದ್ದೂ ಆಯ್ತು. ಆದರೆ ಉಪಯೋಗವಿಲ್ಲ…ದೊಡ್ಡ ದೊಡ್ಡ ಈಳಿಗೆ ಮಣೆಗಳು ಕೈ ಇರಲಿ ನನ್ನ ಕಾಲನ್ನೇ ಕತ್ತರಿಸುವಷ್ಟು ಭಯಂಕರವಾಗಿದ್ದು ನನ್ನ ಪ್ರಯೋಗಕ್ಕಿರಲಿ, ಸುಮ್ಮನೆ ಮುಟ್ಟಿನೋಡುವುದಕ್ಕೂ ಕೂಡ ದೊಡ್ಡವರು ಯಾರೂ ಅನುಮತಿಸುವ ಲಕ್ಷಣಗಳೇ ಕಾಣಲಿಲ್ಲ. ಹಾಗಂತ ಸೋತೆನೆಂದು ಕೈ ಚೆಲ್ಲಿ ಕುಳಿತುಕೊಳ್ಳುವ ಜಾಯಮಾನದವಳೇ ನಾನು? ಖಂಡಿತಾ ಇಲ್ಲ. ಅದಕ್ಕಾಗಿ ಅಣ್ಣನ ಶೇವಿಂಗ್ ಬ್ಲೇಡ್ ಎಗರಿಸಿಬಿಡುವುದೆಂದು ನಿರ್ಧರಿಸಿದೆ.

ಮರುದಿನದಿಂದ ಅಣ್ಣ ಶೇವ್ ಮಾಡಿಕೊಳ್ಳುವಾಗ ಅವರನ್ನೇ ನೋಡುತ್ತಾ ಅವರ ಬದಿಯಲ್ಲಿ ಕುಳಿತುಕೊಳ್ಳುವುದು ನನ್ನ ದಿನಚರಿಯ ಒಂದು ಭಾಗವಾಯ್ತು. ಗುಂಡಗಿನ ಗೋದ್ರೆಜ್ ಕ್ರೀಮನ್ನು ಬಿಳೀ ಬ್ರಷ್ ನ ಸಹಾಯದಿಂದ ತೆಗೆದು ಮುಖದಲ್ಲೆಲ್ಲಾ ಪುಸುಪುಸು ನೊರೆಯಾಗಿಸುತ್ತಾ ಹುಲಿ ವೇಶದವರಂತೆ ವಿಚಿತ್ರವಾಗಿ ಕಾಣುವ ಅಣ್ಣನನ್ನು ನೋಡುವುದೇ ಸೊಗಸು. ಹತ್ತಿರ ಕುಳಿತಿದ್ದಕ್ಕೆ ಬಹುಮಾನವಾಗಿಯೋ ಅಥವ “ಕಳ್ಳಮುಂಡೇದು ಮೊದಲೇ ಎಡಬಿಡಂಗಿ ಎಲ್ಲಾದರೂ ತಾನೂ ಹೀಗೆಲ್ಲಾ ಶೇವ್ ಮಾಡಿಕೊಂಡುಬಿಟ್ಟೀತು” ಎನ್ನುವ ಭಯದಿಂದಲೋ ಅಣ್ಣ ನನ್ನ ಕೆನ್ನೆಗೂ ಪುಸುಪುಸು ನೊರೆಹಚ್ಚಿ ಸಂತೋಷಪಡಿಸುತ್ತಿದ್ದರು.  ನಾಲಿಗೆ ಚಾಚಿ ಅಣಕಿಸಿ ಹೆದರಿಸುತ್ತಲೂ ಇದ್ದರು. ಆದರೆ ಹೆದರುವ ಜೀವ ನಾನಲ್ಲವಲ್ಲಾ. ನಂತರ ಅಣ್ಣ ಪಳಪಳನೆ ಹೊಳೆವ ಅಶೋಕ ಬ್ಲೇಡನ್ನು ತೆಗೆದು ನಾಜೂಕಾಗಿ ರೇಜರ್ ಗೆ ಜೋಡಿಸುತ್ತಿದ್ದರು. ಮುಖ ಮೂತಿ ನೂರಾರು ಕಡೆಗೆ ಕೊಂಕಿಸುತ್ತಾ ಮಳೆ ಮೋಡ ಕಂಡ ನವಿಲಿನ ನರ್ತನದಂತೆ ರೇಜರ್ ರನ್ನು ಅಣ್ಣ ಚರ್ ಚರ್ ಎಂದು ಆಡಿಸುತ್ತಿದ್ದರೆ ತದೇಕಚಿತ್ತದಿಂದ ನನ್ನ ಗಮನವೆಲ್ಲಾ ಅಣ್ಣನ ಶೇವಿಂಗ್ ಕಡೆಗಿರುತ್ತಿತ್ತು. ಶೇವಿಂಗ್ ಮುಗಿದೊಡನೆಯೇ ರೇಜರನ್ನು ಬಿಸಿನೀರಿನ ಸಿಲ್ವಾರ್ (ಅಲ್ಯುಮಿನಿಯಂ) ಲೋಟದೊಳಗೆ ಲೊಟಲೊಟನೆ ಆಡಿಸಿದ ಅಣ್ಣ ಅದರಿಂದ ಬ್ಲೇಡನ್ನು ತೆಗೆದು ಅನಾಮತ್ತಾಗಿ ಕರೀ ಹೊಲಸಿನ ತಿಪ್ಪೆಯೊಳಕ್ಕೆ ಎಸೆದುಬಿಡುತ್ತಿದ್ದರು. ಇದನ್ನು ದಿನಾಲೂ ಕಂಡ ನನ್ನ ಅಸಹಾಯಕತೆ ಮೇರೆಮೀರಿತು. ರೇಜರಿಂದ ತಟಕ್ಕನೆ ಬ್ಲೇಡು ತೆಗೆದು ಬಿಸುಡುವ ಅಣ್ಣ ದೇಹದಿಂದ ಆತ್ಮವನ್ನು ದೂರಮಾಡುವ ದುರುಳನಂತೆ ಕಂಡರು. ಒಂದು ದಿನ ಬಂದ ಕೋಪ, ಅಳು ಮತ್ತು ಅಸಹಾಯಕತೆಯನ್ನು ನುಂಗುತ್ತಾ ಅಣ್ಣ ಹೊರಟುಹೋದಮೇಲೆ ಎಷ್ಟೋ ಹೊತ್ತು ಬ್ಲೇಡನ್ನೇ ನೋಡುತ್ತಾ ನಿಂತಿದ್ದೆ. ಮತ್ತೊಮ್ಮೆ ಇಂಥಾ ಸುವರ್ಣಾವಕಾಶ ಎಂದು ಸಿಕ್ಕುವುದೋ ಎಂದು ಸಂದೇಹಿಸುತ್ತಾ ಎಡಗೈ ಹಾಕಿ ಬ್ಲೇಡನ್ನು ಎತ್ತಿಯೇ ಬಿಟ್ಟೆ. ಇನ್ನು ಗಾಜಿನಕಂಬದ ರಾಜಕುಮಾರಿಯ ಕಥೆಯಂತೆ ನನ್ನ ಕಥೆಯೂ ಸುಖಾಂತವಾಗುವುದರಲ್ಲಿ ಸಂಶಯವೇ ಇಲ್ಲವೆಂದು ಹಿಗ್ಗಿದೆ. ತಿಪ್ಪೆಯಲ್ಲಿಟ್ಟ ಕೈ ಹಾಗು ಬ್ಲೇಡು ತೊಳೆಯಲು ಹಿತ್ತಲಿನ ನಲ್ಲಿಯಡಿ ಕಸರತ್ತು ನಡೆಸುತ್ತಿರುವಾಗಲೇ ಪವಾಡವೊಂದು ಜರುಗಿದಂತೆ ತಾನೇ ತಾನಾಗಿ ನನ್ನ ಕೈ ತೋರು ಬೆರಳು ಕುಯ್ದುಹೋಗಿ ನನ್ನ ಸಂತೋಷ ನೂರ್ಮಡಿಯಾಯಿತು. ಇನ್ನು ನಿಂಬೆಹಣ್ಣಿನ ಸಂಪಾದನೆಗೆ ಅಡಿಗೆ ಮನೆಯೆಲ್ಲಾ ಹುಡುಕಿದೆ. ಎಲ್ಲೂ ಇರಲೇ ಇಲ್ಲ. ಮರುದಿನ ಬುದ್ಧಿ ಇನ್ನೂ ಚುರುಕಾಯ್ತು. ಸಣ್ಣ ಟೊಮ್ಯಾಟೊ ಹಣ್ಣನ್ನು ಸಿಕ್ಕಿಸಿಕೊಂಡರೆ ಹೇಗೆ ಎಂದು ಯೋಚಿಸಿ ರಿಹರ್ಸಲ್ ಮಾಡಲು ಹೋಗಿ ಪಿಚಕ್ಕನೆ ರಸವೆಲ್ಲಾ ಬಟ್ಟೆಯಮೇಲೆ ಬೀಳಿಸಿಕೊಂಡು ಅಮ್ಮನಿಂದ ಬೆನ್ನಿಗೆ ಧಡ ಧಡನೆ ಗುದ್ದಿಸಿಕೊಂಡು ತೆಪ್ಪಗಾದೆ. ಊಟ ಮಾಡುವಾಗ ಬೆರಳಿನ ಗಾಯ ತುಸು ಉರಿಯುತ್ತಿತಾದರೂ ನಿದ್ರೆಗೆಡಿಸುವಷ್ಟಲ್ಲ. ೨-೩ ದಿನಗಳ ನಂತರ ಕೊನೆಗೂ ಸಂತೆಯಿಂದ ನಿಂಬೆಹಣ್ಣನ್ನು ತಂದೇಬಿಟ್ಟರು. ಅದರಲ್ಲಿ ಚಿಕ್ಕಗಾತ್ರದ್ದೊಂದನ್ನು ಕದ್ದೇ ಬಿಟ್ಟೆ. ಕಲ್ಲಲ್ಲಿ ಜಜ್ಜಿ ಅದನ್ನು ಕೆತ್ತಿ ಕೈಗೆ ಸಿಕ್ಕಿಸಿಕೊಳ್ಳಲು ಹೊಂದುತ್ತದೆಯೋ ಇಲ್ಲವೋ ನೋಡೋಣವೆಂದು (ಏಕೆಂದರೆ ರಾತ್ರಿ ಅಭಾಸವಾಗಬಾರದಲ್ಲ?) ಬೆರಳಿಗೆ ಸಿಕ್ಕಿಸಿಕೊಳ್ಳಲು ಹೊರಟು ನೋಡುತ್ತೇನೇ…..ಬೆರಳಿನ ಗಾಯ ವಾಸಿಯಾಗಿ ಹೋಗಿದೆ! ದೌರ್ಭಾಗ್ಯವೆಂದರೆ ಇದೇ ಎನ್ನುವ ಅರಿವು ಚೆನ್ನಾಗಿಯೇ ಆಗಿಬಿಟ್ಟಿತು ನನಗೆ. ಯಾಕೋ ರಾತ್ರಿ ಮಹೂರ್ತವೇ ಚೆನ್ನಾಗಿಲ್ಲ ಎಂದುಕೊಂಡು ಯಾವುದಾದರೂ ಮಧ್ಯಾಹ್ನವೇ ಅಟ್ಟದ ಮನೆಯ ರಹಸ್ಯ ಬೇಧಿಸಿಬಿಡಲು ತೀರ್ಮಾನಿಸಿದೆ. ಅದರಂತೆ ಒಂದು ಮಧ್ಯಾಹ್ನ ಅಮ್ಮ, ದೊಡ್ಡಮ್ಮ, ಸುಮಕ್ಕ ಮತ್ತು ಅವಿ ಎಲ್ಲರೂ ಮಲಗಿದ್ದರು. ಅಜ್ಜಿ ಗೌರಜ್ಜಿಯೊಡನೆ ಪೇಟೆಗೆ ಹೋಗಿದ್ದರು. ಮುಂಬಾಗಿಲು ಭದ್ರವಾಗಿ ಹಾಕಿತ್ತು. ಮಧ್ಯಾನ್ಹದ ವೇಳೆ ಅಮ್ಮ, ದೊಡ್ಡಮ್ಮ ಮಲಗಿರುವಾಗೆಲ್ಲಾ ಅಣ್ಣ, ದೊಡ್ಡಪ್ಪ, ಅಜ್ಜಿ ಹಿತ್ತಿಲ ಬಾಗಿಲಿಂದಲೇ ಒಳಗೆ ಬರುತ್ತಿದ್ದುದು. ಆದ್ದರಿಂದ ನಾನೇನು ಯಾರಿಗಾದರೂ ಮುಂಬಾಗಿಲು ತೆರೆಯಬೇಕಾದೀತು ಎನ್ನುವ ಪ್ರಮೇಯವೂ ಇರಲಿಲ್ಲ. ಇಂಥಾ ಸುಸಂದರ್ಭದಲ್ಲಿ ನಾನು ನನ್ನ ನೀರಿನ ಕ್ಯಾನು ಮತ್ತು ಬ್ಯಾಗಿನೊಡನೆ ಅಟ್ಟದ ಮೆಟ್ಟಿಲು ಹತ್ತಲು ಅನುವಾದೆ. ೨-೩ ಮೆಟ್ಟಿಲು ಹತ್ತುವಷ್ಟರಲ್ಲಿ ಎಲ್ಲಿತ್ತೋ ಅಜ್ಜಿಯರ ಸವಾರಿ ಹಿಂಬಾಗಿಲಿನಿಂದ ಬಂದೇಬಿಟ್ಟಿತು. ನಾನು ಗಾಬರಿಗೊಂಡು ಜರ್ ಎಂದು ಜಾರಿಬಿಟ್ಟೆ. ಅಜ್ಜಿ “ಅಯ್ಯೋ…” ಎನ್ನುತ್ತಾ ಧಾವಿಸಿ ಬಂದವರು ನನ್ನನ್ನು ಏನಾಯಿತೆಂದು ಪ್ರಶ್ನಿಸಲು ನಾನು “ಕ..ಕಾ…ಪ..ಪಾ..” ಎಂದು ಗಾಬರಿಯಿಂದ ಅಟ್ಟದ ಮನೆಯ ಕಡೆ ನೋಡುತ್ತಾ ತೊದಲುತ್ತಿರುವುದು ಕಂಡು, ಓಹೋ…ಕತ್ತಲಲ್ಲಿ ಏನೋ ಕಾಣಬಾರದನ್ನು ಕಂಡಿದೆ ಎಂದು ತೀರ್ಮಾನಿಸಿ…ಅಷ್ಟರಲ್ಲಿ ಕೆಲಸ ಮುಗಿಸಿ ಬಂದ ಅಣ್ಣ ಮತ್ತು ದೊಡ್ಡಪ್ಪನನ್ನು ಸಭೆ ಸೇರಿಸಿ ಚರ್ಚಿಸಿ ಅಟ್ಟದ ಮನೆಗೆ ದಪ್ಪನೆಯ ನವ್ತಾಲ್ ಬೀಗ ಬಿಗಿಸಿಬಿಟ್ಟರು. ಇದರಿಂದ ನಿರಾಶೆ ಹಾಗು ಹತಾಶೆಗೊಂಡ ನಾನು ದಿನವೆಲ್ಲಾ ಮುಳು ಮುಳು ಅಳುತ್ತಿದ್ದುದು ಕಂಡು ನಾನು ಹೆದರಿದ್ದೇನೆಂದು ಬಗೆದು ಮರುದಿನ ಹೊಳೆಯಲ್ಲಿ ಸ್ನಾನ ಮಾಡಿಸಿ ಈಶ್ವರನ ಗುಡಿಯಲ್ಲಿದ್ದ ಚಂಡಿಕೇಶ್ವರನೆದುರು ಬೆಚ್ಚು ನೀರು ಹಾಕಿಸಿ, ಕೈಗೊಂದು ಯಂತ್ರ ಬಿಗಿಸಿ ಕರೆತಂದರು. ನನ್ನ ಗಮನ ಅಟ್ಟದ ಮನೆಯಿಂದ ತಪ್ಪಿಸಲು ದಪ್ಪನೆಯ ಬೀಗ ತುಸುಮಟ್ಟಿಗೆ ನೆರವಾದರೂ ನನ್ನ ಉತ್ಸಾಹವನ್ನಂತೂ ತಪ್ಪಿಸಲು ಅಲ್ಲ

ನನಗೆ ಬೇಕಾದಷ್ಟು ಕೆಲಸಗಳು ಕೈತುಂಬ, ಮನತುಂಬ ಯಾವಾಗಲೂ ಇದ್ದವು. ಕಾಲ ಬದಲಾಗುತ್ತಾ ಹೋಗಿ ಕೆಲವೇ ತಿಂಗಳುಗಳಲ್ಲಿ ಅಣ್ಣ-ಅಮ್ಮ ಕೊಳ್ಳೇಗಾಲಕ್ಕೆ ವಾಸಕ್ಕೆ ತೆರಳಬೇಕಾಗಿ ಬಂತು. ಆಗೆಲ್ಲಾ ನನ್ನ ಮನೆ ಮಾತ್ರವಲ್ಲದೇ ನನ್ನವರೆಲ್ಲರನ್ನೂ ಬಿಟ್ಟು ಹೋಗುವ ನೋವು ಅದೆಷ್ಟೋ ವರ್ಷಾನುಗಟ್ಟಲೆ ಕಾಡಿದ್ದಿದೆ. ಅಲ್ಲಾ….ನಾನು ಮಾತ್ರ ಹೀಗಾ? ಅಥವ ನಿಮ್ಮೆಲ್ಲರಿಗೂ ಹೀಗೇ ಆಗುತ್ತದಾ? ಅಕ್ಕ, ತಮ್ಮ ಎನಿಸಿಕೊಳ್ಳಲು ಒಂದೇ ತಾಯಿಯ ಹೊಟ್ಟೆಯಲ್ಲೇ ಹುಟ್ಟಬೇಕಾ? ಮುಂದೆ ಊರಿಂದ ಊರಿಗೆ ನಡೆದಂತೆಲ್ಲಾ ನನ್ನ ಚಟುವಟಿಕೆಯ ಕೆಂದ್ರಗಳು ಬದಲಾಗುತ್ತಾ ಹೋದವು. ಅಣ್ಣ ಪ್ರಪಂಚ ಬಿಟ್ಟು ನಡೆದೂ ಬಿಟ್ಟರು. ದೊಡ್ಡಪ್ಪ ಇಂದು ಬದುಕಿಲ್ಲ. ಬದುಕಿದ್ದಾಗ ಅವರ ತೊಡೆಗಳ ಮೇಲೆ ಆಡಿ ಬೆಳೆದದ್ದನ್ನು ಮರೆತುಬಿಡಲಾ? ಹಳೆತಾದ ಸೀರೆ ಕತ್ತರಿಸಿ ನನಗೊಂದು ಸುಮಕ್ಕನಿಗೊಂದು ಲಂಗ ಹೊಲೆಯುತ್ತಿದ್ದ ದೊಡ್ಡಮ್ಮ?ಸಂಗಡಿಗರೊಡನೆ ಆಡುವಾಗ, ಉಡುಪು ಬದಲಿಸಿ ತೊಡುವಾಗ, ಯೌವನದ ಆತಂಕಗಳನ್ನು ತೋಡಿಕೊಳ್ಳುವಾಗ ಜೊತೆಗಿದ್ದ ಅದೇ ಸುಮಕ್ಕ? ನಾನು, ನನ್ನ ಅಕ್ಕ, ನನ್ನ ತಮ್ಮ ಕುಣಿದ, ನಲಿದ ಕ್ಷಣಗಳು ಜೀವನದುದ್ದಕ್ಕೂ ನನ್ನ ಜೊತೆಜೊತೆಯೇ ಸಾಗಿದೆ. ನನ್ನ ಕಣ್ಣಲ್ಲಿ ಆಗ ನಮ್ಮೂರಿಗಿದ್ದುದು ನಾಲಕ್ಕೇ ಬೀದಿಗಳು. ಈಗ ಊರ ತುಂಬಾ ಬೀದಿಗಳು. ಮನೆಗಳು, ಮಸೀದಿ, ದೇವಾಲಯಗಳು ಎಲ್ಲಾ ಆಗ ದೊಡ್ಡ ದೊಡ್ಡದಾಗಿ ಕಾಣುತ್ತಿದ್ದವು. ಈಗೆಲ್ಲಾ ಮೊದಲಿಗಿಂತಾ ಕುಬ್ಜವಾಗಿ ಕಾಣುತ್ತವೆ. ಅಂದು ಊರ ತುಂಬಾ ತುಂಬಿದ್ದ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪಂದಿರಲ್ಲಿ ಕೆಲವರು ಇಲ್ಲವೇ ಇಲ್ಲ; ಇರುವ ಕೆಲವೇ ಕೆಲವರು ಆಂಟಿ ಆಂಕಲ್ ಗಳಾಗಿಬಿಟ್ಟಿದ್ದಾರೆ. ಈಗ ನಮ್ಮ ಮನೆಯನ್ನು ಕೊಂಡವರು ಯಾರೋ ಮನೆಯ ರೂಪವನ್ನೇ ಬದಲಿಸಿರಬಹುದು. ಗೋಡೆಯ ಬಣ್ಣ ಬೇರೆಯದೇ ಆಗಿಸಿರಬಹುದು. ನನ್ನ ಮನಸ್ಸಿನ ಗೋಡೆಯ ಬಣ್ಣ ಇನ್ನೂ ಅಚ್ಚಳಿಯದೇ ಹಾಗೇ ಇದೆ. ಮನೆಯ ಗೋಡೆಗಳ ಮೇಲೆ ನನ್ನ ತಮ್ಮ ಅವಿ ಹಾಗು ನಾನು ಜಾಯಿಂಟ್ ವೆಂಚರ್ ನಲ್ಲಿ ಬಿಡಿಸಿದ್ದ ನವಿಲು, ಸೂರ್ಯೋದಯ, ನದಿ, ಮರ, ಮತ್ತು  ಅವನನ್ನು ಮಧ್ಯೆ ನಿಲ್ಲಿಸಿಕೊಂಡು ಇಬ್ಬರು ಅಕ್ಕಂದಿರು ನಿಂತಿರುವಂತೆ ಬಿಡಿಸಿದ್ದ ಗೊಂಬೆಗಳ ಚಿತ್ರವಿನ್ನೂ ಚಿತ್ತಾಗದೇ ಉಳಿದಿದೆ. ಅದೇ..ಅವತ್ತಿನದೇ ಮುಗ್ಧಮಗುವಾಗಿ ಮನಸ್ಸು ಇನ್ನೂ ತೊದಲುತ್ತದೆ…ಮರೆತೇನೆಂದರೆ ಮರೆಯಲಿ ಹ್ಯಾಂಗಾ……

Leave a comment

Filed under ಲೇಖನಗಳು

ಬೋಧಿವೃಕ್ಷದ ಕೆಳಗೆ ನಿಂತು….

ಅಲ್ಲಾ ಅದ್ಯಾಕೆ ಬೋಧಿವೃಕ್ಷವೇ ಜ್ಞಾನದ ಸಂಕೇತವಾಯ್ತು? ಇಂಥಾ ತುಡುಗು ಪ್ರಶ್ನೆನೆ ಅಲ್ವೇ ನೀವು ಬೇಡ ಅನ್ನೋದು? ಈ ವಿಷಯಕ್ಕೆ ಬಂದಾಗೆಲ್ಲಾ ಅದ್ಯಾಕೆ ಯಾವಾಗ್ಲೂ ‘ಮಹಾಯಾನ’ ಕ್ಕೆ ಸೇರಿದವರ ಹಾಗಾಡ್ತೀರಿ?  ‘ಮಹಾಯಾನ’ವೆಂದರೆ ಗೊತ್ತಲ್ಲಾ? ಬುದ್ಧ ದೇವರು ಎಂದು ಪೂಜಿಸುವ ಗುಂಪು. ಓಹೋ…ಅದರ ಕೆಳಗೆ ಕೂತವರೆಲ್ಲಾ ಜ್ಞಾನಿಗಳಾಗೋಹಾಗಿದ್ರೆ ನಮ್ಮನೆ ಮುಂದೆ ಒಂದು ಆ ಮರ ಬೆಳೆಸಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಡ್ತಿದ್ದೆ ಹಾಗು ಅದರಿಂದ ಬಂದ ಆಮ್ದನೀಲಿ ಇಷ್ಟುಹೊತ್ತಿಗೆ ಆ ಮರಕ್ಕಿಂತಲೂ ಎತ್ತರದ ಮಹಡಿ ಮನೆ ಕಟ್ಟಿಬಿಡ್ತಿದ್ದೆ ಎಂತೆಲ್ಲಾ ಹುಚ್ಚು ಮನಸ್ಸು ಒರಲಿದಾಗ ನನ್ನಲ್ಲಿ ನನಗೇ ಅಚ್ಚರಿಯಾಯ್ತು. ‘ಬರೀ ಲಾಭಕ್ಕೆ ಮಾತ್ರವೇ ಮನುಷ್ಯನ ಮನಸ್ಸು ಹೆಚ್ಚು ಸಾರಿ ಯೋಚಿಸೋದು’? ನಮ್ಮ ಕಾಡುಗಳಲ್ಲಿ ಬೆಳೆವ ಎಷ್ಟೋ ಮರಗಳು ಕಡಿಯಲ್ಪಟ್ಟು ಮಾರಾಟವಾಗುತ್ತಿಲ್ಲವೇ? ಕಾಡು ಕಡಿದು ನಾಡು ಬೆಳೆಸಲು ಹೊರಟ ಈ ದಿನಗಳಲ್ಲಿ ‘ಸಾಲು ಮರದ ತಿಮ್ಮಕ್ಕ’ನಂಥೋರೂ ಇರೋದು ‘ಇಕೊಲಾಜಿಕಲ್ ಬ್ಯಾಲೆನ್ಸಿಂಗ್’ ಗೇ ಇದ್ದೀತು. ಹೀಗೆಲ್ಲಾ ಯೋಚಿಸುತ್ತಾ ಸಾಗುತ್ತಿರುವಾಗ ಕಂಡಿದ್ದು ಈ ಮರ.

‘ಗಂಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲಾ…..’  ಹುಶ್……ಮೆತ್ತಗೆ ಮಾತಾಡ್ರೀ…..ಗೊತ್ತಾದ್ರೆ ನಾಳೆ ಬೆಳಕು ಹರಿಯೋದ್ರೊಳಗೆ ಯಾವುದೋ ಅಮ್ಮನ್ನೋ ಅಪ್ಪನ್ನೋ (ಕ್ಷಮಿಸಿ, ದೇವರನ್ನು ಹೀಗೆಲ್ಲಾ ಅಂದರೆ ನಿಮಗೆ ಕೋಪವೇನೋ?!) ಬಲವಂತವಾಗಿ ಕೂರಿಸಿ ಮಹಾಮಂಗಳಾರತಿಯೇ ಮಾಡಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಟ್ಟು, ಒಬ್ಬ ‘ಸ್ವಾಮೀಜಿ’ನೂ ತಯಾರು ಮಾಡಿಬಿಡ್ತಾರೆನೋ! ಇಂಥಾದ್ದೊಂದು ಬೋಧಿವೃಕ್ಷದ ಎದುರಿಗೆ ಒಂದು ದಿವಿನಾದ ಕಟ್ಟೆಯಿದ್ದು ಅದರಮೇಲೆ ಪ್ರತಿಷ್ಠಾಪನೆಯಾಗೋದು ನನ್ನ ಹಾಗು ನನ್ನ ಗೆಳತಿಯೊಬ್ಬಳ ಜೀವನದ ಅವಿಭಾಜ್ಯ ಅಂಗ. ದಿನಾಲೂ ಮನೆಯಲ್ಲೋ, ಆಫೀಸಿನಲ್ಲೊ ಕುಳಿತಿದ್ದರೂ ಆ ಕಟ್ಟೆ ನೆನೆದೊಡನೆಯೆ “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ” ಅಂತ ಇಬ್ಬರಿಗೂ ಒಳಮನಸ್ಸಿನ ಶೃತಿಪೆಟ್ಟಿಗೆ ಸಣ್ಣಗೆ ಮಿಡಿಯೋದು ಸುಳ್ಳಲ್ಲ. ಆ ಜಾಗಕ್ಕೆ ತಲುಪಿದ ಮೇಲಂತೂ….ಎದುರಿನ ಆ ಕಟ್ಟೆಯ ಮೂಲೆಯೇ ಆಗಬೇಕು ನಮಗೆ. ಅಲ್ಲ್ಯಾರಾದರೂ ಕುಳಿತಿದ್ದರೋ…..ರಾಜಕಾರಣಿಗಳೇ ನಾಚಿ ನೀರಾಗುವಂತೆ ಪೈಪೋಟಿ ನಡೆಸಿ…ಅಂತೂ ಇಂತೂ ಅದೇ ಸೀಟು ಪಡೆದು ಕುಳಿತಾಗ ಸಿಗುವ ಅಸೀಮ ಸಂತೋಷದ ರುಚಿಯ ಉಂಡವನಷ್ಟೇ ಬಲ್ಲ. ಊರಿನ ಮಾತೆಲ್ಲಾ ಅಲ್ಲೇ ಆಡಿ ಮುಗಿಸಿ, ಜೀವನದ ಅತಿ ಭಯಂಕರವಾಗಿ ಮುಖ್ಯವಾದ ಎಷ್ಟೋ ನಿರ್ಧಾರಗಳನ್ನೂ ಅಲ್ಲೇ ತೆಗೆದುಕೊಂಡು ತೆರಳುವುದು ನಮ್ಮಿಬ್ಬರ ಅಭ್ಯಾಸವಾಗಿಬಿಟ್ಟಿದೆ. ಅಷ್ಟೊಂದು ಅದೇನಿದೆ ಅಲ್ಲಿ? ಪಿಕ್ನಿಕ್ ಸ್ಪಾಟು ಅಂತ ಈ ವೀಕೆಂಡಿಗೆ ತಯಾರಾದೀರಿ ಮತ್ತೆ…ಅದಲ್ಲ! ‘ಚಾರಣ ಪ್ರಿಯರೇ, ನಿಮಗೊಂದು ಹೊಸ ತಾಣ ಇಲ್ಲಿದೆ’ ಎಂದೇನೋ ಭಾವಿಸಿ ನಿರಾಶರಾಗೋ ಅವಶ್ಯಕತೆನೂ ಇಲ್ಲ! ಕಾರಣ, ಅದು ಅಂಥದ್ದೆಲ್ಲಾ ಎನೇನೂ ಅಲ್ಲ ಬಿಡಿ. ಇದೊಂದು ಗಿಜಿಗುಡುವ ಜನಸಂದಣಿಯ ನಡುವೆ ಒರಚ್ಚಾಗಿ, ಗಾಂಧೀಬಜಾರಿನ ತೀರಾ ಸರ್ಕಲ್ಲಲ್ಲೇ ನಿಂತಿರೋ ಮರ. ಧೋ ಎಂದು ಧುಮ್ಮಿಕ್ಕುವ ಪ್ರವಾಹದಂಥಾ ಜನಸಂದಣಿಯಲ್ಲಿ….ಅಬ್ಬಬ್ಬಾ…ಅದೇನು ತರಾವರಿ ಜನ, ಕೊಳ್ಳೋರು, ಮಾರೋರು, ಸುಮ್ಮನೆ ವಿಂಡೋ ಶಾಪಿಂಗ್ ಅಂತ ಅಡ್ಡಾಡೋರು, ಹವಾನಿಯಂತ್ರಿತ ಕಾರುಗಳಲ್ಲಿ, ಬೆವರು ತೊಟ್ಟಿಕ್ಕುವ ಬಸ್ಸುಗಳಲ್ಲಿ,  ಹಾಗೇ ಹೀಗೆನ್ನುತ್ತಾ ಬುರಬುರನೆ ಭವ್ಯ ನಾಗರೀಕತೆಗೆ ಮೂಕಸಾಕ್ಷಿಯಾಗಿ ರಸ್ತೆಬದಿಯ ಫುಟ್ ಪಾತಿಗೆ ಅಂಟಿಯೂ ಅಂಟದಂತೆ ನಿಂತಿರುವ, ಮದುವೆಗೋ, ಮಸಣಕೋ….ಒಟ್ಟಿನಲ್ಲಿ ನಿಲ್ಲದೇ ಚಲಿಸುವ ಜಂಗುಳಿಯ ಜಂಗಮನಿಗೆ ಮನಸೋತು ದಾರಿಬಿಟ್ಟು ನಿಂತಂತಿರುವ ಸ್ಥಾವರ. ಹಾಗೆ ನೋಡಿದರೆ ತೀರ ಪುರಾತನ ಋಷಿಮುನಿಯಂತೇನು ಇದು ಕಾಣುತ್ತಿಲ್ಲ. ಕಳೆದ ಮೂರೋ ನಾಲ್ಕೋ ದಶಕಗಳಿಂದಷ್ಟೇ ಹುಟ್ಟಿ, ಉಳಿದು, ಬೆಳೆದು…ನಮ್ಮ ನಿಮ್ಮೆಲ್ಲರ ಸಮಕಾಲೀನನಂತೆಯೇ ಕಾಣುತ್ತಿದೆ. ಹಾಗಾಗಿ ತೀರ ಸಂತನ ಪೋಜ್ ಕೊಟ್ಟಿದ್ದು ಕಾಣೆ. ಫ್ಯಾಷನ್ ಯುಗದ ಲಲನೆಯರ ಬಳುಕನ್ನೂ, ಸಾಲು ಅಂಗಡಿಗಳ ಥಳುಕನ್ನೂ, ರಸ್ತೆಬದಿಯ ಕೊಳಕನ್ನೂ, ಕಂಡೂ ಕಾಣದಂತೆ ಸರಿದಾಡುತ್ತಿರುವ ಸಮಾಜದ ಹುಳುಕನ್ನೂ, ಹೇಳಲು ಬಾಯಿರದೇ ನರಳುತ್ತಿರುವ ಜನತೆಯ ಅಳುಕನ್ನೂ ನೋಡುತ್ತಲೇ ನಿಯಂತ್ರಿಸಿಕೊಂಡಿದೆ ತನ್ನೆದೆಯ ಛಳುಕನ್ನು.  ಹೀಗಿರಲು ಇದು ಬುದ್ಧನಲ್ಲದೇ ಮತ್ತಿನ್ನೇನು?! ಇದನ್ನು ನೋಡುತ್ತಲೇ ನೆನಪಾದ್ದು ನಿಸಾರರ ‘ಮನಸು ಗಾಂಧೀ ಬಜಾರು’, ಹಸಿರು ಕ್ರಾಂತಿಯ ನಾರ್ಮನ್ ಬೋರ್ಲಾಗ್, ಬಿ.ಜಿ. ಎಲ್. ಸ್ವಾಮಿಯವರ ‘ಹಸಿರು ಹೊನ್ನು’, ‘ಓಶೋ’ ರ ‘ಫೈಂಡಿಂಗ್ ಪೀಸ್ ಇನ್ ಮಾರ್ಕೆಟ್ ಪ್ಲೇಸ್’, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದಡೆಂತಯ್ಯಾ’ ಎಂದು ಪ್ರೀತಿಯಿಂದ ಜನತೆಯನ್ನು ಅಲವತ್ತುಕೊಂಡ ವಚನಕಾರರು….ಇನ್ನೂ ಏನೇನೋ….ಹಾಗೆ ನೋಡ ನೋಡುತ್ತಲೇ ಮರದ ಕೆಳಗೆ ಕಾಯಕವನ್ನು ಕೈಲಾಸವಾಗಿಸಿಕೊಂಡಿರುವ ಚಪ್ಪಲಿ ಹೊಲಿಯುವ, ಬೀಗ ರಿಪೇರಿ ಮಾಡುವ, ಗಿಲೀಟಿನ ಬೆಳ್ಳಿಪಾತ್ರೆ, ನಿಂಬೇ ಹಣ್ಣು, ಮತ್ತೊಂದು ಮಾರುವುದರಲ್ಲೇ ಸಂತಸಗೊಂಡಂತೆ ಕಾಣುವ, ನೋವಲ್ಲೂ ನಗುವ ಗೆಳೆಯರೆಲ್ಲಾ ಬುದ್ಧರಂತೇ ಕಂಡರು.

ಭಾನುವಾರ , ಜನವರಿ 3, 2010, ರ ‘ಪ್ರಜಾವಾಣಿ’ ಯಲ್ಲಿ ‘ಮಹಾದೇವ ಶಂಕನಪುರ’ ಎನ್ನುವವರು ಬರೆದ ಒಂದು ಕವನ ಈ ರೀತಿಯಾಗಿದೆ.

ಅರಳಿ ಮರದಯ್ಯನಿಗೆ
ಎಷ್ಟೋ ಲೋಕದ ತತ್ವಗಳು ಗೊತ್ತು
ಹಾಡುವುದು ಮಾತ್ರ ಒಂದೇ ಪದ,

ಮುಗುಳು ನಗುವ ಹಾಡು
ಮಂದಹಾಸದ ಮೌನಗೀತೆ.

ನೋಡು ನೋಡುತ್ತಾ ನಿಂತರೆ ಸಾಕು
ಕಣ್ಣಲ್ಲೇ ಕರುಣೆಯ ಕಡಲ
ಮೊಗೆದು ಕೊಡುವನು ಗುಟುಕು.

ಇವತ್ತಿಗಿಷ್ಟು ಸಾಕು, ನಾನು ಹೊರಟೆ ಮರ ನೋಡಲು…ನೀವೂ ಹೊರಟು ನೋಡಿ…. ಜ್ಞಾನದ ಸಂಕೇತವಾಗಲು ಅರಳೀ ಮರವೇ ಬೇಕೆಂದಿಲ್ಲ, ನಿಮಗೆ ಬೇಕಾದ್ದೇ ಆದೀತು. ಸುಮ್ಮನೆ ನೋಡಿಷ್ಟು ಪಡೆಯಿರಿ ತಂಪು, ಜ್ಞಾನ, ಸಂತೋಷ, ಅವರವರ ಭಾವಕ್ಕೆ ತಕ್ಕಷ್ಟು…..ಅದೂ ಉಚಿತವಾಗಿ!!!!!

Leave a comment

Filed under ಲೇಖನಗಳು