ಬೇಸರ ಯಾರಿಗಾಗುವುದಿಲ್ಲ ಹೇಳಿ? ಮನಸ್ಸು ಇರುವವರೆಗೂ ಇದರ ಗೊಡವೆ ತಪ್ಪಿದ್ದಲ್ಲ. ಬೇಸರವನ್ನು ವಿಜೃಂಭಿಸುವಲ್ಲಿ ಕವಿಗಳೇನು ಹಿಂದುಳಿದಿಲ್ಲ ಬಿಡಿ….ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…ಇಂಥಾ ಒಂದು ಸಂಜೆಯಲ್ಲೇ ಮನಸ್ಸು ರಾಡಿಯಾಗಿ, ಬೋಡಿಯಾಗಿ, ಜೋಡಿಯಿಲ್ಲದ ಮೂಡಿಯಾಗಿ, ಕೊನೆಗೆ ತಾನೇ ಕಿಡಿಗೇಡಿಯಾಗಿ, ಬೇಸರ ಪುಡಿ ಪುಡಿಯಾಗಿ…ಮತ್ತೆ ಹೂನಗು ಅರಳಬೇಕು!….ಕತ್ತಲಾದ ಮೇಲೆ ಬೆಳಕು ಖಂಡಿತ……ಕಾರ್ಮೋಡದಂಚಿನ ಬೆಳ್ಳಿ ಕಿರಣ….ಇವೆಲ್ಲಾ ನಿಜವೇ?
ಯಾವುದು ಹೇಗೋ…ಅಡ್ರಿನಲಿನ್ ಎನ್ನುವ ಹಾರ್ಮೋನ್ ಬಗ್ಗೆ ಕೇಳಿದ್ದೀರಾ? ಅತೀವ ಆತಂಕದ ಕ್ಷಣಗಳಲ್ಲಿ ಬಿಡುಗಡೆಯಾಗುವ ಈ ವಸ್ತು “ಫೈಟ್ ಅಥವ ಫ್ಲೈಟ್” ತಂತ್ರದಿಂದ ಕಾರ್ಯ ನಿರ್ವಹಿಸುತ್ತದೆ. ಆತಂಕವನ್ನೆದುರಿಸಲು ಶರೀರವನ್ನು ಹಾಗು ಮನಸ್ಸನ್ನು ತಯಾರು ಮಾಡುತ್ತದೆ. ಈ ಗ್ರಂಥಿ ಮೂತ್ರಜನಕಾಂಗದ ಮೇಲೆ ಸುಮಾರು ೩ ಇಂಚುಗಳಷ್ಟು ಉದ್ದಕ್ಕೆ ತನ್ನ ಸ್ಥಾನವನ್ನಲಂಕರಿಸಿದೆ. ಆದರೆ ಇದರ ಕಾರ್ಯನಿರ್ವಹಣೆಯ ವೈಖರಿ ನೋಡಿ….ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನಿಸಲಿಲ್ಲವೆ?
ಕೆಲವೊಮ್ಮೆ ಅತಿ ಸಣ್ಣ ವಸ್ತುಗಳು ದೊಡ್ಡ ಪ್ರಮಾಣದ ಬೇಸರಗಳ ಬಾಯ್ಮುಚ್ಚಿಸಲು ಕಾರಣವಾಗುತ್ತವೆ. ಅತೀವ ಸಂಕಟದ ಹೊಟ್ಟೆನೋವು ಬಾಧಿಸುತ್ತಿರುವಾಗ ಗೆಳತಿಯ ಪುಟ್ಟ ಎಸ್.ಎಮ್.ಎಸ್……ತುಟಿಯಂಚಲ್ಲಿ ನಗೆಯುಕ್ಕಿಸುವಲ್ಲಿ ಸಮರ್ಥವಾಗಬಹುದು. ಅಪ್ಪ-ಅಮ್ಮನ ಜಗಳದಲ್ಲಿ ಮಗುವಿನ ಮುದ್ದು ಮೊದ್ದು ತೊದಲು ನುಡಿಯೊಂದು ಜಗಳದ ವಸ್ತುವೇ ಬಡವಾಯ್ತು ಎನ್ನಿಸುವ ತಂಗಾಳಿ ಬೀಸಿಬಿಡಬಹುದು. ಹೀಗೆ….ಸುತ್ತಮುತ್ತಲಿನ ಹಲವಾರು ನಡೆದಾಡುವ ಸಂತಸಗಳು ನಮ್ಮನ್ನು ಸುತ್ತುವರೆದಿರುತ್ತವೆಯೇನೋ!!!! ಗಮನಿಸುವ ತಾಳ್ಮೆ ನಮಗೆ ಬೇಕು ಅಲ್ಲವೆ?
ಹಲವು ಸಾರಿ ಪುಟ್ಟ ಪುಟ್ಟ ಘಟನೆಗಳು ಬದುಕುವ ಕಲೆಯನ್ನು ಕಲಿಸುತ್ತಾ ಸಾಗುತ್ತಿರುವ ಮೊಬೈಲ್ ಜ್ಞಾನಕೇಂದ್ರಗಳಾಗಿರುತ್ತವೆ. ಬದುಕುವುದು ಹೇಗೆ ಎನ್ನುವುದಕ್ಕೆ ಅನೇಕ ಸೂತ್ರಗಳೂ, ವಾದ-ವಿವಾದಗಳೂ ಬದುಕಿನ ಜೊತೆ ಜೊತೆಗೇ ಹುಟ್ಟಿ ಬೆಳೆಯುತ್ತವೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೇ ಸ್ಥಿತಪ್ರಜ್ಞನಾಗಿರು ಎಂದುಬಿಟ್ಟಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ. ಅಲ್ಲಾ…ಅಪರೂಪಕ್ಕೆ ಒಮ್ಮೆ ಯಾರಾದರೂ ಹೊಗಳಿದರೆ ಹಿಗ್ಗಿ ಹೀರೇಕಾಯಾಗಿ ಹಲ್ಲು ಕಿರಿಯುವುದು ಬಿಟ್ಟು ಶ್ರೀಮದ್ಗಾಂಭೀರ್ಯ ನಟಿಸುವುದೇ….ಅದಾಗುವುದಿಲ್ಲ ಬಿಡಿ! ಹಾಗೇ ಮನೆಯಲ್ಲಿ ಮಾರಾಮಾರಿ ಜಗಳವಾಗುತ್ತಿರುವಾಗ ನಗುನಗುತಾ ನಲಿ ನಲಿ ಎಂದು ಕೂತರೆ ಹುಚ್ಚಾಸ್ಪತ್ರೆ ಗ್ಯಾರಂಟಿಯಷ್ಟೆ! ನೀವೇನೇ ಅನ್ನಿ…ಮನಸ್ಸು ಎನ್ನುವ ಮಾಯಾಂಗನೆ ಬಲು ಚಂಚಲೆ. ಎಲ್ಲಿ ಅಳಿಸುವಳೋ, ಎಲ್ಲಿ ನಗಿಸುವಳೋ, ಎಲ್ಲಿ ನಿಲ್ಲಿಸುವಳೋ, ಎಲ್ಲಿ ತೇಲಿಸಿ ಮುಳುಗಿಸುವಳೋ ಅರಿವಾಗದಂತೆ ಮೀನ ಹೆಜ್ಜೆಯಿಡುತ್ತಲೇ ನಡೆಯುವ ಮೋಹನಾಂಗಿಯವಳು. ಆದರೂ ಸಮಯೋಚಿತ ತಿಳಿಹಾಸ್ಯಪ್ರಜ್ಞೆ ಎಲ್ಲಿಯವರೆಗೆ ನಮ್ಮೊಂದಿಗಿರುವುದೋ ಅಲ್ಲಿಯವರೆಗೂ ನಮ್ಮನ್ನು ಅಲ್ಲಾಡಿಸಲು ಯಾವ ಡಿಪ್ರೆಷನ್ ಗೂ ಸಾಧ್ಯವಿಲ್ಲ ಬಿಡಿ. ಇದರರ್ಥ ಬದುಕನ್ನು ಹಗುರವಾಗಿ ಪರಿಗಣಿಸಿ ಎಂದಲ್ಲ, ಬರುವ ಕಷ್ಟ-ಸುಖಗಳನ್ನು ಹಗುರವಾಗಿ ನೋಡಿ ಪರಿಹಾರಕ್ಕೆ ಗಮನಕೊಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು. ಹೀಗೆ ನಮ್ಮನೆ ಆಮೆ ನನಗೊಂದು ಪಾಠ ಕಲಿಸಿ ನನ್ನ ಹೃದಯದಲ್ಲಿ ಮೇಷ್ಟ್ರ ಸ್ಥಾನ ಪಡೀತು ಅಂದ್ರೆ ನಂಬ್ತೀರಾ?
ಅಯ್ಯೋ..ಆ ಆಮೆದೇ ದೊಡ್ಡ ಕಥೆ ಕಣ್ರೀ….ನನ್ನ ಮಗನ ಗೆಳೆಯನ ತೋಟದ ಬಾವಿಯಲ್ಲಿ ಜಾಯಿಂಟ್ ಫ್ಯಾಮಿಲಿನಲ್ಲಿ ಜಗಳ ಕಾಯುವ ಬಜಾರಿ ಕಿರಿ ಮಗಳಂತಿದ್ದ ಇದಕ್ಕೆ ತಾನು ನಮ್ಮನೆಗೆ ಬಂದಿದ್ದು, ಪೇಯಿಂಗ್ ಗೆಸ್ಟ್ ಆಗಿ ತಾನು ನಮ್ಮನೆ ಅಕ್ವೇರಿಯಂನಲ್ಲಿ ನೆಲೆಸಿದ್ದು ಅತೀವ ಹೆಮ್ಮೆ ಮೂಡಿಸಿದೆ. ಪೇಯಿಂಗ್ ಗೆಸ್ಟ್ ಹೇಗೆ ಅಂತೀರಾ? ಇವಳು ಕೊಡುವ ಸಂತೋಷ ಎಷ್ಟು ದುಡ್ಡಿಗೂ ಸಿಗೋಲ್ಲ ಬಿಡ್ರೀ! ಅದೇನು ಧಿಮಾಕು ಅಂತೀರಾ ಈಕೆಗೆ? ಮನೆ ಮಂದಿಯೆಲ್ಲಾ ಅವರವರ ತಲೆಗೊಂದೊಂದರಂತೆ ಹೆಸರಿಟ್ಟು ಇವಳನ್ನು ಕರೆದರೂ ತನ್ನೆಲ್ಲಾ ಹೆಸರೂ ಇವಳಿಗೆ ನೆನಪಿದೆ ಗೊತ್ತಾ!? ಮಿಟ್ಟೂ, ಟರ್ಟೂ, ಚಿಂಟೂ…ಇದೆಲ್ಲದರ ಜೊತೆಗೆ ಇಟ್ಟಿರೊ ಅಚ್ಚ ಕನ್ನಡದ ಹೆಸರು “ಕಣ್ಮಣಿ.” ಇದೊಂದು ಉಭಯ ಜೀವಿ. ನೀರು ಮತ್ತು ನೆಲ ಎರಡರ ಮೇಲೂ ಬಾಳುವ ತಾಕತ್ತು ಹೊಂದಿರೊ ಪ್ರಾಣಿ. ಯಾವತ್ತೂ ಬೇಸರಗೊಂಡು ಚಲನೆ ಮರೆತು ಕುಳಿತ ದಿನಗಳೇ..ಉಹೂಂ…ನನಗೆ ನೆನಪಿಲ್ಲ. ನೆಲದ ಮೇಲೆ ಬಿಟ್ಟೊಡನೆ ತಪ್ಪು ಹೆಜ್ಜೆಯಿಡುತ್ತಾ ಓಡುವ ಮಕ್ಕಳ ಥರ…ಚಿನ್ನಾಟವಾಡುತ್ತಾ ಓಡಲು ಮೊದಲಾಗುತ್ತಾಳೆ. “ಮೊಲ ಮತ್ತು ಆಮೆ ಪಂದ್ಯ” ದಲ್ಲಿ ಇವಳಿದ್ದಿದ್ರೆ….ನಾನು ಛಾಲೆಂಜ್ ಮಾಡ್ತೀನಿ, ಇವಳೇ ಕಣ್ರಿ ಗೆಲ್ತಿದ್ದಿದ್ದು. ಇನ್ನು ಅಕ್ವೇರಿಯಂನಲ್ಲಿ ಬಿಟ್ಟಾಗ… ಬ್ಯಾಸ್ಕಿಂಗ್ ಏರಿಯಾ ಅಂತ ಅಕ್ವೇರಿಯಂನಲ್ಲಿ ಒಂದಿರುತ್ತೆ, ನೀರಿಂದ ಮೇಲೆ ಗಾಳಿ ಸೇವನೆಗೆ ಬಂದು ಕುಳಿತುಕೊಳ್ಳುವ ಅಟ್ಟದಂಥಾ ಜಾಗ…ಅಲ್ಲೂ ಅವಳೇ ಬಾಸ್. ಕರೆದರೆ ಕುಪ್ಪಳಿಸುತ್ತಾ ಬಂದು ನಮ್ಮ ಮಾತುಗಳನ್ನೆಲ್ಲಾ ಕತ್ತು ಕೊಂಕಿಸಿ ಕೇಳಿಕೊಂಡು, ಬಿಟ್ಟಿ ಸಲಹೆನೂ ಕೊಟ್ಟು (ಅವರವರ ಭಾವಕ್ಕೆ), ಇಷ್ಟೇನಾ ನಿನ್ನ ಗೋಳೂ…ವೆರಿ ಸಿಂಪಲ್..ಡೊಂಟ್ ವರಿ ಎನ್ನುತ್ತಾ ನೀರಲ್ಲಿ ಧುಮುಕಿ ಅಂತರ್ಧಾನಳಾಗಿಬಿಡೊ ಇವಳು ಒಮ್ಮೆ ನನ್ನ ಬದುಕಿನ ಗತಿನ ಹೇಗೆ ಬದಲಿಸಿಬಿಟ್ಳು ಅಂತೀರಾ…!!!! ಇವಳಿಗೇನೂ ಚಿಂತೆಗಳೇ ಇಲ್ಲವೇ? ದೂರದಿಂದ ಎಲ್ಲಿಂದಲೋ ಬಂದವಳು …ಮೊದ ಮೊದಲು ನನಗೆ ಇವಳ ಮೇಲಿದ್ದ ಅತೀ ಕಾಳಜಿ ನೋಡಿ ನನ್ನನ್ನು ‘ಆಹಾ ಮಳ್ಳಿ’ ಎಂದುಕೊಂಡಿರಬಹುದು…’ಲೀವ್ ಮಿ ಅಲೋನ್’ ಎಂದು ನನಗೆ ವಾರ್ನಿಂಗೂ ಕೊಟ್ಟಿರಬಹುದು. ನನ್ನ ಮಗನನ್ನು ನೋಡಿ ತನ್ನ ಅಣ್ಣನನ್ನು ಮಿಸ್ ಮಾಡಿಕೊಂಡಿರಬಹುದು. ವರ್ಲ್ಡ್ ಕಪ್ನ ನನ್ನ ಮಗನ ಜೊತೆ ತದೇಕಚಿತ್ತವಾಗಿ ನೋಡಿ, ಸಚಿನ್ ಔಟ್ ಆದಾಗ ಮುಖ ಸಿಂಡರಿಸಿಕೊಂಡು, ಕೊನೇಲಿ ಧೋನಿ ಸಿಕ್ಸ್ ಹೊಡೆದಾಗ ಸಂತೋಷದಿಂದ ನೀರಲ್ಲಿ ಲಗಾಟೆ ಹಾಕಿ ಸೆಲಿಬ್ರೇಟ್ ಮಾಡಿದ ಇವಳ ರೀತಿ….ಅಮೇಜಿಂಗ್ ಕಣ್ರೀ! ನನ್ನ ಗೆಳತಿಯ ಮೌನ ಸಂಭಾಷಣೆ (ನನ್ನ ಗೆಳತಿ ಕಣ್ಮಣಿಯ ಜೊತೆ ನನ್ನ ಹಾಗೆ ಅಬ್ಬರಿಸಿ ಬೊಬ್ಬಿರಿಯುವುದಿಲ್ಲ) ತಾಯಿಯ, ಅಕ್ಕನ ಅಥವ ಮಗಳ ನೆನಪನ್ನು ತಂದಿರಬಹುದು. ಹಲವು ಬಾರಿ ಇವಳು ಹಾಗು ನನ್ನ ಗೆಳತಿ ಇಬ್ಬರೂ ಏನೋ ತದೇಕ ಚಿತ್ತರಾಗಿ ಒಬ್ಬರನ್ನೊಬ್ಬರು ನೋಡುತ್ತಾ, ನಸು ನಕ್ಕು ಟೆಲಿಪತಿ ಮೂಲಕ ಸಂಭಾಷಿಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಉಭಯ ಕುಶಲೋಪರಿಯಂತೆ ಕಂಡರೂ ಅದೇನೇನು ವಿಷಯ ಹಂಚಿಕೊಳ್ಳುತ್ತಾರೋ ಕಾಣೆ..ತವರಿಗೆ ಬಂದು ತಾಯಬಳಿ ಕಷ್ಟ-ಸುಖ ಮಾತಾಡಿಕೊಂಡು ಗೆಲುವಾದ ಹೆಣ್ಣುಮಕ್ಕಳಂತೆ ಇಬ್ಬರೂ ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅದೇನು ಚರ್ಚೆ ನಡೆಸುತ್ತಾರೋ…ಅದು ಬಿಡಿ…ಟಾಪ್ ಸೀಕ್ರೆಟ್!
ಅಂದು ಸಂಜೆ ಮನದ ಮುಗಿಲಿನ ತುಂಬಾ ಚಿಂತೆಯದೇ ಕಾರ್ಮೋಡವಿತ್ತು. ಮೊದಲಿನಂತೆ ಹರಟದೆ ನನ್ನ ಗೆಳತಿಯ ಹಾಗೆ ಆಮೆಯ ಜೊತೆ ಅವಳ ಆಟ ನೋಡುತ್ತಾ ನೋಡುತ್ತಾ ಮೌನ ಸಂಭಾಷಣೆಗಿಳಿದೆ. ಅವಳು ಹೇಳಿದ್ದಿಷ್ಟು. ಚಿತೆಗೂ ಚಿಂತೆಗೂ ಒಂದು ಸೊನ್ನೆಯಷ್ಟೇ ವ್ಯತ್ಯಾಸ….ಚಿತೆ ನಿರ್ಜೀವವನ್ನು ಸುಟ್ಟರೆ ಚಿಂತೆ ಜೀವವನ್ನೇ ಸುಡುತ್ತದೆ. ಚಿಂತೆಯಿಲ್ಲದ ಮನಸ್ಸನ್ನು ಹುಡುಕುವುದು ಸಾವಿಲ್ಲದ ಮನೆಯ ಸಾಸಿವೆಕಾಳನ್ನು ತರುವಷ್ಟೇ ಕಷ್ಟ. ಪ್ರತಿಯೊಬ್ಬ ಮನುಷ್ಯನೂ ತನ್ನ ಚಿಂತೆಗಳ ಮೊತ್ತವನ್ನು ಹೇಗೆ ತನ್ನ ಚಿಂತನೆಯ ಮುಖಾಂತರ ಬಗೆಹರಿಸಿಕೊಳ್ಳುತ್ತಾನೋ ಆ ಆಧಾರದ ಮೇಲೆ ಅವನು ಪ್ರತ್ಯೇಕ ವ್ಯಕ್ತಿಯೆನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕು ಭೌತಿಕವಾಗಿ ಇಂತಿಷ್ಟೇ ಎಂದು ಒಂದಿಷ್ಟು ಅಕ್ವೇರಿಯಂ, ಒಂದಿಷ್ಟು ಬ್ಯಾಸ್ಕಿಂಗ್ ಏರಿಯಾ, ಒಂದಿಷ್ಟು ನೆಲ, ಒಂದು ಪರಿಸರ, ಒಂದಿಷ್ಟು ಸಂಗಡಿಗರು ಇತ್ಯಾದಿಗಳನ್ನು ಹಲವಾರು ಚಿಂತೆಗಳ ಫ್ರೀ ಪ್ಯಾಕೇಜ್ ಜೊತೆಗೆ ಕೊಟ್ಟಿದೆ. ಇದರ ಜೊತೆಗೆ ಬಾಳಲು ನಮ್ಮ ಚಿಂತನೆಯ ಉಪಯೋಗ ನಾವು ಮಾಡಿಕೊಳ್ಳಬೇಕಷ್ಟೆ. ಈ ಕಟ್ಟುಪಾಡು ಭೌತಿಕವಾಗಿಯೇ ಹೊರತು ಮಾನಸಿಕವಾಗಿ ಸುಮೇರುವಾಗಲು ಯಾರಿಗೂ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ವಿಧಿಯ ಮಳೆಗರೆಯೆ…..ಎಲ್ಲರೊಳಗೊಂದಾಗು ಮಂಕುತಿಮ್ಮ. ಚಿಂತೆ ಹಾಗು ಸಂತಸಗಳು ಮಗ್ಗುಲು ಬದಲಾಯಿಸಿದ ಹಾಗೆ. ಒಂದೇ ಕಡೆ ಮಲಗಿ ಜಡ್ಡುಗಟ್ಟುವ ಮೊದಲು ಪಕ್ಕಕ್ಕೆ ಹೊರಳುವ ಅಲ್ಪ ಪ್ರಯೋಗ ನಮ್ಮ ಮನಸ್ಸಿನ ಮೇಲೆ ನಾವು ಮಾತ್ರ ಮಾಡಿಕೊಳ್ಳಬಹುದು…ಇತರರು ಕಾರಣವಾಗಬಹುದು, ಉದಾಹರಣೆಯೂ ಆಗಬಹುದು. ನಮ್ಮೊಳಗೊಂದು ಜಗತ್ತಿದೆ, ಹೊರಗಿರುವಂತೆಯೇ. ಒಳಜಗತ್ತಿನ ಕರ್ತೃ ಕೇವಲ ನೀನೆ. ಅವಳು ತನ್ನ ಮಾತು ಮುಗಿಸಿ ಜಲಕ್ರೀಡೆಗೆ ಅನುವಾದಳು.
ಬಾಗಿಲು ತೆರೆದು ಹೊರಬಂದ ನಾನು ಸಂಜೆಯ ಆಗಸಕ್ಕೆ ಮುಖಮಾಡಿ ನಿಂತೆ. ಮತ್ತದೇ ಸಂಜೆ, ಅದೇ ಏಕಾಂತವಿತ್ತು…ಆದರೆ ಮತ್ತದೇ ಬೇಸರ?…ಉಹೂಂ…ಇಲ್ಲ..ಇರಲಿಲ್ಲ! ಆಕಾಶದಲ್ಲಿ ಹತ್ತಿ ಹಿಂಜಿದಂತೆ ಬೆಳ್ಮುಗಿಲು, ಮರಳಿ ಮನೆಗೆ ಸಾಗುತ್ತಿರುವ ಬೆಳ್ಳಕ್ಕಿ ಹಿಂಡು..ನಮ್ಮೊಳಗಿನ ಯೋಚನೆ ಹಾಗು ಯೋಜನೆಗಳಂತೆ!