ಶ್ರೀ ಗುರು ಚರಿತ್ರೆ-ಅಧ್ಯಾಯ ೧

||ಶ್ರೀ ಗುರು ಚರಿತ್ರೆ – ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ||

||ಜ್ಞಾನ ಕಾಂಡ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ||
||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||

ವಿಘ್ಹಹರ್ತಾ ಗಣಾಧಿಪತಿ, ಪಾರ್ವತೀಪುತ್ರ ಲಂಬೋದರಾ, ನಿನಗೆ ನಮಸ್ಕಾರ. ಓ ಏಕದಂತಾ! ನಿನಗೆ ಜಯವು ಜಯವು. ನಿನ್ನ ಮೊರದಂತಹ ಕಿವಿಗಳನ್ನ್ನು ಕದಲಿಸಿದಾಗ ಬರುವ ಗಾಳಿಗೆ ವಿಘ್ನಗಳೆಲ್ಲವೂ ಓಡಿಹೋಗುತ್ತವೆ. ನಿನ್ನ ಮುಖವು ಸ್ಫುಟವಿಟ್ಟ ಬಂಗಾರದಂತೆ ಹೊಳೆಯುತ್ತಿದೆ. ಉದಯಸೂರ್ಯನಂತೆ ಕಾಂತಿ ತೋರುತ್ತಿದೆ ನಿನ್ನ ತೇಜಸ್ಸು. ವಿಘ್ನಗಳೆಂಬ ಅರಣ್ಯಗಳನ್ನು ನಾಶಮಾಡಲು ನಿನ್ನ ಕೈಯಲ್ಲಿ ಪರಶುವನ್ನು ಧರಿಸಿದ್ದೀಯೆ. ನಿನ್ನ ನಡುವಿನಲ್ಲಿ ನಾಗಬಂಧವಿದೆ. ಸರ್ಪಗಳನ್ನೇ ಉಪವೀತವಾಗಿ ಹಾಕಿಕೊಂಡಿದ್ದೀಯೆ. ನಾಲ್ಕು ಭುಜಗಳ ವಿನಾಯಕಾ, ನಿನ್ನ ಕಣ್ಣುಗಳು ವಿಶಾಲವಾಗಿ ಕಾಣುತ್ತಿವೆ. ನೀನು ವಿಘ್ನ ಸಮೂಹಗಳನ್ನು ತೊಲಗಿಸಿ ವಿಶ್ವವನ್ನೆಲ್ಲಾ ರಕ್ಷಿಸುತ್ತೀಯೆ. ನಿನ್ನ ಧ್ಯಾನ ಮಾಡುವವರನ್ನು ವಿಘ್ನಗಳು ಬಾಧಿಸಲಾರವು. ಇಷ್ಟಾರ್ಥಗಳೆಲ್ಲವೂ ತ್ವರಿತವಾಗಿ ಈಡೇರುತ್ತವೆ. ಶುಭಕಾರ್ಯಗಳಲ್ಲಿ ಎಲ್ಲರಿಗಿಂತಲೂ ಮೊದಲು ನಿನ್ನನ್ನೇ ಪೂಜಿಸುತ್ತಾರೆ. ಓ ಲಂಬೋದರಾ, ನೀನೇ ಹದಿನಾಲ್ಕು ವಿದ್ಯೆಗಳನ್ನು ನೀಡುವವನು. ಅದರಿಂದಲೇ ಬ್ರಹ್ಮಾದಿ ದೇವತೆಗಳೆಲ್ಲರೂ ನಿನ್ನನ್ನೇ ಪೂಜಿಸಿದರು. ಶಂಕರನೂ ಕೂಡಾ ತ್ರಿಪುರಾಸುರನನ್ನು ಸಂಹರಿಸುವುದಕ್ಕೆ ಮುಂಚೆ ನಿನ್ನನ್ನೇ ಪೂಜೆಮಾಡಿದನು. ವಿಷ್ಣುವು ಕೂಡಾ ನಿನ್ನನ್ನು ಸ್ತೋತ್ರಮಾಡಿದ್ದರಿಂದಲೇ ದೈತ್ಯರನ್ನು ತ್ವರೆಯಾಗಿ ಸಂಹರಿಸಲು ಶಕ್ತನಾದನು. ಓ ಗಣಪತಿ, ವಿಷ್ಣುವೇ ಮೊದಲಾದ ದೇವತೆಗಳೆಲ್ಲರೂ ನಿನ್ನನ್ನು ಮೊದಲು ನಮಸ್ಕರಿಸಿ ಕೆಲಸಗಳನ್ನು ಪ್ರಾರಂಭಿಸಿದ್ದರಿಂದಲೇ ಅವರವರ ಇಷ್ಟಾರ್ಥಸಿದ್ಧಿಗಳನ್ನು ಪಡೆದರು. ಓ ಗಣನಾಥಾ, ದಯಾಸಾಗರಾ, ರಾಕ್ಷಸಾಂತಕಾ, ವಿಘ್ನಹರ್ತಾ, ನನ್ನ ಭಯವನ್ನೆಲ್ಲಾ ನೀಗಿ, ನನ್ನ ಮನಸ್ಸನ್ನು ಸ್ವಚ್ಛಗೊಳಿಸು. ಓ ಗಣನಾಯಕಾ, ವಿಘ್ನಹಂತಾ, ನಿನ್ನನ್ನು ನಮಸ್ಕರಿಸಿದರೆ ಸಾಕು. ಲೋಕದಲ್ಲಿ ಕಾರ್ಯಸಿದ್ಧಿಯಾಗುತ್ತದೆ. ನೀನೇ ಸರ್ವಕಾರ್ಯಗಳಿಗೂ ಆಧಾರ. ದಯಾಸಮುದ್ರ. ಗೌರಿಪುತ್ರ. ನನ್ನ ಬುದ್ಧಿಯನ್ನು ಸ್ವಚ್ಛಗೊಳಿಸು. . ಓ ಗಜಾನನ, ನನ್ನ ಮನೋವಾಸನೆಗಳನ್ನೇಲ್ಲಾ ಪೂರಯಿಸು. ನನಗೆ ವಿದ್ಯಾದಾನ ಮಾಡು. ಗುರುಚರಿತ್ರೆಯನ್ನು ಬರೆಯಬೇಕೆಂಬ ನನ್ನ ಹಂಬಲವನ್ನು ನಿನ್ನ ಕರುಣಾದೃಷ್ಟಿ ಹಾಯಿಸಿ ಪೂರ್ಣಗೊಳಿಸು. ಸರ್ವವಿದ್ಯಾನಿಧಿಯಾದ ನೀನೇ ನಿನ್ನ ಶರಣು ಬಂದವರಿಗೆ ವರದಾತ. ನಿನಗೆ ಅನಂತ ನಮಸ್ಕಾರಗಳು.

ವಾಗ್ದೇವಿ ಸರಸ್ವತಿಗೆ ನಮಸ್ಕರಿಸುತ್ತಿದ್ದೇನೆ. ತಾಯಿ, ಶಾರದಾಂಬೆ, ನಿನ್ನ ಎರಡು ಕೈಗಳಲ್ಲ್ಲಿ ವೀಣೆ ಪುಸ್ತಕಗಳನ್ನು ಹಿಡಿದ್ದಿದ್ದೀಯೆ. ಹಂಸ ನಿನ್ನ ವಾಹನ. ವೇದ ಶಾಸ್ತ್ರ ವಿದ್ಯೆಗಳನ್ನು ಕಲಿಯಬೇಕೆಂದಿರುವವರಿಗೆ ಸಂತೋಷದಿಂದ ನೀನು ಅಧಿಕಾರವನ್ನು ನೀಡುತ್ತೀಯೆ. ನಿನ್ನನ್ನು ನಮಸ್ಕರಿಸಿದವರಿಗೆ ಸದಾಕಾಲದಲ್ಲೂ ಜ್ಞಾನ ಲಭ್ಯವಾಗುತ್ತದೆ. ನಿನ್ನ ಪಾದಗಳನ್ನು ಹಿಡಿದು ಬೇಡಿಕೊಳ್ಳುತ್ತಿದ್ದೇನೆ. ನನ್ನ ನಾಲಗೆಯ ತುದಿಯಲ್ಲಿನಿಂತು ಈ ಗ್ರಂಥ ಸಿದ್ಧಿಗೊಳ್ಳುವಂತೆ ಮಾಡು. ಹೇ ಮಾತೆ! ನನ್ನ ಪ್ರಾರ್ಥನೆಯನ್ನು ಮನ್ನಿಸಿ ನನಗೆ ಸುಮತಿಯನ್ನು ಕೊಡು. ಸನ್ಮತಿಯನ್ನು ಕೊಟ್ಟು ಈ ಗುರು ಚರಿತ್ರೆ ಪ್ರಸಿದ್ಧಿಗೆ ಬರುವಂತೆ ಮಾಡು. ಹೇ ವಾಗ್ದೇವಿ, ಜಗನ್ಮಾತೆ ನಿನಗೆ ಜಯವಾಗಲಿ. ನಿನಗೆ ನಮಸ್ಕರಿಸುತ್ತಿದ್ದೇನೆ. ಸಕಲ ವೇದಶಾಸ್ತ್ರಗಳೂ ನಿನ್ನನ್ನೇ ಹೊಗಳುತ್ತಿವೆ. ಷಡ್ದರ್ಶನಗಳು ನಿನ್ನಿಂದಲೇ ಬಂದವಲ್ಲವೇ! ನನ್ನ ಗುರುದೇವರು ಶ್ರೀ ನರಸಿಂಹ ಸರಸ್ವತಿಗಳು ನೀನೇ ಎಂದು ಲೋಕ ಪ್ರಸಿದ್ಧಿ. ಅವರಿಗೆ ಅಂಕಿತನಾದ ನನ್ನಲ್ಲಿ ನಿನ್ನ ಪ್ರೀತಿಯನ್ನು ತೋರಿಸು. ಸೂತ್ರಧಾರನು ನಡೆಸಿದಂತೆ ಗೊಂಬೆಗಳು ನಾಟ್ಯಮಾಡುತ್ತವೆ. ಆ ಗೊಂಬೆಗಳು ನಿಜವಲ್ಲ. ಜಡ. ಅವಕ್ಕೆ ಸ್ವಾತಂತ್ರ್ಯವೆಲ್ಲಿ? ಹಾಗೆಯೇ ನಿನ್ನ ಇಷ್ಟವನ್ನನುಸರಿಸಿ ನನ್ನ ಮಾತುಗಳನ್ನು ಹೊರಡಿಸು. ಹೇ ತಾಯಿ ದಯಾನಿಧಿ, ವಾಗ್ದೇವಿ, ಜ್ಞಾನಹೀನನಾದ ನಾನು ಪ್ರಾರ್ಥಿಸುತ್ತಿದ್ದೇನೆ. ನನ್ನ ಭಯವನ್ನು ಹೋಗಲಾಡಿಸು. ತಾಯಿ, ಭಾರತಿ, ನಿನ್ನ ಪಾದಗಳನ್ನು ಆಶ್ರಯಿಸಿದ್ದೇನೆ. ನನ್ನಲ್ಲಿ ಪ್ರಸನ್ನಳಾಗಿ ಈ ಗುರುಚರಿತ್ರೆ ವಿಕಾಸಗೊಳ್ಳುವಂತೆ ಅನುಗ್ರಹಮಾಡು. ತ್ರಿಗುಣಸ್ವರೂಪಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಣಾಮಗಳು. ವಿದ್ಯಾಪ್ರವರ್ತಕರಾದ ಅವರನ್ನು ಒಬ್ಬೊಬ್ಬರಾಗಿ ಬೇಡಿಕೊಳ್ಳುತ್ತಿದ್ದೇನೆ. ಚತುರ್ಮುಖನಾದ ಆ ಬ್ರಹ್ಮ ಜಗತ್ಸೃಷ್ಟಿಕರ್ತ. ಆ ಪರಮೇಷ್ಠಿಯ ನಾಲಕ್ಕು ಮುಖಗಳಿಂದ ನಾಲಕ್ಕು ವೇದಗಳು ಹೊರಬಂದವು. ಆ ವಿರಂಚಿಯ ಪಾದಗಳು ನನಗೆ ಶರಣ್ಯವು. ಸರ್ವೇಂದ್ರಿಯಗಳನ್ನು ಪ್ರೇರೇಪಿಸುವ ಆ ಮಹಾವಿಷ್ಣುವು ಹೃಷೀಕೇಶನೆಂದು ಹೆಸರುಗೊಂಡಿದ್ದಾನೆ. ಅವನೇ ವಿಶ್ವನಾಥ. ಶ್ರೀ ಮಹಾಲಕ್ಷ್ಮಿಯೊಡನೆ ಕೂಡಿ ಆ ದೇವದೇವನು ಕ್ಷೀರಸಾಗರದಲ್ಲಿ ನೆಲಸಿದ್ದಾನೆ. ಅವನು ಚತುರ್ಭುಜ. ಶಂಖ ಚಕ್ರ ಗದಾಧಾರಿ. ಮುರವೈರಿ. ಪದ್ಮಹಸ್ತ. ಪದ್ಮನಾಭನಾದ ಅವನು ನನ್ನ ಅಭೀಷ್ಟವನ್ನು ನೆರವೇರಿಸಲಿ. ಆ ನಾರಾಯಣ ಪೀತಾಂಬರಧಾರಿ. ಲೋಕಗಳನ್ನೆಲ್ಲಾ ಬೆಳಗಿಸುವ ವೈಜಯಂತಿಮಾಲೆಯನ್ನು ಧರಿಸಿರುವವನು. ಅಂತಹ ಮಹಾವಿಷ್ಣು ನನಗೆ ಹಿತವನ್ನುಂಟುಮಾಡಲಿ. ಅವನು ಶರಣಾಗತರ ಕೋರಿಕೆಗಳನ್ನು ನೆರವೇರಿಸುವವನು.

ಸರ್ವಸುರಶ್ರೇಷ್ಲರೂ, ಯಕ್ಷಗಂಧರ್ವಕಿನ್ನರರು, ಪರಮಾತ್ಮನ ಅಂಶವೇ ಆದ ಸಿದ್ಧ ಸಾಧ್ಯರು, ಋಷಿಸಮೂಹಕ್ಕೆಲ್ಲ ನಮಸ್ಕರಿಸುತ್ತಿದ್ದೇನೆ. ಸುಚರಿತ್ರರೂ, ನಿರ್ಮಲರೂ ಆದ ಕವಿಕುಲಸಮೂಹಕ್ಕೆಲ್ಲ ನನ್ನ ನಮಸ್ಕಾರ. ಪರಾಶರ, ವ್ಯಾಸ, ವಾಲ್ಮೀಕಿ ಮುಂತಾದ ಕವೀಶ್ವರರಿಗೆಲ್ಲ ನನ್ನ ನಮಸ್ಕಾರ. ಸಾಹಿತ್ಯವನ್ನರಿಯದ ನಾನು ಕವಿತಾರೀತಿನೀತಿಗಳನ್ನರಿಯದವನು. ಆದರೂ ನನ್ನನ್ನು ತಮ್ಮ ಸೇವಕನೆಂದೆಣಿಸಿ ನನ್ನನ್ನೂ ಕವಿಯೆಂದು ಕರೆಯಿರಿ. ನಾನು ಎಂದೂ ಗ್ರಂಥರಚನೆಯನ್ನು ಮಾಡಿಲ್ಲ. ಭಾಷಾ ಪ್ರವೀಣನಲ್ಲ. ಶಾಸ್ತ್ರಗಳನ್ನು ಅರಿತವನಲ್ಲ. ಹೇ ಕವೀಂದ್ರರೇ! ನಿಮಗೆಲ್ಲಾ ನಮಸ್ಕಾರಗಳು. ನೀವೆಲ್ಲರೂ ಕೂಡಿ ನನಗೆ ಒತ್ತಾಸೆಯಾಗಿ ನಿಲ್ಲಿ. ಕವಿತ್ವನ್ನರಿಯದ ನನ್ನನ್ನು ಕವಿಕುಲವೇ ಕಾಪಾಡಬೇಕು. ಹೀಗೆಂದು ಕವಿಕುಲಕ್ಕೆಲ್ಲಾ ನಮಸ್ಕರಿಸಿ ನನ್ನ ಪೂರ್ವೀಕರು, ಮಹಾಭಾಗರಾದ ಜನನೀಜನಕರುಗಳನ್ನು ಧ್ಯಾನಿಸುತ್ತೇನೆ.

ಆಪಸ್ತಂಭಶಾಖೆಗೆ ಸೇರಿದ ಕೌಂಡಿನ್ಯಗೋತ್ರೋದ್ಭವರಾದ ಸಾಖರೆ ಎಂಬ ಮನೆತನದ ಹೆಸರುಳ್ಳ ಗುರುದೇವರಾದ ಸಾಯಂದೇವರೆಂಬುವವರೊಬ್ಬರಿದ್ದರು . ಅವರ ಮಗ ನಾಗನಾಥ. ಆತನ ಮಗ ದೇವರಾಜು. ಅವರ ಪುತ್ರ ಗುರುಭಕ್ತನಾದ ಗಂಗಾಧರ. ಅವರು ನನ್ನ ತಂದಯವರು. ಶರಣ್ಯರಾದ ಅವರ ಪಾದಗಳಿಗೆ ನನ್ನ ನಮಸ್ಕಾರಗಳು. ನನ್ನ ತಾಯಿಯ ಪೂರ್ವೀಕರು ಆಶ್ವಲಾಯನ ಶಾಖೆಗೆ ಸೇರಿದವರು. ಆ ಶಾಖೆಯಲ್ಲಿ ಕಾಶ್ಯಪಗೋತ್ರೀಯರೂ ಇದ್ದಾರೆ. ನನ್ನ ಮಾತಾಮಹ ಗಂಗಾನದಿಗೆ ಜನಕರಾದ ಜಹ್ನುಮಹರ್ಷಿ, ಭಗೀರಥರಂತಹವರು. ಅವರ ಮಗಳು ಪಾರ್ವತಿಯಂತೆ ಪತಿವ್ರತೆ, ಸುಶೀಲೆ. ಆಕೆಯ ಹೆಸರು ಚಂಪ. ಆಕೆ ನನ್ನ ತಾಯಿ. ಜನನೀ ಜನಕರ ಪಾದಪದ್ಮಗಳಿಗೆ ನಮಸ್ಕಾರಮಾಡಿದ್ದುದರಿಂದಲೇ ನನ್ನ ಗುರುಭಕ್ತಿ ವಿಕಾಸಗೊಂಡಿದೆ. ಸದ್ಗುರು ಸ್ಮರಣೆಮಾಡುತ್ತಾ ಸದಾ ಏಕಾಗ್ರತೆಯಿಂದ ಸದ್ಗುರು ಚರಣಗಳಲ್ಲಿ ಸೇವೆಮಾಡುತ್ತಿದ್ದ. ನನಗೆ ಜನ್ಮ ಕೊಟ್ಟ ಗಂಗಾಧರರಿಗೆ ನನ್ನ ನಮಸ್ಕಾರಗಳು. ನಾನು ಸರಸ್ವತಿ ಎಂದು ಹೆಸರಾದವನು. ಸತ್ಪುರುಷರು ನನ್ನನ್ನು ಕ್ಷಮಿಸಬೇಕು. ಏಕೆಂದರೆ ನಾನು ಸಜ್ಜನರ ಪಾದಧೂಳಿಯಂತಹವನು. ವೇದಾಧ್ಯಯನ ತತ್ಪರರು, ಯತಿಗಳು, ಯೋಗೀಶ್ವರರು, ತಾಪಸಿಗಳು ಸದ್ಗುರುವನ್ನು ಬಹಳ ಪ್ರೇಮದಿಂದ, ಭಕ್ತಿಯಿಂದ ಭಜಿಸುತ್ತಾರೆ. ಅಂತಹವರಿಗೆ ನನ್ನಂತಹ ಅಲ್ಪಬುದ್ಧಿ ಪ್ರಾರ್ಥಿಸುತ್ತಿದ್ದಾನೆ. ನಾನು ಕಾವ್ಯ ರಚನೆಗೆ ತಕ್ಕ ಪಾಂಡಿತ್ಯವಿಲ್ಲದವನು. ಆದರೂ ಈ ಗುರುತರ ಕಾರ್ಯಕ್ಕೆ ಕೈಹಾಕಿದ್ದೇನೆ. ನಮ್ಮ ವಂಶದಲ್ಲಿ ದತ್ತ ಪ್ರಸನ್ನವಾಗುವುದು ಪರಂಪರೆಯಾಗಿ ಬಂದಿದೆ. ತನ್ನ ಕಥೆಯನ್ನು ಕೀರ್ತಿಸಲು ಆ ದತ್ತಸ್ವಾಮಿಯೇ ನನಗೆ ಪ್ರಚೋದನೆ ಕೊಟ್ಟಿದ್ದಾರೆ. “ದತ್ತ ಚರಿತ್ರೆ ಎಂಬ ಅಮೃತ ಭಾಂಡಾರವನ್ನು ನಿನಗೆ ಕೊಟ್ಟಿದ್ದೇನೆ. ಆದ್ದರಿಂದ ನೀನು ನನ್ನ ಕಥೆಯನ್ನು ರಚಿಸು. ಅದರಿಂದ ನಿನಗೂ, ನಿನ್ನ ವಂಶಕ್ಕೂ ಇಷ್ಟಾರ್ಥ ಸಿದ್ಧಿ ಆಗುತ್ತದೆ.” ಎಂದು ಶ್ರೀ ಗುರುವು ನನಗೆ ಆಣತಿಕೊಟ್ಟರು. ಗುರುವಾಕ್ಯ ಕಾಮಧೇನುವಿನಂತಹುದು. ಅದರಲ್ಲಿ ಯಾವ ಸಂಶಯವೂ ಇಲ್ಲ. ಆದ್ದರಿಂದ ದತ್ತ ಚರಿತ್ರೆ ರಚಿಸಿದೆ. ನೃಸಿಂಹ ಸರಸ್ವತಿಗಳು ತ್ರಿಮೂರ್ತ್ಯವತಾರರು. ಅವರ ಚರಿತ್ರೆಯನ್ನು ಸಾಂತವಾಗಿ ತಿಳಿದುಕೊಳ್ಳಲು ದೇವತಾಯುಸ್ಸು ಆದರೂ ಶಕ್ಯವಿಲ್ಲ. ಅನಂತವಾದ ಅವರ ಚರಿತ್ರೆ ಎಲ್ಲಿ? ಜಡಬುದ್ಧಿಯಾದ ನಾನೆಲ್ಲಿ? ಆದರೂ ಆ ಗುರುವಿನ ಪ್ರೇರಣೆ ಪ್ರೋತ್ಸಾಹಗಳಿಂದ ನನ್ನ ಬುದ್ಧಿಗೆ ಎಷ್ಟು ತಿಳಿಯುವುದೋ ಅಷ್ಟು ಹೇಳ ಬಯಸುತ್ತೇನೆ. ಪುತ್ರ,ಪೌತ್ರ, ಇಹ, ಪರ ಸುಖಗಳನ್ನು ಬಯಸುವಂತಹ ಮಾನವರಿಗೆ ಈ ಕಥೆಗಳು ರುಚಿಸುತ್ತವೆ. ಅಂತಹವರ ಮನೆಗಳಲ್ಲಿ ಲಕ್ಷ್ಮಿ ಸದಾ ನೆಲಸಿರುತ್ತಾಳೆ. ಈ ರಮಣೀಯ ಕಥೆಗಳನ್ನು ನಿತ್ಯವೂ ಓದುವವರ ಮನೆಗಳಲ್ಲಿ ಶ್ರೀದೇವಿ ನಲಿದಾಡುತ್ತಾಳೆ. ಅಂತಹ ಮನೆಗಳಲ್ಲಿ ವಾಸಮಾಡುವವರ ಕುಲ ಸುಶೀಲವಾಗಿ, ನಿರ್ಮಲವಾಗಿರುತ್ತದೆ. ಶ್ರೀ ಗುರುವಿನ ಕೃಪೆಯಿಂದ ಆ ಮನೆಗಳಲ್ಲಿ ರೋಗಪೀಡೆಗಳಿರುವುದಿಲ್ಲ. ದೀಕ್ಷೆಯಿಂದ ಗುರುಚರಿತ್ರೆಯ ಸಪ್ತಾಹ ಮಾಡಿದರೆ ಆದು ಮನೋರಥಗಳನ್ನೆಲ್ಲಾ ತೀರಿಸುವುದು. ಕಾರ್ಯಸಿದ್ಧಿ ಅನಾಯಾಸವಾಗಿ ತಪ್ಪದೇ ಆಗುವುದು. ಅಪ್ರಯತ್ನವಾಗಿ ಇಂತಹ ನಿಧಿ ದೊರೆತಿರುವಾಗ ಬೇರೆ ಶ್ರಮಗಳೇಕೆ? ನನ್ನ ಮಾತಿನಲ್ಲಿ ನಂಬಿಕೆಯಿದ್ದರೆ ತಕ್ಷಣವೇ ಫಲ ಅನುಭವಿಸಬಹುದು. ನಾನು ಅಂತಹ ಫಲವನ್ನು ಅನುಭವಿಸಿಯೇ ಕೇಳುಗರಲ್ಲಿ ಈ ರೀತಿ ಪ್ರಾರ್ಥಿಸುತ್ತಿದ್ದೇನೆ.. ಶ್ರೀ ದತ್ತ ಸ್ಮರಣೆ ತಕ್ಷಣವೇ ಇಷ್ಟಸಿದ್ಧಿಯನ್ನು ಕೊಡುವಂತಹುದು. ಹೊಟ್ಟೆ ತುಂಬಾ ತಿಂದವನಿಗೆ ತೃಪ್ತಿಯಿಂದ ತೇಗು ಬಂದಂತೆ ದತ್ತ ಸ್ಮರಣೆ ತೃಪ್ತಿಯನ್ನು ಉಂಟು ಮಾಡುತ್ತದೆ. ದತ್ತಾತ್ರೇಯ ಕಥೆ ಎನ್ನುವ ಅಮೃತವನ್ನು ಆಸ್ವಾದನೆಮಾಡಿ ನಾನು ತೇಗುತ್ತಿದ್ದೇನೆ. ನನ್ನ ಮಾತನ್ನು ಎಂದೂ ಉಪೇಕ್ಷೆ ಮಾಡಬೇಡಿ. ಜೇನುಹುಳುವಿನ ಮುಖದಲ್ಲಿ ರುಚಿಕರವಾದ ಮಧುವಿರುತ್ತದೆ., ಅಂದವಿಲ್ಲದ ಚಿಪ್ಪಿನಲ್ಲಿ ಅಂದವಾದ ಮುತ್ತು ದೊರೆಯುತ್ತದೆ. ಅಸ್ಪೃಶ್ಯವಾದ ಕಾಗೆಯ ಮಲದಿಂದ ಪೂಜನೀಯವಾದ ಅಶ್ವತ್ಥವೇ ಮುಂತಾದ ವೃಕ್ಷಗಳು ಹುಟ್ಟುತ್ತವೆ. ಮಲಿನವಾದ ಕಬ್ಬು ಮಧುರವಾದ ರಸ ನೀಡುತ್ತದೆ. ಅದರಂತೆಯೇ ಗುರುಸ್ಮರಣೆಯಲ್ಲಿ ಪ್ರೀತಿಯಿರುವವರು, ಅಲ್ಪನಾದ ನನ್ನಿಂದ ಹೊರಬಿದ್ದ ಈ ರಚನೆಯಿಂದ, ಉದಾಸೀನ ಮಾಡದೆ ಗುರುಕಥಾರಸವನ್ನು ಗ್ರಹಿಸಿ, ಸ್ವೀಕರಿಸಿ, ಆಸ್ವಾದಿಸಿ. ಈ ಕಥೆಯಿಂದ ಬ್ರಹ್ಮಾನಂದರಸಾಸ್ವಾದಫಲವನ್ನು ಗ್ರಹಿಸಿ ಆಸ್ವಾದಿಸಿ. ನನ್ನ ಈ ಮಾತುಗಳಲ್ಲ್ಲಿ ನಂಬಿಕೆಯಿರುವವರಿಗೆ ತಕ್ಷಣವೇ ಅದರ ಅನುಭವವಾಗುತ್ತದೆ. ಗುರುಕಥೆಯಿಂದ ಜ್ಞಾನ ಉಂಟಾಗುತ್ತದೆ. ಕಾಮಧೇನುವಿನಂತೆ ಕಾಮಿತಾರ್ಥಗಳನ್ನು ನೀಡುತ್ತದೆ. ನಾನು ಹೇಳುತ್ತಿರುವುದು ವ್ಯರ್ಥವಾದ ಮಾತುಗಳಲ್ಲ. ಕೇಳುಗರು ಶ್ರದ್ಧೆಯಿಂದ ಕೇಳಿ. ಶ್ರೀ ನೃಸಿಂಹ ಸರಸ್ವತಿ ಅವರು ಗಂಧರ್ವನಗರಿಯಲ್ಲಿ ಇದ್ದಾರೆ. ಅವರ ಮಹಿಮೆ ಅದ್ಭುತವಾದದ್ದು. ಮೂರುಲೋಕಗಳಲ್ಲೂ ವಿಖ್ಯಾತವಾದದ್ದು.

ಶ್ರೀ ದತ್ತ ಮಹಿಮೆಯನ್ನು ಮಾಹಾತ್ಮ್ಯವನ್ನು ಕೇಳಿದ ಸಹೃದಯರು ದೂರದೂರಗಳಿಂದಬಂದು ಆ ಸ್ವಾಮಿಯನ್ನು ಸೇವಿಸಿ ತ್ವರಿತವಾಗಿ ಫಲ ಪಡೆಯುತ್ತಿದ್ದಾರೆ. ಶ್ರೀಗಳ ಸೇವೆಯಿಂದ ಸ್ತ್ರೀಯರಿಗೆ ಪುತ್ರೋತ್ಪತ್ತಿ, ಧನಧಾನ್ಯಾದಿಗಳು ಮುಂತಾದ ಕಾಮಿತಾರ್ಥಗಳು ಲಭಿಸುತ್ತಿವೆ. ಗುರುದರ್ಶನದ ಸಂಕಲ್ಪದಿಂದಲೂ ಕೂಡ ಕಾಮಿತಾರ್ಥಗಳು ಈಡೇರುತ್ತಿವೆ. ಇದನ್ನೆಲ್ಲಾ ಕೇಳಿದ ನಾಮಧಾರಕನೆಂಬ ಬ್ರಾಹ್ಮಣಶ್ರೇಷ್ಠನೊಬ್ಬನು ಶ್ರೀಗುರುಚರಣಗಳನ್ನು ದರ್ಶಿಸಬೇಕೆಂಬ ಅಭಿಲಾಷೆಯಿಂದ ಕೂಡಿ, ಚಿಂತಾನ್ವಿತನಾಗಿ, ನಿರ್ವಿಣ್ಣನಾಗಿ , ಕಷ್ಟವ್ಯಾಕುಲಮನಸ್ಕನಾಗಿ, ನಾನು ಈ ಕರ್ತವ್ಯವನ್ನು ಸಾಧಿಸುವೆನು ಇಲ್ಲವೇ ಈ ಶರೀರವನ್ನು ವಿಸರ್ಜಿಸುವೆನು ಎಂದು ನಿಶ್ಚಯಮಾಡಿಕೊಂಡು ಮನೆಯಿಂದ ಹೊರಟನು. ಶ್ರೀಗುರುವಿನ ಪಾದದರ್ಶನಮಾಡದ ಈ ಜಡ ಶರೀರವಿದ್ದರೇನು? ಇಲ್ಲದಿದ್ದರೇನು? ಎಂದುಕೊಳ್ಳುತ್ತಾ ಗುರುಚರಣಗಳನ್ನು ಧ್ಯಾನಮಾಡುತ್ತಾ ಹಸಿವು ನೀರಡಿಕೆಗಳನ್ನು ಮರೆತು ಗುರು ಅಶ್ರಮವನ್ನು ಸೇರುವ ಸಂಕಲ್ಪದಿಂದ ಹೊರಟನು.

ಗುರುನಾಮ ಸ್ಮರಣೆಯಿಂದ ಮಾನವರ ದೈನ್ಯಗಳು ನಶಿಸಿಹೋಗಬೇಕಲ್ಲವೇ? ಆದರೂ ನನ್ನ ದೈನ್ಯತೆ ಏಕೆ ನಾಶವಾಗಲಿಲ್ಲ? ದೈವವೇ ಪ್ರತಿಕೂಲವಾದರೆ ನನ್ನ ಭಕ್ತಿಯಿಂದ ಆಗುವ ಪ್ರಯೋಜನವಾದರೂ ಏನು? ನಾನು ಹೀನ. ಪಾಪಿ. ಸ್ಪರ್ಶವೇದಿಯನ್ನು ಮುಟ್ಟಿದ ಲೋಹವು ಬಂಗಾರವಾಗುತ್ತದೆಯಲ್ಲವೇ? ನಿನ್ನ ನಾಮವೇ ಪಾಪಿಗಳ ತಾಪವನ್ನು ಹೋಗಲಾಡಿಸಬೇಕಲ್ಲವೇ? ನಿನ್ನ ನಾಮ ನನ್ನಲ್ಲಿರುವಾಗ ನನಗೆ ಏಕೆ ಕಷ್ಟಗಳು ಬರಬೇಕು? ಹೇ ಸದಾಶಿವಸ್ವರೂಪಾ, ಗುರುಮೂರ್ತಿ, ನನ್ನ ಮಾತುಗಳನ್ನು ಕೇಳಿ ನನಗೆ ನಿನ್ನ ದರ್ಶನ ಕೊಟ್ಟು ನಿನ್ನ ಪ್ರೀತಿಯನ್ನು ನಿರೂಪಿಸು. ನೀನು ಸರ್ವಭೂತ ದಯಾಳುವು. ಎಂದು ವ್ಯಾಕುಲಚಿತ್ತನಾಗಿ, ಭಕ್ತಿಯಿಂದ ಕೂಡಿದ ಗದ್ಗದವಚನಗಳಿಂದ ಗುರುವನ್ನು ಸ್ತುತಿಸಲುದ್ಯುಕ್ತನಾದನು. ಪಾಂಡುರಂಗ ವಿಘ್ನೇಶ್ವರ ಶಾರದೆಯರನ್ನು ನಮಸ್ಕರಿಸಿ ನಾಮಧಾರಕ ಶ್ರೀಗುರುವನ್ನು ಸ್ತುತಿಸಲುಪಕ್ರಮಿಸಿದನು.

ಶ್ರೀನಾಥನೆಂದು, ಶ್ರೀಗುರುವೆಂದು ಶ್ರುತಿಸ್ಮೃತಿಗಳು ಹೊಗಳುತ್ತವೆ. ಕಲಿಯುಗದಲ್ಲಿ ನೀನೇ ತಕ್ಷಣಫಲದಾತನು ಎನ್ನುತ್ತಾರೆ. ಕಲಿಯುಗದಲ್ಲ್ಲಿ ಶ್ರೀ ನೃಸಿಂಹ ಸರಸ್ವತಿ ನೀನೇ ಎಂದು ಖ್ಯಾತನಾಗಿದ್ದೀಯೆ. ಹೇ ಕೃಪಾನಿಧಿ, ನೀನು ಭಕ್ತಸಾರಥಿಯೆಂದು ಪ್ರಸಿದ್ಧಿ ಪಡೆದಿದ್ದೀಯೆ. ಕೃಪಾಸಿಂಧು, ಭಕ್ತಬಂಧು, ವೇದಗಳು ನಿನ್ನನ್ನು ಹೊಗಳುತ್ತವೆ. ನೀನು ಗುರುನಾಥ. ಪುಣ್ಯಚರಿತ. ತ್ರಿಗುಣಸ್ವರೂಪ. ನೀನೇ ನನ್ನ ರಕ್ಷಕ. ನೀನು ತ್ರಿಗುಣಾತ್ಮಕನಾದರೂ ಒಬ್ಬನೇ! ನೀನೇ ಅವ್ಯಯವಾದ ಬೀಜ. ಹೇ, ದಯಾನಿಧಿ, ಭಕ್ತರ ಸಂಕಟಹರಿಸಿ ರಕ್ಷಿಸುವವನೂ ನೀನೇ! ನೀನೇ, ಯತಿರಾಜ, ಶ್ರೀನಾಥಾ, ನಿನ್ನಲ್ಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಅಷ್ಟಸಾತ್ವಿಕ ಚಿಹ್ನೆಗಳನ್ನು ನನ್ನ ಮನಸ್ಸಿನಲ್ಲಿ ಏಕೆ ನಿಲಿಸುತ್ತಿಲ್ಲ?ನನ್ನ ಮನಸ್ಸು ಚಂಚಲವಾಗಿದೆ. ಸ್ಥಿರವಾಗಿ ನಿಲ್ಲುತ್ತಿಲ್ಲ. ಬಾ, ತಂದೆ, ಬೇಗ ಬಂದು ನನ್ನನ್ನು ರಕ್ಷಿಸು.

“ಹೇ ನರಹರಿ, ಅನಂತಾ, ಸರ್ವವ್ಯಾಪಿ, ತ್ವರೆಮಾಡು. ನನ್ನಲ್ಲಿ ದಯೆತೋರು. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ತಾಯಿ ಓಡಿ ಬರುತ್ತಾಳೆಯಲ್ಲವೆ? ನೀನೇ ನನ್ನ ತಾಯಿ, ತಂದೆ, ಸಖ, ನನ್ನ ವಂಶವೆನ್ನುವುದು ಲೌಕಿಕ ವ್ಯವಹಾರಕ್ಕೆ ಮಾತ್ರವೇ. ನೀನೇ ನನ್ನ ಕುಲದೈವ. ಹಾಗೆಂದೇ ಭಕ್ತಿಯಿಂದ ನಿನ್ನನ್ನು ಭಜಿಸುತ್ತಿದ್ದೇನೆ. ನೀನು ಸರ್ವಗತನು. ನೀನೇ ನೃಸಿಂಹ ಸರಸ್ವತಿ. ಸರಸ್ವತಿ ಎನ್ನುವ ಹೆಸರೇ ನನ್ನನ್ನು ನಿನಗೆ ಅರ್ಪಿತಮಾಡಿಕೊಂಡಿದ್ದು. ನೀನೇ ನನ್ನ ಆಶ್ರಯದಾತ. ನಿನ್ನ ದ್ವಾರಸ್ಥನಾದ ನನಗೇಕೆ ಇಷ್ಟು ದೈನ್ಯ? ಇಷ್ಟು ಸಂಕಟ? ಈ ಚಿಂತೆ ಸಂಕಟಗಳನ್ನು ನನಗೇಕೆ ಉಂಟುಮಾಡಿದ್ದೀಯೋ ಹೇಳು ಭಕ್ತವತ್ಸಲನೆಂದು ನೀನು ಪ್ರಸಿದ್ಧನಲ್ಲವೇ? ಕೃಪಾನಿಧಿ, ದೀನಬಂಧು, ಅನಂತ ಸದ್ಗುಣಗಳ ಮೂರ್ತಿ. ಹೇ ಅನಂತ, ನೀನೇ ಪರಮಾತ್ಮ. ತ್ರಿನಾಥ. ದಯಮಾಡು. ನನ್ನನ್ನು ಬಿಡಬೇಡ. ಹೇ ವಿಶ್ವಪಾಲಕಾ, ನೀನು ದಯಾಳುವೆಂದು ಖ್ಯಾತಿಪಡೆದವನಲ್ಲವೇ? ದೇವತೆಗಳಲ್ಲೆಲ್ಲ ನೀನೇ ಬಹುದಾತನು. ದೇವತೆಗಳಿಗೂ ನೀನೇ ಬಹುದಾತ. ಹೇ ಸದ್ಗುರು, ನಿನ್ನನ್ನು ಬಿಟ್ಟು ನಾನು ಇನ್ನಾರನ್ನು ಯಾಚಿಸಲಿ? ನೀನೇ ನನ್ನ ದಾತ. ನೀನೇ ನನ್ನ ಪರದೈವವಲ್ಲವೇ? ನಿನಗಿಂತ ಬೇರೆ ದಾತರಿನ್ನಾರಿದ್ದಾರೆ? ಈ ವಿಶ್ವಕ್ಕೆಲ್ಲಾ ನೀನೇ ನಿತ್ಯಪೋಷಕ. ನೀನೇ ಸರ್ವವೇತ್ತ, ಸರ್ವಜ್ಞ ಎಂದು ಶ್ರುತಿಗಳು ಸಾರುತ್ತಿವೆ. ಸರ್ವಜ್ಞನಾದ ನಿನಗೆ ನಾನು ಸಾಕ್ಷಿ ಹೇಗೆ ಆಗಬಲ್ಲೆ? ಸರ್ವಸಾಕ್ಷಿತ್ವವೆನ್ನುವ ಲಕ್ಷಣ ನಿನ್ನಲ್ಲೇ ಇದೆ. ಅದರಿಂದ ನೀನು ನನ್ನನ್ನು ಉಪೇಕ್ಷಿಸಲಾಗದು. ಯಾರು, ಎಲ್ಲಿ, ಹೇಗೆ ಎನ್ನುವುದೆಲ್ಲಾ ನಿನಗೆ ತಿಳಿಯುತ್ತದೆಯಲ್ಲವೇ? ಹಾಗಿರುವಾಗ, ಹೇ ದಯಾಳು ಈ ಉಪೇಕ್ಷೆಯಾಕೆ? ನೀನು ಸರ್ವವೇತ್ತನಾದದ್ದರಿಂದ ನನ್ನ ಸ್ಥಿತಿ ಹೇಗೆ ಎನ್ನುವುದು ತಿಳಿಯುತ್ತದೆಯಲ್ಲವೇ? ಹೇ ತಂದೆ, ಈ ಬಾಲಕ ಹಸಿದುಗೊಂಡಿದ್ದಾನೆ ಎಂಬುದು ನಿನಗೆ ತಿಳಿಯದೇ? ತನ್ನ ಮಗು ಹಸಿದುಗೊಂಡು ಅಳುತ್ತಿದೆ ಎಂಬುದನ್ನು ತಿಳಿದ ಮಾನವಮಾತ್ರಳಾದ ಯಾವ ತಾಯಿತಾನೇ ಅದನ್ನು ಉಪೇಕ್ಷಿಸುತ್ತಾಳೆ? ದೇವನಾದ ನೀನು ಸುಮ್ಮನೇಕಿದ್ದೀಯಾ? ನನಗೆ ಇವನೇನೂ ಕೊಟ್ಟಿಲ್ಲ ಎಂದು ನನ್ನನ್ನು ಉಪೇಕ್ಷಿಸುತ್ತಿದ್ದೀಯ ಹೇಳು? ಹೇ ಬಹುಪ್ರದ, ನನ್ನಿಂದ ಸ್ವಲ್ಪ ಗ್ರಹಿಸಿ ನನಗೆ ಅಧಿಕವಾಗಿ ಕೊಡಬೇಕೆಂದುಕೊಂಡಿದ್ದೀಯಾ? ನೀನು ಬಲಿಚಕ್ರವರ್ತಿಯಿಂದ ಸಮಸ್ತಭುವನವನ್ನು ಗ್ರಹಿಸಿ ಅವನಿಗೆ ಸ್ವರ್ಗರಾಜ್ಯ ನೀಡಿ ಪ್ರಸಿದ್ಧಿಯಾದೆ ಎಂದು ಹೇಳುತ್ತಾರೆ. ಇನ್ನೊಂದು ಮಾತು. ನೀನು ವಿಭೀಷಣನಿಗೆ ಸ್ವರ್ಣಮಯವಾದ ಲಂಕೆಯನ್ನು ಕೊಟ್ಟೆಯಲ್ಲವೇ? ಹೇ ಈಶ್ವರಾ, ಅವನು ಅದಕ್ಕೆ ಮುಂಚೆ ನಿನಗೇನು ಕೊಟ್ಟಿದ್ದ? ಹಿಂದೆ ನೀನು ಧ್ರುವನಿಗೆ ಧೃವಸ್ಥಾನವನ್ನು ಕೊಟ್ಟೆಯಲ್ಲವೆ? ಆ ಧ್ರುವ ನಿನಗೇನು ಕೊಟ್ಟಿದ್ದ? ಇಷ್ಟೆಲ್ಲಾ ಇದ್ದರೂ ನನ್ನನ್ನು ಏನಾದರೂ ಕೊಡು ಎಂದು ಏಕೆ ಕೇಳುತ್ತೀಯೆ? ನೀನು ಸೇವಕರ ಪರಿಪಾಲಕ. ಕ್ಷತ್ರಿಯರನ್ನು ನಿಶ್ಶೇಷಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ಪರಶುರಾಮನಾಗಿ ಹಂಚಿದೆ. ಆ ವಿಪ್ರರು ನಿನಗೇನು ಕೊಟ್ಟರು? ಹೇ ಪೋಷಕಾ, ನಿನಗೆ ನಾನೇನು ಕೊಡಬಲ್ಲೆ? ಸರ್ವಸೃಷ್ಟಿಗೂ ನೀನೇ ಪೋಷಕ. ಹೇ ಲಕ್ಶ್ಮೀಪತಿ, ದರಿದ್ರನಾದ ನಾನು ನಿನಗೇನು ಕೊಡಬಲ್ಲೆ? ನಾನು ಮಶಕದಂತೆ ದುರ್ಬುದ್ಧಿಯುಳ್ಳವನು. ಪರಾಧೀನನಾದ ನಾನೆಲ್ಲಿ? ಶ್ರೀಮಂತನಾದ ನೀನೆಲ್ಲಿ? ಮಹಾಲಕ್ಷ್ಮಿ ವಿಲಾಸದಿಂದ ನಿನ್ನೆದುರಿಗೆ ನರ್ತನಮಾಡುತ್ತಾಳೆ. ಹೇ ಸದಾನಂದಾ, ಇದಕ್ಕಿಂತ ಹೆಚ್ಚಾಗಿ ಏನನ್ನುತಾನೇ ಕೊಡಬಲ್ಲೆ ನೀನೇ ಹೇಳು. ಹೇ ಹೃಷೀಕೇಶ, ನಾನೊಬ್ಬ ಗರ್ವಗಂಧಿ. ನಿನ್ನ ಮಗು. ಮಗು ತಾಯಿಯ ಉಡಿಸೇರಿ ಕ್ಷುಧಾತುರನಾಗಿ, ದೀನನಾಗಿ ಹಾಲು ಕೇಳುವಂತೆ ಮುಖ ತೋರಿಸಿದಾಗ ಆ ತಾಯಿ ಮಗುವನ್ನು ಮೊದಲು ಏನಾದರೂ ಕೊಡು ಎಂದು ಕೇಳುತ್ತಾಳೆಯೇ? ಹೇ ಗುರುನಾಥಾ, ಆದರೆ ನೀನೀಗ ಕೇಳುತ್ತಿದ್ದೀಯೆ. ನಾನೇನು ಕೊಡಬಲ್ಲೆ? ಏನಾದರು ತೆಗೆದುಕೊಂಡು ಕೊಡುವವನು, ಸೇವೆ ಮಾಡಿಸಿಕೊಂಡು ಕೊಡುವವನು ದಾತ ಹೇಗಾಗುತ್ತಾನೆ?
ಹೇ ದಯಾರ್ದ್ರಹೃದಯಾ, ಸದ್ಗುರು, ದಯಾನಿಧಿ, ನಿನ್ನೆದುರಿಗೆ ನಾನು ಹೇಳುವುದು ತಾನೇ ಏನಿದೆ?”

“ಹೇ ಕೊಡುಗೈದಾತ, ಸದ್ಗುರು, ದಯಾನಿಧೇ, ನಿನ್ನ ಮುಂದೆ ನಾನೇನು ಹೇಳಬಲ್ಲೆ? ಈಗ ನನ್ನನ್ನು ಕೊಡು ಎಂದು ಕೇಳುವುದು ನಿನಗೆ ತರವಲ್ಲ. ಹೇ ಪ್ರಭು, ಹದಿನಾಲ್ಕು ಲೋಕಗಳ ರಕ್ಷಕ ನೀನು. ’ಸೇವೆ ಮಾಡಿಸಿಕೊಂಡೇ ನೀಡುವುದು ನನ್ನ ಇಚ್ಛೆ. ಆದ್ದರಿಂದ ನಿನ್ನ ಅಭೀಷ್ಟವನ್ನು ತೀರಿಸಲು ಸಾಧ್ಯವಿಲ್ಲ.’ ಎಂದು ನೀನು ಹೇಳಬಾರದು. ಸೇವೆಯನ್ನಿಚ್ಛಿಸಿ ಕೊಡುವವನು ಹೊಡುಗೈದಾತ ಹೇಗಾದಾನು? ಸೇವ್ಯ-ಸೇವಕ ಎಂಬ ಭಾವವಿರುವೆಡೆಯಲ್ಲಿ ದಾತೃತ್ವಕ್ಕೆಲ್ಲಿದೆ ಜಾಗ? ಹೇ ಭಗವಂತ, ಭಕ್ತಿಯೋಗವನ್ನು ತಿಳಿದವನು ನೀನು. ಅಕಾಶದಲ್ಲಿನ ಮೇಘಗಳು ಭೂಮಿಯಲ್ಲಿ ವಾಪಿಕೂಪಗಳಿರುವ ಕಡೆ ಯಾವ ಅಪೇಕ್ಷೆಯೂ ಇಲ್ಲದೆ ನೀರು ಸುರಿಸುತ್ತವೆ. ಹಾಗೆ ನೀರು ಸುರಿಸುವ ಮೇಘಗಳಿಗೆ ವಾಪಿಕೂಪಗಳು ಯಾವ ಸೇವೆಯನ್ನೂ ಮಾಡುವುದಿಲ್ಲ ಎಂಬುದು ತಥ್ಯವಲ್ಲವೇ? ನೀನು ಈಶ್ವರ. ವೇತನ ಗ್ರಾಹಿಯಲ್ಲ. ಸೇವೆಯನ್ನಪೇಕ್ಷಿಸುವವನು ದಾತ ಹೇಗಾದಾನು? ನೀನು ಉದಾರನೆಂದು ಹೇಗೆ ಶ್ಲಾಘಿಸಲಿ? ಹೇ ಸ್ವಾಮಿ, ಸೇವೆ ಮಾಡಬಾರದೆಂಬ ಹಠವೇನೂ ನನ್ನಲ್ಲಿಲ್ಲ. ಸೇವೆ ಹೇಗೆ ಮಾಡಬೇಕೆಂಬುದು ನನಗೆ ತಿಳಿಯದು.

ದೇವ ದೇವ, ನನ್ನ ಪೂರ್ವಿಕರೆಲ್ಲರು ನಿನ್ನ ಸೇವಕರೇ ಆಗಿದ್ದರಲ್ಲವೇ? ನಾನು ಸೇವಕ ವಂಶದಲ್ಲಿ ಹುಟ್ಟಿದವನು. ನಾನೊಬ್ಬ ಆಲಸಿ. ದುಷ್ಟಬುದ್ಧಿಯವನು. ಆದರೂ ಈ ದರಿದ್ರನನ್ನು ನಿನ್ನ ಸೇವಕನೆಂದು ತಿಳಿದುಕೊ. ಹೇ ಸ್ವಾಮಿ, ಸೇವಕನ ವಂಶದಲ್ಲಿ ಜನಿಸಿದವರನ್ನು ಈ ಲೋಕದಲ್ಲಿ ರಾಜನಾದವನು ಪುತ್ರವತ್ ರಕ್ಷಿಸುತ್ತಾನೆಂಬುದು ಪ್ರಸಿದ್ಧವಲ್ಲವೇ? ಆ ನ್ಯಾಯದಿಂದಲಾದರೂ ನಾನು ಈಗ ಸೇವಕನಲ್ಲದಿದ್ದರೂ ನನ್ನನ್ನು ರಕ್ಷಿಸು. ನಿನ್ನ ಸೇವಕರಾದ ನನ್ನ ಪೂರ್ವಿಕರು ನಿನ್ನ ಪಾದಗಳಲ್ಲಿ ನಿರಪೇಕ್ಷೆಯಿಂದ ಸೇವೆ ಮಾಡಿದ್ದಾರೆ. ಆದ್ದರಿಂದ ನೀನು ನನಗೆ ಋಣಪಟ್ಟಿದ್ದೀಯೆ. ಆ ನನ್ನ ಋಣವನ್ನು ತೀರಿಸುವುದಕ್ಕಾದರೂ ನನ್ನನ್ನು ರಕ್ಷಿಸು.

ಹೇ ಕೃಪಾನಿಧಿ, ನಮ್ಮಿಂದ ಪಡೆದ ಋಣವನ್ನು ನಮಗೇ ಕೊಡಬೇಕು. ನೀನು ನನ್ನ ಋಣವನ್ನು ತೀರಿಸದಿದ್ದರೆ ಸಾಲಗಾರನೆಂದು ನಿನ್ನನ್ನು ತಪ್ಪಿತಸ್ಥನನ್ನಾಗಿ ಎಣಿಸುತ್ತೇನೆ. ಹೇ ಪರಮೇಶ್ವರ, ನೀನು ಕಾಠಿಣ್ಯವನ್ನು ತೋರಿಸುತ್ತಿರುವಂತಿದೆ. ಈ ಸನಾತನ ಸೇವಕನಲ್ಲಿ ಕಾಠಿಣ್ಯವೇಕೆ ತಂದೆ? ಹೇ ಸ್ವಾಮಿ, ಸೇವಕನಲ್ಲಿ ಸ್ವಾಮಿಗೆ ಸ್ಪರ್ಧೆಯೇಕಯ್ಯ? ಸ್ಪರ್ಧೆ ಎನ್ನುವುದು ಸಮಾನರ ಮಧ್ಯೆ ಮಾತ್ರ ಸಮಂಜಸವಲ್ಲವೇ? ಹೇ ಈಶ್ವರ, ನಾನೆಲ್ಲಿ, ನೀನೆಲ್ಲಿ. ಭಕ್ತವತ್ಸಲನಾದ ನಿನ್ನ ಮನಸ್ಸು ಇದಕ್ಕೆ ಮುಂಚೆ ಬಹಳ ಮೃದುವಾಗಿತ್ತು. ದೈತ್ಯರು ಹಿಂಸಿಸಿದ ಪ್ರಹ್ಲಾದನಲ್ಲಿ ನೀನು ತೋರಿಸಿದ ವಾತ್ಸಲ್ಯ ಬಹಳ ಪ್ರಸಿದ್ಧಿಯಾದುದಲ್ಲವೇ? ದಯನೀಯನಾದ ಸೇವಕ ಅಪರಾಧ ಮಾಡಿದರೆ ದಯಾಳುವಾದ ಸ್ವಾಮಿ ಅವನ ಮೇಲೆ ಕಠಿಣನಾಗುವುದು ಅವನಿಗೆ ಶೋಭೆ ತರುವಂತಹುದೇ? ನನ್ನ ಅಪರಾಧದಿಂದ ನಿನ್ನ ಮನಸ್ಸು ನನ್ನ ಮೇಲೆ ಕ್ರೋಧಗೊಂಡಿದೆಯೇ/ ಅಸಂಗತ ಮಾತುಗಳನ್ನಾಡಿದ ಈ ಬಾಲಕನನ್ನು ಕರುಣೆಯಿಂದ ನೋಡುವುದಿಲ್ಲವೇ? ಅಸಂಬದ್ಧಮಾತುಗಳನ್ನಾಡುತ್ತಾ ತೊಡೆಯಮೇಲೆ ಕುಳಿತ ತನ್ನ ಮಗುವನ್ನು. ಮಾತುಮಾತಿಗೂ ಹೊಡೆಯುತ್ತಿದ್ದರೂ, ಮಾನವ ಮಾತ್ರಳಾದ ತಾಯಿಯು ಆ ಬಾಲಕನ ಮೇಲೆ ಕೋಪಗೊಂಡು ಬಿಟ್ಟುಬಿಡುತ್ತಾಳೆಯೇ? ಹಾಗಲ್ಲದೆ ಅವಳು ಆ ಮಗುವನ್ನು ಅಪ್ಪಿಕೊಂಡು ಮುದ್ದುಮಾಡುತ್ತಾಳೆಯಲ್ಲವೇ?

ದೇವದೇವ ಏಕೆ ಮೌನವಾಗಿದ್ದೀಯೆ? ನಾನು ಮಾಡಿದ ತಪ್ಪಾದರೂ ಏನು? ಇನ್ನೂ ಏನೆಂದು ನಿನ್ನನ್ನು ಪ್ರಾರ್ಥಿಸಲಿ? ಹೃಷೀಕೇಶ, ನೀನೇ ನನ್ನ ತಂದೆ. ಪರಮೇಶ್ವರ, ತಂದೆ ತನ್ನ ಮಗನಮೇಲೆ ಕೋಪಗೊಳ್ಳುತ್ತಾನೆಯೇ? ತಂದೆ ಮಗನ ಮೇಲೆ ಕೋಪಗೊಂಡರೆ ತಾಯಿ ಅವನನ್ನು ಸಮಾಧಾನ ಮಾಡುತ್ತಾಳೆ. ಮತ್ತೊಮ್ಮೆ, ಅಪರಾಧವೆಸಗಿದ ಮಗನಮೇಲೆ ತಾಯಿ ಕೋಪಗೊಂಡರೆ ತನ್ನ ದುಃಖವನ್ನು ಹೇಳಿಕೊಳ್ಳಲು ಬಂದ ಮಗನನ್ನು ತಂದೆ ಸಮಾಧಾನಗೊಳಿಸುತ್ತಾನೆ. ನನಗೆ ತಾಯಿ ತಂದೆ ಇಬ್ಬರೂ ನೀನೇ ಅಲ್ಲವೇ? ನಿಮಿತ್ತ-ಉಪಾದಾನ ಕಾರಣದಿಂದ ಜನನಿ ಜನಕರಿಗಿಂತ ನೀನು ಭಿನ್ನನಲ್ಲ. ಸದ್ಗುರು ನೀನೇ ಕೃದ್ಧನಾದರೆ ಕ್ಷಮಿಸೆಂದು ಯಾರನ್ನು ಕೇಳಿಕೊಳ್ಳಲಿ? ಸ್ವಾಮಿ, ನನ್ನ ಮೇಲೆ ದಯೆತೋರು. ದೀನವತ್ಸಲ. ಅನಾಥಬಂಧು. ನಿನ್ನ ಮುಂದೆ ಸಾಷ್ಟಾಂಗವೆರಗುತ್ತಿರುವ ನಾನು ನಿನ್ನ ದಾಸ. ದೀನ. ನನ್ನನ್ನು ರಕ್ಷಿಸು ತಂದೆ. ನೀನು ಅನಾಥರಕ್ಷಕನೆಂದು ಹೇಳುತ್ತಾರೆ. ಹೇ ಅನಾಥನಾಥ, ನಾನೊಬ್ಬ ಅನಾಥ. ನನ್ನನು ಕಾಪಾಡು. ಕೃಪಾಳು, ನೀನು ದೀನರ ರಕ್ಷಕನೆಂದು ವೇದಗಳು ವರ್ಣಿಸುತ್ತಿವೆ. ನೀನು ಏಕೆ ನನ್ನ ಬಿನ್ನಪವನ್ನು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ? ಯಾವ ಕಾರಣಕ್ಕಾಗಿ ನನ್ನ ಈ ದೀನಾಲಾಪಗಳು ನಿನ್ನ ಕಿವಿಯನ್ನು ಸೇರುತ್ತಿಲ್ಲ? ಗುರುರಾಜ, ನೀನು ವಿಮನಸ್ಕನಾದರೆ ಹೇಗೆ ಸ್ವಾಮಿ? ನೀನು ನಿರ್ದಯತ್ವವನ್ನು ವಹಿಸಿದ್ದೀಯೆ ಎಂದು ನನಗೆ ತೋರುತ್ತಿದೆ. ಏಕೆಂದರೆ ನನ್ನ ಈ ಬಿನ್ನಪಗಳನ್ನು ಕೇಳಿದರೆ ಕಲ್ಲೂ ಕೂಡಾ ಕರಗುತ್ತದೆ. ನಿನ್ನ ದಯೆ ಎಲ್ಲಿ ಅಡಗಿಹೋಗಿದೆ ತಂದೆ? ಜನ ನಿನ್ನನ್ನು ಹೇಗೆ ಕರುಣಾಕರ ಎನ್ನುತ್ತಾರೆ? ಹೇ ಸ್ವಾಮಿ, ನೀನು ದಯಾಘನನೆನ್ನುವುದೇ ನಿಜವಾದರೆ ಈಗಲೇ ನನ್ನ ಮೇಲೆ ದಯೆ ತೋರಿಸು.” ಎಂದು ಹೇಳುತ್ತಾ ಮೂರ್ಛಿತನಾದನು. ದಯಾಸಿಂಧುವಾದ ಆ ಗುರುನಾಥ, ಭಯಗೊಂಡ ತನ್ನ ಕರುವಿನಮೇಲೆ ವಾತ್ಸಲ್ಯವನ್ನು ತೋರುವ ಹಸು ಓಡಿ ಬರುವಂತೆ, ತಕ್ಷಣವೇ ನಾಮಧಾರಕನಿಗೆ ಸ್ವಪ್ನದಲ್ಲಿ ಸಾಕ್ಷಾತ್ಕರಿಸಿದನು.

ಸ್ವಪ್ನದಲ್ಲಿ ನಾಮಧಾರಕನು ಎದ್ದು, ಬಂದಿದ್ದ ಗುರುವಿನ ಪಾದಗಳಲ್ಲಿ ಸಾಷ್ಟಾಂಗವೆಸಗಿ, ಗುರುವಿನ ಪಾದಗಳನ್ನು ಹಿಡಿದುಕೊಂಡನು. ಪಾದಗಳ ಮೇಲಿದ್ದ ಧೂಳನ್ನು ತನ್ನ ಕೂದಲಿನಿನಂದ ಒರೆಸಿ, ಆನಂದದಿಂದ ಸುರಿಯುತ್ತಿದ್ದ ಬಾಷೊಅಜಲಿಗಳಿಂದ ತೊಳೆದನು. ಉಪಚಾರಗಳನ್ನೆಲ್ಲಾ ಮಾಡಿ, ಶುಭವಾದ ಗಂಧಾಕ್ಷತೆಗಳಿಂದ ಅಲಂಕರಿಸಿ, ಆ ಈಶ್ವರನನ್ನು ತನ್ನ ಹೃದಯಮಂದಿರದಲ್ಲಿ ಪ್ರತಿಷ್ಠಿಸಿಕೊಂಡು, ಆನಂದಭರಿತನಾದ ಆ ನಾಮಧಾರಕ ಗುರುವಿಗೆ ಸದ್ಭಕ್ತನಾದನು.

ಆ ಭಕ್ತನನ್ನು ನೋಡಿದ ಗುರುವು ಅವನ ಮನಸ್ಸಿನಲ್ಲಿ ಸಿದ್ಧಮುನಿಯಾಗಿ ನಿಂತನು. ಸಂತೋಷದಿಂದ ಗುರುನಾಥನು ತನ್ನ ನಿಜಭಕ್ತನ ಹೃದಯದಲ್ಲಿ ನೆಲೆನಿಂತದ್ದರಿಂದ ಉಂಟಾದ ಆನಂದವು ತನಗೂ ಉಂಟಾಗಲೆಂದು ಸರಸ್ವತಿಯು ಮೋದಿತಳಾದಳು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s