ಶ್ರೀ ಗುರು ಚರಿತ್ರೆ (ಅಧ್ಯಾಯ -೨)

ಶ್ರೀ ಗುರು ಚರಿತ್ರೆ – ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ|| ||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||
||ಶ್ರೀಗುರುಭ್ಯೋನಮಃ||

ಕೃಷ್ಣಾತೀರದಲ್ಲಿ ತ್ರಿಮೂರ್ತಿ ರಾಜನಾದ, ಜನ್ಮ ರಹಿತನಾದ ನಮ್ಮ ಗುರುದೇವನು ಕಾಂತಿಗೋಳದಲ್ಲಿ ರಾರಾಜಿಸುತಿದ್ದಾನೆ. ಅಲ್ಲಿನ ಭಕ್ತರು ಆತನ ಆನಂದ ಲೀಲೆಗಳನ್ನು ಅನುಭವಿಸುತ್ತಿದ್ದಾರೆ. ಭಕ್ತರಲ್ಲದ ಸುರರೂ ಕೂಡಾ ಅಂತಹ ಲೀಲೆಗಳನ್ನು ಸ್ವರ್ಗದಲ್ಲಿ ಅನುಭವಿಸಬೇಕೆಂದು ಕೋರಿಕೊಳ್ಳುತ್ತಿದ್ದಾರೆ.

ಖಿನ್ನನಾಗಿದ್ದ ನಾಮಧಾರಕನು ಗುರುಲೀಲೆಗಳನ್ನು ಧ್ಯಾನಮಾಡಿಕೊಂಡು ಹೋಗುತ್ತಾ, ದಾರಿಯಲ್ಲಿ ಬಳಲಿದವನಾಗಿ, ಒಂದು ವೃಕ್ಷಮೂಲದಲ್ಲಿ ಕುಳಿತು ಮೂರ್ಛೆಗೊಂಡವನಾಗಿ ನಿದ್ರಾವಶನಾದನು. ನಿದ್ರೆಯಲ್ಲೂ ಕೂಡಾ ಅವನು ಗುರುಧ್ಯಾನವನ್ನೇ ಮಾಡುತ್ತಿದ್ದನು. ಹಾಗೆ ಧ್ಯಾನಮಗ್ನನಾದ ಅವನಿಗೆ ದಯಾಪೂರ್ಣನೂ. ಅನಂತನೂ ಆದ ಆ ಶ್ರೀ ಗುರುವು ಸ್ವಪ್ನದಲ್ಲಿ ತನ್ನ ಸ್ವರೂಪವಾದ ಭಸ್ಮೋದ್ಧೂಳಿತ ಶರೀರ, ಜಟಾಧಾರಿ, ವ್ಯಾಘ್ರಚರ್ಮಾಂಬರಧಾರಿಯಾಗಿ ದರ್ಶನವಿತ್ತನು. ನಾಮಧಾರಕನಿಗೆ ಲಲಾಟದಲ್ಲಿ ಭಸ್ಮವನ್ನಿಟ್ಟು, ಅವನನ್ನು ಆದರಿಸಿ, ಅವನ ತಲೆಯಮೇಲೆ ತನ್ನ ಅಭಯಹಸ್ತವನ್ನಿಟ್ಟನು. ಇಂತಹ ಅಪರೂಪ ಸ್ವಪ್ನವನ್ನು ಕಂಡ ನಾಮಾಧಾರಕ ಎಚ್ಚರಗೊಂಡು, ಸುತ್ತಲೂ ನೋಡುತ್ತಾ ಏನನ್ನೂ ಕಾಣದೆ ಆಶ್ಚರ್ಯಗೊಂಡನು.

ಆ ಸ್ವಪ್ನದಲ್ಲಿ ಕಂಡ ಆ ಮೂರ್ತಿಯನ್ನೇ ನೆನಸಿಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿದ್ದ ನಾಮಧಾರಕನಿಗೆ ಅಂತಹ ಮೂರ್ತಿಯೇ ಪ್ರತ್ಯಕ್ಷವಾಗಿ ಎದುರಿಗೆ ಕಾಣಿಸಿಕೊಂಡನು. ಯೋಗೀಶ್ವರನಾದ ಅವನನ್ನು ಕಂಡ ನಾಮಧಾರಕ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅತನ ಚರಣಗಳಲ್ಲಿ ಮಸ್ತಕವನ್ನಿಟ್ಟು, ” ಹೇ ಕೃಪಾಸಾಗರ, ಕೃಪೆಮಾಡು. ನೀನೇ ನನ್ನ ತಾಯಿ ತಂದೆ. ಹೇ ಯೋಗಾಧೀಶ ನಿನಗೆ ಜಯವಾಗಲಿ. ಅಜ್ಞಾನವೆನ್ನುವ ಕತ್ತಲನ್ನು ಹೊರದೂಡುವವನು ನೀನೇ! ಆತ್ಮಜ್ಯೋತಿಯು. ಸ್ವಪ್ರಕಾಶನು. ಸಿದ್ಧಯೋಗಿಯು. ಕೃಪಾನಿಧಿ. ನಿನ್ನ ದರ್ಶನಮಾತ್ರದಿಂದಲೇ ನನ್ನ ದುರಿತಗಳೆಲ್ಲವೂ ಮಾಯವಾಗಿ ಹೋದವು. ನೀನೇ ನನ್ನನ್ನು ಉದ್ಧರಿಸಬಲ್ಲವನು. ಹೇ ಸ್ವಾಮಿ, ನನ್ನ ಕಷ್ಟಕಾಲದಲ್ಲಿ ಕೃಪೆಯಿಟ್ಟು ಈ ದೀನನಾದ ಭಕ್ತನನ್ನು ಕಾಣಲು ಬಂದಿದ್ದೀಯೆ. ನಿನ್ನ ಹೆಸರೇನು? ನಿನ್ನ ನಿವಾಸವೆಲ್ಲಿ? ಎಲ್ಲವನ್ನೂ ದಯೆಯಿಟ್ಟು ಹೇಳು.” ಎಂದು ಪ್ರಾರ್ಥಿಸಿದನು.

ಆ ಯೋಗೀಶ್ವರ ನಾಮಧಾರಕನಿಗೆ ” ಅಯ್ಯಾ ನಾನು ಸಿದ್ಧನು. ಯೋಗಿ. ಭೂಲೋಕದಲ್ಲಿ ಆಸಕ್ತಿಯಿಂದ ತೀರ್ಥಾಟನೆಗಳನ್ನು ಮಾಡುತ್ತಿದ್ದೇನೆ. ನಮ್ಮ ಗುರುವು ಪ್ರಸಿದ್ಧರಾದ ಶ್ರೀ ನೃಸಿಂಹ ಸರಸ್ವತಿಯವರು. ಭೀಮಾ ಅಮರಜಾ ನದಿಗಳ ಸಂಗಮಸ್ಥಾನದಲ್ಲಿ ಗಂಧರ್ವನಗರವಿದೆ. ಅದು ತ್ರಿಮೂರ್ತಿಸ್ವರೂಪನಾದ ಶ್ರೀ ನೃಸಿಂಹ ಸರಸ್ವತಿಯವರ ನಿವಾಸ ಸ್ಥಾನವು. ಭಕ್ತರ ರಕ್ಷಣೆಗೆಂದು ತ್ರಿಮೂರ್ತಿಗಳ ಅವತಾರವಾಗಿ ಅಲ್ಲಿ ಆತ ನೆಲಸಿದ್ದಾರೆ. ಲೋಕದಲ್ಲಿನ ಯೋಗಿಗಳೆಲ್ಲರೂ ಭವಸಾಗರವನ್ನು ದಾಟುವಂತೆ ಮಾಡುವ ಆ ಸ್ವಾಮಿಯನ್ನೇ ಸದಾ ಧ್ಯಾನಮಾಡುತ್ತಿರುತ್ತಾರೆ. ಆ ಸದ್ಗುರುವು ಕೃಪಾಸಾಗರನು. ಭಕ್ತರಿಗೆ ಸದಾ ವರದಾತನು. ಅವರಿಗೆ ಸರ್ವ ಸೌಖ್ಯಗಳನ್ನೂ, ಸಂಪದಗಳನ್ನೂ, ಸಂತೋಷವನ್ನೂ ಆತ ಪ್ರಸಾದಿಸುತ್ತಾನೆ. ಆ ಸ್ವಾಮಿಯ ಭಕ್ತರಿಗೆ ದೈನ್ಯವೆಂಬುದಿರುವುದಿಲ್ಲ. ಗೋ ಧನ ಧಾನ್ಯಾದಿಗಳಿಂದ ಕೂಡಿ ಸಂಪದ್ಭರಿತರಾಗಿರುತ್ತಾರೆ. ಅಷ್ಟಸಿದ್ಧಿಗಳಿಂದ ಕೂಡಿ ಅವರು ಸಂತುಷ್ಟರಾಗಿರುತ್ತಾರೆ.” ಎಂದು ತಮ್ಮ ಗುರುವಿಗೆ ಗೌರವವನ್ನು ಸೂಚಿಸುತ್ತಾ ಹೇಳಿದರು.

ಆ ಮಾತುಗಳನ್ನು ಕೇಳಿದ ನಾಮಧಾರಕ, “ಸ್ವಾಮಿ, ನಾನು ಸದಾಕಾಲವೂ ಆ ಗುರುವನ್ನೇ ಧ್ಯಾನಿಸುತ್ತಾ ಇರುತ್ತೇನೆ. ಗುರುವಿನ ಬಿರುದಾವಳಿಗಳನ್ನೂ ಕೀರ್ತಿಯನ್ನೂ ಬಹಳವಾಗಿ ಕೇಳಿದ್ದೇನೆ. ಅವರಲ್ಲಿ ಪರಂಪರೆಯಾಗಿ ಬಂದಿರುವ ಭಕ್ತಿಯಿಂದ ಕೂಡಿರುವ, ಕಷ್ಟಕೋಟಲೆಗಳಲ್ಲಿ ಸಿಕ್ಕಿಕೊಂಡಿರುವ ನನ್ನ ಮೇಲೆ ಏಕೆ ಆ ಗುರುವಿನ ಅನುಗ್ರಹ ಇನ್ನೂ ಆಗಿಲ್ಲ ಎಂಬುದನ್ನು ನಿಶ್ಚಿತವಾಗಿ ಹೇಳಿ.” ಎಂದು ಕೇಳಿಕೊಂಡನು. ಅದಕ್ಕೆ ಸಿದ್ಧರು, “ಹೇ ಬ್ರಾಹ್ಮಣ, ಸಾವಧಾನದಿಂದ ಲಾಲಿಸು. ಸದ್ಗುರುವು ಭಕ್ತವತ್ಸಲನು. ಆ ಸ್ವಾಮಿಯ ಕೃಪೆಯನ್ನು ವಿಸ್ತರಿಸಿ ಹೇಳುತ್ತೇನೆ. ಸ್ವಾಮಿಯ ದಯೆಯಿದ್ದವರಿಗೆ ದೈನ್ಯವೆಂಬುದು ಇರುವುದಿಲ್ಲ. ಅವರ ವಂಶದಲ್ಲಿಯೇ ದೈನ್ಯವು ಕಾಣಬರುವುದಿಲ್ಲ. ಅಂತಹವನಿಗೆ ದೇವತೆಗಳೂ ವಶರಾಗಿರುತ್ತಾರೆ. ಅವನು ಕಲಿಕಾಲವನ್ನು ಜಯಿಸುತ್ತಾನೆ. ಅಂತಹ ಗುರುವನ್ನು ಪೂಜಿಸಿಯೂ ನೀನು ದೈನ್ಯವೆಂದೇಕೆ ಹೇಳುತ್ತಿದ್ದೀಯೆ? ನಿನ್ನ ಮನಸ್ಸು ಸಂಶಯಾತ್ಮಕವಾಗಿದೆ ಎನ್ನಿಸುತ್ತದೆ. ಅದರಿಂದಲೇ ನಿನಗೆ ಈ ಕಷ್ಟಗಳು ಉಂಟಾಗಿವೆ. ಶ್ರೀ ಗುರುವೇ ತ್ರಿಮೂರ್ತಿಯೆಂದು ಶ್ರದ್ಧೆಯಿಟ್ಟವನಿಗೆ ಇಷ್ಟಪ್ರಾಪ್ತಿಯಾಗುವುದು. ಗುರುವಿನಲ್ಲೇ ಮನಸ್ಸನ್ನು ನಿಲ್ಲಿಸಿದ ಭಕ್ತನಿಗೆ ಶ್ರೀಗುರುವು ಸಕಲ ವರಗಳನ್ನೂ ತಪ್ಪದೇ ದಯಪಾಲಿಸುತ್ತಾನೆ. ಮಹಾವಿಷ್ಣು ಮಹೇಶ್ವರರು ಭಕ್ತನಮೇಲೆ ಕೃದ್ಧರಾದರೂ ತನಗೆ ಸನ್ನಿಹಿತನಾದ ಭಕ್ತನನ್ನು ಶ್ರೀ ಗುರುವು ತಪ್ಪದೇ ರಕ್ಷಿಸುತ್ತಾನೆ. ಆದರೆ ಶ್ರೀ ಗುರುವು ಯಾರಲ್ಲಿ ಕೃದ್ಧನಾಗುತ್ತಾನೋ ಅವನನ್ನು ಹರಿ ಹರರೂ ರಕ್ಷಿಸಲಾರರು.” ಎಂದು ಖಂಡಿತವಾಗಿ ನುಡಿದರು.

ಅವರ ಮಾತುಗಳನ್ನು ಕೇಳಿದ ನಾಮಧಾರಕ, ಅವರ ಚರಣಗಳನ್ನು ಹಿಡಿದು, ನಮಸ್ಕರಿಸಿ, ವಿನಯದಿಂದ, “ಸ್ವಾಮಿ, ನಿಮ್ಮ ಈ ಮಾತುಗಳನ್ನು ಕೇಳಿದ ನನಗೆ ಇನ್ನೊಂದು ಸಂದೇಹ ಉಂಟಾಗುತ್ತಿದೆ. ಶ್ರೀ ಗುರುವು ತ್ರಿಮೂರ್ತಿ ಸ್ವರೂಪನು ಹೇಗಾದನು? ಬ್ರಹ್ಮ ವಿಷ್ಣು ಮಹೇಶ್ವರರೇ ಶ್ರೀ ಗುರುವು ಎನ್ನುವುದು ಎಷ್ಟು ಸಮಂಜಸವಾದುದು? ದೇವರು ಕೋಪಿಸಿಕೊಂಡಾಗ ಗುರುವು ರಕ್ಷಿಸುತ್ತಾನೆ. ಆದರೆ ಗುರುವೇ ಕೋಪಿಸಿಕೊಂಡರೆ ರಕ್ಷಿಸುವವರು ಯಾರೂ ಇಲ್ಲವೇ? ಇಂತಹ ಮಾತುಗಳನ್ನು ಯಾರು ಹೇಳಿದರು? ಎಂಬುದನ್ನು ತಿಳಿಸಿ, ಡೋಲಾಯಮಾನವಾಗಿರುವ ನನ್ನ ಮನಸ್ಸನ್ನು ಸ್ಥಿರಗೊಳಿಸಿ.” ಎಂದು ಪ್ರಾರ್ಥಿಸಿದನು.

ಆಗ ಕೃಪಾಮೂರ್ತಿಯಾದ ಆ ಸಿದ್ಧಮುನಿಯು, ನಾಮಧಾರಕನ ಮಾತುಗಳನ್ನು ಪ್ರಶಂಸಿಸಿ, “ಅಯ್ಯಾ, ಬುದ್ಧಿವಂತನೆ, ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು. ಈ ವಿಷಯದಲ್ಲಿ ವೇದವಾಕ್ಯಗಳೇ ಪ್ರಮಾಣವು. ಆರಂಭದಿಂದ ಹೇಳುತ್ತೇನೆ. ಶ್ರೀ ಮಹಾವಿಷ್ಣುವಿನ ನಾಭಿಯಿಂದ ಚತುರಾನನನಾದ ಬ್ರಹ್ಮನು ಹುಟ್ಟಿದನು. ಆ ಬ್ರಹ್ಮನ ಮುಖದಿಂದ ಚತುರ್ವೇದಗಳು ಹೊರಬಂದವು. ನಂತರ ಪುರಾಣಗಳು ಬಂದವು. ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮ ವೈವರ್ತ ಪುರಾಣವೆನ್ನುವುದು ಬಹು ವಿಸ್ತಾರವಾಗಿದೆ. ಇದು ಲೋಕ ಪ್ರಸಿದ್ಧವಾದದ್ದು. ದ್ವಾಪರ ಯುಗಾಂತದಲ್ಲಿ ಮಹಾವಿಷ್ಣುವೇ ವ್ಯಾಸನಾಗಿ ಭೂಲೋಕದಲ್ಲಿನ ಜನರೆಲ್ಲರಿಗೂ ಶುಭವಾಗಲೆಂಬ ಸುಯೋಚನೆಯಿಂದ ಪುರಾಣಗಳೆಲ್ಲವನ್ನೂ ಪ್ರಕಾಶಗೊಳಿಸಿದನು. ಅವು ವ್ಯಾಸನ ಶಿಷ್ಯರ ಮೂಲಕ ಈ ಲೋಕದಲ್ಲಿ ಪ್ರಚಾರಗೊಂಡವು. ಆ ಪುರಾಣಗಳಲ್ಲಿನ ಕಥೆಯೊಂದನ್ನು ನನಗೆ ತಿಳಿದಮಟ್ಟಿಗೆ ನಿನಗೆ ಹೇಳುವೆನು.

ಲೋಕೇಶ್ವರನಾದ ಬ್ರಹ್ಮನನ್ನು ಗುರುಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಕಲಿ ಒಂದುಸಲ ಕೇಳಿದನು. ಆಗ ಬ್ರಹ್ಮನು ಅವನಿಗೆ ಗುರು ಮಹಿಮೆಯನ್ನು ಹೇಳಿದನು.” ಎಂದು ಹೇಳಲು, ಮತ್ತೆ ನಾಮಧಾರಕ ಸಿದ್ಧನಿಗೆ ನಮಸ್ಕರಿಸಿ ವಿನಮ್ರನಾಗಿ ಕೇಳಿದನು. “ಮಹಾಯೋಗಿ, ಸಿದ್ಧಪುರುಷ, ನಿನಗೆ ಜಯವಾಗಲಿ. ಅಂಧಕಾರವನ್ನು ಹೊಡೆದೋಡಿಸುವ ಸೂರ್ಯನಂತಹವನು ನೀನು. ಕೃಪಾಸಾಗರ. ಸಂಸಾರ ಸಾಗರವನ್ನು ದಾಟಿಸುವವನು. ಬ್ರಹ್ಮದೇವನು ಕಲಿಗೆ ಗುರುಮಹಿಮೆಯನ್ನು ತಿಳಿಸಬೇಕಾಗಿ ಬಂದ ಸಂದರ್ಭವನ್ನು ವಿಶದವಾಗಿ ತಿಳಿಸು.” ಅದಕ್ಕೆ ಸಿದ್ಧಮುನಿ, “ಬ್ರಹ್ಮ ಶಯನಕಾಲದಲ್ಲಿ ಅವ್ಯಕ್ತವನ್ನು ಸೇರುತ್ತಾನೆ. ಅದು ಅವನಿಗೆ ರಾತ್ರಿ. ಆ ಅವ್ಯಕ್ತ ನಿಮಿತ್ತವಾಗಿ ಉಂಟಾದ ಕಲ್ಪವನ್ನು ನೈಮಿತ್ತಿಕ ಕಲ್ಪ ಎನ್ನುತ್ತಾರೆ. ಆಗ ಕಲ್ಪಸಾಗರದಲ್ಲಿ ವಿಷ್ಣುವು ವಟಪತ್ರ ಶಾಯಿಯಾಗಿ ಇರುತ್ತಾನೆ. ಅವ್ಯಕ್ತ ಮೂರ್ತಿಯಾದ ವಿಷ್ಣುವು ವರಾಹಕಲ್ಪದಲ್ಲಿ, ಕರ್ಮಫಲಭೋಗಕ್ಕಾಗಿ ಬ್ರಹ್ಮನಲ್ಲಿ ಲಯವಾಗಿದ್ದ ಜೀವಿಗಳ ಸೃಷ್ಟಿಯನ್ನು ಮತ್ತೆ ಪ್ರಾರಂಭಿಸುತ್ತಾನೆ. ಆದ್ದರಿಂದ ಸೃಷ್ಟಿಕಾರ್ಯವನ್ನು ಪ್ರಾರಂಭಿಸಲು ತನ್ನ ಯೋಗನಿದ್ರೆಯನ್ನು ಬಿಟ್ಟೇಳುತ್ತಾನೆ. ಹಿಂದಿನ ಸೃಷ್ಟಿಯನ್ನು ತಿಳಿದವನಾದದ್ದರಿಂದ ಮತ್ತೆ ಸೃಷ್ಟಿಕಾರ್ಯಾರಂಭಮಾಡುವ ಮನಸ್ಸಿನಿಂದ ನಾಭಿಕಮಲವನ್ನು ವಿಕಸಿತಗೊಳಿಸಿದನು. ಅದರಿಂದ ಉದ್ಭವಿಸಿದ ಬ್ರಹ್ಮನು ನಾಲ್ಕೂ ದಿಕ್ಕುಗಳನ್ನು ನೋಡುತ್ತಾ ಸಂಕಲ್ಪ ಮಾಡಿದುದರಿಂದ ಚತುರ್ಮುಖನಾದನು. ಆ ಚತುರ್ಮುಖನಾದ ಬ್ರಹ್ಮ ತನ್ನಲ್ಲಿಯೇ ಯೋಚಿಸಿದನು. ” ನನಗಿಂತ ಬಲವಾದವರು ಯಾರಿದ್ದಾರೆ? ಇಲ್ಲಿ ಯಾರೂ ಕಾಣುವುದಿಲ್ಲ. ಆದ್ದರಿಂದ ನಾನೇ ಸರ್ವ ಸಮರ್ಥನು. ನಾನೇ ಬಲವಂತನು.” ತತ್ಕ್ಷಣವೇ ನಾರಾಯಣನು ಗಹಗಹಿಸಿ ನಕ್ಕು ಹೇಳಿದನು. “ನಾನು ಮಹಾವಿಷ್ಣುವು. ನಿನ್ನ ತಂದೆ. ನನ್ನನ್ನು ಭಜಿಸು.” ವಿಷ್ಣುವಿನ ಆ ಮಾತುಗಳನ್ನು ಕೇಳಿದ ಬ್ರಹ್ಮ, ಅವನನ್ನು ಕಂಡು, ನಮಸ್ಕರಿಸಿ ಸ್ತುತಿಸಿದನು. ಅವನ ಸ್ತುತಿಗೆ ಸಂತುಷ್ಟನಾದ ವಿಷ್ಣುವು ಅವನನ್ನು ಕುರಿತು, “ಮಗನೆ, ನನ್ನ ಆಜ್ಞೆಯಂತೆ ಸೃಷ್ಟಿಕಾರ್ಯಾರಂಭ ಮಾಡು.” ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಬ್ರಹ್ಮ, “ತಂದೆಯೇ, ಸೃಷ್ಟಿರಚನಾವಿಧಾನಗಳು ನನಗೆ ತಿಳಿಯದು. ನಾನು ಇದುವರೆಗೂ ಸೃಷ್ಟಿರಚನಾ ರೀತಿಯನ್ನು ನೋಡಿಲ್ಲ.” ಎಂದನು. ಅದಕ್ಕೆ ವಿಷ್ಣುವು ಅವನ ಸ್ಪಷ್ಟ ಮಾತುಗಳಿಂದ ಸಂತೋಷಗೊಂಡು, “ವೇದಗಳನ್ನು ಗ್ರಹಿಸಿ, ಅದರಲ್ಲಿ ಹೇಳಿರುವ ರೀತಿಯಲ್ಲಿ ಸೃಷ್ಟಿಮಾಡು. ವೇದಗಳಲ್ಲಿ ಸೃಷ್ಟಿರಚನಾವಿಧಾನಗಳೆಲ್ಲಾ ಇವೆ. ಅದನ್ನು ಸರಿಯಾಗಿ ತಿಳಿದು ಅದರಂತೆ ಸಕಲ ಸೃಷ್ಟಿಯನ್ನೂ ಮಾಡು. ವೇದಗಳು ಅನಾದಿಯಾದವು. ಸೃಷ್ಟಿಗೆ ಮಾರ್ಗದರ್ಶಕವಾದವು. ಕನ್ನಡಿಯಂತೆ ಎಲ್ಲವನ್ನೂ ಸ್ಪಷ್ಟವಾಗಿ ತೋರಿಸಬಲ್ಲವು. ಹಾಗೆ ವೇದೋಕ್ತವಾದ ರೀತಿಯಲ್ಲಿ ಅವಿಶ್ರಾಂತನಾಗಿ, ಸೃಷ್ಟಿಕಾರ್ಯವನ್ನು ನೆರವೇರಿಸು.” ಎಂದನು.

ಅದರಂತೆ ಬ್ರಹ್ಮನು, ಪ್ರಜೆಗಳನ್ನೂ, ಸಕಲ ಚರಾಚರಗಳನ್ನು ಸೃಷ್ಟಿಸಿದನು. ಉದ್ಭಿಜ, ಅಂಡಜ, ಸ್ವೇದಜ, ಜರಾಯುಜಗಳನ್ನೆಲ್ಲಾ ಅಶೇಷವಾಗಿ ಸೃಷ್ಟಿಸಿದನು. ವ್ಯಾಸಮುನಿಯು ವರ್ಣಿಸಿದಂತೆ ಈ ತ್ರಿಲೋಕಗಳೂ ಈಶ್ವರಶಕ್ತಿಯಿಂದ ಕೂಡಿ ಏರ್ಪಾಡಾಗಿವೆ. ನಾರಾಯಣನೇ ವೇದವ್ಯಾಸನಾಗಿ, ಅಷ್ಟಾದಶ ಪುರಾಣಗಳು ಭೂತಲದಲ್ಲಿ ವಿಸ್ತರಿಸುವಂತೆ ಮಾಡಿದನು. ಆ ಪುರಾಣಗಳಲ್ಲಿ ಬ್ರಹ್ಮವೈವರ್ತ ಪುರಾಣವನ್ನು ಸೂತನು ಶೌನಕಾದಿ ಮುನಿಗಳಿಗೆ ಹೇಳಿದನು. ಅದರಲ್ಲಿ ಸದ್ಗುರುವಿನ ಕಥೆ ಅಡಕವಾಗಿದೆ. ಬ್ರಹ್ಮನಿಷ್ಠರಾದ ಸನಕಾದಿಗಳನ್ನೂ, ಸೃಷ್ಟಿವರ್ಧಕರಾದ ಮರೀಚಾದಿಗಳನ್ನು ಚತುರ್ಮುಖನು ಮನಸ್ಸಂಕಲ್ಪದಿಂದ ಸೃಷ್ಟಿಸಿದನು. ಅನಂತರ ದ್ರುಹಿಣನು ಸುರಾಸುರರನ್ನು ಸೃಷ್ಟಿಸಿದನು. ತಮ್ಮ ತಮ್ಮ ವರ್ಣಾಶ್ರಮಧರ್ಮಗಳಲ್ಲಿ ಆಸಕ್ತರಾದ ಬ್ರಾಹ್ಮಣಾದಿಗಳನ್ನು ಬ್ರಹ್ಮ ಸೃಷ್ಟಿಸಿದನು. ಅದ್ದಮೇಲ್ವೆ ಬ್ರಹ್ಮ ಕೃತ, ದ್ವಾಪರ, ತ್ರೇತಾ, ಕಲಿ ಯುಗಗಳನ್ನು ಸೃಷ್ಟಿಮಾಡಿ ಅವರನ್ನು ಒಬ್ಬೊಬ್ಬರಾಗಿ ಕರೆದು ಅವರಿಗೆ ಹೇಳಿದನು. “ನನ್ನ ಆಜ್ಞೆಯಂತೆ ನೀವು ಭೂಲೋಕವನ್ನು ಸೇರಿ ಅಲ್ಲಿ ನಿಮ್ಮ ನಿಮ್ಮ ಗುಣಗಳನ್ನು ಪ್ರಕಟಗೊಳಿಸಿ.” ಅವರಲ್ಲಿ ಸತ್ಯನಿಷ್ಠವಾದ ಕೃತಯುಗವು ಮೊದಲು ಭೂಲೋಕವನ್ನು ಸೇರಲು ಅಣಿಯಾಯಿತು.

ಕೃತಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಅದರ ಬಳಿ ಅಸತ್ಯವೆನ್ನುವುದು ಯಾವಾಗಲೂ ಇರುವುದಿಲ್ಲ. ವೈರಾಗ್ಯದಿಂದ ಕೂಡಿರುತ್ತದೆ. ಯಜ್ಞೋಪವೀತವೇ ಆಭರಣವಾಗಿ, ಅಕ್ಷಮಾಲೆ ಕೈಕಂಕಣವಾಗಿರುವ ಕೃತಯುಗ, ತನ್ನ ಪೂರ್ವ ಶರೀರವನ್ನು ಧರಿಸಿ, ಭೂಲೋಕವನ್ನು ಸೇರುವ ಮುಂಚೆ ಬ್ರಹ್ಮನನ್ನು ಕೇಳಿದನು. “ಬ್ರಹ್ಮದೇವ, ನನ್ನನ್ನು ಈಗ ಭೂತಲಕ್ಕೆ ಹೋಗು ಎಂದು ಏಕೆ ಹೇಳುತ್ತಿದ್ದೀಯೆ? ಅಲ್ಲಿನ ಮಾನವರೆಲ್ಲರು ಸದಾಕಾಲ ಅಸತ್ಯವಾದಿಗಳೇ! ನಿಂದಾಪವಾದಗಳಲ್ಲಿಯೇ ಅವರು ಮುಳುಗಿಹೋಗಿರುತ್ತಾರೆ. ಶಠರು. ಅವರನ್ನು ಕಂಡರೆ ನನಗೆ ಭಯವಾಗುತ್ತದೆ.” ಅದಕ್ಕೆ ಬ್ರಹ್ಮನು, “ಕೃತಯುಗ, ನೀನು ಅಲ್ಲಿಗೆ ಹೋಗಿ ೧೭,೨೮,೦೦೦ ವರ್ಷಗಳು ಸಾವಧಾನ ಚಿತ್ತನಾಗಿ ಅಲ್ಲಿರು. ನಿನಗೆ ಯಾವ ಕಷ್ಟಗಳೂ ಬರುವುದಿಲ್ಲ. ಆ ನಂತರ ಇನ್ನೊಂದು ಯುಗವನ್ನು ಅಲ್ಲಿಗೆ ಹೋಗುವಂತೆ ಏರ್ಪಡಿಸುತ್ತೇನೆ.” ಎಂದನು. ಅವನ ಮಾತಿನಂತೆ ಕೃತಯುಗವು ಹೊರಟು ಭೂತಲವನ್ನು ಸೇರಿತು.

ಕೃತಯುಗದ ಕಾಲವು ಮುಗಿದಾಗ, ಬ್ರಹ್ಮನು ವೃಷಧರನಾದ ತ್ರೇತಾಯುಗವನ್ನು ಕರೆದು ಹೇಳಿದನು. “ನೀನು ಭೂತಲಕ್ಕೆ ಹೋಗಿ ನಿನ್ನ ಧರ್ಮವನ್ನಾಚರಿಸುತ್ತ, ೧೨,೯೬,೦೦೦ ವರ್ಷಗಳ ಕಾಲ ಇದ್ದು ಬಾ.” ತ್ರೇತಾಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಭೋಗದಿಂದಾಗಿ ಅದರ ಶರೀರವು ಪುಷ್ಟಿಯಾಗಿರುತ್ತದೆ. ಕೈಯಲ್ಲಿ ಯಜ್ಞ ಸಾಮಗ್ರಿಗಳನ್ನು ಧರಿಸಿರುವುದರಿಂದ ಆ ಯುಗದಲ್ಲಿ ದ್ವಿಜರೆಲ್ಲರೂ ಧರ್ಮಶಾಸ್ತ್ರವೇತ್ತರಾಗಿ, ಸದಾಕಾಲ ಯಾಗ ಯಜ್ಞಗಳಲ್ಲಿ ನಿರತರಾಗಿರುತ್ತಾರೆ. ಸದಾ ಕರ್ಮಮಾರ್ಗವನ್ನನುಸರಿಸುವವರು.

ಆ ನಂತರದಲ್ಲಿ ಬ್ರಹ್ಮ ಮಿಶ್ರರೂಪನಾದ ದ್ವಾಪರಯುಗವನ್ನು ಕರೆದನು. ದ್ವಾಪರ ಯುಗದ ಲಕ್ಷಣಗಳನ್ನು ಕೇಳು. ಖಡ್ಗ, ಖಟ್ವಾಂಗ, ಚಾಪ, ಬಾಣ ಶಸ್ತ್ರಗಳನ್ನು ಹಿಡಿದು, ಉಗ್ರ-ಶಾಂತಿ-ದಯೆ-ನಿಷ್ಠುರತೆಗಳಿಂದ ಕೂಡಿ, ಪುಣ್ಯ ಪಾಪಗಳೆರಡನ್ನೂ ಹೊಂದಿರುವುದು. ಬ್ರಹ್ಮ ದ್ವಾಪರಯುಗವನ್ನು ಕುರಿತು, “ನೀನು ಭೂಮಿಯಲ್ಲಿ ಸ್ವಲ್ಪ ಕಾಲವಿದ್ದು ಬಾ.” ಎಂದನು. ದ್ವಾಪರವು ೮,೬೪,೦೦೦ ವರ್ಷಗಳ ಕಾಲ ಭೂಮಿಯಲ್ಲಿತ್ತು.

ಅದಾದನಂತರ ಬ್ರಹ್ಮ ಕಲಿಯುಗವನ್ನು ಕರೆದನು. ಅಯ್ಯಾ ಬ್ರಾಹ್ಮಣ, ಕಲಿಯುಗದ ಲಕ್ಷಣಗಳನ್ನು ಕೇಳು. ಮಲಿನನಾದ ಆ ಕಲಿ, ಕಲಹ ಪ್ರಿಯ. ವಿಚಾರ ಹೀನ. ಅಧೋಮುಖಿ. ಅಶುದ್ಧ. ಖಲಪ್ರಿಯ. ಕ್ರೂರ. ವಿರಾಗರಹಿತ. ಕಲಹದ್ವೇಷಗಳಿಂದ ಕೂಡಿದವನು. ಹೆಜ್ಜೆಹೆಜ್ಜೆಗೂ ಓಲಾಡುತ್ತಾ, ತನ್ನ ಜನನಾಂಗವನ್ನು ಎಡಕೈಯಲ್ಲಿ ಗಟ್ಟಿಯಾಗಿ ಹಿಡಿದು, ಬಲಗೈಯಲ್ಲಿ ನಾಲಗೆಯನ್ನು ಹಿಡಿದು, ನೃತ್ಯಮಾಡುತ್ತಾ, ದೋಷಪೂರಿತವಾದ ಸ್ತುತಿಗಳನ್ನು ಹೇಳುತ್ತಾ, ಪಾಪಿಗಳಲ್ಲಿ ಒಂದಾಗಿ, ಆಗಾಗ ಅಟ್ಟಹಾಸ ಮಾಡುತ್ತಾ, ಅಳುತ್ತಾ, ಮಾತುಮಾತಿಗೂ ಕೋತಿಯಂತೆ ಚೇಷ್ಟೆಗಳನ್ನು ಮಾಡುತ್ತಾ, ಬ್ರಹ್ಮನೆದುರಿಗೆ ಬಂದು ನಿಂತು, “ಏನಾಜ್ಞೆ?” ಎಂದನು.

ಆ ಪಿಶಾಚರೂಪನನ್ನು ಕಂಡ ಬ್ರಹ್ಮ, ನಗುತ್ತಾ, “ಕಲಿ, ನಿನ್ನ ಕೈಗಳಲ್ಲಿ ಜಿಹ್ವಾ ಜನನಾಂಗಗಳನ್ನು ಹಿಡಿದಿದ್ದೀಯೇಕೆ?” ಎಂದು ಕೇಳಲು, ಕಲಿ, “ಈಜಿಹ್ವೆ ಜನನಾಂಗಗಳಿಂದ ನಾನು ಸರ್ವರನ್ನೂ ಜಯಿಸಬಲ್ಲೆ ಎಂಬುದು ನನ್ನ ಪ್ರತಿಜ್ಞೆ ಪ್ರಭು. ಇದೇ ನನ್ನ ಸ್ವಭಾವ. ಜಿಹ್ವಾ ಸುಖ-ಉಪಸ್ಥ ಸುಖಗಳಲ್ಲಿನ ಆಸಕ್ತಿಯಿಂದಲೇ ಎಲ್ಲರನ್ನೂ ಜಯಿಸಬಲ್ಲೆ. ಅದರಿಂದಲೇ ಜಿಹ್ವಾಲಿಂಗಗಳನ್ನು ಹಿಡಿದು ಈರೀತಿ ಓಡಾಡಲು ನನಗೇತರ ಭಯವೂ ಇಲ್ಲ. ಅದೇ ನನ್ನ ಸ್ವಭಾವ.” ಎಂದನು. ಬ್ರಹ್ಮ ಅವನಿಗೆ, “ಸ್ವಲ್ಪ ಕಾಲ ಭುವಿಗೆ ಹೋಗಿ ನಿನ್ನ ಸ್ವಭಾವವನ್ನು ಪ್ರಕಟಗೊಳಿಸಿ ಬಾ.” ಎಂದು ಆಜ್ಞೆ ಮಾಡಿದನು.

ಅದನ್ನು ಕೇಳಿದ ಕಲಿ, “ಬ್ರಹ್ಮದೇವ, ಭೂಮಿಗೆ ಹೋಗಲು ನನಗೇಕೆ ಹೇಳುತ್ತಿದ್ದೀಯೆ? ನಾನು ಎಂಥಹವನೆಂದು ಹೇಳುತ್ತೇನೆ ಕೇಳು. ನಾನು ನಿರ್ಲಜ್ಜನು. ನಿರಂಕುಶನು. ನನ್ನೆದುರಿಗೆ ಸದಾ ನಿದ್ರೆ, ಶೋಕ, ಕಲಹ ಮುಂತಾದುವು ತಾಂಡವವಾಡುತ್ತಿರುತ್ತವೆ. ಪರದ್ರವ್ಯಾಪಹಾರಿ, ಅನ್ಯಭಾರ್ಯಾಪಹಾರಿ, ನನ್ನ ಸೋದರರು. ಡಂಭ ಮಾತ್ಸರ್ಯಗಳನ್ನು ಬೆಳೆಸುವವನು ನನ್ನ ಪ್ರಾಣಸಖ. ಡಾಂಭಿಕರಾಗಿ ಬಕಧ್ಯಾನವನ್ನು ಮಾಡುವ ಯತಿಗಳು ನನ್ನ ಪ್ರಾಣ. ಮೋಸದಿಂದ ಸಹೋದರರಿಗೆ ದ್ರೋಹವೆಸಗಿ ಜೀವಿಸುವವನು ನನ್ನ ಆತ್ಮ. ಮಿಕ್ಕವರು ಯಾರೂ ನನ್ನ ಮಿತ್ರರಲ್ಲ. ಯಾವುದೇ ಪುಣ್ಯ ಕಾರ್ಯಗಳನ್ನೆಸಗುವವರೆಲ್ಲಾ ನನ್ನ ಶತ್ರುಗಳೇ!’ ಎಂದು ತನ್ನ ದುಷ್ಟ ಸ್ವಭಾವಗಳನ್ನೆಲ್ಲಾ ಪ್ರಕಟಗೊಳಿಸಿದನು.

ಅದಕ್ಕುತ್ತರವಾಗಿ ಬ್ರಹ್ಮನು, “ಕಲಿಪುರುಷ, ನೀನು ನನ್ನ ಆದೇಶವನ್ನು ಪಾಲಿಸಬೇಕು. ಕಲಿಯುಗದಲ್ಲಿ ಮನುಷ್ಯರಿಗೆ ಆಯುಸ್ಸು ೧೦೦ ವರ್ಷಗಳು ಮಾತ್ರವೇ. ಇತರ ಯುಗಗಳಲ್ಲಿ ಆಯುಸ್ಸು ದೀರ್ಘವಾಗಿರುವುದರಿಂದ ಮಾನವರು ತಪಾನುಷ್ಠಾನಗಳನ್ನು ಹೆಚ್ಚು ಕಷ್ಟಪಟ್ಟು ದೀರ್ಘಕಾಲ ಮಾಡಿದಲ್ಲದೆ ಅವರಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುವುದಿಲ್ಲ. ನಿನ್ನ ಯುಗದಲ್ಲಿ ಮಾನವರು ಅಲ್ಪಾಯುಷಿಗಳಾದದ್ದರಿಂದ ಭಕ್ತಿಯಿಂದ ಮಾಡಿದ ಪರಮೇಶ್ವರನ ಭಜನೆಯಿಂದಲೇ ಕೃತಕೃತ್ಯರಾಗುತ್ತಾರೆ. ಇತರ ಯುಗಗಳಲ್ಲಿ ಕಷ್ಟಪಟ್ಟರೇನೇ ಸಿದ್ಧಿಯಾಗುವಂತಹುದು ನಿನ್ನ ಯುಗದಲ್ಲಿ ಸುಲಭವಾಗಿ ಸಿದ್ಧಿಯಾಗುವುದು. ಬ್ರಹ್ಮಜ್ಞಾನಿಗಳು, ಪುಣ್ಯಾತ್ಮರು, ದೇವಸೇವಾನಿರತರು ಆದವರಿಗೆ ನೀನು ಕಷ್ಟಕಾರಕನಾಗಬೇಡ. ಅವರಿಗೆ ಸಹಾಯಕನಾಗಿರು.” ಎಂದು ಹೇಳಿದನು. ಬ್ರಹ್ಮನ ಮಾತುಗಳನ್ನು ಆಲಿಸಿ, ಅವನಿಗೆ ನಮಸ್ಕರಿಸಿ, ಕಲಿ ಮತ್ತೆಯೂ ಹೇಳಿದನು. “ಸ್ವಾಮಿ ನೀವು ಹೇಳಿದವರೆಲ್ಲರೂ ನನಗೆ ಶತ್ರುಗಳು. ಅಂತಹ ಶತ್ರುಗಳಿರುವ ಭೂಮಿಗೆ ನಾನು ಹೇಗೆ ಹೋಗಬಲ್ಲೆ? ಅವರ ವಿಷಯ ಕೇಳಿದರೇನೇ ನನಗೆ ಭಯದಿಂದ ನಡುಕ ಹುಟ್ಟುತ್ತದೆ. ಭೂಮಿಯಲ್ಲಿ, ಅದರಲ್ಲೂ ಭಾರತದೇಶದಲ್ಲಿ, ಪುಣ್ಯಾತ್ಮರೇ ಬಹಳವಾಗಿದ್ದಾರೆ. ಅವರು ನನ್ನನ್ನು ಕೊಂದುಹಾಕುತ್ತಾರೆ. ನಾನು ಅಂತಹ ಪ್ರದೇಶಕ್ಕೆ ಹೇಗೆ ತಾನೇ ಹೋಗಲಿ?” ಎಂದು ಕಳಕಳಿಯಿಂದ ಹೇಳಿದ.

ಅವನ ಮಾತನ್ನು ಕೇಳಿದ ಬ್ರಹ್ಮ ನಕ್ಕು, “ಕಲಿಪುರುಷ, ನೀನು ಕಾಲ ಸ್ವರೂಪನನ್ನು ಆಶ್ರಯಿಸಿ ಭೂತಲದಲ್ಲಿರು. ಆ ಕಾಲನೇ ತನ್ನ ಸ್ವಭಾವದಿಂದ ಜನರ ಧರ್ಮವಾಸನೆಗಳನ್ನು ಬೇಧಿಸುತ್ತಾನೆ. ಆಗ ಪುಣ್ಯಾತ್ಮರಿಗೂ ಮನಸ್ಸಿನಲ್ಲಿ ಮಹಾಪಾಪಗಳನ್ನು ಮಾಡಬೇಕೆಂಬ ಬುದ್ಧಿಯುಂಟಾಗುತ್ತದೆ.” ಎಂದು ಹೇಳಿದನು.

ಅದಕ್ಕೆ ಮತ್ತೆ ಕಲಿ, “ಬ್ರಹ್ಮನ್, ನನ್ನ ಶತ್ರುಗಳೇ ವಿಶೇಷವಾಗಿರುವ ಭೂಮಂಡಲದಲ್ಲಿ ಎಲ್ಲರೂ ಸ್ವಚ್ಚವಾದ ತೀರ್ಥಗಳಲ್ಲಿ ನಿವಾಸ ಮಾಡುತ್ತಾರೆ. ಶಿವೋಪಾಸಕರು, ವಿಷ್ಣುಧ್ಯಾನ ನಿಷ್ಠರು, ಧಾರ್ಮಿಕರು ನನಗೆ ಉಪದ್ರವ ಕೊಡುತ್ತಾರೆ. ಅವರಲ್ಲಿ ನನಗೆ ದಯೆ ಇರುವುದಿಲ್ಲ. ಗಂಗಾತೀರದಲ್ಲಿ ವಿಹರಿಸುವ ಶತ್ರುಗಳು ನನ್ನ ಕೋಪವನ್ನು ಬಲ್ಲರು. ವಾರಣಾಸಿಯಲ್ಲಿರುವ ಧರ್ಮತತ್ಪರರು, ಪುರಾಣಶ್ರವಣಾಸಕ್ತರು, ಆದ ಕೆಲವರು ತೀರ್ಥಾಟನೆಗಳನ್ನು ಮಾಡುತ್ತಾರೆ. ಕೆಲವರು ಧ್ಯಾನನಿಷ್ಠರಾಗಿ ಧ್ಯಾನದಲ್ಲಿ ನಿಮಗ್ನರಾಗಿರುತ್ತಾರೆ. ಅವರೆಲ್ಲರೂ ನನ್ನ ಶತ್ರುಗಳು. ಹೇ ಪ್ರಜಾಪತಿ, ಮನಸ್ಸಿನಲ್ಲಿ ಶಾಂತರಾಗಿರುವವರೂ ನನ್ನ ಶತ್ರುಗಳೇ! ಡಾಂಭಿಕರಲ್ಲದ ಪುಣ್ಯಶಾಲಿಗಳನ್ನು ಕಂಡರೆ ನನಗೆ ಹೆದರಿಕೆಯಾಗುತ್ತದೆ. ನಾಸಾಗ್ರದಲ್ಲಿ ದೃಷ್ಟಿಯನ್ನಿಟ್ಟು ಜಪಾನುಷ್ಠಾನಗಳಲ್ಲಿ ನಿರತರಾಗಿರುವವರೂ ನನಗೆ ಹಗೆಗಳೇ! ಅವರನ್ನು ನೋಡುತ್ತಿಂದಂತೆಯೆ ನನಗೆ ಪ್ರಾಣಹೋದಂತಾಗುತ್ತದೆ. ಹೆಂಡತಿ, ಮಕ್ಕಳು ಎಂಬ ಮಾಯಾಜಾಲದಲ್ಲಿ ಬಿದ್ದಿರುವವರು ನನಗೆ ಬಃಅಳ ಪ್ರಿಯರಾದವರು. ಅವರು ನನ್ನ ಇಷ್ಟರು. ಹರಿಹರರಲ್ಲಿ ಬೇಧಭಾವದಿಂದ ಶೃತಿ, ಸ್ಮೃತಿ ಪುರಾಣಾದಿಗಳನ್ನು ದೂಷಣೆ ಮಾಡುವವರು ನನಗೆ ಪರಮಾಪ್ತರು. ರಾಗದ್ವೇಷರಹಿತರಾದವರನ್ನು ಕಂಡರೆ ನನಗೆ ಭಯ.” ಎಂದು ಹೇಳಿದ್ದಕ್ಕೆ ಬ್ರಹ್ಮ ಮತ್ತೆ ಹೇಳಿದನು. “ಹೇ ಕಲಿ, ಭೂಮಿಯಲ್ಲಿ ನೀನು ತಪ್ಪದೇ ಪ್ರಕಾಶಿಸುತ್ತೀಯೆ. ಪ್ರಜೆಗಳೆಲ್ಲರೂ ನಿನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಕೆಲವರು ಮಾತ್ರವೇ ಪುಣ್ಯಾತ್ಮರಿರುತ್ತಾರೆ. ಅವರಿಗೆ ನೀನು ಯಾವ ರೀತಿಯ ಸಂಕಟವನ್ನೂ ಉಂಟುಮಾಡದೆ ಭೂಮಿಯಲ್ಲಿ ಸಂಚರಿಸಿಕೊಂಡಿರು.”

ಆ ಮಾತುಗಳನ್ನು ಕೇಳಿದ ಕಲಿ, “ಸ್ವಾಮಿ, ಸ್ವಭಾವಸಿದ್ಧವಾದ ದುಶ್ಚರಿತಗಳು ಹೇಗೆ ಬದಲಾಗುತ್ತವೆ? ಧರ್ಮದೊಡನೆ ನನ್ನ ಸಾಂಗತ್ಯ ಹೇಗೆ ಸಾಧ್ಯವಾಗುವುದು? ಹೇಳಿ.” ಎನ್ನಲು, ಬ್ರಹ್ಮ “ಕಲಿ. ಭೂಮಿಯಲ್ಲಿ ನೀನು ವಾಸಿಸಲು ಅನುಕೂಲವಾಗುವಂತಹ ಉಪಾಯವನ್ನು ಹೇಳುವನು ಕೇಳು. ಮಲಿನವಾದ ಕಾಲದ ಸಹಾಯದಿಂದ ಅಧರ್ಮದ ಜೊತೆಯಲ್ಲಿ ಭೂಮಿಯನ್ನು ಸೇರು. ಆ ನಂತರ ನಿನ್ನ ಮಾರ್ಗ ಸುಗಮವಾಗುವುದು. ನೀನು ನಿರ್ಭಯವಾಗಿ ಓಡಾಡಬಹುದು. ಅಲ್ಲಲ್ಲಿರುವಂತಹ ನಿರ್ಮಲಾಂತಃಕರಣರಾದವರು ನಿನಗೆ ವೈರಿಗಳಾಗೇ ಇರುತ್ತಾರೆ. ಪಾಪದೂಷಿತರಾದವರು ನಿನಗಿಷ್ಟದವರಾಗಿರುತ್ತಾರೆ. ಪಾಪಿಗಳ ನಡುವೆ ಒಬ್ಬನೇ ಧರ್ಮಾತ್ಮನಿದ್ದರೂ ನಿನ್ನನ್ನು ಜಯಿಸಬಲ್ಲನು. ಕ್ರಮಕ್ರಮಮವಾಗಿ ಭೂಮಂಡಲದ ಜನರೆಲ್ಲರೂ ನಿನ್ನ ವಶವರ್ತಿಗಳಾಗುತ್ತಾರೆ.” ಎಂದನು. ಬ್ರಹ್ಮ ಅಷ್ಟು ಹೇಳಿದರೂ ಕಲಿ ಮತ್ತೆ ಕೈಜೋಡಿಸಿ, ನಮಸ್ಕರಿಸಿ ಹೇಳಿದನು. “ಸ್ವಾಮಿ ನೀನು ಇಷ್ಟೆಲ್ಲಾ ಹೇಳಿದರೂ ನನಗೆ ಭೂಲೋಕಕ್ಕೆ ಹೋಗಬೇಕೆಂಬ ಬುದ್ಧಿ ಹುಟ್ಟುತ್ತಿಲ್ಲ.” ಎಂದನು.

“ಹೇ ನಾಮಧಾರಕ, ಕಲಿಗೆ ಉಂಟಾದ ಸಂದೇಹಗಳನ್ನೆಲ್ಲ ಪರಿಹರಿಸುವ ರೀತಿಯಲ್ಲಿ ಬ್ರಹ್ಮ ಹೇಳಿದ ಮಾತುಗಳನ್ನು ಕೇಳು. ಮನಸ್ಸಿನಲ್ಲಿ ಪರಿಶುದ್ಧರಾಗಿ, ಸುಬುದ್ಧಿಗಳಾಗಿ, ಲೋಭವಿಲ್ಲದವರಾಗಿ ಇರುವವರಾರನ್ನೂ ಕಲಿ ದೋಷಗಳು ಸೋಕಲಾರವು. ಅಬೇಧಬುದ್ಧಿಯಿಂದ ಶಿವ ಕೇಶವರನ್ನು ಅರ್ಚಿಸುವವರಿಗೆ, ಭಜಿಸುವವರಿಗೆ, ಗುರುಸೇವೆಯಲ್ಲಿ ನಿರತರಾದವರಿಗೆ, ಕಾಶಿ ಕ್ಷೇತ್ರದಲ್ಲಿ ನಿವಾಸಮಾಡುವವರಿಗೆ ಕಲಿ ದೋಷಪ್ರಭಾವಗಳು ಅಂಟಲಾರವು. ಲೋಕದಲ್ಲಿ ಬ್ರಾಹ್ಮಣರನ್ನು ಆರಾಧಿಸುವವರು, ಮಾತಾಪಿತೃ ಸೇವೆಯಲ್ಲಿ ನಿರತರಾದವರು, ಕಪಿಲಗೋವನ್ನು ಸೇವಿಸುವವರು ಮುಂತಾದವರಿಗೆ ಕಲಿದೋಷ ಸ್ಪರ್ಶವಾಗುವುದಿಲ್ಲ. ಶೈವರನ್ನು, ವೈಷ್ಣವರನ್ನು, ತುಳಸಿ ಪೂಜೆಮಾಡುವವರನ್ನು ನನ್ನ ಆಜ್ಞೆಯಂತೆ ಯಾವಾಗಲೂ ಪೀಡಿಸಬೇಡ. ಗುರುಸೇವಾ ನಿರತರನ್ನು, ವಿವೇಕಯುಕ್ತರಾಗಿ ವರ್ತಿಸುವವರನ್ನು, ಗುರುಭಕ್ತರನ್ನು ನೀನು ಯಾವುದೇ ಕಾರಣಕ್ಕಾಗಿಯೂ ಬಾಧಿಸಲೇಬಾರದು.” ಬ್ರಹ್ಮನ ಆ ಮಾತುಗಳನ್ನು ಕೇಳಿ ಕಲಿ, “ಭಗವನ್, ಗುರುಸ್ವರೂಪವನ್ನು ವಿಸ್ತರಿಸಿ ಹೇಳಿ ನನಗೆ ಅನುಗ್ರಹ ಮಾಡಿ.”ಎಂದನು.

ಕಲಿಯ ಮಾತುಗಳನ್ನು ಆಲಿಸಿದ ಬ್ರಹ್ಮ, ” ಹೇ ಕಲಿಪುರುಷ, ಉತ್ತಮವಾದ ಗುರುಮಾಹಾತ್ಮೆಯನ್ನು ಕುರಿತು ಹೇಳುವೆನು, ಕೇಳು. ಗ ಕಾರವು ಸಿದ್ಧಿ ಪ್ರದಾಯಕ. ರ ಕಾರವು ಪಾಪ ಪರಿಹಾರಕ. ಉ ಕಾರವು ಅವ್ಯಕ್ತ ವಿಷ್ಣು ಸ್ವರೂಪ. ಈ ಮೂರೂ ಸೇರಿದ ಸ್ವರೂಪವೇ ಗುರುವು. ಗ ಕಾರವು ಗಣೇಶನಿಗೆ ಚಿಹ್ನೆ. ರ ಕಾರವು ಅಗ್ನಿಗೆ ಚಿಹ್ನೆ. ಉ ಕಾರವು ವಿಷ್ಣುವಿಗೆ ಚಿಹ್ನೆ. ಹೀಗೆ ಗಣೇಶ ಅಗ್ನಿಯುಕ್ತನಾಗಿ, ವಿಷ್ಣುಸಮನ್ವಿತನಾದ, ವರ್ಣದ್ವಯಾತ್ಮಕವಾದ ಗುರುಮಂತ್ರವು ಚತುರ್ವರ್ಗಕ್ಕೂ ಫಲಪ್ರದವು. ಗುರುವೇ ತಾಯಿ ತಂದೆ ಪರಮೇಶ್ವರ. ಈಶ್ವರ ಕೋಪಿಸಿಕೊಂಡರೆ ಗುರುವು ರಕ್ಷಿಸುತ್ತಾನೆ. ಆದರೆ ಯಾವಾಗಲಾದರೂ ಗುರುವೇ ಶಿಷ್ಯನ ಮೇಲೆ ಕೋಪಿಸಿಕೊಂಡರೆ ಆ ಶಿಷ್ಯನನ್ನು ರಕ್ಷಿಸಲು ಶಂಕರನಿಗೂ ಸಾಮರ್ಥ್ಯವಿಲ್ಲ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅವನೇ ಪರಬ್ರಹ್ಮವೂ ಕೂಡಾ. ಅದರಿಂದ ಸದಾ ಗುರುವನ್ನೇ ಆಶ್ರಯಿಸಬೇಕು. ಶ್ರೀ ಹರಿಯು ಪ್ರಸನ್ನನಾದರೆ ವೈಷ್ಣವರು ಅವ್ಯಯವಾದ ಗುರುಭಕ್ತಿಯನ್ನೇ ಬೇಡುತ್ತಾರೆ. ಗುರುವು ಪ್ರಸನ್ನನಾದರೆ ಜಗದೀಶ್ವರನಾದ ಜನಾರ್ದನನು ಸಂತೋಷಗೊಂಡು ಸರ್ವಾರ್ಥ ಸಿದ್ಧಿಯಾಗಲೆಂದು ವರ ಪ್ರಸಾದಿಸುತ್ತಾನೆ. ಈಶ್ವರನು ಪ್ರಸನ್ನನಾದರೆ ಗುರುವು ಸಂತಸಪಡದೇ ಇರಬಹುದು. ಆದರೆ ಗುರುವು ಪ್ರಸನ್ನನಾದ ಧೀಮಂತನಿಗೆ ಈಶ್ವರನು ಸದಾ ಸನ್ನಿಹಿತನಾಗಿರುತ್ತಾನೆ. ಆದ್ದರಿಂದ ಗುರುವನ್ನು ಶ್ರದ್ಧಾ ಭಕ್ತಿಗಳಿಂದ ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಸೇವಿಸಬೇಕು. ಅಂತಹವನು ಜ್ಯೋತಿಸ್ವರೂಪನಾಗಿ ತೀರ್ಥಯಾತ್ರೆ, ವ್ರತ, ಯೋಗ, ತಪಃಫಲಗಳನ್ನು ಹೊಂದಬಲ್ಲನು. ಗುರುಮಹಿಮೆ ಅನಂತವು. ಗುರುವು ಶಿಷ್ಯನಿಗೆ ವರ್ಣಾಶ್ರಮಧರ್ಮಗಳನ್ನೂ. ಆಚಾರಗಳನ್ನೂ, ಸದ್ವಿವೇಕವನ್ನು ಪಡೆಯುವ ಮಾರ್ಗವನ್ನೂ, ಭಕ್ತಿ-ಮುಕ್ತಿ-ವಿರಕ್ತಿ ಮರ್ಗಗಳನ್ನೂ ತೋರಿಸಿಕೊಡಬಲ್ಲನು.

ಬ್ರಹ್ಮನ ಆ ಮಾತುಗಳನ್ನು ಕೇಳಿದ ಕಲಿ, ಪ್ರಣೀತನಾಗಿ ಬ್ರಹ್ಮನನ್ನು ಪ್ರಶ್ನಿಸಿದನು. “ಸರ್ವದೇವನಾದ ಗುರುಜನ್ಮ ಹೇಗೆ ಪ್ರಾಪ್ತಿಯಾಗುತ್ತದೆ?” ಅದಕ್ಕೆ ಬ್ರಹ್ಮ, “ಸವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗುರುವಿನ ಅನುಗ್ರಹವಿಲ್ಲದೆ ಮಾನವನು ಯಾವುದೇ ವಿಷಯವನ್ನೂ ಗ್ರಹಣಮಾಡಲಾರನು. ಯಾರಿಗೇ ಆಗಲಿ ಗುರುವಿನ ಅನುಗ್ರಹವಿಲ್ಲದೆ ’ಶ್ರವಣ’ ಸಾಧ್ಯವಾಗಲಾರದು. ಸಚ್ಛಾಸ್ತ್ರ ’ಶ್ರವಣ’ವಿಲ್ಲದೆ ಭವ ಭಯವು ಹೇಗೆ ಹೋಗಬಲ್ಲದು? ಸ್ವಬುದ್ಧಿಯಿಂದ ಯತಾರ್ಥತತ್ತ್ವವು ನಿಲುಕಲಾರದು. ’ಶ್ರವಣ’ಸಿದ್ಧಿಸಿದರೆ ಶಾಸ್ತ್ರಗಳು ಸುಲಭವಾಗುತ್ತವೆ. ಶಾಸ್ತ್ರಾರ್ಥಗಳು ಅವಗತವಾದರೆ ಸಂಸಾರ ತಾರಣವು ಸುಲಭವಾಗುತ್ತದೆ. ಗುರುವೇ ಶಾಸ್ತ್ರಾರ್ಥಗಳನ್ನು ತೋರಿಸಿಕೊಟ್ಟು ಜ್ಯೋತಿಸ್ವರೂಪವನ್ನು ಪ್ರಕಾಶಗೊಳಿಸುತ್ತಾನೆ. ಪೂರ್ವದಲ್ಲಿ ಗುರುಸೇವೆಯಿಂದಲೇ ಸರ್ವ ಸಿದ್ಧಿಗಳೂ ಕೈಗೂಡುತ್ತಿದ್ದವು. ಗುರು ಶಿಷ್ಯರ ಕಥೆಯೊಂದನ್ನು ಹೇಳುತ್ತೇನೆ, ಕೇಳು.

ಪೂರ್ವದಲ್ಲಿ ಗೋದಾವರಿ ತೀರದಲ್ಲಿ ಆಂಗೀರಸ ಮುನಿಯ ಆಶ್ರಮವಿತ್ತು.ಅದು, ಅದು ನಾನಾ ವೃಕ್ಷಲತಾದಿಗಳಿಂದಲೂ, ಮೃಗಪಕ್ಷಿಗಳಿಂದಲೂ ಕೂಡಿ ಅರಣ್ಯದಿಂದ ಸುತ್ತುವರೆಯಲ್ಪಟ್ಟು, ಮನೋಹರವಾಗಿತ್ತು. ಅಲ್ಲಿ ಬ್ರಹ್ಮರ್ಷಿಗಳೂ, ಸುವ್ರತರೂ ಆದ ಅನೇಕ ತಾಪಸಿಗಳಿದ್ದರು. ಅವರಲ್ಲಿ ಧರ್ಮವೇತ್ತನಾದ ಪೈಲನ ಪುತ್ರ ವೇದಧರ್ಮನೆಂಬುವವನೊಬ್ಬನಿದ್ದನು. ಅವನ ಶಿಷ್ಯರು ಸ್ಮೃತಿ, ಶೃತಿ ಪುರಾಣಾದಿಗಳನ್ನು ಪಾಠಮಾಡುತ್ತಿದ್ದರು. ಗುರುತತ್ಪರರಾಗಿದ್ದ ಅವರಲ್ಲಿ ದೀಪಕನೆಂಬುವ ಒಬ್ಬ ಶಿಷ್ಯನಿದ್ದನು. ಅವನು ವೇದಧರ್ಮನ ಮುಖ್ಯ ಶಿಷ್ಯನು.

ವೇದಧರ್ಮನು ಒಂದುದಿನ ತನ್ನ ಶಿಷ್ಯರನ್ನು ಪರೀಕ್ಷಿಸಲು ಎಲ್ಲರನ್ನೂ ಕರೆದು, “ನಿಮ್ಮೆಲ್ಲರನ್ನೂ ಪ್ರಶ್ನಿಸುತ್ತಿದ್ದೇನೆ. ನನ್ನಲ್ಲಿ ಪ್ರೀತಿಯಿರುವವವರೆಲ್ಲರೂ ನನ್ನ ಮಾತುಗಳನ್ನು ಸಾವಧಾನ ಚಿತ್ತರಾಗಿ ಆಲಿಸಿ.”

ಆ ಮಾತುಗಳನ್ನು ಕೇಳಿದ ತಕ್ಷಣವೇ ಶಿಷ್ಯರೆಲ್ಲರೂ “ಗುರುವೇ, ನೀವೇ ನಮ್ಮನ್ನು ಉದ್ಧರಿಸುವವರು. ನಿಮ್ಮ ಆಜ್ಞೆ ಏನಿದ್ದರೂ ಅದನ್ನು ಶಿರಸಾವಹಿಸಿ ನಡೆಸುತ್ತೇವೆ. ಅದರಲ್ಲಿ ಸಂದೇಹ ಬೇಡ. ಗುರುವಾಕ್ಯವನ್ನು ಮೀರುವವನು ರೌರವ ನರಕಕ್ಕೆ ಹೋಗುತ್ತಾನೆ. ಗುರುವಾಕ್ಯವನ್ನು ನಡೆಸದವನು ಈ ಮಾಯಾಪ್ರಪಂಚದಲ್ಲಿ ಮುಳುಗಿ ಹೋಗುತ್ತಾನೆ. ಅಂತಹ ಅಧಮನು ದುರ್ಗತಿಯ ಪಾಲಾಗುತ್ತಾನೆ. ಭಕ್ತರಿಗೆ ಗುರುವೇ ತಾರಕನು ಎಂದು ಶೃತಿಯು ಹೇಳುತ್ತದೆ.” ಎಂದು ಎಲ್ಲರೂ ಏಕಗ್ರೀವರಾಗಿ ನುಡಿದರು. ಅವರ ಮಾತನ್ನು ಕೇಳಿದ ವೇದಧರ್ಮನು ಬಹು ಸಂತೋಷಗೊಂಡವನಾಗಿ ದೀಪಕನೇ ಮುಂತಾದ ಶಿಷ್ಯರಿಗೆ ಹೇಳಿದನು.

“ಶಿಷ್ಯರೇ, ನನ್ನ ಮಾತುಗಳನ್ನು ಚಿತ್ತಕೊಟ್ಟು ಆಲಿಸಿ. ನನಗೆ ಪೂರ್ವಾರ್ಜಿತವಾದ ಪಾಪವಿದೆ, ಅದು ಸಾವಿರ ವರ್ಷಗಳಿಂದಲೂ ಕೂಡಿಕೊಂಡು ಬಂದಿದೆ. ನನ್ನ ತಪಾನುಷ್ಠಾನಗಳಿಂದ ಅದನ್ನು ಬಹಳಷ್ಟು ಕಳೆದುಕೊಂಡಿದ್ದೇನೆ. ಆದರೆ ಮಿಕ್ಕಿರುವ ಪ್ರಾರಬ್ಧವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಅದು ನಾಶವಾಗುವುದಿಲ್ಲ. ತಪಸ್ಸಿನಿಂದ ಅದನ್ನು ನಾಶಗೊಳಿಸಿದರೆ ಅದು ನನ್ನ ಮೋಕ್ಷಹಾದಿಗೆ ಅಡ್ಡವಾಗುತ್ತದೆ. ಆ ಘೋರಪಾಪವನ್ನು ಇನ್ನು ಉಪೇಕ್ಷಿಸಬಾರದು ಎಂದು ನನಗೆ ತೋರುತ್ತಿದೆ. ನಾನು ಕಾಶಿಕ್ಷೇತ್ರಕ್ಕೆ ಹೋಗಿ ಅಲ್ಲಿ ನನ್ನ ಈ ದೇಹದಿಂದ ಅದನ್ನು ಅನುಭವಿಸಿ ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಕಾಶಿಕ್ಷೇತ್ರವು ಸರ್ವ ಪಾಪಹಾರಿಯೆಂದು ಪ್ರಸಿದ್ಧವಾಗಿದೆ. ನೀವು ಅಲ್ಲಿಗೆ ನನ್ನನ್ನು ಶೀಘ್ರವಾಗಿ ಕರೆದುಕೊಂಡು ಹೋಗಿ ಅಲ್ಲಿ ನನ್ನ ರಕ್ಷಣೆ ಮಾಡಬೇಕು. ಹಾಗೆ ನನ್ನ ರಕ್ಷಣೆ ಮಾಡುವ ಸಮರ್ಥನು ನಿಮ್ಮಲ್ಲಿ ಯಾರಿದ್ದಾನೆ? ಬಹು ದುಃಖವನ್ನುಂಟುಮಾಡುವ ನನ್ನ ಈ ಮಾತುಗಳನ್ನು ಅಂಗೀಕರಿಸುವವನು ಯಾರು?”

ಅವನ ಮಾತುಗಳನ್ನು ಕೇಳಿದ, ಗುರುಸಮ್ಮತನೂ, ಶಿಷ್ಯೋತ್ತಮನೂ, ಗುರುಸೇವಾನಿರತನೂ ಆದ ದೀಪಕನು, ಗುರುವಿಗೆ ಪ್ರಣಾಮ ಮಾಡಿ, “ಗುರುವೆ, ಸ್ವಯಂಕೃತಪಾಪಾವಶೇಷವನ್ನು ಉಳಿಸಿಕೊಳ್ಳಬಾರದು. ದೇಹ ನಾಶಕ್ಕೆ ಕಾರಣವಾಗುವ ಅಂತಹ ಪಾಪಕ್ಕೆ ತ್ವರೆಯಾಗಿ ಪ್ರತಿಕ್ರಿಯೆಮಾಡಬೇಕು.” ಎಂದು ಹೇಳಿದನು.

ಅದಕ್ಕೆ ವೇದಧರ್ಮನು, “ಶಿಷ್ಯ, ನೀನು ಹೇಳುವುದು ನಿಜ. ಈ ದೇಹವು ಇನ್ನೂ ಧೃಢವಾಗಿರುವಾಗಲೇ ಪಾಪಕ್ಷಯವನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಮುಂದೆ ವಿಷಸಮಾನವಾಗಿ ಬಹಳ ಬಾಧಿಸುತ್ತದೆ. ತೀರ್ಥಸೇವನೆ, ಕೃಚ್ಛಾದಿಗಳಂತಹ ಪ್ರಾಯಶ್ಚಿತ್ತಕರ್ಮಗಳನ್ನು ಮಾಡಿಯೋ, ಇಲ್ಲವೇ ರೋಗಗಳನ್ನನುಭವಿಸಿಯೋ ಪಾಪನಾಶನ ಮಾಡದಿದ್ದರೆ ಇನ್ನಾವ ರೀತಿಯಲ್ಲಿಯೂ ಅದು ನಾಶವಾಗುವುದಿಲ್ಲ. ತಾನು ಮಾಡಿದ ಪಾಪವನ್ನು ತಾನೇ ಅನುಭವಿಸಿ ತೀರಿಸಬೇಕು. ದೇವರಾಗಲೀ, ಋಷಿಯಾಗಲೀ, ಜ್ಞಾನಿಯಾಗಲೀ ಪಾಪಾನುಭವವಾಗದೆ ಪಾಪತ್ಯಾಗವಾಗುವುದಿಲ್ಲ.” ಎಂದು ಹೇಳಿದನು. ಅದಕೆ ದೀಪಕನು, “ನೀವು ಆಜ್ಞೆ ನೀಡಿ. ನನ್ನ ಶಕ್ತಿಯಿದ್ದಷ್ಟು ನಾನು ನಿಮ್ಮ ಸೇವೆ ಮಾಡುತ್ತೇನೆ. ನೀವು ಹೇಳಿದಹಾಗೆ ಪಾಪವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಪಾಪಕ್ಷಾಳನವಾಗುವುದಿಲ್ಲ ಎಂಬುದು ಸತ್ಯ.” ಎಂದನು. ಅದಕ್ಕೆ ವೇದಧರ್ಮನು, “ನನ್ನ ಪಾಪಫಲವಾಗಿ ನಾನು ಕುಷ್ಠುರೋಗಿಯಾಗಿ, ಕುಂಟಕುರುಡನಾಗಿ ಇಪ್ಪತ್ತೊಂದು ವರ್ಷಗಳು ಕಳೆಯಬೇಕು. ಅಂತಹ ನನ್ನನ್ನು ಆ ಸಮಯದಲ್ಲಿ ಕಾಪಾಡುವ ಶಕ್ತಿಯಿದ್ದರೆ ಹೇಳು.” ಎನ್ನಲು, ದೀಪಕನು “ನಿಮ್ಮ ಪಾಪಗಳನ್ನು ನಾನೇ ಅನುಭವಿಸಿ ತೀರಿಸುತ್ತೇನೆ. ನನಗೆ ಅನುಜ್ಞೆ ಕೊಡಿ.” ಎಂದನು. ಆ ಮಾತನ್ನು ಕೇಳಿ ಸಂತುಷ್ಟನಾದ ವೇದಧರ್ಮನು “ಶಿಷ್ಯ, ನನ್ನ ಪಾಪಗಳು ಹೇಗಿವೆಯೆಂದರೆ ಅದನ್ನು ನಾನೇ ಅನುಭವಿಸಿ ತೀರಿಸಬೇಕು. ಇತರ ಯಾರಿಂದಲೂ ಆ ಪಾಪವು ಕ್ಷಯವಾಗುವುದಿಲ್ಲ. ಆದ್ದರಿಂದ ಆ ಪಾಪವನ್ನು ನನ್ನ ದೇಹದಿಂದಲೇ ಅನುಭವಿಸುತ್ತೇನೆ. ನಿನಗಿಷ್ಟವಿದ್ದರೆ ಆ ಇಪ್ಪತ್ತೊಂದು ವರ್ಷಗಳು ನನ್ನೊಡನೆ ಇದ್ದು ನನ್ನ ರಕ್ಷಣೆ ಮಾಡು. ನಿನಗೆ ಆ ಶಕ್ತಿಯಿದ್ದರೆ ನನ್ನನ್ನು ಕಾಶಿಕ್ಷೇತ್ರಕ್ಕೆ ಸೇರಿಸಿ ಕಾಪಾಡು. ನಿನ್ನ ಉಪಕಾರದಿಂದ ನಾನು ಕಾಶಿಕ್ಷೇತ್ರದಲ್ಲಿ ನಾನು ನನ್ನ ಪಾಪವನ್ನನುಭವಿಸಿ ಅದನ್ನು ಕಳೆದುಕೊಂಡು ಪಾಪರಹಿತನಾಗಿ, ಅವ್ಯಯವಾದ ಶಾಶ್ವತಪದವನ್ನು ಪಡೆಯುತ್ತೇನೆ.” ಎಂದನು. ಅದಕ್ಕೆ “ನೀವು ವಿಶ್ವನಾಥ ಸಮಾನರು. ನಿಮ್ಮನ್ನು ಕಾಶಿಗೆ ಕರೆದುಕೊಂಡುಹೋಗಿ ನಿಮ್ಮ ಸೇವೆಮಾಡುತ್ತೇನೆ.” ಎಂದು ಧೃಢವಾಗಿ ಹೇಳಿದ ದೀಪಕನು ಗುರುವನ್ನು ಕಾಶಿಗೆ ಕರೆದುಕೊಂಡುಹೋಗಿ ಅಲ್ಲಿ ಅವರ ನಿವಾಸಕ್ಕೆ ಏರ್ಪಾಡುಮಾಡಿದನು.

ದೀಪಕನು ಮಾಡಿದ ಏರ್ಪಾಡುಗಳಿಂದ ಸಂತುಷ್ಟನಾದ ವೇದಧರ್ಮನು ಮಣಿಕರ್ಣಿಕೆಗೆ ನಮಸ್ಕರಿಸಿ, ಗಂಗೆಯಲ್ಲಿ ಮಿಂದು, ವಿಶ್ವನಾಥನನ್ನು ಪೂಜಿಸಿ, ತನ್ನ ಪಾಪವನ್ನನುಭವಿಸಲು ಸಿದ್ಧನಾದನು. ಕುಷ್ಠುವ್ಯಾಧಿಪೀಡಿತನಾಗಿ, ನೇತ್ರಹೀನನಾಗಿ, ಬಹುಕಷ್ಟವನ್ನನುಭವಿಸುತ್ತಿದ್ದ ವೇದಧರ್ಮನ ಸೇವೆಯಲ್ಲಿ ದೀಪಕನು ನಿರತನಾದನು. ದೇಹದಲ್ಲೆಲ್ಲಾ ಕುಷ್ಠುರೋಗ ವ್ಯಾಪಿಸಿ ವೇದಧರ್ಮನ ದೇಹವು ದುರ್ಗಂಧಮಯವಾಯಿತು. ಕೀವು ರಕ್ತಗಳು ಸೋರಲಾರಂಭವಾಯಿತು. ಕ್ರಿಮಿಗಳೂ ಕಾಣಿಸಿಕೊಂಡವು. ಇಂತಹ ಸ್ಥಿತಿಗೆ ಸೇರಿದ ಅವನಿಗೆ ಸ್ಮೃತಿಭ್ರಮಣೆಯೂ ಉಂಟಾಯಿತು. ಸೇವಾ ಭಾವನೆಯಿಂದ ದೀಪಕ ಭಿಕ್ಷೆಮಾಡಿ ಗುರುವಿಗೆ ಅನ್ನವೇ ಮುಂತಾದ ಆಹಾರಪದಾರ್ಥಗಳನ್ನು ತಂದಿಡುತ್ತಿದ್ದನು. ಗುರುವನ್ನು ವಿಶ್ವನಾಥನರೂಪದಲ್ಲಿ ಕಾಣುತ್ತಾ ಅವನನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ರೋಗಪೀಡಿತರಾದವರು, ಅದಕ್ಕೆ ಮುಂಚೆ ಸಾಧುಸ್ವಭಾವವುಳ್ಳವರಾಗಿದ್ದರೂ, ರೋಗಿಷ್ಠರಾದಮೇಲೆ ಅವರು ನಾಚಿಕೆ, ಮಾನ, ಮರ್ಯಾದೆಗಳನ್ನು ತೊರೆದು ತಮ್ಮ ಸ್ವಭಾವಕ್ಕೆ ವಿರುದ್ಧ ರೀತಿಯಲ್ಲಿ ವರ್ತಿಸುತ್ತಾರೆ. ಕ್ರೂರರಾಗಿ ವರ್ತಿಸುವುದೂ ಉಂಟು. ಅಂತೆಯೇ ವೇದಧರ್ಮನೂ ಸ್ವಭಾವತಃ ಶಾಂತರೂಪನೇ ಆಗಿದ್ದರೂ ರೋಗಗ್ರಸ್ತನಾದಮೇಲೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದನು. ದೀಪಕನು ಭಿಕ್ಷೆಮಾಡಿ ತಂದ ಆಹಾರವನ್ನು ಶ್ರದ್ಧಾಭಕ್ತಿಗಳಿಂದ ಅರ್ಪಿಸಿದರೆ, ಅದನ್ನು ತಿನ್ನದೆ ಇಷ್ಟು ಕಡಮೆ ತಂದಿದ್ದೀಯೆ ಎಂದು ಎಸೆದು, ಕೋಪಗೊಳ್ಳುವನು. ಮರುದಿನ ಹೆಚ್ಚಾಗಿ ತಂದರೆ ಸ್ವಲ್ಪ ತಿಂದು ರುಚಿಯಾಗಿಲ್ಲವೆಂದು ಬಿಸುಟು, ರುಚಿಕರವಾದ ಪದಾರ್ಥಗಳನ್ನು ತರುವಂತೆ ಕಾಡುವನು. ವಿಧವಿಧವಾದ ಶಾಕಾಹಾರಗಳನ್ನು ತರುವಂತೆ ಪೀಡಿಸುವನು. ಗುರುವಿನ ಇಷ್ಟದಂತೆ ಅಹಾರವನ್ನು ತಂದರೆ ಅದನ್ನು ಮುಟ್ಟದೆ, ಶಿಷ್ಯನನ್ನು ಹೊಡೆದು, ದುರ್ಭರ ಮಾತುಗಳನ್ನಾಡಿ ಮನ ನೋಯುವಂತೆ ಮಾಡುವನು.

ಒಂದೊಂದುಸಲ ಗುರುವು ಸಂತೋಷದಲ್ಲಿರುವಂತೆ ಕಾಣಿಸಿಕೊಂಡು, “ದೀಪಕ, ನೀನು ನನ್ನ ಶಿಷ್ಯಶಿಖಾಮಣಿ. ಜ್ಞಾನರಾಶಿ. ನನಗೋಸ್ಕರವಾಗಿ ಇಷ್ಟೊಂದು ದುಃಖವನ್ನನುಭವಿಸುತ್ತಿದ್ದೀಯೆ.” ಎಂದು ಪ್ರಶಂಸೆ ಮಾಡಿ, ಮರುಕ್ಷಣವೇ “ನೀನು ನನಗೆ ಬಹಳ ನೋವುಂಟುಮಾಡುತ್ತಿದ್ದೀಯೆ. ದುರ್ವಾಸನೆ ಹೋಗುವಂತೆ ನನ್ನನ್ನು ತೊಳೆಯುತ್ತಿಲ್ಲ. ನೊಣಗಳು ಮುಸುರುತ್ತಿದ್ದರೆ, ಅವನ್ನು ನಿವಾರಿಸುತ್ತಲೂ ಇಲ್ಲ. ನೀನು ಈ ಕ್ಷಣವೇ ಮನೆಬಿಟ್ಟು ಹೊರಟು ಹೋಗು.” ಎಂದು ಕೋಪಗೊಳ್ಳುವನು. ನೊಣಗಳನ್ನು ನಿವಾರಿಸಲು ಮುಂದಾದರೆ ಅನ್ನವನ್ನು ತಂದಿಡಲಿಲ್ಲ ಎಂದು ಗದ್ದರಿಸುವನು. ಈ ರೀತಿಯಲ್ಲಿ, ಪಾಪಸಂಭೂತವಾದ ರೋಗಪೀಡಿತನಾದ ಗುರುವು ತನ್ನ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದನು. ಪಾಪಗತಿ ಹೀಗೆಯೇ ಇರುವುದು. ಅಧಿಕಪಾಪವಿದ್ದಲ್ಲಿ ದೈನ್ಯ, ಕೋಪ, ದುಷ್ಟತನಗಳುತುಂಬಿರುತ್ತವೆ. ಪಾಪದಲ್ಲಿ ನರಳುವವನಿಗೆ ಶುಭಾಶುಭಗಳ ವಿವೇಚನೆಯಿರುವುದಿಲ್ಲ. ಕೆಲವುಸಲ ದುಃಖಿಯಾಗಿ ದೈನ್ಯದಿಂದ ವರ್ತಿಸುವನು. ಮತ್ತೆ ಕೆಲವುಸಲ ಕೋಪದಿಂದ ದುರ್ಭರ ಮಾತುಗಳನ್ನಾಡುವನು. ಹಾಗೆ ಉನ್ಮತ್ತನಂತೆ ನಡೆಯುವನು ಎನ್ನುವುದರಲ್ಲಿ ಸಂಶಯವಿಲ್ಲ.

ಕುಷ್ಠುರೋಗವು ೧೮ ಬಗೆಗಳಲ್ಲಿರುವುದು. ಇವೆಲ್ಲವೂ ಬಾಧಾಕರವೇ ಆದರೂ ಅದರಲ್ಲಿ ’ಗಳತ್ಕುಷ್ಠು’ರೋಗವು ಎಲ್ಲದಕ್ಕಿಂತ ಬಹಳ ಹೆಚ್ಚು ಬಾಧೆಯನ್ನು ಕೊಡುವಂತಹುದು. ಹೆಚ್ಚು ದುಸ್ಸಹನವಾದದ್ದು. ವೇದಧರ್ಮನಿಗೆ ಅಂತಹ ಗಳತ್ಕುಷ್ಠು ರೋಗವು ಬಂದಿತ್ತು. ದೀಪಕನು ಆ ರೋಗದಿಂದುಂಟಾದ ಲೋಪದೋಷಗಳನ್ನು ಲೆಕ್ಕಿಸದೆ ಗುರುವು ತನ್ನನ್ನು ಕೋಪಗೊಂಡು ಬೈದರೂ, ಹೊಡೆದರೂ, ಅಪ್ಪಿತಪ್ಪಿ ಯವಾಗಲಾದರೊಮ್ಮೆ ಒಂದು ಒಳ್ಳೆಯ ಮಾತನ್ನಾಡಿದರೂ, ಎಲ್ಲವನ್ನೂ ಮರೆತು ಗುರುವೇ ಈಶ್ವರನೆಂಬ ಒಂದೇ ದೃಢನಂಬಿಕೆಯಿಂದ ಗುರುವಿನ ಸೇವೆಯಲ್ಲಿ ನಿರತನಾಗಿದ್ದನು. ಅವನಿಗೆ ಶಿವ ಕೇಶವರು ಇಬ್ಬರೂ ಗುರುವಿನಲ್ಲೇ ಇದ್ದಾರೆ ಎಂಬ ನಿಶ್ಚಿತವಾದ ಮನಸ್ಸಿತ್ತು. ಕಾಶಿಕ್ಷೇತ್ರದಲ್ಲಿನ ತೀರ್ಥಗಳನ್ನು ದರ್ಶಿಸಲಿಲ್ಲ. ಗುರುಸೇವೆಯಲ್ಲಿ ತಲ್ಲೀನನಾಗಿ ವಿಶ್ವೇಶ್ವರನ ದರ್ಶನವನ್ನೂ ಮಾಡಲಿಲ್ಲ. ತನ್ನ ದೇಹ ರಕ್ಷಣೆ ಪೋಷಣೆಯ ಕಡೆಗೂ ಗಮನ ಕೊಡದೆ ಗುರುಸೇವೆಯಲ್ಲಿ ಮುಳುಗಿಹೋಗಿದ್ದನು. ಗುರುವೇ ತ್ರಿಮೂರ್ತಿಸ್ವರೂಪನೆಂಬ ಧೃಢಬಾವನೆಯಿಂದ , ಅನ್ಯರಲ್ಲಿ ಬೆರೆಯದೆ, ಗುರುವಿನ ನಿಷ್ಠೂರವಾದ ಮಾತುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾ, ಗುರುವಿನ ಮನಸ್ಸಿಗೆ ಹಿತವಾಗುವ ಹಾಗೆ ನಡೆದುಕೊಳ್ಳುತ್ತಾ ಗುರುಸೇವೆಯಲ್ಲಿ ತಲ್ಲೀನನಾಗಿ ಹೋಗಿದ್ದನು.

ಅಂತಹ ಗುರುಸೇವೆಯಲ್ಲಿ ಮುಳುಗಿಹೋಗಿದ್ದ ದೀಪಕನಲ್ಲಿ ಪ್ರಸನ್ನನಾದ ವಿಶ್ವೇಶ್ವರನು ಅವನಿಗೆ ಪ್ರತ್ಯಕ್ಷನಾಗಿ, “ಮಗು, ದೀಪಕ, ನಿನ್ನ ಗುರುಸೇವೆಯಿಂದ ನಾನು ಬಹು ಸಂತುಷ್ಟನಾಗಿದ್ದೇನೆ. ನಿನಗೆ ಬೇಕಾದ ವರ ಕೇಳಿಕೋ. ಅದನ್ನು ನಾನು ನಿನಗೆ ಈಗಲೇ ಕೊಡುತ್ತೇನೆ. ನೀನು ಸದ್ಭಕ್ತ. ಮಹಾಜ್ಞಾನಿ. ದೀಪಕನಷ್ಟೇ ಅಲ್ಲ. ಕುಲದೀಪಕನೂ ಅಹುದು. ನಿನ್ನಲ್ಲಿ ಪ್ರಸನ್ನನಾಗಿದ್ದೇನೆ.” ಎಂದನು. ಅದಕ್ಕೆ ದೀಪಕ “ವಿಶ್ವೇಶ್ವರ, ಪರಮೇಶ, ಮೃತ್ಯುಂಜಯ, ಗುರುವಿನ ಅನುಮತಿಯಿಲ್ಲದೆ ನಾನು ಯಾವ ವರವನ್ನೂ ಕೇಳಲಾರೆ.” ಎಂದು ಹೇಳಿ ಗುರುವಿನ ಬಳಿಗೆ ಹೋಗಿ, ವಿನಮ್ರನಾಗಿ ಗುರುವಿನಲ್ಲಿ, “ಗುರುದೇವ, ವಿಶ್ವನಾಥನು ನನ್ನಲ್ಲಿ ಪ್ರಸನ್ನನಾಗಿ ನನಗೆ ವರ ಕೊಡಲು ಬಂದಿದ್ದಾನೆ. ನಿಮ್ಮ ಅನುಜ್ಞೆಯಾದರೆ ನಿಮ್ಮ ರೋಗವು ಸಂಪೂರ್ಣ ಗುಣವಾಗಲೆಂದು ಅವನಲ್ಲಿ ವರ ಬೇಡುತ್ತೇನೆ. ಅದರಿಂದ ನಿಮಗೆ ರೋಗ ಶಾಂತಿಯಾಗುವುದು.” ಎಂದು ಬಿನ್ನವಿಸಿಕೊಂಡನು. ಅದನ್ನು ಕೇಳಿದ ಗುರುವು ಕೋಪಾವಿಷ್ಟನಾಗಿ, “ದೀಪಕ, ನನ್ನ ಸೇವೆಮಾಡಿ ನೀನು ಅಲಸಿಹೋಗಿರುವಂತೆ ಕಾಣುತ್ತದೆ. ನನ್ನ ವ್ಯಾಧಿನಿವಾರಣೆಗಾಗಿ ನೀನು ವಿಶ್ವೇಶ್ವರನಲ್ಲಿ ವರ ಬೇಡಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಅನುಭವಿಸದೆ ಈ ರೋಗ ನಿವಾರಣೆಯಾಗುವುದಿಲ್ಲ ಎಂದು ನಿನಗೆ ನಾನು ಈ ಮುಂಚೆಯೇ ಹೇಳಲಿಲ್ಲವೇ? ವರದಿಂದ ಅದನ್ನು ನಿವಾರಿಸಿಕೊಂಡರೆ ಇನ್ನೊಮ್ಮೆ ಅದನ್ನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರಗಳು ಘೋಷಿಸುತ್ತ್ತಿವೆ. ಪಾಪದಿಂದ ಹುಟ್ಟಿದ ಈ ರೋಗವನ್ನು ಈ ಜನ್ಮದಲ್ಲೇ ಅನುಭವಿಸಿ ನಿವಾರಿಸಿಕೊಳ್ಳದಿದ್ದರೆ ಉಳಿದಿರುವ ಪಾಪ ಮೋಕ್ಷಕ್ಕೆ ಅಡ್ಡವಾಗುತ್ತದೆ.” ಎಂದನು. ಅದನ್ನು ಕೇಳಿದ ದೀಪಕನು ಗುರುವಾಕ್ಯವೇ ಆಜ್ಞೆಯೆಂದು ಈಶ್ವರನ ಬಳಿಗೆ ಹಿಂತಿರುಗಿ, “ದೇವ, ನಿನ್ನ ವರ ನನಗೆ ಬೇಕಾಗಿಲ್ಲ. ಗುರುವಿಗೆ ಇಷ್ಟವಾಗದಿರುವುದನ್ನು ನಾನು ನಿನ್ನಿಂದ ಸ್ವೀಕರಿಸಲಾರೆ.” ಎಂದು ವಿನಯವಾಗಿ ಹೇಳಿದನು.

ಅದನ್ನು ಕೇಳಿದ ವಿಶ್ವನಾಥ ಚಕಿತನಾಗಿ, ಅಲ್ಲಿಂದ ನೇರವಾಗಿ ಮೋಕ್ಷಮಂಟಪಕ್ಕೆ ಹೋಗಿ, ಅಲ್ಲಿ ಸೇರಿದ್ದ ವಿಷ್ಣುವೇ ಮೊದಲಾದ ದೇವತೆಗಳಿಗೆ ಈ ವಿಷಯವನ್ನು ತಿಳಿಸಿದನು. ಅದನ್ನು ಕೇಳಿದ ವಿಷ್ಣುವು, “ಈಶ್ವರ, ನೀನು ಹೇಳುತ್ತಿರುವುದು ಬಹಳ ಆಶ್ಚರ್ಯಕರವಾಗಿದೆ. ಆ ಗುರು ಶಿಷ್ಯರು ಯಾರು? ಅವರೆಲ್ಲಿರುತ್ತಾರೆ? ಎಲ್ಲವನ್ನೂ ವಿವರಿಸಿ ಹೇಳು.” ಎಂದನು. ಅದಕ್ಕೆ ವಿಶ್ವನಾಥನು, “ದೀಪಕನೆಂಬ ಈ ಹುಡುಗ ಪರಮ ಗುರುಭಕ್ತ. ಗೋದಾವರಿ ತೀರದಲ್ಲಿ ನೆಲೆಸಿರುವ ವೇದಧರ್ಮನೆಂಬುವವನ ಶಿಷ್ಯ. ದೀಪಕನು ಗುರುಸೇವೆಯಲ್ಲೇ ಮುಳುಗಿಹೋಗಿದ್ದಾನೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಅಂತಹ ಗುರುಭಕ್ತಿಪರಾಯಣನನ್ನು ನಾನು ಇನ್ನೆಲ್ಲಿಯೂ ನೋಡಿಲ್ಲ. ಅವನ ಗುರುಭಕ್ತಿಯನ್ನು ಮೆಚ್ಚಿಕೊಂಡ ನಾನು ವರಕೊಡಬೇಕೆಂದು ಸಂಕಲ್ಪಿಸಿ ಅವನ ಬಳಿಗೆ ಹೋದೆ. ಅವನಿಗೆ ನಾನು ವರವನ್ನು ನೀಡಿದರೂ ಅದು ತನ್ನ ಗುರುವಿಗೆ ಒಪ್ಪಿಗೆಯಾಗಲಿಲ್ಲವೆಂದು ನನ್ನ ವರವನ್ನು ನಿರಾಕರಿಸಿಬಿಟ್ಟ. ನಿನ್ನ ವರಾಪೇಕ್ಷಿಗಳಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿರುವ ಅನೇಕ ಋಷಿಗಳನ್ನು ಉಪೇಕ್ಷಿಸಿ ನನಗೇಕೆ ವರಕೊಡಬೇಕೆಂದು ಬಂದಿದ್ದೀಯೆ ಸ್ವಾಮಿ? ನಿನ್ನ ವರದ ಅವಶ್ಯಕತೆ ನನಗಿಲ್ಲ.” ಎಂದು ಹೇಳಿ ನನ್ನಿಂದ ವರ ಪಡೆಯದೆ ಹೊರಟುಹೋದ. ಮನೋವಾಕ್ಕಾಯಗಳನ್ನು ಗುರುವಿಗೆ ಅರ್ಪಿಸಿ, ಗುರುವೇ ತ್ರಿಮೂರ್ತಿ ರೂಪನು ಎನ್ನುವ ದೃಢಬಾವನೆಯಿಂದ, ಗುರುವಿನ ಸೇವೆಯಲ್ಲಿ ನಿಮಗ್ನನಾಗಿಹೋಗಿದ್ದಾನೆ. ಗುರುವೇ ತಾಯಿ ತಂದೆ ಸಕಲವೂ ಎಂಬ ನಿಶ್ಚಯದಿಂದ ಗುರುಸೇವೆಯಲ್ಲಿ ನಿರತನಾಗಿ ಹೋಗಿದ್ದಾನೆ. ತನ್ನ ದೇಹಕ್ಕೆ ಬೇಕಾದ ರಕ್ಷಣೆ ಪೋಷಣೆಗಳ ಅವಶ್ಯಕತೆಯನ್ನೂ ಅವನು ಮರೆತಿದ್ದಾನೆ. ಅವನ ಸುಗುಣಗಳನ್ನು ನಾನು ಎಷ್ಟೆಂದು ವರ್ಣಿಸಲಿ? ಅವಿದ್ಯಾಂಧಕಾರಕ್ಕೆ ಅವನೇ ದೀಪವನ್ನು ಹಿಡಿಯುವವನು. ಧರ್ಮ, ಜ್ಞಾನ, ಯಶಸ್ಸು ಎಲ್ಲವೂ ಗುರುವೇ ಎಂಬ ದೃಢನಿಶ್ಚಯದಿಂದ ಅವನು ಗುರು ಭಜನೆಯನ್ನು ಮಾಡುತ್ತಿದ್ದಾನೆ.” ಎಂದು ಆ ಗುರುಶಿಷ್ಯರ ಸಂಬಂಧವನ್ನು ವಿವರಿಸಿ ಹೇಳಿದನು.

ಅದನ್ನು ಕೇಳಿದ ವಿಷ್ಣುವು ಆ ಗುರುಶಿಷ್ಯರನ್ನು ಕಾಣಬೇಕೆಂದು ಅವರಿದ್ದಲ್ಲಿಗೆ ಬಂದನು. ಅಲ್ಲಿ ತಾನು ಕೇಳಿದ್ದಕ್ಕಿಂತ ಅತಿಶಯವಾದ ಶ್ರದ್ಧಾ ಭಕ್ತಿಗಳಿಂದ ಗುರುಸೇವೆಯನ್ನು ಮಾಡುತ್ತಿದ್ದ ದೀಪಕನನ್ನು ಕಂಡನು. ಅದನ್ನು ಕಂಡು ಮೆಚ್ಚಿಕೊಂಡ ಭಕ್ತವತ್ಸಲನಾದ ವಿಷ್ಣುವು ದೀಪಕನನ್ನು ಹತ್ತಿರಕ್ಕೆ ಕರೆದು, ” ಮಗು, ನಿನ್ನ ಗುರುಭಕ್ತಿಗೆ ಮೆಚ್ಚಿದೆ. ನಿನಗೇನು ಬೇಕೋ ಕೇಳು. ಕೊಡುತ್ತೇನೆ.” ಎಂದನು. ಅದಕ್ಕೆ ದೀಪಕ, ” ಹೇ ಹೃಷೀಕೇಶ, ನಾನು ನಿನ್ನನ್ನು ವರ ಕೋರಲಿಲ್ಲ. ಕೋರದಿದ್ದವರಿಗೆ ನೀನು ವರವನ್ನೇಕೆ ಕೊಡುತ್ತಿದ್ದೀಯೆ? ಸ್ವಾಮಿ, ನಾರಯಣ, ನಾನು ನಿನ್ನ ಸ್ಮರಣೆ ಮಾಡಲಿಲ್ಲ. ನಿನ್ನ ಸೇವೆ ಮಾಡಲಿಲ್ಲ. ತಪಸ್ವಿಗಳನೇಕರು ನಿನಗಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆ. ಅವರನ್ನೆಲ್ಲ ಉಪೇಕ್ಷಿಸಿ ನನಗೇಕೆ ವರ ನೀಡಲು ಬಂದಿದ್ದೀಯೆ ಸ್ವಾಮಿ? ಬೇಡದೆ ನೀನಾಗಿ ಕೊಡುವ ವರವನ್ನು ಸ್ವೀಕರಿಸಲು ನನಗೆ ಯೋಗ್ಯತೆ ಇಲ್ಲ.” ಎಂದನು.

ದೀಪಕನು ದೃಢಮನಸ್ಕನಾಗಿ ಆಡಿದ ಆ ಮಾತುಗಳನ್ನು ಕೇಳಿದ ವಿಷ್ಣುವು ಬಹು ಸಂತೋಷಗೊಂಡು, ಅವನ ಗುರುಭಕ್ತಿಯಿಂದ ಮೋಹಗೊಂಡವನಾಗಿ, “ದೀಪಕ, ನೀನು ಮೋಕ್ಷದಾಯಕವಾದ ಗುರುಭಕ್ತಿ ಏನೆಂಬುದನ್ನು ತೋರಿಸಿದ್ದೀಯೆ. ಅದರಿಂದ ನಾನು ಬಹಳ ಸಂತೋಷಗೊಂಡಿದ್ದೇನೆ. ಗುರು ಭಕ್ತರು ನನ್ನ ಭಕ್ತರು. ಅವರ ಗುರುಭಕ್ತಿ ನನ್ನಲ್ಲೇ ಪರ್ಯವಸನವಾಗುತ್ತದೆ. ಅದರಲ್ಲಿ ಸಂದೇಹವಿಲ್ಲ. ನಾನು ಭಕ್ತರಿಗೆ ಅಧೀನ. ಅದರಿಂದ ಅವರು ಗುರುವಿನಲ್ಲಿ ಕೇಳುವ ವರವನ್ನು ನಾನೇ ಕೊಡುತ್ತೇನೆ. ಮಾತಾಪಿತರ ಸೇವಾನಿರತರು, ಪತಿಸೇವಾಪರಾಯಣೆಯಾದ ಸಾಧ್ವಿ, ವಿದ್ವಾಂಸರು, ವಿಪ್ರರು, ತಪಸ್ವಿಗಳು, ಯತಿಗಳು ಯೋಗಿಗಳು ಮುಂತಾದವರನ್ನು ಸೇವಿಸುವವರೆಲ್ಲರೂ ನನ್ನ ಭಕ್ತರೇ!” ಎಂದು ಹೇಳಿದ ವಿಷ್ಣುವಿನ ಮಾತನ್ನು ಕೇಳಿದ ದೀಪಕ, “ಹೇ ಹೃಷೀಕೇಶ, ನನ್ನ ಮನೋನಿಶ್ಚಯವನ್ನು ಹೇಳಲಿಚ್ಛಿಸುತ್ತೇನೆ. ವೇದ ಶಾಸ್ತ್ರಗಳನ್ನು ಬೋಧಿಸುವವನು ಗುರುವೇ ಅಲ್ಲವೆ? ಜ್ಞಾನ ವಿಜ್ಞಾನ ಸರ್ವವೂ ಗುರುವಿಗೆ ಅವಗತವಲ್ಲವೇ? ತ್ರಿಮೂರ್ತಿ ಸ್ವರೂಪನೇ ಅದದ್ದರಿಂದ ಅವರೂ ಅವನಿಗೆ ಅಧೀನರೇ ಅಲ್ಲವೆ? ಹಾಗಿರುವಾಗ ನನಗೆ ಇತರ ದೇವತೆಗಳಿಂದ ಆಗಬೇಕಾದದ್ದರೂ ಏನಿದೆ? ನನಗೆ ಗುರುವೇ ಎಲ್ಲ ದೇವತೆಗಳೂ! ದೈವ, ತೀರ್ಥಗಳು ಸರ್ವವೂ ಅವರೇ ಎಂಬುದು ಪರಮಸತ್ಯ! ಗುರುವಿನಿಂದಾಗಿಯೇ ಪರಮಾರ್ಥವೆನ್ನುವುದೂ ನನಗೆ ಸನ್ನಿಹಿತವಾಗಿದೆ. ಗುರುವಲ್ಲದೆ ನನಗೆ ಅನ್ಯರಾರೂ ಇಲ್ಲ. ಗುರುವಿನಿಂದಾಗಿಯೇ ಈಶ್ವರನೂ ನನಗೆ ಸನ್ನಿಹಿತನಾದನು. ಹೇ ನಾರಾಯಣ, ನೀನು ಕೊಡಬಲ್ಲ ವರವನ್ನು ನನ್ನ ಗುರುವೇ ಕೊಡಬಲ್ಲನಲ್ಲವೆ? ಹಾಗಿರುವಾಗ ಗುರುವನ್ನು ಬಿಟ್ಟು ಬೇರೆ ಆಶ್ರಯವನ್ನೇಕೆ ಹುಡುಕಬೇಕು?” ಎಂದು ಬಹು ವಿಧೇಯನಾಗಿ ನುಡಿದನು. ದೀಪಕನ ಮಾತುಗಳನ್ನು ಆಲಿಸಿದ ವಿಷ್ಣುವು, ಅತ್ಯಂತ ಸಂತೋಷಗೊಂಡು, “ಮಗು, ದೀಪಕ, ಶಿಷ್ಯೋತ್ತಮ, ನೀನು ಬಹಳ ಧನ್ಯ. ನನಗೆ ಅತ್ಮೀಯನಾದೆ. ನಿನ್ನ ಭಕ್ತಿಗೆ ನಾನು ಬದ್ಧನಾಗಿದ್ದೇನೆ. ಅದರಿಂದಲೇ ನಾನೇ ನಿನ್ನ ಬಳಿಗೆ ಬಂದೆ. ಏನು ವರವನ್ನು ಬೇಕಾದರೂ ಕೇಳು. ನಾನು ಸಂತೋಷದಿಂದ ಕೊಡುತ್ತೇನೆ. ಇದಕ್ಕೆ ಮುಂಚೆ ವಿಶ್ವೇಶ್ವರನೂ ನಿನಗೆ ವರಕೊಡಲು ಬಂದಿದ್ದನಲ್ಲವೇ? ನಮ್ಮಿಬ್ಬರಲ್ಲಿ ಯಾವ ಬೇಧವೂ ಇಲ್ಲ. ನಮ್ಮ ಸಂತೋಷಕ್ಕಾಗಿ ವರ ಕೇಳು. ನಿನಗೆ ನಾನು ವಶನಾಗಿದ್ದೇನೆ.” ಎಂದು ಹೇಳಿದನು. ಅದಕ್ಕೆ ದೀಪಕ, “ಸ್ವಾಮಿ, ಶ್ರೀಹರಿ, ವರವನ್ನು ಕೊಡಲೇಬೇಕೆಂದುಕೊಂಡರೆ, ನನ್ನ ಗುರುಭಕ್ತಿ ಅನನ್ಯವಾಗಿ, ಅಚಂಚಲವಾಗಿ ವೃದ್ಧಿಯಾಗಲಿ ಎಂಬ ವರವನ್ನು ಕೊಡು. ಅದನ್ನು ಬಿಟ್ಟು ಬೇರೆ ನನಗೆ ಎಂತಹ ವರವೂ ಬೇಡ.” ಎಂದು ಹೇಳಿ ಶ್ರೀಹರಿಯ ಪಾದಗಳಿಗೆ ನಮಸ್ಕರಿಸಿದನು.

ಶ್ರೀಹರಿಯು ಅವನನ್ನು ಹಿಡಿದೆತ್ತಿ, “ದೀಪಕ, ನೀನು ನಿನ್ನ ಗುರುಭಕ್ತಿಯಿಂದ ಧನ್ಯನಾದೆ. ಗುರುಭಕ್ತಿಯೇ ಪರಬ್ರಹ್ಮ. ಬೇರೊಂದಿಲ್ಲ. ನಾನು ಹೇಳುವುದನ್ನು ಚಿತ್ತವಿಟ್ಟು ಕೇಳು. ಪರಿಶುದ್ಧವಾದ ಮನಸ್ಸಿನಿಂದ ಗುರುವನ್ನು ಸೇವಿಸು. ಭಕ್ತಿ ತುಂಬಿ ಅವನನ್ನು ಭಜಿಸು. ಅವನ ಸ್ತೋತ್ರ ಮಾಡು. ಅದರಿಂದ ನಾನು ಸಂತೋಷಗೊಳ್ಳುತ್ತೇನೆ. ಆ ಸ್ತುತಿಯು ನನಗೇ ಸೇರುತ್ತದೆ. ಲೋಕದಲ್ಲಿ ಶ್ರದ್ಧಾ ಭಕ್ತಿಗಳಿಂದ ವೇದವೇದಾಂಗ ಶೃತಿ ಸ್ಮೃತಿಗಳಲ್ಲಿ ನಿರತರಾದವರೆಲ್ಲರೂ ಗುರುಸೇವಾ ನಿರತರೇ! ಅವರೆಲ್ಲರೂ ನನ್ನ ಪ್ರೀತಿಪಾತ್ರರೇ! ವೇದ ಸಿದ್ಧಾಂತದಲ್ಲಿ ಪರಬ್ರಹ್ಮನೇ ಸದ್ಗುರುವು. ಆದುದರಿಂದ ಗುರುವನ್ನೇ ಸೇವಿಸು. ಭಜಿಸು. ಹಾಗೆ ಮಾಡಿದರೆ ದೇವತೆಗಳೆಲ್ಲರೂ ನಿನ್ನ ವಶರಾಗುತ್ತಾರೆ. ಗುರು ಎನ್ನುವ ಎರಡು ಅಕ್ಷರಗಳು ಅಮೃತ ಸಾಗರವೇ! ಆ ಸಮುದ್ರದಲ್ಲಿ ಮುಳುಗಿದವನನ್ನು ತಾಪತ್ರಯಗಳು ಮುಟ್ಟಲಾರವು. ಸದ್ಗುರುವಿನಲ್ಲಿ ಚಿತ್ತವನ್ನು ಸದಾ ನಿಲ್ಲಿಸಿಕೊಂಡಿರುವವನು ಪೂಜಾರ್ಹನು. ಗುರುನಾಮಾಮೃತವನ್ನು ಸದಾ ಪಾನಮಾಡುವವನು ಸುರನೇ ಆಗಬಲ್ಲನು. ನಾನು, ಬ್ರಹ್ಮ, ಬ್ರಹ್ಮಜ್ಞಾನ ಸಂಪನ್ನನಾದವನು ಯಾರನ್ನು ಅನುಗ್ರಹಿಸುತ್ತೇವೋ ಅವನಿಗೆ ಸದ್ಗುರುವು ಲಭ್ಯನಾಗುತ್ತಾನೆ. ನಾವು ತ್ರಿಮೂರ್ತಿಗಳು ಕೊಡಬಲ್ಲ ವರವನ್ನು ಸದ್ಗುರುವೇ ಕೊಡಬಲ್ಲನು. ಅದರಿಂದಲೇ ಗುರುವು ತ್ರಿಮೂರ್ತ್ಯಾತ್ಮಕನು.” ಎಂದು ಹೇಳಿ ಅದೃಶ್ಯನಾದನು.

ಕಲಿಪುರುಷ, ಸದ್ಗುರು ಸೇವಾನಿರತನಾದ ಮಹಾತ್ಮನ ಮಾಹಾತ್ಮ್ಯೆ ಎಂತಹುದು ಎಂಬುದನ್ನು ಕೇಳು. ವಿಷ್ಣುವಿನಿಂದ ವರ ಪಡೆದ ದೀಪಿಕ ತನ್ನ ಗುರುವಿನ ಬಳಿಗೆ ಬಂದು ಗುರುವಿಗೆ ನಮಸ್ಕರಿಸಿದನು. ಸರ್ವಜ್ಞನಾದ ಆ ಗುರುವು ಅವನನ್ನು “ಶಿಷ್ಯ, ನಾರಾಯಣನು ನಿನ್ನೊಡನೆ ಏನು ಮಾತನಾಡಿದ? ನೀನು ಅವನಲ್ಲಿ ನನಗೆ ಆತಂಕ ತರುವಂತಹುದನ್ನು ಏನು ಬೇಡಿದೆ? ಅವನು ನಿನಗೆ ಏನನ್ನು ಕೊಟ್ಟ?” ಎಂದು ಕೇಳಲು, ದೀಪಕನು, “ಗುರುವೇ ನಾನು ವಿಷ್ಣುವನ್ನು ನಿಮ್ಮ ಪಾದಗಳಲ್ಲಿ ಅಚಂಚಲವಾದ ಭಕ್ತಿಯಿರುವಂತೆ ವರ ಬೇಡಿದೆ. ವಿಷ್ಣುವು ಇನ್ನೂ ಹೆಚ್ಚು ದೃಢಭಕ್ತಿಯಿಂದ ನಿಮ್ಮ ಪಾದ ಸೇವೆಮಾಡಿಕೊಳ್ಳುವಂತೆ ನನಗೆ ವರ ನೀಡಿದನು.” ಎಂದು ಹೇಳಿದನು. ದೀಪಕನ ಮಾತುಗಳನ್ನು ಕೇಳಿದ ಗುರುವು ಬಹು ಸಂತುಷ್ಟನಾಗಿ, ಪ್ರಸನ್ನನಾಗಿ ಕಾಶಿಕ್ಷೇತ್ರದಲ್ಲಿ ಚಿರಂಜೀವಿಯಾಗಿ ನಿವಾಸಮಾಡು. ಅಷ್ಟಸಿದ್ಧಿಗಳೂ, ನವನಿಧಿಗಳೂ ನಿನ್ನ ವಶವರ್ತಿಗಳಾಗಿರುತ್ತಾರೆ. ಕಾಶಿ ವಿಶ್ವನಾಥನೂ ನಿನಗೆ ಅಧೀನನಾಗಿರುತ್ತಾನೆ. ನಿನ್ನ ಸ್ಮರಣ ಮಾತ್ರದಿಂದಲೇ ಜನಗಳ ಕಷ್ಟಗಳು ದೂರವಾಗುತ್ತವೆ. ಪುತ್ರಪೌತ್ರರಿಂದ ಕೂಡಿ ಸುಖ ಸೌಖ್ಯಗಳಿಂದ ಜೀವನ ಮಾಡುತ್ತಾರೆ.” ಎಂದು ದೀಪಕನನ್ನು ಆಶೀರ್ವದಿಸಿ ವೇದಧರ್ಮನು ಪಾಪರಹಿತನಾಗಿ ನಿರೋಗಿಯಾಗಿ ದಿವ್ಯ ದೇಹದಿಂದ ಪ್ರಕಾಶಿಸಿದನು. ಶಿಷ್ಯನ ಗುರುಭಕ್ತಿಯನ್ನು ಪರೀಕ್ಷಿಸಲೆಂದೇ ಶ್ರೀ ಗುರುವು ಕುಷ್ಟುರೋಗಿಯಾದನೇ ಹೊರತು, ಆ ಮಹಾಜ್ಞಾನಮೂರ್ತಿಯಾದ ಮುನಿ ವೇದಧರ್ಮನಿಗೆ ಪಾಪ ಹೇಗೆ ಆವರಿಸಬಲ್ಲುದು? ಅನೇಕ ಜನ್ಮ ಸಂಚಿತವಾದ ಪಾಪರಾಶಿಯನ್ನು ನಾಶಮಾಡುವಂತಹ ಕಾಶಿಕ್ಷೇತ್ರ ಮಹಿಮೆಯನ್ನು ಪ್ರಕಟಗೊಳಿಸಲು ಆತ ಹಾಗೆ ಮಾಡಿದರೇ ಅಲ್ಲದೆ ಶ್ರೀ ಗುರುವಿಗೆ ಪಾಪವೆಲ್ಲಿಂದ ಬಂತು? ಕಾಶಿಯಲ್ಲಿ ಸದಾ ನಿವಾಸಮಾಡುವವರು ಅಧರ್ಮಿಗಳಾಗಿದ್ದರೂ ಅವರನ್ನು ಪಾಪಫಲಗಳು ಅಂಟಲಾರವು.”

ಬ್ರಹ್ಮನ ಮಾತುಗಳನ್ನು ಕೇಳಿದ ಕಲಿ ಅವನಿಗೆ ನಮಸ್ಕರಿಸಿ ಬ್ರಹ್ಮನ ಆಜ್ಞೆಯನ್ನು ಶಿರಸಾವಹಿಸಿ, ನೀನು ಹೇಳಿದಂತೆ ನನ್ನ ಧರ್ಮವನ್ನು ನೆರವೇರಿಸುತ್ತೇನೆ ಎಂದು ಬ್ರಹ್ಮನಿಗೆ ಆಶ್ವಾಸನೆ ಕೊಟ್ಟು ಹೊರಟು ಹೋದನು. ಎಂದು ಹೇಳಿ ಸಿದ್ಧಮುನಿಯು, “ನಾಮಧಾರಕ, ಗುರುಭಕ್ತಿ ಬಹು ಶೀಘ್ರವಾಗಿ ಸಂಸಾರಸಾಗರವನ್ನು ದಾಟಿಸಿ ಸದ್ಗತಿಯನ್ನು ಕೊಡುವುದು. ದೃಢವಾದ ಗುರುಭಕ್ತಿಯುಳ್ಳವನು ನೆಲೆಸಿರುವ ಎಡೆಯಲ್ಲಿ ಈಶ್ವರನು ನೆಲೆಸಿರುತ್ತಾನೆ. ಗುರುವಿನಲ್ಲಿ, ಹರಿಹರರಲ್ಲಿ ಸ್ಥಿರಭಕ್ತಿಯುಳ್ಳವನಿಗೆ, ಮನೋವಾಕ್ಕಾಯಗಳಿಂದ ಗುರುಸೇವೆಯಲ್ಲಿ ನಿರತನಾದವನಿಗೆ, ದೀಪಕನಿಗೆ ಲಭಿಸಿದಂತೆ ಈಶ್ವರಾನುಗ್ರಹ ಮೊದಲಾದವು ಸಿದ್ಧಿಸುವುವು. ಸದ್ಗುರುವು ಅಂತಹ ಸನ್ನಿಹಿತ ಭಕ್ತರ ಬುದ್ಧಿಯನ್ನು ವಿಕಾಸಗೊಳಿಸಿ ಅವರನ್ನು ಸದಾ ಋಜುಮಾರ್ಗದಲ್ಲಿ ನಡೆಸುತ್ತಾನೆ.” ಎಂದು ಹೇಳಿದನು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s