Category Archives: ಕತೆಗಳು

ಕೋಗಿಲೆ ಕಾಣೆಯಾದ್ದು…..

ಅವತ್ತೂ ಇವತ್ತಿನ ಥರಾನೇ ಮಳೆ ಹೊಡೆದ ರಾತ್ರಿಯ ಮುಂದಿನ ಬೆಳಗು. ಪ್ರಕೃತಿ ಅದೆಷ್ಟು ರಮ್ಯವಾಗಿತ್ತು.  ಮಾವಿನ ಮರದಲ್ಲಿ ಗೊಂಚಲುಗಟ್ಟಿದ್ದ ಪುಟ್ಟ ಪುಟ್ಟ ಕಾಯಿಗಳು, ಚಿಟ ಚಿಟನೆ ಏನೋ ಆತುರದಲ್ಲಿದ್ದಂತೆ, ಯಾರನ್ನೋ ಹುಡುಕುತ್ತಿರುವಂತೆ ಸಿಡಿಯುತ್ತಾ ಹುಲ್ಲು, ಕಡ್ಡಿ, ಸಣ್ಣ ಗಿಡ ಎನ್ನುವ ತಾರತಮ್ಯವಿಲ್ಲದಲೇ ಬೆದಕಿ ನೋಡುತ್ತಾ ಸಾಗುತ್ತಿದ್ದ ಎಂಥಾದ್ದೊ ಚಿಕ್ಕ ಹುಳ, ಆಗಷ್ಟೇ ಎಳೆಬಿಸಿಲ ಹೂರಾಶಿ ತಂದು ಸುಮ್ಮಾನವಾಗಿ ಕಾಂಪೌಂಡಿನೊಳಗೆಲ್ಲಾ ಸುರಿಯುತ್ತಿದ್ದ ಭಾನು ಹಾಗು ಬಾವಿ ಕಟ್ಟೆಯ ಮೇಲೆ ಗರ ಬಡಿದವಳಂತೆ ನಾನು! ಇಂಥಾ ಪ್ರಕೃತಿಯ ಸುವರ್ಣ ಸಂಧಿಕಾಲಕ್ಕೇ ನಾನು ಆಗೆಲ್ಲಾ ಕಾಯುತ್ತಿದ್ದುದು, ಆದರೆ ಅವತ್ತಲ್ಲ. ಪ್ರತಿದಿನವೂ ಮನೆ ಮುಂದಿನ ಸಂಪಿಗೆಮರವಾಸಿಯಾಗಿದ್ದ ಹಾಗು ರಾಗಾಲಾಪನೆಯಲ್ಲೇ ಮುಳುಗಿದ್ದ ಆ ಕೋಗಿಲೆಯನ್ನು ನಾನು ಕಾಣಲು ಮಾತಾಡಿಸಲು ಪ್ರಯತ್ನಪಡುತ್ತಿದ್ದುದೇನು ಸುಳ್ಳಲ್ಲ. “ಕೋಗಿಲೆ ಕಾಗೆ ಥರವೇ ಇರುತ್ತೆ, ಕಾಗೆ ಗೂಡಲ್ಲೇ ಮೊಟ್ಟೆ ಇಡುತ್ತೆ, ಕೋಗಿಲೆ ಮರಿಗಳಿಗೆ ಕಾಗೆ ಚಿಕ್ಕಮ್ಮನಂತೆ” ಎಂದೆಲ್ಲಾ ಅಮ್ಮ ಕಥೆ ಹೇಳುತ್ತಿದ್ದಳಾದರೂ ಸಂಪಿಗೆ ಮರದಲ್ಲಿ ಅದೇನು ಕಪ್ಪಗೆ ಕಂಡ್ರೂ ಅದೇ ಕೋಗಿಲೆ ಎಂದು ನನ್ನನ್ನು ನಾನೇ ನಂಬಿಸಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದೆ. ಇಂತಹಾ ಆ ದಿನದಲ್ಲಿ ನನ್ನ ಸಂಕಟಕ್ಕೆ ಕಾರಣವಾಗಿದ್ದು ಆ ನಮ್ಮ ಕೋಗಿಲೆ ಎರಡು ದಿನಗಳಿಂದಲೂ ಕಾಣೆಯಾಗಿದೆ ಎನ್ನುವುದು.  ವಸಂತ ಋತುವಿನ ಅವತ್ತು ಅದೇನು ಬೇಸಿಗೆಯೋ, ಮಳೆಗಾಲವೋ, ಚಳಿಗಾಲವೊ ಅರಿಯಲಾರದ ಮೂರು ಕೂಡಿದ ಪೂರ್ವ ಸುಕೃತದಂತಿದ್ದ ಹವೆ ಕೋಗಿಲೆಯ ವಿರಹದಲ್ಲಿತ್ತು.

           ದಿನಂಪ್ರತಿ ಬೆಳಗಿನ ಜಾವದ ಕೋಳಿ ಕೂಗಿಗೆ ಏಳುವುದು ಎನ್ನುವುದನ್ನು ಕೇಳಿದ್ದ ನನಗೆ ಕೋಗಿಲೆಯ ಕೂಗಿಂದ ಎಚ್ಚರಾಗುತ್ತಿದ್ದುದು ಏನೋ ಹೊಸ ಪರಿ ಸಂತೋಷ. ಅವತ್ತು ಅದಿರಲಿಲ್ಲ. ಅದೇನು ಹುರುಪೋ ಅದಕ್ಕೆ. ಒಮ್ಮೆ ಮಂದ್ರಕ್ಕೆ, ಒಮ್ಮೆ ತಾರಕಕ್ಕೆ, ಅದೆಷ್ಟು ಬಗೆಯದೋ ತಾಲೀಮು. ಅದು ಹೀಗೂ ಇರಬಹುದು ಎಂದು ಲೆಕ್ಕಾಚಾರಕ್ಕೆ ಬೀಳುವ ಮನಸ್ಸು ಎಲ್ಲಾದರೂ ಪಕ್ಕದೂರಲ್ಲಿ ರಾಮನವಮಿ ಸಂಗೀತ ಕಛೇರಿ ನಡೆಯುತ್ತಿದ್ದು ಅಲ್ಲಿ ವಿದ್ವತ್ಪ್ರದರ್ಶನಕ್ಕೆ ಹೋಗಿರಬಹುದೇನೋ ಎನ್ನುತ್ತಿತ್ತು. ಯಾವುದಕ್ಕೂ ಯಾರನ್ನಾದರೂ ವಿಚಾರಿಸೋಣವೆಂದರೆ ಯಾರನ್ನು ಕೇಳುವುದು? ಸಂಪಿಗೆ ಮರವನ್ನೇ? ಅದ್ಯಾಕೋ ಎಲೆಗಳೆಲ್ಲಾ ಅಲ್ಲಲ್ಲಿ ತಿರುಚಿ ದಿಕ್ಕೆಟ್ಟ ಆಯಾಸದಿಂದ ಆಕಳಿಸಿ ಮೈಮುರಿಯುತ್ತಿವೆ. ಮರದ ಮೇಲಿಂದ ಕೆಳಸರಿಯುತ್ತಿರುವ ಗೊದ್ದದ ಸಾಲಿನಲ್ಲಿ ಯಾಂತ್ರಿಕ ಕಳಾಹೀನ ಮಾರ್ಚ್ ಪಾಸ್ಟು. ಎಲ್ಲಾ ಇರುವಂತಿದೆ ಈ ಸಂಪಿಗೆ ಮರದಲ್ಲಿ, ಚಪ್ಪರ, ತಳಿರು ತೋರಣ, ಹಣ್ಣು, ಹೂ ಕಲಶ, ಗೋಪುರದ ಗುಡಿ…ಆದರೆ ಇಲ್ಲದ್ದು ಗರ್ಭಗುಡಿಯಲ್ಲಿನ ದೇವರು ಮಾತ್ರ. ಸುಮ್ಮನೆ ಪ್ರದಕ್ಷಿಣೆ ಬಂದವಳಿಗೆ ಕಂಡದ್ದು ನೋಡ ನೋಡುತ್ತಲೇ ದಾರಿಹೋಕ ಗಾಳಿಯೊಡನೆ ಉಭಯ ಕುಶಲೋಪರಿಯಂತೆ ಎಲೆಗಳೆಲ್ಲಾ ಸಮೂಹಸನ್ನಿಗೊಳಗಾದಂತೆ ಒಂದಿಷ್ಟು ಹೊತ್ತು ಗಲಗಲನೆ ಅಲುಗಾಡಿ ಮತ್ತೆ ನಿಟ್ಟುಸಿರಿಟ್ಟು ಬೆಪ್ಪಾದ್ದು ಮತ್ತು ರಾತ್ರಿ ಮಳೆಯಿಂದ ಎರವಲು ಪಡೆದು ಹುದುಗಿಸಿಟ್ಟುಕೊಂಡಿದ್ದ ನಾಲ್ಕಾರು ಹನಿಗಳನ್ನೇ ಕಣ್ಣೀರಿನಂತೆ ಕೆಡವಿ ಕಣ್ಣೊರೆಸಿಕೊಂಡು ಮಗ್ಗುಲು ಬದಲಾಯಿಸಿದ್ದು. ಇಲ್ಲಿನ್ನು ನಿಂತು ಉಪಯೋಗವಿಲ್ಲವೆಂದರಿತ ನಾನು ಮಾವಿನ ಮರದೆಡೆಗೆ ಸಾರಿದ್ದೆ. ಮಾವಿನ ಚಿಗುರನ್ನು ತಿಂದು ಸ್ವರದಲ್ಲಿ ಇಂಪು ಬರಿಸಿಕೊಳ್ಳುತ್ತವೆ ಕೋಗಿಲೆಗಳು ಎಂದು ಕೇಳಿದ್ದೆನಷ್ಟೆ. ದಾರಿಯುದ್ದಕ್ಕೂ ಇದ್ದ ಹುಲ್ಲ ಮೆತ್ತೆಯ ನಡು ನಡುವೆ ಅಲ್ಲಲ್ಲಿ ಅರಳಿದ್ದ ಬಿಳಿ, ಹಳದಿ ಪುಟ್ಟ ಹೂಗಳು “ಇಲ್ಲೆಲ್ಲಾ ನಿಮ್ಮ ಕೋಗಿಲೆ ಹೆಜ್ಜೆಯೂರಿದ್ದನ್ನು ನಾವು ಕಂಡಿದ್ದೆವು” ಎಂದು ನೆನಪಿಗೆ ತಂದುಕೊಳ್ಳುವಂತೆ ಕಣ್ಣರಳಿಸಿ ಮತ್ತೆ ಮರೆವಿಗೆ ಸಂದವು. ಗಂಭೀರತೆಯನ್ನೇ ಮೆರೆಯುತ್ತಿದ್ದ ಹಿರಿಯಜ್ಜನಂಥಾ ಮಾವಿನಮರದ ಗೊಂಚಲಲ್ಲಿ ಜಿಗಿಯುತ್ತಿದ್ದ ಮಾವಿನ  ಮಿಡಿಗಳೆಲ್ಲಾ ಕೋಗಿಲೆಯ ಬಗ್ಗೆ ಮಾಹಿತಿಕೊಡಲು ತಮಗೆ ಹಿರಿಯಜ್ಜನ ಅಪ್ಪಣೆಯಿಲ್ಲವೆಂಬಂತೆ ಕಣ್ಣು ತಪ್ಪಿಸುತ್ತಾ ತಮ್ಮ ತಮ್ಮಲ್ಲೇ ಗಿಜಿಗುಡುತ್ತಿದ್ದವು.

ಆಗ ದಡಕ್ಕನೆ ಹಲಗೆಯ ಗೇಟು ತಳ್ಳಿಕೊಂಡು ಬಂದವರೇ ಸೈಂಕ್ರ (ಶಂಕ್ರನ ಅಪಭ್ರಂಶವಿದ್ದೀತು) ಮತ್ತವನ ತಂಗಿ ಸೂಜಿ (ಸೂಜಿಮಲ್ಲಿ). ಅಷ್ಟು ದೂರದ ವಡ್ಡರಟ್ಟಿಯಿಂದ ನನ್ನ ಜೊತೆಗಾಡಲು ಬರುವ, ಒಮ್ಮೊಮ್ಮೆ ಬೇಲ ಮತ್ತು ಬೋರೆ ಹಣ್ಣನ್ನು ತರುವ ನನ್ನ ಆತ್ಮೀಯ ಸ್ನೇಹಿತರು. ಅವತ್ತು ಅವರು ಕವಣೆ ಕಲ್ಲು ಬೀರುವ ಬಿಲ್ಲು ನನಗಾಗಿ ತಂದಿದ್ದು ಕೊಂಚ ನನ್ನ ಕಣ್ಣರಳಿಸಿತ್ತು. ಅದ್ಯಾಕೋ ಕೋಗಿಲೆಯ ಧ್ಯಾನದಲ್ಲಿ ಯಾವುದಕ್ಕೂ ಮನಸ್ಸಿಲ್ಲದ ನಾನು ರೊಟ್ಟಿಯನ್ನಷ್ಟು ಅವರಿಬ್ಬರ ಕೈಗಿಟ್ಟು ಮಾವಿನ ಮರದ ಕಡೆಗೆ ಮತ್ತೆ ವ್ಯಸ್ತಳಾದೆ. ರೊಟ್ಟಿ ಮೆಲ್ಲುತ್ತಾ ಸೈಂಕ್ರ ಆವೇಶಕ್ಕೊಳಗಾದವನಂತೆ ಬಿಲ್ಲಿನ ಉಪಯೋಗಗಳನ್ನು ವಿವರಿಸತೊಡಗಿದ. “ಅದ್ಯಾಕ್ ಅಂಗೆ ಮಾಂಕಾಯ್ನ ದುರುಗುಟ್ಟ್ಕಂಡು ನೋಡ್ತಿದ್ಯವ್ವೋ…ಬರೇ ಮಾಂಕಾಯ್ ಕೆಡ್ವೋದಿರ್ನಿ…ಉಲಿನೂ ಕೆಡುವ್ಬೋದು ಈ ಬಿಲ್ಲಿಂದ ತಿಳ್ಕಾ..ಅಂಗೇ ನಮ್ಮವ್ವ ನೆನ್ಮೊನ್ನೆಯೆಲ್ಲಾ ಮಳೆಚಳಿಗೆ ಬಿಸ್ ಬಿಸಿ ಕೋಗಿಲೆ ಮಾಂಸ ಮಾಡಿತ್ತು, ಏನು ದಿವನಾಗಿತ್ತು ಅಂತೀ…ಅದಿನಾರು ಕಾಯಿಲೆ ಓಯ್ತದಂತೆ ತಿಂದ್ರೆ. ನಮ್ಮಯ್ಯ ದಿನಕ್ಕೆ ಒನ್ನಾಕಾರು ಒಡೆದು ತತ್ತೀನಿ ಅಂದದೆ ಇನ್ಮ್ಯಾಕೆ” ಬಾಯಿ ಬತ್ತಿದವಳಂತೆ ಬಾವಿಕಟ್ಟೆಯ ಮೇಲೆ ಕುಸಿದು ಕುಳಿತಿದ್ದ ನನ್ನ ಕಣ್ಣು ಹನಿಯುತ್ತಿದ್ದನ್ನು ಕಂಡೂ ಕಾಣದವರಂತೆ ಸೈಂಕ್ರ ಮತ್ತು ಸೂಜಿ ಬಿಲ್ಲನ್ನು ನನ್ನ ಪಕ್ಕದಲ್ಲಿಟ್ಟು ಹೊರಟುಬಿಟ್ಟರು. ಮಾವು, ಬೇವು, ಸಂಪಿಗೆ, ಹುಲ್ಲು, ಜಾಜಿ ಬಳ್ಳಿ ಎಲ್ಲವೂ ಎನೋ ಅರಿತವುಗಳಂತೆ ಮುಖ ಮುಖ ನೋಡಿಕೊಳ್ಳುತ್ತಲೇ ಉಳಿದವು.

“ಅತ್ತೇಗೆ ಅತ್ತೆ ಕಿವ್ಡೀ…ಮಾವುಂಗೆ ಮಾವ ಕಿವ್ಡಾ….ಒಬ್ಬರ ಮಾತೊಂದೊಬ್ಬರಿಗಿಲ್ಲ ತಾನಾನಾಂದನಿತಾನ…..” ಸೈಂಕ್ರನ ದೊಡ್ಡ ಕೊರಲಿನ ಹಾಡು ಕಿವಿಗಪ್ಪಳಿಸುತ್ತಾ ದೂರದ ಕೊರಕಲಿಂದಾಚೆಗೂ ಮಾರ್ದನಿಸುತ್ತಲೇ ಇತ್ತು….ಬಹಳ ಹೊತ್ತಿನವರೆಗೂ!

Leave a comment

Filed under ಕತೆಗಳು