ಅಲ್ಲಾ ಅದ್ಯಾಕೆ ಬೋಧಿವೃಕ್ಷವೇ ಜ್ಞಾನದ ಸಂಕೇತವಾಯ್ತು? ಇಂಥಾ ತುಡುಗು ಪ್ರಶ್ನೆನೆ ಅಲ್ವೇ ನೀವು ಬೇಡ ಅನ್ನೋದು? ಈ ವಿಷಯಕ್ಕೆ ಬಂದಾಗೆಲ್ಲಾ ಅದ್ಯಾಕೆ ಯಾವಾಗ್ಲೂ ‘ಮಹಾಯಾನ’ ಕ್ಕೆ ಸೇರಿದವರ ಹಾಗಾಡ್ತೀರಿ? ‘ಮಹಾಯಾನ’ವೆಂದರೆ ಗೊತ್ತಲ್ಲಾ? ಬುದ್ಧ ದೇವರು ಎಂದು ಪೂಜಿಸುವ ಗುಂಪು. ಓಹೋ…ಅದರ ಕೆಳಗೆ ಕೂತವರೆಲ್ಲಾ ಜ್ಞಾನಿಗಳಾಗೋಹಾಗಿದ್ರೆ ನಮ್ಮನೆ ಮುಂದೆ ಒಂದು ಆ ಮರ ಬೆಳೆಸಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಡ್ತಿದ್ದೆ ಹಾಗು ಅದರಿಂದ ಬಂದ ಆಮ್ದನೀಲಿ ಇಷ್ಟುಹೊತ್ತಿಗೆ ಆ ಮರಕ್ಕಿಂತಲೂ ಎತ್ತರದ ಮಹಡಿ ಮನೆ ಕಟ್ಟಿಬಿಡ್ತಿದ್ದೆ ಎಂತೆಲ್ಲಾ ಹುಚ್ಚು ಮನಸ್ಸು ಒರಲಿದಾಗ ನನ್ನಲ್ಲಿ ನನಗೇ ಅಚ್ಚರಿಯಾಯ್ತು. ‘ಬರೀ ಲಾಭಕ್ಕೆ ಮಾತ್ರವೇ ಮನುಷ್ಯನ ಮನಸ್ಸು ಹೆಚ್ಚು ಸಾರಿ ಯೋಚಿಸೋದು’? ನಮ್ಮ ಕಾಡುಗಳಲ್ಲಿ ಬೆಳೆವ ಎಷ್ಟೋ ಮರಗಳು ಕಡಿಯಲ್ಪಟ್ಟು ಮಾರಾಟವಾಗುತ್ತಿಲ್ಲವೇ? ಕಾಡು ಕಡಿದು ನಾಡು ಬೆಳೆಸಲು ಹೊರಟ ಈ ದಿನಗಳಲ್ಲಿ ‘ಸಾಲು ಮರದ ತಿಮ್ಮಕ್ಕ’ನಂಥೋರೂ ಇರೋದು ‘ಇಕೊಲಾಜಿಕಲ್ ಬ್ಯಾಲೆನ್ಸಿಂಗ್’ ಗೇ ಇದ್ದೀತು. ಹೀಗೆಲ್ಲಾ ಯೋಚಿಸುತ್ತಾ ಸಾಗುತ್ತಿರುವಾಗ ಕಂಡಿದ್ದು ಈ ಮರ.
‘ಗಂಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲಾ…..’ ಹುಶ್……ಮೆತ್ತಗೆ ಮಾತಾಡ್ರೀ…..ಗೊತ್ತಾದ್ರೆ ನಾಳೆ ಬೆಳಕು ಹರಿಯೋದ್ರೊಳಗೆ ಯಾವುದೋ ಅಮ್ಮನ್ನೋ ಅಪ್ಪನ್ನೋ (ಕ್ಷಮಿಸಿ, ದೇವರನ್ನು ಹೀಗೆಲ್ಲಾ ಅಂದರೆ ನಿಮಗೆ ಕೋಪವೇನೋ?!) ಬಲವಂತವಾಗಿ ಕೂರಿಸಿ ಮಹಾಮಂಗಳಾರತಿಯೇ ಮಾಡಿ ಜನ ‘ಕ್ಯೂ’ ಹಚ್ಚೋಹಾಗೆ ಮಾಡಿಬಿಟ್ಟು, ಒಬ್ಬ ‘ಸ್ವಾಮೀಜಿ’ನೂ ತಯಾರು ಮಾಡಿಬಿಡ್ತಾರೆನೋ! ಇಂಥಾದ್ದೊಂದು ಬೋಧಿವೃಕ್ಷದ ಎದುರಿಗೆ ಒಂದು ದಿವಿನಾದ ಕಟ್ಟೆಯಿದ್ದು ಅದರಮೇಲೆ ಪ್ರತಿಷ್ಠಾಪನೆಯಾಗೋದು ನನ್ನ ಹಾಗು ನನ್ನ ಗೆಳತಿಯೊಬ್ಬಳ ಜೀವನದ ಅವಿಭಾಜ್ಯ ಅಂಗ. ದಿನಾಲೂ ಮನೆಯಲ್ಲೋ, ಆಫೀಸಿನಲ್ಲೊ ಕುಳಿತಿದ್ದರೂ ಆ ಕಟ್ಟೆ ನೆನೆದೊಡನೆಯೆ “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ” ಅಂತ ಇಬ್ಬರಿಗೂ ಒಳಮನಸ್ಸಿನ ಶೃತಿಪೆಟ್ಟಿಗೆ ಸಣ್ಣಗೆ ಮಿಡಿಯೋದು ಸುಳ್ಳಲ್ಲ. ಆ ಜಾಗಕ್ಕೆ ತಲುಪಿದ ಮೇಲಂತೂ….ಎದುರಿನ ಆ ಕಟ್ಟೆಯ ಮೂಲೆಯೇ ಆಗಬೇಕು ನಮಗೆ. ಅಲ್ಲ್ಯಾರಾದರೂ ಕುಳಿತಿದ್ದರೋ…..ರಾಜಕಾರಣಿಗಳೇ ನಾಚಿ ನೀರಾಗುವಂತೆ ಪೈಪೋಟಿ ನಡೆಸಿ…ಅಂತೂ ಇಂತೂ ಅದೇ ಸೀಟು ಪಡೆದು ಕುಳಿತಾಗ ಸಿಗುವ ಅಸೀಮ ಸಂತೋಷದ ರುಚಿಯ ಉಂಡವನಷ್ಟೇ ಬಲ್ಲ. ಊರಿನ ಮಾತೆಲ್ಲಾ ಅಲ್ಲೇ ಆಡಿ ಮುಗಿಸಿ, ಜೀವನದ ಅತಿ ಭಯಂಕರವಾಗಿ ಮುಖ್ಯವಾದ ಎಷ್ಟೋ ನಿರ್ಧಾರಗಳನ್ನೂ ಅಲ್ಲೇ ತೆಗೆದುಕೊಂಡು ತೆರಳುವುದು ನಮ್ಮಿಬ್ಬರ ಅಭ್ಯಾಸವಾಗಿಬಿಟ್ಟಿದೆ. ಅಷ್ಟೊಂದು ಅದೇನಿದೆ ಅಲ್ಲಿ? ಪಿಕ್ನಿಕ್ ಸ್ಪಾಟು ಅಂತ ಈ ವೀಕೆಂಡಿಗೆ ತಯಾರಾದೀರಿ ಮತ್ತೆ…ಅದಲ್ಲ! ‘ಚಾರಣ ಪ್ರಿಯರೇ, ನಿಮಗೊಂದು ಹೊಸ ತಾಣ ಇಲ್ಲಿದೆ’ ಎಂದೇನೋ ಭಾವಿಸಿ ನಿರಾಶರಾಗೋ ಅವಶ್ಯಕತೆನೂ ಇಲ್ಲ! ಕಾರಣ, ಅದು ಅಂಥದ್ದೆಲ್ಲಾ ಎನೇನೂ ಅಲ್ಲ ಬಿಡಿ. ಇದೊಂದು ಗಿಜಿಗುಡುವ ಜನಸಂದಣಿಯ ನಡುವೆ ಒರಚ್ಚಾಗಿ, ಗಾಂಧೀಬಜಾರಿನ ತೀರಾ ಸರ್ಕಲ್ಲಲ್ಲೇ ನಿಂತಿರೋ ಮರ. ಧೋ ಎಂದು ಧುಮ್ಮಿಕ್ಕುವ ಪ್ರವಾಹದಂಥಾ ಜನಸಂದಣಿಯಲ್ಲಿ….ಅಬ್ಬಬ್ಬಾ…ಅದೇನು ತರಾವರಿ ಜನ, ಕೊಳ್ಳೋರು, ಮಾರೋರು, ಸುಮ್ಮನೆ ವಿಂಡೋ ಶಾಪಿಂಗ್ ಅಂತ ಅಡ್ಡಾಡೋರು, ಹವಾನಿಯಂತ್ರಿತ ಕಾರುಗಳಲ್ಲಿ, ಬೆವರು ತೊಟ್ಟಿಕ್ಕುವ ಬಸ್ಸುಗಳಲ್ಲಿ, ಹಾಗೇ ಹೀಗೆನ್ನುತ್ತಾ ಬುರಬುರನೆ ಭವ್ಯ ನಾಗರೀಕತೆಗೆ ಮೂಕಸಾಕ್ಷಿಯಾಗಿ ರಸ್ತೆಬದಿಯ ಫುಟ್ ಪಾತಿಗೆ ಅಂಟಿಯೂ ಅಂಟದಂತೆ ನಿಂತಿರುವ, ಮದುವೆಗೋ, ಮಸಣಕೋ….ಒಟ್ಟಿನಲ್ಲಿ ನಿಲ್ಲದೇ ಚಲಿಸುವ ಜಂಗುಳಿಯ ಜಂಗಮನಿಗೆ ಮನಸೋತು ದಾರಿಬಿಟ್ಟು ನಿಂತಂತಿರುವ ಸ್ಥಾವರ. ಹಾಗೆ ನೋಡಿದರೆ ತೀರ ಪುರಾತನ ಋಷಿಮುನಿಯಂತೇನು ಇದು ಕಾಣುತ್ತಿಲ್ಲ. ಕಳೆದ ಮೂರೋ ನಾಲ್ಕೋ ದಶಕಗಳಿಂದಷ್ಟೇ ಹುಟ್ಟಿ, ಉಳಿದು, ಬೆಳೆದು…ನಮ್ಮ ನಿಮ್ಮೆಲ್ಲರ ಸಮಕಾಲೀನನಂತೆಯೇ ಕಾಣುತ್ತಿದೆ. ಹಾಗಾಗಿ ತೀರ ಸಂತನ ಪೋಜ್ ಕೊಟ್ಟಿದ್ದು ಕಾಣೆ. ಫ್ಯಾಷನ್ ಯುಗದ ಲಲನೆಯರ ಬಳುಕನ್ನೂ, ಸಾಲು ಅಂಗಡಿಗಳ ಥಳುಕನ್ನೂ, ರಸ್ತೆಬದಿಯ ಕೊಳಕನ್ನೂ, ಕಂಡೂ ಕಾಣದಂತೆ ಸರಿದಾಡುತ್ತಿರುವ ಸಮಾಜದ ಹುಳುಕನ್ನೂ, ಹೇಳಲು ಬಾಯಿರದೇ ನರಳುತ್ತಿರುವ ಜನತೆಯ ಅಳುಕನ್ನೂ ನೋಡುತ್ತಲೇ ನಿಯಂತ್ರಿಸಿಕೊಂಡಿದೆ ತನ್ನೆದೆಯ ಛಳುಕನ್ನು. ಹೀಗಿರಲು ಇದು ಬುದ್ಧನಲ್ಲದೇ ಮತ್ತಿನ್ನೇನು?! ಇದನ್ನು ನೋಡುತ್ತಲೇ ನೆನಪಾದ್ದು ನಿಸಾರರ ‘ಮನಸು ಗಾಂಧೀ ಬಜಾರು’, ಹಸಿರು ಕ್ರಾಂತಿಯ ನಾರ್ಮನ್ ಬೋರ್ಲಾಗ್, ಬಿ.ಜಿ. ಎಲ್. ಸ್ವಾಮಿಯವರ ‘ಹಸಿರು ಹೊನ್ನು’, ‘ಓಶೋ’ ರ ‘ಫೈಂಡಿಂಗ್ ಪೀಸ್ ಇನ್ ಮಾರ್ಕೆಟ್ ಪ್ಲೇಸ್’, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದಡೆಂತಯ್ಯಾ’ ಎಂದು ಪ್ರೀತಿಯಿಂದ ಜನತೆಯನ್ನು ಅಲವತ್ತುಕೊಂಡ ವಚನಕಾರರು….ಇನ್ನೂ ಏನೇನೋ….ಹಾಗೆ ನೋಡ ನೋಡುತ್ತಲೇ ಮರದ ಕೆಳಗೆ ಕಾಯಕವನ್ನು ಕೈಲಾಸವಾಗಿಸಿಕೊಂಡಿರುವ ಚಪ್ಪಲಿ ಹೊಲಿಯುವ, ಬೀಗ ರಿಪೇರಿ ಮಾಡುವ, ಗಿಲೀಟಿನ ಬೆಳ್ಳಿಪಾತ್ರೆ, ನಿಂಬೇ ಹಣ್ಣು, ಮತ್ತೊಂದು ಮಾರುವುದರಲ್ಲೇ ಸಂತಸಗೊಂಡಂತೆ ಕಾಣುವ, ನೋವಲ್ಲೂ ನಗುವ ಗೆಳೆಯರೆಲ್ಲಾ ಬುದ್ಧರಂತೇ ಕಂಡರು.
ಭಾನುವಾರ , ಜನವರಿ 3, 2010, ರ ‘ಪ್ರಜಾವಾಣಿ’ ಯಲ್ಲಿ ‘ಮಹಾದೇವ ಶಂಕನಪುರ’ ಎನ್ನುವವರು ಬರೆದ ಒಂದು ಕವನ ಈ ರೀತಿಯಾಗಿದೆ.
ಅರಳಿ ಮರದಯ್ಯನಿಗೆ
ಎಷ್ಟೋ ಲೋಕದ ತತ್ವಗಳು ಗೊತ್ತು
ಹಾಡುವುದು ಮಾತ್ರ ಒಂದೇ ಪದ,
ಮುಗುಳು ನಗುವ ಹಾಡು
ಮಂದಹಾಸದ ಮೌನಗೀತೆ.
ನೋಡು ನೋಡುತ್ತಾ ನಿಂತರೆ ಸಾಕು
ಕಣ್ಣಲ್ಲೇ ಕರುಣೆಯ ಕಡಲ
ಮೊಗೆದು ಕೊಡುವನು ಗುಟುಕು.
ಇವತ್ತಿಗಿಷ್ಟು ಸಾಕು, ನಾನು ಹೊರಟೆ ಮರ ನೋಡಲು…ನೀವೂ ಹೊರಟು ನೋಡಿ…. ಜ್ಞಾನದ ಸಂಕೇತವಾಗಲು ಅರಳೀ ಮರವೇ ಬೇಕೆಂದಿಲ್ಲ, ನಿಮಗೆ ಬೇಕಾದ್ದೇ ಆದೀತು. ಸುಮ್ಮನೆ ನೋಡಿಷ್ಟು ಪಡೆಯಿರಿ ತಂಪು, ಜ್ಞಾನ, ಸಂತೋಷ, ಅವರವರ ಭಾವಕ್ಕೆ ತಕ್ಕಷ್ಟು…..ಅದೂ ಉಚಿತವಾಗಿ!!!!!